ಕುತೂಹಲ ಹುಟ್ಟಿಸುತ್ತಲೇ ಓದುಗರನ್ನು ಸೆಳೆದಿಡುವ ಅಮೀಬಾ ಕೃತಿಯ ಆಯ್ದ ಭಾಗ


"ಕರಾಳಸಂಜೆ ಮನೆ ಬಾಗಿಲ ತಲುಪಿದ್ದ ವಿಖ್ಯಾತ್‌ನೊಳಗಿದ್ದ ಭಯ ಕೊಂಚ ಕಡಿಮೆಯಾಗಿತ್ತು. ಕಾರಣ ಯಾರೊಬ್ಬರ ಗಲಾಟೆ ಕೂಗಾಟವಿರಲಿಲ್ಲ. ಮನೆಯ ಮುಂದೆ ದಾಂಡಿಗರು ಅಥವಾ ಯಾವುದೇ ಬೈಕ್‌ಗಳಿರಲಿಲ್ಲ. ಎಲ್ಲದಕ್ಕಿಂತ ತಾಯಿಯ ಅಳುವಿನ ಶಬ್ದ ಅಥವಾ ತಂದೆಯ ನರಳಾಟ ಕೇಳಿಸುತ್ತಲಿರಲಿಲ್ಲ" ಇವು ಲೇಖಕ ಭಗೀರಥ ಅವರ ಅಮೀಬಾ ಕೃತಿಯ ಸಾಲುಗಳು. ಕುತೂಹಲ ಹುಟ್ಟಿಸುತ್ತಲೇ ಓದುಗರನ್ನು ಸೆಳೆದಿಡುವ ಅಮೀಬಾ ಕೃತಿಯ ಆಯ್ದ ಭಾಗ ನಿಮ್ಮ ಓದಿಗಾಗಿ.

ಏಳನೇ ಕ್ಲಾಸ್ ಪ್ರಿಪೆರ್ಟರಿ ಎಕ್ಸಾಂ ಶುರುವಾಗಲು ನಾಲ್ಕು ದಿನಗಳಷ್ಟೇ ಉಳಿದಿದ್ದರಿಂದ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ 6:30ರ ತನಕ ಎರಡೆರಡು ಸ್ಪೆಶಲ್ ಕ್ಲಾಸಿನಿಂದಾಗಿ ವಿದ್ಯಾರ್ಥಿಗಳು ಶಾಲೆಯಲ್ಲಿ ಇರಬೇಕಾಗಿತ್ತು. ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಮತ್ತು ಕುಟುಂಬದವರಿಂದ ಈ ಪಬ್ಲಿಕ್ ಎಕ್ಸಾಂ ತಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ ಎಂಬ ಮಾತು ಮೊದಲೇ ಅತೀವ ಭಯ ಹುಟ್ಟಿಸಿದ್ದು, ಈಗ ಅದೇ ಎಕ್ಸಾಂಗೇ ದಿನಗಣನೆ ಶುರುವಾಗಿದ್ದು ಪ್ರತಿಯೊಬ್ಬರು ಮೈಯೆಲ್ಲಾ ಕಿವಿಯನ್ನಾಗಿಸಿಕೊಂಡು ಏಕಾಗ್ರತೆಯಿಂದ ಶಿಕ್ಷಕರು ಹೇಳುತ್ತಿದ್ದ ಪಾಠವನ್ನು ಕೇಳಿಸಿಕೊಳ್ಳುತ್ತಿದ್ದರು. ಆದರೆ ಕೊನೆಯ ಬೆಂಚಿನ ಮೊದಲನೇ ವಿದ್ಯಾರ್ಥಿ ವಿಖ್ಯಾತ್‌ನ ದೇಹ ಮಾತ್ರ ಅಲ್ಲಿದ್ದು ಅವನ ಮನಸ್ಸು ಮನೆಯ ಬೀರುವಿನಲ್ಲಿದ್ದ ಒಂದು ಮೊಳದಷ್ಟುದ್ದ ಕ್ಯಾಡಬರೀ ಚಾಕಲೇಟ್‌ನ ಮೇಲಿತ್ತು. ಎಷ್ಟು ಬೇಗ ಮನೆ ತಲುಪಿ ತಾಯಿಯಿಂದ ಇಂದಿನ ಕೋಟವಾಗಿದ್ದ ಚಾಕಲೇಟಿನ ಸಣ್ಣ ಮೂರು ತುಂಡುಗಳನ್ನು ಪಡೆದು ಒಂದೇ ಸಾರಿ ಅದನ್ನು ತಿನ್ನದೇ ಒಂದೊಂದೇ ತುಂಡನ್ನು ನಾಲಿಗೆಯ ಮೇಲ್ಭಾಗದ ಜಾಗಕ್ಕೆ ಅಂಟಿಸಿಟ್ಟುಕೊಂಡು, ಆಗಾಗ ನಾಲಿಗೆ ತುದಿಯನ್ನು ತಾಕಿಸಿ ಅರ್ಧ ಗಂಟೆಗೊಂದರಂತೆ ಮೂರು ತುಂಡನ್ನು ಒಂದೂವರೆ ಗಂಟೆವರೆಗೆ ತಿನ್ನುತ್ತಲೇ ಇರಬೇಕೆಂದುಕೊಳ್ಳುತ್ತಿದ್ದವನ ಪಾಲಿಗೆ ಸ್ಪೆಶಲ್ ಕ್ಲಾಸ್‌ಗಳು ನರಕದಂತಾಗಿದ್ದು, ಕಪ್ಪು ಹಲಗೆಯ ಮುಂದೆ ನಿಂತು ಪಾಠ ಮಾಡುತ್ತಿದ್ದ ಶಿಕ್ಷಕರೆಲ್ಲರೂ ಯಮ ಕಿಂಕರರೆಂದು ಮನಸ್ಸೊಳಗೆ ಹೇಳಿಕೊಂಡು ಖುಷಿಪಡುತ್ತಿದ್ದ ವಿಖ್ಯಾತ್. ಅವನ ಸಂಕಟ ಭಗವಂತ ಕೇಳಿಸಿಕೊಂಡಂತೆ ಸಂಜೆ 6:30ರ ಶಾಲೆಯ ಕೊನೆಯ ಬೆಲ್ ಕೂಗಲು ಜೋರಾಗಿ ಎದ್ದು ಕುಣಿಯಬೇಕೆನ್ನಿಸುತ್ತಿದ್ದರೂ, ಶಿಕ್ಷಕರ ಕೈಯಲ್ಲಿದ್ದ ಬಿದಿರಿನ ಕಡ್ಡಿಯಿಂದ ಬಿದ್ದಿದ್ದ ಹೊಡೆತಗಳ ಅನುಭವ ಅವನನ್ನು ಪುಸ್ತಕ, ಪೆನ್ನುಗಳನ್ನೆಲ್ಲಾ ಬ್ಯಾಗ್‌ನಲ್ಲಿಟ್ಟುಕೊಂಡು ಒಬ್ಬರ ಹಿಂದೆ ಒಬ್ಬರು ತರಗತಿಯಿಂದ ಶಿಸ್ತಿನೊಂದಿಗೆ ಆಚೆ ಬರುವಂತೆ ಮಾಡಿತ್ತು.

ಆದರೆ ಮೈದಾನ ತಲುಪಿದ ಮೇಲೆ ಯಾವೊಬ್ಬ ವಿದ್ಯಾರ್ಥಿಗೂ ಆ ಭಯವಿರಲಿಲ್ಲ. ಎಲ್ಲರೂ ಒಂದೇ ಉಸಿರಲ್ಲಿ ಗೇಟಿನ ಕಡೆ ಓಡುತ್ತಿದ್ದರು. ಕೆಲವರು ಮಾತ್ರ ಅವರಿಗಾಗೇ ಕಾಯುತ್ತಿದ್ದ ತಂದೆ ತಾಯಿಯೊಂದಿಗೆ ಬೈಕ್‌ಗಳಲ್ಲಿ ಹೊರಡುತ್ತಿದ್ದರು. ಇನ್ನು ಕೆಲವರು ಅವರ ಸೈಕಲ್‌ಗಳಲ್ಲಿ ಹೊರಡುತ್ತಿದ್ದರು. ಅರ್ಧದಷ್ಟು ವಿದ್ಯಾರ್ಥಿಗಳು ಬೆನ್ನಲ್ಲಿ ಮೂಟೆ ಗಾತ್ರದ ಬ್ಯಾಗ್‌ಗಳನ್ನು ನೇತು ಹಾಕಿಕೊಂಡು ಕೈಯಲ್ಲಿ ಟಿಫನ್ ಬಾಕ್ಸ್ ಮತ್ತು ವಾಟರ್‌ಕ್ಯಾನ್‌ನ್ನಿದ್ದ ಊಟದ ಬ್ಯಾಗ್‌ಗಳನ್ನು ಹಿಡಿದುಕೊಂಡು ಅವರವರ ಆತ್ಮೀಯರೊಂದಿಗೆ ಮಾತಾಡುತ್ತಾ ಗುಂಪು ಗುಂಪಾಗಿ ನಡೆಯುತ್ತಾ, ಮನೆ ಸೇರುತ್ತಿದ್ದರು. ಆದರೆ ಇಂದು ಮನೆಯೊಳಗಿದ್ದ ಚಾಕಲೇಟ್ ವಿಖ್ಯಾತ್‌ನನ್ನು ಕೈಬೀಸಿ ಕರೆಯುತ್ತಿತ್ತು. ಅವನಿಬ್ಬರು ಸ್ನೇಹಿತರಿಂದ ತಪ್ಪಿಸಿಕೊಂಡು ಓಡುತ್ತಲೇ ಒಂದುವರೆ ಕಿಲೋಮೀಟರ್ ದೂರದಲ್ಲಿದ್ದ ಮನೆಯ ಮುಂದೆ ಐದೂವರೆ ನಿಮಿಷದೊಳಗೆ ಏದುಸಿರು ಬಿಡುತ್ತಾ ಬಂದು ನಿಂತಿದ್ದ. ಮನೆಯ ಮುಂದೆ ಸೇರಿದ್ದ ಜನ ವಿಖ್ಯಾತ್‌ನೊಳಗಿದ್ದ ಆಸೆಯನ್ನು ಮರೆಸಿ ಭಯವನ್ನುಟ್ಟಿಸಿತು. ಅವನೊಳಗಿನ ಭಯವನ್ನು ಅವನ ತಂದೆಯನ್ನು ಹುಡುಕಿಕೊಂಡು ಬರುವ ಸಾಲಗಾರರು ಮತ್ತು ಬಾರ್‌ನ ಮಾಲೀಕರು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಂಡೇಬಂದಿದ್ದರು. ವಿಖ್ಯಾತ್ ನಿಧಾನವಾಗಿ ಆ ಜನರ ಮಧ್ಯೆ ಹೆಜ್ಜೆಯಿಡುತ್ತಾ ತನ್ನ ಮನೆಯ ಬಾಗಿಲ ಕಡೆ ಹೋಗುತ್ತಿದ್ದ. ಆದರೆ ಅವನ ಮನಸ್ಸು ಅವನ ಪಾಲಿನ ಮೊದಲ ಕರಾಳ ರಾತ್ರಿಯನ್ನು ಮತ್ತೆ ಕಣ್ಮುಂದೆ ತಂದಿತ್ತು.

