ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

Date: 27-04-2024

Location: ಬೆಂಗಳೂರು


"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸುವ ಪ್ರಯತ್ನವೂ ಕನ್ನಡ ನುಡಿವಲಯದಲ್ಲಿ ನಡೆಯುತ್ತಲೇ ಬಂದಿದೆ. ಸರಿಯಾದ ರೂಪವನ್ನು ಗುರುತಿಸುವ ಪ್ರಯತ್ನಗಳು ನಿಘಂಟು ರಚನೆಯ ಕಾಲದಿಂದಲೂ ಆರಂಭವಾಗಿವೆ," ಎನ್ನುತ್ತಾರೆ ಶ್ರೀಧರ ಹೆಗಡೆ ಭದ್ರನ್. ಅವರು ತಮ್ಮ ‘ಸಮಕಾಲೀನ ಪುಸ್ತಕ ಲೋಕ’ ಅಂಕಣದಲ್ಲಿ ‘ಸರಿಗನ್ನಡಂ ಗೆಲ್ಗೆ’ ಕುರಿತು ಬರೆದಿದ್ದಾರೆ.

ಯಾವುದೇ ಮಾತೃ ಭಾಷೆಯ ಬಳಕೆದಾರರಿಗೆ ಆ ಭಾಷೆಯ ನುಡಿ ರಚನೆ ಮತ್ತು ಬಳಕೆಯ ಬಗೆಗಿನ ತಿಳುವಳಿಕೆ ಜನ್ಮಜಾತವಾಗಿ ಬಂದಿರುತ್ತದೆ. ಆದರೂ ಕೆಲವು ಬಾರಿ ಸಾಮಾಜಿಕ ಕಾರಣಗಳಿಂದ ಅವರ ತಿಳುವಳಿಕೆ ಮತ್ತು ಬಳಕೆಯಲ್ಲಿರುವ ರೂಪಗಳ ಮಧ್ಯೆ ಕಂದಕ ಉಂಟಾಗುತ್ತದೆ. ಆಗ ಸಹಜವಾದ ಗೊಂದಲ ಆರಂಭವಾಗುತ್ತದೆ. ಅದು; ಬಳಸುತ್ತಿರುವ ರೂಪದ ಮೂಲ ಸ್ವರೂಪದ ಕುರಿತ ಗೊಂದಲ. ಶಿಕ್ಷಣ ಕ್ರಮ ಈ ಗೊಂದಲವನ್ನು ನಿವಾರಿಸುವುದಿಲ್ಲವೇ? ಎಂಬ ಪ್ರಶ್ನೆಯೂ ಸದಾಕಾಲ ಚಾಲ್ತಿಯಲ್ಲಿದೆ. ನುಡಿಯ ಬಳಕೆಯ ಸಂದರ್ಭದಲ್ಲಿ ಯಾವುದು ಶುದ್ಧ ಯಾವುದು ಅಶುದ್ಧ ಅಥವಾ ಯಾವುದು ಸರಿ ಯಾವುದು ತಪುö್ಪ ಎಂಬುದನ್ನು ಕುರಿತ ಗೊಂದಲ ಯಾವಾಗಲೂ ಇರುತ್ತದೆ. ಅದರಲ್ಲೂ ಕನ್ನಡದಂತಹ ಹಲವು ಉಪಭಾಷೆ, ಒಳಭಾಷೆಗಳನ್ನು ಹೊಂದಿರುವ ಹಾಗೂ ವ್ಯಾಪಕ ಬಳಕೆಯುಳ್ಳ ಭಾಷೆಯಲ್ಲಿ ಈ ಬಗೆಯ ಗೊಂದಲ ಇನ್ನೂ ಹೆಚ್ಚಾಗಿರುತ್ತದೆ.

ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸುವ ಪ್ರಯತ್ನವೂ ಕನ್ನಡ ನುಡಿವಲಯದಲ್ಲಿ ನಡೆಯುತ್ತಲೇ ಬಂದಿದೆ. ಸರಿಯಾದ ರೂಪವನ್ನು ಗುರುತಿಸುವ ಪ್ರಯತ್ನಗಳು ನಿಘಂಟು ರಚನೆಯ ಕಾಲದಿಂದಲೂ ಆರಂಭವಾಗಿವೆ. ಮುಂದೆ ಬರಬರುತ್ತಾ ನುಡಿಯ ರಚನೆಯ ಹಾಗೂ ಬಳಕೆಯ ಕಟ್ಟುಗಳನ್ನು ಚರ್ಚಿಸುವುದು, ತಪ್ಪುಗಳನ್ನು ತಿದ್ದುವುದು ಹಾಗೂ ತಪ್ಪು ಭಾಷಾ ಬಳಕೆಗಳು ಯಾಕೆ ಉಂಟಾಗುತ್ತವೆ ಎಂಬುದನ್ನು ಗುರುತಿಸುವುದು ಹೀಗೆ ಈ ಮೂರೂ ವಲಯಗಳಲ್ಲಿ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಈ ಪರಂಪರೆಗೆ ಹೊಸ ಸೇರ್ಪಡೆ- ರಘು ಅಪಾರ ಅವರ ‘ಸರಿಗನ್ನಡಂ ಗೆಲ್ಗೆ’ ಎಂಬ ಆಕರ್ಷಕ ಕೃತಿ.

ಕನ್ನಡ ಪುಸ್ತಕ ಪ್ರಕಟಣೆ ಹಾಗೂ ಸಾಹಿತ್ಯ ರಚನೆಯ ಸಂದರ್ಭದಲ್ಲಿ ಅನೇಕ ಹೊಸ ಮಜಲುಗಳನ್ನು ತೆರೆದಿರುವ ಲೇಖಕ ವಸುಧೇಂದ್ರ ಅವರ ಛಂದ ಪುಸ್ತಕದ ಪ್ರಕಟಣೆಯಾಗಿ ‘ಸಿರಿಗನ್ನಡಂ ಗೆಲ್ಗೆ’ ಪುಸ್ತಕ ಹೊರಂಬಂದಿದೆ. ತುಂಬಾ ದಿನಗಳಿಂದ ನಿರೀಕ್ಷಿಸುತ್ತಿದ್ದ ಹಲವು ತೊಡಕುಗಳನ್ನು ದಾಟಿಕೊಂಡು ಪುಸ್ತಕ ರೂಪದಲ್ಲಿ ಕೈಸೇರಿ ಮುದನೀಡಿದೆ. ಕಥೆ-ಕಾದಂಬರಿ-ಅನುವಾದಗಳ ಪ್ರಕಟಣೆಯ ಮೂಲಕ ಕನ್ನಡ ಪುಸ್ತಕ ಪ್ರಪಂಚಕ್ಕೆ ಅಮೂಲ್ಯ ಕಾಣ್ಕೆ ನೀಡಿರುವ ವಸುಧೇಂದ್ರ ಅವರ ಛಂದ ಪುಸ್ತಕ ಈ ‘ಸರಿಗನ್ನಡಂ ಗೆಲ್ಗೆ’ ಪುಸ್ತಕವನ್ನು ಚೆಂದವಾಗಿ ಹೊರತಂದಿದೆ. ಮತ್ತು ಆ ಮೂಲಕ ಕನ್ನಡ ನುಡಿಗೆ ಒಂದು ಜವಾಬ್ದಾರಿಯುತ ಕೊಡುಗೆಯನ್ನೂ ನೀಡಿದಂತಾಗಿದೆ. ಈ ಮೂಲಕ ಲೇಖಕ-ಪ್ರಕಾಶಕರಿಬ್ಬರೂ ಕನ್ನಡಿಗರ ಕೃತಜ್ಞತೆಗೆ ಭಾಜನರಾಗಿದ್ದಾರೆ.

ಈ ಸರಿ-ತಪ್ಪುಗಳ ನುಡಿ ಬಳಕೆಯ ಆರು ನೂರು ಟಿಪ್ಪಣಿಗಳು ಮೊದಲು ಪ್ರಕಟವಾದುದು ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಯಾಗಿದ್ದ ‘ಕನ್ನಡತಿ’ಯ ಮೂಲಕ. ಧಾರಾವಾಹಿಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದ ‘ಭುವನೇಶ್ವರಿ’ಯಿಂದಲೇ ಪ್ರತಿ ಕಂತಿನ ಕೊನೆಯಲ್ಲಿ ಈ ಸರಿ-ತಪ್ಪುಗಳ ಒಂದು ನಿಮಿಷದ ಪಾಠ ಇರುತ್ತಿತ್ತು. ಅಲ್ಪಪ್ರಾಣ, ಮಹಾಪ್ರಾಣ, ಕೊಂಬು ಎಲ್ಲಿ ಬರುತ್ತದೆ, ಬಾಲ ಎಲ್ಲಿ ಬರುವುದಿಲ್ಲ ಈ ಮುಂತಾದ ವಿಚಾರಗಳು

