ಕಥಾವೃಕ್ಷದಲ್ಲಿ ಮೈದಳೆದ ಕಾವ್ಯಫಲ


ಕಾವ್ಯಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕವಯತ್ರಿ ಜ.ನಾ. ತೇಜಶ್ರೀ ಅವರು ‘ಬೆಳ್ಳಿಮೈ ಹುಳ’ ಬರೆಯುವ ಮೂಲಕ ಕಥಾ ವಲಯವನ್ನು ಪ್ರವೇಶಿಸಿದ್ದಾರೆ. ಈ ಕೃತಿಗೆ ಲೇಖಕ ಚ.ಹ. ರಘುನಾಥ ಅವರು ಬರೆದ ಮುನ್ನುಡಿ ಇಲ್ಲಿದೆ;

ಕಾವ್ಯಕ್ಕೆ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೆತ್ತುಕೊಂಡಿರುವ ತೇಜಶ್ರೀ ಅವರು ಕಥಾಸಂಕಲನ ಪ್ರಕಟಣೆಯ ಮಾತನಾಡಿದಾಗ ಖುಷಿಯೆನ್ನಿಸಿತು, ಅಚ್ಚರಿಯೂ. ಬರಹಗಾರನೊಬ್ಬ ಈಗಾಗಲೇ ತಾನು ಗುರ್ತಿಸಿಕೊಂಡ ಪ್ರಕಾರದಿಂದ ಮತ್ತೊಂದು ಪ್ರಕಾರಕ್ಕೆ ಕಣ್ಣು-ಮನಸ್ಸು ಹೊರಳಿದಾಗ, ಹೊಸ ಪಾತ್ರದ ನಿರ್ವಹಣೆಯ ಬಗ್ಗೆ ಸಹಜವಾಗಿಯೇ ಉಂಟಾಗುವ ಕುತೂಹಲ ಖುಷಿಗೆ ಕಾರಣ. ಅಚ್ಚರಿಯ ಪ್ರಶ್ನೆ, ಕಾವ್ಯದಿಂದ ದೊರೆಯದ ಏನನ್ನು ಕಥೆಗಳ ಮೂಲಕ ತೇಜಶ್ರೀ ಹುಡುಕುತ್ತಿದ್ದಾರೆ ಎನ್ನುವುದು? ಈ ಮಿಶ್ರಭಾವಗಳೊಂದಿಗೆ ‘ಬೆಳ್ಳಿಮೈ ಹುಳ’ ಸಂಕಲನದ ಕಥೆಗಳಿಗೆ ತೆರೆದುಕೊಳ್ಳುವ ಪ್ರಯತ್ನ ನಡೆಸಿದಾಗ ಅಲ್ಲಿ ಎದುರಾದುದು ಕವಿತೆಯೇ. ಅಪ್ಪಟ ಕವಿಯೊಬ್ಬನಿಗೆ ಕಾವ್ಯದ ಹೊರತಾಗಿ ಬೇರೊಂದನ್ನು ಬರೆಯುವುದು ಸಾಧ್ಯವೆ?

ತೇಜಶ್ರೀ ಅವರ ಕಥೆಗಳಲ್ಲಿ ಕವಿತೆ ಕಾಣಿಸುತ್ತಿದೆ ಎಂದು ಹೇಳಲಿಕ್ಕೆ, ಬರವಣಿಗೆಯೊಂದನ್ನು ಯಾವ ಹೆಸರಿನಿಂದ ಕರೆದರೂ ಅದು ಕಲಾಕೃತಿಯಾದ ಪಕ್ಷದಲ್ಲಿ ಕಾವ್ಯವೇ ಆಗಿರುತ್ತದೆ ಎನ್ನುವ ನಂಬಿಕೆ ಕಾರಣ. ಯಾವ ಒಳ್ಳೆಯ ಕಥೆಯನ್ನೇ ಗಮನಿಸಿ ನೋಡಿ: ಅದು ತನ್ನ ಶಿಲ್ಪದಲ್ಲಿ, ಅರ್ಥಗಳನ್ನು ಬಿಟ್ಟುಕೊಡುವ ಮಾಂತ್ರಿಕತೆಯಲ್ಲಿ ಕಾವ್ಯವೇ ಆಗಿರುತ್ತದೆ. ಇನ್ನೂ ಸರಳವಾಗಿ ಹೇಳುವುದಾದರೆ, ಅತ್ಯುತ್ತಮ ಗದ್ಯ ಪದ್ಯವೂ ಆಗಿರುತ್ತದೆ, ಆಗಿರಬೇಕು. ಈ ನಂಬಿಕೆಯ ಕಾರಣದಿಂದಲೇ ತೇಜಶ್ರೀ ಅವರು ಕಥೆಯ ಮೂಲಕ ಕವಿತೆಯನ್ನೇ ಕಟ್ಟುತ್ತಿದ್ದಾರೆ ಅನ್ನಿಸುತ್ತಿರುವುದು.

ಕಥೆ ಮತ್ತು ಕಾವ್ಯದ ನಡುವಿನ ಗೆರೆ ಇದ್ದೂ ಇಲ್ಲದಂತಿರುವುದಕ್ಕೆ ಉತ್ತಮ ಉದಾಹರಣೆ ಸಂಕಲನದ ಶೀರ್ಷಿಕೆ ಕಥೆ - ‘ಬೆಳ್ಳಿಮೈ ಹುಳ’. ಇದು ಕಥೆಗಾರ್ತಿಯ ಕನಸು ಕನವರಿಕೆಗಳನ್ನೆಲ್ಲ ಪೂರ್ಣ ಪ್ರಮಾಣದಲ್ಲಿ ಬಸಿದುಕೊಂಡಿರುವ ಕಥೆ; ಬರೆಯುವ ನೆಪದಲ್ಲಿ ಬರಹಗಾರನೊಬ್ಬ ತನ್ನೊಳಗನ್ನು ತಾನು ತಡಕಿಕೊಂಡಂತೆ, ಲೋಕವನ್ನು ಮುಟ್ಟಿ ನೋಡಿದಂತೆ ಇರುವ ಕಥೆ. ಜಾನಕಿ ಎನ್ನುವ ಹೆಣ್ಣುಮಗಳನ್ನು ಕೇಂದ್ರವನ್ನಾಗಿಸಿಕೊಂಡು ನಡೆಯುವ ಈ ಕಥೆಯ ಹರಹು ಎಷ್ಟು ವಿಸ್ತಾರವಾಗಿದೆಯೆಂದರೆ, ಒಂದಲ್ಲಾ ಒಂದು ಬಗೆಯಲ್ಲಿ ಓದುಗ ಈ ಕಥೆಯಲ್ಲಿ ತನ್ನನ್ನು ಗುರ್ತಿಸಿಕೊಳ್ಳದಿರುವುದು ಕಷ್ಟ. ಜಾನಕಿ ಎನ್ನುವ ಹೆಣ್ಣುಮಗಳ ಅಮಾಯಕತೆಯನ್ನು ದೈನಿಕದ ಕಾಠಿಣ್ಯ ಗಾಸಿಗೊಳಿಸುತ್ತಾ ಹೋಗುವ ಕಥೆಯಿದು. ಅಪ್ಪನ ಕ್ರೌರ್ಯ, ಅಮ್ಮನ ಮುಗ್ಧತೆ, ಮನೆಯಾಚೆಗೆ ಎದುರಾಗುವ ಜಾತೀಯತೆ, ಅಜ್ಜಿಯ ಸಾವು – ಇವೆಲ್ಲ ಜಾನಕಿಯ ಮುಗ್ಧತೆಯನ್ನು ಇಲ್ಲವಾಗಿಸುತ್ತ ಅವಳನ್ನು ಕಠಿಣಗೊಳಿಸುತ್ತಾ ಹೋಗುತ್ತವೆ.

