Story

ಶಾಶ್ವತ ರಾಧೆ

ಕವಿ, ಕತೆಗಾರ ವಿಶ್ವನಾಥ್ ಎನ್. ನೇರಳಕಟ್ಟೆ ಅವರು ‘ಮೊದಲ ತೊದಲು’, ‘ಕಪ್ಪು ಬಿಳುಪು’, ‘ಹರೆಯದ ಕೆರೆತಗಳು’ ಮತ್ತು ‘ಸಾವಿರದ ಮೇಲೆ’ ಕೃತಿಗಳ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಅವರ ‘ ಶಾಶ್ವತ ರಾಧೆ’ ಕತೆ ನಿಮ್ಮ ಓದಿಗಾಗಿ..

ಅವಳು ಗರ್ಭಗುಡಿಯೊಳಗೆ ರಾಧೆಯೊಂದಿಗೆ ನಿರಾಳನಾಗಿದ್ದ ಶ್ರೀಕೃಷ್ಣನನ್ನೇ ನೋಡುತ್ತಿದ್ದಳು. ಕೈಗಳನ್ನು ಮುಗಿದುಕೊಂಡು, ಕಂಬಕ್ಕೊರಗಿ ಅವಳು ನಿಂತ ಭಂಗಿ ಅವಳ ಅಸಹಾಯಕತೆಯನ್ನು ಸಾರಿ ಹೇಳಿದಂತೆ ಭಾಸವಾಗುತ್ತಿತ್ತು. ಘಂಟಾನಾದ ಜೋರಾಗಿ ಮೊಳಗುತ್ತಿತ್ತು. ಬೆಳ್ಳಂಬೆಳಗ್ಗೆ ನಡೆಯುವ ಮಂಗಲ್ ಆರತಿಯನ್ನು ಕಣ್ತುಂಬಿಕೊಳ್ಳಲೆಂದೇ ಬಂದಂತಿದ್ದ ಅವಳು ತದೇಕಚಿತ್ತದಿಂದ ಕೃಷ್ಣನ ಮೂರ್ತಿಯನ್ನೇ ನೋಡುತ್ತಿದ್ದಳು. ರಾಧೆ- ಕೃಷ್ಣರ ಆರಡಿ ಎತ್ತರದ ವಿಗ್ರಹಗಳು ಗರ್ಭಗುಡಿಯೊಳಗಿದ್ದರೂ ಅವುಗಳಲ್ಲಿ ಕೃಷ್ಣನ ವಿಗ್ರಹ ಅವಳಲ್ಲಿ ಅಚ್ಚರಿಯನ್ನು ಹುಟ್ಟುಹಾಕಿತ್ತು. ಮಥುರೆಯ ಪಾಲಿಗೆ ಅಕಾಲಿಕ ಅತಿಥಿಯಂತಿದ್ದ ಅವಳು ಆ ವಿಗ್ರಹವನ್ನು ನೋಡುತ್ತಿರುವುದು ಇದೇ ಮೊದಲೇನಲ್ಲ. ಆದರೂ ಮೊದಲ ಬಾರಿಗೆ ನೋಡುತ್ತಿರುವಂತಹ ತಾದಾತ್ಮ ಅವಳಲ್ಲಿತ್ತು.

ಅವಳಿದ್ದುದು ಮಥುರಾದ ಶ್ರೀಕೃಷ್ಣ ಜನ್ಮಭೂಮಿ ದೇಗುಲದಲ್ಲಿ. ದೇಗುಲಗಳಿಂದ ಕೂಡಿರುವ ಆ ಒಟ್ಟು ಪ್ರದೇಶವನ್ನು ಶ್ರೀಕೃಷ್ಣ ಜನ್ಮಸ್ಥಾನ ದೇಗುಲ ಸಂಕೀರ್ಣ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮಸ್ಥಳದಲ್ಲಿರುವ ಮುಖ್ಯ ದೇವಾಲಯವನ್ನು ಕೃಷ್ಣನ ಮೊಮ್ಮಗನಾದ ವಜ್ರನಾಭ ಕಟ್ಟಿಸಿದ ಎನ್ನುವ ಪ್ರತೀತಿಯಿದೆ. ಮೊಘಲ್ ದೊರೆ ಔರಂಗಜೇಬನಿಂದಾಗಿ ದೇಗುಲ ಹಾನಿಗೊಳಗಾಗಿದ್ದರೂ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಮಂಗಲ್ ಆರತಿ ಮುಗಿದ ಬಳಿಕ ಸೇರಿದ್ದ ಜನರೆಲ್ಲಾ ಹೊರಟುಹೋದರು. ಆದರೆ ಅವಳು ಮಾತ್ರ ಅಲ್ಲಿಯೇ ಇದ್ದಳು. ಈಗ ಆ ಇಡೀ ದೇವಸ್ಥಾನದೊಳಗೆ ಅವಳು, ಶ್ರೀಕೃಷ್ಣ ಮತ್ತು ರಾಧೆ ಮಾತ್ರ. ಕೃಷ್ಣನ ವಿಗ್ರಹದ ಬಳಿಯಲ್ಲಿದ್ದ ರಾಧೆಯನ್ನು ಅವಳು ತತ್ಕಾಲಕ್ಕೆ ಮರೆತಿದ್ದಳು. ತಾನೇ ರಾಧೆಯಾಗಿ ಕೃಷ್ಣನ ಸಂಗತವನ್ನು ಹೊಂದಿದ ಅನುಭಾವ ಅವಳಲ್ಲಿ ಮೂಡಿತು. ಆ ಅನುಭಾವದ ಪರಿಧಿಯನ್ನು ವಿಸ್ತರಿಸುವಂತೆ ಆಕೆ ಹಾಡತೊಡಗಿದಳು...

ಕೃಷ್ಣಾ ನೀ ಬೇಗನೇ ಬಾರೋ...

ಅವಳ ಧ್ವನಿ ದೇಗುಲದ ಕಂಬಗಳೆಲ್ಲವನ್ನೂ ತಾಡಿಸಿತು. ನಾಭಿಯಿಂದ ಹೊರಹೊಮ್ಮುತ್ತಿದ್ದ ನಾದ ಭಿತ್ತಿ ಭಿತ್ತಿಗಳಲ್ಲಿಯೂ ಸಂವೇದನೆಯ ಅಲೆಗಳನ್ನು ಎಬ್ಬಿಸಿತು.

ತಾನು ಹಾಡನ್ನು ಮುಕ್ತಾಯಗೊಳಿಸಿದಾಗ ಗರ್ಭಗುಡಿಯೊಳಗಿದ್ದ ಕೃಷ್ಣನ ತುಂಟನಗು ತುಸು ಜಾಸ್ತಿಯಾದಂತೆ ಅವಳಿಗೆ ಭಾಸವಾಗಿ ಖುಷಿಯಾಯಿತು. ಹಾಡನ್ನು ಹಾಡಿ ಮುಗಿಸಿದ ಬಳಿಕ ಅವಳೊಳಗಿದ್ದ ಕೃಷ್ಣ ಗರ್ಭಗುಡಿಯೊಳಗೆ ನೆಲೆಗೊಂಡಿದ್ದ.

ದೇಗುಲದ ಪ್ರಾಂಗಣದಿಂದ ಹೊರಬಂದ ಅವಳ ಕಣ್ಣುಗಳು ದೇಗುಲದ ಎರಡನೇ ದ್ವಾರದ ಸಮೀಪ ಇದ್ದ ಅಂಗಡಿಯ ಕಡೆಗೆ ಚಲಿಸಿದವು. ಮಾರಾಟಕ್ಕೆಂದು ಸಿದ್ಧಪಡಿಸಿ ಇಡಲಾಗಿದ್ದ ಕಚೋಡಿ, ಜಿಲೇಬಿ ಮೊದಲಾದ ತಿಂಡಿಗಳು ಅವಳೊಳಗಡೆ ಆಸೆಯ ಅಲೆಗಳನ್ನು ಎಬ್ಬಿಸಿದವು. ಆದರೆ ಆಸೆ, ಕನಸುಗಳನ್ನು ಈಡೇರಿಸಿಕೊಳ್ಳಲಾಗದ ಅಸಹಾಯಕತೆ ಬೇತಾಳನಂತೆ ಅವಳ ಬೆನ್ನಿಗಂಟಿಕೊಂಡಿತ್ತು. ಅಂತರಂಗದ ಆಲಾಪಗಳನ್ನು ಅದುಮಿಟ್ಟುಕೊಂಡು ಅಭ್ಯಾಸವಾಗಿದ್ದ ಅವಳು ಪರಮ ನಿರ್ಲಿಪ್ತಳಂತೆ ಮುಖಭಾವ ಮಾಡಿಕೊಂಡು ಆ ಅಂಗಡಿಯನ್ನು ಕ್ರಮಿಸಿಕೊಂಡು ಸಾಗಿದಳು.

ಮಥುರಾದ ರಸ್ತೆ ಇನ್ನೂ ಜೀವ ಪಡೆದಿರಲಿಲ್ಲ. ಬಿರುಸಿನ ಚಟುವಟಿಕೆಗಳಿನ್ನೂ ಆರಂಭಗೊಂಡಿರಲಿಲ್ಲ. ಬಲಿಷ್ಠ ಕಾಡುಕೋಣವನ್ನು ಹೊಟ್ಟೆಗಿಳಿಸಿಕೊಂಡು, ಮರಕ್ಕೆ ಸುತ್ತುಹಾಕಿದ ಹೆಬ್ಬಾವಿನಂತೆ ಮಲಗಿಕೊಂಡಿತ್ತು. ಆ ದೃಶ್ಯ, ಪಾದರಸ ತುಸು ಸಮಯದ ಮಟ್ಟಿಗೆ ಲೋಳೆರಸವಾಗಿ ಮಾರ್ಪಟ್ಟಂತಹ ಅನುಭೂತಿಯನ್ನು ನೋಡುಗರಲ್ಲಿ ಮೂಡಿಸುವಂತಿತ್ತು. ನೆತ್ತಿ ಮೇಲೆ ಸೆರಗನ್ನು ಎಳೆದುಕೊಂಡಿದ್ದ ಕೆಲವು ವೃದ್ಧೆಯರು ಅಂಗಡಿಯ ಆವರಣದಲ್ಲಿ, ಮಾಳಿಗೆ ಮಹಡಿಗಳ ಮೆಟ್ಟಿಲುಗಳ ಸಮೀಪದಲ್ಲಿ ನಿದ್ರಿಸಿದ್ದರು.

ನಿದಿರೆಯಿಂದ ಎಚ್ಚೆತ್ತು, ಕಟ್ಟಡವೊಂದರ ಹತ್ತಿರ ಕುಳಿತಿದ್ದ ವೃದ್ಧೆಯೊಬ್ಬರ ಕಣ್ಗಳಲ್ಲಿದ್ದ ಅಸಹಾಯಕತೆ ಅವರ ಸಮೀಪದ ಕಟ್ಟಡಕ್ಕಿಂತಲೂ ಬೃಹತ್ತಾಗಿತ್ತು. ಅವರ ಹಣೆಯ ಮೇಲೆ ಬಿಳಿಯ ನಾಮವಿತ್ತು. ತಿಂದು ಮುಕ್ಕಿದ ನುಗ್ಗೆಕೋಡುಗಳಂತಿದ್ದ ಅವರ ಸಣಕಲು ದೇಹವನ್ನು ಮಾಸಿದ ಬಿಳಿಯ ಸೀರೆ ಆವರಿಸಿತ್ತು. ಹೆಚ್ಚೂ ಕಡಿಮೆ ಎಪ್ಪತ್ತು- ಎಪ್ಪತೈದು ವರ್ಷ ವಯಸ್ಸು ಅವರಿಗೆ. ಅವರ ಎಡದ ಕೈಯ್ಯಲ್ಲಿದ್ದ ಖಾಲಿ ತಟ್ಟೆಗೆ ಅವರ ಅರ್ಧದಷ್ಟು ವಯಸ್ಸಾಗಿದ್ದಿರಬಹುದು. ತನ್ನೆಡೆಗೆ ಬರುವ ಯಮನನ್ನು ಹೊಡೆದೋಡಿಸುವ ಸಲುವಾಗಿಯೋ ಏನೋ ಎನ್ನುವಂತೆ, ಬಲದ ಕೈಯ್ಯಲ್ಲಿ ಕೋಲೊಂದನ್ನು ಹಿಡಿದುಕೊಂಡಿದ್ದರು. ಆ ಕೋಲು ಸವೆದುಹೋದ ಬಗೆಯನ್ನು ಗಮನಿಸಿದರೆ, ಹಲವಾರು ಸಲ ಸಾವಿನೂರಿನ ಯಜಮಾನ ಅವರ ಕೈಯ್ಯಲ್ಲಿ ಏಟುತಿಂದು, ತನ್ನ ಲೋಕಕ್ಕೆ ಬರಿಗೈಯ್ಯಲ್ಲಿ ಮರಳಿಹೋಗಿರಬೇಕೆಂಬ ಊಹೆಯನ್ನು ಮಾಡಬಹುದಿತ್ತು.

ವೃದ್ಧೆಯ ದೀನ ನೋಟ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಅವಳೆದೆಯಲ್ಲಿ ಮರುಕವನ್ನು ಮೂಡಿಸಿತು. ‘ತನ್ನಂತೆಯೇ ಅವರೂ ಕೂಡಾ’ ಎಂದು ಅಂದುಕೊಂಡಳು ಅವಳು. ‘ತನಗಿಂತಲೂ ದುಪ್ಪಟ್ಟು ವಯಸ್ಸಾಗಿದೆ ಅವರಿಗೆ. ಅವರು ಅನುಭವಿಸಿರುವ ಕಷ್ಟವೂ ತನಗಿಂತ ದುಪ್ಪಟ್ಟಿರಬಹುದು’ ಎನ್ನುವ ಯೋಚನೆ ಅವಳಲ್ಲಿ ಮೂಡಿದೊಡನೆಯೇ ಅಸಹನೀಯವಾದ ಖೇದ ಅವಳಂತರಾಳದಲ್ಲಿ ನೆಲೆಗೊಂಡಿತು. ಅಷ್ಟು ದುಃಖವಾದಾಗಲೂ ಅವಳು ಅಳಲಿಲ್ಲ. ನೀರು ಹರಿಸಿ, ಹರಿಸಿ ಬರಡುಗಟ್ಟಿದ್ದ ಅವಳ ಕಣ್ಣುಗಳಿಂದ ಹನಿ ನೀರೂ ಸುರಿಯದಿದ್ದುದು ಸಹಜ ಸಂಗತಿಯಾಗಿತ್ತು.

ಅವಳು ಆಶ್ರಮವನ್ನು ತಲುಪಿದ ತಕ್ಷಣ ಎದುರಾದದ್ದು ಆಶ್ರಮದ ಮೇಲ್ವಿಚಾರಕ. “ಎಲ್ಲಿಗೆ ಹೋಗಿದ್ದೆ ರಾಧೆ ಮಾ?” ವಿಚಾರಿಸಿದವನ ಧ್ವನಿಯಲ್ಲಿ ದರ್ಪವಿತ್ತು. “ದೇಗುಲಕ್ಕೆ. ನನ್ನೊಡೆಯ ಕೃಷ್ಣನನ್ನು ನೋಡಲು” ಎಂದು ಇವಳು ಹೇಳಿದ ತಕ್ಷಣವೇ ಅವನು ಕೋಪಕ್ಕೊಳಗಾದ. “ಇಲ್ಲಿಗೆ ಬಂದು ಹತ್ತು ವರ್ಷಗಳಾಗಿವೆ. ಆಶ್ರಮದ ನಿಯಮ ಗೊತ್ತಿಲ್ಲದವರ ಹಾಗೆ ಯಾಕೆ ಮಾಡುತ್ತೀಯಾ? ಹೇಳಿ ಹೋಗುವುದಕ್ಕಾಗದಷ್ಟು ಸೊಕ್ಕು ಬಂದಿದೆಯೇನು ನಿನಗೆ?” ಎಂದು ವಿಪರೀತವಾಗಿ ಬೈದವನು, ಮರುಕ್ಷಣವೇ ಇವಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದವನಂತೆ ಹೊರಗೆ ಹೋದ.

ಮೇಲ್ವಿಚಾರಕನಿಂದ ಬೈಸಿಕೊಂಡ ರಾಧೆ ಮಾ ಬಲು ಬೇಸರದಿಂದಲೇ ತನ್ನ ಕೋಣೆಯ ಕಡೆಗೆ ನಡೆದಳು. ಕೋಣೆಯ ಕಡೆಗೆ ನಿಧಾನವಾಗಿ ನಡೆಯುತ್ತಿದ್ದ ಅವಳ ಎರಡೂ ಬದಿಗಳಲ್ಲಿ ಬಣ್ಣ ಕಳೆದುಕೊಂಡ ಗೋಡೆಗಳಿದ್ದವು. ಆ ಗೋಡೆಗಳಿಗೆ ತಾಗಿಕೊಂಡಂತಿದ್ದ ಹಗ್ಗಗಳಲ್ಲಿ ಕೇಸರಿ, ಬಿಳಿ ವರ್ಣದ ಹಳತು ಬಟ್ಟೆಗಳು ನೇತಾಡುತ್ತಿದ್ದವು. ಸವಕಲು ಗೋಡೆಗಳು, ಹಳಸಲು ಬಟ್ಟೆಗಳು ಅವಳ ಬದುಕಿನ ಸಂಕೇತದಂತೆ ಕಾಣತೊಡಗಿದವು...

***

ಮಥುರೆಗೆ ಬಂದ ಬಳಿಕ ರಾಧೆ ಮಾ ಎಂಬ ಹೆಸರನ್ನು ಪಡೆದ ಇವಳ ಮೊದಲ ಹೆಸರು ಕನ್ನಿಕಾ ಪರಮೇಶ್ವರಿ. ಹುಟ್ಟಿದ ಹೆಣ್ಣುಮಗುವಿಗೆ ಕನ್ನಿಕಾ ಎಂಬ ಹೆಸರನ್ನೇ ಇಡಲು ಕಾರಣವಿತ್ತು. ಕನ್ನಿಕಾಳ ತಾಯಿ ವೆಂಕಮ್ಮಳಿಗೆ ಮಳೆಗಾಲದ ಆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತೀವ್ರ ರಕ್ತಸ್ರಾವವೂ ಆಗತೊಡಗಿತ್ತು. ಮನೆಯವರು ಮಾತ್ರವಲ್ಲ, ಹೆರಿಗೆ ಮಾಡಿಸುವುದಕ್ಕೆಂದು ಬಂದಿದ್ದ ಅನುಭವಸ್ಥೆ ಸೂಲಗಿತ್ತಿಯೂ ಕೂಡಾ ಏನು ಮಾಡುವುದೆಂದು ತೋಚದೆ ಮೇಲೆ ಕೆಳಗೆ ನೋಡಹತ್ತಿದ್ದಳು. ಸೊಸೆಯೆಂದರೆ ಕಾಲಕಸ ಎಂಬಂತೆ ತಿರಸ್ಕರಿಸುತ್ತಿದ್ದ ಲಕ್ಷ್ಮಮ ಸೊಸೆಯ ಒದ್ದಾಟಕ್ಕೆ ಅಷ್ಟಾಗಿ ಗಮನವನ್ನೇ ಕೊಟ್ಟಿರಲಿಲ್ಲ. ಮನೆಯ ಯಜಮಾನರಾದ ಗೋಪಾಲಯ್ಯನವರು ಚಿಂತೆಯಿಂದ ಕನಲುತ್ತಿದ್ದರು. ಅಷ್ಟರಲ್ಲಿ ಅವರ ಬಳಿಗೆ ಓಡಿಬಂದ ಆ ಸೂಲಗಿತ್ತಿ ಹೇಳಿದ್ದಳು: “ಇಲ್ಲಿಂದ ಮೂರು ಮೈಲಿ ದೂರದಲ್ಲಿ ಅಂಬಕ್ಕನ ಮನೆಯಿದೆ. ಅವರು ನನಗಿಂತಲೂ ಹೆಚ್ಚು ಅನುಭವ ಇರುವವರು. ಅವರಿಂದ ಖಂಡಿತಾ ಪ್ರಯೋಜನವಾದೀತು. ಅವರ ಬಳಿ ಹೆರಿಗೆ ಮಾಡಿಸಿಕೊಂಡವರು ಸತ್ತದ್ದಿಲ್ಲ. ಕಷ್ಟದ ಹೆರಿಗೆಯನ್ನೂ ಮಾಡಿಸಿದ್ದಾರೆ ಒಡೆಯ. ಆದರೆ ವಯಸ್ಸಾಗಿರುವ ಅವರು ಇಲ್ಲಿಗೆ ಬರುವುದಕ್ಕೆ ಸಾಧ್ಯ ಇಲ್ಲ. ನಾವೇ ಅವರ ಮನೆಗೆ ಹೋಗಬೇಕು”

ಗೋಪಾಲಯ್ಯನವರಿಗೆ ಸೂಲಗಿತ್ತಿಯ ಮಾತು ಸರಿ ಎನಿಸಿತು. ಅತೀವ ನೋವಿನಿಂದ ನರಳುತ್ತಿರುವ ತನ್ನ ಹೆಂಡತಿಯನ್ನು ಅಂಬಕ್ಕಳಲ್ಲಿಗೆ ಕರೆದುಕೊಂಡು ಹೋದರೆ ತಾಯಿ ಮಗು ಇಬ್ಬರೂ ಬದುಕಬಹುದು ಎಂಬ ನಿರೀಕ್ಷೆ ಅವರದ್ದಾಗಿತ್ತು. ಆದರೆ ಆ ಸರಿರಾತ್ರಿಯಲ್ಲಿ ಹನಿ ಕಡಿಯದಂತೆ ಮಳೆಸುರಿಯುತ್ತಿರುವಾಗ ಗರ್ಭಿಣಿಯನ್ನು ಅಲ್ಲಿಗೆ ಕರೆದುಕೊಂಡು ಹೋಗುವುದಾದರೂ ಹೇಗೆ? ಏರಿಳಿತದ ರಸ್ತೆಯನ್ನು ಕ್ರಮಿಸಿ ಅಂಬಕ್ಕಳ ಮನೆಯಂಗಳವನ್ನು ತಲುಪುವುದಾದರೂ ಹೇಗೆ?

ಯೋಚಿಸಿದ ಗೋಪಾಲಯ್ಯ ಅಂಗಳದಲ್ಲಿ ಚಿಂತೆಯಿಂದ ತಲೆ ಕೆರೆಯುತ್ತಾ ನಿಂತಿದ್ದ ಒಕ್ಕಲಿನವರನ್ನು ಕರೆದರು. ಏನು ಮಾಡಬೇಕೆಂಬ ಸೂಚನೆಯನ್ನೂ ಕೊಟ್ಟರು. ಒಡೆಯನ ಸೂಚನೆಯಂತೆ ಆಳುಗಳು ಗಟ್ಟಿಯಾದ ಎರಡು ಮರದ ಕೊರಡುಗಳನ್ನು ಹುಡುಕಿ ತಂದರು. ಸಮಾರಂಭಗಳೆಲ್ಲ ನಡೆದಾಗ, ಭಾರೀ ಜನ ಸೇರಿದಾಗ ಅನ್ನ ಬೇಯಿಸುವುದಕ್ಕೆಂದು ಮೀಸಲಾಗಿರುವ ದೊಡ್ಡ ಪಾತ್ರೆಯನ್ನು ಒಳಕೋಣೆಯಿಂದ ತಂದರು. ಅಷ್ಟರಲ್ಲಿ ಮಳೆ ನಿಯಂತ್ರಣಕ್ಕೆ ಬಂದಿತ್ತು. ಬೆಳಗ್ಗಿನಿಂದ ಸುರಿದೂ ಸುರಿದೂ ಸುಸ್ತಾಗಿದೆಯೇನೋ ಎನ್ನುವಂತೆ ವಿಶ್ರಾಂತಿ ಪಡೆದುಕೊಂಡಿತ್ತು. ಈಗ, ನೋವು ತಿಂದೂ ತಿಂದೂ ಬೆವರಿನ ಮುದ್ದೆಯಾಗಿದ್ದ ವೆಂಕಮ್ಮಳನ್ನು ಎತ್ತಿಕೊಂಡು ಬಂದು ಆ ಪಾತ್ರೆಯೊಳಗೆ ಕೂರಿಸಲಾಯಿತು. ಆ ಪಾತ್ರೆಯ ಹಿಡಿಕೆಗಳಿಗೆ ಮರದ ಕೊರಡುಗಳನ್ನು ಸಿಲುಕಿಸಿದ ಆಳುಗಳು, ಆ ಮರದ ಕೊರಡುಗಳನ್ನು ತಮ್ಮ ಹೆಗಲಿಗೆ ವರ್ಗಾಯಿಸಿಕೊಂಡರು. ಬಹಳ ಜಾಗರೂಕತೆಯಿಂದ, ವೇಗವನ್ನು ಕಾಯ್ದುಕೊಳ್ಳುತ್ತಾ ನಡೆಯಲಾರಂಭಿಸಿದರು. ಆಳುಗಳ ಬೆನ್ನಮೇಲೆ ಕೊರಡುಗಳು, ಕೊರಡುಗಳಿಗೆ ಅಡಕವಾಗಿದ್ದ ದೊಡ್ಡ ಪಾತ್ರೆ, ಪಾತ್ರೆಯೊಳಗೆ ಒದ್ದಾಡುತ್ತಿದ್ದ ವೆಂಕಮ್ಮ, ಕೈಯ್ಯಲ್ಲಿ ದೊಂದಿ ಹಿಡಿದುಕೊಂಡು ಆಳುಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಗೋಪಾಲಯ್ಯ- ಈ ಬಗೆಯಲ್ಲಿ ಸಾಗುತ್ತಲೇ ಹಂತಹಂತವಾಗಿ ದಾರಿ ಸವೆಯತೊಡಗಿತ್ತು.

