Poem

ಗಾಂಧಿ ಬಣ್ಣದ ಮುದುಕ

ಗಾಂಧಿ ಬಣ್ಣದ ಮುದುಕ ಜಾತ್ರೆಯಂಚಿನ
ಕಲ್ಲು ಕಟ್ಟೆಯ ಮೇಲೆ ನಾಲ್ಕು ರಸ್ತೆಯ
ನಡುವೆ ನಿಂತಿದ್ದಾನೆ ಗಾಂಧಿ ಪ್ರತಿಮೆಗೆ ಎದುರಾಗಿ.

ಮೇಲೆ ಸೂರಿಲ್ಲ, ಅದು ಗಾಂಧಿಯೂ ಬಯಸಿರಲಿಲ್ಲ, ಹಕ್ಕಿಹಿಕ್ಕೆ ತಲೆ ತುಂಬಾ,
ತೊಂದರೆಯಿಲ್ಲ..ಅವ ಬದುಕಿದ್ದಾಗಲೂ
ಓಡಿಸಿರಲಿಲ್ಲಾ ಅವುಗಳನ್ನು. ನಿಂತಿದ್ದಾನೆ
ಸತ್ತ ನಂತರವೂ ಬದುಕಿದ್ದವರಿಗೆ ಅನ್ನವಾಗಿ. ಕಂಡವರಿಗೋ ನಿನ್ನೆ ತಾನೇ
ಸ್ವಾತಂತ್ರ್ಯ ದಕ್ಕಿದ ಅನುಭವ.

ಕ್ಷಣ ನೆನೆಸಿ ಕಿಸೆಗೆ ಕೈ ಹಾಕಿ ಕಾಸು ತೆಗೆದು
ಅದು ರೂಪಾಯಿ ಮೌಲ್ಯಕ್ಕಿಂತ ಕಡಿಮೆಯದ್ದು
ಎಂದು ಖಾತ್ರಿ ಮಾಡಿಕೊಂಡೇ ಹಾಕುತ್ತಾರೆ ಎದುರು ಹಾಸಿದ್ದ ಬಟ್ಟೆಯ ಮೇಲೆ, 
ತೋರುಬೆರಳು ತುಟಗೊತ್ತಿಕೊಳ್ಳುತ್ತಾರೆ ದೇವರಿಗೆ ವಂದಿಸಿದ ಹಾಗೆ. ಅದು ಬದುಕಿದ್ದವನ
ಸಾಯಿಸಿದ್ದಕ್ಕೆ ಪ್ರಾಯಶ್ಚಿತದ ಒಂದು ಸಣ್ಣ
 ಕ್ಷಮೆಯ  ಕೋರಿಕೆಯೆ..? 

ನಿಂತವನು ಅಲುಗಾಡುತ್ತಾನೆ, ಕಿಸೆಯಿಂದ ಕೈ ಗೆ ಬಂದ ಕಾಸು ಮತ್ತೆ  ಜಾರುತ್ತದೆ ಕಿಸೆಗೆ ಗೊಣಗುತ್ತಾರೆ 
"ಬಣ್ಣ ಹಚ್ಚಿದರೆ ಸಾಲದು ಬದುಕೂ ಹಾಗೇ ಇರಬೇಕು.." ಈಗ ಗಾಂಧಿ ಗಟ್ಟಿತನ.. ಬಣ್ಣ ಹಚ್ಚಿದ 
ಹಸಿದ ಹೊಟ್ಟೆಗೆ ಸವಾಲು.
ಬಂದವರೆಲ್ಲಾ ಹೀಗೆ ಆದರೆ ಹೇಗೆ..?
ಕಿಸೆಯ ಕಾಸು ಕಾಲಡಿಗೆ ಬೀಳುತ್ತಿಲ್ಲಾ..?
' ಗಟ್ಟಿಯಾಗಿ ಅಲುಗಾಡದೆ ನಿಲ್ಲುವುದಕ್ಕೆ ನಾನೇನು ಗಾಂಧಿಯೇ..?' ಅವನ ಪ್ರಶ್ನೆ ಅವರಿಗೆ ಕೇಳಬೇಕೆಂದುಕೊಂಡರೂ ಮತ್ತೆ ಅಲುಗಾಡುವ ಭಯ..!