ಪ್ರೇಕ್ಷಕರಿಗೆ ಬೇಸರ ತರಿಸಲಿಲ್ಲ. “ತಪ್ಪಾಗೋದು ದೊಡ್ಡ ವಿಷಯ ಅಲ್ಲ ಸರಿ ಮಾಡಿಕೊಳ್ಳುವುದು ಸಣ್ಣ ವಿಷಯವಲ್ಲ” ಎಂಬ ಘೋಷ ವಾಕ್ಯದೊಂದಿಗೆ ಕೊನೆಗೊಳ್ಳುತ್ತಿದ್ದ ಕನ್ನಡ ಪಾಠಗಳು ಏಳು ನೂರು ಕಂತುಗಳಷ್ಟು ಕಾಲ ಪ್ರಸಾರವಾದವು ಎನ್ನುವುದು ಅವುಗಳ ಜನಪ್ರಿಯತೆಗೆ ಸಾಕ್ಷಿ.

ಹೀಗೆ ಮಾತು ಮತ್ತು ಬರಹಗಳ ಮಧ್ಯೆ ಅನಾದಿ ಕಾಲದಿಂದಲೂ ಇರುವ ಸಂಘರ್ಷವನ್ನು ಗುರುತಿಸುವ ಹಾಗೂ ಪರಿಹರಿಸುವ ಪ್ರಯತ್ನಗಳು ಉದ್ದಕ್ಕೂ ನಡೆದು ಬಂದಿವೆ. ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಅವರ ವೈಯಕ್ತಿಕ ಪ್ರಯತ್ನದ ಫಲವಾದ ಕನ್ನಡ ಇಂಗ್ಲಿಷ್ ನಿಘಂಟಿನಿಂದ ಆರಂಭವಾಗಿ ಹಲವು ನಿಘಂಟುಗಳು ಶುದ್ಧ ಪದಬಳಕೆಯ ಅರಿವು ಮೂಡಿಸಲು ಶ್ರಮಿಸಿವೆ. ಅದರಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಎಂಟು ಸಂಪುಟಗಳ ಬೃಹತ್ ನಿಘಂಟು ಶ್ರೇಣಿ ಪ್ರಯೋಗ ಸಹಿತವಾದ ಪದಬಳಕೆಯ ಸ್ವರೂಪವನ್ನು ಒಳಗೊಂಡಿದೆ.

ಎರಡನೆಯ ಹಂತದಲ್ಲಿ ಸಾಮಾಜಿಕ ನಿಘಂಟುಗಳ ಮಾದರಿಯನ್ನು ಗಮನಿಸುತ್ತೇವೆ. ಇಪ್ಪತ್ತನೆಯ ಶತಮಾನದಲ್ಲಿ ಭಾಷಾ ಬಳಕೆಯ ಕುರಿತು ಬಂದ ಎಚ್ಚರ ಹಾಗೂ ಬರಹ ಮತ್ತು ಮಾತಿನ ನಡುವೆ ಉಂಟಾದ ಬಿರುಕಿನ ಕುರಿತ ಚರ್ಚೆ ನುಡಿಬಳಕೆಯ ಹಲವು ನೆಲೆಗಳ ಕುರಿತು ಜಾಗ್ರತಿಯನ್ನುಂಟು ಮಾಡಿತು. ಅದರ ಪರಿಣಾಮವಾಗಿ ಕಸ್ತೂರಿ ಡೈಜೆಸ್ಟ್ನಲ್ಲಿ ಪಾ. ವೆಂ. ಆಚಾರ್ಯರು ಬರೆಯುತ್ತಿದ್ದ ‘ಪದಾರ್ಥ ಚಿಂತಾಮಣಿ’ ಅತ್ಯಂತ ಅಪರೂಪದ ಮಾದರಿ ಎನಿಸಿತು. ಅವರದೇ ಆದ ‘ಶಬ್ದಾಶಬ್ದ ವಿವೇಕ’ ಪುಸ್ತಕ ಇನ್ನೊಂದು ಹೆಜ್ಜೆ ಮುಂದಕ್ಕೆ ಕರೆದೊಯ್ದಿತು. ಸಾಮಾಜಿಕ ನಿಘಂಟು ಪರಿಕಲ್ಪನೆಗೆ ಹೊಸ ರುಪಕೊಟ್ಟವರು ನಿಘಂಟು ಬ್ರಹ್ಮ ಎಂದೇ ಹೆಸರಾದ ಪ್ರೊ. ಜಿ.ವೆಂಕಟಸುಬ್ಬಯ್ಯನವರು. ಅವರು ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಇಗೋ ಕನ್ನಡ’, ಸಾಮಾಜಿಕ ನಿಘಂಟು ಎಂಬ ಉಪಶೀರ್ಷಿಕೆಯಲ್ಲಿಯೇ ಸಂಪುಟಗಳ ರೂಪದಲ್ಲಿ ಪ್ರಕಟವಾಯಿತು. ಇದೇ ಮಾದರಿಯನ್ನು ಅನುಸರಿಸಿದ ಡಾ. ಕೆ. ವಿ. ನಾರಾಯಣ ಅವರ ಅಂಕಣದ ಬರಹಗಳೂ ಪುಸ್ತಕ ರೂಪದಲ್ಲಿ ಪ್ರಕಟವಾಗಿ ಗಮನ ಸೆಳೆದವು. ಡಾ. ಪಿ ವಿ. ನಾರಾಯಣ ಅವರ ‘ಪದ ಚರಿತೆ’, ಎಸ್. ರಾಮಪ್ರಸಾದ್ ಅವರ ‘ಸರಿಗನ್ನಡ’ ಇಂತಹ ಇನ್ನೆರಡು ಪ್ರಯತ್ನಗಳು.

