ಬ್ಯೂಟಿ ಇಸ್‌ ಇನ್‌ ದಿ ಐಸ್‌ ಆಫ್‌ ದಿ ಬಿಹೋಲ್ಡರ್, ಆಂಡ್‌ ದಿ ಲೈಫ್‌ ಇನ್‌ ದಿ ಹಾರ್ಟ್…..


ನಾನು ಪತ್ರಿಕೋದ್ಯಮಕ್ಕೆ ಸೇರಿದ ಆರಂಭದಲ್ಲಿ, ಆಗಿನ ಮುಖ್ಯಮಂತ್ರಿಗಳಾಗಿದ್ದ ಜೆ ಎಚ್‌ ಪಟೇಲರ ಪತ್ರಿಕಾಗೋಷ್ಠಿಗೆ ಹೋಗಿದ್ದೆ. ಆ ಸಮಯದಲ್ಲಿ ಚಂದೋಡಿ ಲೀಲಾ ಅಲ್ಲಿಗೆ ಬಂದು, ನಾಟಕ ಸಂಘಗಳ ಕಷ್ಟಗಳನ್ನು ಹೇಳಿಕೊಂಡರು. ಪಟೇಲರು ಅಧಿಕಾರಿಗಳ ಮುಖ ನೋಡಿದಾಗ, ಅವರು ಕಾನೂನಿನಲ್ಲಿ ಅವಕಾಶವಿಲ್ಲದಿರುವುದರಿಂದ, ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು ಎನ್ನುತ್ತಾರೆ ಮಾಕೋನಹಳ್ಳಿ ವಿನಯ್‌ ಮಾಧವ. ಅವರು ನಾಟಕಗಳನ್ನು ಕಂಡ ಅನುಭವಗಳ ಬಗೆಗೆ ಬರೆದ ಲೇಖನ ನಿಮ್ಮ ಓದಿಗಾಗಿ...

ನಾನು ಕಾಲೇಜಿನಲ್ಲಿದ್ದ ಸಮಯ. ಮೂಡಿಗೆರೆಯಲ್ಲಿ ಶ್ರೀ ಹುಚ್ಚೇಶ್ವರ ನಾಟಕ ಸಂಘದ ನಾಟಕ ಒಂದಕ್ಕೆ ಹೋಗಿದ್ದೆ. ʻಚಂದ್ರಿ ಚಲ್ಲಾಟ, ಶೆಟ್ಟಿ ಹಾರಾಟʼಅಂತ. ನಾಟಕ ಮುಗಿಸಿ ಹೊರಗೆ ಬರುವಾಗ ಯಾರೋ ಹೇಳುತ್ತಿದ್ದದ್ದು ಕಿವಿಗೆ ಬಿತ್ತು. ʻಮೊದಲು, ಈ ನಾಟಕದ ಹೆಸರು ಸೈನಿಕನ ಸಹೋದರಿ ಅಂತ ಇತ್ತು. ಎರಡು ದಿನ ಯಾರೂ ಬರಲಿಲ್ಲ. ಹೆಸರು ಬದಲಾಯಿದ ತಕ್ಷಣ ನೋಡಪ್ಪಾ… ಯಾವಾಗಲೂ ಹೌಸ್‌ ಫುಲ್‌, ʼ ಎಂದು.

