Poem

ನೆನಪಿದೆಯಲ್ಲ ಗೆಳೆಯ...

ಕವಿ, ಕತೆಗಾರ ವಿಶ್ವನಾಥ ಎನ್. ನೇರಳಕಟ್ಟೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದವರು. ಕಾವ್ಯ, ನಾಟಕ, ಕತೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ‘ನೆನಪಿದೆಯಲ್ಲ ಗೆಳೆಯ...’ ಭಾಗ-1 ನಿಮ್ಮ ಓದಿಗಾಗಿ

ಆಫೀಸಿನ ಕೋಣೆಯ ಕಿಟಕಿ ಪಕ್ಕ ನಿಂತು ಹೊರಗಿನ ಗಿಜಿಗಿಜಿ ರಸ್ತೆಯನ್ನು ದಿಟ್ಟಿಸುತ್ತಿದ್ದ ನನ್ನ ಮನಸ್ಸಿನ ತುಂಬೆಲ್ಲಾ ಅದಮ್ಯ ಅಶಾಂತತೆ. ಟ್ರಾಫಿಕ್ಕಿನ ಲೈಟಿಗೆ ಅಭಿಮುಖವಾಗಿದ್ದ ಸಾಲು ಸಾಲು ವಾಹನಗಳು, ವಾಹನಗಳ ನಡುವಿನ ಅರೆ ಇಂಚು ಜಾಗದಲ್ಲಿ ಕಾಲು ತೂರಿಸುತ್ತಾ ರಸ್ತೆಯ ಎರಡು ಬದಿಗಳ ನಡುವಿನ ಮಹಾನ್ ಶರಧಿಯನ್ನು ಕ್ರಮಿಸುತ್ತಿರುವ ಜನರು, ಮಧ್ಯೆ ಮಧ್ಯೆ ಹಾರ್ನಿನ ಸದ್ದು, ದಾರಿ ಬಿಟ್ಟುಕೊಡದ ವಾಹನಗಳ ಧಾವಂತಕ್ಕೆ ಜೋರು ಶಾಪ ಹಾಕುತ್ತಾ ನಿಂತ ಆ್ಯಂಬುಲೆನ್ಸ್ನ ಸೈರನ್, ಗಡಿಬಿಡಿಯ ಜನರ ಗುಂಪಿಗೆ ಸೇರದ ಪದವಾಗಿ ಫುಟ್‌ಪಾತ್‌ನಲ್ಲಿ ಕುಳಿತು ಬಿಡಿಹೂಗಳನ್ನು ದಾರಕ್ಕೆ ಪೋಣಿಸುತ್ತಿರುವ ಮಬ್ಬುಗಣ್ಣಿನ ಅಜ್ಜಿ, ಇಪ್ಪತ್ತೆರಡು ಅಂತಸ್ತುಗಳ ಅಪಾರ್ಟ್ಮೆಂಟ್, ಅದರ ಎಂಟು ಹೆಜ್ಜೆ ದೂರದಲ್ಲಿರುವ ಎಂಟಡಿ ಉದ್ದ ಅಗಲದ ಪುಟ್ಟ ಟೀ ಅಂಗಡಿ- ಎಲ್ಲವನ್ನೂ ನಾನು ಗಮನಿಸತೊಡಗಿ ಆರೇಳು ನಿಮಿಷಗಳೇ ಕಳೆದುಹೋಗಿದ್ದವು. ಆಫೀಸಿನ ಬಲಬದಿಯಿಂದ ನಗುವಿನ ಅಲೆಯೊಂದು ಅಪ್ಪಳಿಸಿಬಂತು. ಬೆನ್ನಿಗೇ ಏನೋ ಮಾತು. ಮತ್ತೆ ಜೋರಾದ ನಗು. ಈಗ ನನಗೆ ನೆನಪಾದದ್ದು ಕಳೆದುಹೋದ ನನ್ನ ನಗು. ದಿನಕ್ಕೆ ಮೂರು ಹೊತ್ತು ಕೆರಳಿನಿಲ್ಲುವ ಹೊಟ್ಟೆಯನ್ನು ತಣಿಸಲೆಂದು ನಾನು ಮಹಾನಗರಿ ಸೇರಿಕೊಂಡು ಹನ್ನೆರಡು ವರ್ಷಗಳೇ ಕಳೆದಿವೆ. ಕೆಲಸ ಎಂದರೆ ಎಲ್ಲರಿಗಿಂತಲೂ ತುಸು ಹೆಚ್ಚೇ ಇಷ್ಟಪಡುವ ನನಗೆ ಇಷ್ಟೂ ವರ್ಷಗಳ ಬೆಂಗಳೂರಿನ ಸಹವಾಸ ಸಂತಸವನ್ನೇ ತಂದಿದೆ. ಆದರೆ ಈಗ ಐದು ದಿನಗಳಿಂದ ಅದೇನೋ ಅತೃಪ್ತಿ, ಅಸಮಾಧಾನ. ಯಾಕೆ ಹೀಗಾಗುತ್ತಿದೆ ಎನ್ನುವುದು ಆಗಸದಲ್ಲಿರಿಸಿದ ಅಮೃತ ಕರಂಡಿಕೆ. ಆರಂಕಿಗಳ ಸಂಬಳ ಇದೆ. ಒಳ್ಳೆಯ ಕೆಲಸಗಾರನೆಂಬ ಹೆಸರೂ ಇದೆ. ಊರಿನಲ್ಲಿರುವ ಅಪ್ಪ ಅಮ್ಮ ದಿನಕ್ಕೆರಡು ಸಲ ಫೋನು ಮಾಡಿ ವಿಚಾರಿಸುತ್ತಲೇ ಇರುತ್ತಾರೆ. ಮುಂದಿನ ಶ್ರಾವಣದ ಹೊತ್ತಿಗೆ ತನ್ನ ಮದುವೆ ಮಾಡಬೇಕೆಂಬ ಯೋಜನೆಯನ್ನೂ ಹಾಕಿಕೊಂಡಿದ್ದಾರೆ. ಆದರೂ ನನ್ನಲ್ಲೇನೋ ಅಪೂರ್ಣತೆಯ ಭಾವ. ಕಿಟಕಿಯ ಈ ಬದಿಗಿರುವ ನಾನು, ಕಿಟಕಿಯ ಇನ್ನೊಂದು ಬದಿಯಲ್ಲಿ ರಸ್ತೆ- ಜನರು. ಮಧ್ಯೆ ಕಿಟಕಿಯ ಸರಳುಗಳು. ಜಗತ್ತಿನಿಂದ ಪ್ರತ್ಯೇಕವಾದ ನಾನು ಕಂಬಿಯ ಹಿಂದೆ ಬಂಧಿಯಾದಂತೆ ಭಾಸವಾಗಿ ಬೆಚ್ಚಿಬಿದ್ದೆ. ಯಾಕೆ ಈ ಅನಾಥಪ್ರಜ್ಞೆ?

