ಗಳಗನಾಥದ ಸುತ್ತಮುತ್ತ ಒಂದು ಸುತ್ತು

Date: 04-01-2023

Location: ಬೆಂಗಳೂರು


86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಎಂಬುದು ಮತ್ತೊಂದು ವಿಶೇಷ. ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಪ್ರಮುಖ ಸ್ಥಳಗಳ ಮೇಲೆ ಬೆಳಕು ಚೆಲ್ಲುವ ಸಲುವಾಗಿ ವಿಶೇಷ ಲೇಖನ ಇದಾಗಿದೆ. ಗಳಗನಾಥ ತಾಲೂಕಿನ ಇತಿಹಾಸ, ವ್ಯಕ್ತಿ ಪರಿಚಯ ಒಳಗೊಂಡ ಮಾಹಿತಿ ಇಲ್ಲಿದೆ.

ಹಾವೇರಿ ಜಿಲ್ಲೆಯಿಂದ 40ಕಿ.ಮೀ ದೂರದಲ್ಲಿದೆ ಗಳಗನಾಥ. ಗಳಗೇಶ್ವರ ದೇವಸ್ಥಾನದಿಂದ ಈ ಸ್ಥಳಕ್ಕೆ ಗಳಗನಾಥ ಎಂದು ಪ್ರಸಿದ್ಧಿಯಾಗಿದೆ. ಈ ದೇವಾಲಯ 28ಮೀ. ಉದ್ದ,14ಮೀ ಅಗಲವಿದೆ. ಇದರ ಮೇಲ್ಚಾವಣಿಯಲ್ಲಿರುವ ನಾಲ್ಕು ಸುಂದರವಾದ ಸ್ತಂಭಗಳು ದೇವಾಲಯದ ಪ್ರಮುಖ ಆಕರ್ಷಣೆ. ಕದಂಬರ ಮತ್ತು ಚಾಲುಕ್ಯರ ಶೈಲಿಯ ಅನೇಕ ದೇಗುಲಗಳನ್ನು ಹೊಂದಿರುವ ಹಾವೇರಿ ಜಿಲ್ಲೆ ಸಂಗೀತ ಸಾಧಕರಿಗೆ ತವರು ಮನೆ ಎಂದರೆ ಅತಿಶಯೋಕ್ತಿಯಲ್ಲ.

ಸಂಗೀತ ವಿದ್ವಾಂಸರ ಕೊಡುಗೆ: ಸಂಗೀತ ವಿದ್ವಾಂಸನೊಬ್ಬರು ಕಟ್ಟಿಸಿದ ದೇಗುಲವೊಂದಿದೆ. ಅದೇ ಹಾವೇರಿ ಜಿಲ್ಲೆಯ ಗಳಗನಾಥ ದೇಗುಲ ಅಥವಾ ಗಳಗೇಶ್ವರ ದೇಗುಲ. ಈ ದೇಗುಲದ ನಿಮಿತ್ತ ಆ ಊರಿಗೂ ಗಳಗನಾಥ ಎಂಬ ಹೆಸರೇ ಬಂದಿದೆ. ತುಂಗಭದ್ರಾ ನದಿಯ ದಂಡೆಯ ಮೇಲೆ. ಗಳಗನಾಥ ದೇಗುಲವಿದ್ದು, ಹನ್ನೊಂದನೇ ಶತಮಾನದ ಶಾಸನವೊಂದರ ಆಧಾರದ ಪ್ರಕಾರ, ಈ ದೇಗುಲ ಕಟ್ಟಿಸಿರುವುದು ಮೋಕಾರಿ ಭರಮಯ್ಯ ಎಂಬ ಸಂಗೀತ ವಿದ್ವಾಂಸ ಎಂಬುದು ತಿಳಿದುಬಂದಿದೆ.

