About the Author

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವ (ಶಾಲಾ ದಾಖಲಾತಿಗಳ ಪ್ರಕಾರ 1948ರ ಜೂನ್ 10) ಅವರ ತಂದೆ ನಂಜಯ್ಯ ಮತ್ತು ತಾಯಿ ನಂಜಮ್ಮ.

ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ಮಹಾದೇವ ಅವರ ಮೊದಲಕತೆ “ಕತ್ತಲ ತಿರುವು” (1967) ಪ್ರಕಟವಾದದ್ದು ಕನ್ನಡಪ್ರಭ ದಿನಪತ್ರಿಕೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ  ಸ್ನಾತಕೋತ್ತರ ಪದವಿ (ಎಂ.ಎ 1973-74) ಪಡೆದ ಮಹಾದೇವ ಅವರು ವಿಶ್ವವಿದ್ಯಾಲಯದಲ್ಲಿ ಇದ್ದ ದಿನಗಳಲ್ಲಿಯೇ ಕಥಾಸಂಕಲನ ’ದ್ಯಾವನೂರು’ (1973) ಪ್ರಕಟಿಸಿದ್ದರು. ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹಾದೇವ ಅವರ ಸಾಹಿತ್ಯ ಸಾಧನೆ ಕುರಿತು ’ಅಭಿನವ’ ನಿಯತಕಾಲಿಕೆಯು ’ಯಾರ ಜಪ್ತಿಗೂ ಸಿಗದ ನವಿಲುಗಳು’ (1999) ಎಂಬ ವಿಶೇಷ ಸಂಚಿಕೆ ಪ್ರಕಟಿಸಿದೆ.

ಕೆಲಕಾಲ ಮೈಸೂರಿನ ಸಿಐಐಎಲ್‌ನಲ್ಲಿ ಕೆಲಸ ಮಾಡಿದ ಮಹಾದೇವ ಅವರು ನಂತರ ಅದನ್ನು ತೊರೆದು ಕೃಷಿ ಆರಂಭಿಸಿದರು.

ಕುಸುಮಬಾಲೆ ಕಾದಂಬರಿಗೆ ಸಂದ 1990ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು 2015ರ ನವೆಂಬರ್‍ 14 ರಂದು ಮರಳಿಸಿದರು. ಅದೇ ಸಂದರ್ಭದಲ್ಲಿ ಭಾರತ ಸರ್ಕಾರ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನೂ ಮರಳಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1984), ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ (2012), ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ (2014)ಗಳನ್ನು ತಾತ್ವಿಕ ಕಾರಣಗಳಿಗಾಗಿ ನಿರಾಕರಿಸಿದ್ದಾರೆ.

ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನ(1984)ದ ಅಧ್ಯಕ್ಷತೆ ವಹಿಸಿದ್ದ ಮಹಾದೇವ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1995), ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (2013), ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ (2012) ಗೌರವ ಪ್ರಾಪ್ತವಾಗಿವೆ. ಅವರ ಒಡಲಾಳ ಕಾದಂಬರಿಗೆ ಕೊಲ್ಕತ್ತ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ (1984) ಸಂದಿದೆ.

ಕಳೆದ ನಾಲ್ಕು ದಶಕಗಳಿಂದ ಕರ್ನಾಟಕ ಸಮಾಜವಾದಿ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಹಾದೇವ ಅವರು ದಲಿತ ಚಳವಳಿಯ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದಾರೆ.  ರಾಜ್ಯದ ರೈತಸಂಘ ಮತ್ತು ಕೆಲ ದಲಿತ ಸಂಘಟನೆಗಳ ಜೊತೆ ಸೇರಿ ಪರ್ಯಾಯ ರಾಜಕಾರಣದ ಪ್ರಯೋಗವಾಗಿ ಆರಂಭಿಸಿದ (2005) ರಾಜಕೀಯ ಪಕ್ಷ ಸರ್ವೋದಯ ಕರ್ನಾಟಕದ ಅಧ್ಯಕ್ಷರಾಗಿದ್ದಾರೆ. 2017ರಲ್ಲಿ ಸರ್ವೋದಯ ಪಕ್ಷವು ರಾಷ್ಟ್ರೀಯ ಪಕ್ಷವಾದ ಸ್ವರಾಜ್ ಇಂಡಿಯಾ ಜೊತೆಗೆ ವಿಲೀನವಾದ ನಂತರ ಸ್ವರಾಜ್ ಇಂಡಿಯಾ ಪಕ್ಷದ ರಾಷ್ತ್ರೀಯ ಮಂಡಳಿ ಸದಸ್ಯರಾಗಿದ್ದಾರೆ.  2016 ರ ಜುಲೈ ತಿಂಗಳಿನಲ್ಲಿ ಪ್ರಾರಂಭಗೊಂಡ ವಿವಿಧ ಸಂಘಟನೆ ಮತ್ತು ಪ್ರಮುಖ ವ್ಯಕ್ತಿಗಳ ಒಕ್ಕೂಟ ‘ಜನಾಂದೋಲನಗಳ ಮಹಾಮೈತ್ರಿ’ಯ ಪ್ರಮುಖರಲ್ಲಿ ಒಬ್ಬರು.

ದೇವನೂರ ಮಹಾದೇವ

(10 Jun 1948)

Awards

BY THE AUTHOR

ABOUT THE AUTHOR