ರಸ್ತೆಯ ಒಂದು ಮೂಲೆಯಲ್ಲಿ ಇಬ್ಬರು ಹುಡುಗರು, ಹತ್ತು ಹನ್ನೆರಡು ವರ್ಷದವರಿರಬಹುದು, ಕೈ ಕೈ ಹಿಡಿದು ನಗುತ್ತಾ ಜೊತೆಗೆ ಸಾಗುತ್ತಿದ್ದರು.

“ದೊರೆಗಳೇ ಒಳಗೆ ಬರಬಹುದಾ?” ಬೆನ್ನ ಹಿಂದಿನಿಂದ ಧ್ವನಿ ಕೇಳಿದಾಗಲೇ ಸ್ಪಷ್ಟವಾಯಿತು, ಬಂದಿರುವವನು ಸೂರ್ಯ. ನನ್ನನ್ನು ದೊರೆ ಎಂದು ಕರೆಯುವುದು ಅವನ ಮಾಮೂಲಿ ತಮಾಷೆಯ ರೀತಿ. ಸಾಹಿತ್ಯ ಸಂಘಟನೆ ಕನ್ನಡ ಹೋರಾಟ ಎಂದೆಲ್ಲಾ ಬೆಂಗಳೂರಿನ ಗಲ್ಲಿ ಗಲ್ಲಿ ಓಡಾಡಿಕೊಂಡಿರುವ ಅವನು ನನ್ನ ಬಾಲ್ಯಕಾಲದ ಗೆಳೆಯ. ಅವನ ಕಡೆಗೆ ತಿರುಗಿದೆ. ನಗುತ್ತಾ ನಿಂತಿದ್ದ.

ಅವನ ಲಘುವಿನೋದಕ್ಕೆ ನನ್ನ ಪ್ರತಿಕ್ರಿಯೆ ಇಲ್ಲದಿರುವುದು ನೋಡಿ ಕೆಲಸದ ಒತ್ತಡದಲ್ಲಿದ್ದೇನೆ ಎಂದು ಅಂದುಕೊಂಡನೋ ಏನೋ, ಕೈಯ್ಯಲ್ಲಿದ್ದ ಪತ್ರಿಕೆಯನ್ನು ನನ್ನೆದುರಿಗಿದ್ದ ಮೇಜಿನ ಮೇಲಿಟ್ಟು, ನೇರವಾಗಿ ವಿಷಯಕ್ಕೆ ಬಂದ- “ಪ್ರಶಾಂತ ಬರೆದ ಕವನ ಇದರಲ್ಲಿ ಪ್ರಕಟ ಆಗಿದೆ. ನಿನ್ನ ಬಗ್ಗೆಯೇ ಬರೆದ ಹಾಗಿದೆ. ಒಂದುಸಲ ಓದಿ ನೋಡು”

ಮೊದಲೇ ಸರಿ ಇರದ ನನ್ನ ಮನಸ್ಸು ಕೆರಳುವಂತಾಗಿತ್ತು. “ಅವನು ಏನು ಬರೆದಿದ್ದರೆ ನನಗೇನು? ಅವನ ಕವನ ಓದುವುದಕ್ಕೆ ನಾನೇನು ಕೆಲಸ ಇಲ್ಲದೆ ಖಾಲಿ ಕೂತಿದ್ದೇನಾ?” ಮೇಜಿನ ಮೇಲಿದ್ದ ಪೇಪರನ್ನು ತೆಗೆದು, ಮುದ್ದೆ ಮುದ್ದೆ ಮಾಡಿ, ಕೋಣೆಯ ಬಲಮೂಲೆಗೆ ಬಿಸಾಡಿದೆ. ಸೂರ್ಯನ ಮುಖ ಸಪ್ಪಗಾಯಿತು.

“ನೀನು ಆ ಕವನ ಓದಿದರೆ ಒಳ್ಳೆಯದು ಅಂದುಕೊಂಡೆ. ಅದಕ್ಕೆ ತಂದದ್ದು. ಇನ್ನು ನಿನ್ನ ಇಷ್ಟ” ಎಂದವನು ಬೇರೇನೂ ಮಾತಾಡದೆ ಹೊರಟುಹೋದ.

