ಬದುಕಿನ ಕತ್ತಲೆಯಲ್ಲಿ ಬೆಳಕಾಗುವ ಪುಸ್ತಕ - ಪ್ರೇರಣಾ


ಬದುಕಿನ ದಾರಿಯಲ್ಲಿ ಸೋಲುಂಡ ಅನೇಕರಿಗೆ ಗೆಲುವಿನ ಮಹಲನ್ನು ತೋರಿಸಿದ ಲೇಖನಗಳು ಅವು. ಯಶಸ್ವೀ ಜೀವನಕ್ಕೆ ಬೇಕಾಗಿರುವ ಹೊಸ ದಾರಿಗಳನ್ನು ಕೊಟ್ಟ ಶ್ರೇಯಸ್ಸು ಪ್ರೇರಣಾ ಅಂಕಣಕ್ಕೆ ಸಲ್ಲುತ್ತದೆ. ಎಲ್ಲಾ ವಯಸ್ಸಿನವರಿಗೆ ಮುದ ನೀಡುವ ಆಸ್ವಾದಿಸುವ ಗುಣ ಹೊಂದಿರುವುದೇ ಪ್ರೇರಣಾ ಅಂಕಣ ಎನ್ನುತ್ತಾರೆ ಯಾದಗಿರಿಯ ನಿರಂಜಪ್ರಭ ಕನ್ನಡ ದಿನಪತ್ರಿಕೆಯ ಸಂಪಾದಕರು ಶಂಕ್ರಪ್ಪ ಅರುಣಿ. ಕೆ.ಎಂ.ವಿಶ್ವನಾಥ ಮರತೂರ ಅವರ ‘ಪ್ರೇರಣಾ’ ಕೃತಿಯಲ್ಲಿ ಅವರು ಬರೆದ ಅನಿಸಿಕೆ, ಶಾಲಿನಿ ರಜನೀಶ ಅವರ ಮುನ್ನುಡಿ ನಿಮ್ಮ ಓದಿಗಾಗಿ..

ಗೆಲುವಿಗೆ ಪ್ರೇರಣೆಯಾಗಲಿ ‘ಪ್ರೇರಣಾ’ ಪುಸ್ತಕ
ಕಲ್ಯಾಣ ಕರ್ನಾಟಕದಿಂದ ಪ್ರಕಟವಾಗುವ ನಿರಂಜನಪ್ರಭ ದಿನ ಪತ್ರಿಕೆ ಹೊಸ ವಿಚಾರಗಳಿಂದ, ನಿತ್ಯವೂ ಹೊಸತನದೊಂದಿಗೆ ಪ್ರಕಟವಾಗುತ್ತಿದೆ. ನಿರಂಜನಪ್ರಭ ಪತ್ರಿಕೆಯಲ್ಲಿ “ಪ್ರೇರಣಾ” ಅಂಕಣ ಪ್ರಾರಂಭವಾಗಿದ್ದು ಒಂದು ವಿಶೇಷ ಸಂದರ್ಭದಲ್ಲಿ, ಕೆ.ಎಂ.ವಿಶ್ವನಾಥ ಮರತೂರ ಅವರ ಅನೇಕ ಪ್ರಕಟವಾಗಿರುವ ಲೇಖನಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಓದುತ್ತಿದ್ದೆ. ಒಮ್ಮೆ ಕರೆಮಾಡಿ ನಿರಂಜಪ್ರಭಕ್ಕೂ ಬರಿಯಿರಿ ಎಂದು ಕೇಳಿದಾಗ ಯಾವ ವಿಷಯದ ಕುರಿತು ಎಂದು ಸುದೀರ್ಘ ಚರ್ಚೆಯಾದಾಗ ಯುವಕರನ್ನು, ಜೀವನದಲ್ಲಿ ಸೋತವರನ್ನು ಹುರಿದುಂಬಿಸುವ ವಿಷಯವನ್ನು ಆಯ್ಕೆ ಮಾಡಿಕೊಂಡು ಅನುಭವದ ನೆಲೆಯಲ್ಲಿ ಬರಿಯಿರಿ ಎಂದು ಸಲಹೆ ನೀಡಿದೆ. ಮುಂದಿನ ವಾರದಿಂದ ಅಂಕಣ ಪ್ರಾರಂಭ ಮಾಡಿಯೇ ತೀರಿದೇವು. ಈ ಅಂಕಣ ಸಲ್ಪ ಸಮಯದಲ್ಲಿಯೇ ಸಾವಿರಾರು ಓದುಗರ ಮನಗೆದ್ದಿತು. ಹೊಸ ಓದುಗರ ಮನಮೆಚ್ಚಿತು. ಇದೀಗ ಪ್ರೇರಣಾ ಅಂಕಣದ ಮುವ್ವತ್ತಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿದ್ದು ಅನೇಕ ಓದುಗರಿಂದ ಮನ್ನಣೆಗಳಿಸಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. 

