About the Author

.ಎನ್.ಪಿ. ಶಂಕರ ನಾರಾಯಣ ರಾವ್ ಅವರು 1928ರ ಆಗಸ್ಟ್ 03ರಂದು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ತಂದೆ ಪಟ್ಟಾಭಿರಾಮಯ್ಯ ಹಾಗೂ ತಾಯಿ ಅಚ್ಚಮ್ಮ. ತಂದೆ ಸಬ್ ರಿಜಿಸ್ಟ್ರಾರ್ ಇದ್ದರು. ವರ್ಗಾವಣೆ ಆದ ಕಡೆ ಇವರ ವಿದ್ಯಾಭ್ಯಾಸ ಅನಿವಾರ್ಯವಾಯಿತು. ಬೆಂಗಳೂರಿನ ಶ್ರೀರಾಮಪುರದಲ್ಲಿ ಪ್ರಾಥಮಿಕ ಶಿಕ್ಷಂ, ಕನಕಪುರದ ಕಾನಕಾನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆನೇಕಲ್ ಹಾಗೂ ಬಸವನಹಳ್ಳಿಯಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಸ್ವಾತಂತ್ಯ್ರ ಚಳವಳಿ ಆರಂಭವಾಗಿ, ಜೈಲುವಾಸ ಅನುಭವಿಸಿದರು. ಮೈಸೂರು ಸ್ಟೂಡೆಂಟ್ಸ್ ಯೂನಿಯನ್ ಸ್ಥಾಪಿಸಿ ಎಡ ಪಂಥೀಯ ವಿಚಾರಗಳೊಂದಿಗೆ ಹೋರಾಟ ನಡೆಸಿದರು. ಮೈಸೂರು ಪುರಸಭಾ ಕಾರ್ಮಿಕ ಸಂಘದ ಸ್ಥಾಪಕರೂ ಹೌದು. ದಾವಣಗೆರೆಯ ಗಿರಣಿ ಕಾರ್ಮಿಕರ ಸಂಘ, ಹರಿಹರದ ಕಿರ್ಲೋಸ್ಕರ್ ಸಂಘಗಳೊಡನೆ ಸಂಪರ್ಕವಿರಿಸಿಕೊಂಡಿದ್ದರು. ಇಂಟರ್ ಮೀಡಿಯೇಟ್ ವಿದ್ಯಾಭ್ಯಾಸ ಮೊಟಕುಗೊಂಡಿತು. ಚಿಕ್ಕಮಗಳೂರಿನ ಪಬ್ಲಿಕ್ ಕನ್ವೆಯೆನ್ಸ್ ಖಾಸಗಿ ಸಾರಿಗೆ ಕಂಪನಿಯಲ್ಲಿ ಉಗ್ರಾಣ ಗುಮಾಸ್ತರಾದರು. ನಂತರ, ಮದರಾಸಿನ ಅಂಚೆ ಮತ್ತು ತಂತಿ ಕಚೇರಿಯಲ್ಲಿ ಉದ್ಯೋಗ ಪಡೆದರು. ಮಧ್ಯಪ್ರದೇಶದ ಬೋರ್ಡ್ ಆಫ್ ಸೆಕೆಂಡರಿಯಲ್ಲಿ ಇಂಟರ್‌ಮೀಡಿಯೆಟ್ ಪಾಸ್ ಮಾಡಿಕೊಂಡರು. ಧಾರವಾಡದ ಅಂಚೆ ಮತ್ತು ತೆರಪಿನ ಶಿಕ್ಷಣದಿಂದ ಬಿ.ಎ. ಪೂರೈಸಿದರು.

ಮದ್ರಾಸ್ ನಿಂದ ಕರ್ನಾಟಕಕ್ಕೆ ಬಂದು ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಮಾನವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ಭಾರತ ಎಜ್ಯುಕೇಶನ್ ಸೊಸೈಟಿಯಲ್ಲಿ ಅಧ್ಯಾಪಕರಾದರು. ದೆಹಲಿಯ  ವಿ.ವಿ. ಸಮಾಜ ವಿಜ್ಞಾನ ವಿಭಾಗದ ಸಾಮಾಜಿಕ ವೈದ್ಯ ಮತ್ತು ಸಮುದಾಯ ಸ್ವಾಸ್ಥ್ಯ ಕೇಂದ್ರಕ್ಕಾಗಿ ಕ್ಷೇತ್ರ ಕಾರ್ಯ ಕೈಗೊಂಡು ‘ಪರಿವರ್ತನೆಯ ಸುಳಿಯಲ್ಲಿ ಕಿರು ಸಮುದಾಯಗಳು’ ಎಂಬ ಸಂಶೋಧನಾ ವರದಿ ನೀಡಿದರು. ನಂತರ ಇನ್‍ವೆಸ್ಟಿಗೇಟರ್ ಆಗಿ ನೇಮಕಗೊಂಡರು. 2 ವರ್ಷ ಕಾಲ ಜನಗಣತಿ ಇಲಾಖೆಗೆ ವರ್ಗಗೊಂಡು ಅಧ್ಯಯನ ನಡೆಸಿ ‘ದಿ ಯರವಾಸ್ ಆಫ್ ಕೊಡಗು’, ‘ಪಣಿಯರ ಸಮಾಜ ಮತ್ತು ಜಾನಪದ ಇತಿಹಾಸ’, ‘ಪಂಜಿಯವರ ಸಮಾಜ ಮತ್ತು ಜಾನಪದ ಇತಿಹಾಸ’ ಎಂಬ ಕೃತಿಗಳನ್ನು ಬರೆದರು.

