ಕನ್ನಡಕ್ಕೆ ಅಪಾಯವಿಲ್ಲ ಎಂದಿದ್ದರು ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ


ನಾಡಿನ ಖ್ಯಾತ ಸಂಶೋಧಕ, ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯನವರು 2021, ಏಪ್ರಿಲ್ 19 ರಾತ್ರಿ 1-15ರ ಸುಮಾರಿಗೆ ನಿಧನರಾಗಿದ್ದಾರೆ. ಶಬ್ದಸಾಗರವೆಂದೇ ಕರೆಸಿಕೊಳ್ಳುತ್ತಿದ್ದ ನಾಡೋಜ ಜಿ.ವೆಂಕಟಸುಬ್ಬಯ್ಯನವರು 77ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಅದಾದ ಒಂದು ವರ್ಷದ ನಂತರ ನಡೆದ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ‘ದ ಸಂಡೆ ಇಂಡಿಯನ್’ ಪತ್ರಿಕೆಗಾಗಿ ಪತ್ರಕರ್ತೆ ಅನಿತಾ ಚಿನ್ನಪ್ಪಳ್ ಅವರು ನಡೆಸಿದ್ದ ವಿಶೇಷ ಸಂದರ್ಶನದ ಆಯ್ದ ಭಾಗ ನಿಮ್ಮ ಓದಿಗೆ.

ಕನ್ನಡ ಶಾಲೆಗಳನ್ನು ಮುಚ್ಚಲೇಬೇಕೆಂಬ ಸರ್ಕಾರದ ಹಟಕ್ಕೆ ನಿಮ್ಮ ಅಭಿಪ್ರಾಯ?
ವಿದ್ಯಾರ್ಥಿಗಳು ಕಡಿಮೆ ಎನ್ನುವ ಕಾರಣಕ್ಕೆ ಸರ್ಕಾರ ಶಾಲೆಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡರೆ ದೊಡ್ಡ ದುಷ್ಕೃತ್ಯಕ್ಕೆ ಕೈ ಹಾಕಿದಂತಾಗುತ್ತದೆ. ಇದು ರಾಜ್ಯಕ್ಕೆ ಸರ್ಕಾರ ಮಾಡುವ ದೊಡ್ಡ ಅನ್ಯಾಯವಷ್ಟೇ. ಬೇಕೆಂದರೆ ಕನ್ನಡ ಶಾಲೆಗಳಲ್ಲಿ ಆಂಗ್ಲ ಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ. ಕನ್ನಡ ಪಠ್ಯವನ್ನು ಕಡ್ಡಾಯಗೊಳಿಸಬೇಕು ಮತ್ತು ಕನ್ನಡ ಪಠ್ಯ ವಿಷಯದಲ್ಲಿ ಕೇವಲ ಸಾಹಿತ್ಯಕ್ಕೆ ಹಾಗೂ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಆಧ್ಯತೆ ನೀಡುವತ್ತ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು. ನಾನು ಈ ವಿಚಾರವಾಗಿ ಸರ್ಕಾರ ಹಾಗೂ ಮಂತ್ರಿಗಳ ಜತೆ ಚರ್ಚಿಸಲು ಸದಾ ಸಿದ್ಧವಾಗಿದ್ದೇನೆ.

ಸಾಹಿತ್ಯ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಾಹಿತ್ಯ ಪರಿಷತ್ತು ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆಯಾ?
ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ಮಂಡಿಸಿ ಜನರ ಒಪ್ಪಿಗೆ ಪಡೆದು ತೀರ್ಮಾನ ಆಯ್ತು ಅಂದರೆ ಸಾಲದು. ಸಾಹಿತ್ಯ ಪರಿಷತ್ ಹಾಗೂ ಸಾಹಿತಿಗಳು ಸಮಿತಿ ರಚಿಸಿ ಚರ್ಚೆ ನಡೆಸಬೇಕು, ಸರ್ಕಾರದ ಮೇಲೆ ಒತ್ತಡ ತರಬೇಕು. ಅಲ್ಲದೇ ಮಂತ್ರಿವರ್ಯರೂ, ರಾಜಕೀಯ ನಿಪುಣರೂ ಸಾಹಿತ್ಯ ಸಮ್ಮೇಳನಗಳಲ್ಲಿ ಕಡ್ಡಾಯವಾಗಿ ಭಾಗವಹಿಸುವಂತಾಗಬೇಕು ಮತ್ತು ಅವರ ಎದುರಲ್ಲೇ ನಿರ್ಣಯಗಳ ಚರ್ಚೆಯಾಗಬೇಕು.