ಅನೇಕ ಜನ ಯುವಕರು ಪ್ರೇರಣಾ ಲೇಖನದಿಂದ ಪ್ರೇರಿತರಾಗಿ ಪ್ರಭಾವಿತರಾಗಿ, ಓದಿನ ಸಂತಸ ವ್ಯಕ್ತಪಡಿಸಿ ಪತ್ರಿಕೆಗೆ ಮತ್ತು ವಿಶ್ವನಾಥರಿಗೆ ಅಭಿನಂದನೆ ಸಲ್ಲಿಸಿ ಫೋನ್ ಕರೆ ಮೂಲಕ ಮತ್ತು ಸಂದೇಶಗಳನ್ನು ಕಳಿಸಿದ್ದಾರೆ, ಇದು ಅತ್ಯಂತ ತೃಪ್ತಿಕರ ಸಂಗತಿಯಾಗಿದೆ. ನಮ್ಮ ಪತ್ರಿಕೆಯ ಮುಖ್ಯ ಧ್ಯೇಯದಂತೆ ಈ ಭಾಗದ ಉದಯೋನ್ಮುಖ, ಪ್ರತಿಭಾವಂತ ಯುವ ಲೇಖಕರ ಮತ್ತು ಓದುಗರ ಸೃಜಿಸುವ ಕಾರ್ಯದಲ್ಲಿ ಪ್ರೇರಣಾ ಅಂಕಣವು ಹೊಸ ಮೈಲಿಗಲ್ಲು ಆಗಿದೆ. ಈ ಸಂದರ್ಭದಲ್ಲಿ ನಿರಂಜಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಎಲ್ಲಾ ಲೇಖನಗಳು ಪುಸ್ತಕ ರೂಪದಲ್ಲಿ ಓದುಗರ ಕೈಸೇರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕೆ.ಎಂ.ವಿಶ್ವನಾಥ ಮರತೂರ ಅವರ ಬರವಣಿಗೆ ಅದೆಷ್ಟೊಬಾರಿ ನಮಗೂ ಪ್ರೋತ್ಸಾಹ ನೀಡಿದೆ ಎಂದರೆ ತಪ್ಪಾಗಲಾರದು.

ಬದುಕಿನ ದಾರಿಯಲ್ಲಿ ಸೋಲುಂಡ ಅನೇಕರಿಗೆ ಗೆಲುವಿನ ಮಹಲನ್ನು ತೋರಿಸಿದ ಲೇಖನಗಳು ಅವು. ಯಶಸ್ವೀ ಜೀವನಕ್ಕೆ ಬೇಕಾಗಿರುವ ಹೊಸ ದಾರಿಗಳನ್ನು ಕೊಟ್ಟ ಶ್ರೇಯಸ್ಸು ಪ್ರೇರಣಾ ಅಂಕಣಕ್ಕೆ ಸಲ್ಲುತ್ತದೆ. ಎಲ್ಲಾ ವಯಸ್ಸಿನವರಿಗೆ ಮುದ ನೀಡುವ ಆಸ್ವಾದಿಸುವ ಗುಣ ಹೊಂದಿರುವುದೇ ಪ್ರೇರಣಾ ಅಂಕಣ. 