ನನಗೆ ನಗು ಬಂತು. ನಕ್ಕೆ. ಎಷ್ಟೋ ವರ್ಷಗಳ ನಂತರ ಆ ಘಟನೆ ನೆನಪಾದಾಗ ಮನಸ್ಸಿಗೆ ಪಿಚ್ಚೆನಿಸಿತು. ಸಾಟೆಲೈಟ್‌ ಟೆಲಿವಿಷನ್‌, ಮೊಬೈಲ್‌ ಫೋನ್‌ ಗಳಿಲ್ಲದ ಕಾಲದಲ್ಲಿ ಸಹ ಒಂದು ನಾಟಕಕ್ಕೆ ಜನಗಳು ಬರಬೇದಾದರೆ ಏನೆಲ್ಲಾ ಗಿಮಿಕ್‌ ಮಾಡಬೇಕಿತ್ತು ಎಂದೆನಿಸಿತು. ನಾಟಕಗಳೇನು ನಮಗೆ ಹೊಸದಲ್ಲ. ಚಿಕ್ಕಂದಿನಿಂದಲೇ, ಮಾ ಹಿರಣ್ಣಯ್ಯನವರ ನಾಟಕಗಳನ್ನು ಟೂ ಇನ್‌ ಒನ್‌ ಟೇಪ್‌ ರೆಕಾರ್ಡರ್‌ ಗಳಲ್ಲಿ ಕೇಳಿಕೊಂಡು, ಶಾಲಾ, ಕಾಲೇಜು, ಹಳ್ಳಿಗಳ ಹಬ್ಬಗಳ ಸಮಯದಲ್ಲಿ ಊರ ನಾಟಕಗಳನ್ನು ನೋಡಿಕೊಂಡು ಬೆಳೆದವರು.

ಆಗಿನ ಮನರಂಜನೆ ಎಂದರೆ, ರೇಡಿಯೋ, ಸಿನೆಮಾ, ನಾಟಕ, ಸರ್ಕಸ್‌, ಹರಿ ಕಥೆ, ಊರ ಜಾತ್ರೆ, ಹಬ್ಬಗಳು ಮಾತ್ರ. ಬರೀ ಸಿನೆಮಾದ ಹೊಡೆತಕ್ಕೆ ನಾಟಕಗಳು ಆಗಲೇ ಸೊರಗಲು ಶುರುವಾಗಿದ್ದವು. ನಾನು ಪತ್ರಿಕೋದ್ಯಮಕ್ಕೆ ಸೇರಿದ ಆರಂಭದಲ್ಲಿ, ಆಗಿನ ಮುಖ್ಯಮಂತ್ರಿಗಳಾಗಿದ್ದ ಜೆ ಎಚ್‌ ಪಟೇಲರ ಪತ್ರಿಕಾಗೋಷ್ಠಿಗೆ ಹೋಗಿದ್ದೆ. ಆ ಸಮಯದಲ್ಲಿ ಚಂದೋಡಿ ಲೀಲಾ ಅಲ್ಲಿಗೆ ಬಂದು, ನಾಟಕ ಸಂಘಗಳ ಕಷ್ಟಗಳನ್ನು ಹೇಳಿಕೊಂಡರು. ಪಟೇಲರು ಅಧಿಕಾರಿಗಳ ಮುಖ ನೋಡಿದಾಗ, ಅವರು ಕಾನೂನಿನಲ್ಲಿ ಅವಕಾಶವಿಲ್ಲದಿರುವುದರಿಂದ, ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಬೇಸರದ ಮುಖ ಮಾಡಿಕೊಂಡ ಪಟೇಲರು, ʻನೋಡಮ್ಮಾ ಲೀಲಾ, ಈ ಸರ್ಕಾರದಿಂದ ಏನೂ ಮಾಡೋಕ್ಕಾಗಲ್ಲ ಅಂತ ಅಧಿಕಾರಿಗಳು ಹೇಳ್ತಾ ಇದ್ದಾರೆ. ಒಂದು ಕೆಲಸ ಮಾಡೋಣ. ನಾನು ಡೋಲು ಹೊಡೆದುಕೊಂಡು ಮುಂದೆ ಹೋಗುತ್ತೇನೆ. ನೀನು ಕುಣಿದುಕೊಂಡು ಹಿಂದೆ ಬಾ. ಜನಗಳೇನಾದರೂ ದೇಣಿಗೆ ಕೊಡ್ತಾರಾ ಅಂತ ನೋಡೋಣ. ಎಲ್ಲಾ ಕಲೆಗಳಿಗೆ ಅದೇ ಕಥೆ ಅಂತ ಕಾಣುತ್ತೆ,ʼ ಎಂದರು.

