ಡಿಜಿಟಲ್ ಮಾಧ್ಯಮಗಳೇ ನಮ್ಮನ್ನು ಆಳುತ್ತಿವೆ..: ಸಿಬಂತಿ ಪದ್ಮನಾಭ

Date: 07-01-2023

Location: ಹಾವೇರಿ


ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇಯ ದಿನದ ಐದನೇ ಗೋಷ್ಠಿಯು ಕನಕ ಶರೀಫ-ಸರ್ವಜ್ಞ ಪ್ರದಾನ ವೇದಿಕೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಬಿ.ಕೆ. ರವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗೋಷ್ಟಿಯಲ್ಲಿ ‘ಮಾಧ್ಯಮ ಹೊಸತನ ಮತ್ತು ಆವಿಷ್ಕಾರಗಳು’ ಕುರಿತ ವಿಚಾರ ಮಂಡನೆ ಮಾಡಲಾಯಿತು.

ತಂತ್ರಜ್ಞಾನದ ಬಳಕೆಯ ಬಗ್ಗೆ ನಮಗೆ ಅರಿವಿರಬೇಕು: ಡಿಜಿಟಲ್ ಮಾಧ್ಯಮದ ಮುಂದಿನ ಸವಾಲುಗಳು ವಿಚಾರದ ಕುರಿತು ಸಿಬಂತಿ ಪದ್ಮನಾಭ, “ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮಗಳು ಪ್ರಬಲತೆಯನ್ನು ಪಡೆದುಕೊಳ್ಳುತ್ತಿದೆ. ಡಿಜಿಟಲ್ ಮಾಧ್ಯಮದ ದೊಡ್ಡ ಮಾಹಿತಿ ಕ್ರಾಂತಿ ನಡೆಯುತ್ತಿರುವುದರಿಂದ ಅದರ ಪರಿಣಾಮಗಳನ್ನು ನಾವೆಲ್ಲ ಅನುಭವಿಸುತ್ತಿದ್ದೇವೆ. ಇನ್ನು ಡಿಜಿಟಲ್ ಮಾಧ್ಯಮಗಳೇ ನಮ್ಮನ್ನು ಆಳುತ್ತಿವೆಯೇ ಎಂಬುದು ಪ್ರಶ್ನೆಯಾಗಿ ನಮ್ಮ ಮುಂದಿದೆ. ಮೊಬೈಲ್ ಹಿಡಿದುಕೊಂಡವನು ಕೂಡ ಇತ್ತೀಚಿನ ದಿನಗಳಲ್ಲಿ ಪತ್ರಕರ್ತನಾಗಿದ್ದಾನೆ. ಇದೆಲ್ಲವೂ ಡಿಜಿಟಲ್ ಮಾಧ್ಯಮದಿಂದ ಸಾಧ್ಯವಾಗುತ್ತಿದೆ. ಕ್ಷುಲ್ಲಕ ವಿಚಾರಗಳು ಕೂಡ ಪ್ರಧಾನ ವೇದಿಕೆಯನ್ನು ಪಡೆಯುತ್ತಿದೆ ಎಂದರೆ ನಾವೇ ಅರಿಯಬಹುದು ಎಷ್ಟರ ಮಟ್ಟಿಗೆ ಡಿಜಿಟಲ್ ಮಾಧ್ಯಮ ಜಾಗತೀಕರಣವನ್ನು ಪ್ರವೇಶಿಸಿದೆ ಎಂಬುದು ತಿಳಿಯಬೇಕಾಗಿದೆ. ಇದಕ್ಕೆ ಅಗ್ಗದ ಡಾಟಾ ದರವೂ ಇದಕ್ಕೆ ಕಾರಣವಾಗಿದೆ”.