ನಮ್ಮ ಮಧ್ಯಮವರ್ಗದ ಬಹುತೇಕ ಕುಟುಂಬಗಳಲ್ಲಿನ ಪೊಳ್ಳು ಪ್ರಭಾವಳಿ ‘ಬೆಳ್ಳಿಮೈ ಹುಳ’ ಕಥೆಯಲ್ಲೂ ಕಾಣಿಸುತ್ತದೆ. ಪ್ರಗತಿಪರನಂತೆ ಮಾತನಾಡುವ ವೆಂಕಟರಮಣ ಮನೆಯೊಳಗೆ ಹಿಟ್ಲರ್. ಸರಸ ಗಂಡನಿಗೆ ಎದುರಾಡದ ಸಾಧು. ಜಾನಕಿಗೆ ಅಪ್ಪನ ನಡವಳಿಕೆ ಸರಿಕಾಣದೆ ಹೋದರೂ ಮಾತನಾಡುವ ಧೈರ್ಯವಿಲ್ಲದವಳು. ‘ಅದೇನು ಬೈಯಬೇಕೋ ಜೋರಾಗೆ ಬೈಯಿ, ಆದದ್ದಾಗುತ್ತೆ, ನಾನು ನಿನ್ನ ಜೊತೆಗಿರ್ತಿನಿ’ ಎಂದು ಅಮ್ಮನನ್ನು ಪುಸಲಾಯಿಸಿದರೂ ಆಂತರ್ಯದಲ್ಲಿ ಅಪ್ಪನ ಕುರಿತು ಅವಳೂ ಭಯಗ್ರಸ್ತಳೇ. ಕಥೆ ಆರಂಭವಾಗುವುದು ಜಾನಕಿಗೆ ಅಪ್ಪನ ಪುಸ್ತಕವೊಂದರಲ್ಲಿ ಸಿಗುವ ಕಾಗದದೊಂದಿಗೆ. ‘ವೆಂಕಟರಮಣನಿಗೆ, ನೀವೆಲ್ಲ ಆರೋಗ್ಯವೆಂದು ಭಾವಿಸುತ್ತೇವೆ. ನಿನ್ನ ಕೆಲಸ ಹೇಗೆ ನಡೆದಿದೆ ತಿಳಿಸುವುದು. ಚಿ.ಸೌ.ಜಮೀಲಳಿಗೂ, ಚಿ. ರಕ್ಷಿತ ಮತ್ತು ಚಿ. ಚೇತನಗೂ ನಮ್ಮ ನಮಸ್ಕಾರ ತಿಳಿಸುವುದು...’ ಎನ್ನುವ ಕಾಗದವನ್ನು ಜಾನಕಿ ಪೂರ್ಣ ಓದುವುದೂ ಇಲ್ಲ. ಪತ್ರದಲ್ಲಿನ ವಿಷಯಕ್ಕಿಂತಲೂ ಕಾಗದದ ಮೇಲೆ ಏಕಾಏಕಿ ಹರಿದುಬಂದ ಬೆಳ್ಳಿಮೈ ಹುಳವೇ ಅವಳನ್ನು ಹೆಚ್ಚು ಸೆಳೆಯುತ್ತದೆ. ಆ ಹುಳವನ್ನು ನೋಡಿ ಗಾಬರಿಯಲ್ಲಿ ಕಿರುಚಬೇಕೆನ್ನಿಸಿದರೂ ಅವಳಿಗೆ ಸಾಧ್ಯವಾಗುವುದಿಲ್ಲ. ಹಿಂದೊಮ್ಮೆ ಅಡುಗೆಮನೆಯಲ್ಲಿ ಪಾತ್ರೆ ಎತ್ತಿಹಾಕಿದ ಸದ್ದು ಕಿವಿಗೆ ಬಿದ್ದಾಗ, ಅಪ್ಪ ಅಮ್ಮನ ಬೆನ್ನಿಗೆ ಗುದ್ದಿದ್ದು ಜಾನಕಿಯ ಬಾಯಿಯನ್ನು ಕಟ್ಟಿಹಾಕಿದೆ. ಗೊಂದಲದಲ್ಲಿ ಅವಳು ರಪ್ಪೆಂದು ಪುಸ್ತಕ ಮುಚ್ಚಿದಾಗ ಹುಳು ಅಪ್ಪಚ್ಚಿಯಾಗುತ್ತದೆ. ಅಪ್ಪಚ್ಚಿಯಾಗುವುದು ಹುಳುವೋ ಜಾನಕಿ ಅಥವ ಅವಳ ಅಮ್ಮನ ಬದುಕೋ ಎನ್ನುವ ಪ್ರಶ್ನೆಯನ್ನು ಕಥೆ ಉದ್ದಕ್ಕೂ ಓದುಗರಿಗೊಡ್ಡುತ್ತಲೇ ಹೋಗುತ್ತದೆ.

