`ಕಾಗೆ ಮೋಕ್ಷ' ಕನ್ನಡ ಕಥಾ ಸಾಹಿತ್ಯದ ಹೊರಳುದಾರಿಯ ಕತೆಗಳು


ಯಾವುದೇ ‘ಇಸಂ’ಗೆ ಒಳಗಾಗದೇ, ಯಾವುದೇ ಸಾಹಿತ್ಯ ಚಳವಳಿಯೊಂದಿಗೆ ಗುರುತಿಸಿಕೊಳ್ಳದೇ ಕಥೆಗಳು ತಾಜಾತನದೊಂದಿಗೆ ಕೂಡಿವೆ ಎಂದು ಪ್ರಶಂಸಿಸಿರುವ ವಿಮರ್ಶಕ ಡಾ. ನಟರಾಜ ತಲಘಟ್ಟಪುರ ಅವರು ಕಥೆಗಾರ ಚಂದ್ರಪ್ರಭ ಕಠಾರಿ ಅವರ ಕಾಗೆಮೋಕ್ಷ ಕಥಾ ಸಂಕಲನಕ್ಕೆ ಬರೆದ ಅರ್ಥಪೂರ್ಣ ಮುನ್ನುಡಿ ಇಲ್ಲಿದೆ;

ಸಾಹಿತ್ಯ ರಚನೆ ಒಂದು ಸಂಭ್ರಮದ ಕೆಲಸ; ಹೀಗಂತ ಹೇಳಿದಾಕ್ಷಣವೇ ಧುತ್ತೆಂದು ಅನಿಸುವುದು, ಸಾಹಿತ್ಯ ರಚನೆ ಸಂಭ್ರಮವಷ್ಟೇ ಅಲ್ಲ ಸಂಕಟದ ಸಂವೇದನೆಯೂ ಹೌದು ಎಂದು. ಏಕೆಂದರೆ ವ್ಯಕ್ತಿಯೋರ್ವನಲ್ಲಿ ಮೇಳೈಸುವ ಭಾವ ಸಂಘರ್ಷ, ತುಮುಲಗಳನ್ನು ಕಲೆಯಾಗಿಸಿ ಹೊರ ಹಾಕುವಲ್ಲಿ ಅತ್ಯಂತ ಪ್ರಯಾಸದಾಯಕವಾಗಿರುತ್ತದೆ. ಮನೋವೇಗದಲ್ಲಿ ಉದ್ಭವಿಸುವ ಅಮೂರ್ತವಾದ ಭಾವನೆಗಳಿಗೆ ಅಕ್ಷರದ/ ಕಲೆಯ ರೂಪ ಕೊಡುವುದು ಕಷ್ಟದ ಕೆಲಸವೇ. ತಾರೆಯಂತೆ ಹೊಳೆದರೆ ಹೊಳೆಯಬಹುದು: ಇಲ್ಲವಾದರೆ ಮರೀಚಿಕೆಯಂತೆ ಕೈಗೆ ಸಿಗದೇ ಹೋಗಬಹುದು.

ಇತ್ತೀಚಿನ ದಿನಗಳಲ್ಲಿ, ಕನ್ನಡದಲ್ಲಿ ಸಾಹಿತ್ಯ ರಚಿಸುವವರು ಬಹುಸಂಖ್ಯಾತರಿದ್ದಾರೆ. ಹೆಚ್ಚು ಹೆಚ್ಚು ಹುಲುಸು ಬರವಣಿಗೆ ಕನ್ನಡದಲ್ಲಾಗುತ್ತಿದೆ. ಹಾಗೆಯೇ, ಸಾಹಿತ್ಯ ವಿದ್ಯಾರ್ಥಿ, ಅಧ್ಯಾಪಕರಲ್ಲದವರು ಸಾಹಿತ್ಯ ರಚಿಸುವವರು ಹೆಚ್ಚಾಗುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್, ಕಂಟ್ರಾಕ್ಟರ್ ಆಗಿರುವ ಶ್ರೀ ಚಂದ್ರಪ್ರಭ ಕಠಾರಿಯವರು ಪ್ರವೃತ್ತಿಯಲ್ಲಿ ಕನ್ನಡದಲ್ಲಿ ಕಥೆಗಳನ್ನು ಬರೆಯುತ್ತಿರುವವರಲ್ಲಿ ಒಬ್ಬರು. ‘ಕಾಗೆ ಮೋಕ್ಷ‘ ಇವರ ಎರಡನೇ ಕಥಾ ಸಂಕಲನ. ಈ ಸಂಕಲನವು ಒಟ್ಟು ಹನ್ನೆರಡು ಕಥೆಗಳನ್ನೊಳಗೊಂಡಿದ್ದು, ಪ್ರತಿ ಕಥೆಯು ಕನಿಷ್ಠ ಎಂಟು ಪುಟಗಳಷ್ಟು ವ್ಯಾಪ್ತಿಯನ್ನು ಹೊಂದಿದ್ದು, ಇವುಗಳಲ್ಲಿ ‘ಸಾಸಿವೆ ಡಬ್ಬಿ‘ ದೀರ್ಘವಾದ ಕಥೆಯಾಗಿದೆ. ಇಲ್ಲಿನ ಎಲ್ಲಾ ಕಥೆಗಳು ಒಂದು ಸಂಯಮದಲ್ಲಿ, ವ್ಯವಧಾನದಲ್ಲಿ ಬರೆದಂಥ ಕಥೆಗಳಾಗಿವೆ.

