ಮಕ್ಕಳ ಮನಸ್ಸಿನ ಮಧುರ ಸ್ಪರ್ಶದ ‘ಸೋನಪಾಪಡಿ’ ಕವಿತೆಗಳು 


ಮಗುವಿನ ಮುಗ್ಧತೆಯನ್ನು ಮಕ್ಕಳಿಗೆ ಹೋಲಿಸಲಾಗದು. ಮಕ್ಕಳ ತಾರ್ಕಿಕ, ಬೌದ್ಧಿಕ-ವೈಚಾರಿಕ ಸಾಮರ್ಥ್ಯವು ಚಿಗುರು ಮೃದುತ್ವದ ಮುಗ್ಧತೆಯನ್ನು ಪ್ರತ್ಯೇಕಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ, ಕವಿ ರಾಜಶೇಖರ ಕುಕ್ಕುಂದಾ ಅವರ ಸೋನಪಾಪಡಿಮಕ್ಕಳ ಕವನ ಸಂಕಲನವನ್ನು, ಪತ್ರಕರ್ತ ವೆಂಕಟೇಶ ಮಾನು ಅವರು ವಿಶ್ಲೇಷಿಸಿದ ಬರಹವಿದು.

ಬಾ ಬಾ ಗಿಳಿಯೆ, ಬಣ್ಣದ ಗಿಳಿಯೆ (ಶಂ.ಗು. ಬಿರಾದಾರ), ಇರುವೆ ಇರುವೆ ಕರಿಯ ಇರುವೆ, ನಾನೂ ಜೊತೆಗೆ ಬರುವೆ (ಸಿಸು ಸಂಗಮೇಶ ) ಹೀಗೆ ಮುಗ್ಧ ಭಾವವೇ ಈ ಕವಿತೆಗಳ ಜೀವಾಳ. ಪ್ರಾಪಂಚಿಕ ವ್ಯವಹಾರಗಳಿಂದ ಕಲುಷಿತಗೊಳ್ಳದ ಅಥವಾ ವಿದ್ಯಮಾನಗಳಲ್ಲಿರುವ ಮೋಸ-ವಂಚನೆಗಳನ್ನು ಗ್ರಹಿಸದ, ಕಲ್ಪನೆ-ವಾಸ್ತವತೆಯ ವ್ಯತ್ಯಾಸ ಗ್ರಹಿಸದ ಮನಸ್ಥಿತಿ; ಅದು, ಶೈಶವಾವಸ್ಥೆಯಿಂದ ಹಸುಳೆ ಅವಸ್ಥೆಯವರೆಗೆ ಮಾತ್ರ (2ವರ್ಷ) ಮುಗ್ಧತೆ ಸಾಧ್ಯ ಎಂಬುದು ಮನೋವಿಜ್ಞಾನದ ವ್ಯಾಖ್ಯಾನ .