ಅಷ್ಟು ಹೊತ್ತಿಗಾಗಲೇ ಎಷ್ಟೋ ನಾಟಕ ಸಂಘಗಳು ಕಣ್ಣು ಮುಚ್ಚಿದ್ದವು. ಆದರೂ, ಹವ್ಯಾಸಿ ನಾಟಕ ಸಂಘಗಳು ಮಾತ್ರ, ನಾಟಕಗಳ ಆರ್ಥಿಕತೆಯ ಲಾಭ-ನಷ್ಟಗಳನ್ನು ಗಣನೆಗೆ ತೆಗೆದುಕೊಳ್ಳದೆ, ಆ ಕಲೆಯನ್ನು ಉಳಿಸಿಕೊಂಡು ಹೋಗುತ್ತಿವೆ. ನಾವು ಚಿಕ್ಕಂದಿನಲ್ಲಿದ್ದಾಗ, ದೊಡ್ಡವರು ನಾಟಕದ ಹುಚ್ಚಿರುವವರನ್ನು ಬೈಯುತ್ತಿದ್ದರು. ನಾಟಕದ ಹಿಂದೆ ಹೋದವರು ಮನೆ-ಮಠ ಮಾರಿಕೊಳ್ಳುತ್ತಾರೆ ಎಂದು. ನಾಟಕವನ್ನು ವೃತ್ತಿಯಾಗಿ ತೆಗೆದುಕೊಂಡವರ ಕಷ್ಟ ಅರ್ಥವಾಗಿದ್ದು ಗಿರಿಜಾ ಲೋಕೇಶ್‌ ಅವರ ಆತ್ಮಕಥೆಯನ್ನು ಓದಿದಾಗ. ಅಲ್ಲಿ ಜೋಗಿ ಒಂದು ಕಡೆ ಬರೆಯುತ್ತಾರೆ: ʻಗಿರಿಜಮ್ಮ ಸುಖವಾಗಿದ್ದ ಕಾರಣವೆಂದರೆ, ಅವರು ನಾಟಕವನ್ನು ಜೀವನ ಎಂದೂ, ಜೀವನವನ್ನು ನಾಟಕವೆಂದೂ ತಿಳಿದಿದ್ದರು.ʼಯಾರದಾದರೂ ಪ್ರಾಯೋಜಿತವಾಗಿರದಿದ್ದರೆ, ನಾಟಕ ರಂಗ ಯಾರನ್ನು ಬೇಕಾದರೂ ಆರ್ಥಿಕ ಅಧಪತನಕ್ಕೆ ದೂಡಬಲ್ಲದು ಎಂದು ಅರ್ಥವಾಗಿತ್ತು. ಈಗ, ಪ್ರಾಯೋಜಕರನ್ನು ಹುಡುಕಿದ ಹೊರತು, ನಾಟಕವನ್ನು ಹವ್ಯಾಸಿಗಳು ಮಾತ್ರ ಉಳಿಸಿಕೊಳ್ಳಬಹುದು.

ಇದೆಲ್ಲಾ ನೆನಪಿಗೆ ಬಂದಿದ್ದು ನೆನ್ನೆ ಶನಿವಾರ ನಾನು ನಾಟಕ ನೋಡಲು ಹೋದಾಗ. ಜೋಗಿಯವರ ಕಥಾ ಸಂಕಲನವಾದ ʻಲೈಫ್‌ ಇಸ್‌ ಬ್ಯೂಟಿಫುಲ್‌ʼ ನಿಂದ ಒಂದು ಸಣ್ಣ ಕಥೆಯನ್ನು ನಾಟಕವಾಗಿ ಮಾಡಲಾಗಿತ್ತು. ಅದರ ಜೊತೆ, ಶಾ ಬಾಲುರಾವ್‌ ಅವರ ʻಬೆಕ್ಕು ಬಾವಿʼ ಎನ್ನುವ ನಾಟಕ ಸಹ ಇತ್ತು.

