ಸೃಷ್ಟಿ ಪ್ರಕಾಶನವು ಒತ್ತು ಕೊಟ್ಟಿರುವುದು ಅನುವಾದಕ್ಕೆ. ಈ ವಿಭಿನ್ನತೆಯೇ ಸೃಷ್ಟಿ ಪ್ರಕಾಶನದ ಹೆಗ್ಗುರುತಾಗಿಯೂ ಉಳಿದಿದೆ. ತಮಿಳು, ಮಲಯಾಳಂ, ಟರ್ಕಿ, ಜರ್ಮನ್, ಆಫ್ರಿಕನ್, ಇಂಗ್ಲಿಷ್ ಸೇರಿದಂತೆ ಜಗತ್ತಿನ ಹಲವು ಭಾಷೆಗಳ ಮಹತ್ವದ ಕೃತಿಗಳನ್ನು ಕನ್ನಡ ಸಾಹಿತ್ಯಾಸಕ್ತರಿಗೆ ತಲುಪಿಸಿಸುವ ಕೆಲಸವನ್ನು ಸೃಷ್ಟಿ ಪ್ರಕಾಶನ ಮಾಡುತ್ತಿದೆ. ಅದು ಪ್ರಕಟಿಸಿರುವ ಪ್ರತಿ ಪುಸ್ತಕವೂ ಅಕ್ಷರ ಲೋಕದಲ್ಲಿ ಹೊಸ ಹೆಚ್ಚುಗಾರಿಕೆಗೆ ಕಾರಣವಾಗಿದೆ.
ಸೃಷ್ಟಿ ಪ್ರಕಾಶನದ ಮತ್ತೊಂದು ವಿಶೇಷತೆ ಎಂದರೆ ಅಲ್ಲಿ ಪ್ರಕಟವಾಗುವ ಹೆಚ್ಚಿನ ಪುಸ್ತಕಗಳು ಜಗತ್ತಿನ ಮಹಿಳಾವಾದಿಗಳ ಮಹತ್ತರ ಕೃತಿಗಳಾಗಿರುತ್ತವೆ. ಪ್ರಕಾಶನವೊಂದು ಮಹಿಳಾ ವಾದಕ್ಕೆ ಈ ಮಟ್ಟಿಗಿನ ಆಧ್ಯತೆ ನೀಡಿದ್ದು ಗಮನೀಯ. ಜಗತ್ತಿನ ಶ್ರೇಷ್ಠ ಮಹಿಳಾ ವಾದಿಗಳ ಆತ್ಮಕಥೆಗಳನ್ನು, ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತಂದ ಹೆಗ್ಗಳಿಕೆ ಸೃಷ್ಟಿ ಪ್ರಕಾಶನದ್ದು.
ವಿಶ್ವಸಾಹಿತ್ಯವನ್ನು ಕನ್ನಡ ಪುಸ್ತಕಲೋಕಕ್ಕೆ ಒಗ್ಗುವಂತೆ ಅನುವಾದಿಸುವ ಕನ್ನಡದ ಪ್ರಮುಖ ಅನುವಾದಕರ ಹೆಚ್ಚಿನ ಕೃತಿಗಳು ಮುದ್ರಣಗೊಳ್ಳುವುದು ನಾಗೇಶ್ ಅವರ ಸೃಷ್ಟಿ ಪ್ರಕಾಶನದಿಂದ ಎಂದರೆ ಉತ್ಪ್ರೇಕ್ಷೆ ಇಲ್ಲ. ಪುಸ್ತಕದ ಮುದ್ರಣದಲ್ಲೂ ತಮ್ಮದೇ ಅಸ್ಮಿತೆಯೊಂದನ್ನು ಕಟ್ಟಿಕೊಂಡಿರುವ ಸೃಷ್ಟಿ ನಾಗೇಶ್, ತಮ್ಮ ಪ್ರಕಾಶನದ ಪುಸ್ತಕಗಳ ಡಿಸೈನಿಂಗ್ ಕಾರ್ಯಕ್ಕೆ ಹೆಚ್ಚಿನ ಗಮನ ಹರಿಸುತ್ತಾರೆ. ಇಂಗ್ಲಿಷ್ ಕೃತಿಗಳ ಮುಖಪುಟವನ್ನು ಮೀರಿಸುವ ತಮ್ಮದೇ ವಿಶಿಷ್ಟ ಮುಖಪುಟ ಶೈಲಿಯನ್ನು ಅನುಸರಿಸಿಕೊಂಡು ಬರುತ್ತಿರುವ ಸೃಷ್ಟಿ ಪ್ರಕಾಶನದ ಹಲವು ಕೃತಿಗಳು ಅತ್ಯುತ್ತಮ ಮುದ್ರಣಕ್ಕಾಗಿ ಪ್ರಶಸ್ತಿಯನ್ನೂ ಗಳಿಸಿವೆ.
©2023 Book Brahma Private Limited.