ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ


"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದೆಯೂ ಅವರಿಗೆ ತಾವು ಹೀಗೆಯೇ ಇರಬೇಕೆಂದುಕೊಂಡರೆ ಒಳ್ಳೆಯದು," ಎನ್ನುತ್ತಾರೆ ಲೇಖಕಿ ಆರ್. ಸುನಂದಮ್ಮ. ಅವರು ಲತಾಮಾಲ ಅವರ ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’ ಕೃತಿ ಕುರಿತು ಬರೆದ ಅವಲೋಕನ.

ಈ ರಾಷ್ಟ್ರದ ಬಹಳಷ್ಟು ಓದುವ, ಚಿಂತಿಸುವ ಜನರು 2014ರ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ. ಸರ್ಕಾರ ಆಡಳಿತಕ್ಕೆ ಬಂದಾಗ ಸಂತೋಷಪಟ್ಟಿದ್ದರು. ದೇಶದಲ್ಲಿ ಹಲವು ಅಭಿವೃದ್ಧಿ ಕರ‍್ಯಗಳ ಜೊತೆಗೆ ಭ್ರಷ್ಟಾಚಾರ ರಹಿತ ಸರ್ಕಾರವೊಂದು ಬರುತ್ತದೆ ಎಂದು ಬಯಸಿದ್ದರು. ಸರ್ಕಾರ ಅಧಿಕಾರಕ್ಕೆ ಬಂದಾಗ ಚಪ್ಪಾಳೆ ತಟ್ಟುತ್ತಾ ಸಂತೋಷಗೊಂಡಿದ್ದರು. ಅಂತಹ ಸಂಭ್ರಮಿಸಿದ ಜನರೆ ಈಗ ನೋಯುತ್ತಿದ್ದಾರೆ, ಕಳವಳಿಸುತ್ತಿದ್ದಾರೆ. ನಮ್ಮ ಸಂವಿಧಾನಕ್ಕೆ ಅಪಾಯವಿದೆ, ಸ್ತ್ರೀಯರನ್ನು ಮನೆಗೆ ಸೀಮಿತ ಮಾಡಬಹುದು ಅವರ ಹಲವು ಹಕ್ಕುಗಳಿಗೆ ಕತ್ತರಿ ಬೀಳಬಹುದು ಎಂದು ಆತಂಕ ಪಡುತ್ತಿದ್ದಾರೆ, ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಹಾಗೆ ಮಾತನಾಡಿ ಬಿಡಲು ಸಾಧ್ಯವೇ ಇಲ್ಲದವರು ಅಲ್ಲಲ್ಲಿ ಚಿಕ್ಕ ಪುಟ್ಟ ಮಾಹಿತಿಯನ್ನು ವಾಟ್ಸಾಪ್‌ನಲ್ಲಿ, ಮುಖಪುಸ್ತಕದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಯುಟ್ಯೂಬ್ ಚಾನಲ್‌ಗಳಲ್ಲಿ ಮೋದಿ ಅವರ ಸರ್ಕಾರದ ವರ್ತನೆಗಳನ್ನು ಹಾಗೂ ಅವರು ಯಾವುದೇ ಪ್ರಶ್ನೆಗೆ ನೆಹರೂ ಅವರನ್ನು ತಂದು ದೇಶ ಅಭಿವೃದ್ಧಿ ಆಗಲೇ ಇಲ್ಲ ಆದರೆ ಈಗ ತುಂಬಾ ಅಭಿವೃದ್ಧಿ ಪಥದತ್ತ ಸಾಗಿದ್ದೇವೆ ಎನ್ನುತ್ತಾರೆ. ಜೊತೆಗೆ ವಿಶ್ವದ ಐದನೇ ಬೃಹತ್ ಗಾತ್ರದ ಆರ್ಥಿಕತೆಯನ್ನು ಹೊಂದಿ ಮೂರನೆಯ ಸ್ಥಾನಕ್ಕೇರಲು ದಾಪುಗಾಲು ಇಡುತ್ತಿದೆ ಎಂಬ ಪ್ರಚಾರವನ್ನು ನೋಡಿದಾಗ ನಿಜವಾಗಿಯೂ ಅದು ಸತ್ಯವಲ್ಲ ಎಂಬುದನ್ನು ಲತಾಮಾಲ ಅವರ ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’ ಎಂಬ ಪುಸ್ತಕವು ಪ್ರತಿಯೊಂದನ್ನೂ ತೆರೆದು ತೋರಿದೆ. ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ. ಆದರೆ ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದೆಯೂ ಅವರಿಗೆ ತಾವು ಹೀಗೆಯೇ ಇರಬೇಕೆಂದುಕೊಂಡರೆ ಒಳ್ಳೆಯದು.