“ಡಿಜಿಟಲ್ ಪ್ರಭಾವಶಾಲಿ ಮಾಧ್ಯಮವು ಅನೇಕ ಸವಾಲುಗಳನ್ನು ಕೂಡ ಎದುರಿಸುತ್ತಿದೆ. ಇಲ್ಲಿ ಸುದ್ದಿ, ಮಾಹಿತಿ, ಮನರಂಜನೆ ನಡುವಿನ ತೆಳುವಾದ ಗೆರೆ ವೇಗವಾಗಿ ಮಾಯವಾಗುತ್ತಿದೆ. ಜನರಿಗೆ ಸುದ್ದಿಯ ಸತ್ಯಾಸತ್ಯತೆ ತಿಳಿಯುವುದು ಸವಾಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ಸುಳ್ಳು ಸುದ್ದಿಗಳ‌ ಕಾರ್ಖಾನೆ ಎಂದು ಕರೆಯಲಾಗುತ್ತಿದೆ. ಇನ್ನು ನಮ್ಮ ಮುಂದಿರುವ ಪ್ರಮುಖ ಸವಾಲುಗಳೆಂದರೆ ಒಂದು ವಸ್ತು ಹಾಗೂ ವಿಶ್ವಾಸರ್ಹತೆ. ವಸ್ತು ವಿಷಯವನ್ನು ನಾವು ಇಂದಿನ ಸಮಾಜಕ್ಕೆ ಯಾವ ರೀತಿಯಾಗಿ ಡಿಜಿಟಲ್ ಮಾದ್ಯಮದ ಮೂಲಕ ಕೊಡುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಜನರ ವಿಶ್ವಾಸವನ್ನು ಯಾವ ಮಾಧ್ಯಮ ಉಳಿಸುವುದಿಲ್ಲವೇ ಅಂತಹ ಮಾಧ್ಯಮ ಬೇಗ ಸಾಯುತ್ತದೆ. ಪ್ರಜಾತಾತ್ಮಕ ಸಮಾಜದಲ್ಲಿ ಯಾವ ಡಿಜಿಟಲ್ ಮಾಧ್ಯಮ ಉಳಿಯಬೇಕೋ ಅಂತಹ ಮಾಧ್ಯಮಗಳು ಒಳ್ಳೆಯ ವಿಚಾರಗಳನ್ನು ಸಮಾಜಕ್ಕೆ ನೀಡಬೇಕಾಗಿದೆ” ಎಂದರು.

ಹೊಸ ತಂತ್ರಜ್ಞಾನದ ಹೆಚ್ಚು ವೈಭವೀಕರಣ ಅಗತ್ಯವಿಲ್ಲ: ಹಿರಿಯ ಪ್ರಾಧ್ಯಾಪಕ ಬಿ.ಕೆ. ರವಿ, “ಭಾರತದಲ್ಲಿ ಮಾಧ್ಯಮ ಕ್ಷೇತ್ರವು ವಾಣಿಜ್ಯ ಕ್ಷೇತ್ರವಾಗಿ ಪರಿಗಣಿಸಿರಲಿಲ್ಲ. ವಾಣಿಜ್ಯೋದ್ಯಮ ಮಾಧ್ಯಮವಾಗಿ ಬಹುರಾಷ್ಟ್ರೀಯ ಕಂಪೆನಿಗಳ ಟಿವಿ ವಾಹಿನಿಗಳ ಜೊತೆ ಪೈಪೋಟಿ ಪ್ರಾರಂಭವಾದ ನಂತರ ಪರಿಗಣಿಸಲ್ಪಟ್ಟಿತು.

ಕಾಲಕ್ಕೆ ತಕ್ಕಂತೆ ಆವಿಷ್ಕಾರವಾಗುವ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಆಗುವ ಬದಲಾವಣೆಗಳು ವೈಭವೀಕರಣವಾಗುತ್ತಿದೆ. ಇಡೀ ಸಮಾಜದ ಎಲ್ಲರಿಗೂ ಮಾಹಿತಿಯನ್ನು ಒದಗಿಸುವ ಕ್ಷೇತ್ರವಾಗಿ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ. ತಂತ್ರಜ್ಞಾನದ ಭರಾಟೆಯಲ್ಲಿ ಭಾರತೀಯ ಮಾಧ್ಯಮ ಅಗಾಧವಾಗಿ ಬೆಳೆಯುತ್ತಿರುವುದನ್ನು ನಾವು ಗಮನಿಸಬೇಕಿದೆ. ದೇಶಿ ನೇರ ಬಂಡವಾಳ ಹೂಡಿಕೆಯ ನೀತಿಯಿಂದಾಗಿ ಜಗತ್ತಿನ‌ ಹಲವು ರಾಷ್ಟ್ರಗಳು ಭಾರತದ ಮಾಧ್ಯಮದಲ್ಲಿ ಬಂಡವಾಳ ಹೂಡಲು ತುದಿಗಾಲಲ್ಲಿ ನಿಂತಿವೆ. ಯಾವುದೇ ಮಾಧ್ಯಮ ಜನಸಮುದಾಯದ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡು ಹೋಗದೆ ಇದ್ದರೆ ಅದು ಹೆಚ್ಚು ಕಾಲ ಬದುಕುವುದಿಲ್ಲ. ಆದ್ದರಿಂದ ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯದೆ ಮಾಧ್ಯಮ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಬೇಕಾಗಿದೆ”.

ಆಂಗ್ಲಭಾಷಾ ಪದಗಳ ವ್ಯಾಮೋಹ ಬಿಡಬೇಕು‌: ಮುದ್ರಣ ಮಾಧ್ಯಮದಲ್ಲಿ ಕನ್ನಡದ ಬಳಕೆ ವಿಚಾರದ ಕುರಿತು ಸುದರ್ಶನ್ ಚನ್ನಂಗಿಹಳ್ಳಿ, “ಮಾಧ್ಯಮಗಳು ಆಂಗ್ಲ ಭಾಷೆಯ ವ್ಯಾಮೋಹವನ್ನು ಬಿಡಬೇಕು. ಕನ್ನಡ ಪದಗಳ ಬಳಕೆಯನ್ನು ಹೆಚ್ಚಾಗಿಸಬೇಕು. ಲಾಕ್‌ಡೌನ್, ಕ್ವಾರಂಟೈನ್, ಸ್ಯಾನಿಟೈಸರ್ ಮೊದಲಾದ ಪದಗಳು ಕೋವಿಡ್ ಕಾಲ ಘಟ್ಟದಲ್ಲಿ ಮಾಧ್ಯಮಗಳಲ್ಲಿ ಬಳಕೆಯಾದವು‌. ಪರ್ಯಾಯ ಕನ್ನಡ ಪದಗಳನ್ನು ಬಳಕೆಗೆ ತರಲು ಸಾಧ್ಯವಾಗಲಿಲ್ಲ. ಇನ್ನು ಮಾಧ್ಯಮಗಳಲ್ಲಿ ಪತ್ರಿಕಾ ಭಾಷೆಗೆ ಬಹಳ ಮಹತ್ವವಿದ್ದು, ಮುಂದಿನ ಪೀಳಿಗೆಗೆ ಭಾಷಾ ಬಳಕೆಯನ್ನು ದಾಟಿಸುವಂತಹ ಹೊಣೆಗಾರಿಕೆ ಪತ್ರಿಕೆಗಳ ಮೇಲಿದೆ. ಮಾತೃಭಾಷೆ ಉಳಿದರೆ ಮಾತ್ರ ಕನ್ನಡ ಪತ್ರಿಕೆಗಳು ಕೂಡ ಉಳಿಯಲು ಸಾಧ್ಯ” ಎಂದರು.

ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬರ ಐಡೆಂಟಿಟಿ ಆಗಿವೆ: ಸಾಮಾಜಿಕ ಜಾಲತಾಣಗಳು: ಅರಿವು ಮತ್ತು ಅಪಾಯ ವಿಚಾರ ಮಂಡಿಸಿದ ಎಚ್.ಎನ್.ಸುದರ್ಶನ್, “ದೂರದಲ್ಲಿರುವ ವ್ಯಕ್ತಿಗಳನ್ನು ಹತ್ತಿರವಾಗಿಸುವ ಸಾಮಾಜಿಕ ಜಾಲತಾಣಗಳು ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರ ಐಡೆಂಟಿಟಿ ಆಗುತ್ತಿದೆ. ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಹುಟ್ಟಿಕೊಂಡ ಸಾಮಾಜಿಕ ಜಾಲತಾಣಗಳು ಇಂದು ಹೆಮ್ಮರವಾಗಿ ಬೆಳೆದಿವೆ. ಜೊತೆಗೆ ಅನೇಕ ಪ್ರತಿಭೆಗಳ ವೇದಿಕೆಗೂ ಬುನಾದಿಯಾಗುತ್ತಿದೆ. ಜನಸಾಮಾನ್ಯನೂ ಕೂಡ ಮಾಹಿತಿಗಳನ್ನು ಜಾಲತಾಣಗಳಲ್ಲಿ ದಾಖಲಿಸುವಂತೆ ಮಾಡುತ್ತಿರುವುದು ಜಾಗತೀಕರಣದ ವೇಗವನ್ನು ತಿಳಿಸುತ್ತಿದೆ. ಇನ್ನು ಪ್ರತಿಭಾವಂತ ಕ್ರಿಯೇಟರ್ಸ್‌ಗಳು ಜಾಲತಾಣಗಳ ವರಮಾನದ ಮೂಲಕವೇ ಜೀವನ‌ ನಿರ್ವಹಣೆ ಮಾಡುತ್ತಿದ್ದಾರೆ. ಸುಮಾರು 45 ಕೋಟಿ ಭಾರತೀಯರು ಯಾವುದಾದರೂ ಒಂದು ಸಾಮಾಜಿಕ ಜಾಲತಾಣಗಳಲ್ಲಿದ್ದಾರೆ”.

“ಅಗಾಧವಾದ ವೇದಿಕೆಯನ್ನು ಸೃಷ್ಟಿಸುತ್ತಿರುವ ಸಾಮಾಜಿಕ ಜಾಲತಾಣ ಅತ್ಯುತ್ತಮ ಸಾಹಿತ್ಯ, ಚರ್ಚೆಗಳ ಕೂಟ, ಮನರಂಜನೆಯ ವೇದಿಕೆಗಳಾಗಿ ಬಿಂಬಿತವಾಗಿದೆ. ಉತ್ತಮ ಕೆಲಸಕ್ಕೆ ಮಾತ್ರವಲ್ಲದೇ ವಂಚನೆಗೂ ಒಳಪಡುತ್ತಿರುವ ಸಾಮಾಜಿಕ ಜಾಲತಾಣದಲ್ಲಿ ವಂಚಕರ ಜಾಲವೂ ಅಗಾಧವಾಗಿ ಬೆಳೆಯುತ್ತಿದ್ದು, ಸೈಬರ್ ಅಪರಾಧಗಳನ್ನು ದಾಖಲಿಸುವ, ನಿಯಂತ್ರಿಸುವ ಕ್ರಮಗಳನ್ನು ಜನರು ರೂಢಿಸಿಕೊಳ್ಳಬೇಕಾಗಿದೆ”. ಎಂದು ತಿಳಿಸಿದರು.

ಸಾಮಾಜಿಕ ಮಾಧ್ಯಮಗಳ ಪೈಪೋಟಿ ಎದುರಿಸಬೇಕಾಗಿದೆ: ಹಿರಿಯ ಪತ್ರಕರ್ತ ಮೋಹನ ಹೆಗಡೆ ಆಶಯ ನುಡಿಗಳನ್ನಾಡಿ, ಪತ್ರಿಕೆಗಳು ಸಮಾಜಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ನಾಡಿನ ಅಭ್ಯುದಯಕ್ಕೆ ಪತ್ರಿಕೆಗಳ ಕೊಡುಗೆ ಗಮನಾರ್ಹವಾದುದು. ಇನ್ನು ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೇ ಆಗಿರುವ ಅವಾಂತರಗಳನ್ನು ಗಮನಿಸಿದಾಗ ಕೇವಲ ಒಳಿತನ್ನೇ ಆಶಿಸುವುದು ಸೂಕ್ತವೆನಿಸುವುದಿಲ್ಲ. ಕಾಲಕ್ಕೆ ತಕ್ಕಂತೆ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಹೋಗುತ್ತಿರುವ ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆನ್ನು ಉಳಿಸಿಕೊಂಡು ಬಂದಿದೆ ಎಂದು ನುಡಿದರು.

- ರಂಜಿತಾ ಸಿದ್ಧಕಟ್ಟೆ

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...