ಕನ್ನಡ ಭಾಷೆಗಾಗಿ ಸರ್ಕಾರ ಹಾಗೂ ಸಾಹಿತಿಗಳ ಆದಿಯಾಗಿ ಕನ್ನಡಿಗರು ಬೇರೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?
ಅತ್ಯಂತ ಸರಳವಾದ ಕೆಲಸವೆಂದ್ರೆ ಇತರ ಭಾಷಿಕರೊಂದಿಗೆ ಮಾತನಾಡುವಾಗ ಕನ್ನಡದಲ್ಲಿ ಮಾತನಾಡಲು ಹಿಂಜರಿಯುವುದನ್ನು ಕನ್ನಡಿಗರು ಮೊದಲು ನಿಲ್ಲಿಸಬೇಕು. ಅನ್ಯ ಭಾಷಿಕರೊಂದಿಗೆ ಸೇರಿ ಇವರು ಅವರ ಭಾಷೆಯನ್ನು ಕಲಿತಷ್ಟೇ ವೇಗದಲ್ಲಿ ಅವರಿಗೆ ಕನ್ನಡ ಕಲಿಸಬೇಕು, ಕನ್ನಡ ಮಾತಾಡುವಂತೆ ಹುರಿದುಂಬಿಸಬೇಕು. ಮುಖ್ಯವಾಗಿ ಗೃಹಿಣಿಯರು, ತಾಯಿಂದಿರು ಕನ್ನಡವನ್ನೇ ಮನೆಯಲ್ಲಿ ಮಾತನಾಡಿ ಮಕ್ಕಳಿಗೂ ಕಲಿಸಬೇಕು.

ಸರ್ಕಾರದ ಹಣಕಾಸಿನ ಹಂಗು ತೊರೆದು ಕನ್ನಡಿಗರ, ಬರಹಗಾರರ ಮತ್ತು ಸಾಹಿತ್ಯಾಸಕ್ತರ ಬೆಂಬಲದಿಂದಲೇ ಸ್ವತಂತ್ರವಾಗಿ ಸಮ್ಮೇಳನ ನಡೆಸುವುದಕ್ಕೆ ಸಾಹಿತ್ಯ ಪರಿಷತ್ತಿನಿಂದ ಸಾಧ್ಯವಿದೆಯೆ?
ನ್ಯಾಯವಾಗಿ ನೋಡಿದರೆ ಪರಿಷತ್ತು ಸರ್ಕಾರದ ಹಣ ಸಹಾಯ ನಿರೀಕ್ಷೆ ಮಾಡದ ಮಟ್ಟಿಗೆ ಬೆಳೆಯಬೇಕು. ಶ್ರೇಷ್ಠ ಕೃತಿಗಳನ್ನು ಒಳ್ಳೆಯ ಬೆಲೆಗೆ ಪ್ರಕಟಣೆ ಮಾಡುತ್ತಾ ಬಂದರೆ ಇದನ್ನು ಸಾಧಿಸಬಹುದು. ಜತೆಗೆ ಸಮ್ಮೇಳನದ ಆಡಂಬರವನ್ನು ಕಡಿಮೆ ಮಾಡಬೇಕು. 1965ರಲ್ಲಿ ಕೇವಲ ರೂ. 7000ದಲ್ಲಿ ನಾವು ಯಶಸ್ವಿಯಾಗಿ ಕಾರವಾರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ್ದೆವು. ಈಗಿನ ಸಮ್ಮೇಳನದಲ್ಲಿ ಭೋಜನವೇ ಒಂದು ಕಾರ್ಖಾನೆಯಾಗಿದೆ.