ಮನುಷ್ಯ ಸ್ವಾತಂತ್ರಪ್ರಿಯ ಹಿಂದುತ್ವದ ಆಸೆಯನ್ನು ತೋರಿ ಇತರ ಸಮುದಾಯಗಳನ್ನು ತಮ್ಮ ಅಧೀನತೆಗೆ ತಳ್ಳುವ ಮನಸ್ಸು ಎಷ್ಟು ಸರಿ ಎಂಬುದನ್ನು ನಾವು ಇಂದು ಯೋಚಿಸಬೇಕಾಗಿದೆ. ಪ್ರತಿ ಹೆಜ್ಜೆಯಲ್ಲೂ ತಮಗೆ ತೋರಿದಂತೆ ಅಧಿಕಾರ ಮಾಡುವ ಹಾಗೂ ತಮ್ಮನ್ನು ಪ್ರಶ್ನಿಸುವವರ ಹಕ್ಕುಗಳನ್ನು ದಮನ ಮಾಡುವ, ಅನ್ನದಾತರನ್ನು ಕೇವಲವಾಗಿ ಕಾಣುತ್ತಾ ಈ ದೇಶವನ್ನು ಕಟ್ಟುವವರು ಬಂಡವಾಳಶಾಹಿಗಳೆಂದು ಬಿಂಬಿಸುವ ಸರ್ಕಾರದ ನಡೆಯನ್ನು ಉದ್ಯೋಗ ಸಿಗದ ಯುವ ಪೀಳಿಗೆ ನೋಡುತ್ತಿದೆ. ಇದು ಕರ್ತವ್ಯ ನಿರ್ವಹಿಸಬೇಕಾದ ಕಾಲ ಹಕ್ಕುಗಳನ್ನು ಕೇಳುವ ಕಾಲ ಮುಗಿಯಿತು ಎಂದು ಸಾರ್ವಜನಿಕವಾಗಿ ಹೇಳುವ ಪ್ರಧಾನಿಗಳ ಮಾತಿನ ಹಿಂದಿನ ಸತ್ಯ ಸಂವಿಧಾನದಲ್ಲಿರುವವರೂ ಸಮಾನರು ಎಂದು ಹೇಳುವ ಕತೆಗೆ ಚುಕ್ಕಿ ಇಟ್ಟು ಆಧುನಿಕ ಜೀತಕ್ಕೆ ಜನರನ್ನು ತಳ್ಳುವ ನೆಲೆಯನ್ನು ಲತಾಮಾಲ ಅವರು ಇಂಚಿಂಚಾಗಿ ಬಿಡಿಸಿ ಇಟ್ಟಿದ್ದಾರೆ.