ಭೀಮನಿಂದ ಘಾತಿಸಿಕೊಂಡ ದುರ್ಯೋಧನನಂತೆ ನೆಲದ ಮೇಲೆ ಬಿದ್ದಿದ್ದ ಪೇಪರ್ ನನ್ನನ್ನು ಕೆಣಕತೊಡಗಿತ್ತು. ನನ್ನ ಬಗ್ಗೆ ಅದೇನು ಬರೆದಿರಬಹುದು? ಎನ್ನುವ ಕುತೂಹಲ, ಕೆಟ್ಟದಾಗಿಯೇ ಬರೆದಿರುತ್ತಾನಷ್ಟೇ ಎಂಬ ಊಹೆ ಎರಡೂ ಸೇರಿಕೊಂಡು ನಾನು ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯಂತಾದೆ. ಸೂರ್ಯ ಹೇಗೂ ಹೊರಟುಹೋಗಿದ್ದಾನೆ. ಈಗ ನಾನು ಪೇಪರ್ ಎತ್ತಿಕೊಂಡು ನೋಡಿದರೂ ಗಮನಿಸುವರ‍್ಯಾರಿಲ್ಲ. ಪೇಪರ್ ಎತ್ತಿಕೊಂಡೆ. ಪುಟ ತಿರುಗಿಸತೊಡಗಿದೆ. ಹನ್ನೆರಡನೇ ಪುಟದ ಮೇಲ್ಭಾಗದಲ್ಲಿದ್ದ ಕವನ ನನ್ನ ಕಣ್ಣಿಗೆ ಬಿತ್ತು. ‘ನೆನಪಿದೆಯಲ್ಲ ಗೆಳೆಯ...’ ಎಂಬ ಶೀರ್ಷಿಕೆಯ ಕವನ. ಓದತೊಡಗಿದೆ...

‘ನೆನಪಿದೆಯಲ್ಲ ಗೆಳೆಯ
ಮರೆತಿಲ್ಲ ತಾನೇ
ಸುಳ್ಳು ಸುಳ್ಳೇ ಅತ್ತದ್ದು, ಹಠ ಹಿಡಿದದ್ದು
ಹಳ್ಳಿಶಾಲೆಯಲ್ಲಿ ಅಕ್ಷರ ಕಲಿತದ್ದು
ಹಿಂದಿನ ಕಾಡಿನಲ್ಲಿ ತಲೆಮರೆಸಿ ಕುಳಿತದ್ದು
ನಾಗರ ಬೆತ್ತದಲ್ಲಿ ಮೊದಲೇಟು ತಿಂದದ್ದು’

***

ಅಟ್ಟದಿಂದ ಕೆಳಗಿಳಿ ಎಂದರೆ ಆಕಾಶ ಏರುವ ತಂಟೆಕೋರನಾಗಿದ್ದ ನನ್ನನ್ನು ಒಂದು ವರ್ಷ ಮೊದಲೇ ಶಾಲೆಗೆ ಸೇರಿಸುವ ಮನಸ್ಸು ಮಾಡಿದ್ದರು ನನ್ನ ಅಪ್ಪ. ಅರ್ಧ ದಾರಿಯವರೆಗೂ ಕೊಂಡಾಟ ಮಾಡಿ, ಆಮೇಲಿನ ಅರ್ಧ ದಾರಿ ತುಂಬಾ ಜೋರು ಮಾಡುತ್ತಾ ಒಂದನೇ ತರಗತಿಯಲ್ಲಿ ಕೂರಿಸಿ, “ಅಧಿಕ ಪ್ರಸಂಗ ಏನಾದರೂ ಮಾಡಿದರೆ ಬೆನ್ನ ಮೇಲೆ ನಾಲ್ಕು ಕೊಡಿ. ದಯೆ ದಾಕ್ಷಿಣ್ಯ ಬೇಡವೇ ಬೇಡ” ಎಂದು ಪರಿಚಯದ ಕಲ್ಯಾಣಿ ಟೀಚರ್‌ನಲ್ಲಿ ಹೇಳಿಹೋಗಿದ್ದರು. ಅಳುವುದಕ್ಕೆ ಸಿದ್ಧನಾಗಿದ್ದವನು ಟೀಚರ್‌ನ ಜೋರು ಮುಖ ನೋಡಿ ಬಾಯಿಮುಚ್ಚಿ ಕುಳಿತಿದ್ದೆ. ಹತ್ತು...ಹನ್ನೊಂದು...ಹನ್ನೆರಡು... ಗಂಟೆಗಳು ಉರುಳಿಹೋದವು. ವಸಂತಿ ಟೀಚರ್ ಬಂದರು. ಮಹಾಬಲ ಮಾಸ್ಟ್ರು ಬಂದರು. ಹನ್ನೆರಡು ಗಂಟೆ ಆಗುವಾಗ ಬಂದವರು ಜಯಲಕ್ಷ್ಮೀ ಟೀಚರ್. ಅವರ ಮುಖ ನೋಡಿದರೆ, ಮಾತು ಕೇಳಿದರೆ ತುಂಬಾ ಪಾಪದವರು ಅನಿಸುತ್ತಿತ್ತು. ಅರ್ಧ ನಿಮಿಷಕ್ಕೊಮ್ಮೆ ನಗುತ್ತಿದ್ದ ಅವರು ತರಗತಿಯಿಂದ ಹೊರಹೋಗುವುದನ್ನೇ ಕಾದುಕುಳಿತಿದ್ದ ನಾನು ಅವರು ಹೋದ ವಿರುದ್ಧ ದಿಕ್ಕಿನಲ್ಲಿ ಓಡಿ, ಶಾಲೆಯ ಹಿಂಬದಿಗೆ ತಾಗಿಕೊಂಡಂತಿದ್ದ ಕಾಡು ಸೇರಿಕೊಂಡಿದ್ದೆ. ಹಾಗೆ ನಾನು ಓಡಿಬರುವಾಗ ನನ್ನನ್ನೇ ಹಿಂಬಾಲಿಸಿ ಬಂದವರು ಇಬ್ಬರು, ಪ್ರಶಾಂತ ಮತ್ತು ಸೂರ್ಯ. ನನ್ನಂತೆಯೇ ಅಳುಮುಂಜಿಗಳಾಗಿ ಶಾಲೆ ಸೇರಿಕೊಂಡಿದ್ದವರು ಈ ಇಬ್ಬರು. “ಇವತ್ತು ಮಧ್ಯಾಹ್ನದವರೆಗೆ ಮಾತ್ರ ಶಾಲೆ” ಎಂದು ಮಹಾಬಲ ಮಾಸ್ಟ್ರು ಹೇಳಿದ್ದು ನೆನಪಿತ್ತು. ಸ್ವಲ್ಪ ಹೊತ್ತು ಅಲ್ಲೇ ಕೂತು ಆಮೇಲೆ ಮನೆ ಸೇರಿಕೊಳ್ಳುವುದು ಎಂಬ ಯೋಚನೆ ನಮ್ಮ ಮೂವರ ಪುಟ್ಟ ಮೆದುಳೊಳಗೆ. ಮರದ ಬುಡದಲ್ಲಿ ಕೂತ ಮೇಲೆಯೇ ನೆನಪಾದದ್ದು, ಓಡಿಬರುವ ಗಡಿಬಿಡಿಯಲ್ಲಿ ಬ್ಯಾಗ್ ಕ್ಲಾಸ್‌ರೂಮಿನಲ್ಲಿಯೇ ಬಿಟ್ಟುಬಂದಿದ್ದೆವು. ಶಿಶುಪಾಲನ ನೂರನೇ ತಪ್ಪಿಗಾಗಿ ಕಾದುಕುಳಿತುಕೊಂಡ ಅಸುರಾರಿಯಂತೆ ಶಾಲೆಯ ಲಾಂಗ್‌ಬೆಲ್‌ನ್ನು ನಿರುಕಿಸುತ್ತಾ ಕೂರದೆ ನಮಗೆ ಬೇರೆ ದಾರಿಯಿರಲಿಲ್ಲ.