ಪ್ರತಿ ರಾತ್ರಿಯಂತೆ ತಂದೆಯನ್ನು ಹುಡುಕಿಕೊಂಡು ಬರಲು ತಾಯಿಯ ಕೈಹಿಡಿದು ಹೊರಟ ವಿಖ್ಯಾತ್, ಮೊದಲು ಮಟ್ಕಾ ಅಂಗಡಿಯಲ್ಲಿ ಹುಡುಕಿ ಸಿಗದಿರಲು ನೇರವಾಗಿ ಸ್ವಲ್ಪ ದೂರವಿದ್ದ ಬಾರಿನ ಕಡೆ ಹೋಗುತ್ತಿದ್ದ. ರಸ್ತೆ ಮಧ್ಯೆ ಅವನ ತಂದೆ ಜೊಲ್ಲು ಸೋರಿಸುತ್ತಾ ರಸ್ತೆಗೆ ಮುಖಮಾಡಿ ಕುಡಿದಮತ್ತಲ್ಲಿ ಬಿದ್ದಿರೋದನ್ನು ಹಲವು ಸಲ ನೋಡಿ ತನಗೆ ಅಭ್ಯಾಸವಾಗಿದ್ದರೂ ತನ್ನ ತಾಯಿ ಮಾತ್ರ ಪ್ರತಿಸಾರಿ ಅವರನ್ನು ಆ ಸ್ಥಿತಿಯಲ್ಲಿ ನೋಡುತ್ತಿದ್ದಂತೆ ಓಡಿಹೋಗಿ ಮೇಲಕ್ಕೆತ್ತುತ್ತಿದ್ದಳು. ತನ್ನ ಸೆರಗಿನಿಂದ ಅವರ ಮುಖದಲ್ಲಿದ್ದ ಮಣ್ಣನ್ನು ಒರೆಸಿ, ತುಂಬಾ ಕಷ್ಟಪಟ್ಟು ಅವರನ್ನು ಮೇಲಕ್ಕೆತ್ತಿ ತನ್ನ ಭುಜಗಳ ಮೇಲೆ ಅವರ ಕೈಯನ್ನಿಟ್ಟು ಮಾತಾಡಿಸುತ್ತಾ, ಮನೆಯ ತನಕ ನಡೆಸಿಕೊಂಡು ಬರುತ್ತಿದ್ದಳು. ಆದರೆ ಆ ಸಮಯದಲ್ಲಿ ತಾಯಿ ನನಗೆ ನೀಡಿದ್ದ ಜವಾಬ್ದಾರಿ ಕೆಳಗೆ ಬಿದ್ದಿದ್ದ ತಂದೆಯ ವಸ್ತುಗಳಾದ ಪರ್ಸ್, ವಾಚ್, ಉಂಗುರ ಏನೇ ಇದ್ದರೂ ಅದನ್ನು ಹುಡುಕಿ ಜೋಪಾನವಾಗಿ ತೆಗೆದುಕೊಂಡು ಬರಬೇಕು. ಪ್ರತಿ ರಾತ್ರಿ ತಾಯಿ ಮತ್ತು ಮಗನ ಪಾಲಿಗೆ ಇದು ಕೂಲಿಯಿಲ್ಲದ ಕೆಲಸವಾಗಿತ್ತು. ಆ ರಾತ್ರಿ ಕೂಡ ತಮ್ಮ ಕೆಲಸವನ್ನು ಮುಗಿಸಿ ಮನೆಯ ತಲುಪಿ ಮಲಗಿದ್ದರು. ತಾಯಿಯ ಮಮಕಾರದ ಅಪ್ಪುಗೆಯಲ್ಲಿ ಮಲಗುತ್ತಿದ್ದ ವಿಖ್ಯಾತ್‌ನಿಗೆ ಈಗೀಗ ಗೊರಕೆ ಹೊಡೆಯುತ್ತಾ ಮಲಗಿರುವ ತಂದೆಯ ಹೊಟ್ಟೆಯೊಳಗಿದ್ದ ಮದ್ಯದ ದುರ್ವಾಸನೆಗೆ ಅವನ ಮೂಗು ಮನಸ್ಸು ಒಗ್ಗಿಕೊಂಡಿತ್ತು.

ಮನೆಯ ಮುಂದೆ ದಡದಡ ಬೈಕುಗಳ ಶಬ್ದ ಬರುತ್ತಿದ್ದಂತೆ ಕುಡಿದ ಅಮಲಿನಲ್ಲಿದ್ದ ಅಪ್ಪ ಗರಬಡೆದವನಂತೆ ಎದ್ದು ಕೂತು ‘ಕಾಪಾಡಿ ಕಾಪಾಡಿ’ ಎಂದು ಜೋರಾಗಿ ಕೂಗಲು ಪ್ರಾರಂಭಿಸಿದ. ತಾವಷ್ಟೇ ಅಲ್ಲ ಅಕ್ಕಪಕ್ಕದ ಮನೆಯವರು ಎದ್ದು ಎಚ್ಚರಗೊಂಡಿದ್ದರು. ಬಾಗಿಲನ್ನು ಮುರಿದು ಹಾಕುವಂತೆ ಬಡಿಯುತ್ತಿದ್ದವರನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದ ತಂದೆ, ಅವರಿಗೆ ಕೊಡಬೇಕಾದ ಹಣವನ್ನು ಆದಷ್ಟು ಬೇಗ ಕೊಡುತ್ತೇನೆ. ಈಗ ಹೊರಟು ಹೋಗಿ ಎಂದು ಕೇಳಿಕೊಳ್ಳುತ್ತಿದ್ದರು. ಅವರು ಬಾಗಿಲ ಬಡಿಯುವುದನ್ನು ನಿಲ್ಲಿಸಲಿಲ್ಲ. ಈಗಾಗಲೇ ಮುರಿದು ಹೋಗುವ ಪರಿಸ್ಥಿತಿಯಲ್ಲಿದ್ದ ಬಾಗಿಲನ್ನು ಅವರು ಹೀಗೆ ಬಡಿಯುತ್ತಿದ್ದರೆ ಅದು ಎರಡು ತುಂಡಾಗುತ್ತದೆ. ನಾಲ್ಕು ಗೋಡೆಗಳ ಮಧ್ಯೆ ದಟ್ಟ ದಾರಿದ್ಯ್ರದಲ್ಲಿರುವ ತನ್ನ ಸಂಸಾರ ಮುರಿದ ಬಾಗಿಲಿನಿಂದ ಬೀದಿ ಪಾಲಾಗುತ್ತದೆ ಎಂಬ ಭಯದಿಂದ ತಾಯಿ ಮಗನನ್ನು ಮಡಿಕೆಯ ಹಿಂದೆ ಬಚ್ಚಿಟ್ಟು ಓಡಿ ಹೋಗಿ ಬಾಗಿಲನ್ನು ತೆಗೆದು ಬಿಟ್ಟಳು. ಅವರೆಲ್ಲರೂ ತನ್ನ ತಂದೆ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಒಂದೇ ಸಮನೆ ನಿಂದಿಸುತ್ತಿದ್ದರೆ ಅವಳು ಬಾಗಿಲು ತೆಗೆದು ಒಳಗೆ ಬರುತ್ತಿದ್ದ ದಾಂಡಿಗರ ಕಾಲನ್ನು ಹಿಡಿದು ಬೇಡಿ ತನ್ನ ಗಂಡನನ್ನು ರಕ್ಷಿಸಿಕೊಳ್ಳುತ್ತಿದ್ದಳು. ಬಚ್ಚಿಟ್ಟುಕೊಂಡು ನೋಡುತ್ತಿದ್ದ ವಿಖ್ಯಾತ್‌ನಿಗೆ ಯಾವಾಗಲೂ ಮೂಡುವುದು ಅದೇ ಪ್ರಶ್ನೆ! ತನ್ನ ತಂದೆಯ ಮೇಲೆ ತನಗಿರುವ ಕೋಪ ತಾಯಿಗೆ ಏಕಿಲ್ಲಾ ಎಂಬುದು ಉತ್ತರ ಸಿಗದಂತಾಗಿತ್ತು. ತನ್ನ ತಾಯಿಯನ್ನು ಪಕ್ಕಕ್ಕೆ ತಳ್ಳಿದ ಧಾಂಡಿಗರು ತಂದೆಯನ್ನು ಮನೆಯಿಂದ ಹೊರಗೆಳೆದುಕೊಂಡು ಹೋಗಿ ಅಕ್ಕಪಕ್ಕದವರ ಮುಂದೆ ಕಟ್ಟಿಗೆಯಿಂದ ಮೂರು ಜನ ಹೊಡೆಯಲು ಶುರುಮಾಡಿದ್ದರು.

ಮೊದಮೊದಲು ಬೇಡಿಕೊಳ್ಳುತ್ತಿದ್ದವನು ಹೊಡೆತ ಹೆಚ್ಚಾದಂತೆ ಅವನ ಬಾಯಿಂದ ನರಳುವ ಶಬ್ದವಷ್ಟೇ ಕೇಳಿಸುತ್ತಿತ್ತು. ಸುಮ್ಮನೆ ನಿಂತು ನೋಡುತ್ತಿದ್ದ ಅಕ್ಕಪಕ್ಕದ ಮನೆಯ ಗಂಡಸರನ್ನು ಸಹಾಯಕ್ಕೆಂದು ಅಂಗಲಾಚಿದ ತಾಯಿ ಅವರ ಅಸಹಾಯಕತೆಗೆ ಸೋತು ಒಂದೆಡೆ ಕುಸಿದು ಅಳುತ್ತಿದ್ದ ಅವಳ ಬಾಯಿಂದ ಕೇಳಿಸುತ್ತಿದ್ದ ಮಾತೊಂದೇ ‘ಬಿಟ್ಬಿಡಿ ಅಣ್ಣಾ ಅವರನ್ನಾ ಹೊಡಿಬೇಡಿ.’ ಕಿಟಕಿಯಿಂದ ನೋಡುತ್ತಿದ್ದ ವಿಖ್ಯಾತ್‌ನಿಗೆ ಯಾವಾಗಲೂ ತನ್ನ ತಾಯಿಯನ್ನು ದಂಡಿಸುತ್ತಿದ್ದ ತಂದೆ ಈಗ ಅದಕ್ಕಿಂತ ಹೆಚ್ಚು ನೋವಿನಿಂದ ನರಳುತ್ತಿದ್ದದ್ದು ಮೊದಮೊದಲು ಖುಷಿಕೊಟ್ಟರೂ, ತಂದೆಯ ಮೈಯಿಂದ ಬರುತ್ತಿದ್ದ ರಕ್ತ ಮತ್ತು ಆ ದಾಂಡಿಗರ ಭಯಂಕರವಾದ ಹೊಡೆತಗಳು ಅವನ ಎರಡು ಕೈಕಾಲುಗಳನ್ನು ನಡುಗಿಸಿ ಆ ರಾತ್ರಿ ಅವನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿತ್ತು..

ಕರಾಳಸಂಜೆ ಮನೆ ಬಾಗಿಲ ತಲುಪಿದ್ದ ವಿಖ್ಯಾತ್‌ನೊಳಗಿದ್ದ ಭಯ ಕೊಂಚ ಕಡಿಮೆಯಾಗಿತ್ತು. ಕಾರಣ ಯಾರೊಬ್ಬರ ಗಲಾಟೆ ಕೂಗಾಟವಿರಲಿಲ್ಲ. ಮನೆಯ ಮುಂದೆ ದಾಂಡಿಗರು ಅಥವಾ ಯಾವುದೇ ಬೈಕ್‌ಗಳಿರಲಿಲ್ಲ. ಎಲ್ಲದಕ್ಕಿಂತ ತಾಯಿಯ ಅಳುವಿನ ಶಬ್ದ ಅಥವಾ ತಂದೆಯ ನರಳಾಟ ಕೇಳಿಸುತ್ತಲಿರಲಿಲ್ಲ. ವಿಖ್ಯಾತ್ ಮನೆಯ ಬಾಗಿಲ ಬಳಿ ಬರುತ್ತಿದ್ದಂತೆ ಅಳುತ್ತ ತಲೆಯ ಮೇಲೆ ಕೈಇಟ್ಟುಕೊಂಡು ಕುಳಿತಿದ್ದ ಪಕ್ಕದ ಮನೆಯ ಆಂಟಿ ಓಡಿಬಂದಳು.

