ನಾಟ್ಯಾಂತರಂಗ - ನೃತ್ಯ ವಿಮರ್ಶೆಯ ಲೇಖನ ಮಾಲೆ


ಲೇಖಕಿ, ಪತ್ರಕರ್ತೆ, ರಂಗಭೂಮಿ ಕಲಾವಿದೆಯೂ ಆಗಿರುವ ಸಂಧ್ಯಾ ಶರ್ಮ ವೈ.ಕೆ ಅವರ ನಾಟ್ಯಾಂತರಂಗ ಕೃತಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್ ಅವರ ಮುನ್ನುಡಿ ನಿಮ್ಮ ಓದಿಗಾಗಿ..

ಪ್ರಾಚೀನತೆಯಲ್ಲಿ ಸಂಧ್ಯಾ ಸೃಷ್ಟಿಕರ್ತ ಬ್ರಹ್ಮನ ಪುತ್ರಿ; ಅಂದಮೇಲೆ, ಸೃಜನಶೀಲತೆಗೆ ಕೊರತೆ ಎಲ್ಲಿದೆ? ಮುಸ್ಸಂಜೆಯ ಸಂಧ್ಯಾಕಾಲದ ಸೊಗಸು, ರಮಣೀಯತೆ,ಈ ವ್ಯಕ್ತಿತ್ವದ ಉತ್ಕೃಷ್ಟತೆ! ಆಯ್ಕೆಯ ಕಾಯಕದಲ್ಲಿ ಅಚ್ಚುಕಟ್ಟು ಇವರ ಪಡಿ ಅಚ್ಚು! ರಂಗುರಂಗಿನ ರಂಗದ ಸೆಳೆತವೇ ಕವಯಿತ್ರಿ, ಬರಹಗಾರ್ತಿ, ಕಥಾನಕಿ ಸಂಧ್ಯಾ- ಇವೆಲ್ಲ ಪ್ರತಿಭೆಯ ಪ್ರತಿಫಲನವೆಂದರೆ ತಪ್ಪಾಗಲಾರದು.

ಅದೊಂದು ಮುಸ್ಸಂಜೆ: ನನ್ನ ಮತ್ತು ಆತ್ಮೀಯ ಸಂಧ್ಯಾರವರ ಭೇಟಿಯ ಮುಸ್ಸಂಜೆಯ ಸೋಜಿಗ. ನನ್ನ ನೃತ್ಯ ವಿದ್ಯಾರ್ಥಿನಿಯರ ಭರತನಾಟ್ಯ- ಹಳೆಯ ಕನ್ನಡ ಚಲನಚಿತ್ರಗಳ ಹಾಡುಗಳು ಮತ್ತು ಭಾವಗೀತೆಗಳು ರಂಗದಲ್ಲಿ ಅನಾವರಣಗೊಳ್ಳುವ ಸಮಯ. ಪಕ್ಕದಲ್ಲಿ ಕುಳಿತ ಸಂಧ್ಯಾರವರ ಈ ಕಾರ್ಯಕ್ರಮ ಕುರಿತು ವರದಿ- ವಿಮರ್ಶೆ ಮಾಡುವ ಉತ್ಸಾಹ ಮತ್ತು ಪ್ರೀತಿ. ನನ್ನೊಡನೆ ನೃತ್ಯ ಕುರಿತು ಸಂವಾದ, ಬರವಣಿಗೆ ಬಗ್ಗೆ ಕಳಕಳಿ, ಸಂವೇದನಾಶೀಲ ನಿಲುವು ಇವೆಲ್ಲ ನಾನು ಸಂಧ್ಯಾ ಅವರಲ್ಲಿ ಮೆಚ್ಚುವ ಅಂಶಗಳು. ಇವತ್ತಿಗೆ, ಸಂಧ್ಯಾಶರ್ಮರವರದು ಒಂದು ಭದ್ರ ಸ್ಥಾನ, ನೃತ್ಯವಿಮರ್ಶೆ ಅಂಕಣದಲ್ಲಿ. ಎಳವೆಯಲ್ಲಿ ಕೂಚಿಪುಡಿ ನೃತ್ಯದಲ್ಲಿ  ಪರಿಶ್ರಮ, ಇವರಿಗೆ ವಿಮರ್ಶೆಯ ಕೈಂಕರ್ಯದಲ್ಲಿ ಒದಗಿಬಂತು. ನೃತ್ಯ ಕ್ಷೇತ್ರವು ಇವರನ್ನು ಒಬ್ಬ ವಿಮರ್ಶಕಿ ಎಂದು ಗಮನಿಸುವ ಬಹಳ ಮೊದಲೇ ನನಗೆ ಆತ್ಮೀಯರು.