ಇಲ್ಲಿನ ಎಲ್ಲಾ ಕಥೆಗಳೂ ಯಾವುದೇ ‘ಇಸಂ’ ಗೆ ಒಳಗಾಗದೇ, ಯಾವುದೇ ಸಾಹಿತ್ಯ ಚಳವಳಿಗೆ ಗುರುತಿಸಿಕೊಳ್ಳದಷ್ಟರ ಮಟ್ಟಿಗೆ ವಿಭಿನ್ನವಾಗಿವೆ. ತಾಜಾತನದಿಂದ ಕೂಡಿವೆ. ನವ್ಯಸಾಹಿತ್ಯ ಚಳವಳಿ ಸೃಷ್ಠಿಸಿಕೊಂಡ ಥಿಯರಿಯಾಗಬಹುದು, ದಲಿತ ಚಳವಳಿ, ಲೋಹಿಯಾವಾದಿ, ಸ್ತ್ರೀವಾದಿ ಚಿಂತನೆ ಇನ್ನಿತರೆ ಯಾವ ವಿಮರ್ಶಾ ಮಾನದಂಡಗಳನ್ನು ಬದಿಗಿಟ್ಟು ಇವರ ಎಲ್ಲಾ ಕಥೆಗಳನ್ನು ಪರಿಭಾವಿಸಬೇಕಾಗಿರುವುದು ಕಥೆಗಳ ಸ್ವರೂಪವಾಗಿವೆ. ಲೇಖಕ ತನ್ನ ಅನುಭವಗಳನ್ನು, ಲೋಕದ ಅನುಭವಗಳನ್ನು ಭಾಷೆಯಲ್ಲಿ ಅಭಿವ್ಯಕ್ತಿಸಿ ಕಲಾಕೃತಿಯಾಗಿಸುವುದು ಸೃಜನಶೀಲತೆಯ ಕಾಣ್ಕೆ.

ಇಲ್ಲಿನ ಕಥೆಗಳ ಮೂಲ - ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್, ಕಂಟ್ರಾಕ್ಟರ್ ಆಗಿರುವ ಲೇಖಕರು ತಾನು ಕಂಡುಂಡ ಜೀವನಾನುಭವಗಳನ್ನು ಮತ್ತು ಸುಮಾರು ಕಾಲು ಶತಮಾನದ ಹಿಂದೆ ನಡೆದಿರುವ ತಮ್ಮದೇ ಬದುಕಿನ ಹಾಗೂ ಆ ಕಾಲದ ಬೆಂಗಳೂರಿನ ಅವಿಭಕ್ತ ಕುಟುಂಬಗಳಲ್ಲಿ ಘಟಿಸಿರುವ ಘಟನೆ, ಸಂದರ್ಭಗಳನ್ನು ಕೇಂದ್ರವಾಗಿರಿಸಿಕೊಂಡು, ತಮ್ಮದೇ ಆದ ಕಲಾತ್ಮಕತೆಯಲ್ಲಿ ಕಥೆಗಳನ್ನು ಹೆಣೆದಿದ್ದಾರೆ. ‘ರೂಫ್ ಕಾಂಕ್ರೀಟ್’ ನಂತಹ ಕಥೆಯು ಇಂತಹ ಅವರ ವೃತ್ತಿಗೆ ಸಂಬಂಧಿಸಿದಂತೆ ರಚನೆಯಾದ ಕಥೆಯಾಗಿದೆ. ‘ ರೂಫ್ ಕಾಂಕ್ರೀಟ್’ ಕಥೆಯು ಆತ್ಮಕಥನದ ಧಾಟಿಯಲ್ಲಿದ್ದು, ಕಥೆಯ ವಿವರಗಳು ಅತ್ಯಂತ ಸಹಜವಾಗಿ ಮೂಡಿಬಂದಿದೆ. ಕಟ್ಟಡಕಾರ್ಮಿಕರ, ಮಾಲೀಕರ ವರ್ತನೆಗಳನ್ನು ಅತ್ಯಂತ ಕರಾರುವಕ್ಕಾಗಿ ತುಂಬಾ ರಿಯಾಲಿಸ್ಟಿಕ್ ಆಗಿ ಚಿತ್ರಿಸಿದ್ದಾರೆ. ಕಂಟ್ರಾಕ್ಟರ್ ಒಬ್ಬನ ಬದುಕು, ದಿನಚರಿ, ಕಾರ್ಯ ಬಾಹುಳ್ಯ ನಿರೀಕ್ಷೆಗಳಿಗೆ ತದ್ವಿರುದ್ಧವಾಗಿ ಘಟಿಸುವಿಕೆ. ಇವೆಲ್ಲವು ರವಿ ಎನ್ನುವ ಪಾತ್ರದ ಮೂಲಕ ಕುತೂಹಲದ ಎಲಿಮೆಂಟಿನ ಜೊತೆ ಜೊತೆಗೆ ಕಥೆ ನಿರೂಪಿತಗೊಂಡಿದೆ. ಇದು ಸಂಕಲನದ ಶ್ರೇಷ್ಠ ಕಥೆ ಎನಿಸುತ್ತದೆ.