ಶಾಲೆಯ ಬೆಲ್ ದೀರ್ಘವಾಗಿ ರಿಂಗಣಿಸಿದ ನಾಲ್ಕು ನಿಮಿಷಗಳಲ್ಲಿಯೇ ವೃತ್ತಿಪರ ದರೋಡೆಕೋರರಂತೆ ತರಗತಿಯ ಖಾಲಿ ಖಾಲಿ ಕೋಣೆ ಹೊಕ್ಕ ನಾವು ಮೂವರು, ಮೂರು ದಿಕ್ಕುಗಳಿಗೆ ತಲೆ ಚಾಚಿಕೊಂಡು ಅನಾಥ ಶವಗಳಂತೆ ಬಿದ್ದಿದ್ದ ನಮ್ಮ ಬ್ಯಾಗುಗಳನ್ನು ಎತ್ತಿಕೊಂಡು ಮುಕ್ಕಾಲು ಕೋಣೆ ದಾಟಿ ಬಾಗಿಲಿಗೆ ಸನಿಹವಾಗಿದ್ದೆವು. ಇನ್ನೇನು ವಿಜಯ ಪತಾಕೆ ಹಾರಿಸಿಬಿಡಬೇಕು ಎಂಬಷ್ಟರಲ್ಲಿ ಎದುರಾದದ್ದು ಕಲ್ಯಾಣಿ ಟೀಚರ್. ಅವರ ಕೈಯ್ಯಲ್ಲಿದ್ದದ್ದು ಸಪೂರದ ನಾಗರಬೆತ್ತ. ಮುಂದಿನದೆಲ್ಲಾ ಹೇಳುವಂಥದ್ದಲ್ಲ. ಬೆಂಕಿಯಿಲ್ಲದೆ ಬಿಸಿಯೇರುವ ಸಂಕೀರ್ಣ ಪಾಠವನ್ನು ಹೇಳಿಕೊಟ್ಟಿದ್ದರು ಆ ವಿಜ್ಞಾನದ ಟೀಚರ್. “ನಾಳೆಯಿಂದ ಶಾಲೆ ತಪ್ಪಿಸಿದರೆ ಏನು ಮಾಡ್ತೇನೆ ನೋಡಿ” ಎಂಬ ಅನೂಹ್ಯ ಎಚ್ಚರಿಕೆ ಬೇರೆ. ಯುದ್ಧದಲ್ಲಿ ಸೋತು, ಮುಂದೆಂದೂ ಯುದ್ಧ ಹೂಡಲು ನಿರ್ಧರಿಸದ ರಣಹೇಡಿಗಳಂತೆ ತಲೆ ತಗ್ಗಿಸಿಕೊಂಡು ನಮ್ಮ ನಮ್ಮ ಮನೆ ತಲುಪಿದ್ದೆವು ನಾನು, ಪ್ರಶಾಂತ ಮತ್ತು ಸೂರ್ಯ. ಅಪ್ಪ ಅಮ್ಮನಿಗೆ ವಿಷಯ ತಿಳಿದರೆ ಎಂಬ ಭಯ. ಅಜ್ಜ ಅಜ್ಜಿ ಮಾಡಿದ್ದ ಪುಣ್ಯವೋ ಏನೋ ಕಲ್ಯಾಣಿ ಟೀಚರ್ ನಮ್ಮ ಪರಮ ಸಾಧನೆಯನ್ನು ಬಹಿರಂಗಪಡಿಸಲಿಲ್ಲ. ಮರುದಿನದಿಂದ ಬಲವಂತದ ಮಾಘಸ್ನಾನವಾದ ಶಾಲೆಯ ಸಹವಾಸ ಆರೇಳು ತಿಂಗಳು ಕಳೆಯುವಷ್ಟರಲ್ಲಿಯೇ ಚಳಿಗಾಲದ ಬಿಸಿನೀರಿನ ಜಳಕವಾಗಿ ಮಾರ್ಪಾಡಾಗಿತ್ತು.

