ನಮ್ಮನ್ನು ನಾವೇ ಸೂಕ್ಷ್ಮದರ್ಶಕದಲ್ಲಿ ನೋಡಿ ಪರೀಕ್ಷಿಸಿಕೊಂಡ ಅನುಭವ : ಮಹೇಶ ಅರಬಳ್ಳಿ


ನೂರು ಅಡಿಗಳ ಪಕ್ಷಿನೋಟದಿಂದ ಹಿಡಿದು ನಮ್ಮನ್ನು ನಾವೇ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡಿ ಪರೀಕ್ಷಿಸಿಕೊಂಡ ಅನುಭವವಾಯಿತು. ಸಮಾಜದ ವಿವಿಧ ಆಯಾಮಗಳನ್ನು ಚಿತ್ರಿಸಿ ಅದರಲ್ಲಿರುವ ಪೊಳ್ಳುತನ, ಸಾಮೂಹಿಕ ಉನ್ಮಾದವನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ಲೇಖಕಿ ಸಫಲರಾಗಿದ್ದಾರೆ ಎನ್ನುತ್ತಾರೆ ವಿಮರ್ಶಕ ಮಹೇಶ ಅರಬಳ್ಳಿ. ಅವರು ನಟಿ, ಲೇಖಕಿ ರಂಜನಿ ರಾಘವನ್ ಅವರ ಸ್ವೈಪ್ ರೈಟ್ ಪುಸ್ತಕದ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ....

ಪುಸ್ತಕ -ಸ್ವೈಪ್ ರೈಟ್
ಲೇಖಕರು- ರಂಜನಿ ರಾಘವನ್‌
ಪ್ರಕಾಶನ- ಬಹುರೂಪಿ
ಬೆಲೆ- 250
ಪುಟ ಸಂಖ್ಯೆ- 250

ಈ ಕಾದಂಬರಿಯನ್ನು ನಾನು ಸ್ವೈಪ್ ರೈಟ್ ಮಾಡಿದ್ದೇನೆ. ತೆಳು ನೂಲಿನ ನೇಯ್ಗೆಯ ತೂಗುಯ್ಯಾಲೆಯಲ್ಲಿ ಭಾರದ ಭಾವಗಳನ್ನು ಕೊನೆಯವರೆಗೂ ಸಫಲವಾಗಿ ತೂಗಿಸಿ ಗೆಲ್ಲುವ ಕಾದಂಬರಿ ಸ್ವೈಪ್ ರೈಟ್.

“ಕತೆ ಡಬ್ಬಿ” ಕಥಾಸಂಕಲನದ 15 ಕಥೆಗಳನ್ನು ಓದಿದ್ದ ನನಗೆ ಸುಮಾರು 240 ಪುಟಗಳ ರಂಜನಿಯವರ ಕಾದಂಬರಿಯ ಬಗ್ಗೆ ಸಹಜ ಕುತೂಹಲವಿತ್ತು. ಸಂದಿಗ್ಧ ಪರಿಸ್ಥಿತಿಯಲ್ಲಿ ಭಾವಗಳ ತೊಯ್ದಾಟ, ಪಡೆದುಕೊಳ್ಳುವ ಉತ್ಕಟೇಚ್ಛೆ, ನನಗಿಂತ ನನ್ನೊಲುಮೆಯ ವ್ಯಕ್ತಿಗಳ ಆನಂದವೇ ನನ್ನ ಖುಷಿ, ಪಡೆದುಕೊಳ್ಳುವುದರ ಹಿಂದಿನ ಮರ್ಮ, ಅನುಭವಿಸಬೇಕಾದ (ಮಾಡಿದ/ಮಾಡದ) ಕರ್ಮ - ಇಂತಹ ವಿಷಯಗಳಲ್ಲಿ ಮಿಂಚು, ಅನೂಪ್, ಚಕ್ರವರ್ತಿ, ಅರವಿಂದಾ ಜೀಕುವ ಜೀವನ ಜೋಕಾಲಿಯ ನೈಜ ಚಿತ್ರಣ ಕಂಡು ನಾನು ಮಂತ್ರಮುಗ್ಧನಾಗಿದ್ದೇನೆ.