ಬಟ್ಟೆ ಬಣ್ಣ ಕೋಲು ಕನ್ನಡಕ ಎಲ್ಲಾ ಅವನಂತೆ
' ಅಚಲ ನಿಲುವಿಗೆ ತೊಡಕು ಕಣ್ಣೆದುರಿಗೆ ಎಸೆದಿರುವ  ಕಾಸೇ..?' ಕಣ್ಮುಚ್ಚಿದ.
ಅರಿವಿನಡಿಯಲ್ಲಿ ಎದೆಯಲ್ಲಿ ಗಾಂಧಿ ನಿಂತ.

ಕೊನೆಗೂ ಗಾಂಧಿ ಕಂಡು ಕೇಕೆ ಹಾಕಿದ ಜನಸ್ತೋಮ..! ನಡುವೆ " ಸ್ವಾತಂತ್ರ್ಯ ತಂದುಕೊಟ್ಟವ ಇವನಲ್ಲಾ.."
ನಿನ್ನೆ ಹದಿಹರೆಯಕ್ಕೆ ಕಣ್ತೆರೆದ ಸ್ವತಂತ್ರ ಭಾರತದ
ಹುಡುಗನ ಬಿಸಿರಕ್ತದ ಮಾತು.. ಎದೆಗೆ ಕೋವಿ
ಗುರಿಯಿಟ್ಟು ನಿಂತ ಗೋಡ್ಸೆ,ಮತ್ತವನ ಪ್ರತಿಕ್ರೃತಿಗಳೂ ಕೂಡಾ ಅಲುಗಾಡಿಸಲಿಲ್ಲ ಅವನನ್ನು.

ತನ್ಮಯತೆಗೆ ಫಿದಾ ಆಗದೆ  ಜನ ..! ಸ್ವಾತಂತ್ರ್ಯ..ದೇಶ..ಸತ್ಯ .. ಅಹಿಂಸೆ.. ಅಲೆಗಳ 
ಭೋರ್ಗರೆತ ಅವರು ಎದೆಯಲ್ಲಿ..ಕಿಸೆಯ ಕಾಸೀಗ ಎದುರು ಹಾಸಿದ್ದ ಬಟ್ಟೆಯ ಮೇಲೆ ರಾಶಿ ರಾಶಿ..!
ಬಣ್ಣ ಹಚ್ಚಿದವ ಈಗ ಗಾಂಧಿಯೊಳಗೆ ಲೀನ..
 ಬದುಕು ಮರೆತ, ಗಾಂಧಿ ಬಣ್ಣದಲ್ಲಿ ಬೆರೆತ..
ಜಾತ್ರೆ ಮುಗಿದು ಕರಗಿತು ಜನ.. ಇಳೆಗೆರಗಿದ
ಇರುಳಿನ ತಣ್ಣನೆ ಸುಳಿಗಾಳಿಗೆ ಎಚ್ಚರ..ಕಣ್ತೆರೆದರೆ..
ಎದುರು ಹಾಸಿದ ಬಟ್ಟೆಯ ಮೇಲಿನ ಕಾಸು
ಒಂದೂ ಇಲ್ಲಾ...!
ಅವನಿಗೆ ಬೇಸರವಾಗಲಿಲ್ಲ.
         ಕ್ಷಣ ಗಾಂಧಿಯೊಂದಿಗಿದ್ದನಲ್ಲಾ.

By: ಮಂಜುನಾಥ ನಾಯ್ಕ್

Comments[17] Likes[21] Shares[6]

Submit Your Comment

Latest Comments

Shivaprakasha R
Jul 24,2020

ಈ ರೀತಿಯ ಗಾಂಧಿಗಳು ಈಗ ಅತಿ .ಹೆಚ್ಚಾಗಿದ್ದಾರೆ .ಉತ್ತಮ‌ ಕಾವ್ಯ ಇಷ್ಟುದಿನ ನಾನು ಕವಿಗಳನ್ನ ಕಥೆಗಾರರನ್ನಾಗಿ ನೋಡಿದ್ದೆ ಆದರೆ ಇಂದು ಈ ಕಾವ್ಯದ ಮೂಲಕ ನನಗೆ ಕವಿಯಾಗಿ ಸಹ ನೋಡಿದೆ .ತುಂಬ ಖುಷಿಯಾಯ್ತು ...ಶುಭವಾಗಲಿ ಸರ್

