Poem

ಆ ರಜಾ ದಿನಗಳು

' ಆ ರಜಾ ದಿನಗಳು '' 

ಮುಗಿಯಿತು ವಾರ್ಷಿಕ ಪರೀಕ್ಷೆ 
ಬೇಸಿಗೆ ರಜೆ ಶುರುವಿನ ನಿರೀಕ್ಷೆ 
ಖುಷಿ ತಂದ ಫಲಿತಾಂಶ ಮಾಮೂಲು ಮನ್ನಣೆ 
ಸಿದ್ಧವಾಯ್ತು ರೂಪುರೇಷೆ ದೈನಂದಿನ ಅನ್ವೇಷಣೆ || ೧ ||

ರಜೆ ಆರಂಭಿಸುವ ಜಿಗಿತ ಠಣ  ಠಣ 
ಅಜ್ಜನೂರಿಗೆ ಕೆಂಪು ಬಸ್ಸಲ್ಲಿ ಪ್ರಯಾಣ 
ಬೆವರಿಳಿಸುವ ಬರಿ ಬಿಳುಪಿನ ಅಂದಣ
ನೀರ್ ಮಜ್ಜಿಗೆಗಳೇ ಉದರ ಪೋಷಣ  || ೨  ||

ಅಜ್ಜನ ಮನೆ ಸುಂದರ ಶಿಸ್ತು ಮುಜುಗರ
ಪಗಡೆ ಗೇಲಿ ಗಮ್ಮತ್ತುಗಳ ಜಾಗರ
ನೆರೆ ಮಂದಿಯಿಂದ ಹೆಚ್ಚಾಯ್ತು ಸ್ನೇಹಗಳಿಕೆ 
ಕೊನೆ ಬೇಡ ನಗೆಗೆ ಬಂಗಾರವಾಯ್ತು ಬಾಲ್ಯದ ಕೇಕೆ || ೩ ||

ಪ್ರಾಣಿ ಪಕ್ಷಿ ಸಂಕುಲಕೆ ನೀರುಣಿಸುವ ಕಾಯಕ 
ಕೆರೆ ಬಾವಿ ನದಿ ತೊರೆಗೆ ಮೈ ಅದ್ದುವ ಸಂಭ್ರಮ 
ಕದ್ದ ಮಾವಿನಕಾಯಿ ಮೆದ್ದ ಕೋಸುಂಬರಿ 
ಬಣ್ಣದ ಕನ್ನಡಕ ಟೊಪ್ಪಿಗೆ ಗಳಲ್ಲೇ ಬಯಲಾಟಗಳ ಉಸಾಬರಿ || ೪ ||

ಮಂಗಳ ಹಾಡಿತು ತೂಗು ಪಂಚಾಗ 
ಎರಡಾಯ್ತು ಕೈ ಚೀಲ ಒಲ್ಲದ ಮರುಪಯಣಕೆ 
ಸವಿ ನೆನಪುಗಳ ಔತಣ ಸ್ನೇಹ ಕೂಟಕೆ
ಶಬ್ದಗಳೇ ಸಾಲುತ್ತಿಲ್ಲ ಆ ರಜಾದಿನಗಳ ಸಿಂಗಾರಕೆ || ೫ ||
 

By: ಹತ್ತಿಬೆಳಗಲ್ ನಾಗರಾಜ ರಾವ್

Comments[0] Likes[1] Shares[0]

Submit Your Comment

Latest Comments

No comments are available!