ಆ ಶಾಸನದಲ್ಲಿ ಭರಮಯ್ಯನು 32 ರಾಗಗಳಲ್ಲಿ 'ಸಮಸ್ತ ಗೀತ ವಾದ್ಯ, ನೃತ್ಯ ಶಾಸ್ತ್ರ ಸಾಧಕ' ಎಂದು ನಮೂದಿಸಲಾಗಿದೆ. ಈತನ ತಾಯಿಯಾದ ಜೋಗಿಯಬ್ಬೆಯ ಹೆಸರಿನಲ್ಲಿ 30 ಪೊನ್ನ ಗದ್ಯಾಣ(ಚಿನ್ನದ ನಾಣ್ಯ)ಗಳನ್ನು ದಾನ ಮಾಡಿ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ ಎಂಬ ಇತಿಹಾಸವಿದೆ. ಮತ್ತೊಂದು ಶಾಸನದ ಪ್ರಕಾರ, ಈ ದೇಗುಲ ಕ್ರಿಶ. 1030 ರಿಂದಲೇ ಅಸ್ತಿತ್ವದಲ್ಲಿದ್ದು, ಕ್ರಿಶ. 1079ರಲ್ಲಿ ಕಲ್ಯಾಣ ಚಾಲುಕ್ಯರ ಅರಸನಾಗಿದ್ದ ಆರನೇ ವಿಕ್ರಮಾದಿತ್ಯನ ಮೂರನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ನಡೆದಿತ್ತು. ಅದರ ಸವಿನೆನಪಿಗಾಗಿ ಈ ದೇಗುಲದ ಜೀರ್ಣೋದ್ಧಾರವಾಗಿರುವ ಕುರಿತು ಮಾಹಿತಿ ದೊರೆತಿದೆ.

ದೇವಾಲಯದ ಕುರಿತು: ಶಾಸನಗಳಲ್ಲಿ ಈ ಸ್ಥಳವನ್ನು ಹುಲ್ಲುನಿ ಅಥವಾ ಪುಲ್ಲುನಿ (ಪಲ್ಗುಣಿ- ಮೊದಲ ಹೆಸರು) ಎಂದು ಉಲ್ಲೇಖಿಸಲಾಗಿದೆ. ದೇವಾಲಯ ಪೂರ್ವಾಭಿಮುಖವಾಗಿದ್ದು ಗರ್ಭಗುಡಿಯ, ಅಂತರಾಳ ಹಾಗು ಮುಖ ಮಂಟಪಗಳನ್ನು ಒಳಗೊಂಡಿದೆ. ದೇವಾಲಯವು ನದಿ ದಂಡೆಯ ಮೇಲಿರುವುದರಿಂದ ಹಾಗು ಗರ್ಭಗುಡಿಯ ಮೇಲಿನ ಗೋಪುರ ಬೃಹತ್‌ ಆಗಿದ್ದು, ಅದರ ಸುರಕ್ಷತೆಗಾಗಿ ಗೋಪುರದ ಸುತ್ತಲೂ ಬಲವಾದ ಗೋಡೆಯನ್ನು ನಿರ್ಮಿಸಲಾಗಿದೆ.

ಗರ್ಭಗುಡಿಯ ಲಿಂಗದ ಹೊರತಾಗಿಯೂ ಅನೇಕ ಸುಂದರ ಕೆತ್ತನೆಗಳಿವೆ. ಈ ಕೆತ್ತನೆಗಳಲ್ಲಿ ಸೂರ್ಯ ವಿಗ್ರಹವೊಂದಿದ್ದು, ಕೈಯಲ್ಲಿ ಕಮಲವನ್ನು ಹಿಡಿದಿದ್ದು ಸಪ್ತಾಶ್ವಗಳ ಮೇಲೆ ಆರೂಢನಾಗಿದ್ದಾನೆ. ಉಷೆ-ಪ್ರತ್ಯುಷೆಯರು ಮಕರ ತೋರಣದಲ್ಲಿ ಇದ್ದಾರೆ. ಇದಲ್ಲದೆ ಎಂಟು ಕೈಗಳ ಮಹಿಷನನ್ನು ಕೊಲ್ಲುವ ಭಂಗಿಯಲ್ಲಿರುವ ಮಹಿಷಾಸುರ ಮರ್ದಿನಿ ಆಕರ್ಷಿಸುತ್ತದೆ. ನಿಂತ ಭಂಗಿಯಲ್ಲಿರುವ ವಿಷ್ಣು ಮೂರ್ತಿಯನ್ನು ಕ್ರಿ. ಶ 1034 ರಲ್ಲಿ ಕೆತ್ತಲಾಗಿದೆ. ಇದರ ಸುತ್ತಲೂ ಕೆತ್ತಿರುವ ದಶಾವತಾರ ಹಾಗೂ ಸರಸ್ವತಿಯ ಶಿಲ್ಪಕಲೆಗಳು ಮನಮೋಹಕವಾಗಿವೆ.