ಆರ್.ಎಸ್.ಎಸ್. ಕನಸಿನೆಡೆಗೆ ಬಿ.ಜೆ.ಪಿ. ಸರ್ಕಾರ ಚಲಿಸುತ್ತಾ ಶೂದ್ರವರ್ಗದವರನ್ನು ಬಲಿಪೀಠಕ್ಕೆ ಏರಿಸಿದೆ. ಸುಳ್ಳಿನ ಕತೆಗಳನ್ನು ಜನರಿಗೆ ತೋರಿಸುವ, ಮುಸ್ಲೀಮರ ಜನಸಂಖ್ಯೆ ಹೆಚ್ಚಾಗಿ ಭಾರತದ ಹಿಂದುಗಳನ್ನು ಎಲ್ಲ ಕಡೆ ದೂರ ಸರಿಸುವ ಕಣ್ಣು ಕಟ್ಟಿನಲ್ಲಿ ಬೀಳಿಸುವುದು ಸುಳ್ಳು ಎಂಬುದನ್ನು ಆಧಾರ ಸಹಿತವಾಗಿ ತೋರಿಸಿದ್ದಾರೆ. ಹಿಂದುಗಳ ಜನಸಂಖ್ಯೆಯ ನಿಯಂತ್ರಣದಂತೆ ಮುಸ್ಲಿಂ ಜನಸಂಖ್ಯೆ ನಿಯಂತ್ರಣ ಇದ್ದು ಈ ದೇಶದಲ್ಲಿ ಶೇ.14 ರಷ್ಟು ಮಾತ್ರ ಜನಸಂಖ್ಯೆ ಇರುವುದನ್ನು ಸರ್ಕಾರದ ಅಧಿಕೃತ ದತ್ತಾಂಶದಿಂದಲೇ ದಾಖಲಿಸಿದ್ದಾರೆ.

ಸಂಘ ಪರಿವಾರ ಸೃಷ್ಠಿಸಿರುವ ಮತ್ತು ಪ್ರಚಾರಗೊಳಿಸುವ ಮುಸ್ಲಿಂ ವಿರೋಧಿ ವಿವಿಧ ಜಿಹಾದ್ ಗಳ ವಿವರಗಳನ್ನು ನೀಡುತ್ತಾ ಹೇಗೆ ಹಿಂದುತ್ವದ ಅಜೆಂಡವನ್ನು ಜನರಲ್ಲಿ ಹರಿಯ ಬಿಟ್ಟು ತಮಗೆ ಬೇಕಾದ ರೀತಿಯಲ್ಲಿ ಆಡಳಿತ ಮಾಡಲಾಗುವುದನ್ನು ವಿವರಿಸಿದ್ದಾರೆ. ಲವ್ ಜಿಹಾದ್, ಹಲಾಲ್ ಜಿಹಾದ್, ಉಗುಳು ಜಿಹಾದ್, ಲ್ಯಾಂಡ್ ಜಿಹಾದ್, ಜನಸಂಖ್ಯಾ ಸ್ಪೋಟಕದ ಜಿಹಾದ್ ಮುಂತಾದ ವಿಷಯಗಳ ಬಗ್ಗೆ ದೀರ್ಘವಾಗಿ ಚರ್ಚಿಸುವ ಮೂಲಕ ಇಂಥ ಸುಳ್ಳುಗಳನ್ನು ಮಂಡಿಸುವಾಗ ಅವರ ವಿರುದ್ಧ ಯಾರೊಬ್ಬರೂ ಆಡಳಿತ ಪಕ್ಷದವರು ಮಾತನಾಡದೆ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿವೆ. ಅಲ್ಲದೆ ಪದೇ ಪದೇ ಇಂಥ ವಿಷಯಗಳನ್ನು ಮಾಡುವ ಮೂಲಕ ಜನರ ಗಮನವನ್ನು ಆ ಕಡೆಗೆ ಸೆಳೆಯುವ ತಂತ್ರವನ್ನು ಇವರು ದಾಖಲಿಸಿದ್ದಾರೆ.

ಬಹುಮುಖ್ಯವಾಗಿ ದತ್ತಾಂಶಗಳನ್ನು ತಿರಿಚುವ ಕೆಲಸ ನಡೆಯುತ್ತಿರುವುದನ್ನು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಬಿ.ಜೆ.ಪಿ. ಜನರಲ್ಲಿ ಹಲವು ಮಿತ್ ಗಳನ್ನು ಸೃಷ್ಠಿಸಿ ಬಿಡುತ್ತಿದ್ದು ದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಮುಗಿಸುವ ಮತ್ತು ಅದಕ್ಕೆ ಎಷ್ಟಾದರೂ ಹಣ ಸುರಿದು ಶಾಸಕ, ಸಂಸದರನ್ನು ಖರೀದಿಸುವ, ಇ.ಡಿ. ಮುಂತಾದ ಸಂಸ್ಥೆಗಳನ್ನು ಛೂ ಬಿಟ್ಟು ಜನರನ್ನು ನಿಯಂತ್ರಿಸುವ ಕೆಲಸವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದನ್ನು ದಾಖಲಿಸಿದ್ದಾರೆ.

