ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’


"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರುವ ಅಗಾಧ ಕಂದರದ ಬಗ್ಗೆ ಮತ್ತೆ ಮತ್ತೆ ತಲ್ಲಣಗೊಂಡಿರುವ ಜ್ಯೋತಿ ಕಾಕತ್ಕರ್, ರಾಜೇಶ್ ಶಿವನಿ ಅವರ ಪ್ರೇಮದ ಅಭಿವ್ಯಕ್ತಿಗೆ ಹೊಸ ರೂಪಕಗಳನ್ನು ಹುಡುಕುತ್ತಿರುವ ಕವಿತೆಗಳೂ ಇಲ್ಲಿವೆ," ಎನ್ನುತ್ತಾರೆ ಲೇಖಕ ಪ್ರೊ. ಟಿ. ಯಲ್ಲಪ್ಪ. ಅವರು ಲಕ್ಷ್ಮಿ ಕಿಶೋರ್ ಅರಸ್ ಮತ್ತು ಸಚಿನ್ ಹೊಳೆಹದ್ದು ಅವರ ಸಂಪಾದಕತ್ವದ ‘ಅಂಕುರ’ ಕೃತಿಗೆ ಬರೆದ ಬೆನ್ನುಡಿ.

‘ಅಂಕುರ’ - ಲಕ್ಷ್ಮಿ ಕಿಶೋರ್ ಅರಸ್ ಹಾಗೂ ಸಚಿನ್ ಹೊಳೆಹದ್ದು ಎಂಬ ಇಬ್ಬರು ಸೃಜನಶೀಲ ಹಾಗೂ ಕ್ರಿಯಾಶೀಲ ತರುಣರು ಸಂಪಾದಿಸಿರುವ ಸುಮಾರು ನಲವತ್ತೈದು ಕಾಲೇಜು ತರುಣ - ಕವಿಗಳ ಕವಿತಾ ಸಂಕಲನ. ಇದರಲ್ಲಿ ಈ ಇಬ್ಬರೂ ಸಂಪಾದಕ ಕವಿಗಳ ಪ್ರಯೋಗಶೀಲ ಕವಿತೆಗಳೊಂದಿಗೆ, ಅನೇಕ ಹೊಸ ಹೊಸ ಕನಸುಗಳೊಂದಿಗೆ ಕಾವ್ಯಲೋಕವನ್ನು ಪ್ರವೇಶ ಮಾಡಿರುವ ಅಂಕುರರೂಪೀ ಕಾವ್ಯದ ಬೀಜಗಳು ಮೊಳಕೆಯೊಡೆಯುತ್ತಿರುವ ಪಿಸುಮಾತುಗಳು ಇಲ್ಲಿವೆ.

ಇಲ್ಲಿನ ಕವಿತೆಗಳಲ್ಲಿ ಸಮಕಾಲೀನ ಯಾಂತ್ರಿಕ ಜೀವನದ ಬಗೆಗೆ ಭ್ರಮನಿರಸನಗೊಂಡು ಆದರ್ಶ ಸುಖೀಸಮಾಜದ ಕಡೆಗೆ ಹಾರಿಬಿಡುವ ಕನಸುಗಾರಿಕೆ, ಭೂತ ಮತ್ತು ವರ್ತಮಾನಗಳ ತಾಕಲಾಟ ಮತ್ತೆ ಮತ್ತೆ ಭೂತಕ್ಕೆ ಹಿಂದಿರುಗುವ ಹಂಬಲ, ಕಿಶೋರ್, ಸಚಿನ್, ಅಪೇಕ್ಷ, ಚಂದನ ಅವರ ಕವಿತೆಗಳಲ್ಲಿ ಹಾಗೂ ಅಡಿಗರ ವರ್ಧಮಾನದ ನೆನಪ ತರಿಸುವ ರಾಜೇಶ್ ಶಿವನಿ ಅವರ ಯುವ ಬ್ರಾಂತಿ, ದಣಿಗಳ ದರ್ಪ ಹಾಗೂ ದಲಿತರ ದಣಿವು ಎರಡನ್ನೂ ಕಾಣಿಸುವ ತುಂಗಾ ನದಿಯ ಹರಿವನ್ನು ಕಾಣಿಸುವ ಆಪ್ತಿ ಕಡ್ತೂರ್ ಮತ್ತೆ ಮತ್ತೆ ಹಳೆಗನ್ನಡದ ಗುಂಗಿಗೆ ಜಾರುವ ಸಚಿನ್ ಹೊಳೆಹದ್ದು, ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರುವ ಅಗಾಧ ಕಂದರದ ಬಗ್ಗೆ ಮತ್ತೆ ಮತ್ತೆ ತಲ್ಲಣಗೊಂಡಿರುವ ಜ್ಯೋತಿ ಕಾಕತ್ಕರ್, ರಾಜೇಶ್ ಶಿವನಿ ಅವರ ಪ್ರೇಮದ ಅಭಿವ್ಯಕ್ತಿಗೆ ಹೊಸ ರೂಪಕಗಳನ್ನು ಹುಡುಕುತ್ತಿರುವ ಕವಿತೆಗಳೂ ಇಲ್ಲಿವೆ.