ಅರ್ಧ ದಾರಿ ಕ್ರಮಿಸಿರಬಹುದೇನೋ, ಮಳೆಯ ಆರ್ಭಟ ಮತ್ತೆ ಶುರುವಾಯಿತು. ಮಳೆಹನಿ ಬಿದ್ದುದರಿಂದ ಗೋಪಾಲಯ್ಯನವರ ಕೈಯ್ಯಲ್ಲಿದ್ದ ದೊಂದಿ ಅರೆಕ್ಷಣದಲ್ಲಿ ನಂದಿಹೋಯಿತು. ಪೂರ್ಣಿಮೆಯ ಹಿಂದಿನ ರಾತ್ರಿ ಅದಾಗಿದ್ದುದರಿಂದ ಚಂದ್ರನ ಬೆಳಕು ಮುಂದೆ ಸಾಗಬೇಕಾಗಿರುವ ಹಾದಿಯನ್ನು ಅಸ್ಪಷ್ಟವಾಗಿ ತೋರುತ್ತಿತ್ತು. ಹೆಜ್ಜೆಹೆಜ್ಜೆಯನ್ನೂ ಗಮನಿಸಿಕೊಂಡು, ಹೊಂದಾಣಿಕೆಯಿಂದ ಸಾಗಬೇಕಾಗಿ ಬಂದದ್ದರಿಂದ ಆಳುಗಳ ನಡಿಗೆಯ ವೇಗ ಕುಂಠಿತಗೊಂಡಿತ್ತು. ವೆಂಕಮ್ಮ ಅತೀವ ನೋವಿನಿಂದ ನರಳುವ ಸದ್ದು ಅರೆನಿಮಿಷಕ್ಕೊಮ್ಮೆ ಗೋಪಾಲಯ್ಯನವರ ಕಿವಿಯನ್ನು ಪ್ರವೇಶಿಸುತ್ತಿತ್ತು. ಸತತವಾಗಿ ಮಿಂಚು ಕೋರೈಸತೊಡಗಿದಾಗ ಕಂಡ ದೃಶ್ಯ ಗೋಪಾಲಯ್ಯನವರಲ್ಲಿದ್ದ ಭಯವನ್ನು ನೂರ್ಮಡಿಗೊಳಿಸಿತು. ಪಾತ್ರೆಯೊಳಗಡೆ ನೆತ್ತರು ತುಂಬಿಕೊಂಡಿದೆ. ಅದರ ಜೊತೆಗೆ ಮಳೆಯ ನೀರು ಬೆರೆಯುತ್ತಿದೆ. ನಿಮಿಷಕ್ಕೊಮ್ಮೆ ರಕ್ತ- ಮಳೆನೀರಿನ ಮಿಶ್ರಣ ಪಾತ್ರೆಯನ್ನು ತುಂಬಿ ಹೊರಚೆಲ್ಲುತ್ತಿದೆ. ಭಯದಿಂದ ಜರ್ಜರಿತರಾದ ಗೋಪಾಲಯ್ಯನವರಿಗೆ ಆ ಕ್ಷಣಕ್ಕೆ ನೆನಪಾದದ್ದು ಗ್ರಾಮದೇವತೆ ಕನ್ನಿಕಾ ಪರಮೇಶ್ವರಿ. ಮನದಲ್ಲಿಯೇ ದೇವಿಯನ್ನು ಸ್ಮರಿಸಿದ ಅವರು ಏನೂ ತೊಂದರೆ ಆಗದೆ ಹೆರಿಗೆ ನಡೆದರೆ ಸಾವಿರದ ಒಂದು ತೆಂಗಿನಕಾಯಿಗಳನ್ನು ಸನ್ನಿಧಿಯಲ್ಲಿ ಒಡೆಯುವೆನೆಂದು ಮನದಲ್ಲಿಯೇ ಹರಕೆ ಹೇಳಿಕೊಂಡರು. ಹುಟ್ಟುವ ಮಗು ಹೆಣ್ಣು ಎಂದಾದರೆ ದೇವಿಯ ಹೆಸರನ್ನೇ ಇಡುವುದಾಗಿ ಸಂಕಲ್ಪಿಸಿಕೊಂಡರು.

ಪ್ರಯಾಸದಲ್ಲಿಯೇ ಕಳೆದ ಹಾದಿ ಅಂಬಕ್ಕಳ ಮನೆಯಂಗಳದಲ್ಲಿ ಕೊನೆಗೊಂಡಿತು. ದಬದಬ ಬಾಗಿಲು ಬಡಿದು, ಅಂಬಕ್ಕಳನ್ನು ನಿದ್ರೆಯಿಂದ ಎಬ್ಬಿಸಿದ ಗೋಪಾಲಯ್ಯ, ಅವಳಿಗೆ ಕೈಮುಗಿದು ತನ್ನ ಪತ್ನಿಯನ್ನೂ ಮಗುವನ್ನೂ ಉಳಿಸಿಕೊಡುವಂತೆ ಕೇಳಿಕೊಂಡರು. ಚಿಕ್ಕಮಗುವಿನಂತೆ ಅಳುತ್ತಿದ್ದ ಅವರನ್ನು ಕಂಡು ಮಾತೃಹೃದಯದ ಅಂಬಕ್ಕಳಿಗೆ ಕರುಳು ಹಿಂಡಿದಂತಾಯಿತು.

ಗೋಪಾಲಯ್ಯ ಎಂದರೆ ಸಾಮಾನ್ಯದವರಲ್ಲ ಎನ್ನುವುದು ಅಂಬಕ್ಕಳಿಗೆ ಮಾತ್ರವಲ್ಲ, ಇಡೀ ಊರಿಗೆ ಗೊತ್ತಿದೆ. ದೊಡ್ಡಮನೆ ಗೋಪಾಲಯ್ಯ ಎಂದರೆ ಮಹಾನ್ ಕಾರುಬಾರಿ ಮನುಷ್ಯ. ಮೈಮೇಲೆ ಹೊದ್ದು ಮಲಗುವಷ್ಟು ಶ್ರೀಮಂತಿಕೆ ಇರಲಿಲ್ಲವಾದರೂ ತನ್ನ ನಾಲಗೆಯ ಶಕ್ತಿಯಿಂದ ಊರನ್ನೇ ಅಲುಗಾಡಿಸುವಷ್ಟು ಸಾಮರ್ಥ್ಯ ಅವರಿಗಿತ್ತು. ತನ್ನಪ್ಪನ ಕಾಲದಲ್ಲಿ ಮೂರು ಗೇಣುದ್ದದ ತೋಟವಾಗಿ ಇದ್ದುದನ್ನು ಹಂತಹಂತವಾಗಿ ವಿಸ್ತರಿಸಿಕೊಳ್ಳುತ್ತಾ ಇದೀಗ ಎಂಟೆಕರೆಯ ಜಮೀನಾಗಿ ಮಾರ್ಪಡಿಸಿದ್ದು ಗೋಪಾಲಯ್ಯನವರ ಬುದ್ಧಿಮತ್ತೆಗೆ ಸಾಕ್ಷಿ. ಊರಿನಲ್ಲಿ ಏನೇ ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ಇಡೀ ಊರು ಸಲಹೆಯನ್ನು ಪಡೆಯುವುದಕ್ಕಾಗಿ ಗೋಪಾಲಯ್ಯನವರ ಕಡೆಗೆ ನೋಡುತ್ತಿತ್ತು. ಜನರ ಮಧ್ಯೆ ಸಣ್ಣಪುಟ್ಟ ತಕರಾರುಗಳು ಏರ್ಪಟ್ಟಾಗ, ಜಗಳಗಳು ಉದ್ಭವಿಸಿದಾಗ ಅದನ್ನು ಬಹಳ

ಸಂಯಮದಿಂದ ಪರಿಹರಿಸುವ ಚಾಕಚಕ್ಯತೆ ಗೋಪಾಲಯ್ಯನವರಿಗಿತ್ತು. ಹೀಗಾಗಿ ಒಳ್ಳೆಯ ಸಂಧಾನಕಾರರಾಗಿಯೂ ಹೆಸರು ಪಡೆದಿದ್ದರು.

ಇಂತಹ ವ್ಯಕ್ತಿ ತನ್ನೆದುರು ದೀನನಂತೆ ನಿಂತ ಬಗೆ ಅಂಬಕ್ಕಳಲ್ಲಿ ನೋವು ಮೂಡಿಸಿತು. ಗೋಪಾಲಯ್ಯನವರ ಉಪಕಾರದ ಋಣಭಾರವೂ ಆಕೆಯ ಮೇಲಿತ್ತು. ಹಿಂದೊಮ್ಮೆ ಆಕೆಯ ಮಗ ಮರದಿಂದ ಬಿದ್ದು, ಸೊಂಟ ಮುರಿಸಿಕೊಂಡಿದ್ದಾಗ ಪೇಟೆಯ ಆಸ್ಪತ್ರೆಗೆ ಅವನನ್ನು ರವಾನಿಸಿ, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಗೋಪಾಲಯ್ಯನವರೇ ಭರಿಸಿದ್ದರು. ಋಣಮುಕ್ತಳಾಗಬೇಕೆಂಬ ಯೋಚನೆ ಅಂಬಕ್ಕಳಿಗೆ ಬಂದದ್ದೇ ತಡ, ಆಕೆ ಬಲು ಚುರುಕಾದಳು. ಎಪ್ಪತ್ತರ ಹರೆಯವನ್ನು ತಾನು ದಾಟಿದ್ದೇನೆ ಎನ್ನುವುದನ್ನು ಮರೆತಳು. ಅವಳಿಗಿದ್ದ ಮೊಣಗಂಟಿನ ನೋವು ಆ ಸಮಯದಲ್ಲಿ ರಜೆ ಪಡೆದುಕೊಂಡಿತು. ಒಳಕೋಣೆಯಲ್ಲಿ ನೋವು ತಿನ್ನುತ್ತಿದ್ದ ವೆಂಕಮ್ಮನ ಬಳಿಗೆ ಹೋದಳು.

ತಳಮಳದಿಂದ ಹೊರಗೆ ಕುಳಿತಿದ್ದ ಗೋಪಾಲಯ್ಯನವರಿಗೆ ತಮ್ಮ ಪತ್ನಿಯ ನರಳಾಟದ ಸದ್ದು ಕೇಳುತ್ತಿತ್ತು. ಅಂಬಕ್ಕಳ ಸಾಂತ್ವನದ ಮಾತುಗಳೂ ಕೇಳುತ್ತಿದ್ದವು. ಅವೆಲ್ಲವೂ ಸೇರಿಕೊಂಡು ಅವರ ಮನಸ್ಸಿನಲ್ಲಿ ಕೋಲಾಹಲವನ್ನು ಎಬ್ಬಿಸಿದ್ದವು.

ಕೊನೆಗೊಮ್ಮೆ ಮಗುವಿನ ಅಳುವಿನ ದನಿ ಕೇಳಿಸಿದಾಗ ಅವರಿಗೆ ಸಮಾಧಾನವಾಯಿತು. ಅಪರಿಮಿತವಾದ ಸಂತಸವಾಯಿತು.

ಕೋಣೆಯಿಂದ ಹೊರಬಂದ ವೃದ್ಧೆ ಅಂಬಕ್ಕ ತಲೆ ತಗ್ಗಿಸಿ, ಗೋಪಾಲಯ್ಯನವರಲ್ಲಿ ಹೇಳಿದಳು- “ಕ್ಷಮಿಸಿ ಒಡೆಯ. ಮಗು ಹುಷಾರಾಗಿದೆ. ಆದರೆ ವೆಂಕಮ್ಮಕ್ಕ ತೀರಿಕೊಂಡಿದ್ದಾರೆ”

ಹೀಗೆ ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡ ಕನ್ನಿಕಾಳಿಗೆ ತಂದೆಯ ಪ್ರೀತಿ ದೊರಕಿತು. ಮಗುವಾದರೂ ಉಳಿಯಿತಲ್ಲಾ ಎಂದು ಅಂದುಕೊಂಡ ಗೋಪಾಲಯ್ಯ ತಾನು ಹರಕೆ ಹೊತ್ತಂತೆಯೇ ದೇವಿಯ ಹೆಸರನ್ನು ಮಗುವಿಗೆ ಇಟ್ಟರು. ಸಾವಿರದೊಂದು ತೆಂಗಿನಕಾಯಿಗಳನ್ನೂ ದೇವಿಯ ಸನ್ನಿಧಿಯಲ್ಲಿ ಒಡೆದುಬಂದರು. ಎರಡು ಗಂಡುಮಕ್ಕಳ ಬಳಿಕ ಜನಿಸಿದ ಹೆಣ್ಣುಮಗುವಾದ್ದರಿಂದ ಗೋಪಾಲಯ್ಯನವರಿಗೆ ಮಗಳ ಮೇಲೆ ಬಲು ಅಕ್ಕರೆಯಿತ್ತು. ತಮ್ಮ ಮನೆಯ ಲಕ್ಷಿö್ಮಯೇ ಅವಳೆಂದು ಅವರು ನಂಬಿಕೊಂಡಿದ್ದರು.

ಆದರೆ ಗೋಪಾಲಯ್ಯನವರ ತಾಯಿ ಲಕ್ಷ್ಮಮನಿಗೆ ಕನ್ನಿಕಾಳನ್ನು ಕಂಡರೆ ಒಂದು ಸ್ವಲ್ಪವೂ ಇಷ್ಟವಿರಲಿಲ್ಲ. ಹೆಣ್ಣುಮಕ್ಕಳನ್ನೇ ದ್ವೇಷಿಸುತ್ತಿದ್ದ ಅವರು ಸೊಸೆ ವೆಂಕಮ್ಮ ಮೂರನೇ ಹೆರಿಗೆಯಲ್ಲಿಯೂ ಗಂಡುಮಗುವನ್ನೇ ಹೆರಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಮೊದಲ ಇಬ್ಬರು ಮಕ್ಕಳಿಗೆ ಕೇಶವ, ಶಂಕರ ಎಂಬ ಹೆಸರನ್ನು ಇರಿಸಿದ ಹಾಗೆಯೇ ಮೂರನೇ ಮಗುವಿಗೆ ಮಾಧವ ಎಂಬ ಹೆಸರನ್ನು ಇಡುವುದೆಂದು ಮನಸ್ಸಿನಲ್ಲಿಯೇ ಅವರು ನಿಶ್ಚಯಿಸಿಕೊಂಡೂ ಆಗಿತ್ತು. ಆದರೆ ಹುಟ್ಟಿದ ಮಗು ಹೆಣ್ಣು ಎಂದು ತಿಳಿದಾಗ ಅವರಿಗಾದ ಸಂಕಟ ಹೇಳುವಂಥದ್ದಲ್ಲ. ಹಾಗೆ ಜನಿಸಿದ ಹೆಣ್ಣುಮಗು ತನ್ನ ತಾಯಿಯನ್ನೇ ಸಾಯಿಸಿದೆ ಎಂಬ ವಿಚಾರ ಅವರನ್ನು ಕ್ರೋಧಕ್ಕೀಡುಮಾಡಿತ್ತು. ತನ್ನ ಮಗ ಹೆಂಡತಿ- ಮಗುವನ್ನು ಉಳಿಸಿಕೊಳ್ಳಲು ಆ ಮಳೆಗಾಲದ ರಾತ್ರಿ ಪಟ್ಟ ಪರಿಶ್ರಮವೆಲ್ಲಾ ಈ ಹೆಣ್ಣುಮಗುವಿನ ಜನನದ ಮೂಲಕ ನಷ್ಟವಾಯಿತಲ್ಲಾ ಎಂಬ ಭಾವನೆ ಅವರನ್ನು ರೊಚ್ಚಿಗೆಬ್ಬಿಸಿತು.

“ಇವಳೊಬ್ಬಳು ಹೆತ್ತಮನನ್ನು ನುಂಗಿಕೊಂಡ ಪೀಡೆ” ಎಂದು ಲಕ್ಷ್ಮಮ ಬೈಯ್ಯುತ್ತಿದ್ದಾಗ ಕನ್ನಿಕಾ ಪಿಳಿಪಿಳಿ ಕಣ್ಣು ಬಿಡುತ್ತಾ ಅವರನ್ನೇ ನೋಡುತ್ತಿದ್ದಳು. “ಅಮ್ಮ ಸಾಯುವಾಗಲೇ ಈ ಮಗುವೂ ಸತ್ತಿದ್ದರೆ ಒಳ್ಳೆಯದಿತ್ತು. ಇದನ್ನು ನೋಡಿಕೊಳ್ಳುವ ಕರ್ಮ ಬೇರೆ ನನಗೆ” ಎಂದು ಅವರು ಅಬ್ಬರಿಸಿದಾಗ, ಅವರು ತನ್ನನ್ನೇ ಬೈಯ್ಯುತ್ತಿದ್ದಾರೆ ಎನ್ನುವುದು ನಾಲ್ಕು ವರ್ಷಗಳ ಮುಗ್ಧೆ ಕನ್ನಿಕಾಗೆ ತಿಳಿಯುತ್ತಿರಲಿಲ್ಲ.

ತನ್ನಮ್ಮನ ಈ ಬಗೆಯ ಅಸಮಾಧಾನ ಅದೊಂದು ದಿನ ಗೋಪಾಲಯ್ಯನವರನ್ನು ರೇಗಿಸಿತು. ಏನೂ ಅರಿಯದ ಮಗುವನ್ನು ಅವರು ಹೀನಾಮಾನವಾಗಿ ಬೈಯ್ಯುತ್ತಿದ್ದದ್ದು ಅವರಿಗೆ ಅಮಾನವೀಯತೆಯ ಪರಾಕಾಷ್ಠೆಯಾಗಿ ಕಂಡಿತು. ವಿಪರೀತ ಕೋಪ ಬಂದಿದ್ದರೂ ಅದನ್ನು ಅದುಮಿಟ್ಟುಕೊಂಡು,

“ಹುಟ್ಟುವಾಗಲೇ ಅಮ್ಮನನ್ನು ಕಳೆದುಕೊಂಡದ್ದರಲ್ಲಿ ಅವಳ ತಪ್ಪು ಏನಿದೆಯಮ್ಮಾ? ಅಷ್ಟಕ್ಕೂ ಅವಳಿಗೆ ತನ್ನಮ್ಮನನ್ನು ತಾನು ಕಳೆದುಕೊಂಡಿದ್ದೇನೆ ಎಂಬ ವಿಚಾರವೇ ತಿಳಿದಿಲ್ಲ. ಅವಳದ್ದು ತಪ್ಪು, ಅದೂ ಇದೂ ಎಂದು ಏನೇನೋ ಹೇಳಬೇಡ. ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದಾದರೆ ನೋಡಿಕೋ. ಇಲ್ಲದಿದ್ದರೆ ನಾನೇ ನೋಡಿಕೊಳ್ಳುತ್ತೇನೆ” ಎಂದರು. ಮಗನ ಮಾತು ಲಕ್ಷ್ಮಮನನ್ನು ಸುಮ್ಮನಿರಲು ಬಿಡಲಿಲ್ಲ. “ಜೋಯಿಸರಲ್ಲಿ ನಾನೇ ಕೇಳಿದ್ದೇನೆ. ಈ ದರಿದ್ರ ಮಗುವಿನ ಯೋಗವೇ ಸರಿಯಿಲ್ಲವಂತೆ. ತಯಿಯನ್ನು ನುಂಗಿಕೊಳ್ಳುವ ಮಗು ಇದೆಂದು ಅವರೇ ನನಗೆ ಹೇಳಿದ್ದು. ನಾನು ಹೇಳಿದ್ದರಲ್ಲಿ ನಿನಗೆ ನಂಬಿಕೆಯಿಲ್ಲ. ಇನ್ನೂ ಏನೇನೆಲ್ಲಾ ಅನಹುತವಾಗಲಿಕ್ಕಿದೆಯೋ ಈ ಮನೆಯಲ್ಲಿ?!” ಎಂದು ಹೇಳಿ, ಅಳುಮೋರೆ ಮಾಡತೊಡಗಿದರು. ಜ್ಯೋತಿಷ್ಯ ಫಲಗಳಲ್ಲೆಲ್ಲಾ ಅತಿಯಾಗಿ ನಂಬಿಕೆ ಇಲ್ಲದ ಗೋಪಾಲಯ್ಯ, ಹೆಗಲ ಮೇಲಿನ ಬೈರಸನ್ನು ಕೊಡವುತ್ತಾ ಅಲ್ಲಿಂದ ಎದ್ದುಹೋದರು. ಬಾಯಿಗೆ ಬಂದಂತೆ ಬಡಬಡಿಸುವ ತನ್ನಮ್ಮನ ಜೊತೆಗೆ ವಾದಿಸುವುದು ಅವರಿಗೆ ಇಷ್ಟ ಇರಲಿಲ್ಲ. ಆದರೆ ಈ ಮಾತುಕತೆ ಆದ ಬಳಿಕ ಕನ್ನಿಕಾಳ ಸಂಪೂರ್ಣ ಜವಾಬ್ದಾರಿಯನ್ನು ಗೋಪಾಲಯ್ಯನವರೇ ವಹಿಸಿಕೊಂಡರು. ಆಗಾಗ ತಾಳಮದ್ದಲೆಯಲ್ಲಿ ಅರ್ಥ ಹೇಳುತ್ತಿದ್ದ, ಯಕ್ಷಗಾನ ಪಾತ್ರ ಮಾಡುತ್ತಿದ್ದ ಗೋಪಾಲಯ್ಯನವರಿಗೆ ವರ್ಷದಲ್ಲಿ ಕಡಿಮೆ ಎಂದರೂ ಎಂಟು ಕಾರ್ಯಕ್ರಮಗಳು ಸಿಗುತ್ತಿದ್ದವು. ನವರಾತ್ರಿಯ ಸಮಯದಲ್ಲಂತೂ ಅವರಿಗೆ ಪುರುಸೊತ್ತೇ ಇರುತ್ತಿರಲಿಲ್ಲ. ಆದರೆ ಮಗಳನ್ನು ತಾನೇ ನೋಡಿಕೊಳ್ಳಬೇಕೆಂದು ನಿರ್ಧರಿಸಿದ ಅವರು ಆ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿದರು.