ನಮ್ಮಲ್ಲಿ ಪ್ರಕಟವಾದ ಪ್ರೇರಣಾ ಅಂಕಣವು ಈಗ ಪುಸ್ತಕ ರೂಪ ತಾಳುತ್ತಿರುವುದು ಸಂತಸದ ವಿಚಾರ ಇದಕ್ಕೆ ನಾನು ಹೃದಯಪೂರ್ವಕವಾಗಿ ಆತ್ಮೀಯ ಸೃಜನಶೀಲ ಲೇಖಕ ವಿಶ್ವನಾಥ ಮರತೂರರನ್ನು ಅಭಿನಂದಿಸುವೆ. ನಾಡಿನ ವಿಶೇಷವಾಗಿ ಯುವ ಓದುಗರಿಗೆ ಲೇಖಕರಿಗೆ ಪ್ರೋತ್ಸಾಹಿಸುವ ಪುಸ್ತಕ ಇದಾಗಲಿದೆ. ಈ ಪುಸ್ತಕವನ್ನು ಸ್ನೇಹ ಪ್ರಕಾಶನ ಬೆಂಗಳೂರ ಇವರು ಪ್ರಕಟಿಸುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ನಿಮ್ಮೆಲ್ಲರ ಹೆಮ್ಮೆಯ ನಿರಂಜನಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಪ್ರೇರಣಾ ಅಂಕಣ ಓದುಗರು ಮೆಚ್ಚಿದ್ದಕ್ಕಿಂತ ಹೆಚ್ಚು ಮೆಚ್ಚುಗೆ ಈ ಪುಸ್ತಕಕ್ಕೆ ಮೆಚ್ಚುಗೆ ಸಿಗಲಿ ಎಂದು ಈ ಮೂಲಕ ಹೃದಯಪೂರ್ವಕವಾಗಿ ಹಾರೈಸುವೆ. 

ಶಂಕ್ರಪ್ಪ ಅರುಣಿ, ಸಂಪಾದಕ 
ನಿರಂಜಪ್ರಭ ಕನ್ನಡ ದಿನಪತ್ರಿಕೆ ಯಾದಗಿರಿ

—--

“ಬದುಕಿನ ರಹದಾರಿಗೆ ಹಾಲ್ಚೆಲ್ಲಿದ ಬೆಳದಿಂಗಳು”
“ನಮ್ಮ ಬದುಕೆಂಬ ದೋಣಿಗೆ ನಾವೇ ನಾವಿಕರು” ಎಂಬ ಕ್ರಿಯಾಪ್ರೇರಕ ಟ್ಯಾಗ್‌ಲೈನ್‌ದೊಂದಿಗೆ ಪ್ರಕಟಗೊಳ್ಳುತ್ತಿರುವ ಕಲಬುರಗಿ ನಗರದ ಶ್ರೀ ಕೆ.ಎಂ.ವಿಶ್ವನಾಥ ಮರತೂರ ಅವರ ಕೃತಿ “ಪ್ರೇರಣಾ” ಚಿಂತನಾರ್ಹ ಲೇಖನಗಳ ಗುಚ್ಚ. ಬದುಕಿನ ವಿವಿಧ ಮಗ್ಗಲುಗಳನ್ನು ಕೇಂದ್ರೀಕರಿಸಿ, ಬಹುಪಾಲು ಮಹತ್ವದ ವಿಷಯಗಳನ್ನು ಗುರುತಿಸಿ, ಅವುಗಳಿಗೆ ತಾತ್ವಿಕ ಅಭಿವ್ಯಕ್ತಿಯ ಚೌಕಟ್ಟನ್ನು ಕೊಡಿಸಿದ್ದು “ಪ್ರೇರಣಾ” ಕೃತಿಯ ಅಂತ:ಶಕ್ತಿಯನ್ನು ಹೆಚ್ಚಿಸಿದೆ. 

