ಬಾಳೆಕಾಯಿ ಸೋತಾಗ ಊರುಗೋಲಾದ ‘ಬಾಕಾಹು’

Author : ಶ್ರೀ ಪಡ್ರೆ

Pages 140

₹ 150.00
Year of Publication: 2021
Published by: ಕೃಷಿ ಮಾಧ್ಯಮ ಕೇಂದ್ರ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್
Address: #113, 6ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಪಿಳ್ಳಪ್ಪ ಬ್ಲಾಕ್, ಗಂಗಾನಗರ, ಅಂಚೆ: ಆರ್.ಟಿ. ನಗರ, ಬೆಂಗಳೂರು - 560032
Phone: 9483757707

Synopsys

ಜಲತಜ್ಞ ಶ್ರೀ ಪಡದರೆ ಅವರ ಕೃತಿ-ಬಾಳೆಕಾಯಿ ಸೋತಾಗ ಊರುಗೋಲಾದ ‘ಬಾಕಾಹು’. ಇದು ನಿರ್ದಿಷ್ಟ ಉದ್ದೇಶದೊಂದಿಗೆ, ಬ್ಯಾನರ್ ಕಟ್ಟಿ ಭಾಷಣ ಮಾಡಿ ಚಾಲನೆ ನೀಡಿದ ಅಭಿಯಾನವಲ್ಲ. ಅಡವಿಯೊಳಗಿನ ಸಣ್ಣದೊಂದು ಒರತೆಯಂತೆ ಏಟೀವಿ (ಎನಿ ಟೈಮ್ ವೆಜಿಟೆಬಲ್) ವಾಟ್ಸಪ್ ಗುಂಪಿನಲ್ಲಿ ಸದ್ದಿಲ್ಲದೆ ಜಿನುಗಿದ ಪರಿಕಲ್ಪನೆಯಿದು. ‘ವರ್ಷವಿಡೀ ತರಕಾರಿ; ನಮ್ಮನೆಗೆ ನಮ್ಮದೇ ಸುರಕ್ಷಿತ ತರಕಾರಿ’ ಎನ್ನುವುದು ಈ ಗುಂಪಿನ ಮೂಲೋದ್ದೇಶ. ಸದಾ ರೈತಹಿತವನ್ನು ಧ್ಯಾನಿಸುವ, ಹೊಸತಿನೆಡೆಗೆ ಲಕ್ಷ್ಯವಿಟ್ಟಿರುವ, ನವ ಮಾಧ್ಯಮದ ಸಕಾರಾತ್ಮಕ ಶಕ್ತಿಯಲ್ಲಿ ಅಪಾರ ನಂಬಿಕೆಯಿರುವ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಅವರಿಂದ ಅಯಾಚಿತವಾಗಿ ಅನಾವರಣಗೊಂಡ ಆಂದೋಲನ ಕೇವಲ ಒಂದು ತಿಂಗಳಲ್ಲೆ ವ್ಯಾಪಕವಾಗಿ ಬೆಳೆದದ್ದು ಮೇಲ್ನೋಟಕ್ಕೆ ಅಚ್ಚರಿಯ ಸಂಗತಿಯೆ. ಆದರೆ ಅವರು ಇಂತಹ ಉದ್ದೇಶಗಳಿಗೆ ಸಾಮಾಜಿಕ ಮಾಧ್ಯಮವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಬಲ್ಲವರಿಗೆ ‘ಬಾಕಾಹು’ ಅಭಿಯಾನದ ಯಶಸ್ಸಿನ ಮರ್ಮ ಸುಲಭವಾಗಿ ಅರ್ಥವಾದೀತು.