ಈ ಸಂಕಲನದ ಒಟ್ಟು ಹನ್ನೆರಡು ಕಥೆಗಳಲ್ಲಿ ಸಂಸಾರಿಕ ಸೂತ್ರಗಳು ಹರಿದುಹೋದ ಕಾರಣದಿಂದಾಗಿ, ಅನೇಕ ಪಲ್ಲಟಗಳಿಗೆ ಒಳಗಾಗುವ ಅಮಾಯಕರ ಕಥೆಗಳಾಗಿ ಭಾವಚಿತ್ರ, ಸವಕಲು ನಾಣ್ಯ, ರೆಕ್ಕೆ ಮುರಿದ ಪಾರಿವಾಳವಿದ್ದರೆ, ಕಥಾಸಂಕಲನದ ಶೀರ್ಷಿಕೆಯಾಗಿರುವ ‘ಕಾಗೆ ಮೋಕ್ಷ ‘ – ಅವಿಭಕ್ತ ಕುಟುಂಬದ ವೈಪರೀತ್ಯಗಳಲ್ಲಿ ಭ್ರಮೆಯ ನೆಲೆಗಳನ್ನು ಚಿತ್ರಿಸಿದರೆ, ‘ ಬಾಡಿಗೆ ಮನೆ ‘ ಕಥೆಯಲ್ಲಿ ಎರಡು ತಲೆಮಾರುಗಳಲ್ಲಿ ನೆಮ್ಮದಿ ಕಾಣಬಯಸುವ ನಡುವಿನ ನಿಲುವುಗಳ ತಾಕಲಾಟಗಳಿದ್ದರೆ, ಅಸ್ತಿತ್ವ ಕಥೆ - ಹುಟ್ಟಿನ ದೋಷವಾಗಿರುವ ತೃತೀಯ ಲಿಂಗಿಗಳಾಗಿರುವವರ ಕಥೆಯಾಗಿವೆ.

‘ನೋಟು ಅಮಾನ್ಯ’ ಎಂಬ ವಸ್ತುವನ್ನು ಕೇಂದ್ರವಾಗಿಸಿಕೊಂಡಿರುವ ‘ ಸಾಸಿವೆ ಡಬ್ಬಿ ‘ ಕಥೆಗೆ ಬಹು ಆಯಾಮಗಳು ಸೇರಿಕೊಂಡು ಅತ್ಯಂತ ಸಾಂಕೇತಿಕವಾಗಿ ಕಥೆಯ ಆಶಯ ಮತ್ತು ವಸ್ತುವನ್ನು ನಿರ್ವಹಿಸಲಾಗಿದೆ. ‘ ಶಂಕೆಯ ಸುತ್ತ….’ ಪತ್ತೇದಾರಿ ಸ್ವರೂಪದ ಕಥೆಯಾಗಿದ್ದರೆ, ‘ಜಯಂತನ ಮದುವೆ ಆವಾಂತರ‘ ಕಥಾತಂತ್ರ ಭಿನ್ನವಾಗಿದ್ದು ಕಥೆಗೆ ವಿಶೇಷತೆ ಲಭಿಸಿದೆ. ಒಟ್ಟಾರೆಯಾಗಿ , ಇಲ್ಲಿನ ಪ್ರತಿಯೊಂದು ಕಥೆಗಳು ಅನೇಕ ವಸ್ತು ವೈವಿಧ್ಯತೆಗಳನ್ನು ಒಳಗೊಂಡಿವೆ ಎಂಬುದು ವಿಶೇಷ.