ಮೊದಲನೆಯದಾಗಿ, ಬೆಂಗಳೂರಿನನಲ್ಲಿ ನಾನು ನಾಟಕಗಳನ್ನು, ಟೌನ್‌ ಹಾಲ್‌, ನಯನ, ರಂಗ ಶಂಕರ, ಚೌಡಯ್ಯ ಮೆಮೋರಿಯಲ್‌ ಹಾಲ್‌, ಕಲಾ ಗ್ರಾಮಗಳಲ್ಲಿ ನೋಡಿ ಗೊತ್ತಿತ್ತು. ಕುಮಾರಸ್ವಾಮಿ ಲೇಔಟ್‌ ನಲ್ಲಿರುವ ಕೆ ವಿ ಸುಬ್ಬಣ್ಣ ಇಂಟಿಮೇಟ್‌ ಥಿಯೇಟರ್‌ ಎಲ್ಲಿದೆ ಎನ್ನುವುದು ಗೊತ್ತಿರಲಿಲ್ಲ. ಗೂಗಲ್‌ ಮ್ಯಾಪ್‌ ಹಾಕಿಕೊಂಡು ಹೋಗಿ ನಿಲ್ಲಿಸಿದವನಿಗೆ, ಆ ಕಿರಿದಾದ ರಸ್ತೆಯಲ್ಲಿ ಥಿಯೇಟರ್ ಎಲ್ಲಿದೆ ಎನ್ನುವುದು ಒಂದು ಕ್ಷಣ ಅರ್ಥವಾಗದಿದ್ದರೂ, ಅಷ್ಟೇನೂ ಕಷ್ಟವಾಗಲಿಲ್ಲ. ಒಂದು ಚಿಕ್ಕ ಪ್ರಪಂಚ ಎಂದುಕೊಂಡು, ಒಳಗೆ ಹೋಗಿ ಕುಳಿತೆವು.

ಬೆಕ್ಕು ಬಾವಿ ನಾಟಕದ ಹಿನ್ನೆಲೆ ನನಗೇನೂ ತಿಳಿದಿರಲಿಲ್ಲ. ಆದರೆ, ನಾಟಕದ ಪಾತ್ರದಾರಿಗಳು ನಿಧಾನವಾಗಿ ನಾಟಕಕ್ಕೆ ಜೀವ ತುಂಬಲು ಆರಂಭಿಸಿದರು. ನಾಟಕ ಮುಗಿಯುವ ಹೊತ್ತಿಗೆ, ನಾವು ನಾವಾಗಿರಲಿಲ್ಲ. ಆ ರಂಗದ ತುಂಬ, ಪ್ರತಿ ಪಾತ್ರಗಳಲ್ಲಿ ಒಳಹೊಕ್ಕು, ಹೊರ ಬರುತ್ತಿದ್ದೆವು. ಪ್ರತಿ ಪಾತ್ರಗಳ ಅಭಿನಯ ಅದ್ಭುತವಾಗಿತ್ತು. ಆನಂತರ ಲೈಫ್‌ ಇಸ್‌ ಬ್ಯೂಟಿಫುಲ್‌ ಆರಂಭವಾಯಿತು. ನಾನು ಬಹಳ ಹಿಂದೆ ಓದಿದ ಪುಸ್ತಕ. ಆದರೂ, ನಾಟಕದಲ್ಲಿ ಒಂದೆರೆಡು ಪಾತ್ರಗಳು ನನ್ನ ನೆನಪಿಗೆ ಬರಲಿಲ್ಲ. ನಾನು ಓದಿದ ಕಥೆಗಿಂತ, ಈ ನಾಟಕದಲ್ಲಿ ಬಹಳಷ್ಟು ಹೆಚ್ಚಿರುವಂತೆ ಅನ್ನಿಸಿತು. ನಾಟಕ ಮುಗಿಯುವ ಹೊತ್ತಿಗೆ, ಜೋಗಿ ಸಹ ಅದನ್ನೇ ಹೇಳಿದರು. ʻಈ ಕಥೆ ನಾನು ಬರೆದು ಏಳು ವರ್ಷಗಳಾಗಿವೆ. ನನಗೆ ಇದು ಯಾವುದೋ ಹೊಸ ಕಥೆಯನ್ನು ನೋಡುತ್ತಿದ್ದೇನೆ ಎನ್ನುವಷ್ಟು ಚೆನ್ನಾಗಿ ಬಂದಿದೆ,ʼ ಎಂದು. ಆಮೇಲೆ ನನಗೆ ಗೊತ್ತಾಯಿತು. ಮೂಲ ಕಥೆಯಲ್ಲಿಲ್ಲದ ಎರಡು ಪಾತ್ರಗಳನ್ನು ನಾಟಕದಲ್ಲಿ ತಂದಿದ್ದಾರೆ ಎಂದು. ಆ ಪಾತ್ರಗಳನ್ನು ಅದೆಷ್ಟು ಸುಂದರವಾಗಿ ತಂದಿದ್ದಾರೆ ಎಂದರೆ, ಅವಿಲ್ಲದೆ ನಾಟಕ ಅಪೂರ್ಣವಾಗುತ್ತಿತ್ತೇನೋ.