ಮೂರನೆಯ ಹಂತದಲ್ಲಿ ಸಮೂಹ ಮಾಧ್ಯಮಗಳ ಪ್ರವೇಶದ ಮೂಲಕ ನುಡಿ ಬಳಕೆಯನ್ನು ಸರಿಪಡಿಸುವ ಪ್ರಯತ್ನದ ವಿಸ್ತರಣೆ ನಡೆದುದನ್ನು ಕಾಣುತ್ತೇವೆ. ಅಮೆರಿಕಾದಲ್ಲಿ ಇರುವ ಕನ್ನಡ ಅಂಕಣಕಾರ ಶ್ರೀವತ್ಸ ಜೋಶಿಯವರು ತಮ್ಮ ಫೇಸ್‌ಬುಕ್ ಪುಟದಲ್ಲಿ ನಿಯಮಿತವಾಗಿ ಬರೆಯುತ್ತಾ ಬಂದ ‘ಸ್ವಚ್ಛ ಭಾಷೆ ಅಭಿಯಾನ’ ತುಂಬಾ ಮಹತ್ವದ ಉಪಕ್ರಮ. ಸೀಮಿತ ವಲಯವನ್ನು ತಲುಪಿತು ಎಂಬ ಕೊರಗಿನ ಮಧ್ಯೆಯೂ ಆಸಕ್ತರು ಹುಡುಕಾಡಿ ಓದುವ ಕುತೂಹಲವನ್ನು ಈ ಸರಣಿ ಉಂಟುಮಾಡಿತ್ತು. ಜೊತೆಗೆ ಫೇಸ್‌ಬುಕ್ ನಲ್ಲೇ ಜಾಗ್ರತವಾಗಿರುವ ‘ವಾಗರ್ಥ’ ಗುಂಪು ಹಲವು ಪದಬಳಕೆಯ ರೂಪ ಸ್ವರೂಪದ ಕುರಿತಾಗಿ ಚರ್ಚಿಸುತ್ತಿರುತ್ತದೆ. ‘ಪದ ಸಂಪದ’ ಶೀರ್ಷಿಕೆಯಲ್ಲಿ ಕವಿ ಡಾ. ಗೋವಿಂದ ಹೆಗಡೆಯವರು ವಾಟ್ಸ್ಯಾಪ್ ಮೂಲಕ ಬಿತ್ತರಿಸುವ ಅನಿಯಮಿತ ಅಂಕಣದಲ್ಲಿ ನುಡಿಬಳಕೆಯ ಹಲವು ತಪ್ಪು-ಒಪ್ಪುಗಳ ನಿರೂಪಣೆಯಿರುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮದ ಮೂಲಕ ನಡೆದ ದೊಡ್ಡ ಪ್ರಯತ್ನವೆಂದರೆ; ಮೈಸೂರು ಆಕಾಶವಾಣಿ ಕೇಂದ್ರ ಸುಮಾರ ಎರಡು ವರ್ಷಗಳ ಕಾಲ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರ ಮಾಡಿದ ‘ಪದ ಸಂಸ್ಕೃತಿ’ ಶೀರ್ಷಿಕೆಯ ಕಾರ್ಯಕ್ರಮ. ಮೂರು ಹಂತಗಳಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮದ ಐವತ್ತಕ್ಕೂ ಹೆಚ್ಚು ಕಂತುಗಳಲ್ಲಿ ನಾನು ಪಾಲ್ಗೊಂಡಿದ್ದೇನೆ. ಮೊದಲ ಹಂತದಲ್ಲಿ ಪದ ಪರಿಚಯ-ನಮ್ಮ ನಡುವೆ ಬಳಕೆ ಕಳಕೊಂಡಿರುವ ಅಥವಾ ಕ್ಲಿಷ್ಟವೆನಿಸುವ ಎರಡು ಪದಗಳನ್ನು ಪರಿಚಯಿಸುವುದರೊಂದಿಗೆ ಅವುಗಳ ಪ್ರಯೋಗದತ್ತಲೂ ಕೇಳುಗರ ಗಮನ ಸೆಳೆಯುವುದು. ಎರಡನೆಯ ಹಂತ-ತಪ್ಪು/ಒಪ್ಪು. ಇದರಲ್ಲಿ ತಪ್ಪಾಗಿ ಬಳಸುತ್ತಿರುವ ಪದಗಳ ಸರಿಯಾದ ರೂಪವನ್ನು ನಿರೂಪಿಸುವುದು. ಮೂರನೆಯ ಹಂತದಲ್ಲಿ ಕನ್ನಡದ ಒಂದು ಗೀತೆಯನ್ನು ಪ್ರಸಾರ ಮಾಡಿ ಅದರ ಭಾಷಾ ವೈಶಿಷ್ಟ್ಯಗಳನ್ನು ಚರ್ಚಿಸುವುದು. ಹೀಗೆ ನಾಡಿನ ಬೇರೆ ಬೇರೆ ಭಾಗದ ಹಲವು ಬಾಷಾ ತಜ್ಞರು ಹಾಗೂ ಆಸಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಪ್ರಸಾರವಾದ ‘ಪದ ಸಂಸ್ಕೃತಿ’ ತನ್ನ ಹೊಸತನದ ಮೂಲಕ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿ ಹೆಸರಾಯಿತು. ಅದರ ಸಮಗ್ರ ಟಿಪ್ಪಣಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಉದ್ದೇಶವನ್ನು ಮೈಸೂರು ಆಕಾಶವಾಣಿ ವ್ಯಕ್ತಪಡಿಸಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಂತೆ ಕಾಣುವುದಿಲ್ಲ.