ನೂರು ಅಡಿಗಳ ಪಕ್ಷಿನೋಟದಿಂದ ಹಿಡಿದು ನಮ್ಮನ್ನು ನಾವೇ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡಿ ಪರೀಕ್ಷಿಸಿಕೊಂಡ ಅನುಭವವಾಯಿತು. ಸಮಾಜದ ವಿವಿಧ ಆಯಾಮಗಳನ್ನು ಚಿತ್ರಿಸಿ ಅದರಲ್ಲಿರುವ ಪೊಳ್ಳುತನ, ಸಾಮೂಹಿಕ ಉನ್ಮಾದವನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ಲೇಖಕಿ ಸಫಲರಾಗಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಕನಿಷ್ಠ ಒಂದು ಪಾತ್ರಕ್ಕಾದರೂ ಓದುಗ ತನ್ನನ್ನು ಹೋಲಿಸಿಕೊಂಡು ಆ ಪಾತ್ರದೊಂದಿಗೆ ನಗುತ್ತಾನೆ, ಅಳುತ್ತಾನೆ, ದುಃಖಿಸುತ್ತಾನೆ, ಕಾಳಜಿ ವಹಿಸುತ್ತಾನೆ, ವಿಜೃಂಭಿಸುತ್ತಾನೆ. ಭಾವಪರವಶವಾಗುವ ಹಲವಾರು ಸನ್ನಿವೇಶಗಳು ಮನಸ್ಸಿಗೆ ಆಪ್ತವೆನಿಸುತ್ತವೆ. ಪಾತ್ರಗಳ ಆಶಯ ನಮ್ಮ ಆಶಯವೇ ಎಂಬಂತೆ ಬೆಳೆಯುತ್ತಾ ಸಾಗುತ್ತದೆ.

ಅಸಾಧಾರಣ ಪರಿಸ್ಥಿತಿ ವ್ಯಕ್ತಿಯ ಹಾಗೂ ಅವನ ಕುಟುಂಬದ ರೂಪುರೇಷೆಯನ್ನು ಬದಲಿಸಿ ಅದರಿಂದಾದ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಿ ಗೆಲ್ಲುವ, ಹೊಂದಿಕೊಳ್ಳುವ, ಹೆಚ್ಚಿನದನ್ನು ಬಯಸುವ ಮೂಲಭಾವ ಈ ಕಾದಂಬರಿಯಲ್ಲಿ ಬಹಳ ಚೆನ್ನಾಗಿ ವ್ಯಕ್ತವಾಗಿದೆ. ಬದುಕಿನ ಕೆಲವು ವಿಷಯಗಳು ನಮ್ಮ ಹಿಡಿತದಲ್ಲಿ ಇರುತ್ತವೆ. ಹಾಗೆಯೇ ಅಮೂರ್ತವಾದ ಎಷ್ಟೋ ವಿಷಯಗಳು ನಮ್ಮ ಪ್ರಭಾವ ವಲಯದ ಆಚೆ ಇರುತ್ತವೆ. ಮುಷ್ಟಿಯಲ್ಲಿ ಹಿಡಿದ ಮರಳು ಇಷ್ಟಿಷ್ಟೇ ಬೆರಳ ಸಂದಿಯಿಂದ ಜಾರುವಾಗ ಹಿಡಿತ ಇನ್ನಷ್ಟು ಬಿಗಿಯಾಗುತ್ತದೆ. ಪರಿಣಾಮ ಮರಳು ಇನ್ನಷ್ಟು ವೇಗವಾಗಿ ಜಾರಿಬಿಡುತ್ತದೆ. ಬದುಕನ್ನು ಜಾರದಂತೆ ಹಿಡಿದುಕೊಳ್ಳುವ ಹಂಬಲ ಯಾರಿಗೆ ತಾನೇ ಇರದು. ಅಚಾತುರ್ಯದಿಂದ ಜಾರಿ ಹೋದ ಮರಳು ನೆಲ ಸೇರುತ್ತದೆ. ಅದನ್ನು ಬಾಚಿ ಗುಡ್ಡೆ ಮಾಡಿ ಮತ್ತೆ ಹಿಡಿಯಲ್ಲಿ ಹಿಡಿಯುವುದು ಸಾಧ್ಯವಿಲ್ಲ. ಇನ್ನೊಂದು ಗುಡ್ಡೆ ಹುಡುಕಬೇಕು, ಸ್ವಲ್ಪ ಭಾವನೆಯ ಹಸಿ, ಶ್ರಮದ ಬೆವರ ಅಂಗೈಯಲ್ಲಿ ಮರಳು ಸ್ವಲ್ಪ ಹೊತ್ತಾದರೂ ಉಳಿಯಬಹುದು. ಅನುಭವ ಬಿಗಿಯನ್ನು ಸಡಿಲಿಸುವಂತೆ ಪ್ರೇರೇಪಿಸಬಹುದು. ಹಾಗಾದರೆ ಎಷ್ಟು ಚಂದ? ಆದರೆ, ಅನೀರೀಕ್ಷಿತವಾದ ಬದುಕಿನಲ್ಲಿ ಕಲ್ಪನೆಗಿಂತ ವಾಸ್ತವ ಬಹಳ ವಿಭಿನ್ನವಾಗಿರುತ್ತದೆ. ಸಡಿಲ ಹಿಡಿದ ಮುಷ್ಟಿಗೆ ಏನೋ ತಾಗುತ್ತದೆ, ಕೈಯಲ್ಲಿನ ಮರಳು ಚೆಲ್ಲುತ್ತದೆ. ಕೈ ಬರಿದಾಗುತ್ತದೆ. ಕೈಜಾರಿದ ಮರಳ ಹರಳುಗಳು ನೆಲ ಸೇರಿ ಹೊಳೆಯುತ್ತವೆ. ಅದರಲ್ಲಿ ಕಂಡ ಪ್ರತಿಫಲನದಿಂದ ಮತ್ತೆ ಮನಸ್ಸು ಮರುಳಾಗುತ್ತದೆ. ಇನ್ನೊಂದು ಗುಡ್ಡೆಯನ್ನರಸಿ, ಇನ್ನಷ್ಟು ಆಸೆಗಳನ್ನು, ಕ್ಷಣಗಳನ್ನು, ಕನಸುಗಳನ್ನು ಕೈಯಲ್ಲಿ ಹಿಡಿಯಲು. ಹಿಂದೆ ಕಳೆದುಕೊಂಡದ್ದನ್ನು ಒಮ್ಮೆಲೇ ಪಡೆದುಕೊಂಡು ಈಗ ಎಲ್ಲಾ ಸರಿ ಹೋಯ್ತು ನಾನು ನೆಮ್ಮದಿಯ ಜೀವನ ಸಾಗಿಸುವೆ ಅಂದುಕೊಂಡಾಗ ಕಾವಲುದಾರಿ ಎದುರಾಗುತ್ತದೆ. ಸರಿಯಾದ ಆಯ್ಕೆ ಮಾಡಿಕೊಂಡ ದಾರಿಯಲ್ಲಿ ಮೊದಲಿಗೆ ನುಣುಪು. ಆಮೇಲೆ ಕಲ್ಲುಮುಳ್ಳುಗಳ ಕಾಠಿಣ್ಯ. ಅದನ್ನು ಮೀರಿ ಮುಂದೆ ಹೋಗಲೇಬೇಕು. ಏಕೆಂದರೆ ಬಂದ ದಾರಿ ಮರೆತು ಹೋಗಿದೆ ಮುಂದೆ ಸಾಗಬೇಕು .ಇನ್ನೊಂದು ಕಾವಲುದಾರಿ ಸಿಗುವವರೆಗೆ. ಆಗಲೂ ಆಯ್ಕೆ ನಮ್ಮದೇ ಆದರೆ ಪರಿಣಾಮ ಊಹೆಗೆ ಮೀರಿದ್ದು.