ಇಲ್ಲಿನ ಬಹುಪಾಲು ಕಥೆಗಳು ಒಂದು ಸಂಭಾಷಣೆಯ ಮೂಲಕ ಆರಂಭವಾಗುತ್ತದೆ. ಇದು ಒಂದು ಮಾದರಿಯ ಕಥಾ ರಚನೆಯಾಗಿದ್ದು, ಓದುಗನೊಟ್ಟಿಗೆ ನೇರ ಸಂವಾದಿಸುವಂತೆ ಪ್ರೇರೇಪಿಸುತ್ತವೆ. ‘ಬಾಡಿಗೆ ಮನೆ ‘ ಕಥೆಯೂ ಸಹ ನಗರ ಬದುಕಿನ ಸಂವೇದನೆಗಳನ್ನು ಕಟ್ಟಿಕೊಡುವ ಕಥೆ. ಮಗ ಅರುಣನ ಕನಸು. ಅಪ್ಪ ಕೇಶವನ ದುರಂತ. ನಿವೃತ್ತಿ ಹೊಂದಿದ ನಂತರದಲ್ಲಿ ಮಗನ ನಿಲುವುಗಳ ಕಾರಣಕ್ಕಾಗಿ ತೊಳಲಾಡುವ ಕೇಶವ, ಇದಿಷ್ಟೇ ಅಲ್ಲದೆ, ಬಾಡಿಗೆದಾರರ ಮನಸ್ಥಿತಿಗಳು, ಎರಡು ಧರ್ಮಗಳ ಪ್ರತಿನಿಧಿಗಳಂತೆ ಬಾಡಿಗೆದಾರರ ವರ್ತನೆಗಳು, ಮನಃಸ್ಥಿತಿಗಳು. ಮಗನ ಆಶೋತ್ತರಗಳು, ಆಧುನಿಕಗೊಂಡ ಸಮಾಜದಲ್ಲಿ ಕೌಟುಂಬಿಕ ಮೌಲ್ಯಗಳು, ಅಧಃಪತನಗೊಳ್ಳುತ್ತಿರುವ ದುರಂತ ಕಥೆಯಲ್ಲಿ ಪರಿಣಾಮಕಾರಿಯಾಗಿ ಚಿತ್ರಣಗೊಂಡಿದೆ.

‘ ಭಾವಚಿತ್ರ’ ಕಥೆಯು ಸಾಂಸಾರಿಕ ಜಗತ್ತಿನ ಗೋಜಲುಗಳನ್ನು ಚಿತ್ರಿಸಿರುವ ಕಥೆಯಂತೆನಿಸಿದರೂ ಅಪ್ಪನ ಬಗೆಗಿನ ಮಗಳ ಭಾವನಾತ್ಮಕತೆಗೂ ಇಲ್ಲಿ ಒಂದು ನೆಲೆ ದಕ್ಕಿದೆ. ‘ ಜಯಂತನ ಮದುವೆ ಆವಾಂತರ ‘ ಕಥೆಯ ತಂತ್ರ ಓದುಗನೊಟ್ಟಿಗೆ ಸಂವಾದಿಸುವುದಾಗಿದೆ. ಆದರ್ಶ ವರನೊಬ್ಬನ ಜೀವನಕ್ರಮ, ಅದನ್ನು ತೀರಾ ಗುಮಾನಿಯಿಂದ ನೋಡುವ ಸಮಾಜದ ಸ್ಥಿರ ನಿಲುವುಗಳ ಅನಾವರಣದ ಕಥೆ. ಹರ್ಷಿಣಿಯ ಬದುಕಲ್ಲಿ ಬರುವ ಜಯಂತ ಸೀದಾ ಸಾದಾ, ಸರಳ ಮನುಷ್ಯ. ನಿಷ್ಠುರವಾದಿ. ಸರಳ ವಿವಾಹದ ಬಗೆಗೆ ಒಲವುಳ್ಳವನು. ಇಂತಹ ಪಾತ್ರದ ಮೂಲಕ ಸರಳ ವಿವಾಹ ಹಾಗೂ ಗಂಡಿನ ಧೋರಣೆಯನ್ನು ಜಯಂತನ ಪಾತ್ರದ ಮೂಲಕ ಕೈಮರವಾಗಿಸಿದ್ದಾರೆ.

