ಕನ್ನಡ ಕಲಿಕೆ ಕಡ್ಡಾಯವಾಗಬೇಕು : ದೊಡ್ಡರಂಗೇಗೌಡ

Date: 06-01-2023

Location: ಹಾವೇರಿ


ಐದನೇ ತರಗತಿವರೆಗೆ ಕನ್ನಡ ಕಲಿಕೆಯನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಹಾವೇರಿ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾದ ದೊಡ್ಡರಂಗೇಗೌಡರು ಒತ್ತಾಯಿಸಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆಯನ್ನು ಕೊಡಬೇಕು. ಇಲ್ಲಿಯ ಪ್ರಾದೇಶಿಕ ಭಾಷೆ ಕನ್ನಡ ಅದು ಮೊದಲು. ಆ ಮೇಲೆ - ಉಳಿದುದೆಲ್ಲಾ. ಮಗು ಚೆನ್ನಾಗಿ ವಿಷಯ ಗ್ರಹಿಸಬೇಕಾದರೆ ಕನ್ನಡ ಅತಿ ಮುಖ್ಯ. ಗ್ರಹಿಸಿದ ವಿಷಯವನ್ನು ಬರೆಯಬೇಕಾದರೂ ಅಷ್ಟೇ. ಐದನೇ ತರಗತಿವರೆಗೆ ಕನ್ನಡ ಕಲಿಕೆಯನ್ನು ಸರ್ಕಾರ ಕಡ್ಡಾಯ ಗೊಳಿಸಬೇಕು, ಆ ಮೇಲೆ ಆ ಮಗುವಿನ ಬೌದ್ಧಿಕ ಸಾಮರ್ಥ್ಯದ ಮೇಲೆ ಎಷ್ಟು ಭಾಷೆಗಳನ್ನಾದರೂ ಕಲಿಯಲಿ. ನಮ್ಮ ವಿರೋಧವಿಲ್ಲ. ಇದು ಸೈದ್ಧಾಂತಿಕ ತರ್ಕ. ಆಗಲೇಬೇಕಾದ ಕಾರ್ಯ. ಈ ಬಗ್ಗೆ ಗಮನಕೊಡಲಿ ನಮ್ಮ ನಲ್ಮೆಯ ಸರ್ಕಾರ.

ಭಾಷಾ ಅಲ್ಪಸಂಖ್ಯಾತ ಗುಂಪಿನ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಒದಗಿಸಲು ಸಾಕಷ್ಟು ವ್ಯವಸ್ಥೆಯನ್ನು ಮಾಡಿಕೊಡಬೇಕಾದ ಹೊಣೆ ಪ್ರತಿ ರಾಜ್ಯ ಹಾಗೂ ಸ್ಥಳೀಯ ಆಡಳಿತಗಳದ್ದು. ರಾಷ್ಟ್ರಪತಿಗಳು ಇಂತಹ ಸವಲತ್ತುಗಳನ್ನುಒದಗಿಸಲು ಯಾವುದೇ ರಾಜ್ಯಕ್ಕೆ ನಿರ್ದೇಶನ ನೀಡಬಹುದು. ಎಲ್ಲಾ ರಾಜ್ಯಗಳಲ್ಲೂ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ರಾಷ್ಟ್ರಪತಿಗಳು ನೇಮಿಸಿದ ವಿಶೇಷ ಅಧಿಕಾರಿಯೊಬ್ಬರು ಇರುತ್ತಾರೆ. ಅವರು ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸುತ್ತಿರುತ್ತಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ವಿಷಯವನ್ನು ಪರಾಮರ್ಶಿಸಿ ಹೇಳುವುದಾದರೆ- ಕೇರಳದಲ್ಲಿನ ಶಾಲೆಗಳಲ್ಲಿ ಕನ್ನಡ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿಅನ್ಯಾಯವಾಗುತ್ತಿದೆ. ಕಾಸರಗೋಡಿನ ಕನ್ನಡಿಗರು “ಎಂದಿದ್ದರೂ ಕಾಸರಗೋಡು ಕರ್ನಾಟಕಕ್ಕೆ ಸೇರಿಯೇ ಸೇರುತ್ತೆ” ಎಂಬ ಆಶಾವಾದದಲ್ಲಿದ್ದಾರೆ. ಈ ಬಗ್ಗೆ ನಮ್ಮ ರಾಜ್ಯ ಸರ್ಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕೆಂದು ನನ್ನ ಆಗ್ರಹ. ಅಲ್ಲಿ ಮಲೆಯಾಳೀಕರಣದ ದಾಳಿ ನಡೆದಿದೆ. ನಮ್ಮ ಮುಖ್ಯಮಂತ್ರಿ ಅವರು ಆ ಕಡೆ ಆದ್ಯ ಗಮನ ಕೊಡುವುದು ಒಳಿತು.

ರಾಜ್ಯದ ಹೊರಭಾಗದ ಗಡಿಯಲ್ಲಿಅವಶ್ಯವಿರುವಷ್ಟು ಕನ್ನಡ ಶಾಲೆಗಳನ್ನು ತೆರೆಯಲು ಸಹಾಯ ಒದಗಿಸುವುದು, ನೆರೆ ರಾಜ್ಯದವರು ಕನ್ನಡ ಶಾಲೆಗಳನ್ನು ಮುಚ್ಚಿರುವಂಥಹ ಗ್ರಾಮಗಳಲ್ಲಿ ಕನ್ನಡಿಗರಿಗೆ ಕನ್ನಡ ಮಾಧ್ಯಮದ ಮೂಲಕ ಶಿಕ್ಷಣ ನೀಡಲು ಕನ್ನಡ ಮಾಧ್ಯಮದ ಶಾಲೆಗಳನ್ನು ತೆರೆಯುವುದು ಅತ್ಯಗತ್ಯ.

ಹಿಂದಿನ ಸರ್ಕಾರದ ಕೆಲ ಆತುರದ ನಿರ್ಧಾರದಿಂದ ಕೆಲವು ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದೆ. ಅಂಥ ಮುಚ್ಚಿದ ಶಾಲೆಗಳನ್ನು ಮತ್ತೆ ತೆರೆದು ಅವುಗಳಿಗೆ ಶೈಕ್ಷಣಿಕವಾಗಿ ಪುನರುಜ್ಜೀವನ ನೀಡುವುದು ಆಡಳಿತದ ಜವಾಬ್ದಾರಿಯುತ ನಡೆಯಾಗುತ್ತದೆ ಎಂದಿದ್ದಾರೆ.

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...