ಹೀಗೆ ಹಲವು ನೆಲೆಗಳಲ್ಲಿ ‘ಸರಿಗನ್ನಡ’ವನ್ನು ಕಟ್ಟುವ ಪ್ರಯತ್ನಗಳು ನಿರಂತರವಾಗಿ ನಡೆದು ಬಂದಿವೆ. ಈ ಕಾಲದ ಅತ್ಯಂತ ಜನಪ್ರಿಯ ಮಾಧ್ಯಮವಾದ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಮೂಲಕ ಅತ್ಯಂತ ವ್ಯಾಪಕ ಪ್ರಸಾರ ಸಾಧ್ಯತೆಯನ್ನು ‘ಸರಿಗನ್ನಡಂ ಗೆಲ್ಗೆ’ ಶಿರ್ಷಿಕೆ ಪಡೆದುಕೊಂಡಿತ್ತು. ಇದೀಗ ಪುಸ್ತಕ ರೂಪದಲ್ಲಿ ಪ್ರಕಟವಾಗಿ ಆಸಕ್ತರ ಕೈಸೇರಿ ಮೆಚ್ಚುಗೆ ಗಳಿಸಿದೆ. ಈ ಹಿಂದಿನ ಎಲ್ಲ ಪ್ರಯತ್ನಗಳಿಗಿಂತ ಇದು ಭಿನ್ನವಾಗಿರುವುದು ಅದರ ರಚನಾ ಕ್ರಮದಲ್ಲಿ. ಪದಪ್ರಯೋಗದಲ್ಲಾಗುವ ಸರಿ-ತಪ್ಪುಗಳ ವಿವರ ಮಾತ್ರವಲ್ಲದೇ ಪದಗಳ ಉಗಮ ವಿಕಾಸ, ಹೊಸ ರೂಪಧಾರಣೆಯ ಕುರಿತಾದ ಚರಿತ್ರೆ ಹಾಗೂ ಶಬ್ದಪ್ರಯೋಗದ ಸ್ವರೂಪ ಹೀಗೆ ಭಿನ್ನ ನೆಲೆಗಳಿಂದ ನುಡಿ ಚಿಂತನೆಯನ್ನು ನಿರ್ಮಿಸುವ ಕೆಲಸವನ್ನು ಪುಸ್ತಕ ಮಾಡಿದೆ. ಅದರಲ್ಲಿಯೂ ನಿರೂಪಣೆಯ ಲವಲವಿಕೆಯಿಂದಾಗಿ ಹೆಚ್ಚು ಪ್ರಿಯವಾಗುತ್ತದೆ. ಲೇಖಕ ರಘು ಅಪಾರ ಅವರಿಗೆ ಗಂಭೀರವಾದುದನ್ನೂ ನವಿರಾಗಿ ಹೇಳುವ ಶಕ್ತಿಯಿದೆ. ಇದರಿಂದಾಗಿಯೇ ಗಾಂಭೀರ್ಯದಿಂದ ಹುಬ್ಬು ಗಂಟಿಕ್ಕಿ ಓದಬೇಕಾದ ಭಾಷಾ ಚಿಂತನೆಯ ಪುಸ್ತಕವಾದರೂ ‘ಹಗುರ’ವಾಗಿದೆ.