ಸರಸ ಹಾಗೂ ಜಾನಕಿಯ ಮೌನ ಕೊನೆಗೊಳ್ಳುವುದು, ಪತ್ರದಲ್ಲಿನ ಪಾತ್ರಗಳು ಜೀವಂತವಾಗುವುದರೊಂದಿಗೆ. ವೆಂಕಟರಮಣನ ಮೊದಲ ಸಂಬಂಧದ ಮಗಳು ಹಾಗೂ ಅಳಿಯ ಪ್ರತ್ಯಕ್ಷವಾಗುವುದರೊಂದಿಗೆ ಜಾನಕಿಯ ಭಯವೂ ಮಾಯವಾಗುತ್ತದೆ. ‘ನೀವು ಮಾಡುತ್ತಿರೋದು ತಪ್ಪು. ಮನುಷ್ಯರನ್ನ ನಡೆಸಿಕೊಳ್ಳೋ ರೀತಿ ಇದಲ್ಲ’ ಎಂದು ಹೇಳುತ್ತಾಳೆ. ಅಂದು ರಾತ್ರಿ ಜಾನಕಿ ಬಾವಿಗೆ ಮುಖವೊಡ್ಡಿ ಮಾತನಾಡುತ್ತಾಳೆ. ವೆಂಕಟರಮಣನಿಗೂ ಆ ರಾತ್ರಿ ಎಂದಿನಂತಿಲ್ಲ. ಜಾನಕಿಯ ಪ್ರಶ್ನೆ ಅವನ ನಿದ್ದೆಯನ್ನು ಕಸಿದುಕೊಂಡಿದೆ, ಮೊದಲ ಸಂಸಾರವನ್ನು ನೆನಪಿಸುತ್ತದೆ. ಜಮೀಲಾಳೊಂದಿಗಿನ ನಾಲ್ಕು ವರ್ಷಗಳ ಸಂಸಾರದಲ್ಲಿ ಎರಡು ಮಕ್ಕಳನ್ನು ಪಡೆದಿರುವ ಅವನು, ಹೆಂಡತಿ-ಮಕ್ಕಳ ಹೊಟ್ಟೆ ತುಂಬಿಸಲು ಒದ್ದಾಡುತ್ತಿದ್ದಾನೆ. ಕೊನೆಗೊಂದು ದಿನ ಜಮೀಲಾ - ‘ಬದುಕೋಕೆ ದುಡ್ಡು ಬೇಕು...ನಿನ್ನ ಆದರ್ಶ ಗೀದರ್ಶ ಎಲ್ಲ ಆಮೇಲೆ...ತಾಕತ್ತಿಲ್ಲದ ಗಂಡಸು ನೀನು... ನನಗೂ ಸ್ವಾತಂತ್ರ್ಯ ಇದೆ, ನನ್ನದೇ ಬದುಕಿದೆ, ಆಸೆಗಳಿವೆ. ಇದೆಲ್ಲ ಸಾಕು ಅನ್ನಿಸಿದೆ ನಂಗೆ. ನಿನ್ನ ಮಕ್ಕಳನ್ನ ನೀನೇ ಸಾಕ್ಕೋ...’ ಎಂದು ರಾತ್ರೋರಾತ್ರಿ ಮನೆಬಿಟ್ಟು ಹೊರಟುಹೋಗಿದ್ದಾಳೆ. ಮಕ್ಕಳನ್ನು ಜಮೀಲಾಳ ತಾಯಿ ಉಳಿಸಿಕೊಂಡಿದ್ದಾಳೆ. ತನ್ನ ಗತ ಸಂಬಂಧದ ತಳಮಳಗಳಿಂದ ಪಾರಾಗಲು ವೆಂಕಟರಮಣ ಸರಸಳ ದೇಹ ಬಳಸಿಕೊಳ್ಳುತ್ತಾನೆ. ಆಗಲೂ ಮೌನವಾಗಿರುವ ಸರಸ ಸ್ಫೋಟಿಸುವುದು ತನ್ನ ಸಖಿಯಂತಿದ್ದ ಸಿಲ್ಕಿ ಎನ್ನುವ ನಾಯಿಯ ಸಾವಿನ ಸಂದರ್ಭದಲ್ಲಿ. ‘ನಿನ್ನೆ ಜಾನಕಿ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ. ಯಾವ ಸತ್ಯದಿಂದ ಯಾರಿಗೂ ಸುಖವಿಲ್ಲವೋ ಆ ಸತ್ಯಗಳು ಕತ್ತಲಲ್ಲಿದ್ದರೇ ಒಳ್ಳೇದು. ಆದರ್ಶವು ರೋಗವಾದರೆ ಹೀಗೇ ಆಗೋದು...’ ಎಂದು ಗಂಡನ ಆತ್ಮಸಾಕ್ಷಿ ಚುಚ್ಚುತ್ತಾಳೆ. ಮತ್ತೆ ವೆಂಕಟರಮಣನ ಗಂಡಸುತನ ಜಾಗೃತಗೊಂಡು, ಪೆಟ್ಟು ತಿಂದ ಸರಸ ಪ್ರಜ್ಞೆ ತಪ್ಪುತ್ತಾಳೆ. ಎಚ್ಚರವಾದಾಗ ತೋಳುಗಳನ್ನು ಹಿಡಿದು ಎತ್ತಲು ಬರುವ ಗಂಡನ ಕೈಯನ್ನು ನೂಕುತ್ತಾಳೆ. ವೆಂಕಟರಮಣನಿಗೆ ತಬ್ಬಿಬ್ಬು. ಸರಸಳೋ ಗಂಡನಿಂದ ಪೆಟ್ಟುತಿಂದು ಕಿವುಡಾಗಿದ್ದಾಳೆ. ಇತ್ತ ಜಾನಕಿ, ತಾನು ಓದುವ ಬರೆಯುವ ಕಥೆ-ಕವಿತೆಗಳಲ್ಲಿ ಹುದುಗಿಕೊಂಡು, ತನ್ನೆಲ್ಲ ನೋವುಗಳು ಹೊಳೆಯುವ, ಬಣ್ಣಬಣ್ಣದ ಬೆಳ್ಳಿಮೈ ಹುಳವಾಗಿ ಅಕ್ಷರಗಳಲ್ಲಿ ಮೈ ಪಡೆಯುವುದನ್ನು ನೋಡುವ ಪುಳಕ ಅನುಭವಿಸುತ್ತಾಳೆ ಎನ್ನುವುದರೊಂದಿಗೆ ಕಥೆ ಮುಗಿಯುತ್ತದೆ.

ಸರಸ ಮತ್ತು ಜಾನಕಿಯ ಮನಸ್ಸಿನ ಹೊಯ್ದಾಟಗಳ ಬಿಡುಗಡೆಯ ರೂಪದಲ್ಲಿ ಕಥೆಗಾರ್ತಿ ಸಿಲ್ಕಿ ಎನ್ನುವ ನಾಯಿ, ಬಾವಿ ಮತ್ತು ಬೆಳ್ಳಿಮೈ ಹುಳಗಳನ್ನು ರೂಪಕಗಳಾಗಿ ಬಳಸುತ್ತಾರೆ. ಸಿಲ್ಕಿಗೆ ಇಂಗ್ಲಿಷ್ ಚೆನ್ನಾಗಿ ಅರ್ಥವಾಗುವುದು ಕೂಡ ಬಿಡುಗಡೆಯ ಕಂಡಿಯಂತೆಯೇ ಕಾಣ ಸುತ್ತದೆ. ಮನೆಯಲ್ಲಿನ ಉಸಿರುಗಟ್ಟಿಸುವ ಶಿಸ್ತನ್ನು ಸಿಲ್ಕಿ ಮುರಿಯುತ್ತದೆ

