About the Author

ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು.

ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿ 18 ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ಅನಂತರ ಆ ಕೆಲಸಕ್ಕೆ ರಾಜೀನಾಮೆಯಿತ್ತು, ಭಾರತ ವಾರ್ತಾಶಾಖೆಯಲ್ಲಿ ನಾಟಕ ವಿಭಾಗದ ನಿರ್ದೇಶಕರಾಗಿ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದರು.

ಶ್ರೀರಂಗರು ವಿಶೇಷವಾಗಿ ರಂಗಭೂಮಿಗೆ ತಮ್ಮ ಹೊಸ ಪ್ರಯೋಗಗಳಿಂದ ಕೊಡುಗೆಗಳನ್ನು ನೀಡಿದರು. ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಶ್ರೀರಂಗರು ಪರಿಷತ್ತಿಗೆ ಉತ್ತರ ಕರ್ನಾಟಕ ಪ್ರಾಂತ ಸಮಿತಿಯ ಅಧ್ಯಕ್ಷರಾಗಿದ್ದರು. 100ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ ಶ್ರೀರಂಗರು ಮೂರು ವರ್ಷಗಳ ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ‘ಜಯಂತಿ’, ‘ಪ್ರೇಮ’ ಪತ್ರಿಕೆಗಳಿಗಾಗಿ ಶ್ರಮಿಸಿದ್ದರು.

ಇವರು ಕನ್ನಡ ನಾಟ್ಯ ವಿಲಾಸಿ ಸಂಸ್ಥೆಯನ್ನು 1933ರಲ್ಲಿ ಆರಂಭಿಸಿದ್ದ ಅವರಿಗೆ 1968ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್ ಗೌರವ ದೊರಕಿತ್ತು. ಭಾರತ ಸರ್ಕಾರದವರು ಪದ್ಮಭೂಷಣ ಪ್ರಶಸ್ತಿ (1972) ನೀಡಿದ್ದರು. ಇವರ ಕಾಳಿದಾಸ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿತ್ತು. ರಾಯಚೂರಿನಲ್ಲಿ ನಡೆದ 38ನೇ ಸಾಹಿತ್ಯ ಸಮ್ಮೇಳನ (1955) ಅಧ್ಯಕ್ಷರಾಗಿದ್ದರು. ಕನ್ನಡಕ್ಕೆ ಬಹುಮುಖ ಕೊಡುಗೆಗಳನ್ನಿತ್ತ ಶ್ರೀರಂಗರು 1984ರ ಅಕ್ಟೋಬರ್ 17ರಂದು ನಿಧನರಾದರು.

ನಾಟಕರಂಗದಲ್ಲಿ ಕೇವಲ ಕೃತಿರಚನೆಗಳಿಂದಷ್ಟೇ ಅಲ್ಲದೆ ರಂಗ ಪ್ರಯೋಗಗಳಲ್ಲಿ ಹೊಸತನ ತಂದವರು ಶ್ರೀರಂಗರು. ಅವರು ಶೋಕಚಕ್ರ, ಹರಿಜನ್ವಾರ, ಕೇಳು ಜನಮೇಜಯ, ರಂಗಭಾರತ, ಕತ್ತಲು-ಬೆಳಕು, ಉದರ ವೈರಾಗ್ಯ ಮೊದಲಾದ ಪ್ರಸಿದ್ಧ ನಾಟಕಗಳನ್ನು ರಚಿಸಿದ್ದಾರೆ. ವಿಶ್ವಾಮಿತ್ರ,  ಪುರುಷಾರ್ಥ ಮೊದಲಾದ ಕಾದಂಬರಿಗಳನ್ನೂ ಶಾರದೆಯ ಸಂಸಾರ (ಭಾಷಾಶಾಸ್ತ್ರ), ಗೀತಾ ಗಾಂಭೀರ್ಯ,  ನಗೆ, ಸಾಹಿತಿಯ ಆತ್ಮಜಿಜ್ಞಾಸೆ, ಕೆಮಾಲ್ ಪಾಷಾ, ಕಿಟ್ಟಣ್ಣನ ಕ್ಲಬ್ಬು, ಭಗವಾನ್ ಬುದ್ಧ (ಅನುವಾದ), ನಮ್ಮ ನೆಚ್ಚಿನ ನೆಹರೂ ಮೊದಲಾದ ಆತ್ಮಕಥೆ,  ಜೀವನ ಚರಿತ್ರೆ, ವಿಡಂಬನೆ, ಕಥಾಸಂಕಲನ, ಭಾಷಾಶಾಸ್ತ್ರ ಗೀತೆ, ರಂಗ ಮೀಮಾಂಸೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದರು. ಆದರೆ ಅವರು ನಾಟಕಕಾರರೆಂದೇ ಹೆಸರಾಗಿದ್ದಾರೆ.

ಶ್ರೀರಂಗ (ಆದ್ಯ ರಂಗಾಚಾರ್ಯ)

(26 Sep 1904-17 Oct 1984)

Books about Author

Awards

BY THE AUTHOR