ಹುಲಿ, ಸಿಂಹಗಳ ಗರ್ಜನೆಯ ಶಬ್ದಕ್ಕೆ ಹೆದರಿಯೋ ಏನೊ ಕೆಲವರು ಅದನ್ನು ಘರ್ಜನೆ ಎನ್ನುತ್ತಾರೆ. ಪ್ರಾಣಿಗಳ ಕೂಗಿನಲ್ಲಿ ಮಹಾಪ್ರಾಣ ಬರುವುದು ಆನೆಯ ‘ಘೀ’ಳಿಡುವಿಕೆಗೆ ಮಾತ್ರ. ಅದು ಅದರ ಗಾತ್ರದಿಂದಿರಬಹುದು ಎಂದು ಆರಂಭವಾಗುವ ಪುಸ್ತಕದ ಆರು ನೂರು ಟಿಪ್ಪಣಿಗಳು ಹಲವು ಸ್ವಾರಸ್ಯಕರ ವಿಚಾರಗಳನ್ನು ಹೊರಹಾಕುತ್ತವೆ. ಪುಂಖಾನುಪುಂಖ ಎಂಬ ಪದವನ್ನು ಪುಂಖಾನುಪುಂಕವಾಗಿ ಬಳಸುವವರಿಗೂ ಈ ಪುಂಖ ಎಂದರೇನೆಂದು ತಿಳಿದಿರುವುದಿಲ್ಲ. ಅದರ ಅರ್ಥ ‘ಬಾಣ’ ಎಂದಾಗ ಒಹೋ ಬಾಣದ ಹಿಂದೆ ಬಾಣ ಬಿಟ್ಟಂತೆ ಎಂಬ ಅರ್ಥ ಹೊಳೆದು ಸಂತಸವಾಗುತ್ತದೆ. ಆಜಾನುಬಾಹು ಪದವನ್ನು ಎಷ್ಟೋ ಜನ ಅಜಾನುಬಾಹು ಎನ್ನುತ್ತಾರೆ. ಇದು ತಪ್ಪು. ಯಾಕೆಂದರೆ; ಜಾನುವಿನವರೆಗೆ ಅಂದರೆ ಮೊಣಕಾಲಿನವರೆಗೆ ಬಾಹು ಉಳ್ಳವನು ಆಜಾನುಬಾಹು ಬಹುವ್ರೀಹಿ ಸಮಾಸವಾಗುತ್ತದೆ. ಆಬಾಲವೃದ್ಧರನ್ನು ಅಬಾಲವೃದ್ಧರು ಎನ್ನುವುದು, ಆಭಾಸವನ್ನು ಅಭಾಸ ಎನ್ನುವುದು, ಆಭಾರಿಗೆ ಆಭಾರಿ ಎನ್ನುವುದು ಇವೆಲ್ಲವೂ ಇಂತಹ ಸಣ್ಣ ತಪ್ಪುಗಳೇ ಆಗಿವೆ.

