ಮಾಯಾಪ್ರಪಂಚದ ಸತ್ಯನಿಷ್ಠ ಅರಿವು “ಜಗವ ಸುತ್ತುವ ಮಾಯೆ”


ವಾಸ್ತವವಾಗಿ ಇದೊಂದು ಆತ್ಮೀಯ ಪ್ರವಾಸಿ ಕಥನ. ಪ್ರವಾಸದ ಮಾಯೆಗೊಳಗಾಗಿ ಬರೆದ ಸುಂದರ ಗದ್ಯರೂಪಿ ಕಾವ್ಯ ಎನ್ನುತ್ತಾರೆ ಹಿರಿಯ ಪತ್ರಕರ್ತರು, ಬರಹಗಾರರು ಅರುಣಕುಮಾರ ಹಬ್ಬು. ಅವರು ಲೇಖಕಿ, ಕವಯಿತ್ರಿ ಸುಚಿತ್ರಾ ಹೆಗಡೆಯವರ “ಜಗವ ಸುತ್ತುವ ಮಾಯೆ” ಕೃತಿಯ ಬಗ್ಗೆ ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..

ಪ್ರಪಂಚ ಸುತ್ತುತ್ತ ಅಲ್ಲಿನ ಸ್ಥಳ ಮಹಿಮೆ, ಅದರ ಇತಿಹಾಸ, ಸಂಸ್ಕೃತಿಯನ್ನು ಪ್ರತ್ಯಕ್ಷ ನೋಡಿ ಅನುಭವಿಸುವುದು ಒಂದು ಅನನ್ಯ ಅನುಭವ. ಅದನ್ನು ಅಕ್ಷರ ರೂಪದಲ್ಲಿ ಚಿತ್ರಿಸಿ ಕೃತಿ ರೂಪದಲ್ಲಿ ಓದುಗರಿಗೆ ನೀಡುವುದು, ತಮ್ಮ ಅನುಭವಗಳನ್ನು ಇತರರಿಗೆ ಹಂಚುವ ಪರಿ ಇದೆಯಲ್ಲ ಅದೊಂದು ಅನಿರ್ವಚನೀಯ ಆತ್ಮಾನುಸಂಧಾನ.

ಈ ನಿಟ್ಟಿನಲ್ಲಿ ಅನೇಕ ಪ್ರವಾಸ ಕಥನಗಳು ಬಂದು ಹೋಗಿವೆ. ಒಂದೊಂದೂ ಒಂದೊಂದು ರೀತಿ. ಕೆಲವು ಅಲ್ಲಿಯ ಇತಿಹಾಸ, ಸ್ಥಳ ಮಹಿಮೆ, ಜನರ ಜೀವನ ರೀತಿಯನ್ನು ವರ್ಣಿಸಿದರೆ ಇನ್ನು ಕೆಲವರು ತಮಗಾದ ಆನಂದವನ್ನು ಪ್ರವಾಸ ಕಥನಗಳ ಮೂಲಕ ಹಂಚಿ ಇನ್ನೊಂದು ರೀತಿಯ ಅನುಭಾವವನ್ನು ಆನಂದಿಸುತ್ತಾರೆ. 

ಖ್ಯಾತ ಲೇಖಕಿ, ಕವಯಿತ್ರಿ ಸುಚಿತ್ರಾ ಹೆಗಡೆಯವರ “ಜಗವ ಸುತ್ತುವ ಮಾಯೆ” ಇವೆಲ್ಲಕ್ಕಿಂತ ವಿಭಿನ್ನ ಅನುಭವಗಳನ್ನು ನೀಡುತ್ತದೆ. ಅವರು ಜಗವನ್ನು ಅದರ ಸೌಂದರ್ಯವನ್ನು, ಅಲ್ಲಿಯ ಜನರನ್ನು ನೋಡುತ್ತ ಸಾಗುವವರಲ್ಲ. ಅವರ ಪ್ರವಾಸ ಎಂದಿಗೂ ಕ್ಷಿಪ್ರವಲ್ಲ. ಅದೊಂದು ಸುದೀರ್ಘ ಅನುಭವದ ಪಯಣ. ಅವರೇ ಹೇಳಿದಂತೆ “ಪ್ರವಾಸಿ ಸ್ಥಳಗಳ ಸುದೀರ್ಘ ವಿವರಣೆಗಳಿಗಿಂತ, ವಿಭಿನ್ನ ದೃಷ್ಟಿಕೋನದ  ಅಲ್ಲಿಯ ಜನರ ಜೊತೆ ಬೆರೆತು ಒಡನಾಡುವ ಕಥನಗಳು ಸೂಕ್ತ..” ನಿಜ. ಅವರು ಯಾವುದೋ ಪ್ರವಾಸಿ ಕಂಪನಿ ಆಯೋಜಿಸಿದ ವಾಹನಗಳಲ್ಲಿ ಗುಂಪಿನಲ್ಲಿ ಗೋವಿಂದನಾಗಿ ಸಂಚರಿಸದೇ, ತಾವೇ ಒಂದೊಂದೇ ಸ್ಥಳದ ಆಯ್ಕೆ ಮಾಡಿಕೊಂಡು ಅಲ್ಲಿ ಹೆಚ್ಚು ಕಾಲ ಕಳೆದು ಅಲ್ಲಿಯ ಜನರ ಜೊತೆ ಒಂದಾಗಿ. ಅಲ್ಲಿಯ ಭಾಷಾ ಸೌಂದರ್ಯ, ಆಹಾರ, ಪಾನೀಯ, ಜೀವಿಸುವ ಪರಿ, ಇದರಿಂದ ಅವರಿಗಾದ ಅತ್ಮಾನುಭವಗಳ ಅತ್ಯಂತ ಆತ್ಮೀಯ ನಿರೂಪಣೆಯೇ ಜಗವ ಸುತ್ತುವ ಮಾಯೆ.