ಇಲ್ಲಿ ಆದದ್ದು ಇಷ್ಟೆ: ತುಮಕೂರು ಜಿಲ್ಲೆ ಅತ್ತಿಕಟ್ಟೆಯ ನಯನಾ ಆನಂದ್ ಒಂದು ವಾರವಿಡೀ ಪ್ರತಿ ದಿನ ಬಾಳೆಯ ಮೌಲ್ಯವರ್ಧನೆ-ಉಪಯೋಗ ಮಾಡಿದ್ದರ ಬಗ್ಗೆ ಏಟೀವಿ ಗುಂಪಿನಲ್ಲಿ ಹಾಕಿದ ಸಂದೇಶವನ್ನು ಗಮನಿಸಿದ ಪಡ್ರೆಯವರು ಅದಕ್ಕೆ ಪೂರಕವಾಗಿ ಕೇರಳದ ಜಯಾಂಬಿಕಾ ಅವರು ಆರು ತಿಂಗಳಲ್ಲಿ ಒಂದು ಕ್ವಿಂಟಾಲ್ ನೇಂದ್ರ ಬಾಕಾಹು ತಯಾರಿಸಿ ಮಾರಾಟ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿ ಎರಡು ಚಿತ್ರಗಳೊಂದಿಗೆ ಸ್ಫೂರ್ತಿದಾಯಕವಾದ ಪೋಸ್ಟ್ ಸೇರಿಸಿದರು. ನಂತರದ ದಿನಗಳಲ್ಲಿ ಏಟೀವಿ ಗುಂಪಿನಲ್ಲಿ ಬಾಕಾಹು ಪ್ರಯೋಗಗಳು ತುಂಬಿ ತುಳುಕತೊಡಗಿದವು. ಜತೆಜತೆಗೆ ಪಡ್ರೆಯವರು ಈ ಸಂದೇಶಗಳನ್ನು ಇತರ ನಾಲ್ಕಾರು ಗುಂಪುಗಳೊಂದಿಗೆ ಹಂಚಿಕೊಂಡರು. ಫೇಸ್ಬುಕ್ ಮೂಲಕವೂ ಪ್ರಚುರಪಡಿಸಿದರು. ಕನ್ನಡ-ಇಂಗ್ಲಿಷ್-ಮಲಯಾಳಂ ಮಾಧ್ಯಮ ಮಿತ್ರರಿಗೆ ಅವರು ಮಾಹಿತಿ ನೀಡಿದ ಪರಿಣಾಮ ವಿವಿಧ ಪತ್ರಿಕೆ-ಚಾನೆಲ್ ಗಳಲ್ಲಿ ಬಾಕಾಹು ಸುದ್ದಿ ಬೆಳಕುಕಂಡಿತು. ಈ ಕುರಿತ ವೆಬಿನಾರ್ ಗಳಲ್ಲಿಯೂ ಅವರು ಪಾಲ್ಗೊಂಡು ಆಸಕ್ತರಲ್ಲಿ ಉತ್ಸಾಹ ತುಂಬಿದರು. ಇವೆಲ್ಲವುಗಳ ನಡುವೆಯೆ ಅಡಿಕೆ ಪತ್ರಿಕೆಯ ಆಗಸ್ಟ್ 2021 ಸಂಚಿಕೆಯನ್ನು ಬಾಕಾಹು ವಿಶೇಷಾಂಕವಾಗಿ ರೂಪಿಸಿದ್ದಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ರಾಜ್ಯದ ಅನೇಕ ಕೇವೀಕೆಗಳನ್ನು ಸಂಪರ್ಕಿಸಿ ಬಾಕಾಹು ತಯಾರಿ ಕೈಗೊಂಡು ಸುತ್ತಮುತ್ತಲ ರೈತರಿಗೂ ಮಾರ್ಗದರ್ಶನ ನೀಡುವಂತೆ ಒತ್ತಾಯಿಸಿದರು. ಹೀಗೆ ಹಲವು ದಿಕ್ಕುಗಳಲ್ಲಿ, ಹಲವು ಆಯಾಮಗಳಲ್ಲಿ ಅವರು ನಡೆಸಿದ ಪ್ರಯತ್ನಗಳು ಈಗ ಆಶಾದಾಯಕ ಫಲಿತಾಂಶ ನೀಡತೊಡಗಿವೆ. ಈ ಎಲ್ಲ ಬೆಳವಣಿಗೆಗಳ ವ್ಯವಸ್ಥಿತ ದಾಖಲೆ ಇಲ್ಲಿದೆ.