`ಏಯ್! ನೀನ್ ಒಳಗ್ ಹೋಗಬಾರ್ದು... ಬೇಗ ಹೋಗ್ ನಿಮ್ಮಪ್ಪನ್ ರ‍್ಕೊಂಡ್ ಬಾ..ಹೋಗು...’ ಆ ಕ್ಷಣ ವಿಖ್ಯಾತ್ ಅವನ ಮನಸ್ಸು ಹೇಳಿದ ಮಾತಿಗೆ ಓಗೊಟ್ಟು ತನ್ನ ತಾಯಿಗಾಗಿ ‘ಅಮ್ಮ’ ಎಂದು ಜೋರಾಗಿ ಕೂಗುತ್ತಾ ಮನೆಯೊಳಗೆ ಓಡಿ ಹೋಗುವನು. ನಡುಮನೆಯಲ್ಲಿ ಮಲಗಿದ್ದ ತಾಯಿಯನ್ನು ನೋಡುತ್ತಿದ್ದಂತೆ ಅವನ ಕಾಲುಗಳಲ್ಲಿದ್ದ ಶಕ್ತಿ ಮಾಯವಾಗಿ ಒಮ್ಮೆಲೇ ಕುಸಿದು ಬಿಡುತ್ತಾನೆ. ಈಗಷ್ಟೇ ಒಳಗೆ ಹೋಗೆಂದು ಹೇಳಿದ್ದ ಅವನ ಮನಸ್ಸು, ಈಗ ಮೊದಲು ಮನೆಯಿಂದ ಹೊರಗೆ ಓಡಿ ಹೋಗೆಂದು ಎಚ್ಚರಿಸುತ್ತಲೇ ಇತ್ತು. ಆದರೆ ಎಷ್ಟೇ ಪ್ರಯತ್ನಪಟ್ಟರೂ ಅವನ ಕಾಲುಗಳು ಸ್ಪಂದಿಸುತ್ತಿರಲಿಲ್ಲ. ಬಲವಂತವಾಗಿ ತನ್ನ ಕೈಗಳ ಸಹಾಯದಿಂದ ಗೋಡೆಯನ್ನು ಹಿಡಿದುಕೊಂಡು ಮೇಲೆಳುವಾಗ ಒಂದೇ ಸಮನೆ ಹೆಚ್ಚಾಗುತ್ತಿದ್ದ ಹೃದಯದ ಬಡಿತದ ಜೊತೆಗೆ ಕಣ್ಣೀರು ಬರಲು ಶುರುವಾಗಿತ್ತು. ಅದೇ ಆಂಟಿಯ ಕೈಗಳು ನಿಲ್ಲಲು ಒದ್ದಾಡುತ್ತಿದ್ದ ತನ್ನ ಭುಜಗಳನ್ನು ಹಿಡಿದು ತನ್ನ ಕಾಲ್ ಮೇಲೆ ನಿಲ್ಲಲು ಸಹಾಯ ಮಾಡಿತ್ತು. ಆಕೆ ಮತ್ತದೇ ಮಾತನ್ನು ಹೇಳಲು, ಈಗ ನಿಧಾನವಾಗಿ ಪರಿಸ್ಥಿತಿ ಅರ್ಥವಾಗುತ್ತಿದ್ದಂತೆ, ಅಲ್ಲಿಂದ ಓಡಲು ಶುರು ಮಾಡಿದವನಿಗೆ ಕೊಂಚ ನಿರಾಳವೆನ್ನಿಸಿದ್ದು, ಈಗ ಅವನ ಕಾಲುಗಳು ಮತ್ತೆ ಅವನ ಮಾತನ್ನು ಕೇಳಲು ಶುರುಮಾಡಿತ್ತು. ಆದರೆ ಅದ್ಯಾಕೋ ಕಣ್ಣುಗಳಿಂದ ಬರುತ್ತಿದ್ದ ನೀರು ಹೆಚ್ಚಾಗುತ್ತಲೇ ಇತ್ತು. ಆ ಕಣ್ಣೀರಿನ ಹಿಂದೆಯ ಕಾರಣವನ್ನಷ್ಟೇ ಕೇಂದ್ರೀಕರಿಸಲು ಶುರು ಮಾಡಿದ್ದ ಮನಸ್ಸು ತಾನು ನೋಡಿದ್ದೆಲ್ಲವನ್ನು ಸೂಕ್ಷ್ಮವಾಗಿ ಮರು ಸಂದರ್ಶಿಸಲು ಶುರು ಮಾಡಿತು. ಇಲ್ಲಿಯವರೆಗೆ ಒಂದು ಬಾರಿಯು ಹುಷಾರಿಲ್ಲವೆಂದು ಮಲಗದ ಅವನ ತಾಯಿ ಶಾಶ್ವತವಾಗಿ ಉಸಿರಾಡದೆ ಅಂಗಾತ ಮಲಗಿಬಿಟ್ಟಿದ್ದಳು. ಬೆಳ್ಳಗಿದ್ದ ಅವಳ ದೇಹ ಸಂಪೂರ್ಣ ಸುಟ್ಟು ಕಪ್ಪಾಗಿತ್ತು. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದ ಅವನ ತಾಯಿ ಯಾರೊಬ್ಬರಿಗೂ ತೊಂದರೆಯಾಗಬಾರದೆಂದು ಮುನ್ನೆಚ್ಚರಿಕೆಯೊಂದಿಗೆ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬಿಡುತ್ತಾಳೆ. ತನ್ನೆರಡು ಕೈಕಾಲುಗಳನ್ನು ದಾರದಿಂದ ಕಟ್ಟಿಹಾಕಿಕೊಂಡು, ಬಾಯೊಳಗೆ ಬಟ್ಟೆಯನ್ನು ತುರುಕಿಕೊಂಡವಳೇ ಬೆಂಕಿಕಡ್ಡಿ ಗೀರಿಕೊಂಡಿದ್ದಳು. ಮನೆಯೊಳಗೆ ಕವಿದಿದ್ದ ಹೊಗೆಯನ್ನು ನೋಡಿದ ಅಕ್ಕಪಕ್ಕದವರು ಬಂದು ನೋಡುವಷ್ಟರಲ್ಲಿ ಅವಳು ಪೂರ್ತಿಯಾಗಿ ಸುಟ್ಟುಹೋಗಿದ್ದಳು. ಒಂದೇ ಒಂದು ಸಣ್ಣ ವಸ್ತುವನ್ನು ನಾಶಮಾಡದೇ ತನ್ನ ದೇಹವನ್ನು ಸಂಪೂರ್ಣವಾಗಿ ನಾಶಮಾಡಿ ತನ್ನನ್ನು ಬಿಟ್ಟು ಹೋಗಿದ್ದಾಳೆಂದು ತಾಯಿಯ ಶವದ ಪಕ್ಕದಲ್ಲೇ ನಿಂತು ಅಳುತ್ತಿದ್ದಾಗ ಜನರ ಬಾಯಿಂದ ಬಂದ ಮಾತು ವಿಖ್ಯಾತ್‌ನ ಕಿವಿಗಳನ್ನು ತಲುಪಿ, ಅದು ಶಾಶ್ವತವಾದ ನೆನಪಿನ ಶಕ್ತಿಯಿದ್ದ ಜಾಗದ ಮುಂಚೂಣಿಯಲ್ಲಿ ಹೋಗಿ ಕುಳಿತುಕೊಂಡಿತು. ತಂದೆಯನ್ನು ಹುಡುಕಿಕೊಂಡು ಬಂದಿದ್ದ ಅವನ ಕಾಲುಗಳು ಎಲ್ಲಾ ಬಾರ್‌ಗಳು, ಮಟ್ಕಾ ಅಂಗಡಿಗಳು, ಸ್ಕಿಲ್ ಕ್ಲಬ್ ಸೆಂಟರ್‌ಗಳನ್ನು ಸುತ್ತಾಡಿದ್ದರೂ ಅವನ ತಂದೆ ಸಿಕ್ಕಿರಲಿಲ್ಲ. ಆ ದಿನ ಅವನ ಮನಸ್ಸು ಅಕ್ಕಪಕ್ಕದ ಏರಿಯಾಗಳಲ್ಲಿದ್ದ ಅವನ ತಂದೆ ಇರಬಹುದಾದ ಪರಮ ಪಾಪಿಷ್ಟ ಜಾಗಗಳಲ್ಲೂ ಹುಡುಕಿದರೂ ಅವನು ಸಿಗಲಿಲ್ಲ. ಸೋತಿದ್ದರೂ ಅವನ ಕಾಲುಗಳು ಇನ್ನು ವೇಗವಾಗಿ ಓಡಿ ಮನೆ ತಲುಪಿಕೊಂಡಿದ್ದವು. ಅಲ್ಲಿದ್ದವರು ತನ್ನ ರೀತಿಯೇ ಹುಡುಕಿ ಸೋತಿದ್ದರಿಂದ ತಾನು ಹುಡುಕಿಕೊಂಡು ಹೋಗಿದ್ದ ವ್ಯಕ್ತಿಯ ಬಗ್ಗೆ ಮತ್ತೆ ಕೇಳಲು ಹೋಗಲಿಲ್ಲ. ಆದರೆ ಆ ಕ್ಷಣಕ್ಕೆ ಅವರೆಲ್ಲರ ಮುಂದೆಯಿದ್ದ ದೊಡ್ಡ ಸಮಸ್ಯೆ ತಾಯಿಯ ಅಂತ್ಯ ಸಂಸ್ಕಾರಕ್ಕೆ ಬೇಕಾದ ಹಣ ಯಾರು ಕೊಡುತ್ತಾರೆಂದು. ಸಾವಿನ ಮನೆಯಲ್ಲಿ ಗುಸು ಗುಸು ಎನ್ನುತ್ತಿದ್ದ ಈ ಮಾತು ಒಬ್ಬ ಕಂಚಿನ ಕಂಠದ ವ್ಯಕ್ತಿಯ ಸಹಾಯದಿಂದ ವಿಖ್ಯಾತ್‌ನ ಕಿವಿ ಮುಟ್ಟಿ ಮನಸ್ಸನ್ನು ತಲುಪುವ ಮುನ್ನವೇ ಒಂದೇ ಏಟಿಗೆ ಹುಂಡಿಯನ್ನು ಹೊಡೆದು ಹಾಕಿದ್ದ. ಆ ಶಬ್ದವನ್ನು ಹುಡುಕಿಕೊಂಡು ಬಂದ ಪಕ್ಕದ ಮನೆ ಆಂಟಿಯ ಕೈಗೆ ತನ್ನೆರೆಡು ಕೈಗಳಿಂದ ಬಾಚಿ ಹಣವನ್ನು ಕೊಟ್ಟಾಗ, ಅವಳು ಗಟ್ಟಿಯಾಗಿ ಅವನನ್ನು ಅಪ್ಪಿಕೊಂಡು ಆ ಒಂದು ಮಾತನ್ಹೇಳಿ ಹಣವನ್ನು ಪಡೆದುಕೊಂಡು ಹೊರಗೆ ಹೋಗಿ ತನ್ನ ಮುಂದಿನ ಕೆಲಸವನ್ನು ನೋಡಿದ್ದಳು.

`ನಿಮ್ಮ ಅಮ್ಮನ ಆತ್ಮನ ನೀನ್ ಸ್ವರ್ಗಕ್ ಸೇರ್ಸಬಿಟ್ಟೆ ಮಗನೇ!’