‘ಕಬಂಧಬಾಹು’ ಎಂದು ಬಳಸುವ ಪದದಲ್ಲಿ ಈ ಕಬಂಧ ಯಾರು? ಮೋಸ ಮಾಡು ಎನ್ನುವುದಕ್ಕೆ ಬಳಸುವ ನುಡಿಗಟ್ಟು-ಚಳ್ಳೆಹಣ್ಣು ತಿನ್ನಿಸು. ಈ ಚಳ್ಳೆಹಣ್ಣು ಎಂದರೇನು? ಓತಪ್ರೋತ ಪದ ಸಿಕ್ಕಾಪಟ್ಟೆ ಎಂಬ ಅರ್ಥ ಕೊಡುತ್ತದಾದರೂ ಈ ಓತ -ಪ್ರೋತ ಪದಗಳ ಅರ್ಥವೇನು? ಬಿರುದಿನ ಜೊತೆಗೆ ಬಾವುಲಿ ಯಾಕಿದೆ? ಬೆಪ್ಪು ತಕ್ಕಡಿಯಲ್ಲಿ ಬೆಪ್ಪು ಅರ್ಥವಾಯಿತು ಆದರೆ ತಕ್ಕಡಿ ಯಾಕೆ ಇಲ್ಲಿ ಸೇರಿದೆ? ಮಳೆಗಾಲದಲ್ಲಿ ಬರುವ ಸಿಡಿಲಿಗೆ ‘ಬರ’ ಯಾಕೆ ಸೇರಿಕೊಂಡಿದೆ? ಸಿಹಿ ತಿಂಡಿ ಜಹಾಂಗೀರ್ ಜೊತೆಗೆ ರಾಜ ಜಹಾಂಗೀರ್ ಸಂಬಂಧ ಏನಾದರೂ ಇದೆಯೆ? ಮೂದೇವಿ ಎಂಬ ಬೈಯ್ಗುಳದಲ್ಲಿ ಈ ಮೂದೇವಿ ಯಾರು? ರಕ್ತ ಪಿಪಾಸು, ಕಾಮ ಪಿಪಾಸು ಎಂದೆಲ್ಲಾ ಬಳಸುವಲ್ಲಿ ಈ ಪಿಪಾಸು ಎಂದರೇನು? ಅಡಗೂಲಜ್ಜಿ ಪದದ ಈ ಅಜ್ಜಿ ಯಾರು? ದಮ್ಮಯ್ಯ, ದಕ್ಕಯ್ಯ, ಚಾಚೂ, ಸುತಾರಾಂ ಇದೆಲ್ಲ ಏನು? ಇಂತಹ ನೂರಲ್ಲ ಸಾವಿರಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಯಾವ ಪುಟ ತೆರೆದರೂ ಹಲವು ಸ್ವಾರಸ್ಯಕರ ಸಂಗತಿಗಳು ಬಿಚ್ಚಿಕೊಳ್ಳುತ್ತವೆ.

ಮತ್ತೆ ಮತ್ತೆ ಮಾತು-ಬರಹದಲ್ಲಿ ಮಾಡುವ ಕಾಗುಣಿತದ ತಪ್ಪುಗಳನ್ನು, ಪದಗಳನ್ನು ಒಡೆದು ನೋಡಿದಾಗ ಹೊರಡುವ ಸತ್ಯಗಳನ್ನು, ಹಲವು ಪದಗಳ ಮೂಲ ನೆಲೆಯನ್ನು ಹೀಗೆ ಪದಗಳ ಪ್ರಪಂಚದ ಹಲವು ವಿಶಿಷ್ಟ ಸಂಗತಿಗಳನ್ನು ‘ಸರಿಗನ್ನಡಂ ಗೆಲ್ಗೆ’ ಪುಸ್ತಕ ತೆರೆದಿಟ್ಟಿದೆ. ಆಧುನಿಕ ಭಾಷಾವಿಜ್ಞಾನಿಗಳ ಪ್ರಕಾರ ಭಾಷೆಯಲ್ಲಿ ಸರಿ ತಪ್ಪು ಎಂಬುದಿಲ್ಲ. ಬಳಕೆಯೇ ಪದಪ್ರಯೋಗದ ರೂಪವನ್ನು ನಿರ್ಧರಿಸುತ್ತದೆ. ಹಾಗಂತ ‘ಯೋಗಾದ್ರೂಢಿರ್ಬಲಿಯಸೀ’ ಎಂದು ಬಿಟ್ಟುಕೊಡುತ್ತಾ ಹೋದರೆ ಭಾಷೆಯ ಶಯ್ಯೆ ಕಳೆದು ಹೋಗುವ ಅಪಾಯ ಇದ್ದೇ ಇದೆ. ಯಾರು ಹೇಗೆ ಬೇಕಾದರೂ ಬಳಸಿದರೆ ಭಾಷೆಗೆ ಇರುವ ಶಕ್ತಿ ಹ್ರಾಸವಾಗುತ್ತದೆ. ಭಾಷೆಯನ್ನು ಕಲಿಯುವಾಗ, ಕಲಿಸುವಾಗ ಖಂಡಿತಾ ನಮ್ಮಲ್ಲಿ ಈ ಎಚ್ಚರ ಇರಬೇಕು. ಅಂತಹ ಎಚ್ಚರವನ್ನು ಜಾಗ್ರತಗೊಳಿಸುವ ಅತ್ಯುತ್ತಮ ಪ್ರಯತ್ನ ಅಪಾರ ಅವರ ಈ ಪುಸ್ತಕ.