ನಿಮ್ಮ ಪ್ರಕಾರ ಕನ್ನಡಕ್ಕಿರುವ ಪ್ರಧಾನ ಕಂಟಕಗಳೇನು? ಅವುಗಳನ್ನು ನಿವಾರಿಸುವ ಬಗೆ ಯಾವುದು?
ಬೆಂಗಳೂರು, ಮೈಸೂರಿನಂಥ ನಗರಗಳನ್ನು ಇತರ ಭಾಷಿಕರೇ ತುಂಬಿಕೊಂಡಿರುವುದರಿಂದ ಇಂಥ ಪ್ರದೇಶಗಳಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ಕಡಿಮೆಯಾಗಿದೆ ಅನ್ನೋ ಭಾವ ನಮ್ಮನ್ನು ಕಾಡುತ್ತಿದೆ. ಹೀಗಾಗಿ ಸರ್ಕಾರ ಇಂಥ ನಗರ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಬೇಕು ಮತ್ತು ಪರಭಾಷಿಕರ ಮಕ್ಕಳಿಗೂ ಕನ್ನಡ ಕಲಿಕೆಯನ್ನು ಅನಿವಾರ್ಯಗೊಳಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಅರ್ಜಿ ಸ್ವೀಕಾರ ಕಡ್ಡಾಯವಾಗಬೇಕು. ಅನ್ಯ ಭಾಷಿಕ ಅಧಿಕಾರಿಗಳಿಗೂ ಕನ್ನಡ ಕಡ್ಡಾಯ ಮಾಡಬೇಕು.

ಕನ್ನಡ ಉಳಿಸುವ ಪ್ರಶ್ನೆ ಬಂದಾಗ ನೆರೆಯ ತೆಲುಗುತಮಿಳಿನ ಆಕ್ರಮಣವನ್ನು ತಡೆಯಬೇಕೆಂಬ ಧೋರಣೆ ಇತ್ತೀಚಿನ ಕನ್ನಡ ಚಳವಳಿಯಲ್ಲಿ ಕಾಣಿಸುತ್ತಿದೆ?
ಚಳವಳಿ, ಅನಗತ್ಯ ಕಿರುಚಾಟ, ಬಾವುಟ ಪ್ರದರ್ಶನದಿಂದ ಕನ್ನಡ ಬೆಳೆಯುವುದಿಲ್ಲ ಅಥವಾ ಉಳಿಸಲೂ ಸಾಧ್ಯವಿಲ್ಲ. ಅರಚಾಟ ಕಡಿಮೆ ಮಾಡಿ ಕನ್ನಡ ಪ್ರೀತಿ ಹೆಚ್ಚಿಸಿಕೊಳ್ಳಬೇಕು. ಇಂಗ್ಲಿಷ್‍ನಿಂದಾಗಲಿ ಇನ್ನಿತರ ಭಾಷೆಗಳಿಂದಾಗಲೀ ಕನ್ನಡಕ್ಕೆ ಅಪಾಯವಿಲ್ಲ. ಯಾಕೆಂದರೆ ವಾಸ್ತವದಲ್ಲಿ ಯಾವುದೇ ಭಾಷೆಯಿಂದಾಗಲೀ ಇನ್ನೊಂದು ಭಾಷೆಗೆ ಅಪಾಯವಿಲ್ಲ. ಉದಾಹಾರಣೆಗೆ ಇಂಗ್ಲಿಷ್‍ನ ಹಲವು ಪದಗಳು ಕನ್ನಡಕ್ಕೆ ಬಂದಿವೆ. ಕಂಪ್ಯೂಟರ್ ಆಂಗ್ಲ ಪದಕ್ಕೆ ಕನ್ನಡದ ‘ಉ’ ಪ್ರತ್ಯಯ ಸೇರಿಸಿದರೆ ಕಂಪ್ಯೂಟರು ಹಾಗೇ ಪೆನ್ನು, ಪಿನ್ನು, ನೋಟ್‍ಬುಕ್ಕು...ಹೀಗೆ ಬಹಳಷ್ಟು ನಿದರ್ಶನಗಳಿವೆ. ಹೀಗಾಗಿ ನಿಜಕ್ಕೂ ನಮ್ಮ ಭಾಷೆ ಬೇರೆ ಭಾಷೆಗಳಿಂದ ಅಭಿವೃದ್ಧಿಯಾಗುತ್ತದೆ.


MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...