‘ಬೆಳ್ಳಿಮೈಹುಳ’ದಂತೆ ‘ಕುದಿಬಂದು’ ಕಥೆಯಲ್ಲಿಯೂ ಹೆಣ್ಣುಮಕ್ಕಳ ಒಳತೋಟಿಯ ರೂಪದಲ್ಲಿ ಪ್ರಾಣಿಗಳ ಚಿತ್ರಣವಿದೆ. ತಾನು ನೋಡಲು ಹೋದ ಮಗು ಚಿಪ್ಸನ್ನು ಸಶಬ್ದದೊಂದಿಗೆ ತಿನ್ನುವಾಗ ನಿರೂಪಕಿಗೆ ಇಲಿಯೊಂದು ನೆನಪಾಗುತ್ತದೆ. ಶೆಡ್ಡಿನ ಕಬ್ಬಿಣದ ಸರಳುಗಳ ಸಂದಿನಿಂದ ತೂರಿಬಂದ ಇಲಿಯನ್ನು ಸಾಯಿಸಬಾರದೆಂದು ಹೆಂಡತಿ, ಕೊಲ್ಲಬೇಕೆಂದು ಗಂಡ ಮಾತು ಬೆಳೆಸುತ್ತಾರೆ; ಗಂಡುಹೆಣ್ಣಿನ ಸ್ವಭಾವಗಳನ್ನು ಸೂಚಿಸುವಂತೆ. ವಿಕ್ಷಿಪ್ತ ವರ್ತನೆಯ ಹೆಣ್ಣುಮಗಳನ್ನು ಭೇಟಿಯಾದಾಗ ನಿರೂಪಕಿಗೆ ಆ ಇಲಿ ಮತ್ತೆ ನೆನಪಾಗುತ್ತದೆ. ಪ್ರಾಣ -ಪಕ್ಷಿಗಳ ಬಗ್ಗೆ ಕಾಳಜಿ ಮಾಡುವ ಹುಡುಗಿ, ಬಚ್ಚಲು ಮನೆಯಲ್ಲಿ ಇದ್ದಿರಬಹುದಾದ ಇಲಿಗೆ ಹೆದರಿಕೊಂಡು ಕೂತಿದ್ದಾಳೆ. ಇಲ್ಲೆಲ್ಲೂ ಇಲಿ ಇಲ್ಲವೆಂದು ಹುಡುಗಿಗೆ ಮನದಟ್ಟು ಮಾಡಿಸಿದಾಗ ಅವಳು ‘ಅಮ್ಮ’ ಎನ್ನುತ್ತಾಳೆ. ಆ ಅಮ್ಮ ಒಲೆಯ ಬೆಂಕಿ ಆಕಸ್ಮಿಕವಾಗಿ ತಗುಲಿ ಅದರಿಂದ ಪಾರಾಗಲಾಗದೆ, ಎದುರಿನ ಗೋಡೆಯನ್ನು ಆತುಕೊಂಡು ಕರಕಲಾಗಿದ್ದಾಳೆ. ಆ ನತದೃಷ್ಟ ತಾಯಿಯ ಮಗಳ ‘ಅಮ್ಮ! ಇಲಿ...’ ಎನ್ನುವ ಉದ್ಗಾರ ಸೂಚಿಸುವುದು ಏನನ್ನು? ಸಾವಿನ ಭೀಕರತೆಯನ್ನೇ. ಆ ಹೆಣ್ಣುಮಗಳಿಗೆ ಸಮಾಧಾನ ಹೇಳುತ್ತ ಹೇಳುತ್ತ ನಿರೂಪಕಿಗೆ ಗಂಟಲ ಸಂಕಟ ಕುದಿಗೆ ಬರುವುದರೊಂದಿಗೆ ಕಥೆ ಮುಗಿಯುತ್ತದೆ. ಇಲಿ, ನಾಯಿ, ‘ಕಫ್ರ್ಯೂ’ ಕಥೆಯಲ್ಲಿನ ಬೆಕ್ಕು ಅಥವಾ ಬೆಳ್ಳಿಮೈ ಹುಳಗಳ ಸಾವು ಬೆಟ್ಟು ಮಾಡುತ್ತಿರುವುದೇನು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲವಷ್ಟೆ.

‘ಬೇಟೆ’ ಸಂಕಲನದ ವಿಶಿಷ್ಟ ಕಥೆಗಳಲ್ಲೊಂದು. ಇಲ್ಲಿನ ಬೇಟೆಗೆ ಬೇರೆ ಬೇರೆ ಸ್ವರೂಪಗಳಿವೆ. ಊರಿನಲ್ಲಿನ ಸುಗ್ಗಿ ಉತ್ಸವದಲ್ಲಿ, ಮೊಮ್ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡ ದೊಡ್ಡಯ್ಯನ ಎದುರು ಬೇಟೆಯ ಪ್ರಸಂಗವೊಂದು ನಡೆಯುತ್ತದೆ. ಕೊಲ್ಲಲು ಉರವಣಿಸಿ ಬಂದ ಬೇಟೆಗಾರರ ಚಕ್ರವ್ಯೂಹದ ನಡುವಿನಿಂದ ಕಡವೆ ತಪ್ಪಿಸಿಕೊಳ್ಳುತ್ತದೆ. ಆದರೆ, ದೊಡ್ಡಯ್ಯನಿಗೆ ನಿಜ ಜೀವನದಲ್ಲಿ ಪಾರಾಗುವ ಅವಕಾಶವಿಲ್ಲ. ಏಕೆಂದರೆ ಬೇಟೆಗಾರನ ಪೋಷಾಕಿನಲ್ಲಿ ಎದುರಿಗೆ ನಿಂತಿರುವುದು ಕರುಳಕುಡಿ. ಆಸ್ತಿ ಕಾರಣಕ್ಕಾಗಿ ನಡೆಯುವ ಜಗಳದಲ್ಲಿ ಮಗನಿಂದ ಪೆಟ್ಟು ತಿಂದು ದೊಡ್ಡಯ್ಯ ಆಸ್ಪತ್ರೆ ಸೇರುತ್ತಾನೆ. ಆಸ್ಪತ್ರೆಯಲ್ಲಿ, ಹೆಂಡತಿ ಅವ್ವಕ್ಕನ ಆರೈಕೆಯ ನೆಳಲಲ್ಲಿ, ದೊಡ್ಡಯ್ಯ ತಾನು ನಡೆದುಬಂದ ದಿನಗಳನ್ನು ಮೆಲುಕು ಹಾಕುತ್ತಾನೆ. ಅವ್ವಕ್ಕನಿಗೆ ಕೂಡ ನೆನಪುಗಳು ಉಕ್ಕಿಬರುತ್ತವೆ. ಎಳೆಯ ವಯಸ್ಸಿನಲ್ಲಿ ಬಿಟ್ಟು ಬಂದ ಊರಿನಲ್ಲಿನ ಜಲಧಾರೆಯ ಭೋರ್ಗರೆತ ಅವಳ ಕಿವಿಗಳಲ್ಲಿ ಅನುರಣಿಸ ತೊಡಗುತ್ತದೆ. ಮೋಜು, ಮಾಂಸ, ಆಸ್ತಿಯ ಕಾರಣಕ್ಕಾಗಿ ನಡೆಯುವ ಬೇಟೆಯ ಪ್ರಕ್ರಿಯೆಯಲ್ಲಿ, ನೆನಪುಗಳು ಕೂಡ ಬೇಟೆಗಾರನ ಪೋಷಾಕಿನಲ್ಲಿ ಕಾಡಬಲ್ಲವಷ್ಟೇ. ಮನುಷ್ಯ ತನ್ನ ಬದುಕಿನುದ್ದಕ್ಕೂ ಒಂದಲ್ಲಾ ಒಂದು ಬಗೆಯಲ್ಲಿ ಬೇಟೆಗಾರನ ಅಥವಾ ಮಿಕದ ರೂಪವನ್ನು ಸಂದರ್ಭಕ್ಕನುಸಾರವಾಗಿ ಧರಿಸಬೇಕಾಗುತ್ತದೆ ಎನ್ನುವುದನ್ನು ಕಥೆ ಧ್ವನಿಪೂರ್ಣವಾಗಿ ಚಿತ್ರಿಸುತ್ತದೆ.

