ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!


‘ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವಿಷಯವನ್ನು ಕಾದಂಬರಿಗಳ ಮೂಲಕ ಪ್ರಸ್ತುತ ಪಡಿಸಲು ಯತ್ನಿಸುತ್ತಿದ್ದೇನೆ’ ಎನ್ನುತ್ತಾರೆ ಗಿರಿಮನೆ ಶ್ಯಾಮರಾವ್. ಅವರು ‘ಸಂಪ್ರಾಪ್ತಿ’ ಕಾದಂಬರಿಗೆ ಬರೆದ ಲೇಖಕರ ನುಡಿ.

ಮನುಷ್ಯ ಜೀವಿಗಳಲ್ಲಿ ವಿಭಿನ್ನ ಗುಣ ಸಹಜ. ವೈವಿಧ್ಯತೆ ಜಗತ್ತಿನ ನಿಯಮ. ಹಾಗಾಗಿ ಅತ್ಯುತ್ತಮ ಸಂಸ್ಕೃತಿ ಹೊಂದಿದವರಿರುವಂತೆ ಅತ್ಯಂತ ಕೀಳು ಮನಃಸ್ಥಿತಿಯವರೂ ಇದ್ದೇ ಇರುತ್ತಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ಗುಣ ಪ್ರಧಾನವಾಗಿರುತ್ತದೆ. ಒಳ್ಳೆಯದು ಅಥವಾ ಕೆಟ್ಟದ್ದು, ಅವರಲ್ಲಿ ತಪ್ಪೇ ಮಾಡದವರು ತಮ್ಮಿಂದ ಒಂದು ಸಣ್ಣ ತಪ್ಪಾದರೂ ನೊಂದುಕೊಳ್ಳುತ್ತಾರೆ. ತಪ್ಪು ಮಾಡುವವರು ಯಾವ ಎಗ್ಗೂ ಇಲ್ಲದೆ ಮಾಡಿ ಮರೆತುಬಿಡುತ್ತಾರೆ. ಕೇವಲ ಮನುಷ್ಯರು ನಾವು. ಆದರೆ ಯಾರು ಉತ್ತಮ ಗುಣ ಹೊಂದಿರುತ್ತಾರೋ, ಯಾರಿಗೆ ತನ್ನನ್ನು ತಾನು ತಿದ್ದಿಕೊಳ್ಳಬೇಕೆಂದಿರುತ್ತದೋ ಅವರು ಉತ್ತಮರಾಗುತ್ತಾರೆ.

ನಮ್ಮ ಎಲ್ಲಾ ಹೋರಾಟದ ಹೊರತಾಗಿ ಕೊನೆಗೂ ನಮಗೆಷ್ಟು ದಕ್ಕುತ್ತದೋ ಅದು ನಮ್ಮರಿವಿಗೆ ಬಾರದೆ ಕೊಡುವವನ ಮರ್ಜಿಗೆ ಅನುಸಾರವಾಗಿರುತ್ತದೆ. ಭಗವಂತ ನ್ಯಾಯಕಾರಿಯಾದರೂ ಅವನು ಎಲ್ಲರಿಗೂ ಸಮಾನವಾಗಿ ಏಕೆ ಕೊಡಲಿಲ್ಲ ಎಂದರೆ ಅದಕ್ಕೆ ಕಾರಣ ಇರಲೇಬೇಕು.

ಬಹುಶಃ ಅದಕ್ಕುತ್ತರ ಪುನರ್ಜನ್ಮವಾ! ಇರಲೂಬಹುದು.

ಎಲ್ಲೋ ಒಬ್ಬೊಬ್ಬರಿಗೆ ಕಾಡುತ್ತಿದ್ದ ಖಿನ್ನತೆ ಎಂಬ ಮಾನಸಿಕ ಒತ್ತಡದ ಪರಿಣಾಮ ಇತ್ತೀಚೆಗೆ ದೊಡ್ಡ ಪಿಡುಗಾಗಿ ಕಾಡುತ್ತಿದೆ. ಅದಕ್ಕೆ ಖಂಡಿತವಾಗಿ ಅನಿವಾರ್ಯವಾದ ಆಧುನಿಕ ಜೀವನ ಶೈಲಿಯೇ ಕಾರಣ. ಶೇ.ಹತ್ತು-ಹದಿನೈದು ಎಂದಿರುವಲ್ಲಿ ಈಗ ಶೇ.ಮೂವತ್ತಕ್ಕಿಂತ ಹೆಚ್ಚಿಗೆ ಜನರನ್ನು ಅದು ಆವರಿಸಿದೆ ಎನ್ನುತ್ತಾರೆ ತಜ್ಞರು. ಕೋವಿಡ್ ಬಂದ ಮೇಲಂತೂ ಅದು ಇನ್ನೂ ಹೆಚ್ಚಾಗಿದೆ. ನಿಜಕ್ಕೂ ಅದು ಮನುಷ್ಯನ ಬದುಕನ್ನು ಜೀವಂತ ತಿನ್ನುವ ಸಮಸ್ಯೆ. ಅದು ಆವರಿಸಿದಾಗ ಮನುಷ್ಯರು ಅಸಾಧಾರಣ ನೋವು, ಸಂಕಟ ಅನುಭವಿಸುತ್ತಾರೆ. ಎಷ್ಟೆಂದರೆ ಬದುಕನ್ನೇ ಕಳೆದುಕೊಳ್ಳುವಷ್ಟು! ಅದರಿಂದಾಗಿ ಅದಕ್ಕಿಂತ ಹೆಚ್ಚು ಸಂಕಟ

