Poem

ಒಂದು ಹಿಡಿ ಅಕ್ಕಿ

ಒಳಗೊಂದು ಉಸಿರು ಝೇಂಕರಿಸಿದೆ
ಹೊರಗಿನ ವಿಪ್ಲವಗಳ ಗೊಡವೆಯಾಚೆ
    ಒಪ್ಪಿದೆ, ಅಪ್ಪಿದೆ, ಬೆಸುಗೆಯೊಂದು ಹೆಣೆದಿದೆ
    ನವಮಾಸದ ಕೊನೆಗೆ ಕಡಿದರೂ ಉಳಿವ ಹಾಗೆ.....
ಎಲ್ಲಿಯ ಅಂಡವೋ ಯಾರ ಬೀಜವೋ
ಸಮಾಗಮಕ್ಕೆ, ಸಖ್ಯಕೆ, ಸಂಗಮಕೆ
ಆಸರೆಯಾದ ನೆಪ ಮಾತ್ರ...... ನನ್ನ ಹಮ್ಮು!
    ಉರುಳುತುರುಳುತ ದಿನಚಕ್ರ, ಗಟ್ಟಿಯಾಗುತ್ತಿದೆಯೇ ಬಂಧ?
    ದೂರವಾಗುತ್ತಿದೆಯೇ ಸಂ-ಬಂಧ.....
    ನನ್ನೊಡಲನೇ ಬಸಿದ ನನ್ನದಲ್ಲದ ಸೇತುಬಂಧ...!
ಒಂದು ಹುಣ್ಣಿಮೆಯ ಮುಂಜಾವು, ಅಮವಾಸ್ಯೆಯ ಕರಿನೆರಳು
.........................ಚಂದಿರನೇ ಕಾಣೆ!
ಸಾಕ್ಷಿಗೆ.....
... ಒಸರುತಲೇ ಚುಚ್ಚುತ್ತಿರುವ ಮೊಲೆತೊಟ್ಟು ಮಾತ್ರ!
    ನನ್ನೊಳಗಿನ ಜೀವದ ನೆನಪಿನಾ ಹೆಣಿಗೆ ಚದುರಿದೆ,
    ಅಪ್ಪಯ್ಯನ ಅನವರತ ಕೆಮ್ಮಿನಾ ಗಾನಕೆ!
    ಚದುರಿರುವುದರ ಚದುರಲು ಬಿಟ್ಟು,
    ನೆಟ್ಟಿರುವೆ ಚಿತ್ತ, ಹೊಸದರತ್ತ; ನೆನಪುಗಳ ಹೊಸಕುವತ್ತ!
ಹಾಸಲ್ಲೇ ಉಸುರಿ, ಕಣ್ಣಲ್ಲೇ ಜೀವ ಹಿಡಿದಿರುವ
ಅಮ್ಮನ ಸುಕ್ಕುಗಳಾಳದಲಿ ಹುಡುಕುತಿರುವೆ
    ‘ತೃಪ್ತ ಭಾವ’
ಒಂದು ಹಿಡಿ ಅಕ್ಕಿಯಾಸರೆಯಲೆ, ಉಳಿದಿರುವ ಜೀವ!
    ಒಂದು ಚಿಗುರನು ಚಿಗುರಿ, ಕಸಿಮಾಡಿ, ಜೀವ ಕೊಟ್ಟು
    ಮತ್ತೆ ನೇಪಥ್ಯಕೆ ಕಳಿಸಿ
    ನನಗೆ ಜೀವ ಕೊಟ್ಟ ಎರಡು ಜೀವಗಳ ಉಳಿಸಿ,
    ಸಾಧಿಸಿದ್ದು, ದಿನಕ್ಕೆ ಒಂದು ಹಿಡಿ ಅಕ್ಕಿ!
    ಕನಸು ಮನಸುಗಳ ಹೊಸಕಿ!    
 

By: ಅಕ್ಷಯ ಶೆಟ್ಟಿ

Comments[1] Likes[15] Shares[4]

Submit Your Comment

Latest Comments

Good one Akshaya 👌👍
Jul 06,2020

Good one my dear niece .. Proud of you... keep it up... many more to come