ಸಾಲು-ಸಾಲಿನ ಪದಪುಂಜಗಳಲ್ಲಿ 'ಕಾವ್ಯ' ಮಿಡಿಯುತ್ತದೆ


“ಕವಿತೆಗಳೆಂದರೆ ತುಸು ಹೆಚ್ಚೆ ಮನಸ್ಸಿಗೆ ಹಚ್ಚಿಕೊಂಡು ಓದ ಬಯಸುವ ನನಗೆ, ಎದೆನೆಲದಲ್ಲಿ ಬೇರೂರಿದ ಕವಿತೆಗಳು ಮುದ ನೀಡಿ, ಭಾವಗಡಲ ಕದಡಿದವಾದವು ಮತ್ತು ಇಲ್ಲಿ ಗದ್ಯಪ್ರಕಾರವಾದ ಪದ್ಯಗಳಿದ್ದು ಹತ್ತಾರು ನೆನೆಕೆಗಳಾಗಿ ಮಿಡಿದವು,” ಎನ್ನುತ್ತಾರೆ ಲೇಖಕಿ ದೀಪಿಕಾ ಬಾಬು. ಅವರು ಹಿರಿಯ ಲೇಖಕ ಜೋಗಿ ಅವರ ‘ಸಾಲು ಸಾಲು ಸಾಲು’ ಕೃತಿ ಕುರಿತು ಬರೆದಿರುವ ವಿಮರ್ಶೆ.

ಸಾಲು-ಸಾಲಿನ ಪದಪುಂಜಗಳಲ್ಲಿ 'ಕಾವ್ಯ' ಮಿಡಿಯುತ್ತದೆ.

ಸ್ವಂತಕ್ಕೆ ಬರೆದ ಪದ್ಯಗಳು, ಸಾಲು ಸಾಲು ಸಾಲು, ಎಂಬಂತೆ ಸಾಲಾಗಿ ಬರೆದ ವಾಕ್ಯಗಳೆಲ್ಲ ಪದ್ಯಗಳಾಗಬಹುದಾ..? ಪದ್ಯಕ್ಕೆ ಹೀಗೆ ಬರೆಯಬೇಕು ಎಂಬ ಚೌಕಟ್ಟಿದೆಯಾ..? ಇದೆಲ್ಲಾ ಯಾವ ಪರಿಮಿತಿಯು ಕವಿಗೆ ಅನ್ವಯಿಸುವುದಿಲ್ಲ. ಆದರೆ ಇಲ್ಲಿ ಜೋಗಿ ಅವರು ಹೇಳುತ್ತಾರೆ, 'ನಾನು ಕವಿಯಲ್ಲ, ನಾನು ಕವಿಯಾದರೆ, ಇವು ಕವಿತೆಗಳೇ ಅಲ್ಲ!' ಆದರೆ ಇಲ್ಲಿ ಪ್ರತಿ ಸಾಲು ಕವಿತೆಯನ್ನು ಒಳಗೊಂಡಿದೆ. ಜೋಗಿ ಅವರ ಗದ್ಯವನ್ನು ಓದಿಕೊಂಡು ಬರಹದ ಅಭಿಮಾನಿಯಾದ ನನಗೆ, ಮುಖಪುಟದಲ್ಲಿ ಇವರ ಕೆಲವು ಕವಿತೆಗಳನ್ನು ಓದಿಕೊಂಡಿರುವೆ. "ಸಾವು, ಸೂಟು, ಮದ್ಯ" ಹೀಗೆ ಕೆಲವು ಕವಿತೆಗಳನ್ನು ಮೆಲುಕು ಹಾಕಿದ್ದೇನೆ.