2014ರಲ್ಲಿ ಬಿ.ಜೆ.ಪಿ. ಗೆ ಬಹುಮತ ನೀಡುವಂತೆ ಮಾಡಿದ ಭ್ರಷ್ಟಾಚಾರದ 2ಜಿ ಹಗರಣವನ್ನು ಮಾಧ್ಯಮಗಳು ಜನರ ಮನಸ್ಸಿಗೆ ಇಳಿಸಿದವು. ಸಿ.ಎ.ಜಿ. ತನ್ನ ವರದಿಯಲ್ಲಿ 2ಜಿ ತರಂಗಾಂತರಗಳನ್ನು ಬಿಡ್ ಮಾಡದೆ ಹಂಚಿಕೆ ಮಾಡಿರುವಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಹಣ ಪಡೆದಿದೆ ಎಂಬ ಆರೋಪ ಇತ್ಯರ್ಥವಾಗಿದೆ. ಆದರೆ ಈಗಿನ ಬಿ.ಜೆ.ಪಿ. ಸರ್ಕಾರದಲ್ಲಿ ಹಲವು ನಿಯಮಗಳನ್ನು ಗಾಳಿಗೆ ತೂರಿರುವುದನ್ನು ಸಿ.ಎ.ಜಿ. ವರದಿಯು ದಾಖಲಿಸಿದೆ. ಅದರ ಸಂಕ್ಷಿಪ್ತ ವಿವರ ಹೀಗಿದೆ. ಕೇಂದ್ರವು ದೇಶದ ಬಾಹ್ಯ ಸಾಲವನ್ನು 2.19ಲಕ್ಷ ಕೋಟಿ ರೂ.ಗಳಷ್ಟು ಕಡಿಮೆ ಮೌಲ್ಯೀಕರಿಸಿದೆ ಎಂದು ಆರೋಪಿಸಿದೆ. 2021-22 ರ ಹಳೆಯ ವಿನಿಮಯ ದರವನ್ನು ಬಳಸಿಕೊಂಡು 4.39 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿಸಿದೆ. ಆದರೆ ಪ್ರಸ್ತುತ ದರದಲ್ಲಿ ಇದು 6.58 ಲಕ್ಷ ಕೋಟಿ ರೂ. ಆಗಬೇಕಾಗಿತ್ತು ಎಂದಿದೆ. ಇದಲ್ಲದೆ ವಿಮಾ ನಿಧಿ ಮತ್ತು ಸರ್ಕಾರಿ ಉದ್ಯಮಗಳಲ್ಲಿನ ಹೂಡಿಕೆಗಳು 2021-22 ರಲ್ಲಿ 6,23,006 ಲಕ್ಷ ಕೋಟಿ ರೂಗಳು. ಆದರೆ ಸರ್ಕಾರವು ವರದಿಯಲ್ಲಿ ಮಾಡಿರುವ ಅಂಕಿ-ಅಂಶಗಳ ಮೊತ್ತ 6,01,445 ಲಕ್ಷ ಕೋಟಿ ರೂಪಾಯಿಗಳೆಂದು ತೋರಿಸಿದೆ. ಇನ್ನುಳಿದ 21,560 ಕೋಟಿ ರೂಪಾಯಿಗಳ ಹಣ ಎಲ್ಲಿದೆ? ಎಂದು ಪ್ರಶ್ನಿಸಿದೆ.