ನೃತ್ಯ ವಿಮರ್ಶೆಗೆ ಒದಗಿ ಬರುವ ಲಾಸ್ಯಪೂರಿತ ಬರಹ ಶೈಲಿ, ನೃತ್ಯದ ಪ್ರಮುಖ ಅಂಶಗಳ ಬಗ್ಗೆ ಅವರ ಒಳದೃಷ್ಟಿ, ಸೂಕ್ಷ್ಮತೆ, ಸೌಂದರ್ಯಪ್ರಜ್ಞೆ, ಪುಟ್ಟ ಲೇಖನದಲ್ಲಿ ಬೃಹದಾಗಿ ಕಟ್ಟಿಕೊಡುವ ಕಲೆ ಅವರ ಸಿದ್ಧಿಯೇ ಸರಿ. ಕಳೆದ ಹಲವು ವರ್ಷಗಳಲ್ಲಿ ನಿರಂತರ ಪರಿಶ್ರಮದಲ್ಲಿ ವಿಮರ್ಶಾತ್ಮಕ ಲೇಖನಗಳನ್ನು ಎಡಬಿಡದೆ ತಯಾರಿಸಿದ ಸಂಧ್ಯಾರವರು ಪುಟಿಯುವ ಚೈತನ್ಯದ ಚಿಲುಮೆ. ಛಲಗಾರಿಕೆಯಿಂದ ಕೈಯಲ್ಲಿ ಹಿಡಿದಿದ್ದನ್ನು ಪೂರ್ಣಗೊಳಿಸುವ ಛಾತಿ;  ಟೀಕೆಗಳಿಗೆ ಸೊಪ್ಪುಹಾಕದೆ, ಮುನ್ನಡೆದು ಗುರಿ ಮುಟ್ಟುವ ಧೀರ ನಿಲುವು, ನನ್ನನ್ನು ಅವರ ಕಡೆ ತಿರುಗುವಂತೆ ಮಾಡಿದ್ದು, ಭೂತಕಾಲಕ್ಕೆ ಜಾರಿದ ವಿಷಯ.

ಪ್ರಸ್ತುತ ಸಂಧ್ಯಾ, ತಮ್ಮ ನೃತ್ಯ ವಿಮರ್ಶೆಯ ಲೇಖನ ಮಾಲೆಯನ್ನು ಪುಸ್ತಕದ ರೂಪದಲ್ಲಿ ಹೊರತರುತ್ತಿರುವುದು ನನಗೆ ಹೆಮ್ಮೆ ಮತ್ತು ಸಂತಸ ತಂದಿದೆ. ತುಂಬು ಪ್ರೀತಿಯಿಂದ, ಈ ಮುನ್ನುಡಿ, ಓದುಗರಿಗಾಗಿ; ಸಂಧ್ಯಾರವರ ಮತ್ತು ನನ್ನ ಸ್ನೇಹದ ಕುರುಹಾಗಿ. ಇವರ ಬದುಕು ಬರಹಗಳಿಂದ ಬೆಳಗಲಿ ಎಂದು ಆ ದಿವ್ಯ ಶಕ್ತಿಯಲ್ಲಿ ಬೇಡುತ್ತಾ,...... ವಿರಮಿಸುತ್ತಿದ್ದೇನೆ! 

                                        
                                                                     

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...