ಈ ನಾಟಕಗಳ ವಿನ್ಯಾಸ ಮತ್ತು ನಿರ್ದೇಶನ ಮಾಡಿದ ಹುಲುಗಪ್ಪ ಕಟ್ಟಿಮನಿಯವರ ಬಗ್ಗೆ, ಗೊತ್ತಿಲ್ಲದವರಿಗೆ ಒಂದೆರೆಡು ಮಾತುಗಳನ್ನು ಹೇಳಬೇಕು. ನಮ್ಮ ಬಂದೀಖಾನೆಗಳಲ್ಲಿ, ಕೈದಿಗಳ ನಾಟಕದ ಗುಂಪನ್ನು ಕಟ್ಟಿದ ಹೆಗ್ಗಳಿಗೆ ಇವರದು. ಬಹಳಷ್ಟು ವರ್ಷಗಳಿಂದ ನಡೆಸಿಕೊಂಡು ಕೈದಿಗಳ ತಂಡವು, ಬೆಂಗಳೂರಿನ ಬಂದೀಖಾನೆಯಲ್ಲದೆ, ಕರ್ನಾಟಕದ ಎಲ್ಲಾ ಬಂದೀಖಾನೆಗಳು, ನಾಲ್ಕೈದು ಬೇರೆ ರಾಜ್ಯಗಳು, ದೆಹಲಿ ಮತ್ತು ಧರ್ಮಸ್ಥಳದಲ್ಲಿ ಸಹ ಪ್ರದರ್ಶನಗಳನ್ನು ನೀಡಿದ್ದಾರೆ. ಅದಕ್ಕೆ ಮೊದಲಿನಿಂದ ಆಧಾರವಾಗಿ ನಿಂತ ಹಿರಿಯ ಪೋಲಿಸ್‌ ಅಧಿಕಾರಿ ಗೋಪಾಲ್‌ ಹೊಸೂರು ಸಹ ನಾಟಕಕ್ಕೆ ಬಂದಿದ್ದರು. ನನಗೆ ಇಪ್ಪತೈದು ವರ್ಷಗಳ ಹಳೇ ಒಡನಾಟ ಬೇರೆ. ನಾಟಕ ಮುಗಿದ ನಂತರ ಗೋಪಾಲ್‌ ಹೋಸೂರು ಅವರು ಹೇಳಿದ ಒಂದು ವಿಷಯ ನನ್ನನ್ನು ದಿಗ್ಭ್ರಮೆಗೊಳಿಸಿತು. ಈ ನಾಟಕ ಗುಂಪಿಗೆ ಸೇರಿದ ಕೈದಿಗಳು ತಮ್ಮ ಪಾತ್ರದಲ್ಲಿ ಎಷ್ಟೊಂದು ತೊಡಗಿಸಿಕೊಂಡಿರುತ್ತಿದ್ದರು ಎಂದರೆ, ಅವರು ಬೇರೆ ಕಡೆ ಹೋದಾಗ, ತಪ್ಪಿಸಿಕೊಂಡು ಹೋಗುವ ಅವಕಾಶಗಳಿದ್ದರೂ, ಯಾರೂ ಸಹ ಹಾಗೆ ಮಾಡುತ್ತಿರಲಿಲ್ಲ.

ಈ ಪ್ರದರ್ಶನಕ್ಕೆ ಇಟ್ಟಿದ್ದ ನೂರು ರೂಪಾಯಿ ಪ್ರವೇಶ ದರ ನೋಡಿ ಬೇಸರವಾಯಿತು. ನಮ್ಮ ಮಲ್ಟಿಪ್ಲೆಕ್ಸ್‌ ಗಳಲ್ಲಿ ಒಂದು ಪಾಪ್‌ ಕಾರ್ನ್‌ ಸಹ ಸಿಗೋದಿಲ್ಲ. ಅದನ್ನು ಕೆ ವಿ ಸುಬ್ಬಣ್ಣ ಇಂಟಿಮೇಟ್‌ ಥಿಯೇಟರ್‌ ನಡೆಸುತ್ತಿರುವ ಬಿ ಆರ್‌ ಗೋಪಿನಾಥ್‌ ಅವರಿಗೆ ಹೇಳಿದೆ ಕೂಡ. ಅವರು ನಕ್ಕು ಸುಮ್ಮನಾದರು. ಮೊದಲೇ ಕಟ್ಟಿಮನಿಯವರು ಹೇಳಿದ್ದರು. ʻಇದು, ಇನ್ನರ್‌ ಲೈನ್‌ ಆಕ್ಟಿಂಗ್‌ ರಿಸರ್ಚ್‌ ಸೆಂಟರ್‌ʼ ಸದಸ್ಯರ ಅರೆಕಾಲಿಕ ಚಟುವಟಿಕೆ ಎಂದು. ಆದರೂ, ಅವರ ಪರಿಶ್ರಮ ಮತ್ತು ನಮಗೆ ದೊರೆತ ಅದ್ಭುತ ಅನುಭವಕ್ಕೆ, ಅದು ಬಹಳ ಕಡಿಮೆ ಎಂದೆನಿಸಿತು. ಅದನ್ನು ಹಣದಿಂದ ಅಳೆಯಲಾಗದು ಎನ್ನುವುದು ತತ್ವಜ್ಞಾನಿಕ ಸತ್ಯ, ಆದರೆ ವಾಸ್ತವವೇ ಬೇರೆ.

ಈ ಅರೆಕಾಲಿಕ ನಾಟಕ ಸಂಸ್ಥೆಗಳಿಲ್ಲದೇ ಹೋಗಿದ್ದರೆ, ನಮ್ಮ ಮುಂದಿನ ಪೀಳಿಗೆಯವರು ನಾಟಕಗಳನ್ನು ಪುಸ್ತಕಗಳಲ್ಲಿ ಓದಬೇಕಾಗಿತ್ತೇನೋ ಎಂದು ಅನ್ನಿಸುತ್ತದೆ. ಹಳ್ಳಿಗಳ ಕಡೆ ಯುವಕರು ನಾಟಕ ಸಂಘಗಳನ್ನು ಕಟ್ಟಿಕೊಳ್ಳುವುದು ಸಹ ಹಬ್ಬ, ಜಾತ್ರೆಗಳ ಪ್ರಾಯೋಜತೆಯ ಮೇರೆಗೆ ಮತ್ತು ಅರೆಕಾಲಿಕವಾಗಿಯೇ ಹೊರತು, ವೃತ್ತಿಪರತೆಯಿಂದಲ್ಲ. ಈಗಿನ ಮಕ್ಕಳನ್ನು ಹಳ್ಳಿಗಳಲ್ಲಿ ಬೆಳೆಯಲು ಯಾರೂ ಬಿಡುವುದಿಲ್ಲ ಎನ್ನುವುದು ಇನ್ನೊಂದು ಸತ್ಯ. ಚೆನ್ನಾಗಿ ಓದಿಸಬೇಕು ಎಂದು, ಎಷ್ಟೇ ಕಷ್ಟವಾದರೂ ದೊಡ್ಡ ಊರುಗಳಿಗೆ ಕಳುಹಿಸುತ್ತಾರೆ. ಹಾಗಾಗಿ, ಶಾಲಾ, ಕಾಲೇಜುಗಳಲ್ಲಿ ನಾಟಕಗಳಲ್ಲಿ ಪಾಲುಗೊಂಡ ಮಕ್ಕಳು, ಮುಂದೆ ಅರೆಕಾಲಿಕ ನಾಟಕಗಾರರಾಗಿ ಉಳಿದವರು ಈ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ.