ಯೂನಿವರ್ಸಲ್ ಸರ್ವೀಸ್ ಅಪ್ಲಿಕೇಶನ್ ಫಂಡ್ ಅಡಿಯಲ್ಲಿ ಟೆಲಿಕಾಂ ಲೆವಿ ಇಂದ 10,376 ಕೋಟಿ ಸಂಗ್ರಹಿಸಿದ್ದು, ಅದರಲ್ಲಿ ಕೇವಲ 8,300 ಕೋಟಿ ಮಾತ್ರ ನಿಧಿಗೆ ವರ್ಗಾಯಿಸಲಾಗಿದೆ. ಉಳಿದ ಮೊತ್ತ ಎಲ್ಲಿದೆಯೆಂದು ಸರ್ಕಾರ ಉತ್ತರಿಸಿಲ್ಲ ಎಂದು ಸಿ.ಎ.ಜಿ. ವರದಿ ಮಾಡಿದೆ.

ಸರ್ಕಾರದ ಹೇಳಿಕೆಗಳ ಪ್ರಕಾರ ನ್ಯೂ ಇಂಡಿಯಾ ಅಶ್ಯೂರೆನ್ಸ್ ನಲ್ಲಿ 30,40,00,000 ಇಕ್ವಿಟಿ ಷೇರುಗಳನ್ನು ಹೊಂದಿದೆ. ಆದರೆ ಕಂಪನಿಯ ವಾರ್ಷಿಕ ಖಾತೆಗಳು ಈ ಅಂಕಿ ಅಂಶಗಳನ್ನು 140,80,00,000 ಎಂದು ಹೇಳುತ್ತದೆ. ಈ ವ್ಯತ್ಯಾಸಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ.