ಅವಳ ಆ ಮಾತಿನ ಒಳಾರ್ಥ ಆ ಕ್ಷಣಕ್ಕೆ ವಿಖ್ಯಾತ್‌ನಿಗೆ ಅರ್ಥವಾಗದಿದ್ದರೂ ಅದು ಕೂಡ ಅವನ ಶಾಶ್ವತವಾದ ನೆನಪಿನ ಸಾಲಿನಲ್ಲಿ ಮುಂಚೂಣೆಯಲ್ಲಿತ್ತು. ಎಲ್ಲವನ್ನು ಸಿದ್ದವಾಗಿಟ್ಟುಕೊಂಡು ಸೂರ್ಯ ಮುಳುಗುವ ಕಟ್ಟಕಡೆಯ ಕ್ಷಣದವರೆಗೂ ಸ್ಮಶಾನದ ಬಾಗಿಲನ್ನೇ ನೋಡುತ್ತ ಅವನ ತಂದೆಗಾಗಿ ಅಲ್ಲಿದ್ದ ಪ್ರತಿಯೊಬ್ಬರೂ ಕಾಯುತ್ತಲೇ ಇದ್ದರು. ಕಲ್ಲಿನಂತೆ ನಿಂತಿದ್ದ ವಿಖ್ಯಾತ್ ಯಾಂತ್ರಿಕವಾಗಿ ನಡೆದು ಹೋಗಿ ಮಣ್ಣನ್ನು ಹಾಕಿ ಅಂತ್ಯಸಂಸ್ಕಾರ ಶುರು ಮಾಡಿಬಿಟ್ಟ. ಸೂರ್ಯ ಕೆಳಗೆ ಜಾರುತ್ತಿದ್ದಂತೆ ಅಲ್ಲಿದ್ದ ಜನರೂ ಕರಗುತ್ತಾ ಹೋದರು. ತನ್ನ ಪಕ್ಕದಲ್ಲೇ ಇದ್ದ ಆಂಟಿಯನ್ನು ಅಂಕಲ್ ಬಲವಂತವಾಗಿ ಎಳೆದುಕೊಂಡು ಹೋಗಲು ಅವರು ‘ಬೇಗ ಬಾಪ್ಪಾ’ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದರು. ಆ ಕ್ಷಣದಲ್ಲಿ ವಿಖ್ಯಾತ್‌ನಿಗೆ ತಾಯಿಯ ಮಮಕಾರದ ಅಪ್ಪುಗೆ ಬೇಕೆನ್ನಿಸಿ ಸುತ್ತಮುತ್ತಲೂ ನೋಡಲು ಯಾರೊಬ್ಬರು ಕಾಣಲೇ ಇಲ್ಲ. ಮಣ್ಣೊಳಗೆ ನೆಮ್ಮದಿಯಾಗಿ ಮಲಗಿದ್ದ ಅವನ ತಾಯಿ ಮತ್ತೆ ಅವನ ಮನಸ್ಸನ್ನು ತಟ್ಟಿ ಕೊನೆಯ ಮಾತೊಂದನ್ನು ಹೇಳಿದಂತಾಗಿ ಜೇಬಿನಲ್ಲಿ ಬಚ್ಚಿಟ್ಟುಕೊಂಡ ಸಣ್ಣ ಗಂಟನ್ನು ತೆಗೆದು ನೋಡುತ್ತಾನೆ. ಅದರೊಳಗೆ ತಾಯಿ ಕತ್ತಲ್ಲಿದ್ದ ಚಿನ್ನದ ತಾಳಿ ಮತ್ತು ನೂರರ ಮೂರು, ಹತ್ತರ ಎರಡು ನೋಟುಗಳೊಂದಿಗಿರುವ ಚೀಟಿಯೊಂದನ್ನುತೆಗೆದು ನೋಡುತ್ತಾನೆ.

`ಇಲ್ಲಿ ಯಾರೂ ನಿನ್ನ ಜೊತೆಯಿರಲ್ಲ. ನಿನ್ನನ್ ಮಾತ್ರ ನೀನ್ ನಂಬು, ಆ ದೇವರಲ್ಲಾ ನಿನ್ನ ಬುದ್ಧಿ ಶಕ್ತಿ ಮಾತ್ರ ನಿನ್ನನ್ನ ಕಾಪಾಡುತ್ತೆ.’

ಅಮ್ಮ.

ಹುಂಡಿಯನ್ನು ಒಡೆದಾಗ ಸಿಕ್ಕ ಈ ಗಂಟು ತನ್ನ ತಾಯಿಯ ಕೊನೆಯ ಉಡುಗೊರೆಯೆಂದು ಗೊತ್ತಿದ್ದರೂ ಅದನ್ನು ತೆರೆಯುವ ಧೈರ್ಯವಿರಲಿಲ್ಲ. ಆದರೆ ಅವಳು ನೀಡಿದ ಕೊನೆಯ ಸಂದೇಶವನ್ನೇ ತನ್ನ ಪಾಲಿನ ಬ್ರಹ್ಮಾಸ್ತ್ರವಾಗಿ ಮಾಡಿಕೊಂಡಿದ್ದ. ತಾಯಿಯ ಸಮಾಧಿಯನ್ನು ನೋಡುತ್ತಾ ಕುಳಿತಿದ್ದ ವಿಖ್ಯಾತ್ ಅದೇಕೋ ಸ್ಮಶಾನ ಬಿಟ್ಟು ಹೋಗಬೇಕೆನ್ನಿಸದೇ, ತಾಯಿಯ ಸಮಾಧಿಯ ಮೇಲೆ ತಲೆಯಿಟ್ಟು ಅವಳ ಮಮತೆಯ ಮಡಿಲಿನಲ್ಲಿ ಮಲಗಿರುವಂತೆ ನಿದ್ರೆ ಮಾಡಿಬಿಟ್ಟ.

‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ..ಮತದಲ್ಲಿ ಮೇಲ್ಯಾವುದೋ, ಹುಟ್ಟಿ ಸಾಯೋ ಮನುಷ್ಯ ಮನುಷ್ಯನ ಮಧ್ಯೆ ಮೇಲ್ಯಾವುದು ಕೀಳ್ಯಾವುದೋ,’

ಎಂದು ಹಾಡುತ್ತಾ ಬಂದ ವೀರಬಾಹು ಮಲಗಿದ್ದ ವಿಖ್ಯಾತ್‌ನನ್ನು ಕಂಡು ಕೋಪದಲ್ಲಿ ಹತ್ತಿರ ಬರುತ್ತಾನೆ. ನಿದ್ರೆ ಮಾಡುತ್ತಿದ್ದ ವಿಖ್ಯಾತನ ಮುಖದಲ್ಲಿದ್ದ ನಗು ಅವನು ಕನಸು ಕಾಣುತ್ತಿದ್ದನ್ನು ಸಾರಿ ಹೇಳುತ್ತಿತ್ತು. ಸತ್ತ ತಾಯಿಯೊಂದಿಗೆ ಕನಸಿನಲ್ಲಾದರೂ ಸೇರುತ್ತಿದ್ದಾನಲ್ಲ ಎಂದುಕೊಂಡವನೇ ತನ್ನ ಕಂಬಳಿಯನ್ನು ಅವನಿಗೆ ಹೊದ್ದಿಸಿ, ಬೆಳಗಾದ ಮೇಲೆ ಮುಂದೆ ಈ ರೀತಿ ಮಾಡಬಾರದೆಂದು ಬುದ್ಧಿ ಹೇಳೋಣವೆಂದುಕೊಂಡು ಮೆಲ್ಲಗೆ ‘ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮೈ ಮದರ್ ಇಂಡಿಯಾ... ಮದರ್ ಇಂಡಿಯಾ...’ ಎಂದು ಹಾಡನ್ನು ಗುನುಗುತ್ತ ಹೋದವನ ಕಣ್ಣಲ್ಲಿದ್ದ ನೀರು ಅವನ ತಾಯಿಯನ್ನು ನೆನಪಿಸಿತು.

ತಾಯಿ ಸತ್ತ ಮೂರನೇ ದಿನಕ್ಕೆ ತಾವೇ ಮುಂದೆ ನಿಂತು ವಿಖ್ಯಾತ್‌ನ ಕೈನಿಂದ ಎಲ್ಲಾ ಕಾರ್ಯಗಳನ್ನು ಮುಗಿಸಿದ್ದರು ಪಕ್ಕದ ಮನೆ ಆಂಟಿ. ಆ ದಿನಕ್ಕೆ ತನ್ನ ಈ ರೀತಿಯ ಸಮಾಜ ಸೇವೆಗಳನ್ನೆಲ್ಲಾ ಸಾಕು ಮಾಡಬೇಕೆಂದು ಆಂಟಿಗೆ ಅಂಕಲ್ ಕೊನೆಯ ಬಾರಿ ಎಚ್ಚರಿಕೆ ನೀಡಿದ್ದರಿಂದ ವಿಖ್ಯಾತ್‌ಗೆ ‘ಬೇಗ ಬಾ’ ಎಂಬ ಮತ್ತದೇ ಮಾತನ್ನು ಹೇಳಿ ಆತುರಾತುರವಾಗಿ ಆಂಟಿ ಮನೆಗೆ ಹೊರಟು ಬಿಟ್ಟರು. ಮೂರು ದಿನಗಳಿಂದ ಕಾಣೆಯಾಗಿದ್ದ ತಂದೆಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರೆ ವಿನಃ ಯಾರೂ ಅವನೆಲ್ಲಿದ್ದಾನೆಂದು ಹುಡುಕಲೇ ಇಲ್ಲ. ಮೊದಲ ದಿನ ತನ್ನ ತಾಯಿ ಸಮಾಧಿಯಿಂದ ಎದ್ದು ಬರುತ್ತಾಳೆಂದುಕೊಂಡಿದ್ದ ವಿಖ್ಯಾತ್, ಅದು ಸಾಧ್ಯವಿಲ್ಲವೆಂದು ತಿಳಿದ ಮೇಲೆ, ಮೂರನೇ ದಿನ ಸಮಾಧಿಯೊಳಗಿಂದ ತನ್ನ ಬಳಿ ಮಾತನಾಡುತ್ತಾಳೆಂಬ ನಂಬಿಕೆಯಿಂದ ಕಾದು ಕಾದು ಸಮಾಧಿಯ ಮೇಲೆ ತಲೆಯಿಟ್ಟು ಮಲಗಿಬಿಟ್ಟಿದ್ದ. ಸೊಳ್ಳೆ ಬತ್ತಿ ಖಾಲಿಯಾಗಿದ್ದು ತರಬೇಕೆಂದು ಪದೇ ಪದೆ ನೆನಪು ಮಾಡಿಕೊಳ್ಳುವ ಶಿಕ್ಷೆಯಂತೆ ವೀರಬಾಹುವಿಗೆ ಕಣ್ಮುಚ್ಚಲು ಬಿಟ್ಟಿರಲಿಲ್ಲ ಸುಡುಗಾಡಿನ ಸೊಳ್ಳೆಗಳು. ತನ್ನ ಮರೆವಿಗೆ ತನ್ನನ್ನೇ ಶಪಿಸುತ್ತಾ ಬರುತ್ತಿದ್ದವನ ಕಣ್ಣಿಗೆ ವಿಖ್ಯಾತ್‌ನ ತಾಯಿ ಪ್ರೇಮ ಎದುರಾಗಲು ಅದೇಕೋ ಇದ್ದಕ್ಕಿದ್ದ ಹಾಗೇ ಗಂಟಲಲ್ಲೇ ಮಾತುನಿಂತು ಹೋಗಿತ್ತು.