ಆದರೆ, ಮಕ್ಕಳ ಕವಿತೆಗಳು ಮುಗ್ದವಾಗಿರಬೇಕು ಎಂದೇನಿಲ್ಲ.ಏಕೆಂದರೆ, 3 ವರ್ಷದ ನಂತರ ಆ ಮಗು ಸುಳ್ಳು ಹೇಳುವುದನ್ನು ಕಲಿಯುತ್ತದೆ. ತನ್ನೆಡೆಗೆ ಗಮನ ಸೆಳೆಯುವುದನ್ನೇ ಕೇಂದ್ರವಾಗಿಸಿ, ತನ್ನ ವಿಚಾರ-ಭಾವ- ವರ್ತನೆಗಳನ್ನು ತೋರುವ ಮಗು, ಅಳಲು ಆರಂಭಿಸಿ, ಎತ್ತಿಕೊಂಡೊಡನೆ ಮುಗುಳ್ನಗುತ್ತದೆ. ‘ಎತ್ತಿಕೊಂಡವರ ಕೂಸು’ ಆಗದೇ ಸುರಕ್ಷತೆ ಇರುವೆಡೆ ಅಥವಾ ಆ ವ್ಯಕ್ತಿಯೆಡೆಗೆ ಹೋಗಲು ಬಯಸುತ್ತದೆ. ಇಷ್ಟೊಂದು ಜಾಣ ನಡೆಯು ಮುಗ್ಧತೆಯ ಪರಿಧಿಯನ್ನು ಮೀರುತ್ತದೆ. ಸುಳ್ಳು ಹೇಳುವ ಕಲೆಯು ಮಗುವಿನ ವೈಚಾರಿಕ-ಭಾವ ಸಂವೇಗಗಳ ವಿಕಾಸದ ಫಲ. ಈ ಕಲೆಯಲ್ಲಿ ಮಾತು, ಭಾವದ ಜೊತೆ ತನ್ನ ಕಲಿಕೆಯ ಪ್ರಬುದ್ಧತೆಯನ್ನು ತೋರುತ್ತಾ ಹೋಗುತ್ತದೆ ಎಂಬುದು ಮನೋವಿಜ್ಞಾನ. ಈ ಮನಸ್ಥಿತಿಯಲ್ಲಿ, ಮಗುವು, ಸುಳ್ಳು ಹೇಳುತ್ತದೆ. ತಮಾಷೆ ಮಾಡುತ್ತದೆ. ಕುತೂಹಲ ಕೆರಳಿಸುತ್ತದೆ. ಸುತ್ತಲ ವಿದ್ಯಮಾನಗಳನ್ನು ಪ್ರಶ್ನಿಸುತ್ತದೆ. ಉತ್ತರಕ್ಕಾಗಿ ಚಡಪಡಿಸುತ್ತದೆ. ಇಷ್ಟವಾಗದ್ದನ್ನು ತಿರಸ್ಕರಿಸುತ್ತದೆ. ಪಾಲಕರ ಅತಿ ಅವಲಂಬನೆಯನ್ನು ವಿರೋಧಿಸುತ್ತದೆ. ಬೇಡ ಎಂದಿದ್ದನ್ನು, ಮಾಡು ಎಂದಿದ್ದನ್ನು ಹಠಕ್ಕೆ ಬಿದ್ದು ತನ್ನ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತದೆ. ದೊಡ್ಡವರನ್ನು ಅನುಕರಿಸುತ್ತದೆ. ಆದರೆ, ದೊಡ್ಡವರು ಹೇಳಿದ ಮಾತನ್ನು ಕೇಳುವುದಿಲ್ಲ. ತಾನೂ ‘ಜಾಣ’ ಎಂದು ಸಾಬೀತುಪಡಿಸುವಲ್ಲೇ ತನ್ನೆಲ್ಲ ಕಸರತ್ತು ತೋರುತ್ತದೆ. ವಿಚಿತ್ರ ತರ್ಕದ ಮೂಲಕ ದೊಡ್ಡವರನ್ನೂ ಪೇಚಿಗೆ ಸಿಲುಕಿಸುತ್ತದೆ. ಹೀಗಾಗಿ, ಮಗುವಿನ ಮುಗ್ಧತೆಯನ್ನು ಮಕ್ಕಳಿಗೆ ಹೋಲಿಸುವುದು ಸರಿಯಲ್ಲ. ಬದಲಾಗಿ ಅವು, ಹುಡುಗಾಟದ, ತುಂಟತನದ, ಕುತೂಹಲದ, ತಮಾಷೆಯ, ಸಂತಸದ, ಭೀತಿಯ, ದುಃಖದ, ಉದಾರತನದ, ಕೋಪದ. ಪಶ್ಚಾತ್ತಾಪ, ಅಪರಾಧ, ನಾಚಿಕೆ, ಹೆಮ್ಮೆ, ಅಚ್ಚರಿ ಹೀಗೆ ವಿವಿಧ ಭಾವಗಳ ಸಣ್ಣ ಸಣ್ಣ ಸರಣಿಯಾಗಿ, ಪ್ರತ್ಯೇಕತೆಯನ್ನು ಮೆರೆಯುತ್ತವೆ. ಅಂದಮಾತ್ರಕ್ಕೆ ಈ ಮಕ್ಕಳ ಕವಿತೆಗಳು, ಸಂಕೇತ, ಉಪಮೆ, ರೂಪಕಗಳ ಭಾರದೊಂದಿಗೆ ತತ್ತರಿಸುವಂತಿಲ್ಲ. ಅವು ಚಿಗುರು ಮೃದುತ್ವದೊಂದಿಗೆ ಹಸಿರು ಕೊನರಿಸುತ್ತವೆ. ಕ್ರಮೇಣ, ಅಂದರೆ, 8-12 ವರ್ಷದ ಅವಧಿವರೆಗೆ ತಾರ್ಕಿಕ-ವೈಚಾರಿಕ-ಬೌದ್ಧಿಕ ಸಾಮರ್ಥ್ಯ ಗಟ್ಟಿತನ ಪಡೆಯುತ್ತವೆ.