ಅದೊಂದು ಆತ್ಮ ತೃಪ್ತಿ ಮಾತ್ರ. ಈ 5ಜಿ ಪ್ರಪಂಚದಲ್ಲಿ, ನೈಜತೆಯನ್ನು ಅನುಭವಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಆದರೆ, ಅದೊಂದು ಅದ್ಭುತ ಪ್ರಪಂಚ ಮತ್ತು ಅದನ್ನು ಅನುಭವಿಸದಿದ್ದವರಿಗೆ ವೈಯಕ್ತಿಕ ನಷ್ಟ ಎಂದು ನನ್ನ ಅನಿಸಿಕೆ.

ನನ್ನ ಮಿತ್ರ ಪಿ ಡಿ ಸತೀಶ್ಚಂದ್ರ ಇದಕ್ಕೊಂದು ಜೀವಂತ ನಿದರ್ಶನ. ಇಪ್ಪತೈದು ವರ್ಷಗಳಿಗೂ ಮಿಕ್ಕಿದ ಗೆಳೆತನದಲ್ಲಿ ಅವನ ನಗು, ಹಾಸ್ಯ ಪ್ರಜ್ಞೆ, ಜೀವನ ಪ್ರೀತಿ ನೋಡಿದಾಗ ಆಶ್ಚರ್ಯವಾಗುತ್ತದೆ. ಜೀವನೋಪಾಯಕ್ಕಾಗಿ ಟೀವಿ ಸೀರಿಯಲ್‌ ಮತ್ತು ಚಲನಚಿತ್ರಗಳನ್ನು ಅವಲಂಬಿಸಿರುವ ಸತೀಶ್ಚಂದ್ರ, ಸಿಕ್ಕಿದಾಗಲೆಲ್ಲ ರಂಗಭೂಮಿಯ ಒಂದಲ್ಲಾ ಒಂದು ವಿಷಯವನ್ನು ತಲೆಗೆ ಹಚ್ಚಿಕೊಂಡು ಓಡಾಡುತ್ತಿರುತ್ತಾನೆ. ತಾನು ಹೋದಲ್ಲೆಲ್ಲ ಸಂತೋಷವನ್ನು ಹರಡುತ್ತಾನೆ. ಒಮ್ಮೊಮ್ಮೆ, ಅವನನ್ನು ಕಂಡರೆ ಈರ್ಷೆಯಾಗುತ್ತದೆ.

ಅವನನ್ನು ನೋಡಿದಾಗಲೆಲ್ಲ ಮಾರ್ಗರೆಟ್‌ ವೂಲ್ಫ್‌ ಹಂಗರ್‌ ಫೋರ್ಡ್‌ ಬರೆದ ಒಂದು ವಾಕ್ಯ ನೆನಪಾಗುತ್ತದೆ. `Beauty is in the eyes of the beholder’, ಅದಕ್ಕೆ ನನ್ನದೇ ಆದ ಒಂದು ವಾಕ್ಯವನ್ನು ಸೇರಿಸಿದೆ `and the life is in the heart of the beholder’.

- ಮಾಕೋನಹಳ್ಳಿ ವಿನಯ್‌ ಮಾಧವ
ಮಾಕೋನಹಳ್ಳಿ ವಿನಯ್ ಮಾಧವ್ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...