ನಮ್ಮ ಬದುಕೆಂಬ ದೋಣಿಗೆ, ನಾವೇ ನಾವಿಕರು. ನಮ್ಮೊಳಗಿನ ಒಳಿತಿಗೆ ನಿರೆರೆದು ಪೋಷಿಸೋಣ.  ನಮ್ಮ ಜೀವನದಲ್ಲಿ, ಸಂತೋಷದ ಜ್ಯೋತಿ ಹಚ್ಚಲು ಮರೆಯದಿರೋಣ. ಸೋತವರೆ ಜಗದಲ್ಲಿ, ಇತಿಹಾಸ ಬರೆದವರು. ಏಳು ಸಲ ಬಿದ್ದೆ, ಮತ್ತೆ ಎದ್ದುನಿಂತೆ. ಯಶಸ್ವೀ ಬದುಕಿಗಾಗಿ, ಸರಳ ಸುಂದರ ವ್ಯಕ್ತಿತ್ವದಿಂದ ಕೂಡಿರಲಿ. ಯಶಸ್ವೀ ಜೀವನಕ್ಕೆ, ಆತ್ಮ ವಿಶ್ವಾಸ ಅವಶ್ಯಕ. ಮುಂತಾದ ಲೇಖನಗಳು ಗಮನ ಸೆಳೆಯುತ್ತವೆ. ಪ್ರತಿ ಲೇಖನವು ಓದಿಸಿಕೊಂಡು ಹೋಗುವುದು ಪ್ರೇರಣಾ ಕೃತಿಯ ವೈಶಿಷ್ಟ್ಯತೆ. 

ನಮ್ಮ ಬದುಕಿನ ವಿದ್ಯಮಾನಗಳು ವಿಭಿನ್ನ ಸಂಕೀರ್ಣತೆಯ ದ್ವಂದ್ವಗಳ ಸುಳಿಯಲ್ಲಿ ಸಿಲುಕಿ ನಲುಗುತ್ತವೆ. ಈ ದ್ವಂದ್ವ, ಗೊಂದಲ, ವೈರುಧ್ಯ, ಸಂಕೀರ್ಣತೆಗಳಿಂದ ಹೊರಬರಲು “ಪ್ರೇರಣಾ”ದಂತಹ ಕೃತಿಗಳ ಓದು ಅತೀ ಅವಶ್ಯಕ. ನಿರಂತರ ಹೊಸ ಚಿಂತನೆಯ ಓದು ಮನಸ್ಸಿನ ಒತ್ತಡಗಳನ್ನು ನಿವಾರಿಸಿ ಪ್ರಫುಲ್ಲತೆಯನ್ನು ತುಂಬುತ್ತದೆ. ಜೊತೆಗೆ ಅದು ನಮ್ಮ ಒಳ ಅಂತಸ್ತನ್ನು ಗಟ್ಟಿಗೊಳಿಸುತ್ತದೆ. 