ಚಿಗುರಿನ ಮೃದುತ್ವ, ಎಳೆಯ ಹಸಿರಿನ ಹೊಳಪಾಗಿ ರೂಪು ತಳೆಯುವ ಹಾಗೂ ಮುಗಿಲಿಗೆ ಚಾಚುವ ಟೊಂಗೆಗಳ ಗಟ್ಟಿತನದ ಸಾಮರ್ಥ್ಯವನ್ನು ಒಳಗೊಳ್ಳುವ ಮಕ್ಕಳ ಕವಿತೆಗಳು, ಹೂವು-ಹಣ್ಣು-ಕಾಯಿ-ಮೊಗ್ಗು ಹೀಗೆ ವೈವಿಧ್ಯಮಯ-ವಿಸ್ಮಯಗಳನ್ನು ಸಾಹಿತ್ಯಕವಾಗಿ ಕಂಗೊಳಿಸುವಂತೆ ಮಾಡುತ್ತವೆ. ಈ ಹಿನ್ನೆಲೆಯಲ್ಲಿ,ಕವಿ ರಾಜಶೇಖರ ಕುಕ್ಕುಂದಾ ಅವರ ‘ಸೋನಪಾಪಡಿ’ ಮಕ್ಕಳ ಕವಿತೆಗಳ ಸಂಕಲನವು ಓದುಗರ ಗಮನ ಸೆಳೆಯುತ್ತದೆ. ವಸ್ತು- ಸ್ವರೂಪ-ರಚನಾ ಕೌಶಲ, ಭಾವಾಭಿವ್ಯಕ್ತಿಯೊಂದಿಗೆ ತಮ್ಮ ವಿಶೇಷತೆಯನ್ನು ಕಾಯ್ದುಕೊಂಡಿವೆ. ಮಕ್ಕಳಿಗಾಗಿ ಅಂದರೆ ಚಿಗುರು ಸೂಕ್ಷ್ಮತೆಯ ಮಧುರ ಸ್ಪರ್ಶವು ಕವಿತೆಗಳಲ್ಲಿರಿಸಿದ್ದು ‘ಸೋನಪಾಪಡಿ’ ವಿಶೇಷ. ಆಕರ್ಷಕ ಚಿತ್ರವಿನ್ಯಾಸವು ಪ್ರತಿ ಕವಿತೆಯ ಮೆರಗು ಹೆಚ್ಚಿಸಿದೆ.

