About the Author

ತಮ್ಮ ಅನನ್ಯ ಮಕ್ಕಳ ಸಾಹಿತ್ಯ ರಚನೆಯ ಮೂಲಕ ಮಕ್ಕಳ ಮನಸ್ಸನ್ನು ಗೆದ್ದವರು ಎನ್‌. ಶ್ರೀನಿವಾಸ ಉಡುಪ. ಅವರು 1935 ಆಗಸ್ಟ್‌ 15ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಎನ್‌. ವೆಂಕಟೇಶ ಉಡುಪ, ತಾಯಿ ಮಹಾಲಕ್ಷ್ಮಿ. ತಮ್ಮ ವಿದ್ಯಾಭ್ಯಾಸದ ನಂತರ ತುಂಗಾ ಕಾಲೇಜಿನಲ್ಲಿ ದೀರ್ಘ ಕಾಲ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು. ‘ಪಾಪು ಪದ್ಯಗಳು, ಕನ್ನಡ ನಾಡಿನ ಕೂಸುಮರಿ, ಕುಂಭಕರ್ಣನ ನಿದ್ದೆ’ ಅವರ ಮಕ್ಕಳ ಕವನ ಸಂಕಲನಗಳಾಗಿದ್ದು ‘ಹಿಡಿಂಬನ ತೋಟ, ಬೆರಳುಗಳು’ ಹೀಗೆ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ‘ಗೂಬಜ್ಜಿಯ ಗೊರಕೆ’ ಮಕ್ಕಳ ಕತಾ ಸಂಕಲನ. ಅಲ್ಲದೆ ‘ಮಕ್ತಕ ಮಣಿ ಮಾಲೆ, ಸತ್ಯಜಿತ್‌ ರೇ -ಕತೆಗಳು, ಗುಡಿಸೋಣ-ಸಿಂಗರಿಸೋಣ’ ಮುಂತದ ಕೃತಿಗಳನ್ನು ಅನುವಾದಿಸಿದ್ದಾರೆ. ಅವರ ‘ಕುಂಭಕರ್ಣನ ನಿದ್ದೆ’ಮಕ್ಕಳ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಶಿಶು ಸಾಹಿತ್ಯ ಬಹುಮಾನ’ ಲಭಿಸಿದೆ. 2000ದಲ್ಲಿ ಆಲಸಿಂಗ ಪ್ರಶಸ್ತಿ, 2005ರಲ್ಲಿ ಶಿವರಾಮ ಕಾರಂತ ಪ್ರಶಸ್ತಿ, 2009ರಲ್ಲಿ ಶ್ರೀ ದಿನಕರ ದೇಸಾಯಿ ಶತಮಾನೋತ್ಸವ ಪ್ರಶಸ್ತಿಗಳು ಅವರನ್ನರಸಿವೆ. ಅವರು 2020 ಏಪ್ರಿಲ್‌ 11ರಂದು ವಿಧಿವಶರಾದರು.

ಎನ್‌. ಶ್ರೀನಿವಾಸ ಉಡುಪ

Awards