***

ಕವನದ ಆಮೇಲಿನ ನಾಲ್ಕು ಸಾಲುಗಳನ್ನು ಓದತೊಡಗಿದೆ...
‘ಮೊದಲ ಸಲ ಉತ್ತರ ಪತ್ರಿಕೆಯಲ್ಲಿ ಪರೀಕ್ಷೆ ಬರೆದದ್ದು
ಕಾಪಿ ಚೀಟಿಯನ್ನು ಸೊಂಟದ ಮರೆಯಲ್ಲಿ ಅಡಗಿಸಿಟ್ಟದ್ದು
ಬೆಳ್ಚೆ ಮಾಸ್ತರರ ಕೈಗೆ ಸಿಕ್ಕಿಬಿದ್ದದ್ದು
ಹೆಡ್ಮಾಸ್ಟ್ರ ಕೋಣೆಯಲ್ಲಿ ಬೈಗುಳ ತಿಂದದ್ದು’
ಮತ್ತೆ ಬಾಲ್ಯದ ನೆನಪುಗಳ ಸಿಹಿನರ್ತನ...

***

ಶಾಲೆಯ ಐದು ಮೆಟ್ಟಿಲೇರಿದ ನಾವು ಈಗ ಇದ್ದದ್ದು ಆರನೇ ತರಗತಿಯಲ್ಲಿ. ‘ಪಾಪವಾಗಲಿ ಪುಣ್ಯವಾಗಲಿ ಜೊತೆ ಸೇರಿ ಮಾಡುವ ಸುಯೋಗ ನಮ್ಮದಾಗಿರಲಿ’ ಎಂಬ ಪರಮಧ್ಯೇಯದ ಪ್ರತಿಜ್ಞೆ ತೆಗೆದುಕೊಂಡ ನಾವು ಮೂವರೂ ಆತ್ಮಸಖರಾಗಿದ್ದೆವು. “ಪ್ರಶಾಂತವಾಗಿರುವ ಆಕಾಶದಲ್ಲಿ ಸೂರ್ಯನಿದ್ದಾನಾ?” ಎಂದು ವಸಂತಿ ಟೀಚರ್ ಹಾಜರಿ ಕರೆಯುವ ಹೊತ್ತಿಗೆ ನಮ್ಮ ಮೂವರ ಹೆಸರನ್ನೂ ಸೇರಿಸಿ ಆಗಾಗ ತಮಾಷೆ ಮಾಡುತ್ತಿದ್ದದ್ದಿತ್ತು.

ಐದನೇ ತರಗತಿವರೆಗೂ ನಾವೆಲ್ಲಾ ಪರೀಕ್ಷೆ ಬರೆದದ್ದು ಸ್ಲೇಟ್‌ನಲ್ಲಿ. ಆರನೇ ತರಗತಿಗೆ ಬಂದಾಗ ಉತ್ತರ ಪತ್ರಿಕೆಯಲ್ಲಿ ಪರೀಕ್ಷೆ ಬರೆಯಬೇಕಿತ್ತು. ಉತ್ತರ ಪತ್ರಿಕೆಯನ್ನು ಮನೆಯಿಂದ ನಾವೇ ತರಬೇಕಿತ್ತು. ಸತ್ಯ ಹೇಳಬೇಕೆಂದರೆ ನಾನು ಮತ್ತು ಪ್ರಶಾಂತ ಫಸ್ಟ್ ಬೆಂಚಿನ ವಿದ್ಯಾರ್ಥಿಗಳು. ಎಲ್ಲದರಲ್ಲೂ ತೊಂಭತ್ತರ ಮೇಲಕ್ಕೆ ಗುರಿಯಿಟ್ಟು ಈಡೇರಿಸಿಕೊಳ್ಳುವ ಜಾಯಮಾನ ನಮ್ಮದು. ಕಾಪಿ ಹೊಡೆಯಬೇಕಾದ ಅನಿವಾರ್ಯತೆ ನಮಗಿಬ್ಬರಿಗೂ ಇರಲಿಲ್ಲ. ಆದರೆ ಸೂರ್ಯ ಐವತ್ತು ಅರುವತ್ತರ ಗಿರಾಕಿ. ಅದರಲ್ಲೂ ಈ ಗಣಿತದ ಲ.ಸಾ.ಅ. ಮ.ಸಾ.ಅ.ಗಳು ಏನೆಂದರೂ ಅವನ ತಲೆ ಹೊಕ್ಕುವುದಕ್ಕೆ ಸಿದ್ಧವಿರಲಿಲ್ಲ. ಗಣಿತ ಪರೀಕ್ಷೆಯ ಹಿಂದಿನ ದಿನ ಮನೆದೇವರ ಮೇಲೆ ಭಾರ ಹಾಕಿ, ಕಾಪಿ ಚೀಟಿಯನ್ನು ಸಿದ್ಧ ಮಾಡಿಟ್ಟು, ಸೊಂಟದ ಮರೆಯಲ್ಲಿ ಚೀಟಿ ಅಡಗಿಸಿಟ್ಟುಕೊಳ್ಳುವ ತಂತ್ರವನ್ನು ಹೇಳಿಕೊಟ್ಟಿದ್ದೆವು.

ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಯಾವಾಗ ಬೆಳ್ಚೆ ಮಾಸ್ಟ್ರು ಪರೀಕ್ಷೆಯ ಕೊಠಡಿ ಪ್ರವೇಶಿಸಿದರೋ ಆಗ ಈ ಮಹಾನುಭಾವ ಸೂರ್ಯ ವೃಕೋದರನಾರ್ಭಟ ಕೇಳಿ ಬೆಮರ್ತ ಉರಗಪತಾಕನಂತಾದ. ಅದರಲ್ಲೇನೂ ವಿಶೇಷವಿರಲಿಲ್ಲ. ಮೈಬಣ್ಣ ಬಿಳುಪಾಗಿ ಚರ್ಮ ಬಿಳುಚಿಹೋದದ್ದರಿಂದ ಬೆಳ್ಚೆ ಮಾಸ್ತರರೆಂದು ಕರೆಸಿಕೊಳ್ಳುತ್ತಿದ್ದ ಅವರು ಜೋರೆಂದರೆ ರಣ ಜೋರು. ಚೀಟಿ ಅವರ ಕೈಗೆ ಸಿಗದಿರಲಿ ಎಂದುಕೊಂಡ ಸೂರ್ಯ ಚೀಟಿ ತೆಗೆದು ತನ್ನ ಕಾಲಿನಿಂದ ಸ್ವಲ್ಪ ದೂರಕ್ಕೆ ಎಸೆದಿದ್ದ. ಅದು ಅವನ ಎದುರು ಬೆಂಚಿನಲ್ಲಿ ಕುಳಿತಿದ್ದ ನನ್ನ ಕಾಲಿನ ಬಳಿಗೆ ಬಂದುಬಿದ್ದಿತ್ತು. ನನಗೆ ಈ ವಿಷಯ ಗೊತ್ತಾಗುವಷ್ಟರಲ್ಲಿ “ಕಾಪಿ ಹೊಡೆಯುತ್ತೀಯ ಪಟಿಂಗ” ಎಂದು ಹೇಳಿ, ಕಿವಿ ಹಿಂಡಿ ಬೆಳ್ಚೆ ಮಾಸ್ಟ್ರು ನನ್ನನ್ನು ಎಬ್ಬಿಸಿಯಾಗಿತ್ತು. ಕಾಪಿ ಚೀಟಿ ಬರೆದುಕೊಟ್ಟವನು ನಾನೇ ಆಗಿದ್ದರಿಂದ ಅದರಲ್ಲಿದ್ದ ಅಕ್ಷರವೂ ನನ್ನದೇ. ಪರೀಕ್ಷಾ ಕೊಠಡಿಯಲ್ಲಿ ಕಿರು ಸನ್ಮಾನ, ಹೆಡ್ಮಾಸ್ಟ್ರ ಕೊಠಡಿಯಲ್ಲಿ ಶಾಲು ಗಂಧದ ಹಾರಸಹಿತ ಹಿರಿದು ಸನ್ಮಾನ ಎಲ್ಲಾ ಮುಗಿದ ಮೇಲೆ ನನ್ನ ಶನಿದೆಸೆ ಕೊನೆಯಾದದ್ದು ಗಣಿತದ ಪ್ರಮೀಳಾ ಟೀಚರ್ ಬಂದು, “ಇವನಿಗೆ ಒಳ್ಳೆ ಮಾರ್ಕ್ಸ್ ಇದೆ. ಹಾಗೆಲ್ಲಾ ಮಾಡುವ ಹುಡುಗ ಅಲ್ಲವೇ ಅಲ್ಲ” ಎಂದು ಶಿಫಾರಸ್ಸು ಮಾಡಿದ ಮೇಲೆ. ಸೂರ್ಯನ ಹೆಸರು ಹೇಳಿದ್ದರೆ ಸುಲಭವಾಗಿ ಬಚಾವಾಗಬಹುದಿತ್ತು. ಆದರೆ ನಾನು ಹೇಳಿರಲಿಲ್ಲ. “ನನಗೇನೂ ಗೊತ್ತಿಲ್ಲ” ಎಂದು ಅಮಾಯಕನಂತೆ ಹೇಳಿ, ತತ್ಕಾಲದ ಸಂಕಷ್ಟದಿಂದ ಪಾರಾಗಿದ್ದೆ. ಆದರೆ ನಿಜವಾಗಿಯೂ ಸೂರ್ಯನ ಹೆಸರು ಹೇಳಬೇಕಿತ್ತು ಎನಿಸಿದ್ದು, ಅವನು ನನಗೆ ಮಾd ಹೊಡೆದದ್ದನ್ನು ಮತ್ತೆ ಮತ್ತೆ ಪ್ರಶಾಂತನಲ್ಲಿ ಹೇಳಿ ಹೊಟ್ಟೆ ಹಿಡಿದು ನಕ್ಕಾಗಲೇ...

***

ಕಚಗುಳಿಯಿಡುವ ಸಾಲುಗಳಿದ್ದವು ಕವನದಲ್ಲಿ...
ರಂಗಪ್ಪಣ್ಣನ ಅಂಗಡಿಯಲ್ಲಿ ತಿಂದು ತೇಗಿದ್ದು
ಓಟದ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದು
ಕಬಡ್ಡಿ ಮ್ಯಾಚಿನಲ್ಲಿ ಸೋತು ಬಾಗಿದ್ದು
ಮೂಡಿದ್ದ ಮುಕ್ಕಾಲು ಕೇಜಿ ಮೀಸೆಯನ್ನು
ತಕ್ಕಡಿಯಲ್ಲಿಟ್ಟು ತೂಗಿದ್ದು...