ಅತಿ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಅವನ ಬಗ್ಗೆ ಮೊದಲೇ ಅನುಕಂಪವಿದ್ದ ವೀರಬಾಹುವಿಗೆ ಅವನ ತಂದೆಯ ಬಗ್ಗೆ ತಿಳಿಯುತ್ತಿದ್ದಂತೆ ಕತ್ತನ್ನು ಮೇಲಕ್ಕೆತ್ತಿ ತ್ಪೂ ಎಂದು ಅವಾಚ್ಯ ಶಬ್ದದಿಂದ ದೇವರನ್ನು ಶಪಿಸಿದ್ದ. ಮಲಗಿದ್ದ ವಿಖ್ಯಾತನಿಗೆ ಕಂಬಳಿ ಹೊದಿಸಿದವನೇ ಅಲ್ಲಿಂದ ಸುಮ್ಮನೆ ಹೊರಟು ಹೋಗಿದ್ದ. ಈ ದಿನ ಏಕೋ ಸುಡುಗಾಡು ಸೊಳ್ಳೆಗಳು, ವಿಖ್ಯಾತ್‌ನ ಕೆಟ್ಟ ತಂದೆ ಅವನ ಬಾಯಿಂದ ಹಾಡನ್ನು ಬಾರದಂತೆ ತಡೆದಂತಿತ್ತು. ತಾನು ಮಾಡಿದ ತರಲೆಗೆ ತಾಯಿ ದಂಡಿಸಲು ಓಡಿಸಿಕೊಂಡು ಬರುವಾಗ ಕಾಲು ಜಾರಿ ಮೂರಂತಸ್ತಿನ ಮಹಡಿಯ ಮೇಲಿಂದ ಬಿದ್ದಹಾಗೆ ಕನಸು ಕಂಡ ವಿಖ್ಯಾತ್, ಭಯದಲ್ಲಿ ಕಣ್ಬಿಟ್ಟು ಮೇಲೆದ್ದು ಕೂತಿದ್ದ. ಅವನಿಗೆ ಕತ್ತಲಿನಿಂದ ಯಾರೋ ನಡೆದು ಬರುತ್ತಿರುವಂತೆ ಕಾಣುತ್ತಿತ್ತು. ಭಯದಲ್ಲಿ ಹೋಗಿ ಗೋರಿಯೊಂದರ ಹಿಂದೆ ಬಚ್ಚಿಟ್ಟುಕೊಂಡವನ ಕಿವಿ ಮೂರು ದಿನಗಳಿಂದ ಕಾಯುತ್ತಿದ್ದವನ ಧ್ವನಿಯನ್ನು ಗುರುತಿಸಿತ್ತು. ಕೆಲ ಕ್ಷಣಗಳಲ್ಲಿ ವಿಖ್ಯಾತ್ ತನ್ನ ತಂದೆಯ ಧ್ವನಿಯೇ ಎಂದು ದೃಢವಾಗುತ್ತಿದ್ದಂತೆ ಓಡಿಹೋಗಿ ತಬ್ಬಿಕೊಂಡು ನಡೆದದ್ದೆಲ್ಲವನ್ನು ಹೇಳಿಕೊಳ್ಳಬೇಕು ಎಂದು ಮೇಲೆದ್ದವ ಮುಂದೆ ನಡೆಯಲಿರುವ ಘಟನೆಗೆ ಗೋರಿಗಳೊಂದಿಗೆ ತಾನು ಸಾಕ್ಷಿಯಾಗಿದ್ದ.

ತಾಯಿಯ ಸಮಾಧಿಯ ಮುಂದೆ ಮಂಡಿಯೂರಿ ಕುಳಿತು ಬಾಳೆಎಲೆಯಲ್ಲಿ ಕಾಗೆ ತಿಂದುಬಿಟ್ಟು ಉಳಿದಿದ್ದ ಊಟವನ್ನು ಒಂದೇ ಸಮನೆ ತಿನ್ನುತ್ತಿದ್ದ ತಂದೆ ಹೇಳದಿದ್ದರೂ ವಿಖ್ಯಾತ್‌ಗೆ ಅರ್ಥವಾಗಿತ್ತು. ತನ್ನ ಹೆಂಡತಿ ಸತ್ತ ವಿಷಯವೇ ಗೊತ್ತಿಲ್ಲದವನಿಗೇ ತಾನು ತಿನ್ನುತ್ತಿರುವುದು ತನ್ನ ಹೆಂಡತಿ ಸಮಾಧಿ ಮುಂದಿಟ್ಟಿರುವ ಪಿಂಡವೆಂದು ಹೇಗೆ ತಾನೇ ಅರಿಯಬಲ್ಲನೆಂದುಕೊಂಡ. ತನ್ನ ತಾಯಿ ಹಸಿದು ಬಂದಿದ್ದ ಗಂಡನಿಗೆ ಊಟವನ್ನಿಟ್ಟು ಬಗೆಯನ್ನು ಕಂಡು ತಂದೆ ವಿಷಯದಲ್ಲಿ ಶಾಂತಿಯಿಂದಿರುತ್ತಿದ್ದರ ಕಾರಣ ಅವಳ ಪ್ರೀತಿಯೆಂದು ಅರ್ಥ ಮಾಡಿಕೊಂಡಿದ್ದ. ಆದರೆ ತನ್ನ ತಂದೆಗೇಕೆ ಇದು ಅರ್ಥವಾಗಲಿಲ್ಲ ಎಂದು ಯೋಚಿಸುತ್ತಿರಲು ವಿಖ್ಯಾತ್‌ನಿಗೆ ತನ್ನ ತಂದೆಯ ಮನದಾಳದ ಮಾತು ಕೇಳಿಸಿತು.

‘ಅಬ್ಬಾ! ಉಸಿರು ವಾಪಾಸ್ ಬಂತು..ಈ ಬಡವನ ಹೊಟ್ಟೆ ತುಂಬಿಸಿದ್ ದೇವ್ರೇ! ನಿನಗ್ ಸ್ವರ್ಗಾನೇ ಸಿಗುತ್ತೆ. ನನ್ನಂತೋರ‍್ಗೆ ಎಲ್ಲೂ ಊಟ ಸಿಗಲಿಲ್ಲಾ ಅಂದ್ರು ಇಲ್ಲಿ ಖಂಡಿತ ಸಿಗುತ್ತೆ, ನಾಯಿಗಳ್ ಬಿಟ್ಟಿದ್ರೇ ಮಾತ್ರ..’ ಎಂದು ಗೊಳ್ಳನೆ ನಗುತ್ತ ತನ್ನ ಮಾತನ್ನು ಮುಂದುವರೆಸಿದ್ದ.

‘ನೀನ್ ಯಾರು..ಹೆಂಗ್ ಸತ್ತೇ ಅಂತ ನೀನಂತೂ ಹೇಳಕ್ ಆಗಲ್ಲಾ..ನಾನ್ ನಿನಗೇ ಐರನ್‌ಮ್ಯಾನ್ ಒಬ್ಬನ ಕಥೆ ಹೇಳ್ತೀನಿ..ಕೇಳಿಸ್ಕೋ.. ಏ..ಏಯ್! ಐರನ್‌ಮ್ಯಾನ್ ಅಂದ್ರೇ ನೀನ್ ಆ ಥರಾ ಅಂದ್ಕೋಬೇಡಾ..ಇವನೇ ಬೇರೇ..ಈ ಕೆಲವರ್ ಕಾಲ್ಗುಣ ಸರಿಯಿಲ್ಲಾಂದ್ರೇ ಐರನ್ ಲೆಗ್ ಅಂತಾರೇ..ಹಂಗೇ ಕೆಲವರ್ ಕೈ ಸರಿಯಿಲ್ಲ ಅಂದಾಗ ಐರನ್ ಹ್ಯಾಂಡ್ ಅಂತಾರೇ.. ಬಾಯ್ ಸರಿಯಿಲ್ಲಂದ್ರೇ ನಾಸ್‌ನ್ನ ಬಾಯಿ..ಕೆಟ್ಟ ಕಣ್ಣು..ದರಿದ್ರ ನನ್ಮಗಾ ಹಿಂಗೆ ಏನೇನೋ ಅಂತಾರೇ..ಆದ್ರೇ ಈ ಐರನ್‌ಮ್ಯಾನ್ ಇದಾನಲ್ವಾ..ಇವನ್ ಕೈಯಿಟ್ರೇ ಪಕ್ಕಾ ಮಟಾಷ್‌ಏ..ಒಳ್ಳೇದು ಅನ್ನೋದ್ಯಾವ್ದು ಇವನ್ ಲೈಫ್‌ಲ್ ನಡಿಯೋದೇ ಇಲ್ಲ. ದ ಗಾಡ್ ಮೋಸ್ಟಿ ಕ್ರೇಜೀ ಅನ್ಸುತ್ತೇ ಈ ಐರನ್‌ಮ್ಯಾನ್ ವಿಷಯದಲ್ಲಿ.. ಇವನ ಹಣೆಬರಹ ಹೇಗಿರುತ್ತೇ ಅಂದ್ರೇ ಹತ್ತಾರು ಕಿಲೋ ಮೀಟರೂ ಕಷ್ಟಪಟ್ಟು ಊಟ ಮಾಡೋಣ ಅಂತ ಹುಡಿಕೊಂಡು ಹೋದ್ರೇ ಅವತ್ತು ಆ ಹೋಟೆಲ್ ಮುಚ್ಚಿರುತ್ತೆ. ಕಾರಣ ಆ ಹೋಟೆಲ್ ಓನರ್ ಮನೇಲ್ ಯಾರಾದ್ರು ಹೊಗೆ ಹಾಕಸ್ಕೊಂಡಿರಬಹುದು.. ಇಲ್ಲಾ ಆ ಹೋಟೆಲೇ ದಿವಾಳಿಯೆದ್ದು ಮುಚ್ಚೋಗಿರಬಹುದು.. ಒಂದ್ವೇಳೆ ಹೋಟೆಲ್ ತೆಗದಿತ್ತು ಅಂದ್ಕೋ ಅಣ್ಣನ್ ಪವರ್‌ಗೆ ಎರಡ್ ಅವರ್ ಊಟಕ್ಕೆ ಕಾಯ್ಲೇಬೇಕು.. ಯಾವತ್ತೂ ಬರದಿರೋ ಜನ ಅವತ್ತು ಆ ಹೋಟೆಲ್‌ಗ್ ಬಂದಿರೋದಕ್ಕೆ ನೂಕುನುಗ್ಗಲು..ಸರೀ ಎರಡ್ ಅವರ್ ಆದ್ಮೇಲ್ ನಮ್ಮ ಐರನ್ ಮ್ಯಾನ್ ಸೀಟ್ ಮೇಲ್ ಕೂತ್ಕೊಂಡು ಎಲೆಗ್ ಕಾಯ್ತಾ ಇದ್ರೇ, ಅವನಗ್ ಮಾತ್ರ ಒಣಗೋಗಿರೋ ಎಲೆನೋ ಅಥವಾ ಚಿಕ್ಕ ಎಲೆನೋ ಸಿಗುತ್ತೆ. ಅದಕ್ಕೂ ಓಕೆ ಅಂದ್ಕೊಂಡು ಸಪ್ಲೇಯರ್ ಮುಖ ನೋಡಿ ಅವನಗ್ ಬೇಕಾಗಿರೋ ಐಟಂಗಳ ಲಿಸ್ಟ್ ಹೇಳಿದ್ಮೇಲೆ ಖುದ್ದು ನಮ್ಮ ಐರನ್‌ಮ್ಯಾನ್‌ಗೇ ಗೊತ್ತಾಗುತ್ತೆ ಅವನ್ ಪವರು ಏನೂಂತಾ..ಕರ್ಮನಯ್ಯಾ ಅವನ್ ಕೇಳಿದ್ದ ಒಂದ್ ಐಟಂ ಕೂಡ ಆ ಸಪ್ಲೈಯರ್ ಇದೆ ಅಂತ ಒಪ್ಪೋಕ್ ರೆಡಿನೇ ಇಲ್ಲಾ..ಅದೆಲ್ಲಾ ಖಾಲಿಯಾಗಿದೆ ಸರ್..ಈಗಿರೋದೇ ಎರಡು ಐಟಂ ಅಂತ ಹೆಸರು ಹೇಳ್ತಾನೆ..’ ಎಂದು ಹೇಳುತ್ತಲೇ ಅವನಿಗೇ ಗೊತ್ತಿಲ್ಲದೆ ಕಣ್ಣೀರಾಕುತ್ತ ತನ್ನ ಮಾತನ್ನು ಮುಂದುವರೆಸಿದ್ದ.

