About the Author

’ಕನ್ನಡ ನೆಲದ ಪುಲ್ಲೆನಗೆ ಪಾವನ ತುಳಸಿ, ಕನ್ನಡದ ಕಲ್ಲೆನಗೆ ಶಾಲಗ್ರಾಮ ಶಿಲೆ’ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು ಕನ್ನಡದ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಕನ್ನಡದ ಮೊದಲ ವಿಲಾಪಗೀತೆ ರಚಿಸಿದ ಹಿರಿಮೆ ಅವರದು. ನವೋದಯದ ಆರಂಭದ ದಿನಗಳಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಗೆ ಮುಂದಾಗಿದ್ದ ಸಾಲಿಯವರು ಎರಡು ಕಾಂಡಗಳನ್ನು ಪ್ರಕಟಿಸಿದ್ದರು. ಅದಕ್ಕೆ ಬಂದ ’ಸಾಲಿ ರಾಮಾಯಣ’ ಎಂಬ ಟೀಕೆಯಿಂದ ಬೇಸತ್ತು ನಂತರದ ಸಂಪುಟಗಳನ್ನು ಪ್ರಕಟಿಸಲು ಹಿಂದೇಟು ಹಾಕಿದರು. ನಂತರದ ದಿನಗಳಲ್ಲಿ ಅಪ್ರಕಟಿತ ರಾಮಾಯಣದ ಹಸ್ತಪ್ರತಿಗಳು ಗೆದ್ದಲುಗಳಿಗೆ ಆಹಾರವಾದಾಗ ತೀವ್ರ ನೋವು ಅನುಭವಿಸಿದರು. ಅವರ ಸಮಗ್ರ ಕವಿತೆಗಳನ್ನು ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತದಲ್ಲಿ ಅಗಾಧವಾದ ಪಾಂಡಿತ್ಯ ಹೊಂದಿದ್ದ ಅವರಿಗೆ ಇಂಗ್ಲಿಷ್, ಫ್ರೆಂಚ್, ಪಾಲಿ, ಗುಜರಾತಿ, ಮರಾಠಿ, ಬಂಗಾಲಿ ಹೀಗೆ ಹಲವು ಭಾಷೆಗಳ ಅರಿವು ಇತ್ತು. 1933 ರಲ್ಲಿಯೇ ಗಾಂಧೀಜಿಯವರ ಆತ್ಮಕತೆಯನ್ನು ಗುಜರಾತಿನಿಂದ ಕನ್ನಡಕ್ಕೆ ಅನುವಾದಿಸಿದ್ದರು. ರಾಷ್ಟ್ರಪ್ರೇಮಿಯಾಗಿದ್ದ ಸಾಲಿ ಅವರು ಲೋಕಮಾನ್ಯ ತಿಲಕರ ಪ್ರಭಾವಕ್ಕೆ ಒಳಗಾಗಿ ರಾಷ್ಟ್ರೀಯ ಆಂದೋಲನ ಸೇರಿದ್ದರು. ಸತ್ಯಾಗ್ರಹಕ್ಕೆ ತೆರಳಿದ್ದ ಮಗ ತೀರಿಕೊಂಡಾಗ ನೋವಿನಿಂದ ಮಿಡಿದಿದ್ದರು. ಹೆಸರಾಂತ ಇತಿಹಾಸಕಾರ ಪಿ.ಬಿ. ದೇಸಾಯಿ ಅವರು ಸಾಲಿಯವರ ಅಳಿಯರಾಗಿದ್ದರು.

 

ಸಾಲಿ ರಾಮಚಂದ್ರರಾಯ

(10 Oct 1888-31 Oct 1978)