ಇದಲ್ಲದೆ ಈಗ ತಾನೆ ಕವಿತೆಯ ವರ್ಣಮಾಲೆ ಮತ್ತು ಕಾಗುಣಿತವನ್ನಷ್ಟೇ ಕಲಿಯುತ್ತಿರುವ ಒಂದು ಯುವಕರ ದಂಡು ತಮ್ಮ ಕಾಲದ ತಲ್ಲಣಗಳಿಗೆ ಬೇಸತ್ತು, ತರತಮವಿಲ್ಲದ, ಹೆಣ್ಣು- ಗಂಡು, ಒಡೆಯ - ಆಳು, ಮೇಲು - ಕೀಳುಗಳ ದ್ವಂದ್ವವಿಲ್ಲದ ಸಮಸಮಾಜದ ಗಮ್ಯದೆಡೆಗೆ ಸಾಗಲು ಕವಿತೆಯೆಂಬ ಹಾಯಿ ದೋಣಿಯೇರಿ ಹೊರಟಂತಿದೆ ಈ ಸಂಕಲನ. ಅವರ ಈ ಕವಿತೆಗಳೆಂಬ ದೋಣಿಹಾಡಿನ ಐಲೇಸಾ ಹಾಡಿನ ಪಲ್ಲವಿ ಮಾತ್ರ ನಮ್ಮ ಕಾವ್ಯ ಪರಂಪರೆಯ ಹಿಂದಣ ಸೊಲ್ಲುಗಳ ಲಯಸಮನ್ವಿತ ಅರ್ಥದ ಛಾಯೆಗಳನ್ನು ಧ್ವನಿ ತರಂಗಗಳನ್ನು ಮೊಗೆಮೊಗೆದು ಸಂಪನ್ನಗೊಳ್ಳಬೇಕಾದ ಸವಾಲನ್ನು ತಮ್ಮೀ ಕಾವ್ಯಯಾನದಲ್ಲಿ ಸವಾಲಿನಂತೆ ಮುಂದಿರಿಸಿಕೊಂಡು ಸಾಗಿದ್ದಾರೆ. ಇವರ ಯಾನ ದಡಸೇರಲಿ, ಭಾಷೆ - ಭಾವಗಳ ಸತತ ಮೊಗೆವ, ಅಗೆವ ಕವಿತೆಯ ಅಸಲು ಕಸುಬು ಇವರೆಲ್ಲರ ಕವಿತೆಗೂ ಬರಲೆಂದು, ಹಲವು ಭಾವಗಳ ಈ ಬಣ್ಣದ ಕಾವ್ಯಕೌದಿಗೆಶುಭಹಾರೈಸುವೆ.

- ಪ್ರೊ. ಟಿ. ಯಲ್ಲಪ್ಪ

MORE FEATURES

ಪಂಚಮಗಳ ನಡುವೆ- ಸತ್ಯಕಾಮ

09-05-2024 ಬೆಂಗಳೂರು

'ತಂತ್ರಶಾಸ್ತ್ರ ಭಾರತ ಕೊಡಮಾಡಿದ ವಿಶಿಷ್ಟ ಶಾಸ್ತ್ರ.‌ ಈ ಶಾಸ್ತ್ರವನ್ನು ಸತ್ಯಕಾಮರು ವಿಜ್ಞಾನ ಎಂದು ಕರೆದಿದ್...

ಗಾಂಧಿಯನ್ನು ನಾನು ಅರಿತನೆಂದರೆ ಅರಿತಿಲ್ಲ, ಅರಿತಿಲ್ಲವೆಂದರೆ ಒಂದಿಷ್ಟು ಅರಿತಿರುವೆನು

09-05-2024 ಬೆಂಗಳೂರು

‘ಮೋಹನದಾಸ ಕರಮಚಂದ್ ಗಾಂಧಿಯವರನ್ನು ಕುರಿತು ಹೊಸ ತಲೆಮಾರು ಪ್ರೀತಿ-ದ್ವೇಷದ ಭಾವನೆಯನ್ನು ಬೆಳೆಸಿಕೊಂಡಿದೆ’...

ಈ ನನ್ನ ಪುಸ್ತಕಕ್ಕೆ ಕೂಡ ಸಾವಿಲ್ಲದ ಅಮರತ್ವ ಪ್ರಾಪ್ತವಾಗುತ್ತದೆ: ನರೇಂದ್ರ ಪೈ

09-05-2024 ಬೆಂಗಳೂರು

'ಈ ಪುಸ್ತಕಗಳ ಓದು ಸಾವಿರದ ಒಂದು ಪುಸ್ತಕಗಳ ಓದಿಗೆ ಸಮ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಲ್ಲೆ. ಹಾಗಾಗಿಯೇ ಇಂಥ ಅ...