ಮೊದಲೇ ಕನ್ನಿಕಾಳನ್ನು ತೀವ್ರವಾಗಿ ದ್ವೇಷಿಸುತ್ತಿದ್ದ ಲಕ್ಷ್ಮಮನಿಗೆ ಈಗ ಅವಳನ್ನು ದೂರುವುದಕ್ಕೆ ಹೊಸದೊಂದು ಕಾರಣ ದೊರೆತಂತಾಗಿತ್ತು. “ತಾಳಮದ್ದಲೆ ಅರ್ಥಧಾರಿಯಾಗಿ, ಯಕ್ಷಗಾನ ಪಾತ್ರಧಾರಿಯಾಗಿ ನಾಲ್ಕೂರುಗಳಲ್ಲಿ ಹೆಸರು ಗಳಿಸಿದ್ದ ನನ್ನ ಮಗ ಈಗೀಗ ವೇದಿಕೆಗೇ ಹತ್ತದಂತಾಗಿದೆ. ಖಾಲಿ ಉಳಿಯುವಂತಾಗಿದೆ. ಅದಕ್ಕೆ ಈ ಪಿಶಾಚಿ ಮಗುವೇ ಕಾರಣ” ಎಂಬ ಹೊಸ ಬೈಗುಳ ಇತ್ತೀಚೆಗೆ ಇವರ ನಾಲಗೆ ಹತ್ತಿ ಕುಳಿತಿತ್ತು. ಆದರೆ ಕನ್ನಿಕಾಳನ್ನು ತಾನು ಬೈದರೆ ಮಗ ತನ್ನ ಮೇಲೆಯೇ ಕೋಪ ಮಾಡಿಕೊಳ್ಳುತ್ತಾನೆ ಎನ್ನುವ ವಿಚಾರ ಈ ಹಿಂದಿನ ಅನುಭವದಿಂದ ಅವರ ಅರಿವಿಗೆ ಬಂದಿತ್ತು. ಅದಕ್ಕಾಗಿ ಮಗ ಇಲ್ಲದಿರುವ ಸಮಯ ನೋಡಿಕೊಂಡು ಮೊಮ್ಮಗಳ ಮೇಲೆ ಕೆಂಡ ಕಾರುತ್ತಿದ್ದರು.

ಮಗಳನ್ನು ನೋಡಿಕೊಂಡು, ಮುದ್ದು ಮಾಡಿಕೊಂಡು ಕೃಷಿ ಕೆಲಸದಲ್ಲಿ ಸಂತಸ ಕಂಡುಕೊAಡು ಬದುಕನ್ನು ನಡೆಸುತ್ತಿದ್ದ ಗೋಪಾಲಯ್ಯನವರಿಗೆ ಮರುಮದುವೆ ಮಾಡಲು ಲಕ್ಷ್ಮಮ ಪ್ರಯತ್ನಿಸಿದ್ದರು. ಆದರೆ ಗೋಪಾಲಯ್ಯ ಒಪ್ಪಿಕೊಳ್ಳಲಿಲ್ಲ. ತಾನು ಮತ್ತೆ ಮದುವೆ ಆದರೆ ಬಂದವಳು ತನ್ನ ಮಗಳಿಗೆ ತೊಂದರೆ ಕೊಟ್ಟರೆ ಗತಿಯೇನು? ಎಂಬ ಆತಂಕ ಅವರಲ್ಲಿತ್ತು. ಆ ಕಾರಣಕ್ಕಾಗಿ ಮರುಮದುವೆ ಆಗದೆ, ಮಗಳ ಆರೈಕೆಯಲ್ಲಿಯೇ ಸಂತಸ ಕಂಡುಕೊಳ್ಳುತ್ತಿದ್ದರು.

ಊರಿನ ದೇವಸ್ಥಾನ ಗೋಪಾಲಯ್ಯನವರ ಮನೆಗೆ ಸಮೀಪದಲ್ಲಿಯೇ ಇತ್ತು. ಅಲ್ಲಿ ಪ್ರತೀ ಶನಿವಾರ ಸಂಗೀತ ತರಗತಿ ನಡೆಯುತ್ತಿತ್ತು. ಮಗಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋದಾಗ ಸಂಗೀತ ಗುರುಗಳು ಸಂಗೀತ ಕಲಿಸಿಕೊಡುತ್ತಿರುವುದನ್ನು ಕನ್ನಿಕಾ ಬಹಳ ಆಸಕ್ತಿಯಿಂದ ಗಮನಿಸುತ್ತಿದ್ದಾಳೆ ಎನ್ನುವುದನ್ನು ಗೋಪಾಲಯ್ಯನವರು ಗಮನಿಸಿದ್ದರು. ಉಳಿದವರ ಹಾಡಿಗೆ ಆಕೆ ತಲೆಯಾಡಿಸುತ್ತಿದ್ದಳು. ತನ್ನ ಪುಟ್ಟ ಕೈಗಳಲ್ಲಿ ತಾಳ ಹಾಕುತ್ತಿದ್ದಳು. ಅವರು ಹಾಡುತ್ತಿದ್ದುದನ್ನು ತಾನೂ ಅನುಸರಿಸಲು ಪ್ರಯತ್ನಿಸುತ್ತಿದ್ದಳು. ಮಗಳಲ್ಲಿದ್ದ ಸಂಗೀತಾಸಕ್ತಿ ಗೋಪಾಲಯ್ಯನವರಿಗೆ ಖುಷಿ ಕೊಟ್ಟಿತ್ತು. ಸಂಗೀತ ಗುರುಗಳಿಗೆ ತಿಳಿಸಿ, ವಿದ್ಯಾದಶಮಿಯ ಶುಭದಿನ ಮಗಳನ್ನು ಸಂಗೀತ ತರಗತಿಗೆ ಸೇರಿಸಿದರು. ಅವಳು ‘ಲಂಬೋದರ ಲಕುಮಿಕರ...’ ಗೀತೆಯನ್ನು ಪುಟ್ಟ ಬಾಯಿಯಲ್ಲಿ ಹಾಡುತ್ತಿದ್ದರೆ, ಗೋಪಾಲಯ್ಯನವರ ಮನ ಪುಳಕಗೊಳ್ಳುತ್ತಿತ್ತು. ಮಗಳಿಗೆ ಸಂಗೀತ ಶಿಕ್ಷಣ ಕೊಡಿಸುತ್ತಿದ್ದ ಗೋಪಾಲಯ್ಯನವರು ಮಗಳನ್ನು ಶಾಲೆಗೆ ಸೇರಿಸಲಿಲ್ಲ. ಶಾಲೆಯ ವಿದ್ಯಾಭ್ಯಾಸದ ಮಹತ್ವ ಅವರಿಗೆ ತಿಳಿದಿರಲಿಲ್ಲ. ನಾಲ್ಕನೇ ತರಗತಿವರೆಗೆ ಬಹಳ ಕಷ್ಟಪಟ್ಟು ಕಲಿತಿದ್ದ ಗಂಡುಮಕ್ಕಳಿಬ್ಬರೂ ಆ ಬಳಿಕ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು. ಮನೆಯಲ್ಲಿ ಶಾಲೆಗೆ ಹೋಗಿ ಕಲಿಯುವವರು ಯಾರೂ ಇಲ್ಲದ್ದರಿಂದ ಮಗಳನ್ನು ಶಾಲೆಗೆ ಕಳಿಸಬೇಕೆಂಬ ಯೋಚನೆಯೇ ಅವರಿಗೆ ಬಂದಿರಲಿಲ್ಲ. ಅಂತಹ ಯೋಚನೆ ಬಂದಿದ್ದರೆ ತಮ್ಮ ಮುದ್ದು ಮಗಳಿಗೆ

ಖಂಡಿತವಾಗಿಯೂ ಶಿಕ್ಷಣ ಕೊಡಿಸುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಸಂಗೀತವನ್ನು ಬಹಳ ಇಷ್ಟಪಟ್ಟು ಕಲಿಯುತ್ತಿದ್ದ ಕನ್ನಿಕಾ, ಸಂಗೀತ ತರಗತಿ ಸೇರಿಕೊಂಡ ಮೂರು ವರ್ಷಗಳಲ್ಲಿಯೇ ಸುಶ್ರಾವ್ಯವಾಗಿ ಹಾಡುವುದನ್ನು ಕಲಿತುಕೊಂಡಳು. ಸಂಗೀತ ಮೇಷ್ಟರ ಮೆಚ್ಚಿನ ಶಿಷ್ಯೆಯೆಂದು ಗುರುತಿಸಿಕೊಂಡಳು.

ಕಾಲ ಬಹಳ ವೇಗವಾಗಿಯೇ ಚಲಿಸುತ್ತಿತ್ತು. ಈಗ ಕನ್ನಿಕಾಳಿಗೆ ಎಂಟು ವರ್ಷಗಳಾಗಿದ್ದವು. ಅಪ್ಪನ ಕಾಳಜಿಯ ನೆರಳಲ್ಲಿ ಸಂಗೀತಾಭ್ಯಾಸ ಮಾಡುತ್ತಾ, ಆಕೆ ಖುಷಿಖುಷಿಯಿಂದ ಇದ್ದ ಸಮಯವದು. ಆ ಸಮಯದಲ್ಲಿಯೇ ಗೋಪಾಲಯ್ಯನವರು ಮಲೆನಾಡಿನ ಕಡೆಗೆ ಪ್ರಯಾಣ ಬೆಳೆಸುವ ಉತ್ಸಾಹ ತೋರಿಸಿದ್ದರು. ಅವರ ಈ ಉತ್ಸಾಹಕ್ಕೆ ಕಾರಣವಾದದ್ದು ಭೋಜ ಶೆಟ್ಟರ ಮಾತು.

ಆ ಸಂಜೆ ಗೋಪಾಲಯ್ಯನವರು ಮಗಳು ಕನ್ನಿಕಾಳನ್ನು ಬಳಿಯಲ್ಲಿಯೇ ಕೂರಿಸಿಕೊಂಡು ವೀರಪ್ಪನ ಅಂಗಡಿಯ ಎದುರಿನ ಬೆಂಚಿನಲ್ಲಿ ಊರವರೊಂದಿಗೆ ಹರಟುತ್ತಾ ಕುಳಿತಿದ್ದರು. ಆಗ ಅಲ್ಲಿಗೆ ಬಂದಿದ್ದ ಭೋಜ ಶೆಟ್ಟರು ಗೋಪಾಲಯ್ಯನವರಿಗೆ ವಿನೀತನಾಗಿ ಕೈಮುಗಿದು, ಅವರ ಸಮೀಪವೇ ಬಂದು ಕುಳಿತಿದ್ದರು. ಭೋಜ ಶೆಟ್ಟರೆಂದರೆ ಅವರಿರುವ ಊರಿನಲ್ಲಿ ಮಾತ್ರವಲ್ಲ, ಸುತ್ತ ಹತ್ತೂರಿನಲ್ಲಿಯೂ ಪ್ರಸಿದ್ಧಿ ಪಡೆದಿದ್ದ ಮನುಷ್ಯ. ಅವನ ತಂದೆ ಯಕ್ಷಗಾನ ಮೇಳವನ್ನು ಆರಂಭಿಸಿ, ಕೈ ಸುಟ್ಟುಕೊಂಡಿದ್ದರು. ತಂದೆ ಅನುಭವಿಸಿದ ನಷ್ಟ ಭೋಜ ಶೆಟ್ಟರನ್ನು ಯಕ್ಷಗಾನದಿಂದ ದೂರ ಉಳಿಸಲಿಲ್ಲ. ಬದಲಿಗೆ ತನ್ನಪ್ಪ ಸಾಧಿಸದ್ದನ್ನು ತಾನು ಸಾಧಿಸಬೇಕು ಎನ್ನುವ ಹಠವನ್ನು ಭೋಜ ಶೆಟ್ಟರಲ್ಲಿ ಮೂಡಿಸಿತು. ತಂದೆಯಂತೆಯೇ ಮಗ ಭೋಜ ಶೆಟ್ಟರೂ ಕೂಡಾ ಊರಿನ ಉತ್ಸಾಹಿ ಜನರನ್ನೆಲ್ಲಾ ಕಲೆಹಾಕಿಕೊಂಡು ಹವ್ಯಾಸಿ ಎನ್ನಬಹುದಾದ ಯಕ್ಷಗಾನ ತಂಡವೊಂದನ್ನು ನಡೆಸುತ್ತಿದ್ದರು. ಆಗಾಗ ಜಿಲ್ಲೆಯ ಪ್ರಸಿದ್ಧ ಕಲಾವಿದರನ್ನು ಊರಿಗೆ ಕರೆಸಿ, ಯಕ್ಷಗಾನ ಪ್ರದರ್ಶನ ನಡೆಸುತ್ತಿದ್ದರು. ಹೀಗೆ ಆ ಊರಿನವರ ಪಾಲಿಗೆ ಯಕ್ಷಗಾನ ಎಂದರೆ ಭೋಜ ಶೆಟ್ಟರು, ಭೋಜ ಶೆಟ್ಟರೆಂದರೆ ಯಕ್ಷಗಾನ ಎಂಬಂತಾಗಿತ್ತು.

ಗೋಪಾಲಯ್ಯನವರಲ್ಲಿ ಅದೂ ಇದೂ ಮಾತನಾಡುತ್ತಾ, ಭೋಜ ಶೆಟ್ಟರು ಮುಂದಿನ ತಿಂಗಳು ಮಲೆನಾಡಿನಲ್ಲಿ ನಡೆಯಲಿರುವ ಯಕ್ಷಗಾನ ಪ್ರದರ್ಶನಕ್ಕೆ ಸೂಕ್ತ ಕಲಾವಿದನನ್ನು ತಲಾಷ್ ಮಾಡುತ್ತಿರುವುದಾಗಿ ತಿಳಿಸಿದ್ದರು. ಅವರು ಕಲಾವಿದನನ್ನು ಹುಡುಕುತ್ತಿರುವುದು ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರಸಂಗದ ಮಹಿಷಾಸುರನ ಪಾತ್ರಕ್ಕೆ ಎನ್ನುವುದನ್ನು ತಿಳಿದೊಡನೆ, ಸುಮಾರು ಒಂದೂವರೆ ವರ್ಷಗಳಿಂದ ತಡೆಹಿಡಿದಿದ್ದ ಆಸೆ ಗೋಪಾಲಯ್ಯನವರಲ್ಲಿ ಮೊಳಕೆಯೊಡೆಯಲಾರಂಭಿಸಿತ್ತು. ಯಕ್ಷಗಾನ, ತಾಳಮದ್ದಲೆ ಎಂದು ಯಾವಗಲೂ ಕನವರಿಸುತ್ತಿದ್ದ ಅವರಿಗೆ ಕನ್ನಿಕಾಳನ್ನು ನೋಡಿಕೊಳ್ಳುವ ಜವಾಬ್ದಾರಿ ಬಂದಮೇಲೆ ವೇದಿಕೆಯ ಕಡೆಗೆ ತಲೆಹಾಕಲೂ ಸಾಧ್ಯವಾಗಿರಲಿಲ್ಲ. ಈಗ ಈ ಪ್ರದರ್ಶನದಲ್ಲಿ ಭಾಗವಹಿಸಲೇಬೇಕು ಎಂಬ ಆಸೆ ಅವರಲ್ಲಿ ಬಲವಾಗಿತ್ತು. ಮಹಿಷಾಸುರ ಪಾತ್ರ ಅವರಿಗೆ ತುಂಬಾ ಮೆಚ್ಚುಗೆಯಾದ ಪಾತ್ರ. ಘಟಾನುಘಟಿ ಸಭಿಕರಿಂದಲೇ ತುಂಬಿ ತುಳುಕುವ ಪರವೂರಿನ ವೇದಿಕೆಯಲ್ಲಿ ವಿಜೃಂಭಿಸುವುದು ಅವರ ಕನಸಾಗಿತ್ತು. ತಾನೇ ಆ ಪಾತ್ರವನ್ನು ನಿಭಾಯಿಸುವುದಾಗಿ ಭೋಜ ಶೆಟ್ಟರಿಗೆ ತಿಳಿಸಿದ ಗೋಪಾಲಯ್ಯ ಖುಷಿಖುಷಿಯಿಂದ ಮನೆಗೆ ಮರಳಿದರು.

ಮಲೆನಾಡಿಗೆ ಹೋಗಿ ಬರುವ ಒಂದು ವಾರದ ಅವಧಿಯಲ್ಲಿ ಮಗಳನ್ನು ನೋಡಿಕೊಳ್ಳುವ ಹೊಣೆಯನ್ನು ತನ್ನ ತಂಗಿಗೆ ವಹಿಸಿದರು. ಅದಕ್ಕಾಗಿಯೇ ಭಾವನ ಅನುಮತಿ ಪಡೆದು ಆಕೆಯನ್ನು ತಮ್ಮ ಮನೆಗೆ ಕರೆತಂದರು. ತನ್ನಮ್ಮನಿಂದ ಮಗಳಿಗೆ ಏನೂ ತೊಂದರೆಯಾಗುವುದಿಲ್ಲ ಎಂಬ ನಿರಾಳತೆಯೊಂದಿಗೆ ಮನೆಯಿಂದ ಹೊರಟರು.

ಮಲೆನಾಡಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಗೋಪಾಲಯ್ಯನವರ ಪಾತ್ರನಿರ್ವಹಣೆ ಬಲು ಅಚ್ಚುಕಟ್ಟಾಗಿತ್ತು. ಮಹಿಷಾಸು ಎಂದರೆ ಥೇಟ್ ಮಹಿಷಾಸುರನೇ! ಮಹಿಷಾಸುರನನ್ನೇ ಕಂಡಂತಹ ಅನುಭವ ಸಭಾಸದರದ್ದಾಗಿತ್ತು. ಸ್ವರ್ಗವನ್ನು ಗೆದ್ದು, ಕಲಾರಸಿಕರ ಚಪ್ಪಾಳೆ- ಶಿಳ್ಳೆಗಳನ್ನು ಜೇಬಿಗಿಳಿಸಿಕೊಂಡ ಗೋಪಾಲಯ್ಯನವರು ಬಹುಸಂತೋಷದಿಂದ ಚೌಕಿಗೆ ಬಂದರು. ಚಳಿಯಿಂದ ಮುಕ್ತಿ ಪಡೆಯುವುದಕ್ಕಾಗಿ ಬೀಡಿಯನ್ನು ಸೇದಿ, ಮೂತ್ರ ಮಾಡುವುದಕ್ಕಾಗಿ ಚೌಕಿ ಸಮೀಪದ ಕತ್ತಲಿನ ಭಾಗಕ್ಕೆ ಹೋದ ಗೋಪಾಲಯ್ಯನವರು ಮತ್ತೆ ಚೌಕಿಗೆ ಮರಳಲಿಲ್ಲ. ಕತ್ತಲಿನಲ್ಲಿ ಗಮನಿಸದೆ

ಹದಿನೈದು ಅಡಿ ಎತ್ತರದ ಪ್ರಪಾತದ ಕಡೆಗೆ ಹೆಜ್ಜೆಯಿರಿಸಿದ ಅವರು ಅಲ್ಲೇ ಪ್ರಾಣ ಕಳೆದುಕೊಂಡರು. ಉಳಿದ ಕಲಾವಿದರ ಗಮನಕ್ಕೆ ಬರುವ ಹೊತ್ತಿಗೆ ಅವರು ಉಸಿರು ನಿಲ್ಲಿಸಿ ಬಹಳ ಸಮಯವಾಗಿತ್ತು. ನಗುಮುಖ ಹೊತ್ತು ಮನೆಯಿಂದ ಹೊರಟಿದ್ದ ಗೋಪಾಲಯ್ಯನವರು ಮತ್ತೆ ಮನೆಗೆ ಮರಳಿದ್ದು ಶವವಾಗಿ.

ತಂದೆ ಗೋಪಾಲಯ್ಯನವರು ನಿಧನರಾದ ಬಳಿಕ ಕನ್ನಿಕಾಳ ಪರಿಸ್ಥಿತಿ ಕೇಳುವವರೇ ಇಲ್ಲದಂತಾಗಿತ್ತು. ಆಕೆಯ ನೋವಿಗೆ ಸ್ಪಂದಿಸುವವರು ಯಾರೂ ಇರಲಿಲ್ಲ. ಅಪ್ಪ ಇಲ್ಲವೆಂದು ಅವಳು ಅಳುತ್ತಿದ್ದರೆ ಲಕ್ಷ್ಮಮನವರು ಕೋಪದಿಂದ ಅವಳ ಬಾಯಿ ಮೇಲೆ ಬಾರಿಸುತ್ತಿದ್ದರು. ಜೋಯಿಸರು ಹೇಳಿದ ಮಾತನ್ನು ರುಜುವಾತುಪಡಿಸುವುದಕ್ಕೆ ನೆವ ಹುಡುಕುತ್ತಿದ್ದ ಅವರಿಗೆ ಮೊದಲೇ ತೂಕಡಿಸುತ್ತಿದ್ದವರಿಗೆ ಹಾಸಿಗೆ ಹಾಸಿಕೊಟ್ಟಂತಾಯಿತು. ಕನ್ನಿಕಾಳ ಕಾರಣದಿಂದಲೇ ತನ್ನ ಮಗ ತೀರಿಹೋದದ್ದು ಎಂದು ದಿವಸಕ್ಕೆ ಹತ್ತು ಸಲ ಹೇಳಿ, ಕನ್ನಿಕಾಳ ತಲೆಯ ಮೇಲೆ ಮೊಟಕುತಿದ್ದರು. ಮನೆಗೆ ಬಂದಬಂದವರಲ್ಲೆಲ್ಲಾ ಈ ವಿಷಯವನ್ನು ಹೇಳಿ, ಕನ್ನಿಕಾಳ ಕಡೆಗೆ ನೋಡಿ ಮೂತಿ ತಿವಿಯುತ್ತಿದ್ದರು. ಎಳೆಯ ವಯಸ್ಸಿನಲ್ಲಿಯೇ ಅಂತಹ ಮಾತುಗಳನ್ನು ಕೇಳಿಸಿಕೊಂಡ ಕನ್ನಿಕಾಳಲ್ಲಿ ಅವಳಿಗರಿವಿಲ್ಲದೆಯೇ ಅಪರಾಧಿ ಪ್ರಜ್ಞೆಯೊಂದು ರೂಪುಗೊಳ್ಳತೊಡಗಿತು. ತನ್ನಪ್ಪನ ಸಾವಿಗೆ ತಾನೇ ಕಾರಣಳು ಎನ್ನುವ ಯೋಚನೆ ಅವಳ ಪುಟ್ಟ ಮೆದುಳಿನಲ್ಲಿ ಹಂತಹಂತವಾಗಿ ಪ್ರತಿಷ್ಠಾಪನೆಗೊಳ್ಳಲಾರಂಭಿಸಿತ್ತು. ತಾನು ಅಪ್ಪನ ಸಾವಿಗೆ ಕಾರಣಳಾದ ಪಾಪಿ ಎಂಬ ಭಾವನೆ ಅವಳ ಸುಪ್ತಪ್ರಜ್ಞೆಯಲ್ಲಿ ಸ್ಥಾನ ಪಡೆದುಕೊಂಡಿತು. ಪರಿಣಾಮವಾಗಿ ಆಕೆ ಸಣ್ಣಪುಟ್ಟ ಸಮಸ್ಯೆಗಳಿಗೂ ಅಳುತ್ತಾ ಮೂಲೆ ಸೇರಿಕೊಳ್ಳುವ ಸೂಕ್ಷ್ಮಮತಿಯಾದಳು. ತನ್ನ ಭಾವನೆ- ಚಿಂತನೆಗಳನ್ನು ತನ್ನಲ್ಲಿಯೇ ಅದುಮಿಟ್ಟುಕೊಳ್ಳುವ ಅಂತರ್ಮುಖಿಯಾದಳು.

