Poem

ನಿನ್ನವರು ಯಾರು?

ಆಕಾಶ ಬಯಲಿನಲಿ ಸೂರ್ಯನೊಬ್ಬನೆ ದಿಕ್ಕಿಡಿದು ಬರುತಿಹನು
ತನಗೊಂದು ದಾರಿ ಇರಲೆಂದು ಗಂಗೆಯೂ ಭೂಮಿಯ ಕೊರೆದಿಹಳು
ಭೂತಾಯಿಯೂ ಕೂಡ ಸ್ವ ಕಕ್ಷೆಯಲ್ಲೆ ಪ್ರದಕ್ಷಿಣೆ ಹಾಕುತಿಹಳು
ನೀನೊಬ್ಬನೇ ನೋಡು ಪಾದವಿದ್ದರು ಪಥವಿಲ್ಲದಂತಿರುವವನು

ಕಣ್ಣಿಲ್ಲದ ಕೋಗಿಲೆಯೂ ಜಗವ ಕಂಡು ಹಾಡುತಿಹುದು
ಕಾಡ-ಕಲ್ಲ ಕುಟ್ಟಿದರು ಕಿಡಿಯೊಂದ ಹೊತ್ತಿಸಿಹುದು
ಚೂರಗಲದ ಉಳಿಯು ಕೂಡ ಘನ ಗುಡಿಯ ಕೆತ್ತಿಹದು
ನೀನೊಬ್ಬನೇ ನೋಡು ಆತ್ಮವಿದ್ದರು ವಿಶ್ವಾಸ ವಿಲ್ಲದವನು

ಕಡಲಲೆಗೂ ಕೂಡ ದಡ ಸೇರುವ ತವಕ ಕಾಡಿರಲು
ಚಿಗುರೆಳೆಯ ಕುಡಿಯು ಹೆಮ್ಮರವಾಗೋ ಆಸೆ ಹೊತ್ತಿರಲು
ಮುಡಿವ ಮಲ್ಲಿಗೆಯೂ ಬಾಡದ ಭರವಸೆ ಕಂಡಿರಲು
ನೀನೊಬ್ಬನೇ ನೋಡು ಕನಸಿಲ್ಲದೆ ಕಾಲ್ಚಾಚಿಬಿದ್ದವನು.

ಆದರೆ

ನೀನಿಡುವ ಹೆಜ್ಜೆ ನೆಲದ ಎದೆಯನೊಮ್ಮೆ ನಡುಗಿಸಲಿ
ನೀ ಕಾಣುವ ಕನಸು ಕಡಲ ಕಣ್ಣಿಗೂ ಮೀರಿರಲಿ
ನಿನ್ನ ಕೀರ್ತಿ- ಕಳಶವು ಬಾನೆತ್ತರಕೆ ಮೆರಗು ನೀಡಲಿ
ನೀನೊಬ್ಬನೇ ನೋಡು ನಿನ್ನ ನಭದ ತಾರೆಯಾಗಿಸುವುದು

By: ಮಧುಕುಮಾರ್ ಎನ್.

Comments[1] Likes[3] Shares[0]

Submit Your Comment

Latest Comments

ಸುಷ್ಮಾ ಬಿ. ಎಸ್.
Jul 08,2020

ವ್ಹಾ... 👌👏 ಸಾಲುಗಳು, ಅವುಗಳ ಭಾವ ಬಹಳ ಎತ್ತರದಲ್ಲಿದೆ...