***

ಚಿಗುರು ಮೀಸೆ ನಮಗೆ ಮೂವರಿಗೂ ಮೂಡಲಾರಂಭಿಸಿದ್ದು ಎಂಟನೇ ತರಗತಿಗೆ ಬಂದಾಗ. ಊರಿನಲ್ಲಿದ್ದ ಸರ್ಕಾರಿ ಪ್ರೌಢಶಾಲೆ ಸೇರಿಕೊಂಡಿದ್ದ ನಮಗೆ ಆಪ್ತವಾಗಿದ್ದದ್ದು ರಂಗಪ್ಪಣ್ಣನ ಅಂಗಡಿ. ಹೈಸ್ಕೂಲಿನ ಗೇಟಿನ ಎದುರು ಭಾಗದಲ್ಲೇ ಇತ್ತದು. ಬೆಳಗ್ಗೆ ಶಾಲೆ ಶುರುವಾಗುವ ಮೊದಲು, ಮಧ್ಯಾಹ್ನ ಊಟಕ್ಕೆ ಬಿಟ್ಟಾಗ, ಸಂಜೆ ಲಾಂಗ್ ಬೆಲ್ ಹೊಡೆದಾದ ಮೇಲೆ ಹೀಗೆ ದಿನಕ್ಕೆ ಮೂರು ಸಲ ರಂಗಪ್ಪಣ್ಣನ ಅಂಗಡಿಗೆ ಸಲಾಮ್ ಹೊಡೆದರೇ ನಮಗೆ ಆತ್ಮತೃಪ್ತಿ. ಅವರಂಗಡಿಯ ಮಸಾಲಾ ಕಡ್ಲೆ ಆ ಕಾಲಕ್ಕೆ ವರ್ಲ್ಡ್ ಫೇಮಸ್. ಅಂಗಡಿಗೆ ತಾಗಿಕೊಂಡಂತೆ ಇತ್ತು ರಂಗಪ್ಪಣ್ಣನ ಮನೆ. ಅವರಿಗೊಬ್ಬಳು ಅಪ್ಸರೆಯಂಥ ಮಗಳು. ಏಳನೇ ಕ್ಲಾಸಿನ ಹೊಸ್ತಿಲನ್ನು ಮೂರು ಸಲ ತುಳಿದೂ ತುಳಿದೂ ಎಡವುತ್ತಲೇ ದಾಟಿದ್ದ ಅವಳು ತನ್ನ ತಂದೆಯ ಪರಿಚಯದವರ ಶಿಫಾರಸ್ಸಿನಿಂದ ಪಕ್ಕದ ಪೇಟೆಯ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಸೇರಿಕೊಂಡಿದ್ದವಳು. ಪದ್ಮಿನಿ ಎಂಬ ಹಳೆಯ ಹೆಸರು. ವಾರಕ್ಕೊಮ್ಮೆ ಟಿ.ವಿ.ಯಲ್ಲಿ ಬರುತ್ತಿದ್ದ ಸಿನಿಮಾ ನೋಡಿ ಒಂದಷ್ಟು ರೊಮ್ಯಾಂಟಿಕ್ ಭಾವ ಬೆಳೆಸಿಕೊಂಡಿದ್ದ ನಾನು ಮತ್ತು ಸೂರ್ಯ “ಪ್ರಶಾಂತನಿಗೆ ಪದ್ಮಿನಿ” ಎಂದು ಹೇಳಿ, ಪ್ರಶಾಂತನ ಕಾಲೆಳೆಯುತ್ತಿದ್ದೆವು. ನಮ್ಮಿಬ್ಬರ ತಮಾಷೆಯನ್ನು ಸೀರಿಯಸ್ಸಾಗಿ ತೆಗೆದುಕೊಂಡ ಪ್ರಶಾಂತ ಅದೊಂದು ದಿನ “ನನಗೇನೋ ಅವಳನ್ನು ಮದುವೆ ಆಗುವುದಕ್ಕೆ ಒಪ್ಪಿಗೆಯಿದೆ. ಆದರೆ ಅವಳು ಮೂರು ಸಲ ಫೇಲಾಗಿದ್ದಾಳೆ. ಅಲ್ಲಿಗೆ ನನಗಿಂತ ಮೂರು ವರ್ಷ ದೊಡ್ಡವಳಾದಂತಾಯಿತಲ್ಲಾ” ಎಂದು ಹೇಳಿ, ನಮ್ಮಿಬ್ಬರ ತಲೆಗೆ ಯೋಚನೆಯ ಎರೆಹುಳು ರವಾನಿಸಿದ್ದ. “ಇಬ್ಬರಲ್ಲಿ ಯಾರಾದರೊಬ್ಬರು ದೊಡ್ಡವರಾಗಿದ್ದರೆ ಆಯಿತು ಬಿಡೋ. ನೀನೇ ದೊಡ್ಡವನಿರಬೇಕೆಂದು ಕಾನೂನೇನಾದರೂ ಇದೆಯಾ” ಎಂದು ಹೇಳಿ, ಅವನ ಚಿಂತೆಗೆ ಮುಕ್ತಿ ದೊರಕಿಸಿದ್ದೆ.