ಶ್ರೀ ಪಡ್ರೆ ಅವರು ಹೇಳುವಂತೆ, “ಮನೆಮಟ್ಟದಲ್ಲಿ ಬಾಳೆಕಾಯಿ ಹುಡಿ (ಬಾಕಾಹು) ತಯಾರಿಗೆ ಹೆಚ್ಚುವರಿ ಬಂಡವಾಳ, ಬೇರೆ ಯಂತ್ರಗಳು, ಕಾರ್ಮಿಕ ಅವಲಂಬನೆ, ಪೇಟೆಯ ಒಳಸುರಿ - ಒಂದೂ ಬೇಡ. ಮಾಡಲು ಕಷ್ಟವಾಗುವಂಥದ್ದೇನೂ ಇಲ್ಲ.” ಬಾಕಾಹು ಬಳಸಿ ತಯಾರಿಸಬಹುದಾದ ವೈವಿಧ್ಯಮಯ ತಿಂಡಿತಿನಿಸುಗಳ ರೆಸಿಪಿ ಈ ಪುಸ್ತಕದ ವಿಶೇಷ.


 

About the Author

ಶ್ರೀ ಪಡ್ರೆ

ಕರ್ನಾಟಕದ ಗಡಿಗೆ ತಾಗಿಕೊಂಡಿರುವ ಕಾಸರಗೋಡು ಜಿಲ್ಲೆ ವಾಣಿನಗರದ ಶ್ರೀ ಪಡ್ರೆ ಅವರು, ಕೃಷಿಕರು. ಹಿರಿಯ ಅಭಿವೃದ್ಧಿ ಪತ್ರಕರ್ತರು. ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಪ್ರಕಟಿಸುತ್ತಿರುವ ‘ಅಡಿಕೆ ಪತ್ರಿಕೆ’ ಕೃಷಿ ಮಾಸಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು. ದೆಹಲಿಯ ‘ಸಿವಿಲ್ ಸೊಸೈಟಿ’ ಇಂಗ್ಲಿಷ್ ನಿಯತಕಾಲಿಕದ ಪ್ರಮುಖ ಬರಹಗಾರರು. ಕೃಷಿ-ಗ್ರಾಮೀಣ ರಂಗದ ನಾನಾ ಅಗೋಚರ ವಿದ್ಯಮಾನಗಳನ್ನು, ನವನವೀನ ಸಂಗತಿಗಳನ್ನು ಬಹುಬೇಗನೆ ಸಲೀಸಾಗಿ, ಸೂಕ್ಷ್ಮವಾಗಿ ಗ್ರಹಿಸುವ, ಆಳಕ್ಕಿಳಿದು ಅಧ್ಯಯನ ಮಾಡುವ ಮತ್ತು ಲೇಖನ-ನುಡಿಚಿತ್ರಗಳ ಮೂಲಕ ಅಚ್ಚುಕಟ್ಟಾಗಿ ಸಾದರಪಡಿಸುವ ಮನಸ್ಸು. ರೈತಹಿತವಷ್ಟೇ ಬರವಣಿಗೆಯ ಆಶಯ. ಕಳೆದ ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಕನ್ನಡ, ಇಂಗ್ಲಿಷ್ ಮತ್ತು ...