HN Manjunatha Manjunath
Jul 23,2020

ನಾ ಕಂಡಂತೆ ನಿಮ್ಮ ಬರವಣಿಗೆಯ ಜ್ಞಾನ ಅಮೋಘ...ಅದ ವಿಶ್ಲೇಷಿಸುವಷ್ಟು ಅರ್ಹ ನಾನಲ್ಲ.. ಒಂದು ವಿಚಾರ ಮಾತ್ರ ಸತ್ಯ ಕೆಲವರ ಪಾಲಿಗೆ ಗಾಂಧಿ ಗೋಡ್ಸೆ ಯಾಗಿರುವರು. ಗೋಡ್ಸೆ ಗಾಂಧೀಜಿಯಾಗಿರುವರು. ಇದು ಸ್ವತಂತ್ರ ಭಾರತದ ಹುಡುಗನ ಬಿಸಿರಕ್ತದ ಮಾತು. ಆದರೆ ನಿಮ್ಮ ಬರವಣಿಗೆಯ ಗಾಂಧಿ ನಮ್ಮ ಮನತಟ್ಟಿರುವರು..ಧನ್ಯವಾದಗಳು ಸರ್ 🙏🏻

ಸಂತೋಷ ಗುಡ್ಡಿಯಂಗಡಿ
Jul 22,2020

ಗಾಂಧಿಗೆ ಎದುರಾಗಿ ಗಾಂಧಿ. ಹಸಿವು ತುಂಬಿಕೊಂಡ ಗಾಂಧಿ. ಒಳ್ಳೆಯ ಕವಿತೆ

Lakshmi
Jul 22,2020

Thumbha kavithe channagidhe.

DCUNHAROBERT
Jul 22,2020

ಗಾಂಧಿ ವೇಷ ಹಾಕಿ ದುಡ್ಡು ಮಾಡಬೇಕೆಂದ್ದಿದ್ದ ಬಣ್ಣದ ವೇಷಾಧಾರಿ ಸ್ವಲ್ಪ ಸಮಯ ಗಾಂಧಿಜೀ ತರಹ ಯೋಚನೆ ಮಾಡಲಾರಂಭಿಸಿದ. ಬದಲಾದ ಭಾರತೀಯರಿಗೆ ಈ ಲೇಖನ ತುಂಬಾ ಸಮಂಜಸ. ಮಂಜುನಾಥ್ ನಾಯ್ಕ್, ಇನ್ನು ತುಂಬಾ ಕವನಗಳು ನಿಮ್ಮಿಂದ ಮೂಡಿ ಬರಲಿ..

Hosmane Muthu
Jul 21,2020

ಚಂದದ ಕವಿತೆ....... ಸತ್ತ ನಂತರವೂ ಬದುಕಿದವರಿಗೆ ಅನ್ನವಾಗಿ....! ಎನ್ನುವ ಸಾಲುಗಳು ಪ್ರಸ್ತುತ ಸಮಾಜದಲ್ಲಿ ರಾಷ್ಟಪಿತನನ್ನು ಕೇವಲ ಪ್ರತಿಮೆಯಾಗಿಸಿಕೊಂಡು ತಮ್ಮ ಬೇಳೆ ಬೇಯಿಸಿ ಕೊಳ್ಳುವವರ ತಲೆ ಮೇಲೆ ಮೊಟಕಿದಂತೆನಿಸಿತು... ಇನ್ನು “ಬಣ್ಣ ಹಚ್ಚಿದರೆ ಸಾಲದು ಬದುಕೂ ಹಾಗೇ ಇರಬೇಕು” ಎನ್ನುವಾಗ ಇಂದಿನ ನಾಯಕರ ಡಂಭಾಚಾರ, ವೇಷ-ಭೂಷಣಗಳು ನಮ್ಮ ಕಣ್ಣೆದುರಿಗೆ ಬರುತ್ತದೆ. ಒಟ್ಟಾರೆಯಾಗಿ ತನ್ನ ಮೊನಚುತನದಿಂದಾಗಿ ಪದ್ಯ ಇಷ್ಟವಾಯಿತು...