ಈಗ ಲಕ್ಷ್ಮಮ ಅವಳ ಪಾಲಿಗೆ ಅಕ್ಷರಶಃ ರಾಕ್ಷಸಿಯಾಗಿದ್ದಳು. ಬೆಕ್ಕು ಹಾಲಿನ ಗಡಿಗೆಯನ್ನು ಬೀಳಿಸಿದರೆ ಅದಕ್ಕೆ ಕನ್ನಿಕಾಳೇ ಹೊಣೆ. ಮನೆಯ ನಾಯಿ ಜೋರಾಗಿ ಬೊಗಳಿದರೆ ಅದಕ್ಕೂ ಅವಳೇ ಜವಾಬ್ದಾರಳು. ಹಟ್ಟಿಯ ದನ ‘ಅಂಬಾ ಅಂಬಾ’ ಎಂದು ನಾಲ್ಕಕ್ಕಿಂತ ಹೆಚ್ಚು ಸಲ ಕೂಗು ಹಾಕಿದರೆ ಅದಕ್ಕೂ ಕಾರಣ ಕನ್ನಿಕಾ. ಬಿಸಿಲು ಅತಿಯಾದರೆ, ಮಳೆ ಬಾರದಿದ್ದರೆ ಎಲ್ಲದಕ್ಕೂ ಅವಳೇ ಕಾರಣ. ಒಟ್ಟಾರೆ ಲಕ್ಷ್ಮಮನಿಗೆ ಕನ್ನಿಕಾಳ ಮೇಲಿನ ಕೋಪ ತೀರಿಸಿಕೊಳ್ಳುವುದಕ್ಕೆ ಕಾರಣಗಳು ಬೇಕಿತ್ತು, ಅಷ್ಟೇ. ಅಜ್ಜಿ ಪದೇ ಪದೇ ಕನ್ನಿಕಾಳನ್ನು ಬೈಯ್ಯುವುದು, ಹೊಡೆಯುವುದನ್ನು ಕಂಡಿದ್ದ ಕೇಶವ, ಶಂಕರರಿಗೂ ತಮ್ಮ ತಂಗಿಯ ಬಗ್ಗೆ ತಿರಸ್ಕಾರದ ಭಾವನೆ ರೂಪುಗೊಂಡಿತ್ತು. ತಂದೆಯ ಸಾವಿಗೆ ಅವಳೇ ಕಾರಣ ಎಂದು ಅವರೂ ಬಲವಾಗಿ ನಂಬಿಕೊಂಡಿದ್ದರು. ತಂಗಿಯ ಮೇಲೆ ಬಲ ಪ್ರಯೋಗಿಸುವ ಹಕ್ಕು ತಮಗೂ ಇದೆ ಎನ್ನುವಂತೆ ವರ್ತಿಸತೊಡಗಿದ್ದರು.

ಹೀಗೆ ಶಿಶುವಾಗಿದ್ದಾಗಿನಿಂದಲೂ ಕಷ್ಟಗಳ ಬೆಂಕಿಯಲ್ಲಿ ಬೆಂದ ಕನ್ನಿಕಾ ಹದಿನೆಂಟರ ಹರೆಯಕ್ಕೆ ಕಾಲಿಟ್ಟಾಗ ಅವಳ ಬದುಕು ಮತ್ತೊಂದು ಆಯಾಮವನ್ನು ಪಡೆದುಕೊಂಡಿತು. ಲಕ್ಷ್ಮಮ ಅದಾಗಲೇ ತೀರಿಕೊಂಡಿದ್ದರು. ಮೀಸೆ ಮೂಡಿರುವ ತರುಣರಾಗಿದ್ದ ಅವಳ ಅಣ್ಣಂದಿರಾದ ಕೇಶವ, ಶಂಕರರಿಗೆ ಹದಿನೆಂಟು ತುಂಬಿದ ಕನ್ನಿಕಾ ಇನ್ನೂ ಮದುವೆ ಆಗದೆ ತವರು ಮನೆಯಲ್ಲಿಯೇ ಇರುವುದು ಬಗಲಲ್ಲಿ ಕೆಂಡವನ್ನು ಇರಿಸಿಕೊಂಡ ಅನುಭವವನ್ನು ಮೂಡಿಸತೊಡಗಿತ್ತು. ಹೇಗಾದರೂ ಮಾಡಿ ಅವಳ ಮದುವೆ ಮಾಡಿ ಅವಳನ್ನು ಮನೆಯಿಂದ ಸಾಗಹಾಕಬೇಕೆನ್ನುವ ಇಚ್ಛೆ ಅವರಿಬ್ಬರಲ್ಲಿಯೂ ಇತ್ತು. ಅವಳ ಮದುವೆಯೊಂದನ್ನು ಮುಗಿಸಿಬಿಟ್ಟರೆ, ಆ ಬಳಿಕ ತಾವೂ ಮದುವೆಯಾಗಿ ಜೀವನದಲ್ಲಿ ನೆಲೆಗೊಳ್ಳಬಹುದು ಎನ್ನುವುದು ಅವರ ಯೋಚನೆಯಾಗಿತ್ತು. ನಾಲ್ಕೈದು ಮಂದಿ ದಲ್ಲಾಳಿಗಳಲ್ಲಿ ತಮ್ಮ ತಂಗಿಗೆ ಯಾವುದಾದರೊಂದು ಗಂಡು ಹುಡುಕಿಕೊಡುವಂತೆ ಮನವಿಯನ್ನೂ ಮಾಡಿಕೊಂಡಿದ್ದರು. ಗಂಡು ಎಂಥವನಾದರೂ ಪರವಾಗಿಲ್ಲ, ತಂಗಿಯ ಮದುವೆ ಮುಗಿದರೆ ಸಾಕು ಎಂದು ಅಂದುಕೊಂಡಿದ್ದರು ಅವರಿಬ್ಬರು.

ಅವರ ಯೋಚನೆಗೆ ತಕ್ಕಂತಹ ಸಂಬಂಧವೊಂದು ಒದಗಿಬಂತು. ಹುಡುಗನ ಹೆಸರು ಗಿರಿಧರ. ವಯಸ್ಸು ಮೂವತ್ತೇಳು ದಾಟಿತ್ತು. ಅವನಿಗಿದು ಎರಡನೇ ಮದುವೆ. ಅಸ್ತಮಾ ಕಾಯಿಲೆಯಿಂದ ನರಳುತ್ತಿದ್ದ ಮೊದಲ ಹೆಂಡತಿ ಅದಾಗಲೇ ತೀರಿಕೊಂಡಿದ್ದಳು. ಮಕ್ಕಳಿರಲಿಲ್ಲ. ಸಾಧ್ಯವಾದಷ್ಟು ಬೇಗ ಕನ್ನಿಕಾಳನ್ನು ಮನೆಯಿಂದ ಹೊರದಬ್ಬುವುದಕ್ಕೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಅವಳ ಅಣ್ಣಂದಿರಿಗೆ ಸಂತಸವಾಗಿತ್ತು. ಕನ್ನಿಕಾಳಿಗೆ ಈ ಮದುವೆ ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಅವಳ

ಅಭಿಪ್ರಾಯವನ್ನು ಕೇಳುವವರು ಯಾರೂ ಇರಲಿಲ್ಲ. ಮದುವೆ ಆಗುವುದಕ್ಕೆಂದು ಬಂದ ಗಂಡನೂ ಅವಳನ್ನು ಮಾತಾಡಿಸಲಿಲ್ಲ. ಮದುವೆ ಮಾಡಿಕೊಡುವ ಅಣ್ಣಂದಿರಿಗಂತೂ ಅವಳ ಮನಸ್ಸನ್ನು ಅರಿತುಕೊಳ್ಳಬೇಕೆಂಬ ಕನಿಷ್ಠ ಪ್ರಜ್ಞೆಯೇ ಇರಲಿಲ್ಲ. ತನಗೆ ಸೇರಿದ ವಸ್ತುವನ್ನು ಬೇರೊಬ್ಬರಿಗೆ ಮಾರಾಟ ಮಾಡುವ ವ್ಯಾಪಾರಿಯಂತೆ ಅವಳ ಅಣ್ಣಂದಿರು, ಆ ವಸ್ತುವನ್ನು ಖರೀದಿಸುವ ಗ್ರಾಹಕರಂತೆ ಹುಡುಗನ ಕಡೆಯವರು ನಡೆದುಕೊಂಡರು. ಹುಡುಗನ ಕಡೆಯವರು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡ ಅವಳ ಅಣ್ಣಂದಿರು ಆದಷ್ಟು ಶೀಘ್ರವಾಗಿ ತಂಗಿಯ ಮದುವೆ ಮಾಡಿ ಕೈ ತೊಳೆದುಕೊಂಡರು.

ಮದುವೆ ಆದ ಬಳಿಕ ಕನ್ನಿಕಾಳ ಬದುಕಿನ ಇನ್ನೊಂದು ಅಧ್ಯಾಯ ಶುರುವಾಯಿತು. ಅವಳು ಸೇರಿಕೊಂಡ ಮನೆ ತುಂಬು ಕುಟುಂಬವಾಗಿತ್ತು. ಮಕ್ಕಳೆಲ್ಲಾ ಸೇರಿ ಮನೆಯ ತುಂಬ ಹನ್ನೆರಡು ಮಂದಿ ಇದ್ದರು. ಬಾವಿಯಲ್ಲಿದ್ದ ಮೀನನ್ನು ಸಮುದ್ರಕ್ಕೆ ಎಸೆದಂತಾಯಿತು. ಅಣ್ಣಂದಿರ ಜೊತೆಗೆ ಬೆಳೆದಿದ್ದ ಅವಳಿಗೆ ಇದ್ದಕ್ಕಿದ್ದ ಹಾಗೆಯೇ ಅಷ್ಟು ಜನರನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿತ್ತು. ಆದರೂ ಅವಳೇನೂ ಧೃತಿಗೆಡಲಿಲ್ಲ. ತವರಲ್ಲಿ ಅಡುಗೆ ಕೆಲಸದಿಂದ ತೊಡಗಿ ಎಲ್ಲವನ್ನೂ ನಿರ್ವಹಿಸಿ ಅನುಭವ ಇದ್ದದ್ದರಿಂದ ಆ ಅನುಭವದ ಆಧಾರದಲ್ಲಿಯೇ ಮನೆಗೆಲಸಗಳನ್ನೆಲ್ಲಾ ಬಲು ನಿಷ್ಠೆಯಿಂದ ನಿಭಾಯಿಸತೊಡಗಿದಳು.

ಬದಲಾದ ಪರಿಸರ ಅವಳ ಮನಸ್ಸಿನ ಏಕತಾನತೆಯನ್ನು ದೂರಮಾಡಿತ್ತು. ಅವಮಾನ, ಅನುಮಾನ, ಬೈಗುಳಗಳನ್ನೇ ತವರಿನಲ್ಲಿ ಅನುಭವಿಸಿದ್ದ ಅವಳಿಗೆ ಮದುವೆ ಆಗುವ ಸಂದರ್ಭದಲ್ಲಿ ತನ್ನ ಬದುಕು ಬದಲಾಗುತ್ತದೆ ಎಂಬ ನಿರೀಕ್ಷೆಯಿತ್ತು. ತಾನೂ ಉಳಿದವರಂತೆ ನಗುನಗುತ್ತಾ ಜೀವನ ಸಾಗಿಸಬೇಕೆಂಬ ಕನಸು ಅವಳಿಗಿತ್ತು. ಚಲನಚಿತ್ರದಲ್ಲಿ ಹೀರೋ ತನ್ನ ಮಡದಿಯನ್ನು ಬಲು ಪ್ರೀತಿಯಿಂದ ಮಾತನಾಡಿಸುವುದನ್ನು, ಮುದ್ದಿಸುವುದನ್ನು ನೋಡಿದ ನೆನಪು ಆಕೆಗಿತ್ತು. ತನ್ನ ಗಂಡನೂ ಹಾಗೆಯೇ ಇರುತ್ತಾನೆ. ಎಂದುಕೊಂಡಿದ್ದಳು ಅವಳು.

ಮದುವೆಯಾಗಿ ಎರಡು ತಿಂಗಳುಗಳು ಕಳೆದ ಬಳಿಕ ನೂತನ ದಂಪತಿಗಳ ಪ್ರಸ್ಥದ ಮುಹೂರ್ತವನ್ನು ಮನೆಯ ಹಿರಿಯರು ಗೊತ್ತುಮಾಡಿದ್ದರು. ಗಿರಿಧರನ ತಾಯಿ ಮತ್ತು ಅಕ್ಕ ಇಬ್ಬರೂ ಸೇರಿಕೊಂಡು ಕನ್ನಿಕಾಳನ್ನು ಅಲಂಕರಿಸಿ, ಮಲಗುವ ಕೋಣೆಯೊಳಕ್ಕೆ ಕಳುಹಿಸಿಕೊಟ್ಟರು.

ಕನ್ನಿಕಾಳ ಸಮೀಪಕ್ಕೆ ಬಂದ ಗಿರಿಧರ ಆಕೆಯ ತೋಳಿನ ಮೇಲೆ ಮೆತ್ತಗೆ ಕೈಯ್ಯಿಟ್ಟ. ಅವಳ ಬಾಹುಗಳನ್ನು ಬಳಸಿಕೊಂಡು ಮಂಚದ ಬಳಿಗೆ ಕರೆದೊಯ್ದ. ಅವಳ ಕೈಯ್ಯಲ್ಲಿದ್ದ ಹಾಲಿನ ಲೋಟವನ್ನು ತೆಗೆದುಕೊಂಡು “ನಮ್ಮಿಬ್ಬರ ನಡುವಿನ ಪ್ರೀತಿ ಈ ಹಾಲಿನಂತೆ ನಿಷ್ಕಲ್ಮಶವಾಗಿರಬೇಕು” ಎಂದು ಮೆಲುದನಿಯಲ್ಲಿ ನುಡಿದ. ತಾನು ಒಂದು ಗುಟುಕು ಹಾಲನ್ನು ಕುಡಿದು ಇವಳ ಕಡೆಗೆ ಲೋಟವನ್ನು ಚಾಚಿದ. ಇವಳು ಕುಡಿದು ಮುಗಿಸಿದ ಬಳಿಕ ಮತ್ತೆ ಲೋಟವನ್ನು ಪಡೆದುಕೊಂಡು ತಾನು ಕುಡಿದ. ಕಿವಿಯ ಬಳಿ ಬಾಯಿ ತಂದು ಪಿಸುಗುಟ್ಟಿದ “ನಿನಗೆ ನನ್ನ ಮೇಲೆ ಪ್ರೀತಿಯಿದೆ ತಾನೇ? ಎಷ್ಟು ಪ್ರೀತಿಯಿದೆ ಎಂದು ನನಗೆ ಈಗಲೇ ತಿಳಿಯಬೇಕು” ಅವನ ಬಿಸಿಯುಸಿರು ಕನ್ನಿಕಾಳ ಕೆನ್ನೆಯನ್ನು ಸೋಕಿ, ನಾಚಿಕೆಯ ಅಲೆಗಳನ್ನು ಎಬ್ಬಿಸಿತು. ಅವನ ಮುಖದ ಮೇಲಿದ್ದ ತುಂಟನಗು ಇವಳ ಅಂಗಾಂಗಗಳಲ್ಲಿ ಪುಳಕವನ್ನು ಪ್ರಚೋದಿಸತೊಡಗಿತ್ತು. ಅದ್ಯಾವುದೋ ಸಮ್ಮೋಹನಕ್ಕೆ ಒಳಗಾದವಳಂತೆ ಹಾಸಿಗೆ ಮೇಲೆ ಮೈಚಾಚಿದಳು. ಅವನ ಒಂದೊಂದು ಸಿಹಿಮುತ್ತಿಗೂ ಇವಳು ತೆರೆದುಕೊಳ್ಳುತ್ತಿದ್ದಳು. ಅವನಲ್ಲಿದ್ದ ಮೃದುತ್ವ ಇವಳ ಶರೀರದ ಮೃದುತ್ವವನ್ನೆಲ್ಲಾ ಬಿಗಿಗೊಳಿಸಿತ್ತು. ದುಂಬಿ ಹೂವಿನಿಂದ ಮಕರಂದವನ್ನು ಹನಿಹನಿಯಾಗಿ ಹೀರಿಕೊಳ್ಳುವಂತೆ ಅವನು ಇವಳ...

“ಯಾಕೆ ಅಲ್ಲೇ ನಿಂತಿದ್ದೀಯಾ? ಎಷ್ಟೊತ್ತು ಹಾಗೇ ನಿಂತಿರುತ್ತೀಯಾ? ಇಲ್ಲಿ ಬಾ” ಒರಟು ದನಿ ಅವಳನ್ನು ಎಚ್ಚರಿಸಿತು. ಅವಳಿಗೆ ಅರಿವಾಗಿತ್ತು, ತಾನು ಇದುವರೆಗೂ ಕಂಡದ್ದು ಕನಸು. ಗಿರಿಧರ ಇನ್ನೂ ಮಂಚದ ಮೇಲೆ ಕುಳಿತೇ ಇದ್ದಾನೆ. ಅವನು ತನ್ನ ಬಳಿಗೆ ಬಂದೇ ಇಲ್ಲ. ತನ್ನನ್ನು ಬಾಹುಗಳಲ್ಲಿ ಬಳಸಿಲ್ಲ. ಹಾಲನ್ನು ತಾವಿಬ್ಬರು ಹಂಚಿಕೊಂಡು ಕುಡಿದಿಲ್ಲ. ಅವನು ತನ್ನಲ್ಲಿ ಒಂದಾಗಿಲ್ಲ.

“ನಿನಗೆ ಕಿವಿ ಕೇಳಿಸುತ್ತದೆಯೋ ಇಲ್ಲವೋ? ಬಾ ಎಂದರೆ ಅಲ್ಲೇ ನಿಂತಿದ್ದೀಯಲ್ಲಾ ಕಿವುಡಿಯ ಹಾಗೆ!” ಅವನ ಬೈಗುಳ ಇವಳಲ್ಲಿ ಗಾಬರಿ ಹುಟ್ಟಿಸಿತು. ಗೊಂದಲಕ್ಕೆ ಒಳಗಾದವಳಂತೆ ತಕ್ಷಣ ಮಂಚದ ಬಳಿಗೆ ಹೋದವಳು ಹಾಲಿನ ಲೋಟವನ್ನು ಅವನೆಡೆಗೆ ಚಾಚಿದಳು. ಹಾಲಿನ ಲೋಟವನ್ನು ತೆಗೆದುಕೊಂಡವನು ಒಂದೇ ಸಲಕ್ಕೆ ಲೋಟದಲ್ಲಿದ್ದ ಹಾಲೆಲ್ಲವನ್ನೂ ಕುಡಿದು ಮುಗಿಸಿದ. “ಬಾ ಕುಳಿತುಕೋ” ಎಂದವನು “ಹ್ಮೂ, ಬಿಚ್ಚು” ಎಂದ. ಇವಳು ಏನೂ ಅರಿಯದವಳಂತೆ ಅತ್ತಿತ್ತ ನೋಡುತ್ತಿರಬೇಕಾದರೆ ಅವನೇ ಗಡುಸು ಗಡುಸಾಗಿ ಇವಳ ಬಟ್ಟೆ ಬಿಚ್ಚತೊಡಗಿದ. ತಾನೂ ಬೆತ್ತಲೆಯಾದ. ಅವನ ಕೈಯ್ಯ ಒರಟುತನ, ಮಾತಿನಲ್ಲಿದ್ದ ಜೋರುತನ ಇವಳನ್ನು ಮೆತ್ತಗಾಗಿಸಿತ್ತು. ಇವಳು ಶವದಂತೆ ಬಿದ್ದುಕೊಂಡಿದ್ದಳು. ಆಗುತ್ತಿರುವ ನೋವನ್ನು ಹೇಳಲು ಇವಳಿಗೆ ಧೈರ್ಯ ಸಾಲಲಿಲ್ಲ. ಇವಳ ಮೇಲೇರಿ ವಿಜೃಂಭಿಸುತ್ತಿದ್ದ ಅವನು ಇದ್ದಕ್ಕಿದ್ದಂತೆಯೇ ತನ್ನ ಮೆರೆದಾಟವನ್ನು ನಿಲ್ಲಿಸಿ, ಅದೇನೋ ಬೈದುಕೊಂಡು, ಹಾಸಿಗೆಯಿಂದಿಳಿದು ಆಚೆ ಹೋದ. ಇವಳೊಳಗು ಬೆಚ್ಚಗಾದಂತಾಗಿತ್ತು. ಅವನ್ಯಾಕೆ ಬೈಯ್ಯುತ್ತಿದ್ದಾನೆ ಎಂದು ಇವಳಿಗೆ ತಿಳಿಯಲಿಲ್ಲ. ಹಾಸಿಗೆ ಸಮೀಪದ ಕುರ್ಚಿಯಲ್ಲಿ ಕುಳಿತ ಆತ ಇವಳ ಕಡೆಗೆ ನೋಡುತ್ತಾ ಬೈಯ್ಯುತ್ತಿದ್ದ. ಒಂದರ ಹಿಂದೊಂದರಂತೆ ಮೂರು ಮೂರು ಬೀಡಿಯನ್ನು ಸೇದಿದ. ಅರ್ಧಗಂಟೆ ಕಳೆದಿತ್ತೇನೋ, ಮತ್ತೆ ಇವಳ ಕಡೆಗೆ ಬಂದವನು ಮೊದಲಿನಂತೆಯೇ ವಿಜೃಂಭಿಸತೊಡಗಿದ. ಇವಳಿಗದು ಬೇಡವಾಗಿತ್ತು. ಆದರೆ ಬಾಯ್ಬಿಟ್ಟು ಮುಕ್ತವಾಗಿ ಹೇಳಲಾಗದ ಭೀತಿ ಅವಳಲ್ಲಿತ್ತು. ಎರಡು ನಿಮಿಷಗಳಾಗಿದ್ದವಷ್ಟೇ, ಮತ್ತೆ ಹಾಸಿಗೆಯಿಂದ ಇಳಿದವನು “ನೀನು ಸಹಕರಿಸುತ್ತಿಲ್ಲ” ಎಂದು ಹೇಳಿ, ಅಶ್ಲೀಲವಾಗಿ ಅದೇನೋ ಬೈದು, ಕೋಣೆಯ ಬಾಗಿಲು ತೆರೆದು ಮೈಮೇಲೆ ಭೂತ ಆವಾಹನೆ ಆದ ರೀತಿಯಲ್ಲಿ ಹೊರಟುಹೋದ. ಅವನ್ಯಾವಾಗ ಮರಳಿ ಬಂದಾನೋ ಎಂಬ ಭಯ ಅರ್ಧ- ಮುಕ್ಕಾಲು ಗಂಟೆಗೊಮ್ಮೆ ಕನ್ನಿಕಾಳನ್ನು ಎಚ್ಚರಗೊಳಿಸುತ್ತಿತ್ತು. ಅರೆನಿದ್ರೆಯಲ್ಲಿಯೇ ಅವಳ ಆ ರಾತ್ರಿ ಕಳೆದುಹೋಯಿತು. ಆ ಬಳಿಕ ಬಂದ ಎಲ್ಲಾ ರಾತ್ರಿಗಳೂ ಕೂಡಾ ಮೊದಲ ರಾತ್ರಿಯ ಪುನರಾವರ್ತನೆಯೇ ಆಗಿತ್ತು, ಅವಳ ಪಾಲಿಗೆ. ರಾತ್ರಿಯಿಂದ ರಾತ್ರಿಗೆ ಅವಳ ಗಂಡನೊಳಗಿದ್ದ ಅಸಹನೆ, ಅಸಮಾಧಾನ, ಅತೃಪ್ತಿ ಅಧಿಕಗೊಳ್ಳಲಾರಂಭಿಸಿದ್ದವು. ಅತೃಪ್ತಿ ಹೊಂದಿದ ಆತ ಆ ಕೋಪವನ್ನು ಇವಳ ಮೇಲೆ ವ್ಯಕ್ತಪಡಿಸುತ್ತಿದ್ದ. ಇದರಿಂದಾಗಿ ರಾತ್ರಿಯಾದ ತಕ್ಷಣವೇ ಆಕೆಯ ಕೈಕಾಲುಗಳಲ್ಲಿ ನಡುಕ ಹುಟ್ಟುತ್ತಿತ್ತು.