‘ ರೆಕ್ಕೆ ಮುರಿದ ಪಾರಿವಾಳ ‘ ಕಥೆಯಲ್ಲಿ ಅನೇಕ ಒಳಶೀರ್ಷಿಕೆಗಳಿವೆ. ಮುರುಗನ್ ಮತ್ತು ಮಧುಮತಿ ಪ್ರಣಯ ದುರಂತದ ಕಥೆಯಾದರೂ, ಅದರಾಚೆಗೆ ಮುರುಗನ್ ಆತ್ಮಹತ್ಯೆಯ ನಂತರದಲ್ಲಿ ಮಧುಮತಿ ಮದುವೆಯ ನಂತರದ ದುರಂತವನ್ನು ಅನಾವರಣಗೊಳಿಸುತ್ತದೆ. ಬಿಂಕ ಬಿನ್ನಾಣದ ಭಂಡ ಧೈರ್ಯದ ಅಕ್ಕ ಎಲ್ಲಿ, ಸೊರಗಿದ ಕನಿಕರ ಬೇಡುವ ಅಕ್ಕ ಎಲ್ಲಿ – ಉದಯನ ಈ ಅನಿಸಿಕೆ ಪ್ರೇಮವಿವಾಹ ಹಾಗೂ ಒಪ್ಪಿತ ಮದುವೆಗಳ ಫಲಿತದಂತೆ ತೋರುತ್ತದೆ. ಆದರೆ, ಕಥೆ ಇಂತಿಷ್ಟೇ ನೆಲೆಗಳನ್ನು ಒಳಗೊಂಡಿಲ್ಲ. ಮಧುಮತಿಯ ಪಾತ್ರದ ಸೃಷ್ಟಿಯಲ್ಲೇ ತಿರುವುಗಳಿವೆ, ಸಂಕೀರ್ಣತೆಯಿದೆ. ಆದ್ದರಿಂದಲೇ, ಓದುಗನ ಭಾವನೆಗಳಲ್ಲಿ ಗೊಂದಲಗಳು ಸೃಷ್ಟಿಯಾಗುತ್ತವೆ. ಕಥೆಯ ಕಡೆಯ ವಿಷಾದ, ಕರುಣೆ, ಭಾವುಕತೆಯು ಕಥೆಯಲ್ಲಿನ ಮಧುಮತಿಯ ಬದುಕಿನ ಹಿಂದಿನ ಘಟನೆಗಳನ್ನು ನೆನಪಿಸುವಂತೆ ಮಾಡಿ ಭಾವುಕತೆ, ಕರುಣೆಗಳು ಮಾಯವಾಗುತ್ತವೆ.

ಈ ಮೊದಲೇ ಹೇಳಿದಂತೆ, ಈ ಸಂಕಲನದ ಅಸ್ತಿತ್ವ, ಒದ್ದೆಹಾಸಿಗೆ ಹಾಗೂ ಬಿಡಿಬಿಡಿ ಚಿತ್ರಗಳು – ಈ ಮೂರು ಕಥೆಗಳು ಒಂದೇ, ಬಾಲಾವಸ್ಥೆಯ ಬಿಕ್ಕಟ್ಟುಗಳ ವಸ್ತುವನ್ನು ಒಳಗೊಂಡಿದ್ದು ನಿರ್ವಹಣೆಯಲ್ಲಿ, ಕಥೆಯ ಪದರುಗಳಲ್ಲಿ ಭಿನ್ನತೆಯಿದೆ. ಈ ಬಗೆಯ ವಸ್ತುವಿನ ಆಯ್ಕೆ ಕನ್ನಡ ಸಾಹಿತ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗುತ್ತಿದೆ. ಮಾತಾಡುವುದು ನಿಷಿದ್ಧ ಎಂಬಂತ ಕಾಲದಿಂದ ಬಹಳ ದೂರ ಬಂದು ಮುಕ್ತವಾಗಿ ಸಂವಾದಿಸುವುದು ಸಾಧ್ಯವಾಗಿರುವ ಕಾಲದಲ್ಲಿದ್ದೇವೆ. ಸೃಷ್ಟಿಯಲ್ಲಿ ಎಲ್ಲವೂ ಸಹಜ ಹಾಗೂ ವೈವಿಧ್ಯವೇ. ಬಲಿಷ್ಠ ಗಂಡು, ಸುಕೋಮಲ ಹೆಣ್ಣು, ಸುಕೋಮಲ ಗಂಡು, ಬಲಿಷ್ಠ ಹೆಣ್ಣು ಸಹ ಪ್ರಕೃತಿಯಲ್ಲಿ ಸಹಜವೇ.