ತೇಜಶ್ರೀ ಅವರ ಕಥೆಗಳಲ್ಲಿ ಪ್ರಾಣಿಗಳಂತೆ ಪುನರಾವರ್ತನೆಗೊಳ್ಳುವ ಮತ್ತೊಂದು ರೂಪಕ ಆಸ್ಪತ್ರೆ. ಅನಾರೋಗ್ಯದಿಂದ ಆಸ್ಪತ್ರೆಯೊಳಗೆ ಮಲಗಿರುವ ಪಾತ್ರಗಳು, ಹೊರಗಿನ ಸಮಾಜದ ಆರೋಗ್ಯದ ಬಗ್ಗೆ ಕಳವಳಗೊಳ್ಳುತ್ತವೆ. ಇದಕ್ಕೆ ಉದಾಹರಣೆಯಾಗಿ, ‘ಕಫ್ರ್ಯೂ’ ಕಥೆಯನ್ನು ಗಮನಿಸಬಹುದು. ವಾರದ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಆಗ್ನೆಸ್ ಎನ್ನುವ ಹೆಣ್ಣುಮಗಳು ತಪಾಸಣೆಗಾಗಿ ವೈದ್ಯರ ಬಳಿಗೆ ಬಂದಿದ್ದಾಳೆ. ಶಸ್ತ್ರಚಿಕಿತ್ಸೆಯಾದ ಗಾಯದ ಸ್ಥಳದಲ್ಲಿ ಬೆಳೆದ ಅನಗತ್ಯ ಚರ್ಮವನ್ನು ಕತ್ತರಿಸಿ ತೆಗೆಯಬೇಕೆಂದು ಆಗ್ನೆಸ್‍ಳನ್ನು ಆಪರೇಷನ್ ಥಿಯೇಟರ್‍ಗೆ ಕಳುಹಿಸಲಾಗಿದೆ. ಡಾಕ್ಟರ್ ನಿರೀಕ್ಷೆಯಲ್ಲಿ ಮಲಗಿರುವ ಆಗ್ನೆಸ್‍ಳ ಕಿವಿಗೆ ಪಕ್ಕದ ಕ್ಯಾಬಿನ್‍ಗಳಲ್ಲಿನ ನೋವಿನ ಸ್ವರಗಳು ಬೀಳುತ್ತವೆ. ಇಂಜೆಕ್ಷನ್ ಚುಚ್ಚಿಸಿಕೊಳ್ಳಲು ಹೆದರಿ ಗಲಾಟೆ ಮಾಡುತ್ತಿರುವ ಹೆಣ್ಣುಮಗಳು, ಕಾಲು ತಿರುಚಿಕೊಂಡಿರುವ ಮಗು, ಕಾಲುನೋವಿನ ಅಜ್ಜಿ, ಹೀಗೆ ಒಬ್ಬೊಬ್ಬರದು ಒಂದೊಂದು ಯಾತನೆ. ಆಸ್ಪತ್ರೆಯ ಆವರಣದೊಳಗೆ ಕೂತು, ತನ್ನ ನೋವನ್ನು ಮರೆತು, ಉಳಿದವರ ಸಂಕಟಗಳಿಗೆ ಪ್ರೇಕ್ಷಕಳಾದ ಆಗ್ನೆಸ್‍ಗೆ ಅಮ್ಮನ ಮನೆಯಲ್ಲಿನ ಬೆಕ್ಕು ನೆನಪಾಗುತ್ತದೆ. ‘ಬೇಟೆ’ ಕಥೆಯ ಅವ್ವಕ್ಕ ತನ್ನೂರಿನ ಜಲಪಾತದ ಮೊರೆತದಿಂದ ಕಂಗೆಡುವಂತೆ, ಅಗ್ನೆಸ್‍ಳನ್ನು ಅವಳ ನೆನಪುಗಳಲ್ಲಿರುವ ಅನಾರೋಗ್ಯಕ್ಕೆ ತುತ್ತಾದ ಬೆಕ್ಕಿನ ಅಳು ಕಾಡತೊಡಗುತ್ತದೆ. ಬೆಕ್ಕಿನ ಕಾಯಿಲೆ ಮನೆಯವರಿಗೂ ಸೋಕಬಹುದೆನ್ನುವ ಆತಂಕದಿಂದ ಅದನ್ನು ದೂರದ ಸ್ಥಳಕ್ಕೆ ಬಿಟ್ಟುಬಂದರೆ, ಅದು ವಾಪಸ್ಸು ಬಂದ ಮನೆಯ ಹೊಸ್ತಿಲಲ್ಲೇ ಜೀವ ಬಿಡುತ್ತದೆ. ಆ ಸಂಕಟವೆಲ್ಲ ಮರುಕಳಿಸಿದಂತೆ, ವೈದ್ಯರು ಅನಗತ್ಯ ಚರ್ಮವನ್ನು ಕತ್ತರಿಸಿ ತೆಗೆದಾಗ ಅಸಾಧ್ಯ ನೋವು-ಉರಿಯುಂಟಾದರೂ ಆಗ್ನೆಸ್ ಎಲ್ಲವನ್ನೂ ತುಟ್ಟಿಕಚ್ಚಿ ನುಂಗಿಕೊಳ್ಳುತ್ತಾಳೆ. ಹಾಗೆ ನೋವು ನುಂಗಿಕೊಳ್ಳುವ ಸಂದರ್ಭದಲ್ಲೇ, ಆಪರೇಷನ್ ಆದ ಸಂದರ್ಭದಲ್ಲಿ ಹೀಗೆಯೇ ನೋವು ಅನುಭವಿಸುತ್ತಿದ್ದಾಗ ತನ್ನನ್ನು ನೋಡಲು ಬಂದ ದೊಡ್ಡಪ್ಪ ಹೇಳಿದ ಊರಿನಲ್ಲಿನ ಕೋಮುಗಲಭೆಯ ಘಟನೆ ನೆನಪಾಗುತ್ತದೆ. `ಏನಾಗಿದೆ ಈ ದೇಶಕ್ಕೆ... ಇಲ್ಲಿ ರಾಜಕಾರಣ ಬದುಕ್ತಿರೋದೆ ಜಾತಿಗಳಿಂದ... ಈ ಜನಗಳಿಗೂ ವಿವೇಕ ಇಲ್ಲ...’ ಎನ್ನುವ ದೊಡ್ಡಪ್ಪನ ಮಾತು ನೆನಪಾಗುತ್ತದೆ. ಅಂದು ರಾತ್ರಿ ಜಿಲ್ಲಾಡಳಿತ ಕಫ್ರ್ಯೂ ಹೇರಿದಾಗ, ಆಸ್ಪತ್ರೆ ಕಿಟಕಿಯಲ್ಲಿ ಆಗ್ನೆಸ್ ಕಾಣುತ್ತಿದ್ದ ಚಿತ್ರಗಳೆಲ್ಲ ಒಮ್ಮೆಗೇ ಬದಲಾಗುತ್ತದೆ. ಎಳನೀರು, ಗೋಬಿಮಂಚೂರಿ, ಪಾನಿಪೂರಿ, ದೋಸೆ, ಕಬಾಬ್‍ಗಳ ತಳ್ಳುಗಾಡಿಗಳು, ಜನರ ಗದ್ದಲ, ಎಲ್ಲವೂ ಒಮ್ಮೆಗೇ ಕರಗಿ ಅಸಾಧ್ಯ ಮೌನ ಸೃಷ್ಟಿಯಾಗುತ್ತದೆ. ಬಯಲ ಸಂಕಟ ತನ್ನೊಳಗೂ ಪ್ರವೇಶಿಸಿದಂತೆ ಆಗ್ನೆಸ್‍ಗೆ ಹೊಟ್ಟೆಯಡಿಯಲ್ಲಿ ಉರಿ. ಯಾವ ನೋವು ವೈಯಕ್ತಿಕ? ಯಾವುದು ಸಾರ್ವತ್ರಿಕ?