ಇಂತಹ ನೀರಸವಾದ ಬದುಕನ್ನು ನಡೆಸುತ್ತಿರುವಾಗಲೇ ಅದೊಂದು ಒಳ್ಳೆಯ ಯೋಚನೆ ಕನ್ನಿಕಾಳ ಮನಸ್ಸಿನಲ್ಲಿ ಚಿಗುರಲಾರಂಭಿಸಿತು. ಆ ಯೋಚನೆ- ತಾನು ಓದುವುದನ್ನು, ಬರೆಯುವುದನ್ನು ಕಲಿಯಬೇಕು. ಈ ಯೋಚನೆ ಅವಳಲ್ಲಿ ಉದ್ಭವಿಸಲು ಕಾರಣ ಗಿರಿಧರನ ಅಣ್ಣನ ಮಗಳಾಗಿದ್ದ ಸುಮಾ. ಆಕೆ ಏಳನೇ ತರಗತಿ ಕಲಿಯುತ್ತಿದ್ದಳು. ತನ್ನ ಪಾಠಪುಸ್ತಕದಲ್ಲಿದ್ದ ಯಾವುದೋ ಒಂದು ಗದ್ಯಭಾಗವನ್ನು ಓದಿಹೇಳುವಂತೆ ಆಕೆ ಕನ್ನಿಕಾಳಲ್ಲಿ ಕೇಳಿಕೊಂಡಿದ್ದಳು. ಆದರೆ ಶಿಕ್ಷಣವನ್ನೇ ಪಡೆಯದ ಇವಳಿಗೆ ಆ ಗದ್ಯಭಾಗದ ಒಂದಕ್ಷರವನ್ನೂ ಓದಲು ಸಾಧ್ಯವಾಗಿರಲಿಲ್ಲ. ಸುಮಾಳಿಗೆ ಏನನ್ನಿಸಿತೋ ಏನೋ, ಆ ದಿವಸದಿಂದಲೇ ತನ್ನ ಚಿಕ್ಕಮ್ಮಳಿಗೆ ಓದುವುದನ್ನು, ಬರೆಯುವುದನ್ನು ಕಲಿಸುವ ಉತ್ಸಾಹ ತೋರಿಸಿದ್ದಳು. ಕನ್ನಿಕಾಳಿಗೂ ಈ ವಿಷಯ ಇಷ್ಟವಾಗಿತ್ತು. ಬಾಲ್ಯದಿಂದಲೂ ಆಕೆಗೆ ವಿದ್ಯಾಭ್ಯಾಸದ ಕಡೆಗೆ ಒಲವಿತ್ತು. ಆದರೆ ತಾನೂ ವಿದ್ಯಾಭ್ಯಾಸವನ್ನು ಪಡೆಯಬಹುದು ಎನ್ನುವ ವಿಚಾರವೇ ಆಕೆಗೆ ತಿಳಿದಿರಲಿಲ್ಲ. ಈಗ ಸುಮಾ ಹೇಳಿದ ವಿಚಾರ, ಅಗಾಧ ನೋವಿನ ಮಧ್ಯೆ ಕನ್ನಿಕಾಳಿಗೆ ಒಂದಷ್ಟು ಸಂತಸವನ್ನು ನೀಡಿತು.

ಸುಮಾ ಹೇಳಿದ ಆ ದಿನದಿಂದಲೇ ಅಕ್ಷರ ಕಲಿಯಲು ಆರಂಭಿಸಿದಳು ಕನ್ನಿಕಾ. ಮನೆಗೆಲಸವನ್ನೆಲ್ಲಾ ಬಹಳ ಚುರುಕಿನಿಂದ ಮಾಡಿ ಮುಗಿಸುತ್ತಿದ್ದ ಕನ್ನಿಕಾ ಸಂಜೆಯ ಸಮಯಕ್ಕೆ ಸುಮಾ ಶಾಲೆಯಿಂದ ಬರುವಾಗ ಸ್ಲೇಟು, ಬಳಪದ ಕಡ್ಡಿಯನ್ನು ಹಿಡಿದುಕೊಂಡು ಸಿದ್ಧಳಾಗಿ ಕುಳಿತಿರುತ್ತಿದ್ದಳು. ಸುಮಾ ಕಲಿಸಿಕೊಟ್ಟದ್ದನ್ನು ಕಲಿಯುವುದರಲ್ಲಿ ಕೆಲವೊಮ್ಮೆ ಕನ್ನಿಕಾ ತುಂಬಾ ಹಿಂದುಳಿಯುತ್ತಿದ್ದರೆ, ಕೆಲವು ಬಾರಿ ಬಹಳ ಬೇಗ ಹೇಳಿದ್ದೆಲ್ಲವನ್ನೂ ಅರ್ಥೈಸಿಕೊಳ್ಳುತ್ತಿದ್ದಳು. ತಾನೀಗ ಶಿಕ್ಷಣ ಪಡೆಯುತ್ತಿದ್ದೇನೆ ಎಂಬ ವಿಷಯ ಕನ್ನಿಕಾಳಲ್ಲಿ ಹೆಮ್ಮೆಯ ಭಾವವನ್ನು ಮೂಡಿಸಿತ್ತು. ತನಗಿಂತಲೂ ಅದೆಷ್ಟೋ ವರ್ಷ ದೊಡ್ಡವಳಾಗಿರುವ ತನ್ನ ಚಿಕ್ಕಮ್ಮಳಿಗೆ ತಾನು ಕಲಿಸುತ್ತಿದ್ದೇನೆ ಎಂಬ ವಿಷಯ ಸುಮಾಳಲ್ಲಿ ಕುತೂಹಲವನ್ನೂ, ಅಚ್ಚರಿಯನ್ನೂ, ಸಂತಸವನ್ನೂ ಏಕಕಾಲಕ್ಕೆ ಹುಟ್ಟುಹಾಕಿತ್ತು.

ಹೀಗೇ ಒಂದು ಸಂಜೆ ಕನ್ನಿಕಾ ಸುಮಾಳಿಂದ ಪಾಠ ಹೇಳಿಸಿಕೊಳ್ಳುತ್ತಿರಬೇಕಾದರೆ ಮನೆಗೆ ಬಂದ ಗಿರಿಧರ ರಂಪ ಎಬ್ಬಿಸಿದ್ದ. ಕನ್ನಿಕಾ ವಿದ್ಯಾಭ್ಯಾಸ ಮಾಡುವುದು ಅವನಿಗೆ ಕಿಂಚಿತ್ತೂ ಇಷ್ಟ ಇರಲಿಲ್ಲ. ಅವಳ

ಕೈಯ್ಯಲ್ಲಿದ್ದ ಸ್ಲೇಟು, ಬಳಪದ ಕಡ್ಡಿಗಳನ್ನೆಲ್ಲಾ ಮೂಲೆಮೂಲೆಗೆ ಬಿಸಾಡಿದ ಆತ “ಇನ್ನುಮುಂದೆ ಇವಳಿಂದ ಪಾಠ ಹೇಳಿಸಿಕೊಂಡರೆ ಜಾಗ್ರತೆ” ಎಂದು ಎಚ್ಚರಿಸಿ, ಹೆಗಲ ಮೇಲಿದ್ದ ಬೈರಾಸು ಕೊಡವುತ್ತಾ, ಹೊರನಡೆದಿದ್ದ. ಗಿರಿಧರನ ಕೋಪದ ಸ್ವಭಾವದ ಅರಿವಿದ್ದ ಅವನ ಮನೆಯವರು ಒಬ್ಬರೂ ತುಟಿ ಅಲ್ಲಾಡಿಸುವುದಕ್ಕೇ ಮುಂದಾಗಲಿಲ್ಲ. ಒಂದುವೇಳೆ ಅವರು ಬುದ್ಧಿವಾದ ಹೇಳಿದ್ದರೂ ಆತ ಕೇಳುತ್ತಿರಲಿಲ್ಲ. ಅಂತಹ ಕೋಪ, ಒರಟುತನ ಅವನಲ್ಲಿತ್ತು.

ಗಿರಿಧರನ ಈ ಬೆದರಿಕೆಯಿಂದಾಗಿ ಕನ್ನಿಕಾಳ ವಿದ್ಯಾಭ್ಯಾಸದ ಪ್ರಕ್ರಿಯೆ ಸಂಪೂರ್ಣವಾಗಿ ನಿಂತುಹೋಯಿತು. ಆಕೆ ಸುಮಾಳಿಂದ ಪಾಠ ಹೇಳಿಸಿಕೊಳ್ಳಲಿಲ್ಲ. ಸುಮಾ ಇವಳಿಗೆ ಪಾಠ ಹೇಳಲು ಮುಂದಾಗಲಿಲ್ಲ. ಆದರೆ ಅದು ಸ್ವಲ್ಪ ದಿವಸಗಳ ಮಟ್ಟಿಗೆ ಮಾತ್ರ. ಗಿರಿಧರ ಮನೆಯಲ್ಲಿಲ್ಲದ ಸಮಯ ನೋಡಿಕೊಂಡು ಕನ್ನಿಕಾ ಸುಮಾಳಲ್ಲಿ ಪಾಠ ಹೇಳಿಸಿಕೊಳ್ಳುತ್ತಿದ್ದಳು. ಬೇಸಗೆ ರಜೆಯ ಸಮಯದಲ್ಲಂತೂ ಅಷ್ಟೂ ದಿನ ಹಗಲು ಹೊತ್ತಿನಲ್ಲಿಯೂ ಸುಮಾ ಮನೆಯಲ್ಲಿಯೇ ಇದ್ದ ಕಾರಣದಿಂದಾಗಿ ಹಾಗೂ ಗಿರಿಧರ ಆ ಸಮಯದಲ್ಲಿ ಮನೆಯಲ್ಲಿ ಇಲ್ಲದಿದ್ದರಿಂದಾಗಿ ಹೆಚ್ಚೆಚ್ಚು ಅಭ್ಯಾಸ ಮಾಡುವುದಕ್ಕೆ ಕನ್ನಿಕಾಳಿಗೆ ಅವಕಾಶ ಒದಗಿಬಂದಿತ್ತು. ಹಾಗೆಂದು ಗಂಡನ ಮಾತನ್ನು ವಿರೋಧಿಸಿ, ತಾನೇನನ್ನೋ ಸಾಧಿಸಬೇಕೆಂಬ ಹಠ ಅವಳಲ್ಲಿದ್ದುದಲ್ಲ. ಓದುವ ಬರೆಯುವ ಪ್ರಕ್ರಿಯೆ ಖುಷಿ ಕೊಡುತ್ತಿದ್ದ ಕಾರಣದಿಂದಾಗಿ ಆಕೆ ಗುಟ್ಟಾಗಿಯಾದರೂ ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದಳು. ಆಟ ಆಡಬಾರದೆಂದು ತಂದೆ- ತಾಯಿ ಮಗುವನ್ನು ಜೋರು ಮಾಡಿದಾಗ ಆ ಮಗು ರಚ್ಚೆ ಹಿಡಿದು ಅಂಗಳಕ್ಕೆ ಹೋಗಿ, ಆಟವಾಡುತ್ತದಲ್ಲಾ, ಅಂತಹ ಬಾಲಿಶತನದ ಹಠವಷ್ಟೇ ಕನ್ನಿಕಾಳಲ್ಲಿ ಇದ್ದುದು. ಗಂಡನ ಮಾತನ್ನು ಮೀರಲೇಬಾರದು ಎಂದು ಹೇಳುವ ಸಮಾಜದ ರೂಢೀಗತ ವ್ಯವಸ್ಥೆಯ ಪರಿಚಯ ಅವಳಿಗಿದ್ದಿದ್ದರೆ ಅವಳು ಗಂಡನ ಮಾತನ್ನು ಮೀರುವ ಧೈರ್ಯ ತೋರುತ್ತಿರಲಿಲ್ಲವೇನೋ? ಏಕೆಂದರೆ, ಪರಂಪರಾನುಗತ ವ್ಯವಸ್ಥೆಯನ್ನು ಮೂಕವಾಗಿ ಒಪ್ಪಿಕೊಂಡು ಹೋಗುವ ಮನಃಸ್ಥಿತಿ ಅವಳದ್ದಾಗಿತ್ತು.

ಸಮಯವನ್ನು ಸದುಪಯೋಗಪಡಿಸಿಕೊಂಡ ಕನ್ನಿಕಾ ಬಹಳ ಬೇಗ ಅಕ್ಷರಸ್ಥಳು ಎನಿಸಿಕೊಂಡಳು. ಅವಳಿಗೀಗ ಕನ್ನಡ ಭಾಷೆಯ ಎಲ್ಲಾ ಅಕ್ಷರಗಳೂ ಪರಿಚಿತವಾಗಿದ್ದವು. ಒಂದೊಂದೇ ಅಕ್ಷರಗಳನ್ನು ಸೇರಿಸಿಕೊಂಡು ಓದುತ್ತಿದ್ದಳು. ಪದಗಳನ್ನು ಬರೆಯುತ್ತಿದ್ದಳಾದರೂ ಕೆಲವೊಮ್ಮ ಸಣ್ಣಪುಟ್ಟ ತಪ್ಪುಗಳನ್ನೂ ಮಾಡುತ್ತಿದ್ದಳು. ಸುದ್ದಿಪತ್ರಿಕೆಯನ್ನು ಓದಿ, ಅರ್ಥೈಸಿಕೊಳ್ಳುವಷ್ಟು ಜಾಣ್ಮೆ ಅವಳಲ್ಲೀಗ ಮೂಡಿತ್ತು. ಈ ವಿಷಯ ಗಿರಿಧರನಿಗೆ ತಿಳಿದಿರಲಿಲ್ಲ.

ಕನ್ನಿಕಾ- ಗಿರಿಧರ ಮದುವೆಯಾಗಿ ಒಂದು ವರ್ಷ ಕಳೆಯುತ್ತಾ ಬಂದಿತ್ತು. ಸಂಬAಧಿಕರೆಲ್ಲಾ “ಏನಾದರೂ ವಿಶೇಷ ಇದೆಯಾ?” ಎಂದು ಪ್ರಶ್ನಿಸತೊಡಗಿದ್ದರು. ಕನ್ನಿಕಾ ಗರ್ಭಿಣಿ ಇನ್ನೂ ಆಗಿಲ್ಲ ಏಕೆ? ಎಂದು ತಿಳಿದುಕೊಳ್ಳುವ ಕುತೂಹಲ ಆ ಸಂಬAಧಿಕರಲ್ಲಿ ತುಸು ಹೆಚ್ಚಾಗಿಯೇ ಇತ್ತು. ಆದರೆ ಹೇಳಿಕೊಳ್ಳುವಂತಹ ವಿಶೇಷವೇನೂ ಇರಲಿಲ್ಲ. ನಾಲ್ಕು ಗೋಡೆಗಳ ನಡುವಿನ ವಿಷಯ ಕನ್ನಿಕಾಳಿಗೆ ಮಾತ್ರ ತಿಳಿದಿತ್ತು. ಅವಳಿಗೂ ವಾಸ್ತವವಾಗಿ ಸಂಪೂರ್ಣ ಅರಿವು ಇರಲಿಲ್ಲ. ತನ್ನ ಮೇಲೇರಿ ಸಂಭೋಗಿಸುವ ಗಂಡ ಇದ್ದಕ್ಕಿದ್ದಂತೆಯೇ ಕೋಪಗೊಳ್ಳುತ್ತಾನೆ ಯಾಕೆ? ಎಂದು ಅವಳಿಗೂ ತಿಳಿದಿರಲಿಲ್ಲ. ಲೈಂಗಿಕತೆಯ ಬಗ್ಗೆ ಅವಳಿಗೆ ತಿಳುವಳಿಕೆ ಇರಲಿಲ್ಲ. ಗಂಡು- ಹೆಣ್ಣಿನ ದೈಹಿಕ ಸಂಬಂಧದ ಬಗ್ಗೆ ಅವಳಿಗೆ ತಿಳಿಸಿಕೊಡಲು ತಾಯಿ ಇರಲಿಲ್ಲ. ಅತ್ತೆಯಲ್ಲಿ ಕೇಳಹೊರಟವಳನ್ನು ಅವಳ ಮುಜುಗರ ತಡೆದಿತ್ತು.

ಮದುವೆ ಆಗಿ ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂದು ತಿಳಿದ ಸಂಬಂಧಿಕರು ಕನ್ನಿಕಾಳನ್ನು ಬಂಜೆ ಎಂದು ತೀರ್ಮಾನಿಸಿಬಿಟ್ಟಿದ್ದರು. ಹೀಗೆ ಸಂಬಂಧಿಕರು ನಿರ್ಧಾರ ಕೈಗೊಳ್ಳುವುದಕ್ಕೆ ಕಾರಣವಾದದ್ದು ಅದೊಂದು ಘಟನೆ: ಅಂದು ಕನ್ನಿಕಾಳ ಮನೆಯಲ್ಲಿ ಪೂಜೆ ಏರ್ಪಡಿಸಲಾಗಿತ್ತು. ಮಧ್ಯಾಹ್ನದ ಊಟ ಮುಗಿದ ಬಳಿಕ ಬಂದಿದ್ದ ಜನರೆಲ್ಲಾ ತೆರಳಿದ ಬಳಿಕ ಮನೆಯ ಆಪ್ತೇಷ್ಟರು ಅನಿಸಿಕೊಂಡವರು ಒಂದಷ್ಟು ಮಂದಿ ಚಾವಡಿಯಲ್ಲಿ ಮಾತನಾಡುತ್ತಾ ಕುಳಿತಿದ್ದರು. ಆಗ ಗಿರಿಧರನ ಅತ್ತೆ ಸಹಜವಾಗಿ ಮಾತನಾಡುತ್ತಾ, ಕನ್ನಿಕಾ ಇನ್ನೂ ಗರ್ಭಿಣಿ ಆಗದಿರುವುದನ್ನು ಪ್ರಸ್ತಾಪಿಸಿದ್ದರು. ಅವರು ಮಾಮೂಲಿಯಾಗಿಯೇ ಹೇಳಿದರೂ ಕೂಡಾ, ಕಂಬಕ್ಕೊರಗಿ ಕುಳಿತಿದ್ದ ಗಿರಿಧರನನ್ನು ಅವರ ಆ ಮಾತು ಕೆರಳಿಸಿತ್ತು. “ಗರ್ಭಿಣಿ ಯಾಕೆ ಆಗಿಲ್ಲ ಎಂದರೆ?! ಎಲ್ಲಾ ಇವಳದ್ದೇ ತಪ್ಪು. ಇವಳು ಸರಿ ಇಲ್ಲ” ಎಂದು ಬೊಬ್ಬೆ ಹೊಡೆದವನು, ಮುಖ ದೊಡ್ಡದು ಮಾಡಿ ಕುಳಿತುಕೊಂಡ. ಅವನ ಕೋಪ ಕಂಡ ಬಳಿಕ ಯಾರಿಗೂ ಮಾತು ಮುಂದುವರಿಸುವುದಕ್ಕೆ ಮನಸ್ಸು ಬರಲಿಲ್ಲ. ಎಲ್ಲರ ಬಾಯಿಯೂ ಮುಚ್ಚಿಹೋಯಿತು. ವಿಷಯ ಅಲ್ಲಿಗೇ ನಿಂತಿತು.

ಆದರೆ ಗಿರಿಧರ ಆಡಿದ ಮಾತನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಂಡ ಆ ಜನರು ಕನ್ನಿಕಾಳ ಬಗೆಗೆ ಏನೇನೋ ಮಾತನಾಡತೊಡಗಿದ್ದರು. “ಆಕೆಯದ್ದೇ ಎಲ್ಲಾ ತಪ್ಪು” ಎಂದು ಗಿರಿಧರ ಹೇಳಬೇಕಾದರೆ ಆಕೆಯಲ್ಲೇ ಏನೋ ದೋಷ ಇರಬೇಕು. ಆಕೆ ಬಂಜೆ ಆಗಿರಬೇಕು ಎಂಬ ಯೋಚನೆ ಕೆಲವರದ್ದಾಗಿತ್ತು. ಹಲವರು ತಾವೇ ವೈದ್ಯಕೀಯ ತಪಾಸಣೆ ನಡೆಸಿದವರಂತೆ ಅವಳು ಬಂಜೆ ಎಂದು ತೀರ್ಮಾನ ತೆಗೆದುಕೊಂಡೂ ಆಗಿತ್ತು. “ಇವಳು ಸರಿ ಇಲ್ಲ” ಎಂಬ ಗಿರಿಧರನ ಮಾತು ಕೆಲವೊಂದಷ್ಟು ಜನರಲ್ಲಿ ಇನ್ನೊಂದು ಹೊಳಹನ್ನು ಮೂಡಿಸಿತು. ಮೊದಲೇ ಹೆತ್ತವರಿಲ್ಲದೆ ಬೆಳೆದವಳು. ಅವಳ ಚಾರಿತ್ಯ ಹೇಗಿತ್ತೋ ಏನೋ? ಬಹುಶಃ ನಮ್ಮ ಗಿರಿಧರನಿಗೆ ಅವಳು ಶೀಲವತಿ ಅಲ್ಲ ಅಂತ ಗೊತ್ತಾಗಿರಬೇಕು. ಅದಕ್ಕೇ ಅವಳನ್ನು ತಿರಸ್ಕರಿಸಿದ್ದಾನೋ ಏನೋ? ಎಂಬ ಪುಕಾರನ್ನು ಕೆಲವರು ಹಬ್ಬಿಸಿದರು. ಹೀಗೆ ಕನ್ನಿಕಾ ಬಂಜೆಯಾಗಿ, ಚಾರಿತ್ರö್ಯಹೀನಳಾಗಿ ಅವರಿವರ ಬಾಯಿಗೆ ಆಹಾರವಾದಳು.

ತಾನು ಬಂಜೆ ಎಂಬ ವಿಚಾರ ಕನ್ನಿಕಾಳಿಗೆ ತಿಳಿದುಬಂದಾಗ ಆದ ನೋವು ಅಷ್ಟಿಷ್ಟಲ್ಲ. ಗೋಡೆಯ ಮೇಲಿದ್ದ ಬಾಲಕೃಷ್ಣನ ಫೋಟೋವನ್ನು ನೋಡುತ್ತಾ, ಮಗುವಿನ ಕನಸು ಕಾಣುತ್ತಿದ್ದ ಅವಳಿಗೆ ಅಸಹನೀಯ ಯಾತನೆಯಾಗಿತ್ತು. ತಾನು ಮಗುವನ್ನು ಹೆತ್ತುಕೊಡಲಾರೆ ಎಂಬ ವಿಷಯವನ್ನು ಅರಗಿಸಿಕೊಳ್ಳಲು ಅವಳ ಮನಸ್ಸು ಸಿದ್ಧವಿರಲಿಲ್ಲ. ಆದರೆ ಅರಗಿಸಿಕೊಳ್ಳಲೇಬೇಕಿತ್ತು. ಅದು ಅವಳ ಅನಿವಾರ್ಯತೆ.

ಕನ್ನಿಕಾಳದ್ದೇ ಎಲ್ಲಾ ತಪ್ಪು ಎಂದು ಸಂಬಂಧಿಕರೆದುರು ಉದ್ಘೋಷಿಸಿದ ಬಳಿಕ ಗಿರಿಧರ ಮತ್ತಷ್ಟು ಒರಟನಾಗಿದ್ದ. ಕೋಣೆಯೊಳಗಿನ ಕತ್ತಲಲ್ಲಿ ಆತನ ವಿಕೃತ ಚೇಷ್ಟೆಗಳು ಗರಿಗೆದರಲಾರಂಭಿಸಿದ್ದವು. ಕೋಣೆಯ ಕಿರುಕಿಂಡಿಯಿಂದ ಒಳಬರುತ್ತಿದ್ದ ಬೆಳದಿಂಗಳ ಬೆಳಕಿನಲ್ಲಿ ಅದೆಷ್ಟೋ ಸಲ ಕನ್ನಿಕಾ ಕಣ್ಣೀರು ಸುರಿಸುತ್ತಿದ್ದದ್ದು ಅವನಿಗೆ ಗೋಚರವಾಗುತ್ತಿತ್ತು. ತನ್ನ ಚೂಪು ಹಲ್ಲುಗಳು ಅವಳ ಅಂಗಾಂಗಗಳಲ್ಲಿ ಮೂಡಿಸಿರುವ ಗುರುತುಗಳೂ ಅವನಿಗೆ ಕಾಣಿಸುತ್ತಿದ್ದವು. ಆದರೆ ಅವೆಲ್ಲವನ್ನು ನೋಡಿದ ಬಳಿಕವೂ ಆತ ಸುಮ್ಮನಾಗುತ್ತಿರಲಿಲ್ಲ. ಅವಳನ್ನು ಮತ್ತಷ್ಟು ನೋಯಿಸುವ, ಅವಳನ್ನು ಮತ್ತಷ್ಟು ಗಾಯಗೊಳಿಸುವ ವಾಂಛೆ ಅವನಲ್ಲಿ ಹೆಚ್ಚಾಗುತ್ತಿತ್ತು. ತಾನು ಬಂಜೆ, ತನ್ನ ಗಂಡನ ಬಯಕೆಯನ್ನು ಪೂರೈಸಲಾರದ ಅಶಕ್ತಳು ಎಂಬ ಕೀಳರಿಮೆಗೆ ಒಳಗಾದ ಅವಳು ಗಂಡ ಎಷ್ಟೇ ಕಷ್ಟ ಕೊಟ್ಟರೂ ತಾನು ಬಾಯಿ ಮುಚ್ಚಿಕೊಂಡು ಇರುವುದೇ ಸರಿ ಎಂದು ಬಲವಾಗಿ ನಂಬಿಕೊಂಡಿದ್ದಳು. ಅವನ ವಿಕೃತತೆಗಳಿಂದಾಗಿ ಆಕೆ ಕಣ್ಣೀರು ಸುರಿಸುತ್ತಿದ್ದಳು. ಅಳುತ್ತಿದ್ದಳು. ಆದರೆ ಆಕೆಯ ಅಳುವಿನ ಧ್ವನಿ ಆ ಕತ್ತಲ ಕೋಣೆಯ ಬಾಗಿಲನ್ನು ದಾಟಿ, ಆಚೆ ಹೋಗುತ್ತಿರಲಿಲ್ಲ. ಕೊಠಡಿಯ ಭಿತ್ತಿಗಳಿಗೆ ಬಲವಾಗಿ ಬಡಿದು, ಮತ್ತೆ ಅವಳೆಡೆಗೇ ಹಿಂದಿರುಗಿ, ಅವಳ ಅಂತರಾಳದಲ್ಲಿ ಹುದುಗಿಕೊಳ್ಳುತ್ತಿದ್ದವು. ಬೆಳಕು ಹರಿದಾಗ ಎಲ್ಲವೂ ಮಾಮೂಲಿನಂತೆಯೇ ಇರುತ್ತಿತ್ತು.

