ನಾನು ಓದಿದ ‘ಬಂಡಲ್ ಕತೆಗಳು’ - ಜಯರಾಮಾಚಾರಿ


ಸಾವು, ಕತ್ಲು, ಕಾಮ, ಪ್ರೀತಿಯ ಭಗ್ನತೆ ಅಷ್ಟೇ ಬದುಕನ್ನು ಬೇರೆ ತರ ನೋಡಲು ಸಾಧ್ಯ ಅಂತ ಬಲವಾಗಿ ನಂಬಿದವ ನಾನು. ಎಸ್ ಸುರೇಂದ್ರನಾಥ್ ಅವರ ಕತೆಗಳಲ್ಲಿ ಎದುರುಗೊಂಡ ಸಾವು, ಸಾವಿನ ಭೀತಿ, ಕಾಮ ಪ್ರೇಮದ ಫಜೀತಿಯಿಂದ ಇನ್ನಷ್ಟು ಇಷ್ಟವಾಯ್ತು ಎನ್ನುತ್ತಾರೆ ಲೇಖಕ ಜಯರಾಮಚಾರಿ. ಲೇಖಕ ಎಸ್. ಸುರೇಂದ್ರನಾಥ್ ಅವರ ಬಂಡಲ್‌ ಕತೆಗಳು ಕೃತಿಯ ಬಗ್ಗೆ ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..

ಡಿಯರ್ ಸೂರಿ ಸರ್,

(ಸುಕ್ಕ ಸೂರಿಯಲ್ಲ, ಕತೆಗಾರ ನಾಟಕಕಾರ ಎಸ್ ಸುರೇಂದ್ರನಾಥ್, ಬಂಡಲ್ ಕತೆಗಳ ಓದಿ ಮುಗಿಸಿದ ದಿನನೇ ಅವರ ನಂಬರ್ ಗಿಟ್ಟಿಸಿ ನನ್ನ ಖುಷಿ ಹೇಳಿಕೊಂಡರೂ ಎಷ್ಟೊ ಹೇಳಲಾಗಲಿಲ್ಲ ಅನಿಸಿ ಮತ್ತೆ ಬರೆದದ್ದು ಇದು)

ಕಳೆದ ವಾರ ನಿಮ್ಮ ಬಂಡಲ್ ಕಥೆಗಳು ಓದಿದೆ, ಹೆಸರಿನಲ್ಲೇ ಬಂಡಲ್ , ಕಟ್ಟು ಕತೆಗಳು ಅಂತ ಹೇಳುವ ನಿಮ್ಮ ಕತೆಗಳು ಹೇಗಿರಬಹುದೆಂಬ ಕುತೂಹಲದಲ್ಲೇ ಶುರು ಮಾಡಿದೆ. ಮೊದಲ ಕತೆಗೆ ಕ್ಲೀನ್ ಬೋಲ್ಡ್. ಯಾಕೆಂದರೆ ನಾನು ಇಷ್ಟಪಡುವ ಜೋನರ್ ನ ಕತೆ. ಒಂದು ಸಾವನ್ನು ಮೂರು ಮಗ್ಗುಲಿನಿಂದ ಬಿಚ್ಚಿಟ್ಟು ಕೊನೆಗೆ ಸಾವೇ ಎದೆ ಹೊಡೆದುಕೊಂಡು ಸಾಯುವ ಮೆಟಾಫರ್ ಇದ್ಯಲ್ಲ ಅದು ಸಕತ್ ಮಜ ಕೊಡ್ತು ಕಿಕ್ ಕೊಡ್ತು. “ಅದಕ್ಕೆ ಹಿರಿಯರು ಹೇಳಿದ್ದು, ಸಾವಾದ್ರೇನು, ಯಾವನಾದರೇನು, ನಾಟಕದೋರನ್ನ ತಡವಕೋಬೇಡಿ ಅಂತ”. ಅನ್ನುವ ಸಾಲಿನೊಂದಿಗೆ ಕೊನೆಯಾದಾಗ ಮುಗುಳ್ನಗೆ, ಅದನ್ನ ನನ್ನ ನಾಟಕದ ಸ್ನೇಹಿತರಿಗೆಲ್ಲ ಕಳಿಸಿದೆ. ಶಾಂತಣ್ಣನನ ಸಾವನ್ನು ತಪ್ಪಿಸಿಕೊಂಡ ಕತೆಯಿಂದ ಸುರುವಾಗಿ ಕೋಮಣ್ಣಮಾಮ ಮುಳುಗಿದ ಮತ್ತೆ ಏಳಲಿಲ್ಲ ಎಂಬ ಅನಿರೀಕ್ಷಿತ ಸಾವಿನೊಂದಿಗೆ ಪುಸ್ತಕ ಮುಗೀತಲ್ಲ. ಇಡೀ ಪುಸ್ತಕದಲ್ಲಿ ಸಾವು ಒಂದು ಭಾವವಾಗಿ ಪಾತ್ರವಾಗಿತ್ತು.