‘ನನ್ಗೂ ಎಲ್ಲರ ತರಹ ಇರಬೇಕು ಚೆನ್ನಾಗೇ ಬಾಳಬೇಕು ಅಂತ ಆಸೆನೇ..ಏನ್ ಮಾಡೋದು ಆಗೋದೇ ಇಲ್ಲಾ..ನನ್ ಹೆಂಡ್ತಿ, ಒಬ್ನೇ ಮಗ ಪಾಪಾ ಅವರ್ ಕರ್ಮ, ನನ್ ಕೈಗ್ ತಗಲಾಕೊಂಡವ್ರೇ..ಥೂ ನನ್ನ ಜನ್ಮಕಿಷ್ಟು ಬೇಗ ನೆಗೆದುಬಿದ್ದೋಗಬರ‍್ದಾ.. ಒಳ್ಳೇಯವರಗ್ ಹುಟ್ಟಿದ್ದೀವಿ..ಒಳ್ಳೇ ರೀತಿನೇ ಬದುಕಬೇಕು ಅಂತ ಅಪ್ಪ-ಅಮ್ಮ, ಮೇಷ್ಟ್ರು, ನಾಟಕ, ಸಿನಿಮಾಗಳಲ್ಲಿ ನೋಡಿ ನೋಡಿ ಅದೇ ನಿಜ ಅಂದ್ಕೊಂಡು ಹಂಗೇ ಬದುಕೋಕ್ ಹೋಗಿ ಹಾಳಾಗೋಯ್ತು ನನ್ ಜೀವನ.. ನೋಡ್ತಾ ನೋಡ್ತಾ ಎಲ್ಲಾ ಬದಲಾಗೋಯ್ತು..ಮೊದ್ಲು ಮೋಸ ಮಾಡೋದು ತಪ್ಪು ಅಂತಾ ಇದ್ದವರೇ ಈಗ ಮೋಸ ಹೋಗೋದು ನಿಮ್ಮ ತಪ್ಪು ಮೋಸ ಮಾಡೋದು ಅವನ ಬುದ್ದಿವಂತಿಕೆ ಅಂತಾ ಪ್ಲೇಟ್‌ ಛೇಂಜ್ ಮಾಡ್ಬಿಟ್ರು.. ಆಮೇಲ್ ಗೊತ್ತಾಗಿದ್ ಏನೂಂದ್ರೇ ಆಲದಮರಕ್ಕೆ ಯಾವನೋ ಒಬ್ಬ ನೀರಾಕಿದ್ದಕ್ಕೆ ಅದ್ ಬೆಳಯಲ್ಲಾ ಅದ್ ತಾನು ಬೆಳಿಬೇಕು ಅಂತ ನಿರ್ಧಾರ ಮಾಡಿದ್ ಮೇಲೆ ತನ್ನ ಬೇರನ್ನ ಆಳವಾಗಿ ನೆಲದೊಳಕ್ಕೆ ಊರಿದ್ ಮೇಲೆ ಅಂತರ್ಜಲನ ಸಂಪಾದನೆ ಮಾಡಿ ವಿಶಾಲವಾದ ಆಲದಮರವಾಗ್ ಬೆಳಿಯುತ್ತೆ, ಕೆಲವೊಂದು ದೊಡ್ಡ ಆಲದಮರವಾಗ್ ಬೆಳಿಯುತ್ತೆ.. ಕರ್ಮ ಏನೂಂದ್ರೇ ಈಗ್ಲೂ ನಾನೂ ದುಡ್ಡು ಮಾಡ್ದೇ ಈ ರೀತಿ ಕಥೆ ಹೇಳ್ಕೊಂಡ್ ಬೇವರ್ಸಿ ತರಹ ಬದಕ್ತಾ ಇದ್ದೀನಿ ಅನ್ನೋದು ತುಂಬಾ ಕಾಡುತ್ತೆ..ರೀ! ಜೀವ ಇಲ್ದೇ ನೆಮ್ಮದಿಯಾಗ್ ಮಣ್ಣಿನ ಕೆಳಗ್ ಮಲಗಿರೋವರೇ ಆ ಐರನ್‌ಮ್ಯಾನ್ ಯಾರ್ ಗೊತ್ತಾಯ್ತಾ..ನೀವ್ ಹುಂ..ಊಂಹು ಎರಡು ಹೇಳೋಕ್ ಆಗಲ್ಲಾ..ನಾನೇ ಹೇಳ್ತೀನಿ..ಆ ಐರನ್‌ಮ್ಯಾನ್ ನಾನೇ’ ಎಂದು ತುಂಬಾ ವಿಕಾರವಾಗಿ ನಗಲು ಶುರು ಮಾಡುತ್ತಾನೆ. ‘ನನ್ ದರಿದ್ರ, ನನ್ ಹೆಂಡ್ತಿ-ಮಗನಿಗೆ ಅಂಟಕೋಬಾರದು ಅಂತ ನಾನ್ ಅವರಿಂದ ತುಂಬಾ ದೂರ ಈ ರೀತಿ ಬದಕ್ತಿದ್ದೀನಿ.. ದುಡ್ಡು ದುಡ್ಡು ದುಡ್ಡು ಅದೇ ಅದ್ಬುತ..ಅದೇ ಶಾಶ್ವತ..ಅದೇ ಅಲ್ಟಿಮೇಟ್..ಅದೇ ಎಲ್ಲಾ’

ತಂದೆಯ ಅಷ್ಟು ಮಾತನ್ನು ಕೇಳಿಸಿಕೊಂಡ ವಿಖ್ಯಾತ್, ಏನೋ ನೆನಪಾದವನಂತೆ ಮನೆಯ ಕಡೆ ಓಡಿದ್ದ.

ಮನೆಗೆ ಬಂದ ವಿಖ್ಯಾತ್ ಬೀರುವಿನಲ್ಲಿದ್ದ ಮೊಳಗಾತ್ರ ಚಾಕ್‌ಲೇಟನ್ನು ಹೊರತೆಗೆದು ಎರಡು ನಿಮಿಷಗಳಲ್ಲಿ ತಿಂದು ಮುಗಿಸಿದವನೇ, ಒಂದು ಗ್ಲಾಸ್ ಬಿಸಿಹಾಲನ್ನು ಕುಡಿದು ಕಣ್ಮುಚ್ಚಿ ಹೊಸ ಕನಸೊಂದನ್ನು ಆಹ್ವಾನಿಸಿದ್ದ.

***

ಪ್ರತಿ ರಾತ್ರಿಯಂತೆ ಆ ರಾತ್ರಿಯೂ ವಿಖ್ಯಾತ್ ತನ್ನ ತಂದೆಯನ್ನು ಹುಡುಕಿಕೊಂಡು ಸ್ಕಿಲ್ ಕ್ಲಬ್‌ಗೆ ಬಂದಿದ್ದ. ಅವನ ಕಣ್ಣು, ಮನಸ್ಸೆರಡನ್ನು ಬೆರಗುಗೊಳಿಸಿದ್ದು ಅಲ್ಲಿ ಪ್ರದರ್ಶನಕ್ಕೆಂದು ಇಟ್ಟಿದ್ದ ಹೊಸ ಐದು ರೂಪಾಯಿ ನಾಣ್ಯದ ಆರ್ಟಿಫಿಶೀಯಲ್ ಡೆಮೋ ಫೀಸ್. ಸರ್ಕಾರ ಹಳೆ ಬೆಳ್ಳಿ ಬಣ್ಣದ ಐದು ರೂಪಾಯಿನ ನಾಣ್ಯದ ಜೊತೆಗೆ ಹೊಸದಾಗಿ ಚಿನ್ನದ ಬಣ್ಣದ ಐದು ರೂಪಾಯಿ ನಾಣ್ಯವನ್ನು ಮುದ್ರಿಸುತ್ತಿರುವ ಬಗ್ಗೆ ನೀಡಿದ ಜಾಹೀರಾತನ್ನು ಅಂಗಡಿ ಮಾಲೀಕ ಕದ್ದು ತಂದು ಜೂಜುಕೋರರನ್ನು ಆಕರ್ಷಿಸಲೆಂದು ಪ್ರದರ್ಶನಕ್ಕಿಟ್ಟಿದ್ದ. ಅದರ ಕಡೆಯೇ ನಡೆದು ಹೋದ ವಿಖ್ಯಾತ್ ಮನಸ್ಸಲ್ಲಿ ಬಂದ ಪ್ರಶ್ನೆಯನ್ನು ಸ್ಕಿಲ್‌ಕ್ಲಬ್ ಮಾಲೀಕನಿಗೆ ಕೇಳಿದ. ಅವನು ಕೂಡ ತನ್ನ ಮನಸ್ಸಿಗೆ ಬಂದ ಉತ್ತರ ನೀಡಿ ಜೋರಾಗಿ ನಕ್ಕು ಬಿಟ್ಟಿದ್ದ. ಆದರೆ ಅವನು ರೇಗಿಸಲೆಂದು ಹೇಳಿದ ಆ ಮಾತು ವಿಖ್ಯಾತ್‌ನ ಶಾಶ್ವತವಾದ ನೆನಪಿನ ಶಕ್ತಿಯ ಮುಂಚೂಣಿಯಲ್ಲಿ ಕುಳಿತು ಬಿಟ್ಟಿತು. ಕೆಲವು ವರ್ಷಗಳ ನಂತರ ಆ ಮಾಲೀಕ ಇಟ್ಟಿದ್ದ ಸವಾಲನ್ನು ವಿಖ್ಯಾತ್ ಗೆದ್ದುಬಿಡುತ್ತಾನೆ.

`ಅಂಕಲ್ ನೋಟ್ ಮೇಲೆ ಗಾಂಧಿ ತಾತ ಫೋಟೋ ಇರುತ್ತೆ. ಈ ಕಾಯಿನ್ ಮೇಲ್ ಯಾಕ್ ಯಾರ್ ಫೋಟೋನೂ ಇಲ್ಲ?’

`ಹೌದಲ್ವಾ...ಅವರ್ ಮರೆತವರೇ ಅನಿಸುತ್ತೇ. ನೀನ್ ಒಂದ್ ಕೆಲಸ ಮಾಡೋ, ನೀನ್ ದೊಡ್ಡವನ್ ಆದ್ಮೇಲ್ ಒಂದ್ ಕಾಯಿನ್ ಮಾಡಿ ಅದರ ಮೇಲ್ ನಿನ್ನ ಫೋಟೋ ಹಾಕ್ಕೋ ಇಲ್ಲಾ ಆ ಕಾಯಿನ್‌ಗೇ ನೀನೇ ಒಂದ್ ಹೆಸರಿಡು!’

ವಿಖ್ಯಾತ್ ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ.

`ಈಗ ಅದಮ್ಕೊಂಡು ಜಾಗ ಖಾಲಿ ಮಾಡು...’