ಮಕ್ಕಳನ್ನು ತಾನು ಹೆರಲಾರೆ ಎಂಬ ಕೊರಗು ತನ್ನನ್ನು ಬಾಧಿಸದಂತೆ ಕನ್ನಿಕಾ ಪ್ರಯತ್ನಿಸಬೇಕಿತ್ತು. ಅದಕ್ಕಾಗಿ ಆಕೆ ಪರ್ಯಾಯ ಮಾರ್ಗಗಳ ಹುಡುಕಾಟ ಮಾಡಬೇಕಿತ್ತು. ತಾಯ್ತನದಂತೆಯೇ ಸೃಷ್ಟಿಶೀಲವಾಗಿರುವ ಪ್ರಕ್ರಿಯೆಯಲ್ಲಿ ಆಕೆ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಿತ್ತು. ಬಾಲ್ಯದಲ್ಲಿ ಆಕೆ ಕಲಿತಿದ್ದ ಸಂಗೀತ ಈಗವಳಿಗೆ ಸಂಗಾತ ಒದಗಿಸುತ್ತಿತ್ತು. ಆದರೂ ಸಂಗೀತದ ಮೂಲಕ ಆಕೆಗೆ ತನ್ನ ಭಾವನೆಗಳನ್ನು ಪರಿಪೂರ್ಣವಾಗಿ ಅಭಿವ್ಯಕ್ತಿಸಿದ ಸಂತೃಪ್ತಿ ಪ್ರಾಪ್ತವಾಗುತ್ತಿರಲಿಲ್ಲ. ತನ್ನ ಅನುಭವ, ನೋವು, ಹತಾಶೆ ಇವೆಲ್ಲವನ್ನೂ ಸಮರ್ಪಕವಾಗಿ ವ್ಯಕ್ತಗೊಳಿಸುವ ಮಾಧ್ಯಮವೊಂದಕ್ಕಾಗಿ ಆಕೆ ಕಾಯುತ್ತಿದ್ದಳು.

ಗಿರಿಧರನ ದೊಡ್ಡ ಅಣ್ಣನಿಗೆ ನಿಯತಕಾಲಿಕಗಳನ್ನು ಓದುವ ಅಭ್ಯಾಸವಿತ್ತು. ಪ್ರತೀ ಶನಿವಾರ ಕನ್ನಡದ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಒಂದೆರಡನ್ನು ಮನೆಗೆ ತರುತ್ತಿದ್ದರು. ಅವರು ಶನಿವಾರದ ದಿವಸ ಮನೆಯಿಂದ ಹೊರಹೋದರೆ ಮಾತ್ರ ನಿಯತಕಾಲಿಕ ಅವರ ಜೊತೆಗೆ ಮನೆಯ ಚಾವಡಿ ಸೇರುತ್ತಿತ್ತು. ಓದುವುದನ್ನು ಕಲಿಯುತ್ತಿದ್ದ ಸಂದರ್ಭದಲ್ಲಿ ಒಂದೆರಡು ಬಾರಿ ಕನ್ನಿಕಾ ಇಂತಹ ನಿಯತಕಾಲಿಕಗಳನ್ನು ಓದಿದ್ದಳು. ಅದರಲ್ಲಿ ಬರುವ ಸೊಗಸಾದ ಪದ್ಯಗಳು, ಕಥೆಗಳು ಆಕೆಯನ್ನು ಆಕರ್ಷಿಸಿದ್ದವು. ತನ್ನ ಅನುಭವವನ್ನು ಅಭಿವ್ಯಕ್ತಿಸಲು ಅವಕಾಶ ಹುಡುಕುತ್ತಿದ್ದ ಆಕೆಗೆ ಈಗ ‘ನಾನ್ಯಾಕೆ ಬರೆಯಬಾರದು?’ ಅನಿಸಿತು. ಪುರುಸೊತ್ತು ಇದ್ದಾಗಲೆಲ್ಲ ಚಿಕ್ಕ ಚಿಕ್ಕ ಪದ್ಯಗಳನ್ನು ಬರೆಯತೊಡಗಿದಳು. ಮೂರು ನಾಲ್ಕು ಸಾಲುಗಳಿಂದ ಕೂಡಿದ್ದ ಆ ಪದ್ಯಗಳು ಅವಳ ಮನಸ್ಸಿನ ತುಮುಲದ ನೇರ- ಪ್ರಾಮಾಣಿಕ ಅಭಿವ್ಯಕ್ತಿಗಳಾಗಿದ್ದವು.

ಹಾಗೆ ಬರೆದ ಪದ್ಯಗಳ ಕೊನೆಗೆ ಆಕೆ ತನ್ನ ಹೆಸರನ್ನು ಬರೆಯುತ್ತಿರಲಿಲ್ಲ. ಆಕಸ್ಮಾತ್ ಯಾರಾದರೂ ತನ್ನ ಪದ್ಯಗಳನ್ನು ಓದಿದರೆ ಆ ಪದ್ಯಗಳನ್ನು ತಾನು ಬರೆದದ್ದು ಎಂದು ಗೊತ್ತಾಗಬಾರದು ಎಂದು ಅವಳು ಅಂದುಕೊAಡಿದ್ದಳು. ಅದಕ್ಕಾಗಿಯೇ ಹಾಗೆ ಬರೆದ ಪದ್ಯಗಳನ್ನು ತನ್ನ ಮಲಗುವ ಕೋಣೆಯ ಹಾಸಿಗೆಯ ತಳಭಾಗದಲ್ಲಿ ಅಡಗಿಸಿ ಇಡುತ್ತಿದ್ದಳು. ರಾತ್ರಿ ಅವಳು ಅದೇ ಹಾಸಿಗೆಯ ಮೇಲೆ ಅನುಭವಿಸಿದ ವಿಕೃತತೆ- ವಿಕ್ಷಿಪ್ತತೆಗಳು ಮರುದಿನ ಹಾಸಿಗೆಯ ತಳದಲ್ಲಿದ್ದ ಕಾಗದಗಳ ಮೇಲೆ ಚಂದದ ಸಾಲುಗಳಾಗಿ ರಾರಾಜಿಸುತ್ತಿದ್ದವು. ತನ್ನ ಬಾಲ್ಯ, ತನ್ನ ಕಲ್ಪನೆಯ ತಾಯಿ, ಕುಟುಂಬದ- ಸಮಾಜದ ದುಷ್ಟತನ, ಬಂಜೆಯೆನಿಸಿಕೊಂಡ ಬಳಿಕ ತನ್ನಲ್ಲಿ ಮೂಡಿದ ಕೀಳರಿಮೆ, ಗಂಡನ ಅಮಾನವೀಯತೆ ಇಂತಹ ಎಲ್ಲಾ ಸಂಗತಿಗಳು ಅವಳ ಸಾಹಿತ್ಯ ರಚನೆಯಲ್ಲಿ ಒಡಮೂಡಿದವು.

ಇದೇ ಸಮಯದಲ್ಲಿ ಆಕೆ ಕುತೂಹಲಕ್ಕೆ ಎಂಬಂತೆ ಇಂಗ್ಲಿಷ್- ಹಿಂದಿ ಭಾಷೆಗಳನ್ನೂ ಸುಮಾಳಿಂದ ಕಲಿತುಕೊಂಡಳು. ಓದಿ, ಅರ್ಥಮಾಡಿಕೊಳ್ಳುವಷ್ಟು ತಿಳುವಳಿಕೆಯನ್ನು ಪಡೆದುಕೊಂಡಳು.

ಮನೆಯಲ್ಲಿ ಸಾಕಿದ್ದ ಪ್ರಾಣಿಗಳ ಬಗ್ಗೆ ಅವಳಿಗೆ ಬಹಳ ಪ್ರೀತಿಯಿತ್ತು. ಹಟ್ಟಿಯಲ್ಲಿದ್ದ ದನಕರುಗಳ ಬಗೆಗೆ ಆಕೆ ವಿಪರೀತವಾದ ಅಕ್ಕರೆಯನ್ನು ಬೆಳೆಸಿಕೊಂಡಿದ್ದಳು. ಮನೆಯ ಉಳಿದ ಎಲ್ಲಾ ಸದಸ್ಯರೊಂದಿಗೂ ಒಂದಿಷ್ಟು ಹಠಮಾರಿಯಂತೆ ವರ್ತಿಸುತ್ತಿದ್ದ ರಾಂಚು ಹೆಸರಿನ ನಾಯಿ ಕನ್ನಿಕಾಳ ಜೊತೆಗೆ ಬಲು ಆತ್ಮೀಯತೆಯಿಂದ ವರ್ತಿಸುತ್ತಿತ್ತು. ಹಾಲನ್ನು ಹೆಚ್ಚಾಗಿಯೇ ತಮ್ಮ ತಟ್ಟೆಗೆ ಎರೆಯುವ ಕನ್ನಿಕಾಳ ಸುತ್ತಮುತ್ತಲೇ ಮನೆಯ ಬೆಕ್ಕುಗಳು ಓಡಾಡಿಕೊಂಡಿರುತ್ತಿದ್ದವು. ಮಕ್ಕಳಿಲ್ಲದ ಕನ್ನಿಕಾಳ ಪಾಲಿಗೆ ಮನೆಯಲ್ಲಿದ್ದ ದನ, ನಾಯಿ, ಬೆಕ್ಕುಗಳೇ ಮಕ್ಕಳಾಗಿದ್ದವು. ಮೇಯುವುದಕ್ಕೆಂದು ಮನೆಯ ಬೇಲಿ ದಾಟಿ, ಹೊರಹೋಗಿದ್ದ ಕಪ್ಪು ಚುಕ್ಕೆಯ ಗೌರಿ ದನ ಬಾರದೇ ಇದ್ದದ್ದಕ್ಕೆ ಅದೊಂದು ದಿನ ವಿಪರೀತ ಕಣ್ಣೀರು ಹಾಕಿದ್ದಳು. ಚಿರತೆ ಹೊತ್ತೊಯ್ದಿರಬಹುದೇ? ಕಳ್ಳಕಾಕರ ಕೃತ್ಯ ಇರಬಹುದೇ? ಎಂದು ಹೆದರಿಕೊಂಡಿದ್ದಳು. ಅಷ್ಟರಲ್ಲಿ ಬಾಲ ಆಡಿಸುತ್ತಾ, ಕುತ್ತಿಗೆ ಹಿಂದುಮುಂದು ಮಾಡುತ್ತಾ ಗೌರಿ ಬಂದಾಗ ಓಡಿಹೋಗಿ ಅದನ್ನು ಇನ್ನಿಲ್ಲದಂತೆ ಮುದ್ದುಮಾಡಿದ್ದಳು.

ಹೀಗಿರಬೇಕಾದರೆ ಕನ್ನಿಕಾಳ ಬದುಕಿನಲ್ಲಿ ಮಹಾಪಲ್ಲಟವೊಂದು ಸಂಭವಿಸಿತು. ಮನೆಯ ತೋಟದಾಚೆಯ ಗದ್ದೆಯ ಬದುವಿನಲ್ಲಿದ್ದ ತಾಳೆಮರವೊಂದನ್ನು ನೆಲಕ್ಕುರುಳಿಸಬೇಕಿತ್ತು. ಕೆಲಸದಾಳುಗಳೆಲ್ಲಾ ಆ ಬೃಹತ್ತಾದ ತಾಳೆಮರದ ತುದಿಗೆ ಕಟ್ಟಿರುವ ಹಗ್ಗವನ್ನು ಬಲವಾಗಿ ಎಳೆಯತೊಡಗಿದ್ದರು. ಇಬ್ಬರು ಕೆಲಸದವರು ಮರದ ಕಾಂಡವನ್ನು ಕತ್ತರಿಸತೊಡಗಿದ್ದರು. ಮರ ಇನ್ನೇನು ಬೀಳುತ್ತದೆ ಎನ್ನುವ ಸೂಚನೆ ದೊರಕಿದ ಕೂಡಲೇ ಹಗ್ಗವನ್ನು ಹಿಡಿದಿದ್ದ ಆಳುಗಳೆಲ್ಲಾ ಬೊಬ್ಬೆ ಹೊಡೆದು, ಹಗ್ಗವನ್ನು ಬಿಟ್ಟರು. ಆದರೆ ಕೆಲಸದವರ ಈ ಸೂಚನೆ ಹಗ್ಗದ ತುತ್ತತುದಿಯನ್ನು ಹಿಡಿದುಕೊಂಡಿದ್ದ ಗಿರಿಧರನಿಗೆ ಗೊತ್ತಾಗುವಾಗ ತಡವಾಗಿತ್ತು. ಕೆಲಸದವರೆಲ್ಲಾ ಹಗ್ಗದಿಂದ ಕೈಬಿಟ್ಟ ಕಾರಣ ಹಗ್ಗ ಇದ್ದಕ್ಕಿದ್ದಂತೆಯೇ ವೇಗ ಪಡೆದುಕೊಂಡಿತು. ಮರದ ತುದಿಗೆ ಅದನ್ನು ಕಟ್ಟಲಾಗಿದ್ದರಿಂದ ಗಿರಿಧರ ಅಷ್ಟೆತ್ತರದವರೆಗೂ ಹಾರಿ, ಹಗ್ಗದ ಹಿಡಿತ ತಪ್ಪಿ, ಕೆಳಕ್ಕೆ ಬಿದ್ದ. ಸರಿಸುಮಾರು ಹತ್ತು ಅಡಿ ಮೇಲಕ್ಕೆ ಚಿಮ್ಮಿ, ಅಲ್ಲಿಂದ ಕೆಳಕ್ಕೆ ಬೀಳುವಾಗ ಅವನ ತಲೆ ನೆಲದಲ್ಲಿದ್ದ ಕಲ್ಲೊಂದಕ್ಕೆ ಬಡಿದಿತ್ತು. ರಕ್ತದಲ್ಲಿ ತೋಯ್ದು, ಮುದ್ದೆಯಾಗಿದ್ದ ಅವನನ್ನು ಕಂಡು ಕೆಲಸದವರು ಗಾಬರಿಯಾದರು. ಏನು ಮಾಡಬೇಕೆಂದು ತಿಳಿಯದೆ, ಬಾಳೆಯ ಎಲೆಯಲ್ಲಿ ಸುತ್ತಿ, ಮನೆಯ ಅಂಗಳಕ್ಕೆ ಹೊತ್ತುಕೊಂಡು ಬಂದಿದ್ದರು. ನೆಲಕ್ಕೆ ಬಿದ್ದಾಗಲೇ ಅರೆಜೀವವಾಗಿದ್ದ ಗಿರಿಧರನ ಪ್ರಾಣಪಕ್ಷಿ ಮನೆಯಂಗಳವನ್ನು ಸೇರಿದಾಗ ಹಾರಿಹೋಗಿತ್ತು. ಇಪ್ಪತೈದನೇ ವಯಸ್ಸಿನಲ್ಲಿಯೇ ಕನ್ನಿಕಾ ವಿಧವೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಳು.

ಗಂಡನೇ ಇಲ್ಲವಾದ ಮೇಲೆ ಕನ್ನಿಕಾಳಿಗೆ ಆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಇರಲಿಲ್ಲ. ತಾಯಿ- ತಂದೆಯನ್ನು ನುಂಗಿಕೊಂಡವಳು ಈಗ ಗಂಡನನ್ನೂ ತಿಂದುಹಾಕಿದಳು ಎಂದು ಅವರೆಲ್ಲಾ ಮುಚ್ಚುಮರೆಯಿಲ್ಲದೆ ಮಾತನಾಡಿಕೊಳ್ಳುತ್ತಿರುವುದು ಕನ್ನಿಕಾಳ ಕಿವಿಗೆ ಸ್ಪಷ್ಟವಾಗಿ ಕೇಳಿಸಿತ್ತು. “ನೀನಿನ್ನು ಇಲ್ಲಿರುವುದು ಬೇಡ. ನಿನ್ನ ತವರುಮನೆಗೆ ಹೊರಡು. ಇಲ್ಲಿರುವ ಇನ್ಯಾರಾದರೂ ನಿನ್ನ

ದೆಸೆಯಿಂದ ಪರಮಾತ್ಮನ ಪಾದ ಸೇರುವ ಮೊದಲು ನೀನಿಲ್ಲಿಂದ ತೊಲಗುವುದೇ ಒಳ್ಳೆಯದು” ಎಂದು ಗಿರಿಧರನ ಅಣ್ಣ ಕಟುವಾಗಿ ನುಡಿದ ಮೇಲೆ ಆ ಮನೆಯಲ್ಲಿ ನಿಲ್ಲಬೇಕೆಂದು ಕನ್ನಿಕಾಳಿಗೂ ಅನಿಸಲಿಲ್ಲ.

ಗಂಟುಮೂಟೆ ಕಟ್ಟಿಕೊಂಡು ಬರುವುದಕ್ಕೆಂದು ಮಲಗುವ ಕೋಣೆಗೆ ಹೋದವಳು ಮೊದಲು ತೆಗೆದುಕೊಂಡದ್ದು ತಾನು ಬರೆದಿದ್ದ ಕವಿತೆಗಳನ್ನು. ಆ ಬಳಿಕ ತನ್ನ ಸೀರೆಗಳನ್ನು ತುಂಬಿಕೊಳ್ಳುವುದಕ್ಕಾಗಿ ಮರದ ಕಪಾಟನ್ನು ತೆರೆದಳು. ಸೀರೆಗಳೆಲ್ಲವನ್ನೂ ತುಂಬಿಸುತ್ತಿದ್ದಂತೆ ಆ ಬಟ್ಟೆಗಳ ರಾಶಿಯ ಮಧ್ಯೆ ಇದ್ದ, ಸುರುಳಿ ಸುತ್ತಿದ್ದ ಕಾಗದವೊಂದು ಅವಳ ಕಣ್ಣಿಗೆ ಬಿತ್ತು. ಕುತೂಹಲದಿಂದ ತೆರೆದು ನೋಡಿದಳು. ಕಾಗದದ ಮೇಲ್ಗಡೆ ಯಾವುದೋ ಆಸ್ಪತ್ರೆಯ ಹೆಸರು. ಅದರ ಕೆಳಗೆ ‘ಗಿರಿಧರ’ ಎಂಬ ಹೆಸರಿತ್ತು. ತನ್ನ ಗಂಡ ಆಸ್ಪತ್ರೆಗೆ ಹೋದದ್ದು ಯಾಕೆ? ಎಂದು ಯೋಚಿಸುತ್ತಲೇ ಬರೆದಿದ್ದ ಇಂಗ್ಲಿಷ್ ಅಕ್ಷರಗಳನ್ನು ಒಂದಕ್ಕೊಂದು ಸೇರಿಸುತ್ತಾ, ಅರ್ಥೈಸಿಕೊಳ್ಳತೊಡಗಿದಳು. ಕಾಗದದಲ್ಲಿದ್ದ ವಿಷಯ ಪೂರ್ತಿಯಾಗಿ ಅವಳ ತಲೆ ಹೊಕ್ಕಾಗ ಅವಳಿಗೆ ಅಚ್ಚರಿಯಾಗಿತ್ತು. ಮಕ್ಕಳಾಗದೇ ಇದ್ದುದಕ್ಕೆ ಕನ್ನಿಕಾ ಕಾರಣವಾಗಿರಲಿಲ್ಲ. ಅವಳು ಬಂಜೆ ಎಂಬುವುದೇ ಸುಳ್ಳಾಗಿತ್ತು. ಗಿರಿಧರನಿಗೆ ಲೈಂಗಿಕ ಅಸಮರ್ಥತೆ ಇದ್ದುದನ್ನು ಅವಳ ಕೈಯ್ಯಲ್ಲಿದ್ದ ಕಾಗದ ಸಾರಿ ಸಾರಿ ಹೇಳುತ್ತಿತ್ತು. ಗಂಡನ ದೌರ್ಬಲ್ಯದ ಕಾರಣದಿಂದಾಗಿ ತಾನು ಅನುಭವಿಸಿದ ಅವಮಾನ, ಶೋಷಣೆಗಳೆಲ್ಲವೂ ಅವಳ ಕಣ್ಣೆದುರಿಗೆ ಬಂದವು. ಪರಮಸತ್ಯದ ಮೂಟೆಯನ್ನು ತಲೆಮೇಲಿರಿಸಿಕೊಂಡು ಆಕೆ ಗಂಡನ ಮನೆಯಿಂದ ತವರುಮನೆಯ ಕಡೆಗೆ ಹೆಜ್ಜೆ ಹಾಕಿದಳು.

ತವರುಮನೆಗೆ ಬಂದುನೋಡಿದರೆ, ಅವಳ ತವರುಮನೆ ಹಿಂದೆಂದಿಗಿಂತಲೂ ಕಠಿಣತೆಯನ್ನು ಪಡೆದಿತ್ತು. ಅಣ್ಣಂದಿರಿಗೆ ಮದುವೆಯಾಗಿತ್ತು. ಗಂಡನಿಗೆ ತಕ್ಕ ಹೆಂಡತಿ ಎಂಬಂತಿದ್ದ ಅತ್ತಿಗೆಯಂದಿರಿಬ್ಬರಿಗೂ ಬಾಂಧವ್ಯಗಳು ಬೇಕಾಗಿರಲಿಲ್ಲ. ಹಣ, ಆಸ್ತಿ ಮೊದಲಾದ ಕೋಟೆಯಲ್ಲಿಯೇ ಬಂಧಿಗಳಾಗಿದ್ದ ಅವರಿಗೆ ಮನುಷ್ಯ ಸಂಬಂಧಗಳು ಬೇಕಾಗಿರಲಿಲ್ಲ. ಹಣೆ ಮೇಲಿನ ಕುಂಕುಮ ಅಳಿಸಿಕೊಂಡು ತವರಿಗೆ ಕಾಲಿಟ್ಟ ಕನ್ನಿಕಾಳನ್ನು ಕಂಡಕೂಡಲೇ ಮೂತಿ ಓರೆ ಮಾಡಿದ ಅವಳ ಅತ್ತಿಗೆಯಂದಿರು ತಮ್ಮ ತಮ್ಮ ಗಂಡಂದಿರನ್ನು ಒಳಕೋಣೆಗೆ ಕರೆದರು. ಅತ್ತಿಗೆಯಂದಿರು ಅಸಮಾಧಾನದಿಂದ ಪಿಸುಗುಟ್ಟುತ್ತಿರುವುದು ಚಾವಡಿಯಲ್ಲಿ ಕುಳಿತಿದ್ದ ಕನ್ನಿಕಾಳಿಗೆ ಕೇಳಿಸಿತು. ಅದರ ಬೆನ್ನಿಗೆಯೇ ಅಣ್ಣಂದಿರ ಓಲೈಕೆಯ ಮಾತು ಕೇಳಿಸಿತು. ಹೀಗೆ ಒಂದೈದು ನಿಮಿಷಗಳ ಮಾತುಕತೆ ಮುಗಿದ ಬಳಿಕ ಹೊರಬಂದ ಅವರು ಕನ್ನಿಕಾ ಅಲ್ಲಿ ಉಳಿದುಕೊಳ್ಳುವುದಕ್ಕೆ ಒಪ್ಪಿಗೆ ಕೊಟ್ಟರು.