ಎನ್.ಟಿ.ಪಿ.ಸಿ. ಯಲ್ಲಿ ಸರ್ಕಾರದ ಹೇಳಿಕೆಯು ಅದರ ಇಕ್ವಿಟಿ ಷೇರುಗಳ ಸಂಖ್ಯೆಯನ್ನು 399,67,26,967 ಎಂದು ತೋರಿಸುತ್ತದೆ ಆದರೆ ಪವರ್ ಪಿ.ಎಸ್.ವಿ. ನಲ್ಲಿ ವಾರ್ಷಿಕ ವರದಿಯ ಪ್ರಕಾರ ಈ ಅಂಕಿ ಅಂಶಗಳು 495,53,46,251 ಇಂಥ ಐದಕ್ಕೂ ಹೆಚ್ಚು ಪ್ರಕರಣಗಳಲ್ಲಿ ವ್ಯತ್ಯಾಸಗಳು ದಾಖಲಾಗಿದ್ದು ಇದಕ್ಕೆ ಸರ್ಕಾರ ಯಾವುದೇ ಸರಿಯಾದ ಉತ್ತರಗಳನ್ನು ನೀಡದಿರುವುದು ಸಂಶಯಕ್ಕೆ ಕಾರಣವಾಗಿದೆ. ಇದಲ್ಲದೆ ಚುನಾವಣಾ ಬಾಂಡ್ ಗಳ ಭ್ರಷ್ಟಾಚಾರವನ್ನು ಅಧಿಕೃತಗೊಳಿಸಿದ ರೀತಿ. 2017-18 ರಿಂದ 2021 ರ ತನಕ ಬ್ಯಾಂಕುಗಳು ಒಟ್ಟು ಹತ್ತು ಲಕ್ಷ ಕೋಟಿ ರೂ.ಗಳನ್ನು ರೈಟ್ ಆಫ್ ಅಂದರೆ ಸಾಲವನ್ನು ವಸೂಲಿ ಮಾಡದೆ ಕೈ ಬಿಟ್ಟಿವೆ ಎಂಬುದನ್ನು ಸರ್ಕಾರದ ವಿತ್ತ ಮಂತ್ರಿಯವರೆ ಹೇಳಿದ್ದಾರೆ. ಇದಲ್ಲದೆ ಅದಾನಿ ಸಮೂಹದ ಬಿಡ್ ಗಳು ಪ್ರತಿ ಪ್ರಯಾಣಿಕರ ನಿರ್ವಹಣಾ ವೆಚ್ಚ ಮಂಗಳೂರಿಗೆ ರೂ 115 ಮತ್ತು ಲಕ್ನೋ ನಗರಕ್ಕೆ ರೂ 171 ರಷ್ಟು ಇದ್ದು, ಇದು ಜಿ.ಎಂ.ಆರ್. ಮತ್ತು ಪಿ.ಎನ್.ಸಿ. ಇನ್ಟ್ರಾಟೆಕ್ ಬಿಡ್ ಗಳಿಗಿಂತ ಶೇ.500 ರಷ್ಟು ಹೆಚ್ಚು. ಸಾಮಾನ್ಯವಾಗಿ ಕಡಿಮೆ ಬಿಡ್ ಮಾಡುವವರಿಗೆ ಗುತ್ತಿಗೆ ಸಿಗುತ್ತದೆ. ಆದರೆ ಇಲ್ಲಿ 500 ಪಟ್ಟು ಹೆಚ್ಚಾಗಿದ್ದರೂ ಅವರಿಗೆ ಗುತ್ತಿಗೆ ದೊರೆತಿರುವುದಕ್ಕೆ ಯಾರಿಗಾದರೂ ಇಲ್ಲಿನ ಅವ್ಯವಹಾರ ತಿಳಿಯುತ್ತದೆ. ಹೀಗೆ ಈ ಪುಸ್ತಕದಲ್ಲಿ (ಪುಟಸಂಖ್ಯೆ 202-215) ಹಲವಾರು ಭ್ರಷ್ಟಾಚಾರದ ಮಾಹಿತಿಗಳನ್ನು ನೀಡಲಾಗಿದೆ. ಇದನ್ನು ಯಾವ ಮಾಧ್ಯಮವೂ ಇಲ್ಲಿಯವರೆಗೆ ಚರ್ಚೆಗಾಗಲಿ, ವರದಿಯಾಗಿ ಆಗಲಿ ಮಾಡದಿರುವುದು ಮಾಧ್ಯಮಗಳನ್ನೆ ಹಿಡಿತದಲ್ಲಿ ಇಟ್ಟಿದೆ. ಇದು ಈ ಸರ್ಕಾರದ ಕರ‍್ಯಸೂಚಿಗಳಲ್ಲಿ ಒಂದಾಗಿದೆ ಎಂಬುದನ್ನು ಲತಾಮಾಲ ಅವರು ವಿವರಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಒಡಕು ಮೂಡುವಂತೆ ಮಾಡುವ ಚಟುವಟಿಕೆಗಳನ್ನು ಮಾಡುವುದು. ರಾಜ್ಯಗಳ ನಡುವೆ ತಾರತಮ್ಯ ಎಸಗುವುದು. ಜಿ.ಎಸ್.ಟಿ. ಮೂಲಕ ಜನರ ತೆರಿಗೆಯನ್ನು ಪಡೆಯುವುದು ಅದನ್ನು ತಮ್ಮ ಸರ್ಕಾರಗಳಿರುವ ರಾಜ್ಯಗಳಿಗೆ ಹೆಚ್ಚಿನ ಕೊಡುಗೆ ನೀಡುವುದು ಸೋದಾಹರಣವಾಗಿ ದಾಖಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ, ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ತೋರುವ ತರಾತುರಿ ಮುಂತಾದವುಗಳನ್ನು ವಿವರಿಸಿದ್ದಾರೆ. ಬಂಡವಾಳಶಾಹಿಗಳು ಅಭಿವೃದ್ಧಿಗೆ ಬಡವರನ್ನು ಬಲಿಕೊಡುವ ನೀತಿಯನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಮುಸ್ಲಿಂರ ವಿರುದ್ಧದ ದ್ವೇಷವನ್ನು ಜನರಿಗೆ ತೋರುತ್ತಾ ಹತ್ತು ಹಲವು ಭ್ರಷ್ಟಾಚಾರದಲ್ಲಿ ಸರ್ಕಾರ ತೊಡಗಿರುವುದನ್ನು ದಾಖಲಿಸಿದೆ.