1Anupanup
Jul 21,2020

ಕಸಿದುಕೊಂಡ ಅಭಿವ್ಯಕ್ತತೆಯ ಬದುಕಿನಲ್ಲಿ ಗಾಂಧಿಯೂ ಬಣ್ಣದ ಮುದುಕನಾಗುವದು ಹದಿಹರೆಯಕ್ಕೆ ಮನವರಿಕೆಯಾದೀತೇ?

Vijay Mudal
Jul 21,2020

ಕವಿತೆಗಳನ್ನು ಕಟ್ಟಬಾರದು. ಕವಿತೆಗಳು ಕವಿಯ ಅಂತರಾಳದಿಂದ ಹುಟ್ಟಬೇಕು‌. ಅಂತಹ ಕವಿತೆಗಳು ಸಾರ್ವತ್ರಿಕ ಹಾಗೂ‌ ಸಾರ್ವಕಾಲಿಕವಾಗಿ ಉಳಿಯುತ್ತವೆ. ಕವಿ ಮಿತ್ರ ಮಂಜುನಾಥ ನಾಯ್ಕ ಅವರ ಈ ಕವಿತೆಯನ್ನು ಓದುವಾಗ ಇದೊಂದು ಸಾರ್ವಕಾಲಿಕವಾಗಿ ನಿಲ್ಲುವ ಕವಿತೆಯೆಂದು ನನಗನಿಸಿದ್ದು ಉತ್ಪ್ರೇಕ್ಷೆಯ ಮಾತಲ್ಲ. ಅದ್ಭುತವಾಗಿ ಮೂಡಿ ಬಂದಿರುವ ಈ ಕವಿತೆಯ ಒಳನೋಟಗಳನ್ನು ಓದುಗರಾದವರು ಅರ್ಥೈಸಿಕೊಂಡು ಒಂದೆರಡು ಸಾಲುಗಳಲ್ಲಿ‌ ಅಭಿಪ್ರಾಯ ಮಂಡಿಸಿದ್ದೇಯಾದರೆ ಕವಿತೆ ಬರೆದುದಕ್ಕೂ ಸಾರ್ಥಕ ಎಂಬುದು ನನ್ನ ಅಭಿಪ್ರಾಯ. ಒಳ್ಳೆಯ ಕವಿತೆ ಬರೆದ ಕವಿ ಹೃದಯಕ್ಕೆ ಅಭಿನಂದನೆಗಳು.

Umesh R Hiremath
Jul 21,2020

What a beautiful poem Nayak ji, and what a imagination!! that is the power of Gandhism and still it is holds good even in our dream as well as reality also.., as his inspiration, vision and the life work is particularly associated with his contributions to the idea of nonviolent resistance would never forgotten by us. Your last line of the poem "ಅವನಿಗೆ ಬೇಸರವಾಗಲಿಲ್ಲ ಕ್ಷಣ ಗಾಂಧಿಯೊಂದಿಗಿದ್ದನಲ್ಲಾ" will be the ultimate contentment of the person even it was in the dream!!

