About the Author

ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ  ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್‌, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ಪರಿಸರ, ಮೂಢನಂಬಿಕೆಗಳು, ಬಡತನದ ಅನುಭವಗಳು ಸೃಜನಶೀಲ ಬರವಣಿಗೆಗೆ ಮುನ್ನುಡಿ ಬರೆದವು. ಇದರ ಅನುಭವಗಳ ಸತ್ವವೇ “ಕಾಡು ಕರೆಯಿತು, ದೇವ, ಬದಲಾಗದವರು” ಮುಂತಾದ ಕಾದಂಬರಿಗಳು.

ಅವರ ಹಲವಾರು ಕತೆಗಳಿಗೆ ನಿಯತಕಾಲಿಕೆಗಳು ಏರ್ಪಡಿಸುವ ಕಥಾ ಸ್ಪರ್ಧೆಯಲ್ಲಿ ಬಹುಮಾನ ದೊರೆತಿರುವುದರ ಜೊತೆಗೆ ‘ದೇವ’ ಕಾದಂಬರಿಯು ಮಂಗಳೂರು ವಿ.ವಿ.ದ ಪದವಿ ತರಗತಿಗಳಿಗೆ, ಮತ್ತು ಕೊಟ್ಟಾಯಂನ ಪಿ.ಯು. ತರಗತಿಗಳಿಗೆ ಪಠ್ಯಪುಸ್ತಕವಾಗಿದೆ. ಮಂದಾರ ಕಾದಂಬರಿಯು ಟೆಲಿ ಚಿತ್ರವಾಗಿ ಈಟಿವಿಯಿಂದ ಪ್ರಸಾರ. ಹಲವಾರು ಸಣ್ಣ ಕತೆಗಳು ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಸಾರಗೊಂಡಿವೆ. ‘ಅರ್ಧಾಂಗಿ, ಅನಿಶ್ಚಯ, ತಿರುಗಿದ ಚಕ್ರ, ಮಿನುಗದ ಚುಕ್ಕೆ’ ಮುಂತಾದ 20 ಕಾದಂಬರಿಗಳೊಂದಿಗೆ ’ಮನುಷ್ಯನ ಸುಖದ ಮೂಲ ಯಾವುದು? ಅತೃಪ್ತ ಮನಸ್ಸಿಗೆ ಕಾರಣವೇನು?, ಶಾಂತಿಯಿಂದ ಬದುಕುವ ಕಲೆ ವಿವರಿಸುವ ‘ಸುಖದ ಹಾದಿ’ ಚಿಂತನ ಕೃತಿಗಳನ್ನು ರಚಿಸಿದ್ದಾರೆ.

’ಮಕ್ಕಳ ಪಾಲನೆ, ಮಹಿಳೆ ಮತ್ತು ಸಮಾಜ ಕಲ್ಯಾಣ, ಸಮಯದ ಸದುಪಯೋಗ, ಹಳ್ಳಿಗೆ ಬಂದ ಎಳೆಯರು ಅವರ ಮಕ್ಕಳ ಕಥೆಗಳನ್ನು ರಚಿಸಿದ್ದಾರೆ.  ಗ್ರಾಮೀಣ ಮಹಿಳೆಯರು ಕೃತಿ ಮತ್ತು ಅನಿಶ್ಚಯ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಮತ್ತು ತಮ್ಮಣ್ಣರಾವ ಅಮ್ಮಿನ ಭಾವಿ ಸ್ಮಾರಕ ಗ್ರಂಥ ಬಹುಮಾನ, ಸುಖದ ಹಾದಿ ಕೃತಿಗೆ ಕನ್ನಡ ಸಾಹಿತ್ಯ ಅಕಾಡಮಿ ಬಹುಮಾನ ಮತ್ತು ಜೀವಮಾನದ ಸಾಹಿತ್ಯ ಸಾಧನೆಗಾಗಿ ಗೌರವ ಪ್ರಶಸ್ತಿ, ಕಾಡು ಕರೆಯಿತು ಮತ್ತು ಖಾಲಿ ಮನೆ ಕಾದಂಬರಿಗಳಿಗೆ ಮಾತೋಶ್ರೀ ರತ್ನಮ್ಮಾ ಹೆಗ್ಗಡೆ ಬಹುಮಾನ, ಹಲವಾರು ಸಣ್ಣಕಥೆಗಳಿಗೆ ನಿಯತಕಾಲಿಕೆಗಳಿಂದ ಕಥಾ ಸ್ಪರ್ಧೆಯಲ್ಲಿ ಬಹುಮಾನ, ಸಂಜಿ ಬಿಸಿಲು ಕಥಾ ಸಂಕಲನಕ್ಕೆ ಬೆಂಗಳೂರಿನ ಪ್ರತಿಷ್ಠಿತ ಕಥಾರಂಗಂ ಪ್ರಶಸ್ತಿ, ಮಂದಾರ, ತಿರುಗಿದ ಚಕ್ರ, ವಕ್ರರೇಖೆ ಕಾದಂಬರಿಗಳಿಗೆ ವನಿತಾ ಮಾಸಪತ್ರಕೆಯ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳಲ್ಲದೆ ಭಾರ್ಗವ ಪ್ರಶಸ್ತಿ ಹಿರೇಮಗಳೂರು ಕೋದಂಡರಾಮ ದೇವಸ್ಥಾನದಿಂದ ಕೋದಂಡರಾಮ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು. ತಮ್ಮ ಸೃಜನ ಶೀಲತೆಯಿಂದ ರಚಿಸಿರುವ ಕಥೆ, ಕಾದಂಬರಿಗಳ ಬಗ್ಗೆ ಅಧ್ಯಯನ ನಡೆಸಲು ಪ್ರೇರೇಪಿಸುವಂತಹ ಕೃತಿ ರಚಿಸಿದ್ದಾರೆ. ಹೊಗಳಿಕೆ, ತೆಗಳಿಕೆ ಎರಡನ್ನೂ ಸಮಭಾವದಿಂದ ಸ್ವೀಕರಿಸುವ ವಿಶಾಲಮನೋಭಾವದ ಮಾಲತಿಯವರು ಸಾಹಿತ್ಯಲೋಕದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ.

ಎ.ಪಿ. ಮಾಲತಿ

(06 May 1944)