ಅನೇಕಲವ್ಯ

Date: 24-09-2020

Location: ಬೆಂಗಳೂರು


ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿರುವ ಡಾ. ನಿತ್ಯಾನಂದ ಬಿ. ಶೆಟ್ಟಿ ಅವರು ಬರೆವ ಅಂಕಣ ’ಲೋಕೋಕ್ತಿ’. ಮಹಾಭಾರತದ ಏಕಲವ್ಯನ ಬಗ್ಗೆ ನಮ್ಮಲ್ಲಿ ಬಂದಿರುವ ವಿವಿಧ ವ್ಯಾಖ್ಯಾನ ಮತ್ತು ಅರ್ಥ ನಿರೂಪಣೆಗಳನ್ನು ಪರಿಶೀಲಿಸುತ್ತ ಹೊಸ ಪ್ರಶ್ನೆಗಳನ್ನು ಎತ್ತುವ ಬರಹ ಇಲ್ಲಿದೆ.

ಏಕಲವ್ಯನ ಕಥೆ ಯಾರಿಗೆ ಗೊತ್ತಿಲ್ಲ?.

ನಾನಾಗ ಮೂರನೇ ತರಗತಿಯ ವಿದ್ಯಾರ್ಥಿ. ಆಗಿನ ನಮ್ಮ ಶಾಲಾದಿನಗಳಲ್ಲಿ ತಿಂಗಳ ಹಬ್ಬ ಎಂಬ ಮಕ್ಕಳ ಪ್ರತಿಭಾ ಪ್ರದರ್ಶನಕ್ಕಾಗಿಯೇ ಇರುವ ಕಾರ್ಯಕ್ರಮವೊಂದನ್ನು ಪ್ರತಿ ತಿಂಗಳೂ ಮಾಡುತ್ತಿದ್ದರು. ತಿಂಗಳ ಮೂರನೇ ಶನಿವಾರ ಬೆಳಗ್ಗಿನಿಂದ ಸಂಜೆಯವರೆಗೆ ನಮ್ಮದೇ ಹಾಡು-ಕುಣಿತ-ಕಥಾಪ್ರಸ್ತುತಿ-ನಾಟಕ-ಯಕ್ಷಗಾನಗಳಿರುತ್ತಿದ್ದ ಹಬ್ಬ ಅದು.

ಅಂತಹ ಒಂದು ಹಬ್ಬದಲ್ಲಿ ಆಗ ಆರನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಅಣ್ಣ ಗುರುದಕ್ಷಿಣೆ ಎಂಬ ನಾಟಕದಲ್ಲಿ ದ್ರೋಣನ ಪಾತ್ರಧಾರಿಯಾಗಿ ಅಭಿನಯಿಸುತ್ತ ಏಕಲವ್ಯನ ಬಲಗೈಯ ಹೆಬ್ಬೆರಳು ಕೇಳಿದ್ದು, ಏಕಲವ್ಯ ಹಿಂದು-ಮುಂದು ನೋಡದೆ ಹೆಬ್ಬೆರಳು ಕತ್ತರಿಸಿ ದ್ರೋಣನ ಪಾದಮೂಲದಲ್ಲಿ ಇಟ್ಟದ್ದನ್ನು ನೋಡಿ ನಾನು ಎಷ್ಟು ವ್ಯಥೆ ಪಟ್ಟಿದ್ದೆನೆಂದರೆ ನನ್ನ ಅಣ್ಣನ ಜೊತೆ ಎರಡು ದಿನ ಮಾತು ಬಿಟ್ಟಿದ್ದೆ. ಸೋಮವಾರ ಶಾಲೆ ಶುರು ಆದಾಗ ತರಗತಿಗಳು ಆರಂಭ ಆಗುವುದಕ್ಕೆ ಮೊದಲೇ ಏಕಲವ್ಯನ ಪಾತ್ರಧಾರಿಯಾಗಿ ಅಭಿನಯಿಸಿದ್ದ ವಿದ್ಯಾರ್ಥಿಯ ಬೆರಳು ನೋಡಿ ಮುಟ್ಟಿ ಖಾತರಿಪಡಿಸಿಕೊಂಡ ಬಳಿಕವಷ್ಟೇ ನಾನು ಅಣ್ಣನ ಜೊತೆ ರಾಜಿಯಾಗಿದ್ದೆ.

ವ್ಯಾಸಭಾರತದ ಆದಿಪರ್ವದ 131ನೆಯ ಅಧ್ಯಾಯದಲ್ಲಿ ಬರುವ ಏಕಲವ್ಯನ ಕಥೆ 30 ಶ್ಲೋಕಗಳಲ್ಲಿ ಹರಡಿದೆ. ಮಹಾಭಾರತದ ಏಕಲವ್ಯನ ಕಥೆಯನ್ನು ಆಧುನಿಕ ಕನ್ನಡ ಸಾಹಿತ್ಯ ಅನೇಕ ಬಗೆಯಲ್ಲಿ ಮರುನಿರೂಪಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

  • ದ್ರೋಣ ಏಕಲವ್ಯನ ಹೆಬ್ಬೆರಳನ್ನು ಕೇಳಿದ ಕಥೆ

  • ಏಕಲವ್ಯನ ಹೆಬ್ಬೆರಳು ಕತ್ತರಿಸಿದುದಕ್ಕೆ ದ್ರೋಣನ ತಲೆ ಹೋದ ಕಥೆ

  • ಏಕಲವ್ಯ ಹೆಬ್ಬೆರಳನ್ನು ಕತ್ತರಿಸಿದರೂ ಬಳಿಕ ಎಡಗೈಯಲ್ಲಿ ಬಿಲ್ವಿದ್ಯೆ ಅಭ್ಯಾಸ ಮಾಡಿ ಶ್ರೇಷ್ಠ ಬಿಲ್ಗಾರನಾದ ಕಥೆ

  • ಕುರುಕ್ಷೇತ್ರ ಯುದ್ಧದಲ್ಲಿ ಏಕಲವ್ಯನ ಕೌರವನ ಪಕ್ಷ ವಹಿಸಿ ಯುದ್ಧ ಮಾಡಿದ ಕಥೆ

  • ಗುರುದ್ರೋಣರ ಆದೇಶವನ್ನು ಪರಿಪಾಲಿಸುತ್ತ ಗುರುಪುತ್ರ ಅಶ್ವತ್ಥಾಮನ ಬೆಂಗಾವಲ ಭಟನಾಗಿ ಇದ್ದ ಕಥೆ

  • ಕೊನೆಗೆ ಅಶ್ವತ್ಥಾಮ ಹತನಾದಾಗ ಆತನ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ ಕಥೆ