‘ ಅಸ್ತಿತ್ವ ‘ ಕಥೆಯು ಜಟ್ಟಪ್ಪನ ಕುಟುಂಬದ ಆಸ್ತಿಹಂಚಿಕೆಯ ಕುರಿತಾದ ವೈಮನಸ್ಸುಗಳನ್ನು ಒಳಗೊಂಡ ವಿವರಗಳಿಂದ ಪ್ರಾರಂಭವಾಗುವ ಕಥೆಯು ಸಹೋದರರಲ್ಲಿ ಒಬ್ಬನಾದ ಜಿನೇಂದ್ರ ಲಾಯರ್ ನೋಟಿಸ್ ಕೊಡುವುದರ ಮೂಲಕ ತನ್ನ ಅಸ್ತಿತ್ವದ ನೆಲೆಗಳನ್ನು ಜಾಹೀರುಗೊಳಿಸುವುದು. ತನ್ನ ಶರೀರದ ‘ಅಸಹಜತೆ’; ತನ್ನ ಅಸ್ತಿತ್ವದ ಹುಡುಕಾಟದಲ್ಲಿ ಸಂಯಮಳ ಮೂಲಕ ತನ್ನ ಬದುಕಿಗೆ ಒಂದು ನೆಲೆಯನ್ನು ಕಂಡುಕೊಳ್ಳುತ್ತಾನೆ. ಕಥೆಯಲ್ಲಿ ತನ್ನ ಅಸಹಜತೆಯನ್ನು ಮೀರುವ ಜಿನೇಂದ್ರನಿಗೆ ಬೆಂಬಲವಾಗಿ ನಿಂತಿದ್ದು ಸಂಯಮ - ಹೆಸರುಗಳು ವಿಶಾಲಾರ್ಥದಲ್ಲಿರುವುದು, ಕಥೆಯ ತಿರುವುಗಳಾಚೆಗೆ ಕಥೆಗೆ ಜಿನೇಂದ್ರನಂತವರ ಬದುಕಿಗೆ ಒಂದು ಲಾಜಿಕಲ್ ಎಂಡ್ ಕೊಡಮಾಡಿಕೊಟ್ಟಿದೆ.

‘ ಬಿಡಿಬಿಡಿ ಚಿತ್ರಗಳು’ ಕಥೆಯೂ ಬಾಲ್ಯದಲ್ಲಿ ಅಮಾಯಕನಾಗಿದ್ದು ಶೋಷಣೆಗೆ ಒಳಗಾದವನ ಕಥೆಯಾಗಿದೆ. ಮೀರಾ, ಸುಧಾಮನ ಕಥೆ ಅಷ್ಟೇ ಅಲ್ಲ ಸುಗುಣ ಮೇಡಂ, ಸುಭದ್ರ ಮೇಡಂ ಅವರುಗಳ ಕಥೆಯೂ ಆಗಿದೆ. ಕ್ಲಾಸಿನಲ್ಲಾಗುವ ಅವಮಾನಗಳು, ಮ್ಯಾಜಿಕ್ ನವನ ಹಂಗಿಸುವಿಕೆ, ಒಳಚಡ್ಡಿ ಇಲ್ಲದ ದೊಗಳೆಚಡ್ಡಿಯ ಬದುಕು, ಅವಮಾನಗಳಲ್ಲಿ ಉಸಿರುಗಟ್ಟಿಸುವ ವಾತಾವರಣದಲ್ಲಿ ನಲುಗಿ ಹೋಗುವ ಹೆಣ್ಣಿಗ ಸುಧಾಮನ ದಾರುಣ ಕಥೆ ನಮ್ಮ ಅಂತಃಕರಣವನ್ನು ಕಲಕುತ್ತದೆ. ಹಾಸ್ಯ ಮಿಶ್ರಿತ ಕಟಕಿಯಿಂದ ಶಾಲೆಯಲ್ಲಿನ ಶಿಕ್ಷಕರ ಪಕ್ಷಪಾತಗಳು ಹೇಗೆ ಅಮಾಯಕರನ್ನು ಜರ್ಜರಿತರನ್ನಾಗಿಸುತ್ತದೆ. ಆ ಮೂಲಕ ಅಂತರ್ಮುಖಿಗಳು, ಬೋನಿನೊಳಗೆ ಬದುಕುವವರ ಸೂಕ್ಷ್ಮತೆಗಳನ್ನು ಕಥೆ ದಾಖಲಿಸುತ್ತದೆ.