ಇವಿಷ್ಟು “ಸ್ವೈಪ್ ರೈಟ್” ಕಾದಂಬರಿ ಓದಿದಾಗ ನನ್ನ ಮನದಲ್ಲಿ ಮೂಡಿದ ಭಾವನೆಗಳು. ಒಂದು ಕಾದಂಬರಿ ನಮ್ಮನ್ನು ಇಷ್ಟೊಂದು ಆಲೋಚನೆಗೆ ಈಡು ಮಾಡುತ್ತದೆಯೆಂದರೆ ಅದು ಲೇಖಕಿಯ ಗೆಲುವೇ ಎಂದು ನಾನು ನಂಬಿದ್ದೇನೆ. ಆಕರ್ಷಕ ಮುಖಪುಟ, ವಿಭಿನ್ನ ಪುಟವಿನ್ಯಾಸ ಹೊಂದಿದ ಹದಿನೆಂಟು ಅಧ್ಯಾಯಗಳ ಈ ಕಾದಂಬರಿ ನೂರೆಂಟು ಮನಗಳನ್ನು ತಣಿಸುವುದರಲ್ಲಿ ಸಂಶಯವಿಲ್ಲ. ಕತೆಡಬ್ಬಿ 20ಕ್ಕೂ ಹೆಚ್ಚು ಆವೃತಿಗಳನ್ನು ಕಂಡ ಯಶಸ್ವೀ ಕೃತಿ. ಸ್ವೈಪ್ ರೈಟ್ ಈ ದಾಖಲೆಯನ್ನು ಹಿಂದಿಕ್ಕುವ ಎಲ್ಲಾ ಸಾಧ್ಯತೆಗಳಿವೆ.

- ಮಹೇಶ ಅರಬಳ್ಳಿ

 

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...