  • ಕುರುಕುಲದ ಕೌಟುಂಬಿಕ ಕಲಹದಲ್ಲಿ ಪಾಲ್ಗೊಂಡ ಕರ್ಣ ಯುದ್ಧದಲ್ಲಿ ತನ್ನ ನೆರವನ್ನೂ ಬೇಡಿ ಬಂದಾಗ ಆತನನ್ನು ಮರ್ಮಬೇಧಕವಾದ ಮಾತುಗಳಿಂದ ಚುಚ್ಚಿದ ಕಥೆ

  • ಸರ್ವಶ್ರೇಷ್ಠ ಬಿಲ್ಗಾರನಾಗಿಯೂ ಕುರುಕ್ಷೇತ್ರ ಯುದ್ಧದಲ್ಲಿ ತಟಸ್ಥನಾಗಿ ಉಳಿದ ಕಥೆ

  • ಕೌರವ ಪಕ್ಷ ವಹಿಸಿ ಯುದ್ಧಕ್ಕೆ ಬಂದ ಏಕಲವ್ಯನನ್ನು ಕೃಷ್ಣ ಹತ್ಯೆ ಮಾಡಿದ ಕಥೆ

  • ಅಪ್ಪನ ಹತ್ಯೆಗೆ ಪ್ರತೀಕಾರವಾಗಿ ಏಕಲವ್ಯನ ಮಗ ವಿಷ ಲೇಪಿಸಿದ ಬಾಣ ಪ್ರಯೋಗ ಮಾಡಿ ಕೃಷ್ಣನನ್ನು ಕೊಂದ ಕಥೆ

 

ಹೀಗೆ ಏಕಲವ್ಯನ ಕಥೆಯ ಬಲುಮುಖಗಳು ಕನ್ನಡದಲ್ಲಿ ಕಾಣಿಸಿಕೊಂಡಿವೆ.

ಏಕಲವ್ಯನ ಕುರಿತ ಬಹುಬಗೆಯ ಕಥನಗಳು ಕನ್ನಡದಲ್ಲಿ ಮೊದಲಿಗೆ ಕಾಣಿಸಿಕೊಂಡದ್ದು ನಾಟಕ ರೂಪದಲ್ಲಿ. ಟಿ ಪಿ ಕೈಲಾಸಂ, ಮಂಜೇಶ್ವರ ಗೋವಿಂದ ಪೈ, ಕುವೆಂಪು ಅವರಿಂದ ಆರಂಭಗೊಂಡ ಈ ಪರಂಪರೆ ಸಿದ್ಧಲಿಂಗಯ್ಯನವರವರೆಗೆ ಹರಿದುಕೊಂಡು ಬಂತು. ಕೈಲಾಸಂ ಅವರು ಏಕಲವ್ಯ ಪ್ರಕರಣವನ್ನು ಕೇಂದ್ರವಾಗಿರಿಸಿಕೊಂಡು ದಿ ಪರ್ಪಸ್ (1944) ನಾಟಕವನ್ನು ಇಂಗ್ಲಿಷ್ ನಲ್ಲಿ ಬರೆದರು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಉಪಸಂಪಾದಕರಾಗಿದ್ದ ಬಿ ಎಸ್ ರಾಮರಾಮ್ ಅವರು ಅದನ್ನು ಕನ್ನಡಕ್ಕೆ ಅನುವಾದಿಸಿದರು. ಆ ಬಳಿಕ ಗೋವಿಂದ ಪೈಯವರ ಹೆಬ್ಬೆರಳು, (1946) ಮತ್ತು ಕುವೆಂಪು ಅವರ ಬೆರಳ್ಗೆ ಕೊರಳ್ (1947) ಪ್ರಕಟವಾಯಿತು. ಅಲ್ಲಿಂದ ನಲ್ವತ್ತು ವರ್ಷಗಳ ನಂತರ ಸಿದ್ದಲಿಂಗಯ್ಯ ಅವರ ಏಕಲವ್ಯ (1986) ನಾಟಕ ಪ್ರಕಟ ಆಯಿತು. ಈ ನಡುವಿನ ಅವಧಿಯಲ್ಲಿ ಮೇಘಮಿತ್ರ ಅವರು ಅಮಾಯಕ , ಎಚ್ಚೆತ್ತ ಏಕಲವ್ಯ ಮತ್ತು ನೀಲ ನಾಗರ ಎಂಬ ಮೂರು ನಾಟಕಗಳನ್ನು ಬರೆದರು. ಡಿ ವಿ ಶೇಷಗಿರಿರಾವ್ ಅವರ ಆಚಾರ್ಯ ದ್ರೋಣ, ಅಣ್ಣಯ್ಯ ಅವರ ಪ್ರಳಯ, ರಾ.ಶಿ (ಶಿವರಾಮ್) ಅವರ ನವ್ಯ ಏಕಲವ್ಯ, ಎಸ್ ಕೃಷ್ಣ ಭಟ್ ಅವರು ಅನುವಾದಿಸಿದ ಸಂಕಲ್ಪ ಸಿದ್ಧಿ ಅಥವ ಏಕಲವ್ಯ ವಧೆ(ಮೂಲ ತಿಳಿದಿಲ್ಲ), ದೇವೇಂದ್ರ ಬಿಸ್ವಾಗರ ಅವರ ಸಿದ್ಧಿ ಸಾಫಲ್ಯ ಇವುಗಳೆಲ್ಲ ಏಕಲವ್ಯ ನನ್ನು ಕೇಂದ್ರವಾಗಿರಿಸಿಕೊಂಡ ನಾಟಕಗಳು. ಕಾಶಿ ವಿಶ್ವನಾಥ ಶೆಟ್ಟಿ ಎಂಬವರು ಏಕಲವ್ಯ ಎಂಬ ಗೀತನಾಟಕವನ್ನೂ ಬರೆದಿದ್ದಾರೆ.

ಸತ್ಯಕಾಮರ ಆಹುತಿ, ಜ ಹೋ ನಾರಾಯಣ ಸ್ವಾಮಿಯವರ ಅದಮ್ಯ, ಆದ್ಯ ರಾಮಾಚಾರ್ಯರ ಆಚಾರ್ಯ ದೋಣ ಮತ್ತು ಧನಂಜಯ, ಭೀಮಸೇನ ತೋರಗಲ್ ಅವರ ಸಂಚು, ಕೃಷ್ಣಾಜಿ ಕುಲಕರ್ಣಿ ಅವರ ಪಾಂಡವ ಪ್ರತಾಪ ಇವುಗಳು ಏಕಲವ್ಯ ಪ್ರಕರಣದ ಕುರಿತು ಬಂದಿರುವ ಕಾದಂಬರಿಗಳು.