ಮರುದಿನ ಬೆಳ್ಳಂಬೆಳಗ್ಗೆಯೇ ಕನ್ನಿಕಾಳನ್ನು ನಿದ್ರೆಯಿಂದ ಎಬ್ಬಿಸಿದ ಅವಳ ಅಣ್ಣಂದಿರು “ನಿನಗೆ ಶಾಶ್ವತವಾದ ನೆಲೆ ಒದಗಿಸಿಕೊಡುತ್ತೇವೆ. ಗಂಡನನ್ನು ಕಳೆದುಕೊಂಡ ನಿನಗೆ ಆ ಸ್ಥಳವೇ ಸೂಕ್ತವಾದದ್ದು” ಎಂದು ಹೇಳಿ, ಮನೆಯಿಂದ ಹೊರಡಿಸಿ, ಕರೆದುಕೊಂಡು ಬಂದುಬಿಟ್ಟದ್ದು ಶ್ರೀಕೃಷ್ಣನ ಪದತಲಕ್ಕೆ, ಮಥುರೆಗೆ, ಮಥುರೆಯ ಆಶ್ರಮಕ್ಕೆ. ವಿಧವೆ ತಂಗಿಯನ್ನು ಮಥುರೆಯ ಆಶ್ರಮ ಸೇರಿಸಿದ ಅಣ್ಣಂದಿರು ಭಾರ ದೂರವಾದ ಸಂತಸದಲ್ಲಿ ತಮ್ಮ ಊರಿಗೆ ಹಿಂದಿರುಗಿದ್ದರು.

ಕನ್ನಿಕಾ ಮಥುರೆಯ ಆಶ್ರಮ ಸೇರಿಕೊಂಡು ಈಗ ಹತ್ತು ವರ್ಷಗಳಾಗಿವೆ. ಆಶ್ರಮ ಸೇರಿಕೊಂಡ ಬಳಿಕ ಆಕೆಯ ಹೆಸರು ಬದಲಾಗಿದೆ. ಆಕೆಯೀಗ ರಾಧೆ ಮಾ. ಮಥುರೆಯಲ್ಲಿರುವ ಅಸಂಖ್ಯಾತ ವಿಧವೆಯರಲ್ಲಿ ಆಕೆಯೂ ಒಬ್ಬಳು.....

***

ಒಗೆದು, ನೇತುಹಾಕಿದ್ದ ತನ್ನ ಬಟ್ಟೆಗಳನ್ನು ರಾಧೆ ಮಾ ಕೋಣೆಗೆ ಬರುವಾಗಲೇ ತೆಗೆದುಕೊಂಡು ಬಂದಿದ್ದಳು. ಸುಕ್ಕುಸುಕ್ಕಾಗಿದ್ದ ಬಟ್ಟೆಗಳು ತನ್ನ ಬದುಕನ್ನು ಮಾತ್ರವಲ್ಲದೆ, ಮಥುರೆಯಲ್ಲಿರುವ ಎಲ್ಲಾ ವಿಧವೆಯರ ಬದುಕನ್ನು ಸಂಕೇತಿಸಿದಂತೆ ಅವಳಿಗೆ ತೋರಿತು.

ಬಹಳಷ್ಟು ವಿಧವೆಯರಿದ್ದಾರೆ ಮಥುರಾದಲ್ಲಿ. ಮಥುರಾದ ಆಶ್ರಮಗಳಲ್ಲಿರುವ ಇವರನ್ನು ‘ಮಾ’ ಎಂದು ಕರೆಯಲಾಗುತ್ತದೆ. ಮೋಕ್ಷದ ಉದ್ದೇಶಕ್ಕಾಗಿ, ಅನ್ಯಗತಿಯಿಲ್ಲದೆ, ಮಕ್ಕಳಿಂದ- ಸಹೋದರರಿಂದ ತಿರಸ್ಕೃತರಾಗಿ ಮಥುರೆ ಸೇರಿಕೊಂಡ ವಿಧವೆಯರು ಇವರೆಲ್ಲಾ. ಪ್ರತಿಯೊಬ್ಬ ವಿಧವೆಯನ್ನು ಮಾತನಾಡಿಸಿದಾಗಲೂ ಅವರ ಜೀವನದ ದಾರುಣ ಘಟನೆಗಳು ತಿಳಿದುಬರುತ್ತವೆ. ಮಥುರೆಗೆ ಬಂದ ಬಳಿಕವೂ ಅಂಥವರ ಜೀವನಮಟ್ಟದಲ್ಲೇನೂ ಸುಧಾರಣೆಯಾಗಿಲ್ಲ. ಹಲವರ ಜೀವನ ಮತ್ತಷ್ಟು ಕೆಟ್ಟುಹೋಗಿದೆ. ಕೆಲವು ಜನ ವಿಧವೆಯರು ಬದುಕಿನ ನಿರ್ವಹಣೆಗಾಗಿ ಮಥುರೆಯ ಪ್ರಸಿದ್ಧ ಗಲ್ಲಿಗಳಲ್ಲಿ ಭಿಕ್ಷೆ ಬೇಡುತ್ತಾರೆ. ಅವರನ್ನು ಭಿಕ್ಷುಕರಂತೆ ಹೀನಾಯವಾಗಿ ಯಾರೂ ಪರಿಗಣಿಸುವುದಿಲ್ಲ ಎನ್ನುವುದು ತುಸು ಸಮಾಧಾನದ ಸಂಗತಿ. ಕೆಲವು ಜನ ವಿಧವೆಯರು ವೇಶ್ಯೆಯರಾಗಿಯೂ ದುಡಿಯುತ್ತಿದ್ದಾರೆ. ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟವರೂ ಇದ್ದಾರೆ. ಮಥುರೆಯ ಕೆಲವು ಆಶ್ರಮಗಳಲ್ಲಿ ಮೂಲಭೂತ ಸೌಲಭ್ಯಗಳೂ ಇಲ್ಲ. ಶುದ್ಧವಾದ ನೀರು ದೊರೆಯುವುದಿಲ್ಲ. ಶೌಚಾಲಯ, ಕೊಠಡಿಗಳ ಮಲಿನತೆ ಹೇಳುವುದಕ್ಕೆ ಸಾಧ್ಯವಿಲ್ಲ.

ಈ ವಿಧವೆಯರು ಇಂತಹ ಅಸಹನೀಯ ಅವಸ್ಥೆಯಲ್ಲಿ ಬದುಕುತ್ತಿರುವುದಕ್ಕೆ ರಾಜಕೀಯ ಕಾರಣವೂ ಇದೆ. ಮಥುರೆಯ ಪಾಲಿಗೆ ಶಾಶ್ವತ ಅತಿಥಿಗಳಂತಿರುವ ಇವರಿಗೆ ಮತದಾನದ ಹಕ್ಕು ಇಲ್ಲ. ಆದ್ದರಿಂದ ಜನರ ಮತವನ್ನೇ ನಂಬಿಕೊಂಡಿರುವ ಜನಪ್ರತಿನಿಧಿಗಳು ಇವರನ್ನು ಗಣನೆಗೇ ತೆಗೆದುಕೊಂಡಿಲ್ಲ.

ಹಾಗೆಂದು ಮಥುರೆಯಲ್ಲಿರುವ ಎಲ್ಲಾ ವಿಧವೆಯರೂ ನೋವಿನಿಂದ ಇದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಜೀವನದುದ್ದಕ್ಕೂ ಕಷ್ಟವನ್ನೇ ಅನುಭವಿಸಿ ಬಂದ ಕೆಲವು ವಿಧವೆಯರಿಗೆ ಮಥುರೆ ಮನಃಶ್ಶಾಂತಿಯನ್ನೂ ಕೊಟ್ಟಿದೆ. ಮೊದಲಿಗಿಂತ ನಿರಾಳರಾಗಿ ಬದುಕು ನಡೆಸುತ್ತಿರುವ ವಿಧವೆಯರೂ ಇಲ್ಲಿದ್ದಾರೆ.

ಬಟ್ಟೆ ಮಡಚಿಡುತ್ತಿದ್ದ ರಾಧೆ ಮಾಳ ಹೆಸರನ್ನು ಯಾರೋ ಕರೆಯುತ್ತಾ, ಅವಳಿದ್ದ ಕೋಣೆಯ ಬಳಿಗೆ ಬರತೊಡಗಿದರು. ಧ್ವನಿಯಲ್ಲಿಯೇ ಅವರು ಔಸಿ ಮಾ ಎನ್ನುವುದು ರಾಧೆ ಮಾಳಿಗೆ ಸ್ಪಷ್ಟವಾಯಿತು. ಔಸಿ ಮಾ ಬಿಹಾರದವರು. ಅವರಿಗೆ ವಯಸ್ಸು ಎಪ್ಪತ್ತು ದಾಟಿದೆ. ರಾಧೆ ಮಾ ಆಶ್ರಮ ಸೇರಿಕೊಳ್ಳುವುದಕ್ಕೆ ಏಳು ವರ್ಷ ಮೊದಲೇ ಆಶ್ರಮ ಸೇರಿದ್ದ ಅವರಿಗೆ ರಾಧೆ ಮಾ ಬಗ್ಗೆ ವಿಶೇಷವಾದ ಪ್ರೀತಿಯಿತ್ತು. ಔಸಿ ಎಂದರೆ ಬಿಹಾರೀ ಭಾಷೆಯಲ್ಲಿ ಲಕ್ಷ್ಮೀ ಎಂಬ ಅರ್ಥವಿದೆ. ಇದನ್ನು ಔಸಿ ಮಾ ಅವರೇ ರಾಧೆ ಮಾಳಿಗೆ ತಿಳಿಸಿದ್ದು. ಆದರೆ ಅವರ ಹೆಸರಿನಲ್ಲಿರುವ ಲಕ್ಷ್ಮಿ ಅವರ ಬದುಕಿನಲ್ಲಿ ಇರಲೇ ಇಲ್ಲ.

ಔಸಿ ಮಾ ಅವರದ್ದು ಬಾಲ್ಯವಿವಾಹ. ಅವರ ಊರಿನಲ್ಲಿ ಬಾಲ್ಯವಿವಾಹ ಸರ್ವೇಸಾಮಾನ್ಯವಾಗಿತ್ತಂತೆ. ಒಂದುವೇಳೆ ಹುಡುಗಿಗೆ ಹದಿನೆಂಟು ತುಂಬುವುದರೊಳಗೆ ಮದುವೆ ಆಗದಿದ್ದರೆ ಮತ್ತೆ ಆ ಹುಡುಗಿಯನ್ನು ಯಾರೂ ಮದುವೆಯೇ ಆಗುತ್ತಿರಲಿಲ್ಲವಂತೆ. ಮದುವೆಯಾದಾಗ ಇವರಿಗೆ ಹದಿನಾರು ವರ್ಷ. ಗಂಡ ಇವರಿಗಿಂತ ಇಪ್ಪತ್ತೊಂಬತ್ತು ವರ್ಷ ದೊಡ್ಡವನು. ಶ್ರೀಮಂತ ಎಂಬ ಕಾರಣಕ್ಕೆ ಕಡುಬಡವರಾಗಿದ್ದ ಔಸಿ ಮಾ ಅವರ ತಂದೆ- ತಾಯಿ ಮಧ್ಯವಯಸ್ಸಿನ ವ್ಯಕ್ತಿಯ ಜೊತೆಗೆ ಮಗಳ ಮದುವೆ ಮಾಡಿದ್ದರು. ಮದುವೆ ಆದ ಮರುವರ್ಷವೇ ಔಸಿ ಮಾ ಗಂಡುಮಗುವನ್ನು ಹೆತ್ತಳು. ಅದೇ ವರ್ಷ ಅವರ ಗಂಡ ತೀರಿಕೊಂಡಿದ್ದ. ಅವನಿಗೆ ಮದುವೆಗೂ ಮೊದಲೇ ಹೃದಯದ ಸಮಸ್ಯೆ ಇದ್ದ ವಿಷಯ ಅವನು ತೀರಿಕೊಂಡ ಬಳಿಕವೇ ಔಸಿ ಮಾ ಅವರ ಮನೆಯವರಿಗೆ ತಿಳಿದುಬಂದದ್ದು. ಹೆತ್ತವರ ಸಹಕಾರದಿಂದ ಮಗನನ್ನು ಬೆಳೆಸತೊಡಗಿದ ಔಸಿ ಮಾ ತಾನು ಕೂಲಿನಾಲಿ ಮಾಡಿ, ಮಗನನ್ನು ಚೆನ್ನಾಗಿ ಓದಿಸಿದರು. ಮಗ ಓದುವುದರಲ್ಲಿ ಭಲೇ ಬುದ್ಧಿವಂತನಿದ್ದ. ಉನ್ನತ ಶಿಕ್ಷಣವನ್ನು ಪಡೆದ ಆತ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕನಾದ. ತಾನು ಇಷ್ಟು ವರ್ಷಗಳ ಕಾಲ ಕಷ್ಟಪಟ್ಟದ್ದಕ್ಕೂ ಸಾರ್ಥಕವಾಯಿತು ಎಂದು ಔಸಿ ಮಾ ಅವರಿಗೆ ಅನಿಸಿತು. ತನಗಾಗಿ ಬದುಕು ಮುಡಿಪಾಗಿಟ್ಟ ತಾಯಿಯನ್ನು ಇನ್ನುಮುಂದೆ ತುಂಬಾ ಕುಶಿಕುಶಿಯಿಂದ ನೋಡಿಕೊಳ್ಳುತೇನೆಂದು ಕೆಲಸ ದೊರೆತ ಸಂದರ್ಭದಲ್ಲಿ ಅವರ ಮಗ ಬಾಯಿಬಿಟ್ಟು ಹೇಳಿದ್ದ. ಆದರೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬಯಸಿದ್ದವ ಮದುವೆಯಾದ ಮೇಲೆ ಸಂಪೂರ್ಣ ಬದಲಾದ. ಶ್ರೀಮಂತಿಕೆಯಲ್ಲಿ ಬೆಳೆದಿದ್ದ ಅವನ ಹೆಂಡತಿಗೆ ಅತ್ತೆಯ ಜೊತೆಗೆ ಹೊಂದಿಕೊಂಡು ಬದುಕುವ ಮನಸ್ಸೇ ಇರಲಿಲ್ಲ. ಬಡವರ ಬಗ್ಗೆ ತಾತ್ಸಾರದ ಭಾವನೆ ಇಟ್ಟುಕೊಂಡಿದ್ದ ಅವಳು ಅತ್ತೆಗೆ ಏನೆಂದರೆ ಏನೂ ಮರ್ಯಾದೆ ಕೊಡುತ್ತಿರಲಿಲ್ಲ. ಮೊಮ್ಮಗನನ್ನು ಮುದ್ದಿಸಿಯಾದರೂ ಸಂತಸ ಕಂಡುಕೊಳ್ಳುತ್ತೇನೆ ಎಂದು ಔಸಿ ಮಾ ಬಯಸಿದರೆ ಅದೂ ಸಾಧ್ಯವಾಗಲಿಲ್ಲ. ಮಗುವಿಗೆ ನೆಗಡಿ ಆಗಿರುವುದನ್ನೇ ನೆಪವಾಗಿಟ್ಟುಕೊಂಡು, ಅತ್ತೆ ಗಲೀಜು ಕೈಯ್ಯಲ್ಲಿ ಅವನ ಮುಖ ಮುಟ್ಟಿದ್ದರಿಂದಲೇ ಹೀಗಾಗಿದೆ ಎಂದು ಗಂಡನಲ್ಲಿ ಹೇಳಿ, ರಂಪ ಎಬ್ಬಿಸಿದ್ದಳು ಸೊಸೆ. ಇದಾದ ಬಳಿಕ ಮುದ್ದಿನ ಮೊಮ್ಮಗನನ್ನು ಮುದ್ದಿಸಲೂ ಹಿಂದೆಮುಂದೆ ನೋಡುವಂತಾಗಿತ್ತು. ಆದರೂ ಕರುಳ ಪಾಶ ತಡೆಯುತ್ತಿರಲಿಲ್ಲ. ಸೊಸೆ ಬಳಿಯಲ್ಲಿಲ್ಲದ ಸಮಯ ನೋಡಿಕೊಂಡು ಮೊಮ್ಮಗನನ್ನು ಮುದ್ದಿಸುತ್ತಿದ್ದರು.

ಔಸಿ ಮಾ ಸೊಸೆಯ ಜೊತೆಗೆ ಹೊಂದಿಕೊಂಡು ಪ್ರಯತ್ನಿಸಿದರೂ ಆಕೆಗೆ ಅದು ಬೇಕಾಗಿರಲಿಲ್ಲ. ಈ ಮುದುಕಿ ತಮ್ಮಿಬ್ಬರ ಖಾಸಗಿತನಕ್ಕೆ ದೊಡ್ಡ ಅಡ್ಡಿ ಎಂದು ಅಂದುಕೊಂಡಿದ್ದಳು ಅವಳು. ಅದೊಂದು ದಿನ ತೀರ್ಥಯಾತ್ರೆಗೆ ಹೋಗಿ ಬರೋಣವೆಂದು ತನ್ನದೇ ಕಾರಿನಲ್ಲಿ ತಾಯಿಯನ್ನು ಕೂರಿಸಿಕೊಂಡು ಬಂದ ಔಸಿ ಮಾ ಅವರ ಮಗ ಮಥುರೆಯ ಈ ಆಶ್ರಮದಲ್ಲಿ ಅವರನ್ನು ಬಿಟ್ಟುಹೋಗಿದ್ದ. “ಇಲ್ಲಿರುವ ವಿಧವೆಯರಿಗೆ ಮೋಕ್ಷ ದೊರಕುತ್ತದಂತೆ. ನಿನಗೆ ಮೋಕ್ಷ ದೊರೆಯಲಿ ಎಂಬ ಕಾರಣಕ್ಕೆ ಇಲ್ಲಿಗೆ ಕರೆತಂದಿದ್ದೇನೆ. ನೀನಿಲ್ಲಿ ಖುಷಿಯಿಂದ ಬದುಕಬಹುದು” ಹೊರಡುವಾಗ ಮಗ ಹೇಳಿದ ಮಾತು ಔಸಿ ಮಾ ಅವರ ಕರುಳನ್ನು ಕೊಂದಿತ್ತು.

ಔಸಿ ಮಾ ಅವರ ಜೀವನದ ಘಟನೆಯನ್ನು ಅವರ ಬಾಯಿಯಿಂದಲೇ ಕೇಳಿಸಿಕೊಂಡಿದ್ದ ರಾಧೆ ಮಾಳಿಗೆ ಮನುಷ್ಯ ಸಂಬಂಧಗಳ ದುರ್ಬಲತೆಯ ಅರಿವಾಗಿತ್ತು. ಮಥುರೆ ಸೇರಿಕೊಂಡ ಬಳಿಕದ ಈ ಹತ್ತು ವರ್ಷಗಳಲ್ಲಿ ಅವಳು ಇಂತಹ ನೂರಾರು ಘಟನೆಗಳನ್ನು ಕೇಳಿಸಿಕೊಂಡಿದ್ದಾಳೆ. ಮಥುರೆಯಲ್ಲಿರುವ ಅದೆಷ್ಟೋ ವಿಧವೆಯರ ಒಡಲಲ್ಲಿ ಇಂತಹ ವಿಷಾದನೀಯ ಕಥೆಗಳು ಬಚ್ಚಿಟ್ಟುಕೊಂಡಿವೆ.

ಇಂತಹ ಔಸಿ ಮಾ ತನ್ನ ಅರ್ಧದಷ್ಟೂ ವಯಸ್ಸಾಗದ ರಾಧೆ ಮಾಳ ಜೊತೆಗೆ ಗೆಳೆತನವನ್ನು ಬೆಳೆಸಿಕೊಂಡಿದ್ದಾರೆ. ಇವಳಲ್ಲಿ ಮಾತಾಡಿ ಅವರು ಹಗುರಾಗುತ್ತಾರೆ. ಅವರಲ್ಲಿ ನೋವು ತೋಡಿಕೊಂಡು ಇವಳು ಹಗುರಾಗುತ್ತಾಳೆ. ಪರಸ್ಪರರ ದುಗುಡ- ದುಮ್ಮಾನಗಳನ್ನು ಸಾಂತ್ವನದ ಮಾತುಗಳನ್ನಾಡಿ ಇಬ್ಬರೂ ಕಡಿಮೆಗೊಳಿಸಿಕೊಳ್ಳುತ್ತಾರೆ. ಆ ಮೂಲಕ ಇಬ್ಬರೂ ಆತ್ಮತೃಪ್ತಿಯನ್ನು ಹೊಂದುತ್ತಾರೆ.

ರಾಧೆ ಮಾಳಲ್ಲಿ ಒಂದಷ್ಟು ಹೊತ್ತು ಮಾತನಾಡಿದ ಔಸಿ ಮಾ ಮಥುರೆಯ ಗಲ್ಲಿಯ ಕಡೆಗೆ ಹೊರಟರು. ಇದು ಅವರ ದಿನಚರಿ. ಅವರೇ ಹೇಳುವಂತೆ, ರಾಧೆ ಮಾಳಲ್ಲಿ ಮಾತನಾಡಿದರೆ ಇಡೀ ದಿನವನ್ನು ಕಳೆಯುವುದಕ್ಕೆ ಬೇಕಾದ ಉತ್ಸಾಹ ತುಂಬುತ್ತದಂತೆ. ಆಶ್ರಮಕ್ಕೆ ಬಂದ ಹೊಸದರಲ್ಲಿ ಔಸಿ ಮಾ ಅವರಿಂದ ಮಾರ್ಗದರ್ಶನ ಪಡೆದಿದ್ದ ರಾಧೆ ಮಾ ಇಂದು ಅವರಿಗೇ ಜೀವನೋತ್ಸಾಹ ತುಂಬುವಷ್ಟು ಪ್ರೌಢತೆಯನ್ನು ಪಡೆದಿದ್ದಾಳೆ. ಅಷ್ಟರಮಟ್ಟಿಗೆ ಪರಿಪಕ್ವಗೊಂಡಿದ್ದಾಳೆ. ಮಾನಸಿಕವಾಗಿ, ಬೌದ್ಧಿಕವಾಗಿ ಆಕೆ ಈಗ ಬೆಳೆದಿದ್ದಾಳೆ.