ಚಲನಚಿತ್ರದ ನಂಟು: 1953ರಲ್ಲಿ ತೆರೆಕಂಡ ‘ಜಾತಕ ಫಲ’ ಇವರ ಚೊಚ್ಚಲ ಸಿನಿಮಾ. 1954 ರಲ್ಲಿ ಬಂದ ‘ಜಲದುರ್ಗಾ’, 1956 ರಲ್ಲಿ ತೆರೆಕಂಡ ‘ಭಕ್ತ ಮಾರ್ಕೇಂಡೇಯ’, ‘ಭಕ್ತ ವಿಜಯ’ ಹಾಗೂ  1957 ರಲ್ಲಿ ಬಂದ ‘ಸ್ಕೂಲ್ ಮಾಸ್ಟರ್’ 1960 ರಲ್ಲಿ ತೆರೆಕಂಡ ‘ರಾಣಿ ಹೊನ್ನಮ್ಮ’, ‘ವಿಜಯನಗರ ವೀರ ಪುತ್ರ’, ‘ಕಂಠೀರವ’- ಇವರ ಪ್ರಮುಖ ಚಲನ ಚಿತ್ರಗಳು. ಆಕಾಶವಾಣಿಗೆ ಅನೇಕ ರೂಪಕಗಳನ್ನು ಬರೆದಿದ್ದಾರೆ.
ಸಾಹಿತ್ಯ ಕ್ಷೇತ್ರ: ‘ಜೀವ ಸೆಳೆದ ಹುಡುಗಿ’ ಇವರ ಚೊಚ್ಚಲ ಪತ್ತೆದಾರಿ ಕಾದಂಬರಿ. ‘ಗಡಿಯಾಚೆಯ ಗುಡಿಗಳು’(1971), ‘ಅವತಿ ನಾಡ ಪ್ರಭುಗಳು’(1971), ಮೈಸೂರು ಹಾಗೂ ಬೆಂಗಳೂರು ವಿಶ್ವ ವಿದ್ಯಾನಿಲಯಗಳಿಗಾಗಿ ಬರೆದ ‘ಭಾರತದ ಪ್ರಚಲಿತ ಸಾಮಾಜಿಕ ಸಮಸ್ಯೆಗಳು’(1972). ‘ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋರಾಟ (1987).

‘ಭಾರತೀಯ ಅಂಚೆ ಬಂಧು’, ‘ಕೌಸ್ತುಭ’, ‘ಸ್ತೋತ್ರ ಕೌಸ್ತುಭ’- ಸಂಪಾದಿತ ಕೃತಿಗಳು. ‘ಸ್ವಾತಂತ್ರ್ಯ ಹೋರಾಟದ ಸಾವಿರ ತೊರೆಗಳು’ ಕೃತಿಯು ಇಡಿ ಸ್ವಾತಂತ್ರ್ಯ ಚಳವಳಿಯ ವಿವಿಧ ಘಟ್ಟಗಳನ್ನು ದಾಖಲಿಸುವ ಮಹತ್ವದ ಕೃತಿ. ಪ್ರಾಚೀನ ಅಮೇರಿಕನ್ ನಾಗರಿಕತೆ, ಭೂಮಿಯ ವೈಶಿಷ್ಟ್ಯಗಳು, ಆಗ್ನೇಯ ಏಷ್ಯಾದಲ್ಲಿ ವ್ಯಾಪಿಸಿರುವ ಭಾರತೀಯ ಸಾಂಸ್ಕೃತಿಕ ಪ್ರಭಾವಗಳು ವಿಷಯ ಕುರಿತು 1981 ರಲ್ಲಿ ‘ಕನ್ನಡ ಪ್ರಭ’ ದಿನಪತ್ರಿಕೆಗೆ ಬರೆದ ‘ವಿಚಾರ ವೇದಿಕೆ’ ಎಂಬ ಅಂಕಣವು ಜನಪ್ರಿಯಗೊಂಡಿತ್ತು. 

 ಕಾಲಿನ ಕಿರು ಬೆರಳಿಗೆ ಹುಣ್ಣು ತಗುಲಿ ಇಡಿ ಒಂದು ಕಾಲನ್ನೇ ಕತ್ತರಿಸಬೇಕಾಯಿತು. ಆದರೂ ಎದೆಗುಂದಲಿಲ್ಲ. ಆಂಗ್ಲಭಾಷೆ, ತೆಲುಗು ತಮಿಳು , ಹಿಂದಿಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ‘ಪ್ರಾಚೀನ ಭಾರತ’, ‘ಠಕ್ಕನೊಬ್ಬನ ಆತ್ಮ ಚರಿತ್ರೆ’, ‘ಮಹಾತ್ಮ ಗಾಂಧಿ ಕೃತಿ ಸಂಚಯ’, ‘ನೆಲಕಚ್ಚಿದ ಗುಬ್ಬಚ್ಚಿ’, ‘ಅಪ್ಪುವಿನ ತಾಯಿ’ ಪ್ರಮುಖ ಕೃತಿಗಳು.
ವ್ಯಕ್ತಿ ಪರಿಚಯ: ‘ಅಷ್ಫಾಕ್ ಉಲ್ಲ’, ‘ರಾಮ್ ಪ್ರಸಾದ್ ಬಿಸ್ಮಿಲ್ಲಾ’, ‘ಬಟುಕೇಶ್ವರ ದತ್ತ’ ಕೃತಿಗಳನ್ನು ರಚಿಸಿದ್ದು, 2006 ನವಂಬರ್ 28 ರಂದು ನಿಧನರಾದರು.

 

ಎನ್.ಪಿ. ಶಂಕರನಾರಾಯಣ ರಾವ್

(03 Aug 1928-28 Nov 2006)