ಈ ವಸ್ತು ಕನ್ನಡದ ಕವಿಗಳನ್ನೂ ಕಾಡಿದ್ದರಿಂದ ಸುಜನಾ ಅವರ ಉತ್ತರ ಭಾರತ ಎಂಬ ಖಂಡಕಾವ್ಯ, ಸಿ ಎಂ ದೇವೇಂದ್ರನಾಯಕ್ ಅವರ ಏಕಲವ್ಯ ಪರ್ವ ಎಂಬ ಕಥನ ಕಾವ್ಯ, ಶಂಕರ ತಲ್ಲೂರ ಅವರ ಏಕಲವ್ಯ ಕಥನ ಕವನ, ಜಿ ಎಸ್ ಶಿವರುದ್ರಪ್ಪನವರ ಚಕ್ರಗತಿ, ಜಿ ಪಿ ರಾಜರತ್ನಂ ಅವರ ಏಕಲವ್ಯ, ಸುಮತೀಂದ್ರ ನಾಡಿಗರ ಆಧುನಿಕ ಏಕಲವ್ಯರಿಗೆ, ಬಿಂಡಿಗನವಿಲೆ ನಾರಾಯಣ ಸ್ವಾಮಿ ಅವರ ಇನ್ನೊಬ್ಬ ಏಕಲವ್ಯ, ಮಲ್ಲಿಕಾರ್ಜುನ ಹಿರೇಮಠ ಅವರ ಏಕಲವ್ಯ, ಚನ್ನಣ್ಣ ವಾಲೀಕಾರ ಅವರ ಏಕಲವ್ಯ, ರವಿ ಉಪಾಧ್ಯ ಅವರ ದ್ರೋಣಾಚಾರ್ಯರಿಗೆ ಏಕಲವ್ಯ ಹೇಳಿದ್ದು, ಜಿ ಬಸವಂತಪ್ಪನವರ ಕೆಟ್ಟ ಪರಂಪರೆ, ಶ್ರೀರಾಮ ಜಾಧವ ಅವರ ಈ ಎಡಗೈ ಹೆಬ್ಬೆಟ್ಟಿನ ಗುರುತು, ಬಿ ಎನ್ ಮಲ್ಲೇಶ್ ಅವರ ದ್ರೋಣರ ದ್ರೋಹದ ಕುರಿತು, ಶಶಿಕಲಾ ಗುರುಪುರ ಅವರ ಏಕಲವ್ಯನ ಹೆಬ್ಬೆರಳು, ಮಲ್ಲೇಶ ಸೊಬರದ ಅವರ ಅರ್ಥವಾಗದೇ ಹೋದವರು ಎಂಬ ಕವನಗಳು ಏಕಲವ್ಯನನ್ನು ಆಧರಿಸಿ ರಚನೆಗೊಂಡ ಕವನಗಳು.

ಮಕ್ಕಳಿಗಾಗಿಯೇ ಬರೆದಿರುವ ಅನೇಕ ಕೃತಿಗಳಲ್ಲೂ ಏಕಲವ್ಯನ ಕಥೆ ಇದೆ. ಅವುಗಳಲ್ಲಿ ಹರ್ಡೇಕರ್ ಮಂಜಪ್ಪನವರ ಏಕಲವ್ಯ, ಬಾಲಮುಕುಂದ ಅವರ ಏಕಲವ್ಯ, ಕೆ ಪರಶುರಾಮಯ್ಯನವರ ಪೌರಾಣಿಕ ಆದರ್ಶ ಬಾಲಕರು, ಸು. ರುದ್ರಮೂರ್ತಿ ಶಾಸ್ತ್ರಿಗಳ ಬಾಲ ಭಾರತ, ಎ ಆರ್ ಕೃಷ್ಣಶಾಸ್ತ್ರಿಗಳ ನಿರ್ಮಲ ಭಾರತ, ಎಂ ಎನ್ ನಾಗರಾಜರ ಕಿಶೋರ ಭಾರತ ಅಥವಾ ಏಕಲಕ್ಷ್ಯದ ಏಕಲವ್ಯ, ಅಣ್ಣಾಜಿ ಫಡತಾರೆ ಅವರ ಬಾಲರ ಬಯಕೆ ಮುಖ್ಯವಾದವುಗಳು. ತ್ರಿವಿಕ್ರಮ ಎಂಬವರು ಏಕಲವ್ಯನ ಗುರುದಕ್ಷಿಣೆ ಎಂಬ ಮಕ್ಕಳ ಕಾದಂಬರಿಯನ್ನೂ ಬರೆದಿದ್ದಾರೆ.

ಇವೆಲ್ಲವುಗಳ ಜೊತೆಗೆ ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿದ ಏಕಲವ್ಯ ಎಂಬ ಚಲನಚಿತ್ರದಲ್ಲಿ ಬುಡಕಟ್ಟು ಸಮುದಾಯದ ಹುಡುಗ ಕ್ರೀಡಾಪಟುವಾಗಲು ನಡೆಸುವ ಹೋರಾಟದ ಕಥನವನ್ನೂ ನೆನಪಿಸಿಕೊಳ್ಳಬಹುದು. ಕರ್ನಾಟಕದ ಮಣ್ಣಿನಲ್ಲಿ ಕನ್ನಡದಲ್ಲಿ ಮಾತ್ರವಲ್ಲದೆ ಏಕಲವ್ಯನ ಕಥೆ ತುಳು ಭಾಷೆಯಲ್ಲೂ ಅಭಿವ್ಯಕ್ತಗೊಂಡಿದೆ. ಅದಕ್ಕೆ ಇತ್ತೀಚಿಗಿನ ಉದಾಹರಣೆಯೆಂದರೆ ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಕುಡಿಯನ ಕೊಂಬಿರೆಲ್ (ಕುಡಿಯನ ಹೆಬ್ಬೆರಳು) ಎಂಬ ತುಳು ಯಕ್ಷಗಾನ ಪ್ರಸಂಗ.

ಕಥೆ-ಕವನ-ಯಕ್ಷಗಾನ-ನಾಟಕ-ಚಲನಚಿತ್ರಗಳಲ್ಲಿದ್ದ ಏಕಲವ್ಯ ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಅಧ್ಯಯನದ ವಸ್ತೂ ಆಗಿದ್ದು ಟಿ ಕೆ ಶರತ್ ಕುಮಾರ್ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, ಶಕುಂತಲ ಸಿಂಧೂರ ಮತ್ತು ಅಶೋಕ ನರೋಡೆಯವರು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯ ಮತ್ತು ಏಕಲವ್ಯನ ಕುರಿತಾಗಿ ವಿಶೇಷ ಅಧ್ಯಯನವನ್ನೂ ಮಾಡಿದ್ದಿದೆ.