ಕಿವಿಯೊಳಗಿದ್ದ ಹೆಡ್‌ಫೋನ್‌ನಿಂದ ಬರುತ್ತಿದ್ದ ವಿಖ್ಯಾತ್‌ನ ಮಾತುಗಳಿಂದ ಅವನ ಕಥೆಯನ್ನು ಕೇಳಿಸಿಕೊಳ್ಳುತ್ತಿದ್ದ ಹೇಮಂತ್, ಗೊಂದಲದಿಂದ ಅವನ ಮುಂದೆ ಇರುವ ವಿಕ್ರಂ ಭಂಡಾರಿ ಮತ್ತು ಆ್ಯಂಟನಿದಾಸ್ ಕಡೆ ನೋಡಿದ. ಕೀಬೋರ್ಡ್ನಲ್ಲಿ ಪಾಸ್ ಬಟನ್ ಒತ್ತಿ ವೀಡಿಯೋ ನಿಲ್ಲಿಸಿದ್ದ ಆ್ಯಂಟನಿ, ಹೇಮಂತ್ ಹೆಡ್‌ಫೋನ್ ತೆಗೆಯೋದು. ವಿಕ್ರಂ ಏನೆಂದು ಕಣ್ಣಲ್ಲೇ ಕೇಳಿದ.

`ಸರ್ ಅವನ್ ಹೇಳಿದ್ದೆಲ್ಲಾ ನಿಜಾ...’

ವಿಕ್ರಂ ಭಂಡಾರಿ ನೆಮ್ಮದಿಯ ನಿಟ್ಟುಸಿರು ಬಿಡಲೆಂದು ಉಸಿರನ್ನು ಒಳಗೆ ತೆಗೆದುಕೊಂಡ. ಅವನ ಮುಂದಿನ ಮಾತು ಅವರ ಉಸಿರು ನಿಂತು ಹೋಗುವಂತೆ ಮಾಡಿತ್ತು.

`ಆದರೇ ಇದು ಅವರ್ ಗುರು ಲೈಫಲ್ ನಡೆದಿರೋದು...’ ಅಂತ ಹೇಮಂತ್ ಹೇಳಿದ್ದಕ್ಕೆ ಕುತೂಹಲಗೊಂಡ ವಿಕ್ರಂ `ಏನ್ ಅವರ್ ಹೆಸ್ರು?’ ಅಂತ ವಿಚಾರಿಸತೊಡಗಿದ.

`ಸಾರ್ ಅವರ್ ಹೆಸರು ತುಂಬಾ ಇಂಗ್ಲೀಷಾಗಿದೆ ಸರ್. ಸಂತೆ, ಮೊಟ್ಟೆ, ನಾಕೌಟ್ ಅಂತೆಲ್ಲಾ ಬರುತ್ತೆ. ನನಗ್ ನೆನಪಿಲ್ಲ. ಆದ್ರೇ ವಿಕ್ಕಿಗ್ ಅವರ ಸಿಕ್ಕಿದ್ದು ಆ್ಯಮ್‌ ಸ್ಟ್ಯಾಡಮ್ ಲ್ಲಂತೇ. ಅವರೇ ನನ್ ಲೈಫನ್ ಬದಲಾಯಿಸಿದ್ ಗುರು ಅಂತ ಯಾವಾಗ್ಲೂ ಹೇಳ್ತಿದ್ದ...’

ವಿಕ್ರಂ ಭಂಡಾರಿ, ಆ್ಯಂಟನಿ ದಾಸ್, ಸೀನಪ್ಪ ಮೂರು ಜನರಿಗೆ ಅವರಿರುವ ರೂಂನಲ್ಲಿದ್ದ ನಿಶ್ಯಬ್ದ ತುಂಬಾ ಕಾಡುತ್ತಿತ್ತು.`ನೀನ್ ಅವರನ್ನ ಒಂದ್ಸಾರಿನೂ ನೋಡಿಲ್ವಾ?’ ಅಂತ ಆ್ಯಂಟನಿ ಕೇಳಿದಾಗ ಹೇಮಂತ್ `ಇಲ್ಲ’ ಎಂದು ಉತ್ತರಿಸಿದ್ದ.

ಬಾಯಲ್ಲಿದ್ದ ಸಿಗರೇಟಿನ ಹೊಗೆಯನ್ನು ಬಾತ್‌ರೂಂನ ಕಿಟಕಿಯಿಂದ ಹೊರಗೆ ಬಿಡುತ್ತಿದ್ದ ವಿಕ್ರಂ ಭಂಡಾರಿ ಛೇಂಬರ್‌ನಲ್ಲಿ ತನಗಾಗಿಯೇ ಕಾದು ಕುಳಿತಿರುವ ಕಮಲನಾಥ್ ಸೌಬಲರ ಬಳಿ ಹೋಗಿ ಏನೆಂದು ಹೇಳುವುದೆಂದು ಯೋಚಿಸಿದ. ಹೇಮಂತ್ ಹೇಳಿದ ಹೊಸ ಮಾಹಿತಿಯನ್ನು ತಿಳಿಸಲೆಂದು ಹೊರಗೆ ಅವರ ಬಳಿ ಹೋಗುತ್ತಾನೆ.

`ವಿಕ್ರಂ... ವಿಖ್ಯಾತ್ ಗುರು ಹೆಸರು ಸತಾಶೀ ನಕಾಮೋಟೋ... ಹೀ ಇಸ್ ದಿ ಫಾದರ್ ಆಫ್ ಕ್ರಿಪ್ಟೋ ಕರೆನ್ಸಿ. ಅದೇ ಅವನ ನಿಜವಾದ ಹೆಸರು ಅಂತಾನೂ ಯಾರಿಗೂ ಗೊತ್ತಿಲ್ಲ. ಅವನ್ ಯಾವ ಕಂಟ್ರಿ ಸಿಟಿಜನ್ ಅಂತಾನೂ ಗೊತ್ತಿಲ್ಲ. ಆದರೆ ಅವನ್ ಕಂಡ್ ಹಿಡಿದಿರೋ ಬಿಟ್‌ಕಾಯಿನ್ ಪ್ರಪಂಚದಾದ್ಯಂತ ಚಲಾವಣೆಲಿದೆ. ನೋ ಟ್ಯಾಕ್ಸ್. ನೋ ಬಾರ್ಡರ್. ಇನ್ನೂ ಇಂಟರೆಸ್ಟಿಂಗ್ ಥಿಂಗ್ ಒಂದಿದೆ’ ಅಂತ ಹೇಳಿ ಕಮಲನಾಥ್‌ರು ಎದುರಿಗೆ ಲ್ಯಾಪ್‌ಟಾಪ್ ಹಿಡಿದು ನಿಂತಿದ್ದವನ ಕಡೆ ಮಾತಾಡೆನ್ನುವಂತೆ ನೋಡುತ್ತಾರೆ. ವಿಕ್ರಂ ಭಂಡಾರಿಗೆ ಚೆನ್ನಾಗಿ ಗೊತ್ತಿತ್ತು ಇಷ್ಟು ಹೊತ್ತು ಕಮಲನಾಥರ ಮಾತಿನ ಹಿಂದಿದ್ದ ಗೂಗಲ್ ಯಾರೆಂದು, ಈಗ ಅವನೇ ಮಾತನ್ನು ಶುರುಮಾಡಿದ್ದ.

`ಯೆಸ್ ಸರ್. ಸರ್ ಇವನ್ ಬಗ್ಗೆ ಪ್ರತಿ ದೇಶದಲ್ಲೂ ಅವರವರ್ ನೆಟಿವಿಟಿಗ್ ತಕ್ಕ ಹಾಗ್ ಒಂದೊಂದ್ ಸ್ಟೋರಿ ರೆಡಿ ಮಾಡಿದಾರೆ. ವಿಖ್ಯಾತ್ ನಮಗ್ ಹೇಳಿದ್ದು ಮದರ್ ಸೆಂಟಿಮೆಂಟ್, ಅದು ನಮ್ಮ ಇಂಡಿಯನ್ ವರ್ಶನ್, ಇನ್ನೊಂದ್ ಇಂಟರೆಸ್ಟಿಂಗ್ ವರ್ಶನ್ ಒಂದಿದೆ. `ಕೋಟ್ಯಧಿಪತಿ ಸತಾಶಿ ನಕಾಮೋಟೊ ತನ್ನ ಹೆಂಡ್ತಿ ಜೊತೆ ಯುಎಸ್‌ಗೆ ಟ್ರಿಪ್‌ಗೆ ಅಂತ ಹೋಗಿದ್ದಾಗ ಅಲ್ಲಿ ಆಕೆ ಹೆಲ್ತ್ ಅಪಸೆಟ್ ಆಯ್ತಂತೆ. ಆಗ ಮೇಜರ್ ಸರ್ಜರೀಸ್ ಮಾಡ್ಬೇಕು ಅಂತ್ಹೇಳಿ ಒಂದಷ್ಟು ಕೋಟಿಗಳನ್ನ ಇಮಿಡಿಯೇಟ್‌ಆಗಿ ಕೇಳಿದ್ದಾರೆ. ಆ ದುಡ್ಡು ಅವನತ್ರ ಇದ್ರು ಸತಾಶಿ ನಕಾಮೋಟೋ ಬೇರೆ ಕಂಟ್ರಿ ಸಿಟಿಜನ್ ಆಗಿರೋದರಿಂದ ಅವನ ದೇಶದ ಕರೆನ್ಸಿನಾ ಈ ದೇಶದ ಕರೆನ್ಸಿಯಾಗ್ ಕನ್ವರ್ಟ್ ಮಾಡೋಕೆ ಟೈಂ ತಗೊಂಡಿದ್ದಾನೆ. ಮೀನ್ ವೈಲ್ ಅವನ್ ಹೆಂಡ್ತಿ ಡೆತ್ ಆಗಿದೆ, ಸ್ವಲ್ಪ ದಿನ ತನ್ನ ಹೆಂಡ್ತಿ ಸಾವಿಗೆ ನಾನೇ ಕಾರಣ ಅಂತ ಕೊರಗ್ತಿದ್ದವನು ಹೋಗ್ತಾ ಹೋಗ್ತಾ ಅವನ್ ಪ್ರಾಬ್ಲಂನಾ ಅನಲೈಸ್ ಮಾಡಿದಾಗ ಈ ಕರೆನ್ಸಿ ಎಕ್ಸ್ಚೇಂಜ್ ಪ್ರೋಸೆಸ್ ಮೇಲ್ ಅವನ ಕಣ್ ಬೀಳುತ್ತೆ. ವೃತ್ತಿಯಲ್ಲಿ ಅವನೊಬ್ಬ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರಿಂದ ಒಂದಷ್ಟು ವರ್ಷಗಳ ಕಾಲ ಕಷ್ಟಪಟ್ಟು ಬಿಟ್‌ಕಾಯಿನ್ ಅನ್ನೋ ಕ್ರಿಪ್ಟೋ ಕರೆನ್ಸಿ ಕಂಡ್ ಹಿಡಿತ್ತಾನೆ. ಬ್ಲಾಕ್‌ಚೈನ್ ಮುಖಾಂತರ ಪ್ರಪಂಚದಲ್ಲಿ ಎಲ್ ಬೇಕಾದ್ರೂ ಕೂತ್ಕೊಂಡ್ ಆ ದೇಶದ ಕರೆನ್ಸಿಯಾಗ್ ಕನ್ವರ್ಟ್ ಮಾಡ್ಕೊಬೋದು. ಸರ್ ನೀವ್ ಹೇಳಿದ್ಹಾಗೇ ಅದಕ್ಕೆ ನೋ ಬಾರ್ಡರ್, ನೋ ಕಸ್ಟಮ್ಸ್, ನೋ ಟ್ಯಾಕ್ಸ್, ಒಂದು ರೀತಿ ಇವನದು ಕೂಡ ಸುಭಾಶ್ ಚಂದ್ರ ಬೋಸ್ ಡೆತ್ ಕಾನ್ಸ್ಪಿರೆಸಿ ತರಹ ಲಾಟ್ ಆಫ್ ವರ್ಶನ್ಸ್ ಇದೆ.’ ಎಂದು ಹೇಳಿದ್ದ ಆ್ಯಂಟನಿದಾಸ್.