ಮುಂದಿನ ವಾರ ನಡೆಯುವ ಅಂತರ್ ಶಾಲಾ ಕ್ರೀಡಾಕೂಟದಲ್ಲಿ ಗೆಲ್ಲಬೇಕೆಂಬ ಜಿದ್ದು ಅವನಲ್ಲಿ ಮೂಡಿದ್ದು ಆವಾಗಲೇ. ಒಳ್ಳೆಯ ವಾಲಿಬಾಲ್ ಆಟಗಾರ್ತಿಯಾಗಿದ್ದ ಪದ್ಮಿನಿ ಅವಳ ಶಾಲೆಯಿಂದ ಆ ಕ್ರೀಡಾಕೂಟಕ್ಕೆ ಬಂದೇ ಬರುತ್ತಾಳೆ ಎನ್ನುವ ಅಂದಾಜು ಪ್ರಶಾಂತನಿಗಿತ್ತು. ಬರ‍್ಯಾವ ಸ್ಪರ್ಧಿಗಳೂ ತನಗೆ ಲೆಕ್ಕಕ್ಕಿಲ್ಲ ಎಂಬಂತೆ ಓಡಿ ಓಟದ ಸ್ಪರ್ಧೆಯಲ್ಲಿ ಗೆದ್ದನೇನೋ ನಿಜ. ಆದರೆ ಕಬಡ್ಡಿಯಲ್ಲಿಯೂ ಅದೇ ಉತ್ಸಾಹ ತೋರಹೋಗಿ ಕಾಲು ಉಳುಕಿಸಿಕೊಂಡು ಒಂದು ವಾರದ ಮಟ್ಟಿಗೆ ಕುಂಟುಕಾಲಿನವನಾಗಿದ್ದ. “ಹಾಗ್ಯಾಕೆ ಓಡಿದೆಯೋ ಬಾಲಕ್ಕೆ ಬೆಂಕಿ ಹತ್ತಿಸಿಕೊಂಡ ಮಂಗನ ಹಾಗೆ” ಎಂದು ನಾನೂ ಸೂರ್ಯನೂ ಕೇಳಿದ್ದಕ್ಕೆ “ಹಾಗೆ ಓಡಿದ್ದರಿಂದಲೇ ಅಲ್ಲವಾ ಅವಳು ಖುಷಿಯಿಂದ ನನ್ನನ್ನು ನೋಡಿ ನಗಾಡಿದ್ದು” ಎಂದು ನಾಚಿಕೊಂಡಿದ್ದ ಪ್ರಶಾಂತ, ನಾಚಿಕೆಯೇ ನಾಚಿಕೊಳ್ಳುವಂತೆ...

***

ಎದೆಗೆ ನಾಟುವಂತಿದ್ದವು ಕೊನೆಯ ಸಾಲುಗಳು...
‘ಬರಿ ಸಣ್ಣ ವಿಷಯಕ್ಕೆ ತಲೆಬಿಸಿ ಮಾಡಿಕೊಂಡದ್ದು
ನಾನು ನಿನಗೆ ಬೈದದ್ದು ನೀನು ನನಗೆ ಹೊಡೆದದ್ದು
ನಾನು ನಿನ್ನನ್ನು ತಳ್ಳಿದ್ದು ನೀನು ಪ್ರಜ್ಞೆ ತಪ್ಪಿ ಬಿದ್ದದ್ದು
ಮಾತು ಮರೆತದ್ದು ಬದ್ಧ ವೈರಿಗಳಂತೆ ನಟಿಸಿದ್ದು’

ಹೌದು! ನನ್ನ ಬಗ್ಗೆ ಬೇರೆ ಯಾರಲ್ಲೋ ಕೆಟ್ಟದಾಗಿ ಮಾತನಾಡಿದ ಎಂಬ ಮಾತನ್ನೇ ವಿಪರೀತ ಹಚ್ಚಿಕೊಂಡ ನಾನು ಪ್ರಶಾಂತನೊಂದಿಗೆ ಜಗಳವಾಡಿದ್ದೆ. ನಾನೇನೋ ತಮಾಷೆ ಮಾಡುತ್ತಿದ್ದೇನೆ ಎಂದುಕೊಂಡ ಅವನು ಮೊದಲಿಗೆ ನಗುತ್ತಲೇ ಇದ್ದ. ಆಮೇಲೆ ಅವನಿಗೂ ಕೋಪ ಬಂದಿತ್ತು. ವಿಪರೀತ ಗಲಾಟೆಯಾಗಿ ಅವನಿಂದ ದೂರಾಗಿದ್ದ ನಾನು ಆಮೇಲೆ ಅವನ ಮುಖವನ್ನೇ ನೋಡಿರಲಿಲ್ಲ. ಅದೇ ವರ್ಷ ಬೆಂಗಳೂರು ಸೇರಿಕೊಂಡವನು ಮತ್ತೆ ಅವನಲ್ಲಿ ಮಾತನಾಡಿರಲಿಲ್ಲ.

ಮುಗಿದಿದ್ದ ಕವಿತೆ. ನನ್ನೊಳಗೆ ಮುಗಿಯದ ಭಾವತೀವ್ರತೆ. ಮೊಬೈಲ್ ಎತ್ತಿಕೊಂಡು ನಂಬರ್ ಅದುಮಿದ ನನ್ನೊಳಗೆ ಅರೆಕ್ಷಣವೂ ಕಾಯಲಾಗದ ಕಾತುರತೆ. ಹಲೋ ಎಂಬ ಧ್ವನಿ ಕೇಳಿದ ಕೂಡಲೇ ನುಡಿದೆ- “ನಾನು ಆಕಾಶ್ ಮಾತಾಡುತ್ತಿದ್ದೇನೆ. ನಿನ್ನನ್ನು ಈ ವಾರವೇ ನೋಡಬೇಕು ಎನಿಸುತ್ತಿದೆ. ಇದೇ ಶುಕ್ರವಾರ ಸೂರ್ಯನನ್ನು ಕರೆದುಕೊಂಡು ಬರುತ್ತೇನೆ. ಅದೇ ರಂಗಪ್ಪಣ್ಣನ ಅಂಗಡಿಯಲ್ಲಿ...”

*****

ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author