ಇಂತದೇ ವಸ್ತುವನ್ನು ಬೇರೊಂದು ಆಯಾಮದಲ್ಲಿ ಚಿತ್ರಿಸಿರುವ ಕಥೆ ‘ ಒದ್ದೆ ಹಾಸಿಗೆ ‘. ಪುಟ್ಟಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯ, ಸಲಿಂಗಕಾಮ ಮತ್ತು ಅದರ ಪರಿಣಾಮಗಳನ್ನು ಕಥೆಗಾರರು ವಿಭಿನ್ನ ನೆಲೆಯಲ್ಲಿ ಅನಾವರಣಗೊಳಿಸಿದ್ದಾರೆ. ಇದೊಂದು ವಿಭಿನ್ನ ಕಥೆ. ಭಾಷೆಯ ಬಳಕೆ ಪರಿಣಾಮಕಾರಿಯಾಗಿದೆ. ಒಪ್ಪಿತವಲ್ಲದ ಲೈಂಗಿಕತೆಯು ಉಂಟುಮಾಡುವ ಮಾನಸಿಕ ತುಮುಲಗಳು, ಭಯ, ಕನಸು, ಒದ್ದೆಹಾಸಿಗೆಯಾಗಿ ವ್ಯಕ್ತಿಯನ್ನು ಸಾವಿನ ಅಂಚಿಗೆ ದೂಡುವ ದುರಂತ ಕಥೆಯಾಗಿದೆ. ಸಮಾಜದ ಏಕಮುಖೀ ಚಿಂತನೆ ಹಾಗೂ ಅದರ ನಿಲುವುಗಳಿಂದ ಅಪರಾಧಿ ಮನೋಭಾವಗಳು, ಅವಮಾನದ ಪರಿಸ್ಥಿತಿಗಳು ಸಂಭವಿಸಿ ಶೇಷಾದ್ರಿಯಂತವರನ್ನು ದುರಂತಕ್ಕೆ ತಳ್ಳುತ್ತದೆ. ಕಥೆಯಲ್ಲಿ ಶೇಷಾದ್ರಿಯ ಭೂತದ ಮೂಲಕ ಇಂತವರಿಗೆ ಆತ್ಮಹತ್ಯೆಯೊಂದೇ ದಾರಿಯಂತೆ ನಿರೂಪಿತವಾಗಿದೆ. ಆಗ ‘ ಅಸ್ತಿತ್ವ’ ದ ಕಥೆಯ ಕೊನೆಯು ಈ ಕಥೆಯ ಆಶಯವನ್ನು ಪ್ರಶ್ನೆ ಮಾಡುವಂತಿದೆ.

ಇನ್ನು ಈ ಸಂಕಲನದ ‘ ಸಾಸಿವೆ ಡಬ್ಬಿ’ ಕಥೆಯು ನೋಟು ಅಮಾನ್ಯ ಮಾಡಿದಾಗ ನಡೆದಂತ ಘಟನೆಗಳ ಸುತ್ತ ನಡೆಯುವ ಕಥೆ. ಈ ಸಂಕಲನದ ದೀರ್ಘ ಕಥೆ. ವ್ಯಂಗ್ಯ, ವಿಡಂಬನೆ ಕಥೆಯ ಶಕ್ತಿ. ನೋಟು ಅಮಾನ್ಯಗೊಂಡ ಕಾಲದಲ್ಲಿನ ಬ್ಯಾಂಕುಗಳ ಆವಾಂತರ, ಶ್ರೀಸಾಮಾನ್ಯನ ಸಂಕಷ್ಟಗಳು ಅತ್ಯಂತ ಪರಿಣಾಮಕಾರಿಯಾಗಿ ಅನಾವರಣಗೊಂಡಿದೆ. ನಳಿನಿಯ ಬಿಕ್ಕಟ್ಟುಗಳು ಮಾನ್ಯ, ಅಮಾನ್ಯಗೊಳ್ಳುವ ಅವಳ ಹಣ. ಮುಗ್ಧಳೊಬ್ಬಳ ತೊಳಲಾಟಗಳು. ಸಾಮಾನ್ಯ ಹೆಣ್ಣೊಬ್ಬಳ ಕನಸು ಮತ್ತು ವಾಸ್ತವಗಳನ್ನು ಬಹಳ ಸಾಂಕೇತಿಕವಾಗಿ ಕಥೆ ಕಟ್ಟಿಕೊಡುತ್ತದೆ. ಹದಿನೈದು ಲಕ್ಷ ರೂ.ಗಳ ಬಗೆಗಿನ ಜನಸಾಮಾನ್ಯರ ಕನಸು ಭ್ರಮೆಯಾಗಿ ಪರಿವರ್ತನೆಗೊಂಡಿರುವುದನ್ನು ಇಡೀ ಊರಿಗೆ ಊರೇ ತಮ್ಮ ತಮ್ಮ ಮನೆಗಳಲ್ಲಿ ನಿಧಿಗಾಗಿ ಶೋಧ, ಅಗೆತ, ಮನೆಯ ಮುಂದೆ ಅಗೆದ ಸಾಮಗ್ರಿಗಳ ರಾಶಿಗಳು – ಕಥೆಯ ತಾಂತ್ರಿಕ ದೃಷ್ಠಿಯಿಂದ ಪರಿಣಾಮಕಾರಿಯಾಗಿ ಮೂಡಿಬಂದಿದೆ.