ಆಸ್ಪತ್ರೆಯ ಆವರಣದಲ್ಲಿ ಹುಟ್ಟು-ಸಾವು, ಸಂಕಟ-ಸಂಭ್ರಮಗಳ ಜಿಜ್ಞಾಸೆಯಲ್ಲಿ ತೊಡಗುವ ಕಥೆ ‘ಕಾಣುವ ಕಣ್ಕಟ್ಟಿಲ್ಲ’. ಬೆನ್ನುನೋವಿನ ಮೂಲವನ್ನು ಹುಡುಕುತ್ತ ನೆನಪುಗಳಿಗೆ ಜಾರುವ ನಿರುಪಮಳಿಗೆ - ಅಬಾರ್ಷನ್ನು, ಹೆರಿಗೆ, ಸಿಜೇರಿಯನ್‍ಗಳಿಂದ ಗಾಸಿಗೊಂಡ ಗರ್ಭಕೋಶದ ಒಳಗೆಲ್ಲ ಗೆಡ್ಡೆಗಳು ಬೆಳೆದು, ಅದನ್ನು ತೆಗೆಯಬೇಕೆಂದು ವೈದ್ಯರು ನಿರ್ಧರಿಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ತನ್ನ ದೇಹದ ಒಂದು ಭಾಗವನ್ನು ಕಳೆದುಕೊಳ್ಳಬೇಕೆಂದು ನೋವಾದರೂ, ಪ್ರತಿ ತಿಂಗಳು ಅನುಭವಿಸುತ್ತಿದ್ದ ನೋವಿಗೆ ಮುಕ್ತಿ ದೊರೆಯುತ್ತದೆ ಎನ್ನುವ ಸಮಾಧಾನವೂ ಅವಳಿಗಿದೆ. ಆಪರೇಷನ್ ಮುಗಿಯುತ್ತದೆ. ನೆನಪುಗಳ ಮೆರವಣಿಗೆ ಮಗನ ಬಸುರಿನ ಸಂದರ್ಭಕ್ಕೆ ಹೊರಳುತ್ತದೆ; ಜೀವ ತಿನ್ನುವ ಬೆನ್ನುನೋವು, ಮಗುವಿನ ತಲೆಯ ಗಾತ್ರ ಬೆಳೆದ ಗೆಡ್ಡೆ. ಪಕ್ಕದ ಹಾಸಿಗೆಯಲ್ಲಿ ಕಾಲು ಮುರಿದುಕೊಂಡ ಲಕ್ಷ್ಮಮ್ಮ ಎನ್ನುವ ಅಜ್ಜಿಯ ಸಂಕಟ. ನಿರುಪಮಳಿಗೆ ತಾರುಣ್ಯದ ದಿನಗಳು ನೆನಪಾಗುತ್ತವೆ. ಲೂನಾ ಚಲಾಯಿಸಲು ಹೋಗಿ ಹುಡುಗರ ಮುಂದೆ ಗಾಡಿ ಆಯತಪ್ಪಿ ಬಿದ್ದು ನಗೆಪಾಟಲಿಗೆ ಗುರಿಯಾದುದು, ದೊಡ್ಡಪ್ಪನ ಊರು, ಮನೆ, ಹೊಳೆ, ನಂಜುಂಡಿ ಕಲ್ಯಾಣ ಸಿನಿಮಾ ದೇವಿ - ತಾರುಣ್ಯವನ್ನು ಪೊರೆದ ಎಷ್ಟೊಂದು ನೆನಪುಗಳು, ತುಂಟಾಟಗಳು. ಅಂಥ ಬೆಚ್ಚಗಿನ ದಿನಗಳಲ್ಲೇ ಒಂದು ರಾತ್ರಿ ಕಾಣಿಸಿಕೊಂಡ ಹೊಟ್ಟೆನೋವು, ಬೆನ್ನುನೋವಿನ ಕಾರಣದಿಂದಾಗಿ ರಾತ್ರಿ ನಿದ್ದೆ ಕಳೆದುಕೊಂಡು, ಬೆಳಗ್ಗೆ ಎಲ್ಲರಿಗಿಂತ ಮೊದಲು ಎದ್ದಾಗ ಎದುರುಗೊಳ್ಳುವ ಅಮ್ಮನ ಕಣ್ಣುಗಳಿಗೆ ಮಗಳ ದೇಹದಲ್ಲಾದ ಬದಲಾವಣೆ ತಿಳಿದಾಗ, ಅವಳಿಗಾಗುವ ಆಶ್ಚರ್ಯ, ಗಾಬರಿ, ಆತಂಕ ಎಲ್ಲವೂ ನಿರುಪಮಳಿಗೆ ನೆನಪಾಗುತ್ತದೆ. ತನ್ನ ನೋವಿನ ಮೂಲ ಯಾವುದೆನ್ನುವುದು ಸ್ಪಷ್ಟವಾಗುತ್ತದೆ. ಆಪರೇಷನ್ ಥಿಯೇಟರ್‍ಗೆ ಹೋಗುವ ಮುನ್ನ ಪುಟ್ಟ ಮಗುವೊಂದನ್ನು ನಿರುಪಮ ನರ್ಸ್‍ಗಳ ಕೈಯಲ್ಲಿ ನೋಡುತ್ತಾಳೆ. ಅದು, ಆಸ್ಪತ್ರೆಯ ಬಾಗಿಲಲ್ಲಿ ಯಾರೋ ಬಿಟ್ಟುಹೋಗಿರುವ ಮಗು. ಹೆಣ್ಣುಮಗು. ಮಗುವಿನ ಹಾಜರಿಯಿಂದಾಗಿ ಆಸ್ಪತ್ರೆ ಆವರಣದಲ್ಲಿ ಉಲ್ಲಾಸದ ಲಹರಿಯೊಂದು ಆವರಿಸಿಕೊಳ್ಳುತ್ತದೆ. ಪ್ರೀತಿಯ ಬಳ್ಳಿಯೊಂದು ತೊಡರಿದಂತೆ ನಿರುಪಮಳಿಗೆ ಅನ್ನಿಸುತ್ತದೆ. ಅಂದರೆ ವಾಸ್ತವದಲ್ಲಿ ಅದು ಮತ್ತೊಂದು ನೋವಿನ ಪರಂಪರೆಯ ಮುಂದುವರಿಕೆ ಎನ್ನುವ ಧ್ವನಿಯೂ ಕಥೆಯಲ್ಲಿ ಇರುವಂತಿದೆ.