READ MORE

Excerpt / E-Books

ಕಾಣಿಸಿರುವುದು ಮೊಗ್ಗು ಮಾತ್ರ ಐದೇ ವಾರಗಳಲ್ಲಿ ಬಾಕಾಹು ಆಂದೋಲನ ಪ್ರಧಾನಿ ವರೆಗೂ ತಲುಪಿದೆ. ದೇಶದಲ್ಲೇ ಸಂಚಲನ ಮೂಡಿಸಿದೆ. ಈ ಬೆಳವಣಿಗೆ ಹಲವು ಕಾರಣಗಳಿಗಾಗಿ ಅನನ್ಯ, ಅಭೂತಪೂರ್ವ. ಇದರಿಂದ ಕಲಿತ, ಕಲಿಯಬಹುದಾದ ಪಾಠಗಳು ಹಲವು. ಹೊಸ ಉತ್ಪನ್ನ ತಯಾರಿಸಿ ಅದರ ಪ್ರಚಾರ ಮಾಡಿಕೊಂಡೇ ಮಾರುಕಟ್ಟೆ ಮಾಡುವುದು ಸವಾಲಿನ ಕೆಲಸ. ಬದಲಿಗೆ, ನಮ್ಮ ಸಾಂಪ್ರದಾಯಿಕ ಜ್ಞಾನದ ಹಿನ್ನೆಲೆಯ ಉತ್ಪನ್ನಕ್ಕೆ ಮರುಜೀವ ಕೊಡುವುದು ಅಷ್ಟು ಕಷ್ಟವಲ್ಲ. ಬಾಳೆಕಾಯಿ ಹುಡಿಗೆ ಬೇಕಾದ ಕಚ್ಚಾವಸ್ತು ಅವರವರ ತೋಟದಲ್ಲೇ ಲಭ್ಯ. ಇಲ್ಲದಿದ್ದರೂ, ಅವರವರ ಊರಿನಿಂದ ಸಂಗ್ರಹಿಸಬಹುದು. ಕಲಬೆರಕೆಯ, ಗುಣಮಟ್ಟದ ಕೊರತೆಯ ಅನುಮಾನ ಕಮ್ಮಿ. ಎಲ್ಲೆಡೆ ಹನ್ನೆರಡು ತಿಂಗಳೂ ಸುಲಭಲಭ್ಯ. ಕೃಷಿಕರು ಈ ಮೌಲ್ಯವರ್ಧನೆಗೆ ಏಕೆ ಹೀಗೆ ಅಭೂತಪೂರ್ವವಾಗಿ ಸ್ಪಂದಿಸಿದರು? ಪ್ರತಿವರ್ಷದ ಬೆಲೆ ಕುಸಿತದ, ಈಚೆಗೆ ಜಾನುವಾರುಗಳಿಗೂ ತಿನ್ನಿಸಬೇಕಾಗಿಬಂದ ಸಂಕಟ ಮಾಸಿಲ್ಲ. ಮೂಲತಃ ಆಲೆಪ್ಪಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜಿಸ್ಸಿ ಜಾರ್ಜ್ ಎದುರಿಟ್ಟ ’ಮನೆಮಟ್ಟದ ಬಾಕಾಹು ತಯಾರಿ ವಿಧಾನ’ವನ್ನೊಮ್ಮೆ ವಿಮರ್ಶಿಸಿ ನೋಡಿ. ಇದಕ್ಕೆ ಹೆಚ್ಚುವರಿ ಬಂಡವಾಳ, ಬೇರೆ ಯಂತ್ರಗಳು, ಕಾರ್ಮಿಕ ಅವಲಂಬನೆ, ಪೇಟೆಯ ಒಳಸುರಿ - ಒಂದೂ ಬೇಡ. ಮಾಡಲು ಕಷ್ಟವಾಗುವಂಥದ್ದೇನೂ ಇಲ್ಲ. ನಮ್ಮ ಕೃಷಿ ವಿಜ್ಞಾನಿಗಳು, ವಿಸ್ತರಣಾ ಕಾರ್ಯಕರ್ತರು, ಅಭ್ಯುದಯದ ಏಜೆನ್ಸಿಗಳು ಅರ್ಥಮಾಡಿಕೊಳ್ಳಬೇಕಾದ ಬಹುಮುಖ್ಯ ವಿಚಾರ ಇದು. "ತೌಡು ತೆಗೆದ ಅಕ್ಕಿ, ಬೂಸಾ ತೆಗೆದ ಗೋಧಿಗಳ ಪೌಷ್ಟಿಕಾಂಶವೆಲ್ಲಾ ಹೋಗಿರುತ್ತದೆ. ಉಳಿದ ಸ್ಟಾರ್ಚ್ ರೂಪದಲ್ಲಿಯೇ ಸೇವಿಸುತ್ತಿರುವುದು ನಮ್ಮನ್ನು ಅನೇಕ ರೋಗರುಜಿನಗಳಿಗೆ ಈಡು ಮಾಡುತ್ತಿದೆ," ಇದೇ ಪುಸ್ತಕದಲ್ಲಿ ಆಹಾರ ತಜ್ಞ ಡಾ. ಕೆ.ಸಿ. ರಘು ’ಬಾಕಾಹು ಬಳಕೆಯಿಂದ ಬಾಳೇ ಬದಲು’ ಎಂಬ ಲೇಖನದಲ್ಲಿ ಹೇಳುತ್ತಾರೆ, "ಆಹಾರದಿಂದ ತಡೆಗಟ್ಟಬಹುದಾದ ಕಾಯಿಲೆಗಳು ಶೇಕಡಾ 90ರಷ್ಟು. ಕಾರ್ಬ್ಸ್ ಬದಲಿಸಿದರೆ ಹೆಚ್ಚಿನ ಜೀವನಶೈಲಿಯ ಕಾಯಿಲೆಗಳನ್ನು ತಡೆಗಟ್ಟಬಹುದು. ಇಂದಿನ ಯಾಂತ್ರಿಕ ಬದುಕಿಗೆ ಮತ್ತು ಮಧುಮೇಹ ರಾಜಧಾನಿಯೆಂದು ಹೆಸರಾಗಿರುವ ಭಾರತದ ಕಳಂಕವನ್ನು ಒಂದಷ್ಟು ಮಟ್ಟಿಗಾದರೂ ಹೋಗಲಾಡಿಸಲು ಬಾಳೆಕಾಯಿ ಹುಡಿ ಸಹಾಯಕ. ಇದಕ್ಕೆ ಏಕದಳ ಧಾನ್ಯಗಳಿಗಿಂತ ಬೆಲೆ ಹೆಚ್ಚಿದ್ದರೂ ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಅದು ಅತ್ಯಂತ ಕಡಿಮೆಯೆಂದೇ ಹೇಳಬಹುದು.” ಇಷ್ಟು ಆರೋಗ್ಯಕರವಾದ ಬಾಕಾಹುವಿನ ’ಇನ್ ಹೌಸ್ ಪ್ರೊಡಕ್ಷನ್’ ಬಲು ಸಲೀಸೆಂಬುದು ಕನ್ನಾಡಿನ ನೂರಾರು ಮನೆಗಳಿಗೆ ಮನದಟ್ಟಾಗಿದೆ. ಬಾಳೆಕಾಯಿ ಹುಡಿ ಶಿಶು ಆಹಾರಕ್ಕೆ ಮಾತ್ರವಲ್ಲ, ನಿತ್ಯ ಆಹಾರದಿಂದ ತೊಡಗಿ ಸಿಹಿ ತಿಂಡಿ, ಕುರುಕಲು ತಿಂಡಿಗಳ ಬಳಕೆಯಲ್ಲಿ ಯಶಸ್ವಿಯಾಗಿ ಬಳಸಬಹುದು. "ಇತರ ಹಿಟ್ಟುಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವ ಇದರ ಗುಣ ಮೆಚ್ಚಬೇಕು” ಎನ್ನುತ್ತಾರೆ ಶಿರಸಿಯ ಗೃಹಿಣಿ ಮನೋರಮಾ ಜೋಷಿ. ಬಾಕಾಹುವಿನ ಗುಣದ ಕಲ್ಪನೆ ಇಲ್ಲದೆಯೋ ಏನೋ, ಹಲವು ಕೃಷಿಕರು ಇದನ್ನು ಮಾರುವ ಬಗ್ಗೆ ಮಾತ್ರ ಚಿಂತಿಸುತ್ತಾರೆ. ಈ ನಿಲುವು ಸರಿ ಅಲ್ಲ. ನಾವು, ಬೆಳೆಗಾರರು ಇದನ್ನು ಮೊಟ್ಟಮೊದಲು ಮನೆಮನೆಗಳಲ್ಲಿ ಬಳಸುವ ರೂಢಿ ಮಾಡಿಕೊಳ್ಳಬೇಕು. ಮಾರುಕಟ್ಟೆಯಿಂದ ತರುವ ಅಕ್ಕಿ, ಗೋಧಿ, ಮೈದಾಗಳನ್ನು ದೂರ ಮಾಡಿದಷ್ಟೂ ಆರೋಗ್ಯ ಹತ್ತಿರ ಬರುತ್ತದೆ. "ರೈತ ತಾನು ಬೆಳೆದ ಬಾಳೆಕಾಯಿಯನ್ನು ತಿನ್ನದೆ ಬೇರೆಯವರಿಗೆ ಮಾರುವ ಚಿಂತನೆ ಮಾಡುವುದೇ ತಪ್ಪು" ಎನ್ನುತ್ತಾರೆ ಹೊಸಪೇಟೆಯ ಬಾಳೆ ಕೃಷಿಕ ಮತ್ತು ರೈತ ಸಂಘದ ಕಾರ್ಯಕರ್ತ ಕಾಳಿದಾಸ. ನಮ್ಮ ದೇಶದಲ್ಲಿರುವ ಬಾಳೆ ಬೆಳೆಗಾರ ಕುಟುಂಬಗಳ ಬಗ್ಗೆ ಅಧಿಕೃತ ಅಂಕೆಸಂಖ್ಯೆಗಳು ಲಭ್ಯವಿಲ್ಲ. "ಒಂದು ಊಹೆಯ ಪ್ರಕಾರ ಹತ್ತು ಲಕ್ಷ ಕುಟುಂಬ ಇರಬಹುದು” ಎನ್ನುತ್ತಾರೆ ಕೇಂದ್ರೀಯ ಬಾಳೆ ಸಂಶೋಧನಾ ಸಂಸ್ಥೆಯ ಮೂಲಗಳು. ಈ ಕುಟುಂಬಗಳು ಬಾಕಾಹು ತಯಾರು ಮಾಡಿಕೊಳ್ಳಲು ಎಷ್ಟು ವೆಚ್ಚ ಬಂದೀತು ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕಡಿಮೆ ಅಸಲಿನಲ್ಲಿ ಇದನ್ನು ಮಾಡಿಕೊಳ್ಳಲು ಹಲವು ಉಪಾಯಗಳಿವೆ. ವರ್ಷಕ್ಕೆ ಐನೂರು ಬಾಳೆಗೊನೆ ಮಾರುವ ರೈತನ ಮನೆಬಳಕೆಗೆ ಐವತ್ತು ಗೊನೆಗಳೇ ಧಾರಾಳ. ಆರ್ಥಿಕ ಲೆಕ್ಕಾಚಾರ ಬಿಟ್ಟು, ಆರೋಗ್ಯವರ್ಧನೆಯ ಸಾಧ್ಯತೆಯ ಬಗ್ಗೆ ಯೋಚಿಸೋಣ. ನಮ್ಮ ದುರಾದೃಷ್ಟ. ಬಹು ಮಂದಿ ಕೃಷಿ ವಿಜ್ಞಾನಿಗಳು ಮತ್ತು ಡೆವಲಪ್ಮೆಂಟ್ ಏಜೆನ್ಸಿಗಳು ಇಂತಹ ವಿಷಯವನ್ನು ’ಕೃಷಿಕ ಹಿತದೃಷ್ಟಿ’ಯಿಂದ ನೋಡಲು ಅಸಮರ್ಥರು. ಇಂಥವರು ಬಾಳೆಕಾಯಿ ಹುಡಿಯನ್ನು ವಾಣಿಜ್ಯ ದೃಷ್ಟಿಯಿಂದ ಮಾತ್ರ ಪ್ರತಿಪಾದಿಸಿ ರೈತರ ದಾರಿ ತಪ್ಪಿಸುತ್ತಿದ್ದಾರೆ. ಕೃಷಿಕರು ತಾವೇ ಬಾಕಾಹು ತಯಾರಿಸಿ ಬಳಸಿ, ಮಾರಾಟ ಕೂಡ ಮಾಡಬಹುದು. ಇಂಥ ಕಿರು ಉದ್ದಿಮೆಗಳು ವಿಕೇಂದ್ರೀಕೃತ ರೂಪದಲ್ಲಿ ಗ್ರಾಮೀಣ ಪ್ರದೇಶಗಳಲ್ಲೇ ಬರಲಿ. ಹಳ್ಳಿಯ ಬಾಳೆಕಾಯಿ ಇಷ್ಟು ಚಿಕ್ಕ ರೂಪಾಂತರಕ್ಕಾಗಿ ಪಟ್ಟಣಕ್ಕೆ ಏಕೆ ಹೋಗಿ ಬರಬೇಕು? ಹಾಗೆ ಬರುವಾಗ ಅದು ಅಪ್ಪಟವಾಗಿರುತ್ತದೆಯೇ? ಬಾಕಾಹು ವಿದ್ಯೆ ನಮಗೆ ಸಿಕ್ಕಿದ್ದು ಮಳೆಗಾಲ, ಅಂದರೆ, ಡ್ರೈಯರ್ ಇಲ್ಲದೆ ಬಾಳೆಕಾಯಿ ಒಣಗಿಸಲಾಗದ ಕಾಲದಲ್ಲಿ. ’ಸಣ್ಣ ಪ್ರಮಾಣದ, ಒಳ್ಳೆ ಡ್ರೈಯರ್ ಎಲ್ಲಿ ಲಭ್ಯ? ಎಷ್ಟು ಬೆಲೆಯಿದೆ?’ ಈ ವಿದ್ಯೆಯ ಪ್ರಚಾರಸತ್ರಕ್ಕೆ ಹೊರಟಾಗ ಎದುರಾದ ಪ್ರಶ್ನೆಯಿದು. ನಮ್ಮಲ್ಲಿ ಬೇರೆಬೇರೆ ರೀತಿಯ ಡ್ರೈಯರುಗಳು ಇವೆ. ಆದರೆ ಎಲ್ಲ ಪ್ರದೇಶಗಳಿಗೂ, ಎಲ್ಲರ ಅಗತ್ಯಗಳಿಗೂ ಒಂದೇ ಮಾದರಿಯದು ಸಲ್ಲದು. ಮಲೆನಾಡಿನಲ್ಲಿ ಮಳೆಗಾಲದ ನಾಲ್ಕು ತಿಂಗಳು ಸೌರಶಕ್ತಿಯ ಡ್ರೈಯರ್ ನಿರುಪಯುಕ್ತ. ಬೆಳೆಗಳ ನಿರ್ಜಲೀಕರಣದ ಅತಿ ಸರಳ ವಿದ್ಯೆಯಲ್ಲಿ ನಾವು ತುಂಬಾ ಹಿಂದೆ ಇದ್ದೇವೆ. ನಮ್ಮ ಬಹುತೇಕ ಕೃಷಿ ವಿಜ್ಞಾನ ಕೇಂದ್ರ (ಕೇವೀಕೆ)ಗಳಲ್ಲೂ ಡ್ರೈಯರೇ ಇಲ್ಲ! ’ಬಯಲುಸೀಮೆಯಲ್ಲಿ ಮಳೆ ಕಡಿಮೆ. ಅಲ್ಲಿನ ಕೇವೀಕೆಗಳಿಗೆ ಡ್ರೈಯರ್ ಅಗತ್ಯವಿಲ್ಲ’ ಎಂದು ವಾದಿಸಬಹುದು. ಈ ವಾದ ಸರಿಯಲ್ಲ. ವಾತಾವರಣದ ಏರುಪೇರಿನ ಈ ದಿನಗಳಲ್ಲಿ ಕೃಷಿಕರಿಗೆ ಬೆಳೆಗಳ ಸಂರಕ್ಷಣಾ ರೀತಿ ತೋರಿಸಲು ಪ್ರತಿ ಕೇವೀಕೆಗೂ ಒಂದು ಡ್ರೈಯರ್, ಪಲ್ವರೈಸರ್ (ಹುಡಿ ಮಾಡುವ ಯಂತ್ರ) ಮತ್ತಿತರ ಅನುಬಂಧ ಉಪಕರಣ/ಯಂತ್ರಗಳು ಅತ್ಯಗತ್ಯ. ಅವು ಮೂಲಭೂತ ಆವಶ್ಯಕತೆಗಳು. ಮಲೆನಾಡು, ಬಯಲುಸೀಮೆ ಎಂಬ ವ್ಯತ್ಯಾಸವಿಲ್ಲ. ಚಿಕ್ಕ, ಮಧ್ಯಮ ಹಿಡುವಳಿದಾರರಿಗೂ ಬೇಕು ಮನೆಗೊಂದು ಪುಟ್ಟ ಡ್ರೈಯರ್. ಅದಿದ್ದರೆ ಅಲ್ಲಲ್ಲಿ ಬಳಸದೆ ಬಿಡುವ ಬೆಳೆಗಳಿಗೆ ಒಣಗಿಸಿ ಮರುಜನ್ಮ ಕೊಡಬಹುದು. ಕೃಷಿಕ ಮಾರುಕಟ್ಟೆ, ಆನ್ಲೈನುಗಳ ಮೂಲಕ ಮಾರಬಹುದು. ತಿನ್ನುವ ಬಾಯಿಗಳಿಗಿಂತ ಆಹಾರ ಉತ್ಪಾದಿಸುವ ಕೈಗಳು ಎಷ್ಟೋ ಕಮ್ಮಿ. ಸಬ್ಸಿಡಿಯ ಆಮಿಷ ತೋರಿಸಿ ಕಳಪೆ ಉಪಕರಣ ತಲೆಗೆ ಕಟ್ಟುವ ಕೆಟ್ಟ ಚಾಳಿ ಸಾಕು. ಮನೆಮನೆಗೆ ಹಗುರ ಬೆಲೆಯ, ಕ್ಷಮತೆಯ ಡ್ರೈಯರ್ ಸಿಗುವಂತಾಗಬೇಕು. ಚುರುಕಿನ ಕೃಷಿಕರು ಎರಡು-ಮೂರು ವರ್ಷಗಳಲ್ಲೇ ಡ್ರೈಯರಿನ ಅಸಲು ಮಾಡಿಕೊಂಡಾರು. ವರ್ಷಕ್ಕೆ ಕನಿಷ್ಠ 5ರಿಂದ 10,000 ರೂ.ಗಳ ನಷ್ಟತಡೆ ಕಷ್ಟವಾಗದು. ನಷ್ಟತಡೆಯೂ ಆದಾಯ ವರ್ಧನೆಯಲ್ಲವೇ? ಈ ಕಡೆ ದೇಶದ, ಕೇವೀಕೆಗಳ, ರೈತಸ್ನೇಹಿ ಎನ್ಜಿಓಗಳ ಗಮನ, ಕ್ರಿಯೆಗಳು ತೊಡಗಲಿ. ಬಾಳೆಕಾಯಿ ಉತ್ಪಾದನೆಯಲ್ಲಿ ನಾವು ಜಗತ್ತಿನಲ್ಲೇ ನಂಬರ್ ವನ್. ಸರಿಯಾಗಿ ಯೋಚಿಸಿದರೆ, ಬಾಕಾಹು ತಯಾರಿ ಕೃಷಿಕರ ನಷ್ಟತಡೆಗೆ ಒಂದು ಉತ್ತಮ ಮಾರ್ಗ. ಕನ್ನಾಡಿನ ಒಂದು ಭಾಗದಲ್ಲಿ ಪುಟಿದೆದ್ದ ಬಾಕಾಹು ವಿದ್ಯೆ ನಾನಾ ಕಡೆ ಬಾಳೆ ಬೆಳೆಗಾರರನ್ನು ರೋಮಾಂಚನಗೊಳಿಸಿದೆ. ಹಾಗೆ ನೋಡಿದರೆ, ಈವರೆಗೆ ನಮಗೆ ಕಾಣಿಸಿರುವುದು ಈ ಬೆಳವಣಿಗೆಯ, ಕೃಷಿ ಸಮುದಾಯದ ದೃಷ್ಟಿಯಿಂದ ಮಹತ್ತರ ಬದಲಾವಣೆಯೊಂದರ ಮೊಗ್ಗು ಮಾತ್ರ. ಹೂವಾಗಿ ಅರಳಲು ಇನ್ನೂ ಕೆಲ ಸಮಯ ಬೇಕು. ಶ್ರೀ ಪಡ್ರೆ

Related Books