About the Author

ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು.

ಶಾಸ್ತ್ರಿಗಳು,1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.  ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು.

ವ್ಯಾಕರಣ, ಛಂದಸ್ಸು, ಕಾವ್ಯಮೀಮಾಂಸೆ, ನಿಘಂಟು, ಗ್ರಂಥಸಂಪಾದನೆ, ಸಾಹಿತ್ಯ ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ, ಅನುವಾದ, ನಾಟಕ, ಪ್ರಬಂಧ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಗ್ರಂಥ ರಚಿಸಿ, ಪ್ರಕಟಿಸಿದ್ದಾರೆ.  ಹಳಗನ್ನಡ ಸಾಹಿತ್ಯ ಪರಂಪರೆಯ ಕೊಂಡಿ ಎಂದೇ ಸಾಹಿತ್ಯವಲಯದಲ್ಲಿ ಅವರನ್ನು ಗುರುತಿಸಲಾಗುತ್ತದೆ.

ಶಾಸ್ತ್ರಿಗಳ ಸಂಶೋಧನಾ ಕೃತಿಗಳಲ್ಲಿ ‘ಕನ್ನಡ ನೇಮಿನಾಥ ಪುರಾಣ, ತೌಲನಿಕ ಅಧ್ಯಯನ’ (1973), ‘ಜೈನ ಸಾಹಿತ್ಯ, ಜೈನ ಭಾಗವತ ಭಾರತಗಳು-ಒಂದು ಸಮೀಕ್ಷೆ’ (1980), ‘ಹರಿವಂಶ ಪುರಾಣ ಸಾರ’ (1986) ಕರ್ಣ ಪಾರ‍್ಯ, ‘ನೇಮಿನಾಥ ಪುರಾಣ ಕಥಾಸಾರ’ 2001, ‘ಅರ್ಧ ನೇಮಿನಾಥ ಪುರಾಣ ಕಥಾಸಾರ ವಸ್ತು ವಿಮರ್ಶೆ’ (2000), ‘ಕನ್ನಡ ಜೈನ ಪುರಾಣಗಳಲ್ಲಿ ಸಿದ್ಧಾಂತ ವಿಷಯ’, ‘ಜೈನ ಭಾರತ ಕಥೆ ಮತ್ತು ಸ್ವರೂಪ ಜೈನ ಧರ್ಮ ಮತ್ತು ಕನ್ನಡ ಸಾಹಿತ್ಯ’,‘ಕಾವ್ಯ ಮೀಮಾಂಸೆ’, ‘ಕನ್ನಡ ಚಿತ್ರ ಕಾವ್ಯ'(1987), ‘ಶಾಸ್ತ್ರೀಯ : 4 ಸಂಪುಟಗಳು’, ‘ಮಹಾಕಾವ್ಯ ಲಕ್ಷಣ’ ಮುಂತಾದವು ಸೇರಿವೆ.

ಛಂದಃಶಾಸ್ತ್ರದಲ್ಲಿ ಅವರ ‘ಕನ್ನಡ ಛಂದ ಸ್ವರೂಪ;’ ‘ವ್ಯಾಕರಣ’ಗಳು, ನಿಘಂಟು ಕಾರ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ  ನಿಘಂಟು ಕಾರ್ಯದಲ್ಲಿ ನೀಡಿರುವ ಬೃಹತ್ ಕೊಡುಗೆ ಅಲ್ಲದೆ ‘ದರ್ಪಣ ವಿವರಣ’ ಕೃತಿಯನ್ನೂ ಪ್ರಕಟಿಸಿದ್ದಾರೆ.

ಗ್ರಂಥ ಸಂಪಾದನೆಗಳಲ್ಲಿ ಶಾಸ್ತ್ರೀಯವರು ‘ಆದಿಪುರಾಣ’, ‘ಛಂದೋಂಬುಧಿ’, ‘ಶಬ್ದಮಣಿ ದರ್ಪಣ’, ‘ಮುದ್ರಾ ಮಂಜೂಷ’, ‘ಗೊಮ್ಮಟ ಜಿನಸ್ತುತಿ’, ‘ಪಂಪ ಸಂಪುಟ’, ‘ಸಮಯ ಪರೀಕ್ಷೆ’ ಮುಂತಾದ ಬೃಹತ್ ಕೃತಿಗಳು ಸೇರಿವೆ. ಗ್ರಂಥ ಸಂಪಾದನೆಯ ಪಾರಿಭಾಷಿಕ ಕೋಶ ಸೃಜಿಸಿದ್ದಾರೆ.

ಅವರು ರಚಿಸಿರುವ ಜೀವನ ಚರಿತ್ರೆಗಳಲ್ಲಿ ‘ಶ್ರೀ ಸಹಜಾನಂದ ಭಾರತಿ ಸ್ವಾಮಿಗಳು’ (2006) ಮತ್ತು ‘ಸರ್.ಎಂ.ವಿಶ್ವೇಶ್ವರಯ್ಯನವರ ಪೂರ್ವಜರು’ (2004) ಕೃತಿಗಳು ಸೇರಿವೆ. ‘ಮೆಲುಗಾಳಿಯ ಮಾತುಗಳು’ ಎಂಬುದು ಪ್ರಬಂಧ ಸಂಗ್ರಹ.

ಸಾಹಿತ್ಯ ಶಿಲ್ಪಿಗಳು, ಆಪ್ತರು-ಆಚಾರ್ಯರು, ಮಾರ್ಗದರ್ಶಕ ಮಹನೀಯರು, ಉದಾರಚರಿತರು- ಉದಾತ್ತಪ್ರಸಂಗಗಳು ಕೃತಿಗಳನ್ನೂ ಅವರು ರಚಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ತೀನಂ’ಶ್ರೀ ಸ್ಮಾರಕ ಬಹುಮಾನ, ಶಂಭಾ ಜೋಶಿ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಕೇಂದ್ರ ಭಾಷಾ ಸಮ್ಮಾನ್ ಪ್ರಶಸ್ತಿ, ಮನುಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು  2015 ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿಗಳು ಸಂದಿವೆ.

ಟಿ.ವಿ. ವೆಂಕಟಾಚಲಶಾಸ್ತ್ರೀ

(26 Aug 1933)

Books by Author

ABOUT THE AUTHOR