ಏಕಲವ್ಯನ ಬಗ್ಗೆ ಬಹುರೂಪಿ ಕಥನಗಳು ಹುಟ್ಟಿಕೊಂಡ ಹಾಗೆಯೇ ಏಕಲವ್ಯ ಪ್ರಕರಣದ ಕುರಿತು ವಿವಿಧ ದೃಷ್ಟಿಕೋನಗಳ ವ್ಯಾಖ್ಯಾನ-ವಿವರಣೆಗಳೂ ಇವೆ. ಆದರೆ ಇಲ್ಲಿ ಕಥನಗಳನ್ನು ಮತ್ತು ವಿಮರ್ಶೆಗಳನ್ನು ಅಬೇಧವಾಗಿ ನೋಡಲು ಸಾಧ್ಯವಿಲ್ಲ. ಯಾಕೆಂದರೆ ಯಾವುದೇ ಕಥನ ವಿಶಾಲವಾದ ಅರ್ಥದಲ್ಲಿ ವಿಮರ್ಶೆಯ ಕಣ್ಣೋಟದ ಮೂಲಕವೇ ಮೂಡಿಬರುತ್ತದೆ. ಸಾಹಿತ್ಯ ಕೃತಿಯೊಂದರಲ್ಲಿ ಸೃಜನಶೀಲತೆ ಹಿಂದಾಗಿ ಸೈದ್ಧಾಂತಿಕ ಪ್ರತಿಪಾದನೆಯೇ ಮುಂದೆ ನಿಂತಾಗ ಆಗ ಅದು ವಿಚಾರ ಪ್ರಣಾಳಿಕೆಯಾಗುತ್ತದೆ ಅಥವ ಸೈದ್ಧಾಂತಿಕ ಸಾಹಿತ್ಯವಾಗುತ್ತದೆ. ತನ್ನ ಕಥನ ಶರೀರದೊಳಗೆ ಲೋಕಚಿಂತನೆಯನ್ನು ಸಹಜವಾಗಿ ನಳನಳಿಸುವಂತೆ ರೂಪಿಸಿ ಅದನ್ನು ತನ್ನ ಲೋಕಾನುಭವದ ಅಗ್ನಿದಿವ್ಯಕ್ಕೊಡ್ದುವ ಹದದಲ್ಲಿ ರೂಪುಗೊಳ್ಳುವ ಕಲಾಕೃತಿ ಪ್ರತಿ ಓದಿನಲ್ಲೂ ಹೊಚ್ಚಹೊಸದಾಗಿ ಹೊಳೆಹೊಳೆಯುತ್ತದೆ. ಏಕಲವ್ಯನನ್ನು ಕುರಿತು ಕನ್ನಡದಲ್ಲಿ ಮೂಡಿ ಬಂದ ಅನೇಕ ಬಗೆಯ ಸಾಹಿತ್ಯ ಕೃತಿಗಳಲ್ಲಿ ಈ ಎರಡು ಮಾದರಿಗಳೂ ಇವೆ. ಅದನ್ನು ವಿಶ್ಲೇಷಿಸುವುದು ಈ ಅಂಕಣದ ಉದ್ದೇಶವಲ್ಲ.

ಏಕಲವ್ಯನ ಕಥನವನ್ನು ವಿವರಿಸುವ ಮತ್ತು ಅರ್ಥವನ್ನು ವ್ಯಂಜಿಸುವ ಆಧುನಿಕ ವಿಮರ್ಶೆಯ ಕಥನಗಳಲ್ಲಿ ಕಥೆಯ ಅರ್ಥವಂತಿಕೆಯನ್ನು ಸಾಮಾಜಿಕ ನೆಲೆಯಲ್ಲಿ ವಿವರಿಸುವ ಓದುಗಳೇ ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ವ್ಯಕ್ತಮಧ್ಯದಲ್ಲಿ ಎದ್ದು ಕಾಣುವ ಸಾಮಾಜಿಕ ಅಸಮಾನತೆಯನ್ನು ಎತ್ತಿ ತೋರಿಸುವುದಕ್ಕೆ ಹೆಚ್ಚು ಕಷ್ಟವೂ ಬೇಕಾಗಿಲ್ಲದ ಕಾರಣ ಎಲ್ಲವೂ ಸ್ವಯಂವೇದ್ಯ ಎನ್ನುವಂತೆ ಈ ನಿರೂಪಣೆ ನಮ್ಮಲ್ಲಿ ಜನಪ್ರಿಯಗೊಂಡಿದೆ.

ಸ್ವಾತಂತ್ರ್ಯವನ್ನು ಪಡೆಯುವುದರತ್ತ ಧಾವಿಸುತ್ತಿರುವ ಭಾರತವು ತನ್ನ ಅಂತರಂಗದಲ್ಲಿ ವ್ರಣವಾಗಿ ಕೊಳೆಯುತ್ತಿರುವ ಈ ಜಾತೀಯ ಪ್ರಜ್ಞೆಯನ್ನು ನಿಗ್ರಹಿಸದೆ ಇದ್ದರೆ ಭಾರತ ದೇಶವು ಯಾದವೀ ಕಲಹಕ್ಕೊಳಗಾಗಿ ತನ್ನ ನಾಶವನ್ನು ತಾನೇ ಮಾಡಬಹುದು ಎಂಬ ಆತಂಕ ಏಕಲವ್ಯನನ್ನು ಆಧುನಿಕ ಕಾಲದಲ್ಲಿ ಕಥಿಸಿದ ಕೈಲಾಸಂ, ಗೋವಿಂದ ಪೈಯವರಿಗೆ ಇದೆ.

ಗೋವಿಂದ ಪೈಗಳ ಹೆಬ್ಬೆರಳು ನಾಟಕದೊಳಗಡೆಯೇ ಈ ಸೂಚನೆ ಇದೆ.