‘ಕಾಗೆ ಮೋಕ್ಷ ‘ ಕಥೆಯಲ್ಲಿ ಮನಃಶಾಸ್ತ್ರವು, ಅದರ ಅಂಗವಾದ ಅಲುಜಿನೇಷನ್ ಕುರಿತ ಚಿಂತನೆಗಳಿವೆ. ಅದರಾಚೆಗೆ ಒಂದು ಕುಟುಂಬದ ಹಿರಿಯರ ಸಾವು ಅದು ಆ ಮನೆಯವರಲ್ಲಿ ಸೃಷ್ಟಿಸುವ ಮಿಥ್, ಭ್ರಮೆಗಳನ್ನು ಬೆಂಗಳೂರು ನಗರದ ಬದುಕಿನ ದುರಂತದ ಎಳೆಗಳನ್ನು ಕಥೆಯಾಗಿಸಿದ್ದಾರೆ. ಈ ಕಥೆಯಲ್ಲಿ, ಲೇಖಕರು ಭಾಷೆಗೆ ಅಂತಃಶಕ್ತಿಯನ್ನು ತುಂಬಿದ್ದಾರೆ. ಅತೃಪ್ತ ಪ್ರಕಾಶನ ಇಲ್ಯುಷನ್ಸ್ ಪರಿಣಾಮಕಾರಿಯಾಗಿ ಮೂಡಿಬಂದಿದೆ.

ಈ ಸಂಕಲನದಲ್ಲಿ ಅನೇಕ ಕತೆಗಳು ಜೈನ ಸಮುದಾಯದ ಕತೆಗಳಂತೆ ಅನ್ನಿಸುತ್ತವೆ- ಕೇವಲ ಇಲ್ಲಿನ ಪಾತ್ರಗಳ ಹೆಸರುಗಳಿಂದ. ಆದರೆ, ಅದಕ್ಕಷ್ಟೇ ಸೀಮಿತಗೊಳಿಸಿರುವುದರಿಂದ ಇಲ್ಲಿನ ಕತೆಗಳು ಯಾವ ಸಮುದಾಯದಲ್ಲೂ ಘಟಿಸಬಹುದಾದ ವಿಸ್ತಾರತೆಯನ್ನು ಪಡೆದುಕೊಂಡಿದೆ. ಇಲ್ಲಿನ ಎಲ್ಲಾ ಕಥೆಗಳೂ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕವರ, ಅಮಾಯಕರ, ಅಸಹಾಯಕರ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದವರ, ದುರ್ಬಲ ವ್ಯಕ್ತಿತ್ವದವರ, ಮುಗ್ಧರ ಬದುಕನ್ನು ಲೇಖಕರು ಕಥೆಯಾಗಿಸಿದ್ದಾರೆ.

ಕಥೆಗಾರರ ಮಾನವೀಯ ಸಂಬಂಧಗಳ ಹುಡುಕಾಟದ ಆಶಯ ಎಲ್ಲ ಕಥೆಗಳಲ್ಲೂ ಕಂಡು ಬರುತ್ತದೆ. ಕಥೆಗಾರರ ಆಶಯವೂ ಆದೇ ಆಗಿದೆ ಎನಿಸುತ್ತದೆ. ಒಟ್ಟಾರೆ, ಇಲ್ಲಿನ ಕಥೆಗಳಲ್ಲಿ ರೋಚಕತೆಗಿಂತ ಸಂಯಮದ ಬರವಣಿಗೆಗಳಾಗಿವೆ. ಇಂತಹ ಅತ್ಯುತ್ತಮ ಕಥೆಗಳನ್ನು ಕನ್ನಡಕ್ಕೆ ಕೊಟ್ಟ ಶ್ರೀ ಚಂದ್ರಪ್ರಭ ಕಠಾರಿಯವರಿಗೆ ಅಭಿನಂದನೆ ಸಲ್ಲುತ್ತದೆ.

ಕಾಗೆಮೋಕ್ಷ ಕೃತಿಯ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...