Poem

ಅಪ್ಪ ಸಾಯುವುದಿಲ್ಲ

ಇಳಿಸಲಾಗದ ಎದೆಯ ಭಾರ
ಎಂದೂ ತೀರಿಸಲಾಗದು ಅಪ್ಪನ ಋಣದ ಭಾರ

ತಾ ಕಾಣದ ಲೋಕವನ್ನು
ತನ್ನ ಹೆಗಲೇರಿಸಿ ಜಗದಗಲ ತೋರಿಸಿದಾತ
ತಪ್ಪಿದಕೆ ದಂಡಿಸಿದಾತ
ನಾ ಗೆದ್ದಾಗ, ತಾ ಗೆದ್ದಂತೆ
ಹಿಗ್ಗಿ ಬೀಗಿದಾತಾ

ಅಪ್ಪ ನೊಬ್ಬನಿದ್ದರೆ ಸಾಕು
ಬಜಾರಿನಿ ಬೊಂಬೆಗಳಿಗೆಲ್ಲ
ನಾ ವಾರುಸುದಾರ

ಜಗದ ಜಂಜಡಗಳಿಗೆಲ್ಲ
ಎದೆ ಒಡ್ಡಿದಾತ
ತನ್ನ ಕರುಳ ಬಳ್ಳಿಗಳು
ಬಾಡದಂತೆ ಪೊರೆದಾತ

ವಿಧಿವಶವಾಗಿದ್ದಾನೆ ಅಪ್ಪ ಇಂದು
ಆದರೆ, ತಾ ಕಂಡ ಕನಸುಗಳ
ನನ್ನ ಹೆಗಲೇರಿಸಿ ಹೊರಟಿದ್ದಾನೆ
ಅಪ್ಪ ಸಾಯುವುದಿಲ್ಲ
ಇನ್ನೂ ಜೀವಂತವಾಗಿದ್ದಾನೆ
ಅವ ಕೊಟ್ಟ ಕನಸುಗಳ ಮೂಲಕ

ಭಾರವಾಗಿದೆ ಮನ
ಅವನೊಂದಿಗೆ ಮಾತನಾಡಲಾಗದು ಎಂದೂ
ಮೌನದಲಿ ಜಗಳಾಡುತ್ತೇನೆ, ಕೇಳುತ್ತೇನೆ
ಯಾಕಿಷ್ಟು ಅರ್ಜೆಂಟು?

ಅಕ್ಷರಗಳ ಪೊಣಿಸುತಿರುವೆ
ಪದ ಪುಂಜಗಳ ಮಾಲೆ ಮಾಡಿ
ಅಪ್ಪನಿಗೆ ಅರ್ಪಿಸಲು
ಒಪ್ಪಿಕೊ ನನ್ನಪ್ಪಾ
ಬರಿ ಇಷ್ಟೇ ಸಾಧ್ಯ
ನಿನ್ನ ತನಯನಾಗಿ ನನಗೆ.

By: ವಿಜಯಕುಮಾರ ಬಡಿಗೇರ

Comments[0] Likes[1] Shares[0]

Submit Your Comment

Latest Comments

No comments are available!