ನಿಮ್ಮ ಕತೆಗಳಲ್ಲಿನ ಪಾತ್ರ ಪರಿಚಯ ಸಕತ್. ಪಾತ್ರ ಯಾವ ರೀತಿ ಕೂಡ ಉಸಿರಾಡ್ತಾವೆ ಅನ್ನುವಷ್ಟು ದಟ್ಟವಾಗಿ ಕಟ್ಟಿಕೊಡ್ತೀರಿ, ಪ್ರತಿ ಪಾತ್ರಕ್ಕೊಂದು ಮ್ಯಾಜಿಕ್ ರಿಯಲಿಸಂ ಟಚ್ ಕೊಡ್ತೀರಿ, ಸಾವನ್ನು ಗೆದ್ದು ಬರೋ ಶಾಂತಣ್ಣ , ಸತ್ತು ಸತ್ತು ಮತ್ತೆ ಬದುಕುವ ಶಿವಪುತ್ರಪ್ಪ ಅ.ಕ ಪುತ್ರ, ತನ್ನ ಪ್ರತಿ ಸಾಲು ಮತ್ಯಾರದೋ ಬರಹಗಾರನ ಬರಹವಾಗುವ ಸೂರಿ ಅ.ಕ ನೀವೆ, ಶೇಷಗಿರಿಯ ಗೋಡೆ ದಾಟುವ ಪವರ್ರು, ದಾಟಿ ಏ ಮಂಗ್ಯ ಅನ್ನುವ ಮಜ, ಫ್ರೀ ಆಗಿ ಕಲ್ಪವೃಕ್ಷ ಕೋಟು ಹೊಲಿದುಕೊಡೋ ಹಳೆ ಮುದುಕ, ಕತೆಯಲ್ಲಿನ ಪಾತ್ರವೇ ಎದ್ದು ಬರುವ ಸುರೇಶ, ಬೆಟ್ಚದ ಬುಡದಿಂದ ಬಂದು ಬದುಕಿನ ಬುಡಮೇಲು ಮಾಡುವ ಪ್ರತಿ, ಕಿಟಕಿಯಂಚಲ್ಲಿ ಬಂದು ಆಲಾಪವಿಡುವ ಆತ್ಮ , ಕೊನೆಗೆ ಹೂ ಆಯುವ ಹುಡುಗಿಗಾಗಿ ಕಾದು ಕುಳಿತ ಶ್ರೀಪಾದರಾಯ. ಯಾವ ಕತೆಯ ಯಾವ ಪಾತ್ರವೂ ಊನ ಅನಿಸಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕೊಲೆಯಾಗಿ ಆತ್ಮಹತ್ಯೆಯೇ ಆದ ಮೈಲಾರಿಯೂ ಸಹ.

ಕತೆಗಳ ಸನ್ನಿವೇಶವೇ ಮಜ. ಯಾವ ಗಹನ ವಿಚಾರಧಾರೆ, ಯಾವ ಇಸಮ್ಮಿನ ಬಳಲಿಕೆ, ಯಾವ ಸಮಾಜೋದ್ದಾರಕ ಥಾಟು, ಇಲ್ಲ ನನಗೆ ಏನೋ ಗೊತ್ತಿದೆ ಅಹಂ ಇಲ್ಲದೆ ಯಾವ ಮನೆಯಲ್ಲಾದರೂ ಯಾವ ಮೂಲೆಯಲ್ಲಾದರೂ ಯಾವ ಕ್ಷಣವಾದರೂ ನಡೆಯಬಲ್ಲ ಕತೆಗಳು, ಜೊತೆಗೆ ನಾನ್ ರಿಯಲಿಟಿ ಟಚ್, ನನಗೆ ನನ್ನ ಅಮ್ಮ ಸತ್ತ ಮಾರನೇ ದಿನ ಇಳಿ ಸಂಜೇಲಿ ಬೆಡ್ ಮೇಲೆ ಅಂಗಾತ ಮಲಗಿದ್ದಾಗ ಯಾರೋ ಬಂದು ಕೂತ ಹಾಗಾಯ್ತು ನೋಡಿದರೆ ನನ್ನವ್ವ, ನಾನು ಏಳುವ ಮುಂಚೆ , ಅಳ್ಬೇಡ ನಾನು ಎಲ್ಲೂ ಹೋಗೋಲ್ಲ ಇರ್ತೀನಿ ಅಂದ್ಳು ರೆಡ್ ಸ್ಯಾರಿ ದೊಡ್ ಕುಂಕುಮ ಹಾಕಿಕೊಂಡಿದ್ಳು . ಅದು ನಿಜವ ? ಭ್ರಮೆಯ? ಕನಸ ? ನನಗಿನ್ನೂ ಗೊತ್ತಿಲ್ಲ. ನಿಮ್ಮಲ್ಲ ಕತೆಗಳಲ್ಲಿ ಆ ತರದ ಅನುಭವವಾಯ್ತು.

ಕತೆ ಹೇಗೆ ಬರೀಬೇಕು ಹೇಗೆ ಶುರು ಮಾಡಬೇಕು, ಎಲ್ಲಿ ಜರ್ಕ್ ಹೊಡೆಸಬೇಕು ಎಲ್ಲಿ ಮುಗಿಸಬೇಕು ಅನ್ನೊದಕ್ಕೆ ನಿಮ್ಮ ಕತೆಗಳು ಬೆಸ್ಟ್ ಮಟೀರಿಯಲ್ ಆಗಬಲ್ಲವು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೀರ ಅನ್ಸುತ್ತೆ ಹಾಗಾಗಿ ಎಲ್ಲ ಸಾಲುಗಳು ಅಪ್ಪಿಕೊಳ್ತಾವೆ. ಮೊದಲ ಪುಟದಲ್ಲೇ ಮುಗ್ಗರಿಸಿಲಿ ಬರುವ ಜೋಗಿ ಮತ್ತು ವಿವೇಕ ಶಾನಭಾಗ ಸರ್ ಪ್ರೈಸ್ ಪ್ಯಾಕ್.

ಸಾವು, ಕತ್ಲು, ಕಾಮ, ಪ್ರೀತಿಯ ಭಗ್ನತೆ ಅಷ್ಟೇ ಬದುಕನ್ನು ಬೇರೆ ತರ ನೋಡಲು ಸಾಧ್ಯ ಅಂತ ಬಲವಾಗಿ ನಂಬಿದವ ನಾನು. ನಿಮ್ಮ ಕತೆಗಳಲ್ಲಿ ಎದುರುಗೊಂಡ ಸಾವು, ಸಾವಿನ ಭೀತಿ, ಕಾಮ ಪ್ರೇಮದ ಫಜೀತಿಯಿಂದ ಇನ್ನಷ್ಟು ಇಷ್ಟವಾಯ್ತು.

ಕೊನೆದಾಗಿ...ಎರಡು ವರುಷಗಳ ಹಿಂದೆ ಸಡನ್ನಾಗಿ ಓದಿ ಓದಿ ಏನ್ ಉಪಯೋಗ ಅಂತ ಓದೋದೆ ಬಿಟ್ಟಿದ್ದೆ ಆ ಟೈಮಲ್ಲಿ ಸಿಕ್ಕವನೇ ಹರುಕಿ ಮುರಾಕಾಮಿ, ಅವನ ಕಾಫ್ಕಾ ಆನ್ ದಿ ಶೋರ್ ಓದಿದ ಮೇಲೆ ಪಟ್ಟು ಬಿಡದೇ ಅವನ ಎಂಟು ಪುಸ್ತಕ ಓದಿದ್ದಾಯ್ತು. ಆ ಕ್ಷಣದಲ್ಲಿ ನನಗಾದ ಖುಷಿ ಥ್ರಿಲ್ ಮತ್ತೆ ಇನ್ನನೋ ಅನುಭವವಾದದ್ದೇ ನಿಮ್ಮ ಬಂಡಲ್ ಕತೆಗಳನ್ನ ಓದಿದಾಗ ಆಯ್ತು

ಬರೆದಿದ್ದಕ್ಕೆ ಥ್ಯಾಂಕ್ಯೂ. ಬರೀತ ಇರಿ . ಓದ್ತಾ ಇರ್ತೀನಿ

ಜಯರಾಮಚಾರಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
ಎಸ್. ಸುರೇಂದ್ರನಾಥ್ ಅವರ ಲೇಖಕ ಪರಿಚಯ..
ಬಂಡಲ್‌ ಕತೆಗಳು ಕೃತಿಯ ಪರಿಚಯಕ್ಕಾಗಿ..

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...