ಆಶ್ರಮದಿಂದ ಹೊರಟ ಔಸಿ ಮಾ ಅವರ ಜೊತೆಯಲ್ಲಿಯೇ ರಾಧೆ ಮಾಳೂ ಹೊರಟಳು. ಆಶ್ರಮದಿಂದ ನೇರವಾಗಿ ಮುಂದಕ್ಕೆ ಸಾಗಿ, ಬಲಕ್ಕೆ ತಿರುಗಿ, ಎಡಕ್ಕೆ ಹೊರಳಿಕೊಂಡಾಗ ಸಿಗುವ ರಮೇಶ್‌ರಾಜ್ ತಿವಾರಿಯವರ ದುಖಾನ್‌ನಿಂದ ಪೆನ್ನು- ಪೇಪರ್ ತೆಗೆದುಕೊಳ್ಳಬೇಕಿತ್ತು. ಊರಿನಿಂದ ಅಣ್ಣಂದಿರ ಜೊತೆಗೆ ಮಥುರೆಗೆ ಬಂದಾಗ ತಾನು ಶಾಶ್ವತವಾಗಿ ಊರು ಬಿಡಲಿದ್ದೇನೆ ಎನ್ನುವುದು ರಾಧೆ ಮಾಳಿಗೆ ಗೊತ್ತಿರಲಿಲ್ಲ. ಅವಳು ಗುಟ್ಟಾಗಿ ಬರೆದಿಟ್ಟಿದ್ದ ಕವನಗಳೆಲ್ಲಾ ಊರಿನಲ್ಲಿಯೇ ಬಾಕಿಯಾಗಿದ್ದವು. ಮಥುರೆ ಸೇರಿಕೊಂಡ ಅವಳಿಗೆ ಈ ವಿಷಯ ವಿಪರೀತ ಬೇಸರವನ್ನು ಉಂಟುಮಾಡಿತ್ತು. ತನ್ನ ಬದುಕಿನ ಅನುಭವಗಳೆಲ್ಲಾ ಅತ್ತಿಗೆಯಂದಿರ ಕೈಯ್ಯಲ್ಲಿ ಅಡುಗೆಮನೆಯ ಒಲೆ ಸೇರಿಕೊಂಡಿರಬಹುದೆಂದು ನೆನೆದು ಅವಳು ವ್ಯಥೆಪಟ್ಟಿದ್ದಳು. ಕವಿತೆಗಳು ಒಲೆ ಸೇರಿದರೇನಾಯಿತು? ಸಾಹಿತ್ಯ ಸೃಜಿಸುವ ತನ್ನ ಶಕ್ತಿ ಒಲೆ ಸೇರಿಲ್ಲವಲ್ಲ ಎಂಬ ಕಿಂಚಿತ್ ಸಮಾಧಾನವೂ ಅವಳಿಗಿತ್ತು. ಆ ಭರವಸೆಯನ್ನು ಇರಿಸಿಕೊಂಡು ಮಥುರೆಗೆ ಬಂದ ಹೊಸದರಿಂದಲೂ ಮಥುರೆಯ ತನ್ನ ಅನುಭವಗಳನ್ನು ಸಾಹಿತ್ಯದ ರೂಪದಲ್ಲಿ ಬರೆಯಲಾರಂಭಿಸಿದ್ದಳು. ಬರೆಯುವುದು ಮಾತ್ರವಲ್ಲ, ಹಾಗೆ ಬರೆದದ್ದನ್ನು ಇತ್ತೀಚೆಗೆ ಅಂಚೆಯ ಮೂಲಕ ಪತ್ರಿಕೆಗಳಿಗೂ ಕಳುಹಿಸಿಕೊಡುತ್ತಿದ್ದಾಳೆ. ಮೊದಲು ಕನ್ನಡದಲ್ಲಿ ಮಾತ್ರ ಬರೆಯುತ್ತಿದ್ದ ಅವಳು ಈಗ ಹಿಂದಿ- ಇಂಗ್ಲಿಷ್ ಭಾಷೆಗಳಲ್ಲಿಯೂ ಸಮರ್ಥವಾಗಿ ಸಾಹಿತ್ಯ ಸೃಜಿಸುವ ಸಾಮರ್ಥ್ಯ ಗಳಿಸಿಕೊಂಡಿದ್ದಾಳೆ. ‘ಅಗ್ನಿಪುತ್ರಿ’ ಕಾವ್ಯನಾಮದಲ್ಲಿ ಆಕೆ ಬರೆಯುವ ಕವಿತೆಗಳು ಬಹಳ ಜನಪ್ರಿಯವಾಗಿವೆ. ಎರಡು ಜನಪ್ರಿಯ ಪತ್ರಿಕೆಗಳಲ್ಲಿ ಆಕೆಯ ಬರಹಗಳು ವಾರಕ್ಕೊಂದರಂತೆ ಪ್ರಕಟಗೊಳ್ಳುತ್ತಿದೆ. ಆದರೆ ಆಕೆಯ ಬರಹವನ್ನು ಬಲು ಇಷ್ಟಪಟ್ಟು ಓದುವವರಿಗೂ ಈ ‘ಅಗ್ನಿಪುತ್ರಿ’ ಯಾರು? ಆಕೆಯ ನಿಜವಾದ ಹೆಸರೇನು? ಆಕೆ ಎಲ್ಲಿಯವಳು? ಎನ್ನುವುದು ತಿಳಿದಿಲ್ಲ. ಪ್ರತೀದಿನ ಬರೆಯುವ ಅವಳು ಪೆನ್ನು- ಪೇಪರ್‌ಗಳನ್ನು ತಿವಾರಿಯವರ ಅಂಗಡಿಯಿಂದಲೇ ತೆಗೆದುಕೊಳ್ಳುತ್ತಾಳೆ. ಒಂದು ವಾರಕ್ಕೆ ಸಾಕಾಗುವಷ್ಟು ಹಾಳೆಗಳನ್ನು ಒಮ್ಮೆಗೇ ಖರೀದಿಸುತ್ತಾಳೆ.

ಹಾಗೆ ಹಾಳೆಗಳನ್ನು ಖರೀದಿಸಲು ಬೇಕಾಗುವ ಸಣ್ಣ ಮೊತ್ತವನ್ನು ಮಥುರೆಯ ಗಲ್ಲಿಗಳಲ್ಲಿ ಭಿಕ್ಷೆ ಬೇಡಿ ಸಂಪಾದಿಸುತ್ತಾಳೆ.

ತಿವಾರಿಯವರ ಅಂಗಡಿಗೆ ರಾಧೆ ಮಾ ಬಂದಾಗ ಗಲ್ಲಾಪೆಟ್ಟಿಗೆಯಲ್ಲಿ ರಮೇಶ್‌ರಾಜ್ ತಿವಾರಿಯವರ ಮಗ ಕಮಲ್ ತಿವಾರಿ ಕುಳಿತಿದ್ದ. ಇವಳನ್ನು ಕಂಡೊಡನೆಯೇ ಆತ್ಮೀಯತೆಯಿಂದ ನಗುತ್ತಾ, “ಈಗ ಬಂದೆ” ಎಂದು ಹೇಳಿ, ಅಂಗಡಿಯ ಒಳಭಾಗಕ್ಕೆ ಹೋದ. ಕಮಲ್ ತಿವಾರಿ ಮೂವತ್ತೆರಡು ವರ್ಷ ವಯಸ್ಸಿನ ಯುವಕ. ವಿದ್ಯಾವಂತ. ಸ್ಫುರದ್ರೂಪಿ. ರಾಧೆ ಮಾಳ ಒಳ್ಳೆಯ ಗೆಳೆಯ. ಐದು ವರ್ಷಗಳ ಹಿಂದೆ ಇವಳಿಗೆ ಪರಿಚಯವಾದವನು. ಅವನ ಮುಖದ ಮೇಲಿರುವ ನಗುವಲ್ಲಿ ರಾಧೆ ಮಾ ಕೃಷ್ಣನನ್ನು ಕಾಣುತ್ತಾಳೆ.

ತಮಾಷೆಯ ಸಂಗತಿಯೆಂದರೆ, ಕಮಲ್ ಅಗ್ನಿಪುತ್ರಿಯ ಬರಹಗಳ ಬಹುದೊಡ್ಡ ಅಭಿಮಾನಿ. ಅವಳ ಬಗ್ಗೆ ಮಾತನಾಡಲು ಶುರುಮಾಡಿದರೆ ಹುಚ್ಚನಂತೆ ಅವಳ ಕವನಗಳ ಬಗ್ಗೆಯೇ ಮಾತನಾಡುತ್ತಿರುತ್ತಾನೆ. ಆದರೆ ತನ್ನ ಪಕ್ಕದಲ್ಲಿಯೇ ನಿಂತು, ಆ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತಿರುವ ರಾಧೆ ಮಾಳೇ ಆ ಅಗ್ನಿಪುತ್ರಿ ಎಂಬ ವಿಷಯವೇ ಅವನಿಗೆ ತಿಳಿದಿಲ್ಲ!!! ರಾಧೆ ಮಾಳೂ ಸಾಹಿತ್ಯ ರಚಿಸುತ್ತಾಳೆ ಎಂದು ಅವನಿಗೆ ತಿಳಿದಿತ್ತು. ಆದ್ದರಿಂದ ಸಾಹಿತ್ಯದ ಕುರಿತಾಗಿ ಈಕೆಯ ಜೊತೆ ಮೊದಲಿನಿಂದಲೂ ಹರಟುತ್ತಿದ್ದ. ಅಗ್ನಿಪುತ್ರಿಯನ್ನು ಅವನು ಹೊಗಳುವುದನ್ನು ಕೇಳಿಸಿಕೊಳ್ಳುವ ರಾಧೆ ಮಾಳಿಗೆ ಒಳಗೊಳಗೆ ನಗು ಬಂದರೂ ಆಕೆ ತೋರಗೊಡುವುದಿಲ್ಲ. ಅವನ ಆತ್ಮೀಯತೆಯ ನಗು, ನಿಷ್ಕಲ್ಮಷ ಮಾತು ಅವಳಿಗೆ ಬಲು ಇಷ್ಟ. ಯಾವತ್ತೂ ವಿಷಾದದ ಭಾವದಲ್ಲಿಯೇ ಇರುವ ಅವಳು ಅವನೆದುರು ನಿಂತ ತಕ್ಷಣವೇ ಅರಳಿದ ಹೂವಾಗುತ್ತಾಳೆ. ಅದು ಯಾಕೆ ಎನ್ನುವುದು ಅವಳಿಗೂ ತಿಳಿದಿಲ್ಲ. ಹೆಣ್ಣುಮಕ್ಕಳ ಕುರಿತಾದ ಕಮಲ್‌ನ ನಿಲುವು ಅವಳನ್ನು ಹೆಚ್ಚು ಆಕರ್ಷಿಸಿರಬೇಕು. ರಾಧೆ ಮಾ ತನ್ನ ಗಂಡನಿಂದ ತಾನು ಅನುಭವಿಸಿದ ಸಂಕಷ್ಟಗಳನ್ನು, ವಿಕೃತತೆಗಳನ್ನು ಆಧಾರವಾಗಿಟ್ಟುಕೊಂಡು ನೀಳ್ಗತೆಯೊಂದನ್ನು ಬರೆದು, ಯಾವತ್ತಿನಂತೆ ಅಗ್ನಿಪುತ್ರಿ ಕಾವ್ಯನಾಮದಲ್ಲಿ ಪತ್ರಿಕೆಗೆ ಕಳುಹಿಸಿಕೊಟ್ಟಿದ್ದಳು. ವಾರಪತ್ರಿಕೆಯಲ್ಲಿ ಅದು ಎಂಟು ಅಧ್ಯಾಯಗಳ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಇದಾದ ಬಳಿಕ ರಾಧೆ ಮಾ ತನ್ನ ಅಂಗಡಿಗೆ ಬಂದಾಗ ಅವನು ಆ ಧಾರಾವಾಹಿಯ ಬಗ್ಗೆ ಈಕೆಯ ಜೊತೆಗೆ ಚರ್ಚಿಸಿದ್ದ. ಹಾಗೆ ಮಾತನಾಡುವಾಗ ಹೆಣ್ಣುಮಕ್ಕಳ ಕುರಿತ ಆತನ ಕಾಳಜಿ ರಾಧೆ ಮಾಳ ಗಮನಕ್ಕೆ ಬಂದಿತ್ತು.

ವಾಸ್ತವವಾಗಿ ಕಮಲ್ ರಾಧೆ ಮಾಳ ಗೆಳೆಯ ಮಾತ್ರವಲ್ಲ, ಪ್ರಿಯಕರನೂ ಆಗಿದ್ದ. ಆದರೆ ಇದು ಏಕಮುಖ ಪ್ರೀತಿ. ಪರಿಶುದ್ಧ ಪ್ರೀತಿಗಾಗಿ ಹಂಬಲಿಸುತ್ತಿದ್ದ ರಾಧೆ ಮಾ ತನ್ನ ಮನಸ್ಸಿನಲ್ಲಿಯೇ ಗುಟ್ಟಾಗಿ ಆತನನ್ನು ಪ್ರೀತಿಸುತ್ತಿದ್ದಾಳೆ. ತನಗೆ ನಿಷ್ಕಪಟವಾದ, ಸಾತ್ವಿಕವಾದ ಪ್ರೀತಿಯನ್ನು ಧಾರೆಯೆರೆಯುವ ಕೃಷ್ಣ ಅವನೆಂದು ಆಕೆ ನಂಬಿದ್ದಾಳೆ. ಆದರೆ ತನ್ನ ಪ್ರೀತಿಯನ್ನು ಅವನು ಒಪ್ಪಿಸಿಕೊಳ್ಳುತ್ತಾನೆಯೇ ಎಂಬ ಸಂಶಯವೂ ಅವಳಿಗಿದೆ. ತನಗಿಂತ ಮೂರು ವರ್ಷಗಳಷ್ಟು ಸಣ್ಣವನು. ವಿದ್ಯಾವಂತ ಬೇರೆ. ಅವನು ತನ್ನನ್ನು ಪ್ರೀತಿಸಿಯಾನೇ? ಎಂದು ಅಂದುಕೊಳ್ಳುತ್ತಾಳೆ. ಮರುಕ್ಷಣವೇ, ಕೃಷ್ಣ ರಾಧೆಯರ ಪ್ರೇಮಕ್ಕೆ ಇಂತಹ ಮಿತಿಗಳೆಲ್ಲಿಯದು? ಎಂಬ ಸಮಾಧಾನಕ್ಕೊಳಗಾಗುತ್ತಾಳೆ. ಆತ ತನ್ನನ್ನು ‘ಮಾ’ ಎಂದು ಸಂಬೋಧಿಸದೆ, ‘ಫ್ರೆಂಡ್’ ಎಂದು ಕರೆಯುವುದು ಇವಳಲ್ಲಿ ಅದೆಷ್ಟೋ ಬಾರಿ ರೋಮಾಂಚನ ಮೂಡಿಸಿದೆ. ಸರಿಯಾದ ಸಂದರ್ಭ ನೋಡಿಕೊಂಡು, ಕಮಲ್‌ನ ಎದುರು ಪ್ರೇಮ ನಿವೇದನೆ ಮಾಡಿಕೊಳ್ಳಬೇಕು, ಅವನನ್ನು ಮದುವೆಯಾಗಬೇಕು, ಒಂದಿಷ್ಟೂ ಕಲ್ಮಷವಿಲ್ಲದ ಪ್ರೀತಿಯ ಅನುಭವ ಪಡೆಯಬೇಕು ಎಂಬ ಕನಸನ್ನು ಆಕೆ ಇರಿಸಿಕೊಂಡಿದ್ದಾಳೆ.

ಅಂಗಡಿಯ ಒಳಭಾಗಕ್ಕೆ ಹೋಗಿದ್ದ ಕಮಲ್ ಸ್ವೀಟ್ ಬಾಕ್ಸ್ನೊಂದಿಗೆ ಈಚೆ ಬಂದ. ನಗುತ್ತಾ, “ನನಗೆ ದಿಲ್ಲಿಯ ಒಂದು ಮಲ್ಟಿ ನ್ಯಾಷನಲ್ ಕಂಪೆನಿಯಲ್ಲಿ ಕೆಲಸ ಸಿಕ್ಕಿದೆ ಫ್ರೆಂಡ್. ನಾಡಿದ್ದೇ ಜಾಯಿನ್ ಆಗಬೇಕು. ನಾಳೆ ಬೆಳಗ್ಗೆ ಇಲ್ಲಿಂದ ಹೊರಡುತ್ತಿದ್ದೇನೆ” ಎಂದು ಹೇಳಿ, ಸ್ವೀಟ್ ಬಾಕ್ಸನ್ನು ಇವಳೆಡೆಗೆ ಚಾಚಿದ. ಸ್ವೀಟ್ ತೆಗೆದುಕೊಂಡವಳು ಅದನ್ನು ತಿನ್ನಲಿಲ್ಲ. ತಿನ್ನಬೇಕೆಂದು ಅವಳಿಗೆ ಮನಸ್ಸಾಗಲಿಲ್ಲ. ಅಷ್ಟರಲ್ಲಿ ಅಂಗಡಿಯ ಒಳಭಾಗದಿಂದ ಬಂದ ಅವನ ತಂದೆ ರಾಧೆ ಮಾ ಕಡೆಗೆ ನೋಡಿ, ತುಸು ನಗುತ್ತಾ ಹೇಳಿದರು- “ಈಗ ನನಗೆ ಸಮಾಧಾನ ಆಗಿದೆ. ಸರಿಯಾದ ಕೆಲಸ ಸಿಗುವವರೆಗೆ ಮದುವೆ ಬೇಡ ಎನ್ನುತ್ತಿದ್ದವ ಈಗ ಮದುವೆಗೂ ಒಪ್ಪಿಕೊಂಡಿದ್ದಾನೆ. ಒಳ್ಳೆಯ ಪ್ರಪೋಸಲ್‌ಗಳೂ ಬಂದಿವೆ.

ಇವನಮ್ಮ ಒಳ್ಳೆ ಸೊಸೆಯೆನಿಸಿಕೊಳ್ಳುವವಳನ್ನು ಆಯ್ಕೆ ಮಾಡಿಯೂ ಆಗಿದೆ” ಪೆನ್ನು- ಪೇಪರ್ ತೆಗೆದುಕೊಂಡು, ಕಮಲ್‌ನಿಗೆ ನಗುಮುಖದ ಶುಭಾಶಯವನ್ನು ಹೇಳಿ, ರಾಧೆ ಮಾ ಅಲ್ಲಿಂದ ಹೊರಡುವಾಗ ಆಕೆಯ ಮುಖ ಬಾಡಿತ್ತು.

ಆಶ್ರಮಕ್ಕೆ ಬಂದು ಬರೆಯಲು ಕುಳಿತವಳಲ್ಲಿ ಹೊಸದೇನನ್ನೋ ಬರೆಯಬೇಕೆಂಬ ತುಡಿತವಿತ್ತು. ತನ್ನ ಲೇಖನಿಯಿಂದ ಮಹಾಪ್ರವಾಹವನ್ನೆಬ್ಬಿಸುವ ಹುಚ್ಚು ಈಗ ಅವಳಲ್ಲಿತ್ತು. ನಿರ್ಲಿಪ್ತಳಾಗಿ ಕುಳಿತ ಆಕೆ ಬರೆಯತೊಡಗಿದಳು. ಬರೆಯತೊಡಗಿದಳು. ಬರೆಯುತ್ತಲೇ ಇದ್ದಳು......

***

ಇದಾಗಿ ಐದು ವರ್ಷಗಳು ಕಳೆದಿದ್ದವು. ಅಗ್ನಿಪುತ್ರಿ ಬರೆದ ‘ಮಥುರ ಕಥಾ’ ಎಂಬ ಕಾದಂಬರಿ ಪ್ರಸಿದ್ಧ ನಿಯತಕಾಲಿಕವೊಂದರಲ್ಲಿ ಧಾರಾವಾಹಿ ರೂಪದಲ್ಲಿ ಸುದೀರ್ಘವಾಗಿ ಪ್ರಕಟಗೊಂಡಿತು. ಸಮಾಜದ ಮೇಲೆ ಅದು ಅಸದೃಶ ಪರಿಣಾಮವನ್ನು ಉಂಟುಮಾಡಿತ್ತು. ಮಥುರಾದ ವಿಧವೆಯರ ಬದುಕನ್ನು ಕೇಂದ್ರೀಕರಿಸಿಕೊಂಡಿದ್ದ ಆ ಧಾರಾವಾಹಿ ಅಪಾರ ಓದುಗರ ಗಮನ ಸೆಳೆದಿತ್ತು. ಧಾರಾವಾಹಿಯ ಮೂಲಕ ಮಥುರಾದ ವಿಧವೆಯರ ಬದುಕಿನ ನೈಜಚಿತ್ರಣ ಸಮಾಜಕ್ಕೆ ಲಭ್ಯವಾಗಿತ್ತು. ಇದರ ಕುರಿತು ಜನಪ್ರತಿನಿಧಿಗಳೂ ಗಮನ ಹರಿಸತೊಡಗಿದರು. ರಾಜಕೀಯ ಚರ್ಚೆಗಳು ಆರಂಭಗೊಂಡವು. ಸಂಸತ್ತಿನಲ್ಲಿ ವಿಷಯ ಮಂಡನೆಯಾಯಿತು. ಮಥುರಾದ ವಿಧವೆಯರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ನೆಲೆಯಲ್ಲಿ ಪ್ರಯತ್ನಿಸಬೇಕೆಂದು ಅನೇಕ ಜನಪ್ರತಿನಿಧಿಗಳು ಸರ್ಕಾರವನ್ನು ಒತ್ತಾಯಿಸಿದರು.

ಪರಿಣಾಮವಾಗಿ ಸರ್ಕಾರ ಮಥುರಾದ ಕಡೆಗೆ ದೃಷ್ಟಿ ಹರಿಸಿತು. ಅಂತಿಮವಾಗಿ ಮಥುರಾದ ವಿಧವೆಯರ ಬದುಕು ಉದ್ಧಾರವಾಯಿತು. ಇಂತಹ ಗಮನಾರ್ಹ ಪರಿವರ್ತನೆಗೆ ಕಾರಣವಾದ ಅಗ್ನಿಪುತ್ರಿ ಯಾರು? ಎಂಬ ಪ್ರಶ್ನೆ ಈಗ ಅನೇಕರಲ್ಲಿ ಮೂಡತೊಡಗಿತು. ಮಾಧ್ಯಮಗಳೂ ಇದರಲ್ಲಿ ಆಸಕ್ತಿ ತೋರಿಸಿದವು. ಅಗ್ನಿಪುತ್ರಿಯ ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸಿದ ಪತ್ರಿಕೆಯ ಸಂಪಾದಕರನ್ನು ವಿಚಾರಿಸಿದಾಗ ಅವರು ಅಗ್ನಿಪುತ್ರಿಯ ಅಂಚೆ ವಿಳಾಸವನ್ನು ಕೊಟ್ಟಿದ್ದರು. ಅದನ್ನು ಹಿಡಿದುಕೊಂಡ ಮಾಧ್ಯಮಗಳು ಬಂದು ತಲುಪಿದ್ದು ಮಥುರಾದ ಆ ಆಶ್ರಮಕ್ಕೆ. ರಾಧೆ ಮಾ ಇದ್ದ ಆ ಆಶ್ರಮಕ್ಕೆ. ಪತ್ರಿಕೆಯ ಮೂಲಕ ಈ ಸುದ್ದಿ ತಿಳಿದುಕೊಂಡ ಕಮಲ್ ತಿವಾರಿಯೂ ಅದೇ ಸಮಯಕ್ಕೆ ಆಶ್ರಮ ತಲುಪಿದ್ದ. ತಾನು ಬಹುವಾಗಿ ಇಷ್ಟಪಡುತ್ತಿದ್ದ ಅಗ್ನಿಪುತ್ರಿ ತನ್ನ ಗೆಳತಿಯೇ ಆಗಿದ್ದ ರಾಧೆ ಮಾ ಎನ್ನುವುದು ಅವನಿಗೆ ವಿಪರೀತ ಅಚ್ಚರಿಯನ್ನು ಉಂಟುಮಾಡಿತ್ತು. ಅವಳನ್ನು ಕಂಡು, ಅಭಿನಂದಿಸುವ ಕಾತುರತೆ ಅವನಲ್ಲಿತ್ತು.

ಆದರೆ ಈಗ ಅಲ್ಲಿ ರಾಧೆ ಮಾ ಇರಲಿಲ್ಲ!!!

ಕ್ಯಾನ್ಸರ್‌ನಿಂದ ಆಕೆ ತೀರಿಕೊಂಡು ಒಂದಷ್ಟು ತಿಂಗಳುಗಳಾಗಿದ್ದವು. ಅವಳ ಬದುಕನ್ನು ಅಲ್ಲಿದ್ದ ವಿಧವೆಯರಿಂದ ತಿಳಿದುಕೊಂಡ ಬಳಿಕ ಅವಳನ್ನು ಕಾಣುವುದಕ್ಕೆ ಅಪರಿಮಿತ ಆಸೆ ಹೊತ್ತು ಬಂದಿದ್ದವರ ಹೃದಯಗಳೆಲ್ಲಾ ಭಾರವಾಗಿದ್ದವು. ಕಣ್ಣುಗಳು ತೇವಗೊಂಡಿದ್ದವು. ಮಾಧ್ಯಮದವರೆಲ್ಲಾ ಅಲ್ಲಿಂದ ತೆರಳಿದ ಬಳಿಕವೂ ಕಮಲ್ ಅಲ್ಲಿಯೇ ಇದ್ದ. ಅವನೊಂದು ಸಂಕಲ್ಪ ಕೈಗೊಂಡಿದ್ದ. ಇದಾಗಿ ಆರೇಳು ತಿಂಗಳುಗಳಲ್ಲಿ ಮಥುರಾ ಪಟ್ಟಣದ ಮಧ್ಯಭಾಗದಲ್ಲಿ ರಾಧೆ ಮಾಳ ಕಂಚಿನ ಪ್ರತಿಮೆಯೊಂದು ಸ್ಥಾಪನೆಯಾಯಿತು.

ಕೃಷ್ಣನ ನಿಷ್ಕಲ್ಮಷ ಪ್ರೀತಿಗಾಗಿ ಹಾತೊರೆಯುತ್ತಾ ಬದುಕಿನುದ್ದಕ್ಕೂ ಶಾಶ್ವತ ರಾಧೆಯಾಗಿದ್ದ ರಾಧೆ ಮಾ ಈಗ ಆ ಕಂಚಿನ ಪುತ್ಥಳಿಯ ಮೂಲಕ ಶಾಶ್ವತಳಾಗಿದ್ದಾಳೆ.

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author