ಪ್ರಯೋಗಶೀಲ ಕವಿತೆಗಳು: ಕವಿತೆಯ ವಸ್ತುವಿನ ಆಯ್ಕೆ, ಬಳಸುವ ಪದಪುಂಜಗಳು, ಅವುಗಳ ಉಚ್ಛಾರ, ಧ್ವನಿಯ ಏರಿಳಿತಗಳು, ಆ ಮೂಲಕ ಅದು ಅನುಭವಿಸುವ ಭಾವಗಳು ಎಲ್ಲವನ್ನೂ ಪ್ರಯೋಗಕ್ಕೆ ಒಡ್ಡಿದ್ದು, ಕವಿತೆಗಳ ರಚನಾ ಕೌಶಲಕ್ಕೆ ಕನ್ನಡಿ ಹಿಡಿಯುತ್ತವೆ. ಹೀಗಾಗಿ, ‘ಸೋನಪಾಪಡಿ’ ಸಂಕಲನದ ಕವಿತೆಗಳ ಚೌಕಟ್ಟು ಮೀರಿಲ್ಲ; ಅರ್ಥದ ಹೊಸ್ತಿಲು ಸ್ಥಳಾಂತರವಾಗಿಲ್ಲ. ಓದಿದಾಗ ಅಭಾಸ ಎನಿಸಿಲ್ಲ. ಮಗುವಿನ ತೊದಲು-ಸೀಮಿತ ಭಾಷೆಯ ಸೊಗಸಿನೊಂದಿಗೆ ಮನ ಸೆಳೆಯುತ್ತವೆ. ಒಣಪ್ರತಿಷ್ಠೆಗಾಗಿ ಶಾಬ್ಧಿಕ ಪಾಂಡಿತ್ಯದ ಪ್ರದರ್ಶನವಿಲ್ಲ. ಕವಿತೆಗಳು, ಮಗುವಿನ ಕಲ್ಪನಾ ಸಾಮರ್ಥ್ಯದ ಮಿತಿಯಲ್ಲೇ ಕಂಗೊಳಿಸುತ್ತವೆ. ಆದ್ದರಿಂದ, ಓದುಗನೂ ಸಹ ಮಕ್ಕಳೊಂದಿಗೆ ಮಗುವಾಗಿ, ಅವರ ಸಂತಸವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಕವಿಯು, ಮಕ್ಕಳ ಮನಸ್ಸಿನಲ್ಲಿ ಪರಕಾಯ ಪ್ರವೇಶ ಮಾಡಿದ್ದರಿಂದ, ಅವು ಪರಿಣಾಮಕಾರಿಯಾಗಿವೆ. ಕವಿಯೇ ಹೇಳುವಂತೆ ‘ಸಾಹಿತ್ಯ ಯಾರದ್ದೇ ಆಗಿರಲಿ; ಅದು ಎಷ್ಟೇ ಸೊಗಸಾಗಿ ಮುದ್ರಣಗೊಂಡಿರಲಿ; ಅದನ್ನು ಎಷ್ಟೇ ಢಾಣಾಡಂಗುರ ಮಾಡಿ ಪ್ರಚುರಪಡಿಸಿರಲಿ; ಮಕ್ಕಳು ಓದಿ ಖುಷಿಪಟ್ಟು ಎದೆಗಪ್ಪಿಕೊಳ್ಳದ ಹೊರತು ಅದು ಮಕ್ಕಳ ಸಾಹಿತ್ಯವಾಗದು’ ಎಂಬ ಮಾತು, ಮಕ್ಕಳ ಸಾಹಿತ್ಯ ರಚನೆಯು ಒಂದು ಸವಾಲು ಎಂಬುದನ್ನೇ ಪುಷ್ಠಿಕರಿಸುತ್ತದೆ. ಕವಿಯ ಈ ಎಚ್ಚರವು, ಪ್ರಯೋಗಶೀಲತೆಯಲ್ಲಿ ರೂಪುಗೊಂಡು, ಪ್ರತಿ ಕವಿತೆಯ ಅರ್ಥವಂತಿಕೆಯನ್ನು ಹೆಚ್ಚಿಸಿವೆ.