ಬೆಂಗಳೂರು ಮಹಾನಗರದ ಸ್ನೇಹ ಬುಕ್ ಹೌಸ್ ತನ್ನ ಸ್ನೇಹ ಪ್ರಕಾಶನದ ಮೂಲಕ ಪ್ರಕಟಿಸಿರುವ ಪ್ರೇರಣಾ ಕೃತಿ ನಮ್ಮ ಬದುಕಿನ ರಹದಾರಿಗೆ ಹಾಲ್ಚೆಲ್ಲಿದ ಬೆಳದಿಂಗಳು. ಶ್ರೀ ಕೆ.ಎಂ.ವಿಶ್ವನಾಥ ಮರತೂರ ಅವರ ಅಂದದ ವಿಷಯ ನಿರೂಪಣೆ ಬಹಳ ಹೃದ್ಯವಾಗಿದೆ.  ಬರುವ ದಿನಗಳಲ್ಲಿ ಮತ್ತೆ ಮತ್ತೆ ಹೊಸ ಆಲೋಚನೆಗಳ ಕೃತಿಗಳು ಮೂಡಿಬರಲಿ. ಕಾವ್ಯ, ವಿಮರ್ಷೆ, ಕಾದಂಬರಿ, ಸಣ್ಣಕತೆ, ಪ್ರವಾಸ ಕಥನ, ಸಂಶೋಧನೆ, ಮಾಹಾಕಾವ್ಯ, ಮುಂತಾದ ವಿಭಿನ್ನ ಸಾಹಿತ್ಯ ಕ್ಷೇತ್ರಗಳ ಅನಂತ ಕೃತಿಗಳ ಮೂಲಕ ಶ್ರೀಮಂತಗೊಂಡಿರುವ ಕನ್ನಡ ವಾಙ್ಮಯ ಲೋಕ ಮತ್ತಷ್ಟು ಹಿರಿದಾಗಲು ಶ್ರೀ ಕೆ.ಎಂ.ವಿಶ್ವನಾಥ ಮರತೂರ ಅವರೂ ತಮ್ಮ ಹೊಸತು ಕೃತಿಗಳನ್ನು ಸೇರಿಸುವಂತಾಗಲಿ. 

ವಿಶ್ವನಾಥ ಅವರ ಲೇಖನಿಗೆ ಎಲ್ಲ ನೆಲೆಗಳ ಪ್ರೇರಣೆ ಲಭಿಸುವಂತಾಗಲಿ. ಲೇಖಕರ ವಿಚಾರ ಲಹರಿ ಓತಪ್ರೋತವಾಗಿ ಹರಿದು ಬರಲಿ. ಅವರಿಗೆ ಎಲ್ಲರ ಸಹಕಾರ ಮತ್ತು ಎಲ್ಲ ರೀತಿಯ ಯಶಸ್ಸು ಪ್ರಾಪ್ತವಾಗಲಿ. ಸಿಹಿ ಸಂತೋಷದ ಕ್ಷಣಗಳು ವಿಶ್ವನಾಥ ಅವರ ಬದುಕನ್ನು ತುಂಬಿಕೊಳ್ಳುವಂತಾಗಲಿ.

ಮೇಜರ್ ಸಿದ್ದಲಿಂಗಯ್ಯ ಎಸ್. ಹಿರೇಮಠ. – ಕೆ.ಎ.ಎಸ್.
ಅಪರ ಆಯುಕ್ತರು, ಬೆಳಗಾವಿ ವಿಭಾಗ 
ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ. 

—-

ಬದುಕಿನ ಕತ್ತಲೆಯಲ್ಲಿ ಬೆಳಕಾಗುವ ಪುಸ್ತಕ - ಪ್ರೇರಣಾ
ಮನುಷ್ಯ ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗುವುದು ಇದ್ದೆ ಇದೆ ಆದರೆ ಇವರೆಡನ್ನು ಜೀವನದಲ್ಲಿ ಬ್ಯಾಲೆನ್ಸ್ ಮಾಡುವುದಿದೆಯಲ್ಲ ಅದು ಅತ್ಯಂತ ಮಹತ್ವ. ಸೋಲಿನ ಮುಂದೆ, ಗೆಲುವಿದೆ ಎಂದು ಈ ಪ್ರೇರಣಾ ಪುಸ್ತಕ ಹೇಳಿಕೊಡುತ್ತದೆ. 

ಅನೇಕರು ಒಮ್ಮೆ ಜೀವನದಲ್ಲಿ ಯಾವುದೋ ಕಾರಣಕ್ಕೆ ಸೋತಾಗ ಬದುಕಿನ ಕ್ಷಣಗಳನ್ನೆ ಅನುಭವಿಸದೇ ಕುಗ್ಗಿ ಹೋಗುತ್ತಾರೆ ಅಂತಹವರಿಗೆ ಮತ್ತೊಮ್ಮೆ ಬದುಕಿನಕ್ಷಣದ ಅವಕಾಶವನ್ನು ನೀಡುತ್ತದೆ. ಜೀವನದಲ್ಲಿ ಯಶಸ್ಸಿನ ದಾರಿಯನ್ನು ಹುಡುಕುತ್ತಿರುವ, ಈಗಾಗಲೇ ಜೀವನದಲ್ಲಿ ಸೋತಿರುವರಿಗೆ ಸ್ಪೂರ್ತಿ ನೀಡುವುದಷ್ಟೆ ಅಲ್ಲ ಬದಲಿಗೆ ಮಾರ್ಗದರ್ಶಿಯಾಗುತ್ತದೆ. 