“ಇತರರನ್ನು ತಮ್ಮ ಮಟ್ಟಕ್ಕೆ ಎತ್ತಿಕೊಳ್ಳುವುದು ಮಹಾತ್ಮರ ಧರ್ಮ. ಅಡಿಮೆಟ್ಟಿ ದೂರ ಮಾಡುವುದು ದುರಾತ್ಮರ ಕರ್ಮ; ನಾವು-ನೀವು ಎಂಬ ಹಳೆಯ ಭೇದ-ಭಾವನೆಗಳನ್ನು ತೊರೆದು ಸಹೋದರತೆಯಿಂದ ಸೌಹಾರ್ದತೆಯಿಂದ, ಐಕ್ಯದಿಂದ, ಐಕ್ಯಮತ್ಯದಿಂದ ಬಾಳುವುದೇ ತಾಯ್ನಾಡಿಗೆ ಶ್ರೇಯಸ್ಕರವಾಗುತ್ತದೆ. ಇಲ್ಲದೆ ಹೋದರೆ, ಇತರ ಸಸ್ಯಗಳನ್ನು ತನ್ನೊಳಗೆ ಬೆಳೆಯಬಿಡದ ಬಿದಿರುಮಳೆ ತನ್ನ ತಿಕ್ಕಾಟದಿಂದ ಉಂಟಾದ ಬೆಂಕಿಯಿಂದ ಸುಟ್ಟು ನಾಶವಾಗಿ ಹೋಗುವಂತೆ, ದೇಹದ ಆರೋಗ್ಯ ಸಡಿಲವಾದಾಗ, ಒಳಹೋಗುವ ರೋಗಗಳಂತೆ, ಒಳಗಿನ ದೌರ್ಬಲ್ಯಗಳನ್ನು ತಿಳಿದು ಬರುವ ಹೊರಗಿನ ಆಕ್ರಮಣದಂತೆ, ಸಮಾಜ ಹರಿಮುರಿಯಾಗದೆ ಹೋಗದು!. ಮಾತೃಭೂಮಿ ಪರತಂತ್ರವಾಗದೆ ಇರದು. ಈ ಮಾತು ಸತ್ಯ, ತ್ರಿಸತ್ಯ, ಇದಕ್ಕೆ ಎರಡಿಲ್ಲ”.

ಎಂಬ ನಾಟಕದ ಮೇಳದವರ ಮಾತು ಗೋವಿಂದ ಪೈಯವರ ಮಾತೂ ಅಹುದು. ಸಾಮಾಜಿಕ ವಿಮರ್ಶೆ, ಬಾಯಿಚಪಲದ ಮಾತಾಗದೆ ಸಾಮಾಜಿಕ ಕಾಳಜಿಯಾಗಿ, ಸಮಾಜದ ಹಿತಚಿಂತನೆಯಾಗಿ ಪರಿವರ್ತನೆಗೊಳ್ಳುವ ಪರಿ ಪೈಗಳ ನಾಟಕದಲ್ಲಿ ಅನನ್ಯವಾಗಿದೆ.

ಕನ್ನಡ ಸಾಹಿತ್ಯವಿಮರ್ಶೆಯ ಲೋಕ ಏಕಲವ್ಯನ ಕಥೆಯನ್ನು, ನಾಡಾಡಿ V/S ಕಾಡಾಡಿಗಳ ಅಥವ ಮೇಲು ಜಾತಿ V/S ಕೆಳ ಜಾತಿಗಳ ಅಥವ ಆರ್ಯ V/S ದ್ರಾವಿಡರ ಸಂಘರ್ಷ ಮತ್ತು ವರ್ಣಾಶ್ರಮ ಧರ್ಮದ ಉಲ್ಲಂಘನೆಗೆ ಮನುಧರ್ಮ ಮಾಡಿದ ಶಾಸ್ತಿ ಎಂಬಿತ್ಯಾದಿಯಾಗಿ ಅರ್ಥನಿರೂಪಣೆಯನ್ನು ಮಾಡಿದೆ. ಜಿ ಪಿ ರಾಜರತ್ನಂ ಅವರು ಇದೇ ಹಿನ್ನೆಲೆಯಲ್ಲಿ ಏಕಲವ್ಯ ಪ್ರಕರಣವನ್ನು ಅನುಲಕ್ಷಿಸಿ ಆಡಿದ ಮಾತುಗಳು ಹೀಗಿವೆ:

“ಬಲಗೈಯ ನಾಲ್ಕು ಬೆರಳೇ ನಮ್ಮ ಸಮಾಜದ ನಾಲ್ಕು ವರ್ಣಗಳು. ನಾಲ್ಕು ಬೆರಳುಗಳಿಂದ ಆಚೆಗೆ ಇರುವ ಐದನೆಯ ಬೆರಳೇ ಅಸ್ಪೃಶ್ಯವೆನಿಸಿರುವ ಐದನೆಯ ವರ್ಣ”.

– ಈ ಮಾತುಗಳ ಸುಸಂಬದ್ಧತೆ ಏನೇ ಇರಲಿ. ಏಕಲವ್ಯನ ಕಥೆಯನ್ನು ಏರು-ಪೇರುಗಳಿರುವ ನಮ್ಮ ಸಾಮಾಜಿಕತೆಯ ಜೊತೆಗಿಟ್ಟು ನಾವು ಇದುವರೆಗೆ ಚರ್ಚೆ ಮಾಡಿದ್ದೇವೆ.

ಜಿ ಪಿ ರಾಜರತ್ನಂ ಅವರ ನಂತರದಲ್ಲಿ ಏಕಲವ್ಯನ ಕಥೆಯ ಸಾಮಾಜಿಕ ವಿಮರ್ಶೆಯನ್ನು ಕನ್ನಡದಲ್ಲಿ ಬಹಳ ಬಿಗಿಯಾಗಿ ಕಟ್ಟಲಾಗಿದೆ. ಇದಕ್ಕೆ 1970ರ ದಶಕದ ನಂತರ ಕರ್ನಾಟಕದಲ್ಲಿ ಮೇಲೆದ್ದು ಬಂದ ದಲಿತ-ಹಿಂದುಳಿದ ಜಾತಿಗಳ ಅಸ್ಮಿತೆಗಳ ಜಾಗೃತಿಯೂ ಒಂದು ಕಾರಣ. ಕರ್ನಾಟಕದಲ್ಲಿ ನಡೆದ ಈ ಬಗೆಯ ಸಾಮಾಜಿಕ ಚಲನೆಗೂ ಏಕಲವ್ಯನ ಕಥನದ ಸಾಮಾಜಿಕ ಅರ್ಥಗಳ ಪ್ರತ್ಯುತ್ಪಾದನೆಗೂ ಅತ್ಯಂತ ನಿಕಟವಾದ ಸಂಬಂಧವಿದೆ. ಹಾಗೆಯೇ ರಾಷ್ಟ್ರ ಮಟ್ಟದಲ್ಲಿ ವಿ ಪಿ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಜಾರಿಗೊಳಿಸಿದ ಮಂಡಲ್ ಕಮಿಷನ್ ವರದಿಯ ನಂತರದ ರಾಜಕೀಯ ಬೆಳವಣಿಗೆಗಳಿಂದ ಹೊಸದಾಗಿ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷದ ಪಿ ವಿ ನರಸಿಂಹರಾವ್ ಅವರು ಪ್ರಧಾನಿಯಾದ ಕಾಲದಲ್ಲಿ ಕ್ರೀಡಾಳುಗಳಿಗಾಗಿ ಏಕಲವ್ಯ ಪ್ರಶಸ್ತಿಯನ್ನು ಸ್ಥಾಪಿಸಿರುವುದನ್ನು (1992) ಅಂತೆಯೇ 1997-98ರ ಆರ್ಥಿಕ ವರ್ಷದಲ್ಲಿ ಭಾರತ ಸರಕಾರ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ದೇಶದಾದ್ಯಂತ ಸ್ಥಾಪಿಸಿರುವುದನ್ನೂ ನಾವು ಈ ಹಿನ್ನೆಲೆಯಲ್ಲಿ ಗಮನಿಸಬಹುದು.

ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಒಡಮೂಡಿದ ಸಂಸದೀಯ ರಾಜಕಾರಣದ ಪ್ರತಿಧ್ವನಿಗಳೇನೇ ಇದ್ದರೂ ಏಕಲವ್ಯನ ಕಥೆಯ ಅರ್ಥನಿರೂಪಣೆಯನ್ನು ನಮ್ಮ ಸಾಮಾಜಿಕ ಮೀಮಾಂಸೆಯ ಪರಿಪ್ರೇಕ್ಷ್ಯದಲ್ಲಿ ಮಾಡಿದ್ದನ್ನು ಈ ಕಥೆಯ ವ್ಯಾಖ್ಯಾನದ ಮೊದಲ ಮಾದರಿ ಎಂದು ಪರಿಗಣಿಸಬಹುದು.

ಕನ್ನಡದ ವಿದ್ವತ್ ಲೋಕ ಏಕಲವ್ಯ ಪ್ರಕರಣಕ್ಕೆ ಇರುವ ವರ್ಣ ವೈಷಮ್ಯದ ಆಯಾಮವನ್ನು ಅಧಿಕಾರ ಮತ್ತು ಜ್ಞಾನಗಳ ಸಂಬಂಧ-ಸಮೀಕರಣದ ಮೂಲಕವೂ ನೋಡಿದೆ. ಆಧುನಿಕ ಪಶ್ಚಿಮದ ತತ್ತ್ವಜಗತ್ತಿನ ಚಿಂತಕರ ಮಾತುಗಳು ಕನ್ನಡದಲ್ಲಿ ಪುನರ್ಬಳಕೆಯಾದ ತೊಂಬತ್ತರ ದಶಕದಲ್ಲಿ ಈ ನೋಟಕ್ರಮ ಜನಪ್ರಿಯವಾಯಿತು. ಚತುರ್ವರ್ಣಗಳಲ್ಲಿ ಆರಂಭದ ಎರಡು ವರ್ಣಗಳಿಗೆ ಸೇರಿದ ವ್ಯಕ್ತಿಗಳಿಬ್ಬರು (ದ್ರೋಣ < ಬ್ರಾಹ್ಮಣ < ಜ್ಞಾನ ಮತ್ತು ಅರ್ಜುನ < ಕ್ಷತ್ರಿಯ < ಅಧಿಕಾರ) ಅರಣ್ಯವಾಸೀ ಸಮುದಾಯಕ್ಕೆ ಸೇರಿದ ತರುಣನೊಬ್ಬನನ್ನು ಮೇಲ್ಜಾತಿಯ ಕುಲಾಚಾರಗಳಿಗೆ ಸಂಬಂಧಿಸಿದ ಶಾಸ್ತ್ರ-ವ್ಯಾಖ್ಯಾನಗಳ ಮೂಲಕ ಅಂಗವಿಹೀನನನ್ನಾಗಿಸಿ ತಮ್ಮ ವಿಜಯವನ್ನು ಮೆರೆದಿರುವ ಕಥೆಯಾಗಿ ಏಕಲವ್ಯನ ಕಥೆಯನ್ನು ಕಾಣಲಾಯಿತು. ಅಧಿಕಾರ ಮತ್ತು ಜ್ಞಾನಗಳು ಪರಸ್ಪರ ಹಸ್ತಲಾಘವ ಮಾಡಿದ್ದರಿಂದ ಏಕಲವ್ಯನ ಅಂಗವೈಕಲ್ಯ ಸಂಭವಿಸಿತು ಎಂದೂ ಈ ಕಥನದ ಅರ್ಥನಿರೂಪಣೆಯನ್ನು ಮಾಡಲಾಯಿತು. ಇದು ಏಕಲವ್ಯನ ಕಥನದ ಅರ್ಥನಿರೂಪಣೆ ಮಾಡಲಾದ ಎರಡನೆಯ ಮಾದರಿ.

ಈ ಎರಡು ಬಗೆಯ ಪ್ರಭಾವೀ ಓದುಗಳ ನಡುವೆ ಪುರಾಣೋಪನಿಷತ್ ಗಳ ಆಧುನಿಕ ವ್ಯಾಖ್ಯಾನಕಾರರೆಂದೇ ಪ್ರಸಿದ್ಧರಾದ ಲಕ್ಷ್ಮೀಶ ತೋಳ್ಪಾಡಿಯವರು (ಮಹಾಭಾರತ ಅನುಸಂಧಾನದ ಭಾರತ ಯಾತ್ರೆ, 2018, ಅಭಿನವ ಪ್ರಕಾಶನ, ಬೆಂಗಳೂರು), ಮತ್ತು ನಾಟಕಕಾರ-ರಂಗನಿರ್ದೇಶಕ ಕೆ ವಿ ಅಕ್ಷರ (ಅಂತಃಪಠ್ಯ, 2011, ಅಕ್ಷರ ಪ್ರಕಾಶನ, ಹೆಗ್ಗೋಡು) ಅವರು ಕನ್ನಡದಲ್ಲಿ ಹಾಗೂ ಸುಂದರ್ ಸರುಕ್ಕೈ ಎಂಬ ತತ್ತ್ವಶಾಸ್ತ್ರಜ್ಞರು ಇಂಗ್ಲಿಷ್ ನಲ್ಲಿ (Ekalavya And The Possibility Of Learning, 2018, Exploring Agency In The Mahābhārata Ethical And Political Dimensions Of Dharma, Edited By Sibesh Chandra Bhattacharya, Vrinda Dalmiya And Gangeya Mukherji, Routledge, London) ಏಕಲವ್ಯನ ಕಥೆಯನ್ನು ಕಲಿಕೆಯ ತತ್ತ್ವಕ್ಕೆ ಸಂಬಂಧ ಪಟ್ಟ ಕಥೆ ಎಂದು ಓದಿ ಭಿನ್ನವಾದ ಅರ್ಥನಿರೂಪಣೆಯನ್ನು ಮಾಡಿದ್ದಾರೆ.

ಲಕ್ಷ್ಮೀಶ ತೋಳ್ಪಾಡಿಯವರು “ಪ್ರತ್ಯಕ್ಷ ಗುರುವಿನಿಂದಲ್ಲದೆ, ಗುರುವಿನ ಲಾಂಛನದ ಮೂಲಕ ಕಲಿತ ಏಕಲವ್ಯನೇ, ಸಾಕ್ಷಾತ್ ಗುರುಮುಖೇನವಾಗಿಯೇ ಕಲಿತ ಅರ್ಜುನನಿಗಿಂತಲೂ ಉತ್ತಮ ಬಿಲ್ಗಾರನಾದ ಎಂದು ಕಾಣಿಸುವ ಮೂಲಕ ಮಹಾಭಾರತವು ’ಗುರುಬ್ರಹ್ಮ ಗುರುರ್ವಿಷ್ಣು’ ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ತಲೆಕೆಳಗು ಮಾಡಿದೆ” ಎಂದು, “ಜಡ-ಜೀವಂತಗಳನ್ನು ಕುರಿತ ಕಾಣ್ಕೆಗಳನ್ನೇ ಬದಲಿಸಿದ ಕಥೆ ಇದು” ಎಂದೂ ವಿವರಿಸಿದ್ದಾರೆ.

ಕೆ ವಿ ಅಕ್ಷರ ಅವರು “ಏಕಲವ್ಯನ ಕಥೆ ತನ್ನ ಬೇಡತನದ ಅಸ್ತಿತ್ತ್ವದಲ್ಲಿಯೇ ಅಡಗಿದ್ದ ಬಿಲ್ಲುಗಾರಿಕೆಯ ಪರಿಣತಿಯನ್ನು ತನ್ನ ಕೇಂದ್ರೀಕರಣದ ಮೂಲಕ ಆವಿಷ್ಕರಿಸಿಕೊಂಡವನ ಕಥೆ” ಎಂದು,

“ಕಲಿಸುವುದಕ್ಕಿಂತ ಕಲಿಯುವುದೇ ಹೆಚ್ಚು ಮುಖ್ಯವೆಂದೂ ಹಾಗೂ ಗುರುವಿನ ಪರಿಣತಿಗಿಂತ ಶಿಷ್ಯನ ಕೇಂದ್ರೀಕರಣದ ಸಾಮರ್ಥ್ಯವೇ ಮಹತ್ತ್ವದ್ದು” ಎಂದೂ ವಿವರಿಸಿದ್ದಾರೆ.

ಸುಂದರ್ ಸರುಕ್ಕೈ ಅವರು ಏಕಲವ್ಯನ ಕಥೆಯನ್ನು ಬಹಳ ಮುಖ್ಯವಾಗಿ ಕಲಿಕೆಯ ತತ್ತ್ವಕ್ಕೆ ಸಂಬಂಧಿಸಿದ ಕಥೆ ಎಂದು ಪರಿಭಾವಿಸುತ್ತ - “ಏಕಲವ್ಯನ ಅಸ್ತ್ರವಿದ್ಯಾ ಪ್ರಾವೀಣ್ಯತೆ ಆತನನ್ನು ಯೋಗ್ಯ ವಿದ್ಯಾರ್ಥಿಯನ್ನಾಗಿಸಲಿಲ್ಲ. ಆತ ಗುರುದಕ್ಷಿಣೆ ಸಮರ್ಪಿಸಿ ದ್ರೋಣನ ಶಿಷ್ಯ ಎಂಬ ಯೋಗ್ಯತೆ ಗಳಿಸಿಕೊಳ್ಳಬೇಕಾಗಿ ಬಂದುದು ಆತನ ದುರಂತವನ್ನು ತೀವ್ರಗೊಳಿಸುತ್ತದೆ. ದ್ರೋಣ ಇಲ್ಲಿ ಗುರುವಿನಂತೆ ವರ್ತಿಸಲಿಲ್ಲ. ಆದರೆ ಏಕಲವ್ಯ ಓರ್ವ ಆದರ್ಶ ಶಿಷ್ಯನಂತೆ ವರ್ತಿಸಿದ. ಏಕಲವ್ಯನ ಪಾಲಿಗೆ ಈ ಮಣ್ಣಿನ ಬಿಂಬ ಗುರುವಿನ ಪಾತ್ರ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಆದರೆ ದ್ರೋಣನ ಪಾಲಿಗೆ ಆತನದ್ದೇ ಆದ ಈ ಬಿಂಬ ಸ್ವತಃ ಆತನ ಅಸ್ತಿತ್ವವನ್ನೇ ನಿರಾಕರಿಸಿದೆ. ಗುರುವಿನ ಒಟ್ಟು ಅಸ್ತಿತ್ವವನ್ನು ಏಕಲವ್ಯ ಈ ಮಣ್ಣಬಿಂಬದ ಪ್ರತಿಷ್ಠಾಪನೆಯ ಮೂಲಕ ಅಲ್ಲಗಳೆದಿದ್ದಾನೆ. ಭರಿಸಲಾಗದ ಪ್ರಮಾಣದಲ್ಲಿ ಗುರುಸ್ಥಾನವನ್ನು ಬದಿಗೆ ಸರಿಸಿರುವುದಕ್ಕೆ ದ್ರೋಣ ಏಕಲವ್ಯನ ಪ್ರಾವೀಣ್ಯತೆಯ ಕೀಲಿ ಕೈಯಾದ ಹೆಬ್ಬೆರಳನ್ನೇ ಬಲಿ ತಗೊಂಡಿದ್ದಾನೆ.” ಎಂದು ವಿವರಿಸಿದ್ದಾರೆ.

ಇಲ್ಲಿಗೆ ಏಕಲವ್ಯನ ಪ್ರಕರಣದ ಅರ್ಥ ನಿರೂಪಣೆ ಮಾಡಿದ ಮೂರು ಮುಖ್ಯ ಮಾದರಿಗಳನ್ನು ಗಮನಿಸಿದ ಹಾಗಾಯ್ತು.