ಸಾಹಿತಿ ಗಳಗನಾಥರ ಕುರಿತು
1869ನೇ ಇಸವಿ ಜನವರಿ 5 ರಂದು ಜನಿಸಿ ಕನ್ನಡಕ್ಕೆ ವಿಶೇಷ ಕೊಡುಗೆ ನೀಡಿದವರು ’ಗಳಗನಾಥ’ರು. ಇವರ ಮೂಲ ಹೆಸರು ವೆಂಕಟೇಶ ತಿರಕೋ ಕುಲಕರ್ಣಿ. ಊರಿನ ಕುಲಕರ್ಣಿ ಮನೆತನದವರಾದ ಇವರ ತಂದೆ ತ್ರಿವಿಕ್ರಮಭಟ್ಟರು ತಿರಕೋ ಭಟ್ಟರೆಂದೇ ಪ್ರಸಿದ್ಧರಾಗಿದ್ದವರು. ’ವೆಂಕಟೇಶ’ರು ತಮ್ಮ ಸಾಹಿತ್ಯ ರಚನೆಯಲ್ಲಿ ತಮ್ಮ ಊರಿನ ಹೆಸರನ್ನೇ ಅನ್ವರ್ಥನಾಮವಾಗಿ ಬಳಸಿಕೊಂಡು ’ಗಳಗನಾಥ’ರೆಂದು ಪ್ರಸಿದ್ಧರಾದರು.

ಶಿಕ್ಷಕರಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದರು. 1907ರಲ್ಲಿ ಸ್ವಯಂ ನಿವೃತ್ತಿ ಪಡೆದು ಹಾವೇರಿಯ ಸಮೀಪದ ಅಗಡಿಯಲ್ಲಿ ಮುದ್ರಣಾಲಯ ತೆರೆದು, ’ಸದ್ಭೋಧ ಚಂದ್ರಿಕೆʼ ಎಂಬ ಪತ್ರಿಕೆ’ ಆರಂಭಿಸಿದರು. ಯೋಗಾಭ್ಯಾಸ, ನೀತಿ ಪ್ರಧಾನ ಕಥೆ, ಕುಟುಂಬ ಜೀವನ, ದಾಂಪತ್ಯ ಕುರಿತ ‘ಸದ್ಭೋಧ ಚಂದ್ರಿಕೆ’ , ಆ ಸಂದರ್ಭದಲ್ಲೇ ನಾಲ್ಕು ಸಾವಿರಕ್ಕೂ ಹೆಚ್ಚು ಚಂದಾದಾರರನ್ನು ಈ ಪತ್ರಿಕೆ ಹೊಂದಿತ್ತು ಎನ್ನಲಾಗಿದೆ. ಮುಂದೆ, ಗಳಗನಾಥರು ತಮಗೆ ಶಿಕ್ಷಣ ವೃತ್ತಿಯಲ್ಲಿದ್ದ ಗೌರವದಿಂದ ಒಂದು ಪಾಠಶಾಲೆಯನ್ನೂ ತೆರೆದರು.ಗಳಗನಾಥರು 22 ಏಪ್ರಿಲ್ 1942ರಲ್ಲಿ ನಿಧನರಾದರು.

***

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...