About the Author

ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ.  ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ (1963-66), ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟು (1966-71) ಸಂಪಾದಕ ವರ್ಗದಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸಿದರು.

ಇವರು ರಚಿಸಿದ ‘ಹಂಸದಮಯಂತಿ ಮತ್ತು ಇತರ ರೂಪಕಗಳು’ ಎಂಬ ಕೃತಿಗೆ  ಕೇಂದ್ರ ಸಾಹಿತ್ಯಾ ಅಕಾಡೆಮಿ ಬಹುಮಾನ (1965), ೧೯೬೬ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ (1966), ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (1971) ಪದವಿ ನೀಡಿ ಗೌರವಿಸಲಾಗಿತ್ತು. ಚಿಕ್ಕಮಗಳೂರಿನಲ್ಲಿ ನಡೆದ 53ನೇ ಕನ್ನಡ ಸಾಹಿತ್ಯ ಸಮ್ಮೇಳನ (1981) ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಪದ್ಮಶ್ರೀ ಪ್ರಶಸ್ತಿ (1990), ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಮತ್ತು ಸೃಜನಶೀಲ ಕೃತಿ ಶ್ರೀ ಹರಿಚರಿತೆ ಕಾವ್ಯಕ್ಕೆ ಪಂಪ ಪ್ರಶಸ್ತಿ (1990) ದೊರೆತಿದ್ದವು. ಅವರು 1998ರ ಅಕ್ಟೋಬರ್ 13ರಂದು ನಿಧನರಾದರು.

ಕನ್ನಡ, ತಮಿಳು, ಇಂಗ್ಲಿಷ್, ಸಂಸ್ಕೃತ, ಫ್ರೆಂಚ್ ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದ ವಿದ್ವಾಂಸರಾಗಿದ್ದ ಪು.ತಿ.ನ. ಅವರು ಗೇಯಕಾವ್ಯ ನಾಟಕ ಪ್ರಬಂಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೃತಿಗಳನ್ನು ರಚಿಸಿದ್ದಾರೆ.

ಕೆಲವು ಕೃತಿಗಳು: ಗೋಕುಲ ನಿರ್ಗಮನ, ಸತ್ಯಾಯನ ಹರಿಶ್ಚ್ಚಂದ್ರ, ಹಂಸದಮಯಂತಿ ಮತ್ತು ಇತರ ರೂಪಕಗಳು, ಅಹಲ್ಯೆ, ಶ್ರೀರಾಮ ಪಟ್ಟಾಭಿಷೇಕ ಮೊದಲಾದ ಗೀತ ರೂಪಕಗಳು, ರಥ ಸಪ್ತಮಿ ಮತ್ತು ಇತರ ಚಿತ್ರಗಳು (1945), ಈಚಲು ಮರದ ಕೆಳಗೆ (1949), ಧೇನುಕ ಪುರಾಣ (1947), ಇತ್ಯಾದಿ ಪ್ರಬಂಧಗಳು, ಕಾವ್ಯಕುತೂಹಲ, ರಸಪ್ರಜ್ಞೆ, ದೀಪರೇಖೆ ಇತ್ಯಾದಿ ವಿಮರ್ಶಾ ಗ್ರಂಥಗಳು, ಹತ್ತಾರು ವರ್ಷಗಳ ಪರಿಶ್ರಮದಿಂದ ರಚಿಸಿದ ಅನುವಾದಗಳು- ಕನ್ನಡ ಭಗವದ್ಗೀತೆ, ಸಮಕಾಲೀನ ಭಾರತೀಯ ಸಾಹಿತ್ಯ.

 

ಪು.ತಿ.ನ. (ಪು.ತಿ. ನರಸಿಂಹಾಚಾರ್ )

(17 Mar 1905-13 Oct 1998)

Awards

BY THE AUTHOR