ನಮ್ಮ ಸಾಮಾಜಿಕ ಚರಿತ್ರೆಯ ಸುಕ್ಕುಗಳನ್ನು ಬಿಡಿಸುವುದರಲ್ಲೇ ಇನ್ನೂ ಮಗ್ನವಾಗಿರುವ ನಾವು ಏಕಲವ್ಯನ ಕಥೆಯನ್ನು ವರ್ಣವೈಷಮ್ಯದ ಪ್ರಕರಣ ಎಂದಷ್ಟೇ ನೋಡುವಾಗ ದ್ರೋಣಾರ್ಜುನರನ್ನು ಬಹಳ ಕ್ರಿಯಾಶೀಲರಾದ ( ಆಕ್ಟಿವ್) ಬೇಟೆಗಾರರೆಂದೂ ಏಕಲವ್ಯನನ್ನು ನಿಸ್ತೇಜ (ಪಾಸ್ಸಿವ್) ಬೇಟೆಯೆಂದೂ ಪರಿಭಾವಿಸಿಕೊಳ್ಳುತ್ತೇವೆ. ಈ ’ಭಕ್ಷ್ಯ’ ಮತ್ತು ’ಭಕ್ಷಕ’ ಎಂಬ ಎರಡು ವರ್ಗೀಕರಣಗಳ ಆಚೆಗೆ ಏಕಲವ್ಯನ ಪ್ರಕರಣವನ್ನು ಪರೀಕ್ಷಿಸಬೇಕಾಗಿದೆ.

ಏಕಲವ್ಯನದ್ದು ಕಲಿಕೆಯ ತತ್ತ್ವಕ್ಕೆ ಸಂಬಂಧಿಸಿದ ಕಥೆ ಎಂದು ನಾವು ಹೇಳುವಾಗ ಏಕಲವ್ಯನ ಕಲಿಕೆಯ ಕ್ರಿಯಾಚರಣೆಯನ್ನು ಮಾತ್ರ ಕೇಂದ್ರ ಭಾಗಕ್ಕೆ ತಂದು, ಕಲಿಕೆ ಅಂದರೇನು ಎನ್ನುವ ಪ್ರಶ್ನೆಯನ್ನು ಎತ್ತಿಕೊಳ್ಳುತ್ತೇವೆ. ಹೀಗೆ ವಿವರಿಸುವಾಗ ಏಕಲವ್ಯನ ಸುತ್ತ ಕವಿದಿರುವ ಪ್ರಭಾವಶಾಲಿಯಾದ ಇತರೆ ಪರಿಣಾಮಕಾರೀ ವಾಙ್ಮಯಗಳನ್ನು ಅಷ್ಟಾಗಿ ಗಮನಿಸುವುದಿಲ್ಲ. ಜೊತೆಗೆ ವಿಶಿಷ್ಟ ಪ್ರಭಾವಳಿ ಹೊಂದಿರುವ ಕಾರಣಿಕ ಪುರುಷನನ್ನಾಗಿ ಏಕಲವ್ಯನನ್ನು ಕಂಡರಿಸುತ್ತ ವ್ಯಕ್ತಿ ವಿಶಿಷ್ಟತೆಯನ್ನು ಗುರುತಿಸುವ ಅರ್ಥನಿರೂಪಣೆಯನ್ನು ನಾವು ಇಲ್ಲಿ ಮಾಡುತ್ತೇವೆ.

ಏಕಲವ್ಯನ ಕಥನದ ಕುರಿತ ಈ ಎಲ್ಲ ಅರ್ಥನಿರೂಪಣೆಗಳನ್ನು ಪರಿಶೀಲಿಸುವುದು ಅಥವ ವಿಮರ್ಶಿಸುವುದು ಈ ಅಂಕಣದ ಉದ್ದೇಶವಲ್ಲ. ಆದರೆ ಏಕಲವ್ಯನ ಪ್ರಕರಣವನ್ನು ಒಂದು ಸ್ವಾಯತ್ತ ಮತ್ತು ಸ್ವತಂತ್ರ ಪ್ರಕರಣ ಎಂದು ನೋಡದೆ ಇದನ್ನು ಮಹಾಭಾರತ ಎಂಬ ಮಹಾಕಾವ್ಯದಲ್ಲಿ ಭೋರ್ಗರೆಯುತ್ತಿರುವ ಕ್ಷಾತ್ರ ರಾಜಕಾರಣದ ಭಾಗವಾಗಿ ನೋಡುವುದು ಮತ್ತು ಆ ಹಿನ್ನೆಲೆಯಲ್ಲಿ ವಿವರಿಸುವುದು ಈ ಬರೆಹದ ಉದ್ದೇಶ ಮತ್ತು ಆಸಕ್ತಿ. ಅದನ್ನು ಮುಂದಿನ ಭಾಗದಲ್ಲಿ ಮಾಡುವುದಕ್ಕೆ ಪ್ರಯತ್ನಿಸೋಣ.

(ಈ ಅಂಕಣವನ್ನು ಬರೆಯುವಾಗ ಕನ್ನಡ ಸಾಹಿತ್ಯದಲ್ಲಿ ಏಕಲವ್ಯನನ್ನು ಕೇಂದ್ರವಾಗಿರಿಸಿಕೊಂಡು ಇದುವರೆಗೆ ರಚಿತವಾದ ಸಾಹಿತ್ಯ ಕೃತಿಗಳ ಮಾಹಿತಿ ಮತ್ತು ವಿವರಗಳನ್ನು ಒದಗಿಸಿದ್ದು ಮಹಾಲಿಂಗಪುರದ ಎಸ್ ವಿ ಪಿ ಪದವಿ ಕಾಲೇಜ್ ನ ಕನ್ನಡ ಅಧ್ಯಾಪಕರಾಗಿರುವ ಡಾ. ಅಶೋಕ ನರೋಡೆಯವರ ಏಕಲವ್ಯನ ಪಾತ್ರ : ಒಂದು ಅಧ್ಯಯನ, 1996, ಎಂಬ ಸಂಶೋಧನ ಪ್ರಬಂಧ. ಹಾಗೆಯೇ Exploring Agency In The Mahābhārata - Ethical And Political Dimensions Of Dharma ಪುಸ್ತಕವನ್ನು ಒದಗಿಸಿದ್ದು ಫುಣೆಯ FLAME UNIVERSITYಯಲ್ಲಿ PHILOSOPHY AND CRITICAL THINKING ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಗೆಳೆಯ ಡಾ. ವರುಣ ಭಟ್ಟ. ಇವರಿಬ್ಬರಿಗೂ ಕೃತಜ್ಞತೆಗಳು. )

ಈ ಅಂಕಣದ ಹಿಂದಿನ ಬರೆಹ

‘ಇಂದಿರಾಬಾಯಿ’ ಯ ರಾಜಕೀಯ ಓದು

 

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...