ಪ್ರತಿಯೊಂದು ಟಿಪ್ಪಣಿಯೂ ಹಲವು ಸಂಗತಿಗಳನ್ನು ಹೊರಹಾಕುತ್ತದೆ. ಜೊತೆಗೆ ಕೊನೆಯಲ್ಲಿ ನೀಡಿರುವ ಪದಸೂಚಿ ಈ ಬಗೆಯ ಪುಸ್ತಕಗಳ ಅನಿವಾರ್ಯತೆಯೇ ಆಗಿದೆ. ಬೇಕಾದ ಪದಗಳ ಕುರಿತಾದ ಸಂದಿಗ್ಧವನ್ನು, ಸಮಸ್ಯೆಯನ್ನು ನೇರವಾಗಿ ತಲುಪಲು ಸಾಧ್ಯವಾಗುತ್ತದೆ. ಒಮ್ಮೆ ಪುಸ್ತಕದಲ್ಲಿ ಓದಿದ್ದರೂ ತಕ್ಷಣಕ್ಕೆ ‘ಪದಚರಿತೆ’ ನೆನಪಾಗದಿದ್ದಾಗ ಪದಸೂಚಿಯ ಸಹಾಯದಿಂದ ನೇರವಾಗಿ ಆ ಪದವನ್ನು ಮುಟ್ಟಲು ಅವಕಾಶವಾಗುತ್ತದೆ.

ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಇದನ್ನು ‘ನಿತ್ಯಾಭ್ಯಾಸದ ಕೃತಿ’ ಎಂದು ಕರೆದಿದ್ದಾರೆ. ಭಾಷಾ ಶಿಕ್ಷಕನಾಗಿ ನಾನಾದರೂ ಇದನ್ನು ‘ನಿತ್ಯಪಾರಾಯಣದ ಕೃತಿ’ ಎಂದೇ ಕರೆಯಬಯಸುತ್ತೇನೆ. ನಿಜವಾಗಿ ಎಲ್ಲ ಕನ್ನಡ ಭಾಷಿಕರ ಮನೆಯಲ್ಲಿ ಇರಬೇಕಾದ ಪುಸ್ತಕವಿದು. ಅದರಲ್ಲೂ ಓದುವ ಮಕ್ಕಳಿರುವ ಮನೆಗಳಲ್ಲಿಯಂತೂ ಇದರ ಅವಶ್ಯಕತೆ ಅತಿ ಹೆಚ್ಚು. ಶಿಕ್ಷಕರಿಗಂತೂ ಅನಿವಾರ್ಯ. ಇಂತಹ ಹಲವು ಜನೋಪಯೋಗಿ ಪುಸ್ತಕವನ್ನು ರಚಿಸಿದ ಅನ್ನುವುದಕ್ಕಿಂತ ರೂಪಿಸಿಕೊಟ್ಟಿರುವ ರಘು ಅಪಾರ ಅವರಿಗೆ ಕನ್ನಡಿಗರ ಕೃತಜ್ಞತೆ ಸಲ್ಲಬೇಕು. ಸುಂದರವಾಗಿ ಪ್ರಕಟಿಸುವ ಮೂಲಕ ನಮ್ಮ ಕೈಗೆ ಇದನ್ನು ತಲುಪಿಸಿರುವ ವಸುಧೇಂದ್ರ ಅವರಿಗೂ ನಮ್ಮ ಕೃತಜ್ಞತೆಯ ಪಾಲು ಮುಟ್ಟುತ್ತದೆ.

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...