ಕವಿತೆಗಳ ವೈಶಿಷ್ಟ್ಯತೆ: ಮಕ್ಕಳ ಕವಿತೆಯ ಉದ್ದೇಶ ಎಂದರೆ ಮಕ್ಕಳ ಮಾತಿನ ವಿಕಾಸವೂ ಭಾವ ಪ್ರಪಂಚದ ವಿಸ್ತಾರವೂ ಆಗಿದೆ. ಧ್ವನಿ, ಏರಿಳಿತ, ಪ್ರಮಾಣ, ಉಚ್ಛಾರ ಮಾದರಿ ಇತ್ಯಾದಿ ಅಂಶಗಳೊಂದಿಗೆ ಸಂಕೀರ್ಣವಾದ ಕೌಶಲ ಒಳಗೊಂಡಿದೆ. ಅವುಗಳ ವಿಕಾಸಕ್ಕಾಗಿ ಇರುವ ಹತ್ತು ಹಲವು ಆಯಾಮಗಳ ಪೈಕಿ -ಕವಿತಾ ರಚನೆಯೂ ಒಂದು. ಏಕೆಂದರೆ, ಮಕ್ಕಳು ಹಾಡುವ ಮೂಲಕ ಶಬ್ದಗಳನ್ನು ಕಲಿಯುತ್ತಾರೆ. ಅವುಗಳ ಅರ್ಥವನ್ನು ತಿಳಿಯಲು ಯತ್ನಿಸುತ್ತಾರೆ. ಇಂತಹ ಕಲಿಕಾ ವಿಧಾನವು ಮಕ್ಕಳಿಗೆ ತುಂಬಾ ಅರ್ಥಪೂರ್ಣ ಹಾಗೂ ಪರಿಣಾಮಕಾರಿ. ಮಕ್ಕಳ ಕವಿತಾ ರಚನಾ ಕೌಶಲವು ಕವಿಯ ಸೃಜನಶೀಲ ಶಕ್ತಿಯನ್ನೇ ಸವಾಲಿಗೆ ಒಡ್ಡುತ್ತಿದ್ದು, ಮಕ್ಕಳ ಹುಡುಗಾಟ, ಕುತೂಹಲ, ಸಂತಸ ಈ ಎಲ್ಲವೂ ಕವಿ ರಾಜಶೇಖರ ಕುಕ್ಕುಂದಾ ಅವರ ಕವಿತೆಗಳು ತಾರ್ಕಿಕತೆ-ವೈಚಾರಿಕತೆ- ಬೌದ್ಧಿಕತೆಯನ್ನು ಸ್ಪರ್ಶಿಸುವುದಿಲ್ಲ. ಬದಲಾಗಿ, ಕುತೂಹಲವನ್ನು ಕೆರಳಿಸುತ್ತವೆ. ಅಪ್ಪ ಒದರ್ತಾ ಇದ್ರೆ/ ಟರ್‍ರ, ಟರ್‍ರ, ಟರ್‍ರ/ ಅಮ್ಮ ಬೈದಿರ್ತಾಳೆ/ ರಮ್ಸಿ, ರಮ್ಸಿ, ರಮ್ಸಿ ನಾಯಿ, ಬೆಕ್ಕು, ಕಪ್ಪೆ ಒದರುವ ಹಿಂದಿನ ಉದ್ದೇಶ ಕ್ರಮವಾಗಿ ರೊಟ್ಟಿ, ಹಾಲು, ನೀರು ಬೇಕಿರುವುದು. ಅದೇ ರೀತಿ ಒದರುವ ಅಪ್ಪನಿಗೆ ಅಮ್ಮ ಬೈದಿದ್ದರ ಸಂಕಟವನ್ನು ಮಕ್ಕಳು ತಮ್ಮ ಕಾಲ್ಪನಿಕ ಶಕ್ತಿಯಿಂದ ಊಹಿಸಿ, ಹಾಸ್ಯದ ಹೊನಲಿನಲ್ಲಿ ಇಡೀ ಪರಿಸರವನ್ನು ಮುಳುಗಿಸಿ, ಸಮಸ್ಯೆಗೆ ಪರಿಹಾರ ಸೂಚಿಸುವ ಪ್ರಬುದ್ಧತೆಯಲ್ಲಿ ಮೃದುತ್ವ ತೋರುತ್ತಾರೆ. ಸಮಸ್ಯೆಯನ್ನು ತೀಕ್ಷ್ಣತೆಯೊಂದಿಗೆ ವಿಶ್ಲೇಷಿಸುವ ಸಹನೆ ಇದೆ. ‘ಯಾರಿಗೂ ನೋವಾಗದ ಹಾಗೆ’ ನುಡಿಯ ಮೃದುತ್ವವು ಪರಿಹಾರ ಸೂಚಕವು ಆಗಿದೆ.