ಈ ಕೃತಿ ವ್ಯವಸ್ಥಿತ ರೀತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿ, ಕ್ರೋಢೀಕರಿಸಿ ನೀಡಿದೆ. ಇದಕ್ಕೆ ಸಂಶೋಧನಾತ್ಮಕವಾಗಿ ಎಲ್ಲ ಮಾಹಿತಿಗೂ ಅಡಿಟಿಪ್ಪಣಿಗಳನ್ನು ನೀಡಿ ಮಾಹಿತಿಯನ್ನು ಅಧಿಕೃತಗೊಳಿಸಿದೆ. ಅನಿಸಿದ್ದನ್ನು ಹೇಳದೆ ದಾಖಲೆಗಳ ಸಮೇತ ಮಂಡಿಸಿದೆ. ಇದರಿಂದಾಗಿ ಇದಕ್ಕೆ ಅಧಿಕೃತತೆ ಲಭ್ಯವಾಗಿದೆ.

ಒಟ್ಟಾರೆ ಜನರ ಮನಸ್ಸಿಗೆ ಮಂಕುಬೂದಿ ಎರಚಿ ಸತ್ಯಸಂಧರಂತೆ ತೋರುವ ಮತ್ತು ವಿಶ್ವ ಮೆಚ್ಚುವ ನಾಯಕರೆಂದು ಬಿಂಬಿಸುತ್ತಾ ಭಾರತದ ಬಡವರ ಹಣವನ್ನು ಶ್ರೀಮಂತರ ಬಾಯಿಗೆ ಹಾಕುವ ಮತ್ತು ದುಡಿಯುವ ವರ್ಗ ದುಡಿಯುತ್ತಲೇ ತಮ್ಮ ಆರೋಗ್ಯ ಮತ್ತು ಪೌಷ್ಠಿಕತೆಯಿಂದ ವಂಚನೆಗೆ ಒಳಗಾಗುತ್ತಿದ್ದಾರೆ. ಸತ್ಯವನ್ನು ಹೇಳಲು ಯಾರೂ ಹೆದರಬೇಕಾಗಿಲ್ಲ ಮತ್ತು ಜನರನ್ನು ಸುಳ್ಳಿನ ಮಿತ್ ಗಳಲ್ಲಿ ಕಟ್ಟಿ ಹಾಕುವಾಗ ಅದರಿಂದ ಜನಸಾಮಾನ್ಯರನ್ನು ರಕ್ಷಿಸುವ ಕೆಲಸ ಮಾಡುವುದು ಎಲ್ಲರ ಕೆಲಸವಾಗಿದೆ ಎಂಬುದು ಇವರ ದೃಢವಾದ ನಂಬಿಕೆಯಾಗಿದೆ. ಭಾರತ ಸಂವಿಧಾನ ಉಳಿಸಲು ಮಾಡಿರುವ ಇವರ ಪ್ರಯತ್ನಕ್ಕೆ ನಾವೆಲ್ಲ ಶ್ಲಾಘಿಸಬೇಕಾಗುತ್ತದೆ.

ಪ್ರೊ.ಆರ್.ಸುನಂದಮ್ಮ
ನಿವೃತ್ತ ಪ್ರಾಧ್ಯಾಪಕರು.

MORE FEATURES

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...

ಸುಲಭವಾಗಿ ಓದಿಸಿಕೊಂಡು ಹೋಗುವ ಕೃತಿ `ರಾಮಾಯಣ ಪರೀಕ್ಷಣಂ' 

31-12-1899 ಬೆಂಗಳೂರು

"ಶ್ರೀರಾಮನು ವಾಲಿಯ ಸಂಹಾರ ಮಾಡಿ ಸುಗ್ರೀವನನ್ನು ರಾಜನನ್ನಾಗಿ ಮಾಡಿದ ಕಥೆ ನಮಗೆಲ್ಲಾ ಗೊತ್ತಿರುವುದೇ. ಇಲ್ಲಿ ವಾಲಿ...