About the Author

ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 

ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ಪ್ರವಾಸ ಕಥನ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಇವರ ಪ್ರಮುಖ ಕೃತಿಗಳೆಂದರೆ ಅನನ್ಯನಾಡು , ಪಿರಮಿಡ್ಡುಗಳ ಪರಿಸರದಲ್ಲಿ (ಪ್ರವಾಸ ಕಥನ), ಸಿದ್ಧೇಶ್ವರ ಸ್ತುತಿ, ಭಕ್ತಿ ಕುಸುಮಾಂಜಲಿ (ಭಕ್ತಿಗೀತೆಯ ಕೃತಿ), ಪ್ರೀತಿ ಪ್ರಗಾಥ, ಹಳ್ಳಿ ಹುಡುಗಿ ಹಾಡು-ಪಾಡು ವರ್ತಮಾನದ ವ್ಯಂಗ್ಯದಲ್ಲಿ, ವಿಚಾರವಾಹಿನಿ, ವಿಶ್ವಮುಖಿ (ಗದ್ಯ ಕೃತಿ) ಜಗಲಿ ಹತ್ತಿ ಇಳಿದು, ಕಣ್ಣು ನಾಲಗೆ ಕಡಲು, ನಾಡಾಡಿ, ಮೌನಸ್ಪಂದನ (ಕಾವ್ಯ),ಹಿಮಶ್ವೇತಾ, ಮಯೂರ ದರ್ಶನ, ಚಂದ್ರಗಿರಿ ದರ್ಶನ, ಸಾಧನ ಸಿರಿ (ರೂಪಕ) ಮುಂತಾದವು. 

ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಇವರು ಸಿನಿಮಾ ಸಂಭಾಷಣೆ ಹಾಗೂ ಚಲನಚಿತ್ರಗೀತೆಗಳನ್ನು ಬರೆದಿದ್ದಾರೆ. ಜನುಮದ ಜೋಡಿ, ಅಶ್ವಮೇಧ, ಬಂಗಾರದ ಜಿಂಕೆ ಮುಂತಾದ ಪ್ರಖ್ಯಾತ ಸಿನಿಮಾಗಳಿಗೂ ಗೀತೆ ರಚನೆ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ, ವಿಶೇಷ ಗೀತೆ ಪ್ರಶಸ್ತಿ, ವರ್ಷದ ಶ್ರೇಷ್ಠ ಗೀತೆ ಪ್ರಶಸ್ತಿ ಸಂದಿವೆ. 

ದೊಡ್ಡರಂಗೇಗೌಡ

(07 Feb 1946)

BY THE AUTHOR