ತಾವು ನೋಡಿದ ಸ್ಥಳಗಳ ಸಾಹಿತ್ಯ, ಕಲಾನುಭೂತಿ, ಸಂಸ್ಕೃತಿ, ಅಲ್ಲಿಯ ಜನರು ಭೋಜನದ ರೀತಿ, ರುಚಿ, ಅವರ ಜೀವನದ ಮೋಡಿ, ಹೀಗೆ ಒಂದೊಂದಾಗಿ ಅವರ ವಿಭಿನ್ನ ದೃಷ್ಟಿಕೋನದ ಮೂಸೆಯಿಂದ ಪ್ರತ್ಯಕ್ಷ ನುಡಿಚಿತ್ರಗಳಾಗಿ ಹೊರಹೊಮ್ಮುತ್ತವೆ, ಕಾಶಿಯ ಹೊಸನ್ನೇ ಪ್ರಮುಖವಾಗಿ ಪ್ರತಿಬಿಂಬಿಸುವ ಅನೇಕ ಪ್ರವಾಸಿ ಕಥನಗಳ ಜಾಡನ್ನು ತೊರೆದು ಅಲ್ಲಿ ಗಲ್ಲಿ ಗಲ್ಲಿಗಳಲ್ಲಿರುವ ಘಮಘಮಿಸುವ ಖಡಕ್‌ ಚಾಯ್‌, ರುಚಿರುಚಿಯ ಜಿಲೇಬಿ ಸಮೋಸಾಗಳು ಅವರ ರಸಯಾತ್ರೆಗೆ ಮೆರಗು ನೀಡಿದಂಥವು.  ಅಜಂತಾ ಎಲ್ಲೋರಾಗಳ ಸುಮಾರು ನಾಲ್ವತ್ತಕ್ಕಿಂತ ಹೆಚ್ಚು ಕಲಾತ್ಮಕ ಗುಹೆಗಳು, ರಸ್ತೆಬದಿಯ ಸೆಜ್ಜೆ, ಗೋಧಿ, ಕಡಲೆ ಹತ್ತಿ ಬೆಳೆಗಳ ಘಮ, ಫ್ರಾನ್ಸಿನ ವೈನ್, ಅವರ ಭೋಜನ ಪ್ರಿಯತೆ ಮತ್ತು ಭೋಜನದಲ್ಲಿಯೂ ಇರುವ ಉನ್ನತ ಸಂಸ್ಕೃತಿ ಮತ್ತು ಶಿಸ್ತು, ಬಂಗಾಳದ ಜಾನಪದ ಜಗತ್ತು, ಕವಿ ರವೀಂದ್ರರ ಸಾಹಿತ್ಯದ ಕಂಪಿನ ಬೀಡು, ಗಂಗೆ ಯುಮುನೆಯರ ವಿಶಿಷ್ಠ ಕಥೆಗಳು, ಪ್ಯಾರಿಸ್‌ ಫಜೀತಿ, ಮೊನಾಲಿಸಾ ಪ್ರತ್ಯಕ್ಷ ನೋಡಿ ನಿರಾಾಶಳಾದ ಅನುಭವ, ಲವ್ಲಿ ಲಂಡನ್ನಿನ ಪರಿಚಿತ ಮೋಡಿ, ಫ್ರಾನ್ಸ್‌ ಕ್ರಾಂತಿಯ ಹೊಸ ದೃಷ್ಟಿ ಇನ್ನೂ ಅನೇಕ ವಿಷಯಗಳು ಎಲ್ಲ ಪ್ರವಾಸಿ ಕಥನಗಳಿಗಿಂತ ಭಿನ್ನವಾಗಿ ನಿರೂಪಿತಗೊಂಡಿದೆ.

ವಾಸ್ತವವಾಗಿ ಇದೊಂದು ಆತ್ಮೀಯ ಪ್ರವಾಸಿ ಕಥನ. ಪ್ರವಾಸದ ಮಾಯೆಗೊಳಗಾಗಿ ಬರೆದ ಸುಂದರ ಗದ್ಯರೂಪಿ ಕಾವ್ಯ.  ಪ್ರವಾಸವೆಂದರೆ ಬಿಡುಗಡೆಯ ಭಾವವೆಂದು ಭಾವಿಸಿದ ಸುಚಿತ್ರಾ ಹೆಗಡೆಯವ ಇಂಥ ಕಥಾರೂಪಿ ಕೃತಿಗಳು ಇನ್ನಷ್ಟು ಬರಲಿ ಎಂದು ಹಾರೈಸುತ್ತೇನೆ.
- ಅರುಣಕುಮಾರ ಹಬ್ಬು

ಸುಚಿತ್ರಾ ಹೆಗಡೆಯವರ ಲೇಖಕ ಪರಿಚಯ...

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...