ಮಂಜುನಾಥ ಎಂ ಜಿ .ಡಾ
Jul 21,2020

ಮಂಜುನಾಥ ನಾಯ್ಕರವರ ಕಾವ್ಯ ಗಾಂಧಿ ಬಣ್ಣದ ಮುದುಕ ಶೀರ್ಷಿಕೆ ಒಂದು ಹೊಸ ಆಲೋಚಣೆಯ ಮಾರ್ಗವನ್ನು ಸೂಚಿಸುತ್ತದೆ. ಪ್ರಸ್ತುತ ಸಮಾಜದ ಅಸಮಾನತೆಯ ಬದಲಾಯಿಸಲು ಸಾಧ್ಯವಿಲ್ಲವೆಂಬತೆ ಮನೋಜ್ಞವಾಗಿದೆ. ಮೌಲ್ಯ, ತತ್ವ, ಸಿದ್ದಾಂತವು ಕಾಣೆಯಾದಂತೆ. ಕಾವ್ಯದ ರೂಪಕ, ಭಾಷೆ ಮತ್ತು ಪ್ರತಿಮೆಗಳು ಓದುಗರಿಗೆ ಉತ್ಸಾಹದ ಕಿಚ್ಚು ಹತ್ತಿಸುತ್ತದೆ. ಇಂತಹ ಪ್ರಯತ್ನದಿಂದ ಸಾಹಿತ್ಯ ಸಂವರ್ಧನೆಯ ಮಾರ್ಗಸೂಚಿಯಾಗತ್ತದೆ ವಿಭಿನ್ನ ಆಲೋಚನೆಯ ಕಾವ್ಯ ಕೃಷಿ ಹೃದಯಸ್ಪರ್ಶಿಯಾಗಿದೆ. ಮತ್ತಷ್ಟು ಇಂತಹ ಪ್ರಯತ್ನ ಮುಂದುವರೆಯಲಿ ಎಂದು ಶುಭ ಕೋರುತ್ತೇನೆ.

ಭಜಂತ್ರಿ ದೊಡ್ಡಣ್ಣ್ರೊಪ
Jul 21,2020

ಗಾಂಧಿ ಬಣ್ಣದ ಮುದುಕ ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಂದಿನ ವರ್ತಮಾನದ ಸಂದರ್ಭದಲ್ಲಿಯೂ ಕೂಡ ಗಾಂಧಿ ಪ್ರತಿಮೆ ಮುಂದೆ ಮುಖವಾಡ ಗಳ ಅಟ್ಟಹಾಸ ದ ನಗ್ನ ಸತ್ಯ ದಚಿತ್ರಣ ಮನನೀಯ ವಾಗಿ ಮೂಡಿ ಬಂದಿದೆ. ಸ್ವಾತಂತ್ರ್ಯದ ಪರಿಕಲ್ಪನೆ ಇಲ್ಲದ ಇಂದಿನ ಸಮಾಜಕ್ಕೆ ಗಾಂಧಿ ಇಂದಿಗೂ ಪ್ರಸ್ತುತ ವಾಗಿದ್ದಾನೆ ಎಂಬುದು ಕವಿತೆಯ ಆಶಯವಾಗಿದೆ. ಪ್ರೊ ದೊಡ್ಡಣ್ಣ ಭಜಂತ್ರಿ ವಿಜಯಪುರ.

ಶಶಿಕಾಂತ ರಾವ್
Jul 21,2020

ಬಹಳ ಅರ್ಥಪೂರ್ಣ ಬರಹ...ಪ್ರತಿ ಸಾಲು ಗಳಲ್ಲೂ ವಾಸ್ತದ ದರ್ಶನ ವ್ಯಕ್ತವಾಗಿದೆ. ಬಣ್ಣಕಳಚಿದಾಗ ಗಾಂದಿಯೊಂದಿಗೆ ಬೆರೆತವನೆಗಳು ನಿರ್ಲಿಪ್ತತೆಯ ಪ್ರತೀಕ. ಸ್ವಾರ್ಥ ಜನಗಳ ಮದ್ಯ ಬಣ್ಣ ಬೆಲೆ ಕಳೆದುಕೊಂಡು ಮಾನವೀಯತೆ ಮರೆಯಾಗಿದೆ. ಅಭಿನಂದನೆಗಳು ನಾಯಕರೇ....ಒಳ್ಳೆಯ ಪ್ರಯತ್ನ.

Vinith Shetty
Jul 14,2020

A beautiful description of " Gandhi" in the eyes and mind of his countrymen in the current scenario.

Sheshkumar Sc
Jul 10,2020

ಗಾಂಧಿ ಈಗಲೂ ಎಷ್ಟು ಪ್ರಸ್ತುತ ಎಂದು ಅರಿವಾಗುತ್ತದೆ. ಅದ್ಭುತ ಕವನ.

Kirana. K
Jul 06,2020

An bird eye view on Gandhi in daily life.

Murthy K M
Jul 06,2020

An small effort to realise Gandhi in the common man's heart.