‘ಏರೋಪ್ಲೇನು ಚಿಟ್ಟೆ’ ಎನ್ನುವ ಕಥೆಯಲ್ಲಿ, ಚಿಟ್ಟೆಗಳ ಬಗ್ಗೆ ಆಕರ್ಷಿತನಾಗುವ ರಾಹುಲ ಎನ್ನುವ ಹುಡುಗ, ತನ್ನ ಕೋಣೆಯ ತುಂಬ ಚಿಟ್ಟೆಗಳನ್ನು ಹಿಡಿದಿಟ್ಟು ಆನಂದಿಸುತ್ತಾನೆ. ಅಪ್ಪನಿಂದ ಕಥೆ ಕೇಳುವ ರಾಹುಲ, ಕೋಣೆಯ ಕಿಟಕಿಗಳನ್ನು ತೆರೆಯುವ ಮೂಲಕ ಚಿಟ್ಟೆಗಳಿಗೆ ಗಾಳಿಬೆಳಕಿನ ಸ್ವಾತಂತ್ರ್ಯ ಕಾಣಿಸುತ್ತಾನೆ. ಮಕ್ಕಳ ಕಥೆಯಂತೆ ಕಾಣಿಸಿದರೂ, ‘ಏರೋಪ್ಲೇನು ಚಿಟ್ಟೆ’ ಹಿರಿಯರ ಭಾವಲೋಕದೊಳಗೂ ಪತರಗುಟ್ಟುವಂತಹದ್ದು. ಇಲ್ಲಿನ ಚಿಟ್ಟೆಯ ರೂಪಕ ಸಂಕಲನದ ಎಲ್ಲ ಕಥೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಪ್ರಕಟಗೊಂಡಿದೆ. ನೋವುಗಳಿಂದ ಬಿಡುಗಡೆಗೊಳ್ಳಲು, ಗಂಡನ ಹಿಡಿತದಿಂದ ಮುಕ್ತಗೊಳ್ಳಲು ಹಾಗೂ ತನ್ನತನಕ್ಕಾಗಿ ಹಂಬಲಿಸುವ ಕಥೆಗಳಲ್ಲಿನ ಹೆಣ್ಣಿನ ಚಿತ್ರಗಳು ಕೂಡ ಬಂಧನಕ್ಕೊಳಗಾದ ಚಿಟ್ಟೆಗಳಂತೆ, ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿರುವಂತೆ ಕಾಣಿಸುತ್ತವೆ.

ಹೆಣ್ಣುಮಕ್ಕಳ ಮನೋಲೋಕವನ್ನು, ಆ ಲೋಕದ ಸಂಕಟಗಳ ಮೂಲಕ ಸಮಾಜದ ಚಲನೆಯ ದಿಕ್ಕನ್ನು ಚಿತ್ರಿಸುವಾಗ ತೇಜಶ್ರೀ ಅವರ ಕಥೆಗಳು ವಾಚ್ಯಗೊಳ್ಳದೆ, ಪ್ರತಿಮೆಗಳ ರೂಪದಲ್ಲಿ ಸಹೃದಯರಿಗೆ ಎದುರಾಗುತ್ತವೆ. ‘ಕುದಿಬಂದು’ ಎನ್ನುವ ಪುಟ್ಟಕಥೆ ನೋಡಿ. ಪದ್ಯದ ಸಾಧ್ಯತೆಯಲ್ಲಿ ಮುಗಿಯುವ ಈ ಕಥೆ, ತನ್ನೊಳಗೆ ಹಲವು ಕವಲುಗಳನ್ನು ಹುದುಗಿಸಿಕೊಂಡಿದೆ. ಅದೊಂದೇ ಅಲ್ಲ, ಸಂಕಲನದ ಬಹುತೇಕ ರಚನೆಗಳು ಕಥೆಯ ಮೈತೊಟ್ಟ ಪದ್ಯಗಳೇ ಆಗಿವೆ; ಅರ್ಥದ ಚೌಕಟ್ಟಿನ ಕಸರತ್ತಿಗೆ ಹೋಗದೆ, ನಿಮ್ಮ ಅನುಭವಕ್ಕೆ ದಕ್ಕಿದ್ದನ್ನು ಆಸ್ವಾದಿಸಿ ಎಂದು ಓದುಗರಿಗೆ ಸೂಚಿಸುವಂತಿವೆ.

ತೇಜಶ್ರೀ ನನ್ನ ಓರಗೆಯ ಬರಹಗಾರ್ತಿ. ನಾನು ಮೆಚ್ಚುಗೆಯಿಂದ, ಅಸೂಯೆಯಿಂದ ನೋಡುವ ಕವಯಿತ್ರಿ. ಈಗ ಕಥೆಗಳ ಮೂಲಕ ಓದುಗರೆದುರು ಹೊಸ ಪೋಷಾಕಿನಲ್ಲಿ ಪ್ರಕಟಗೊಳ್ಳುತ್ತಿರುವ ಅವರು -‘ಬೆಳ್ಳಿಮೈ ಹುಳ’ದ ಮೂಲಕ - ಹೊಸ ಪ್ರಭೆಗಾಗಿ ಹಂಬಲಿಸುತ್ತಿರುವ ಕನ್ನಡ ಕಥಾಲೋಕಕ್ಕೆ ಹೊಸ ರಂಗೊಂದನ್ನು ಕೂಡಿಸಿದ್ದಾರೆ. ಓದುಗರಿಗಿಂತಲೂ ಬರೆಯುವವರೇ ಹೆಚ್ಚಿನ ಸಂಖ್ಯೆಯಲ್ಲಿರುವಂತೆ ಮೇಲ್ನೋಟಕ್ಕೆ ಕಾಣಿಸುವ ಕನ್ನಡ ಸಾಹಿತ್ಯ ಸಂದರ್ಭ ಸಂಖ್ಯಾದೃಷ್ಟಿಯಿಂದ ಸಮೃದ್ಧವಾಗಿದ್ದರೂ, ಆ ಉತ್ಸಾಹ ಬರವಣಿಗೆಯ ಅಸಲು ಕಸುಬುದಾರಿಕೆಯಲ್ಲಿ ಕಾಣಿಸದಿರುವುದು ‘ಸಾಹಿತ್ಯದ ಉತ್ತಮಿಕೆ’ಯ ಬಗ್ಗೆ ಕಾಳಜಿಯುಳ್ಳವರನ್ನು ಆತಂಕಕ್ಕೀಡು ಮಾಡುವಂತಹದ್ದು. ಇಂಥ ಸಂಕ್ರಮಣದ ಸಂದರ್ಭದಲ್ಲಿ ಪ್ರಕಟಗೊಂಡಿರುವ ತೇಜಶ್ರೀಯವರ ಕಥೆಗಳ ಶಿಲ್ಪದ ಅಚ್ಚುಕಟ್ಟುತನ ಮತ್ತು ಭಾಷೆಯ ಕುಸುರಿತನ, ಸೂಕ್ಷ್ಮ ಭಾವಲೋಕದೊಂದಿಗೆ ಮಿಳಿತಗೊಂಡಿರುವುದು ನನ್ನಂಥ ಓದುಗರಲ್ಲಿ ಸಂಭ್ರಮ ಹುಟ್ಟಿಸುವಂತಹದ್ದು.

ತಾನು ಹೇಳುವುದು ಓದುಗರಿಗೆ ಸುಲಭವಾಗಿ ಸಂವಹನಗೊಳ್ಳಬೇಕೆಂದು ಬಯಸುವ ಬಹುತೇಕ ಬರಹಗಾರರು, ಆ ಪ್ರಯತ್ನದಲ್ಲಿ ಜನಪ್ರಿಯತೆಯ ಸಿದ್ಧದಾರಿಯನ್ನು ಅನುಸರಿಸುತ್ತಾರೆ. ಕೆಲವು ಬರಹಗಾರರಷ್ಟೇ ತಮ್ಮದೇ ದಾರಿಯ ಹುಡುಕಾಟ ನಡೆಸುತ್ತ, ಆ ಮಾರ್ಗದಲ್ಲಿ ಓದುಗರನ್ನೂ ಕರೆದೊಯ್ಯಲು ಪ್ರಯತ್ನಿಸುತ್ತಾರೆ. ಎರಡನೆಯ ಮಾರ್ಗವನ್ನು ಅನುಸರಿಸಲು ಬರಹಗಾರನಿಗೆ ತನ್ನ ಬರವಣಿಗೆಯ ಬಗ್ಗೆ ಅಪಾರ ಆತ್ಮವಿಶ್ವಾಸ ಬೇಕು. ಅಂಥ ಸಕಾರಣ ಆತ್ಮವಿಶ್ವಾಸವನ್ನು ತೇಜಶ್ರೀ ಅವರ ಕವಿತೆ-ಕಥೆ ಎರಡರಲ್ಲೂ ಕಂಡಿದ್ದೇನೆ. ‘ಒಲಿದಂತೆ ಹಾಡುವೆ’ ಮನೋಧರ್ಮದ ಮುಂದುವರಿಕೆಯ ರೂಪದಂತಿರುವ ‘ಬೆಳ್ಳಿಮೈ ಹುಳ’ ಸಂಕಲನದ ಕಥೆಗಳಿಗೆ ಮೊದಲ ಪ್ರತಿಕ್ರಿಯೆಯನ್ನು ಬರೆಯುವ ಅವಕಾಶ ದೊರೆತಿರುವುದು, ಮಾತಿಗಿಂತಲೂ ಮಿಗಿಲಾಗಿ ಓದು-ಬರಹದ ಮೂಲಕ ಸಾಹಿತ್ಯದ ವಿದ್ಯಾರ್ಥಿಗಳ ನಡುವೆ ರೂಪುಗೊಂಡ ಸ್ನೇಹ-ವಿಶ್ವಾಸದ ಫಲವೆಂದು ನಾನು ಭಾವಿಸಿರುವೆ. ಈ ಸ್ನೇಹ-ವಿಶ್ವಾಸಕ್ಕಾಗಿ ತೇಜಶ್ರೀ ಅವರಿಗೆ ಕೃತಜ್ಞತೆ. ಅವರ ಕಾವ್ಯವನ್ನು ಮೆಚ್ಚಿಕೊಂಡಿರುವ ಸಹೃದಯರಿಗೆ ಕಥೆಗಳೂ ಇಷ್ಟವಾಗುತ್ತದೆನ್ನುವ ನಂಬಿಕೆ ನನ್ನದು. ಹಾಗೆಯೇ ಆಗಲೆಂದು ಸ್ನೇಹದಿಂದ ಹಾರೈಸುವೆ.

MORE FEATURES

ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!

26-04-2024 ಬೆಂಗಳೂರು

‘ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವ...

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...