‘ಪೆಟ್ರೋಲ್ ಕುಡಿಯದು, ಹೊಗೆ ಉಗುಳದು, ಪೊಲೀಸ್ ಹಿಡಿಯಲಾರ, ಲೇಸೆನ್ಸ್ ಕೇಳಲಾರ…’ ಈ ರೀತಿಯ ಸುತ್ತಲ ವಿದ್ಯಮಾನಗಳ ಎಚ್ಚರವಿದ್ದೂ, `ಯಾರೂ ಅಡ್ಡ ಬರ್ಬೆಡಿ/ ಮೇಲೆ ಬಂದ್ರೆ ಬಯ್ಬೇಡಿ (ನನ್ನ ಸೈಕಲ್ಲು) ’ ಎಂದು ಮಕ್ಕಳು ತಮ್ಮ ಹೊಣೆಗೇಡಿತನಕ್ಕೆ ಬೇರೆಯವರನ್ನು ತಮಾಷೆಗೆ ಎಳೆದು, ಕುಲುಕುಲು ನಗುತ್ತಾರೆ. ಈ ರೀತಿಯ ಹುಡುಗಾಟವು ಮಕ್ಕಳ ತುಂಟತನದ ಕಳೆ ಹೆಚ್ಚಿಸುತ್ತವೆ. ಅದೇ, ಕವಿತೆಗಳ ಜೀವಾಳವೂ ಆಗುತ್ತದೆ. ‘ಕೆಮ್ಮು, ನೆಗಡಿ, ಜ್ವರ/ ಪುಟಾಣಿ ಇರುವೆಗೇನೆ/ ಎಲ್ಲಿ ತೋರ್ಸೋದಪ್ಪ ಅಂತ/ ನಂಗೂ ತಲೆಬೇನೆ’ (ಕವಿತೆ: ಕೆಮ್ಮು, ನೆಗಡಿ, ಜ್ವರ) ಎಂದು ಹೇಳುವ ಓದುಗರ ಹಾಸ್ಯ ಪ್ರಜ್ಞೆ ಜಾಗೃತವಾಗಿಸುವ ಈ ಕವಿತೆ ಒಂದು ಕ್ಷಣ ಓದುಗರನ್ನೂ ಚಿಂತನೆಗೀಡು ಮಾಡುತ್ತದೆ. ದೊಡ್ಡ ಹೊಟ್ಟೆ ದೊಡ್ಡಣ್ಣ/ ಸಣ್ಣ ಹೊಟ್ಟೆ ಸಣ್ಣಣ್ಣ/ ಇಬ್ರೂ ಕೂಡಿ ಕದ್ದಿದ್ದೇನು?/ ಶೆಟ್ರ ಮನೆಯ ತಂಗ್ಳನ್ನ (ಕವಿತೆ: ದೊಡ್ಡ ಹೊಟ್ಟೆ ದೊಡ್ಡಣ್ಣ) , ದೊಡ್ಡಣ್ಣ-ಸಣ್ಣಣ್ಣ ಅವರ ಬೌದ್ಧಿಕತೆಯನಮ್ನು ವಿಡಂಬಿಸುವ ಕವಿತೆ ಮಕ್ಕಳ ತುಂಟತನದ ಪರಾಕಾಷ್ಠೆಯಾಗಿದೆ. ದಿನಾಲು ಉಪ್ಪಿಟ್ಟು ತಿಂದು ತಿಂದು ಬೇಸರಗೊಂಡ ಮಕ್ಕಳು ‘ಉಪ್ಪಿಟ್ಟುಪ್ಪಿಟ್ಟುಪ್ಪಿಟ್ಟು/ನೀ ಯಾಕೀಷ್ಟು ಫೇವರಿಟ್ಟು? (ಕವಿತೆ: ಉಪ್ಪಿಟ್ಟುಪ್ಪಿಟ್ಟುಪ್ಪಿಟ್ಟು) ಎಂದು ಪ್ರಶ್ನಿಸಿ, ‘ಉಪ್ಪಿಟ್ಟನ್ನೇ’ ಒಪ್ಪಲೇ ಬೇಕಾಗುವ ಮಕ್ಕಳ ಅನಿವಾರ್ಯ ಸ್ಥಿತಿಯು ಓದುಗರ ಸಂತಸವಾಗುತ್ತದೆ. ಪಟಕ್ಕಂತ ಬಾಯಿ ತೆಗ್ದು ನುಂಗೇ ಬಿಟ್ಳು ಅಜ್ಜಿ (ಅಜ್ಜಿ-ಮೊಮ್ಮಗ) ಎನ್ನುವ ಕವಿತೆ ಅಜ್ಜಿಯ ಆಸೆ ಭರಿತ ವರ್ತನೆಯನ್ನು ವಿಡಂಬಿಸುತ್ತದೆ. ಮುಂದೆ ಓದಿ ಏನಾಗ್ತೀವೋ ಸದ್ಯಕ್ಕಂತೂ ಕ್ಲರ್ಕು (ಕವಿತೆ: ಸ್ಕೂಲೇ ಇರ್ಬಾರ್ದು) ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ವ್ಯಂಗ್ಯ ಮಾಡುವ ಈ ಪರಿ ದೊಡ್ಡವರನ್ನೂ ನಾಚಿಸುವಂತಿದೆ. ಮಳೆಯ ನೆಪವ ಮಾಡಿಕೊಂಡು ಶಾಲೆ ಸೂಟಿಕೊಡಲಿ (ಮೋಡ ತೇಲಿ ಬರಲಿ) ತಮ್ಮ ವಯೋಸಹಜ ನಡೆಗೆ ಅಡ್ಡಿಪಡಿಸುವ ಇಂದಿನ ಶೈಕ್ಷಣಿಕ ವ್ಯವಸ್ಥೆ ಹಾಗೂ ಪಾಲಕರ ಅಜ್ಞಾನದ ಸಂಕೇತವಾಗಿ ಈ ಕವಿತೆ ಧ್ವನಿಸುತ್ತದೆ. ಕವಿತೆಗಳಲ್ಲಿಯ ಅಂತ್ಯಪ್ರಾಸಗಳೂ ಸಹ ಸಹಜವಾಗಿವೆ. ಅವು ಕವಿತೆಯ ಭಾವ ಕೆಡಿಸುವುದಿಲ್ಲ. ಬದಲಾಗಿ, ಒಂದು ಕಠಿಣ ಶಬ್ದವನ್ನು ಬೇಗ ಕಲಿಯುವಂತೆ, ನೆನಪಿನಲ್ಲಿರುವಂತೆ, ಶಾಬ್ದಿಕ ಭಂಡಾರ ಹೆಚ್ಚುವಂತೆ, ನಿರರ್ಗಳವಾಗಿ ಹೇಳುವಂತೆ, ಬರಹ ಕೌಶಲವೂ ಆಕರ್ಷಿಸುವಂತೆ ರಚಿಸಿದ್ದು ಕವಿಯ ಪ್ರಯೋಗಶೀಲ ಗುಣದ ಭಾಗವಾಗಿ ಈ ಕವಿತೆಗಳು ಮೂಡಿವೆ.

ಬಹುತೇಕ ಕವಿತೆಗಳು ಮಕ್ಕಳ ಮುಗ್ಧತೆಯನ್ನು ತೋರುವಂತಿದ್ದರೂ ಅವು ಚಿಂತನಶೀಲತೆ, ವೈಚಾರಿಕತೆ, ತಾರ್ಕಿಕತೆಯನ್ನು ಒಳಗೊಂಡಿದ್ದು, ಅಸಮಂಜಸವಾದದ್ದನ್ನು ವ್ಯಂಗ್ಯವಾಗಿ ವಿಡಂಬಿಸುತ್ತವೆ. ಸುತ್ತಲ ವಿದ್ಯಮಾನಗಳಿಗೆ ತಮ್ಮ ಕಲ್ಪನೆಗಳಿಂದ ಹಾಸ್ಯದ, ತಮಾಷೆಯ ಬಣ್ಣ ಬಳಿಯುತ್ತವೆ. ಬೆಕ್ಕಿನ್ಮರಿ ಬಂತು/ ಇಲಿ ಮರಿ ತಿಂತು/ ದೇವರ ಮನೆ ಜಗಲಿ ಮೇಲೆ/ ಕಣ್ಮುಚ್ಚಿ ಕುಂತು (ಕವಿತೆ: ಬೆಕ್ಕಿನ್ಮರಿ ಬಂತು) ಎನ್ನುವ ಮೂಲಕ ಬೆಕ್ಕಿನ ಜಾಣ ನಡೆಯನ್ನು ವಿಡಂಬಿಸುವ ರೀತಿ, ಮಕ್ಕಳ ತೀಕ್ಷ್ಣ ಗ್ರಹಿಕೆ, ಅರ್ಥವನ್ನು ವ್ಯಾಖ್ಯಾನಿಸುವಿಕೆ, ಅಂತ್ಯ ಪ್ರಾಸ ಕೆಡದಂತೆ ಸರಳ ಪದಗಳ ಶಿಸ್ತುಬದ್ಧ ಜೋಡಣೆ, ಮಕ್ಕಳನ್ನು ಕೇಂದ್ರೀಕರಿಸಿ ಅವರೇ ನಿರೂಪಿಸುವಂತಿರುವ ಕವಿತೆ ಕಟ್ಟುವ ರೀತಿ, ಆ ಪದಗಳಲ್ಲಿ ಹುದುಗಿಸಿರುವ ಲಯಗಾರಿಕೆ ಎಲ್ಲವೂ ‘ಮಕ್ಕಳ ಕವಿತೆ’ ಎಂಬ ಮಾನದಂಡಕ್ಕೆ ಉತ್ತಮ ಅಂಶಗಳಾಗುತ್ತವೆ.

ದೊಡ್ಡವರನ್ನು ಕಾಡಿಸುವ, ಪೀಡಿಸುವ ಆ ಮೂಲಕ ಸಂತಸಪಡುವ ಮಕ್ಕಳ ಮನಸ್ಸಿನ ಸೂಕ್ಷ್ಮ ಪದರುಗಳಾಗಿ, ಒಟ್ಟಿಗಿದ್ದರೂ ಪ್ರತ್ಯೇಕತೆಯನ್ನು ಕಾಯ್ದುಕೊಂಡಂತಿರುವ ‘ಸೋನಪಾಪಡಿ’ಯ ಸಿಹಿ ಎಳೆಯಂತೆ ಪ್ರತಿ ಕವಿತೆಯು ರಚನೆಗೊಂಡಿದೆ. ಒಂದೊಂದು ಎಳೆಯನ್ನು ಚಪ್ಪರಿಸಬಹುದು. ಒಂದೇ ಸಲಕ್ಕೆ ಇಡೀ ಸೋನಪಾಪಡಿಯನ್ನು ಬಾಯಿಗೆ ಹಾಕಿಕೊಂಡಂತೆ, ಪೂರ್ಣ ಸಂಕಲನದ ಕವಿತೆಗಳ ರುಚಿಯನ್ನು ಸವಿಯಬಹುದು.

(ಪುಟ: 52, ಬೆಲೆ: 25 ರೂ, ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ, ಕಲಬುರಗಿ, 2021)

MORE FEATURES

ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!

26-04-2024 ಬೆಂಗಳೂರು

‘ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವ...

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...