ಅವರ ಹತ್ತಿರದವರು ಅನುಭವಿಸುತ್ತಾರೆ. ಅಂಥವರ ಸಂಕಷ್ಟ ಅರ್ಥ ಆಗದೆ ಅವರ ಮೇಲೆ ಆರೋಪ ಮಾಡುವುದರ ಬದಲು ಅವರ ಮನಸ್ಸನ್ನು ಅರ್ಥಮಾಡಿಕೊಂಡು ಅವರಿಗೆ ನೆರವಾಗಿ, ವೈದ್ಯಕೀಯ ಚಿಕಿತ್ಸೆ ಕೊಡಿಸಿದರೆ ಅಂಥವರನ್ನು ಪುಣ್ಯಾತ್ಮರು ಎನ್ನಬಹುದು.

ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವಿಷಯವನ್ನು ಕಾದಂಬರಿಗಳ ಮೂಲಕ ಪ್ರಸ್ತುತ ಪಡಿಸಲು ಯತ್ನಿಸುತ್ತಿದ್ದೇನೆ. ಯಾರು. ಯಾವಾಗ, ಯಾಕೆ ತಜ್ಞರನ್ನು ಕಾಣಬೇಕಾಗುತ್ತದೆ ಎನ್ನುವುದರ ಸೂಕ್ಷ್ಮ ಇವುಗಳ ಮೂಲಕ ತಿಳಿಯಬಹುದು.

ಮಲೆನಾಡಿನ ರೋಚಕಕತೆಗಳ ಸರಣಿಯಂತೆ ಮನೋವೈಜ್ಞಾನಿಕ ಕಾದಂಬರಿಗಳನ್ನು ಕೂಡಾ ಸರಣಿಯ ರೂಪದಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಮೊದಲ ಕೃತಿ 'ಅನಾಥ ಹಕ್ಕಿಯ ಕೂಗು', 'ತಲ್ಲಣ' ಹಾಗೂ 'ದುಷ್ಕೃತ್ಯ'ಈಗಾಗಲೇ ಪ್ರಕಟವಾಗಿದ್ದು ಓದುಗರಿಂದ ಮಾನ್ಯತೆ ಪಡೆದಮೇಲೆ ಈಗ ಈ ಕೃತಿಯನ್ನೂ ಸರಣಿಯ 4ನೆಯ ಭಾಗವಾಗಿ ಪ್ರಕಟಿಸುತ್ತಿದ್ದೇನೆ.

- ಗಿರಿಮನೆ ಶ್ಯಾಮರಾವ್

MORE FEATURES

ಪಂಚಮಗಳ ನಡುವೆ- ಸತ್ಯಕಾಮ

09-05-2024 ಬೆಂಗಳೂರು

'ತಂತ್ರಶಾಸ್ತ್ರ ಭಾರತ ಕೊಡಮಾಡಿದ ವಿಶಿಷ್ಟ ಶಾಸ್ತ್ರ.‌ ಈ ಶಾಸ್ತ್ರವನ್ನು ಸತ್ಯಕಾಮರು ವಿಜ್ಞಾನ ಎಂದು ಕರೆದಿದ್...

ಗಾಂಧಿಯನ್ನು ನಾನು ಅರಿತನೆಂದರೆ ಅರಿತಿಲ್ಲ, ಅರಿತಿಲ್ಲವೆಂದರೆ ಒಂದಿಷ್ಟು ಅರಿತಿರುವೆನು

09-05-2024 ಬೆಂಗಳೂರು

‘ಮೋಹನದಾಸ ಕರಮಚಂದ್ ಗಾಂಧಿಯವರನ್ನು ಕುರಿತು ಹೊಸ ತಲೆಮಾರು ಪ್ರೀತಿ-ದ್ವೇಷದ ಭಾವನೆಯನ್ನು ಬೆಳೆಸಿಕೊಂಡಿದೆ’...

ಈ ನನ್ನ ಪುಸ್ತಕಕ್ಕೆ ಕೂಡ ಸಾವಿಲ್ಲದ ಅಮರತ್ವ ಪ್ರಾಪ್ತವಾಗುತ್ತದೆ: ನರೇಂದ್ರ ಪೈ

09-05-2024 ಬೆಂಗಳೂರು

'ಈ ಪುಸ್ತಕಗಳ ಓದು ಸಾವಿರದ ಒಂದು ಪುಸ್ತಕಗಳ ಓದಿಗೆ ಸಮ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಲ್ಲೆ. ಹಾಗಾಗಿಯೇ ಇಂಥ ಅ...