`ಸರ್ ಅವನ್ ಸ್ಟೋರಿ ಏನೇ ಆಗಿರ್ಲಿ, ಆದ್ರೇ ಬಿಟ್ ಕಾಯಿನ್ ಮಾರ್ಕೇಟಲ್ ಇದ್ಯಲ್ಲ... ಹೇಮಂತ್ ಹೇಳೋ ಪ್ರಕಾರ ವಿಖ್ಯಾತ್‌ಗೆ ಸತಾಶಿ ನಕಾಮೋಟೋ ಗೊತ್ತಾ? ಇಡೀ ಪ್ರಪಂಚಕ್ಕೆ ಯಾರು ಅಂತ ಗೊತ್ತಿಲ್ಲದಿರೋ ವ್ಯಕ್ತಿ ಬಗ್ಗೆ ಗೊತ್ತಿರೋ ವ್ಯಕ್ತಿ ಈಗ ನಮ್ಮತ್ರ ಇದ್ದಾನಾ?’ ಎಂದು ಪ್ರಶ್ನಿಸಿದ್ದ ವಿಕ್ರಂ ಭಂಡಾರಿ.

ಕಮಲನಾಥ್ ಸೌಬಲ, ಆ್ಯಂಟನಿದಾಸ್, ಸೀನಪ್ಪ ಆ ರೂಂನಲ್ಲಿದ್ದ ಯಾರೊಬ್ಬರ ಬಳಿಯೂ ಆ ಪ್ರಶ್ನೆಗೆ ಉತ್ತರವಿರಲಿಲ್ಲ. ಆ ಪ್ರಶ್ನೆಗೆ ಉತ್ತರ ನೀಡಬೇಕಾಗಿದ್ದ ಏಕೈಕ ವ್ಯಕ್ತಿ ಎರಡನೇ ಮಹಡಿಯ ಸೆಲ್‌ನಲ್ಲಿದ್ದು, ಆದಷ್ಟು ಬೇಗ ತನ್ನ ಪ್ರಾಣಸ್ನೇಹಿತ ತನ್ನನ್ನು ಹೊರಗಡೆ ಕರೆದುಕೊಂಡು ಹೋಗುತ್ತಾನೆಂಬ ಓವರ್ ಕಾನ್ಪಿಡೆನ್ಸ್ನಲ್ಲಿದ್ದ ಹೇಮಂತ್. ಅವನನ್ನು ತಮ್ಮ ದಾರಿಗೆ ಕರೆತರಬೇಕೆಂದು ತೀರ್ಮಾನ ಮಾಡಿದ್ದ ವಿಕ್ರಂ ಭಂಡಾರಿ, ಆ್ಯಂಟನಿದಾಸ್ ಈ ಸಾರಿ ದೈಹಿಕವಾಗಲ್ಲದೇ, ಮಾನಸಿಕವಾಗಿಯೂ ಅವನಿಗೆ ಹಿಂಸೆ ಕೊಟ್ಟು ಅವನ ಬಾಯನ್ನು ತೆರೆಸಿದ್ದರು. ಅದು ಪೊಲೀಸರಿಗೆ ತುಂಬಾ ಸುಲಭವಾದ ವಿಧಾನವಾಗಿದ್ದು, ಬೇರೆ ಯಾವುದೇ ದಾರಿಯಿಲ್ಲದಾಗ ಮಾತ್ರ ಅವರು ಈ ವಿಧಾನವನ್ನು ಬಳಸಿಕೊಳ್ಳುತ್ತಾರೆ. ಆ ವಿಧಾನವನ್ನು ವಯಸ್ಸಿನಲ್ಲಿ ಹಿರಿಯರಾಗಿದ್ದ ಸೀನಪ್ಪನಿಂದಲೇ ಮಾಡಿಸಬೇಕೆಂದು ತೀರ್ಮಾನಿಸಿದ್ದರು. ಅವರಿಂದಲೇ ಹೇಮಂತ್‌ನ ಮನಸ್ಸು ಮುಟ್ಟುವಂತೆ ಹೇಳಿಸಿದ್ದರು ವಿಕ್ರಂ, ಆ್ಯಂಟನಿ.

`ಹೇಮಂತು... ನೀನ್ ಹೇಳೇ ಇರಲಿಲ್ಲ. ನಿನಗೇ ಮೂರ್ ಜನ ಅಕ್ಕಂದಿರು ಇದ್ದಾರೆ ಅಂತ. ಪರವಾಗಿಲ್ಲಾ ಆದ್ರೂ ತುಂಬಾ ಸಂತೋಷ ಕಣಯ್ಯ. ಒಬ್ನೆ ಅವರ್‌ಗೆಲ್ಲಾ ದಾರಿ ತೋರಿಸಿದ್ಯಲ್ಲ ನೀನ್ ದೊಡ್ಡ ಮನುಷ್ಯ ಕಣಯ್ಯ... ಪೊಲೀಸ್‌ನವರ ಹತ್ತಿರ ಸುಮ್ನೆ ಹಠ ಮಾಡಬಾರ್ದು. ನಿಜ ಹೇಳ್ಬಿಡ್ಬೇಕು. ಈಗ್ನೋಡು ಆ್ಯಂಟನಿ ನಿಮ್ಮ ಮೊದಲನೇ ಭಾವನ ಅಂಗಡಿಲ್ಲಿ ಐವತ್ತು ಕೆಜಿ ಗಾಂಜಾ ಇಡ್ಸೀ ಅರೆಸ್ಟ್ ಮಾಡ್ಸೋ ಪ್ಲಾನ್ ಮಾಡಿದ್ದಾನೆ. ಹಂಗೆ ನಿಮ್ಮ ಎರಡನೇ ಅಕ್ಕನ ದೊಡ್ಡ ಮಗ. ಮೂರನೇದು ನಿನ್ನ ಪ್ರೀತಿಯ ಚಿಕ್ಕ ಅಕ್ಕ ಇಷ್ಟು ಜನರ ಬ್ಯಾಗ್‌ನಲ್ಲಿ, ಗಾಡಿಯಲ್ಲಿ ಗಾಂಜಾ ಇಟ್ಟು ಟಿವಿ ಚಾನೆಲ್‌ನೆಲ್ಲಾ ಕರೆಸಿ ಗಾಂಜಾ ಫ್ಯಾಮಿಲಿ ಅಂತ ನ್ಯೂಸ್ ಮಾಡ್ಸೀ, ಎಲ್ಲರನ್ನು ಅರೆಸ್ಟ್ ಮಾಡಿಸ್ಕೊಂಡು ಬಂದು...’

ಸೀನಪ್ಪ ಈ ರೀತಿ ಹೇಳಿ ಹೇಮಂತನನ್ನು ಹೆದರಿಸತೊಡಗಿದ.

ಅದನ್ನು ಕೇಳಿ ಹೇಮಂತ್ ಭಯಪಟ್ಟ.

`ಸಾರ್ ನಾನ್ ನಿಜ ಹೇಳ್ತೀನಿ... ದಯವಿಟ್ಟು ನನ್ ಫ್ಯಾಮಿಲಿನ್ ಬಿಟ್ಬಿಡಿ...’

`ನೀನೇ ಅಲ್ಲಾ, ನಿನ್ ಜಾಗದಲ್ ಯಾವನೇ ಇದ್ರು ಹೇಳಲೇಬೇಕು...’

ಮನಸ್ಸನ್ನು ಕಲ್ಲಾಗಿಸಿಕೊಂಡಿದ್ದ ಹೇಮಂತ್ ತನ್ನ ಅಕ್ಕಂದಿರ ವಿಷಯದಲ್ಲಿ ಸೋತು ಶರಣಾಗಿಬಿಟ್ಟಿದ್ದ. ಮುಂದೆ ನಡೆದಿದ್ದೆಲ್ಲವನ್ನೂ ವಿಖ್ಯಾತ್‌ನಿಗೆ ಹೇಳಿದಾಗ ತನ್ನ ತಪ್ಪಿಗೆ ಅವನೇ ಕೈಯಾರೇ ಕೊಂದು ಬಿಡಲೀ ಎಂದು ತನ್ನ ಮನಸ್ಸನ್ನು ಸಂತೈಸಿ ಸೀನಪ್ಪ ಬಯಸಿದ್ದ ಉತ್ತರವನ್ನೇ ನೀಡಿದ್ದ.

ತನ್ನ ಮುಂದೆ ಕುಳಿತಿದ್ದ ವಿಕ್ರಂ ಭಂಡಾರಿ, ಆ್ಯಂಟನಿದಾಸ್, ಸೀನಪ್ಪರ ಮುಖಗಳನ್ನೇ ನೋಡುತ್ತಾ ತನ್ನ ಮಾತನ್ನು ಶುರುಮಾಡಿದ್ದ.

`ಕ್ಯಾಮೆರಾ ನೋಡ್ಕೊಂಡ್ ಮಾತಾಡು...’ ಆ್ಯಂಟನಿ ಹೇಮಂತ್‌ಗೆ ಗದರಿಸಿದ.

ಕೊನೆಯ ಬಾರಿಗೆ ತನ್ನ ಆತ್ಮೀಯ ಸ್ನೇಹಿತನಿಗೆ ಮನಸಾರೆ ಕ್ಷಮೆ ಕೇಳಿಕೊಂಡು ಕ್ಯಾಮೆರಾದೊಳಗೆ ನೋಡಿದ.

`ಸರ್ ವಿಖ್ಯಾತ್ ಅವರಪ್ಪ ಪಿವೊಟ್ ಅಲ್ಲಾ ಟೀಚರ್... ತುಂಬಾಒಳ್ಳೆಯವರು’

ಮೂರೂ ಜನ ಅಧಿಕಾರಿಗಳಿಗೆ ವಿಖ್ಯಾತ್‌ನನ್ನು ತಾನು ಮೊದಲ ಬಾರಿ ಭೇಟಿಯಾಗಿದ್ದರ ಬಗ್ಗೆ ಹೇಳಲು ಶುರುಮಾಡಿದ್ದ ಹೇಮಂತ್ ವಿಖ್ಯಾತ್‌ನ ಜೀವನಚರಿತ್ರೆಯಲ್ಲಿನ ಒಂದು ಭಾಗವನ್ನು ಪರಿಚಯಿಸತೊಡಗಿದ.

-

MORE FEATURES

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...

‘ಪಾತಕ ಲೋಕ’ ತರುಣರಿಗೆ ಅತ್ಯಂತ ಆಕರ್ಷಣೀಯ ವಸ್ತು

16-05-2024 ಬೆಂಗಳೂರು

"ನಾ ಕಂಡ ಈ ಭೂಗತ ಜಗತ್ತಿನಲ್ಲಿ ಬೆಂಗಳೂರು ನಗರ ಹಾಗೂ ಮುಂಬೈ ನಗರದ ರೌಡಿಗಳ ಸಂಪರ್ಕ ಹಾಗೂ ಮಂಗಳೂರು ನಗರದ ರೌಡಿಗಳ ...

ಪ್ರೀತಿ ಅರಳಿದರೆ ಬದುಕು ತೆರೆದಂತೆ

15-05-2024 ಬೆಂಗಳೂರು

"ಬದುಕು ಭಾವತೆರೆಯ ಮೇಲಿನ ತಾವರೆ, ಪ್ರತಿಯೊಂದು ಭಾವದಲೆಗೂ ಬದುಕು ಕಂಪಿಸುತ್ತದೆ. ಬದುಕಿನಲಿ ಕಾಡಿದ ಪ್ರೇಮ, ವಿರಹ,...