ಋಣಾತ್ಮಕ ಅಂಶಗಳೇ ತುಂಬಿರುವ ಇವತ್ತಿನ ಸಂದರ್ಭದಲ್ಲಿ ನಮ್ಮೊಳಗೆ ಧನಾತ್ಮಕ ಅಂಶಗಳನ್ನು ಚಿಗುರೊಡೆಸುವ ಮಹತ್ವದ ಕೆಲಸ ಈ ಪುಸ್ತಕ ಮಾಡುತ್ತದೆ. ಸಾವಿರಾರು ಸೋಲಿನ ಕಥೆಗಳನ್ನು ಕೇಳಿರುವ ನಮಗೆ, ಗೆಲುವಿನ ಕಥೆಗಳ ರುಚಿಯು ತಿಳಿದಿದೆ ಆದರೆ ಸೋಲು ಗೆಲುವಿನ ಮಾರ್ಗದರ್ಶನ ಈ ಪುಸ್ತಕ ಪ್ರತಕ್ಷ ಅನುಭವಗಳ ಮೂಲಕ ಮಾಡಲಿದೆ. ಈ ಬದುಕು ಬರೀ ಕತ್ತಲೆಯಿಂದ ತುಂಬಿದೆ ಎಂದು ನಿರಾಸದಾಯಕವಾಗಿ ಮಾತನಾಡುವವರ ಬದುಕಿನ ಕತ್ತಲೆಯಲ್ಲಿ ಬೆಳಕಾಗುವ ಪುಸ್ತಕ ಪ್ರೇರಣಾ.

ಯುವ ಬರಹಗಾರರಾದ ಕೆ.ಎಂ.ವಿಶ್ವನಾಥ ಮರತೂರ ಅವರ ಈ ಶ್ರಮ ಅತ್ಯಂತ ಪ್ರಶಂಸನೀಯ. ನಾವೆಲ್ಲರೂ ನಮ್ಮ ನಮ್ಮ ಜೀವನ ಅದೆಷ್ಟು ಕಷ್ಟ ಕಾರ್ಪಣ್ಯಗಳಿಂದ ಕೂಡಿದೆ ಎಂದು ಯೋಚಿಸಿ ಕೈಚೆಲ್ಲಿ ಕೂತಿರುವ ಸಂದರ್ಭದಲ್ಲಿ ಹೊಸ ಹೊಸ ಆಲೋಚನೆಗಳ ಮೂಲಕ ಈ ಕೃತಿ ಹೊರತರುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಪುಸ್ತಕ ಜೀವನದ ಸೋಲು ಗೆಲುವಿನ ಮಧ್ಯ ಜೀವನದ ಯುದ್ದಕ್ಕಾಗಿ ಸಿದ್ಧತೆ ಮಾಡುತ್ತಿರುವ ಅನೇಕರಿಗೆ ದಾರಿಯಾಗಲಿ ಎಂದು ಹಾರೈಸುವೆ. 

ಶುಭಾಶಯಗಳೊಂದಿಗೆ, 
ಡಾ. ಶಾಲಿನಿ ರಜನೀಶ – ಐ.ಎ.ಎಸ್.

ಕೆ.ಎಂ.ವಿಶ್ವನಾಥ ಮರತೂರ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಪ್ರೇರಣಾ ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...

MORE FEATURES

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...

ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!

26-04-2024 ಬೆಂಗಳೂರು

‘ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವ...