Poem

♀ ಕುಸ್ತಿಪಟುವಿನ ಸ್ವಗತ

ಗೆಳತಿ,
ಈ ಭವ್ಯ ಭಾರತದ
ಪವಿತ್ರ ಮಣ್ಣಲಿ
ಉರುಳಾಡಿ ಹೊರಳಾಡಿ
ಬದುಕನ್ನು ಬೇಯಿ
ಅರಳಿದ್ದೇನೆ;
ಸೋತು ಸೊರಗಿದ್ದೇನೆ;
ಗೆದ್ದು ಬಾಗಿದ್ದೇನೆ.

ಅದೆಷ್ಟೋ ಕುಸ್ತಿಕಲಿಗಳ ವಿರುದ್ಧ
ತೊಡೆತಟ್ಟಿ ನಿಂತಿದ್ದೇನೆ;
ಮುಷ್ಟಿಗೆ ಮುಷ್ಟಿ ಹಿಡಿದು
ಪಟ್ಟು ಹಾಕಿ
ಪಟ್ಟ ಏರಿದ್ದೇನೆ.

ಈ ನೆಲದ
ಕೀರ್ತಿಪತಾಕೆ ಹಾರಾಡುವಾಗ
ಎಲ್ಲರ ಎದೆಮಿಡಿತ
ಆಲಿಸಿದ್ದೇನೆ;
ಹಾರೈಕೆಯ ಹಾರವನು
ಎದೆಗಪ್ಪಿ ನಮಿಸಿದ್ದೇನೆ.

ಗೆಳತಿ,
ಆ ಕುಸ್ತಿ ಅಖಾಡದಲಿ
ಮಣ್ಣು ಮುಕ್ಕಿಸುವುದು ಸುಲಭ!
ಬದುಕಿನ ಅಖಾಡದಲಿ?
ಕಾಮುಕ ಕೈಗಳ ಕಾರೆಮುಳ್ಳು
ಸವರಿ ಸವರಿ ಚುಚ್ಚಿದರೂ;
‘ಹೆಣ್ತನ’ ಇನ್ನೂ ನೆಲಕ್ಕೆ ಅಪ್ಪಳಿಸಿಲ್ಲ!

ಈಗ,
ಬದುಕು-ಭವಿಷ್ಯ-ಹೆಸರನ್ನು
ಬೀದೀಲಿ ಇಟ್ಟು;
‘ಆತ್ಮಗೌರವ’ಕ್ಕಾಗಿ ತೊಡೆ ತಟ್ಟಿದ್ದೇನೆ.
‘ಬೇಟಿ ಬಚಾವೋ - ಮನ್ ಕಿ ಬಾತ್’
ಬರೀ, ಮೌತ್ ಕಿ ಮಾತಾದರೂ;
ನನ್ನೀ ಮನದ ದನಿಗೆ ಮಲಗುವ ಮಾತೇ ಇಲ್ಲ.

ಆ ಕಡೆ ಅಧಿಕಾರದ ಅಮಲಿನ ಪಟ್ಟು
ಸತ್ಯವನ್ನು ಬಂಧಿಸಿಟ್ಟರೂ;
ನನ್ನ ಹೋರಾಟ
ಒಳಗೂ ಹೊರಗೂ
ಹೊರಹೊರಗೂ; ಕೊನೆವರೆಗೂ...

- ಗಿರೀಶ್ ಮೂಗ್ತಿಹಳ್ಳಿ

 

ಗಿರೀಶ್ ಮೂಗ್ತಿಹಳ್ಳಿ

ಲೇಖಕ ಗಿರೀಶ್ ಮೂಗ್ತಿಹಳ್ಳಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿಯವರು. ಎಂ.ಎ, ಪಿಜಿ ಡಿಪ್ಲೊಮಾ ಹಾಗೂ ಪಿಎಚ್.ಡಿ  ಪದವೀಧರರು. ಎನ್.ಇಟಿ ವಿದ್ ಜೆಆರ್.ಎಫ್ ಹಾಗೂ ಕೆಎಸ್.ಇಟಿ ಶೈಕ್ಷಣಿಕ ಅರ್ಹತಾ ಪರೀಕ್ಷೆಗಳನ್ನು ತೇರ್ಗಡೆಯಾಗಿರುತ್ತಾರೆ. ಲೇಖನ, ಪ್ರಬಂಧ ಮಂಡನೆ ಮತ್ತು ಕವನ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.  ಪ್ರಸ್ತುತ ಮೂಡಿಗೆರೆಯ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾಗಿದ್ದಾರೆ.

ಕೃತಿಗಳು : ಅಭಿಗಮನ (ವಿಮರ್ಶಾ ಲೇಖನ), ಬಸವ ಚಳುವಳಿಯ ಫಲಿತಗಳು (ಸಂಶೋಧನೆ), ಆಡಾಡ್ತ ಆಕಾಶ(ವಿಮರ್ಶಾ ಲೇಖನ), ಓಡಾಡುತ ಬಯಲು (ಸಂಶೋಧನೆ), ಅಕ್ಷರ ಮೈತ್ರಿ (ವಿಮರ್ಶಾ ಲೇಖನ), ಚುಕ್ಕಿಯಾಟ (ಕವನ ಸಂಕಲನ), ಬಸವ ಚಳುವಳಿಯ ಫಲಿತಾಂಶಗಳು (ವಚನ ಸಾಹಿತ್ಯ)

More About Author