ಪ್ರಸ್ತುತ 'ಸಾಲು ಸಾಲು ಸಾಲು' ಸಂಕಲನ ಪ್ರಕಟವಾದ ದಿನದಿಂದ ಓದುವ ಹಂಬಲವಿತ್ತು, ಅನಂತ ಕುಣಿಗಲ್ ಅವರಿಂದ ಪುಸ್ತಕ ತರಿಸಿಕೊಂಡು ಓದುವ ಸಂತಸದಲ್ಲಿದ್ದವಳಿಗೆ ಅಚ್ಚರಿ ಎಂಬಂತೆ ಭಾಸವಾಗಿದ್ದು ಕೆಲವು ಪದ್ಯಗಳು‌. ಕವಿತೆಗಳೆಂದರೆ ತುಸು ಹೆಚ್ಚೆ ಮನಸ್ಸಿಗೆ ಹಚ್ಚಿಕೊಂಡು ಓದ ಬಯಸುವ ನನಗೆ, ಎದೆನೆಲದಲ್ಲಿ ಬೇರೂರಿದ ಕವಿತೆಗಳು ಮುದ ನೀಡಿ, ಭಾವಗಡಲ ಕದಡಿದವಾದವು ಮತ್ತು ಇಲ್ಲಿ ಗದ್ಯಪ್ರಕಾರವಾದ ಪದ್ಯಗಳಿದ್ದು ಹತ್ತಾರು ನೆನೆಕೆಗಳಾಗಿ ಮಿಡಿದವು.

ನೆಚ್ಚಿನ ಕವಿತೆಗಳೆಂದರೆ ಸಹಚಾರಿಣಿಗೆ, ಅಮ್ಮ, ಅಪ್ಪ, ಕನ್ನಡಕ ಮಾರಾಟಕ್ಕಿದೆ, ಸಾವು, ಬಾಕಿ ಮೊತ್ತ, ಕವಿತೆ, ಹೊರಡುವ ಮುನ್ನ, ಪಿ.ಲಂಕೇಶರ 'ನೀಲು' ಹೀಗೆ ಸಾಕಷ್ಟು ಕವಿತೆಗಳು-ಸಾಲುಗಳು ಕಣ್ಣಂಚಿನಲ್ಲಿ ನೀರಾಡಿ, ಬಿಕ್ಕಳಿಸುವಂತೆಯೂ ಮಾಡಿದೆ. ಕವಿತೆಗಳೇ ಹೀಗೆ..?! ಹೇಗೆಂದರೆ ಆಗ ಕಾಡಿ, ಕಾಡಿಯೇ ಆವರಿಸಲ್ಪಡುವವು.

ಕವಿತೆ -03 ಅಮ್ಮ ಇದರ ಶೀರ್ಷಿಕೆಯಡಿಯಲ್ಲಿ ಬರೆದ ಕವಿತೆಯ ಸಾಲುಗಳು, ತಾಯಿಯ ಮಡಿಲಲ್ಲಿ ಬೆಳೆದ ಪ್ರತಿ ಮಗುವಿನ ಅನುಭವಕ್ಕೂ ದಕ್ಕುವಂತಹದ್ದೇ.

*"ಅಮ್ಮನ ಸಿಟ್ಟನ್ನು ನೋಡಿದಷ್ಟು
ಅಮ್ಮನ ಪ್ರೀತಿಯನ್ನು ನೋಡಲಿಲ್ಲ ನಾನು"*

ಇಲ್ಲಿ ಅಮ್ಮನೆಂಬ ದೇವತೆಯನ್ನು ಹೆಣ್ಣಾಗಿಯೇ ಅಭಿವ್ಯಕ್ತಗೊಳಿಸಿರುವ ಪರಿಯಂತು ಭಾವಸುಂದರ. ಅವಳ ಪ್ರತಿ ಕ್ಷಣದ ಭಾವತುಡಿತವನ್ನು ಅದೆಷ್ಟು ಸೂಕ್ಷ್ಮವಾಗಿ ಅರ್ಥೈಸಿದ್ದಾರೆ ಕವಿ ಎಂಬುದನ್ನು ಕವಿತೆ ಓದುವ ತಾಯಿಗೂ ಅರ್ಥವಾಗದು. ಅವಳ ಸಿಟ್ಟಿನ ಗತ್ತು, ನಿಟ್ಟುಸಿರ ಬೇಗೆ, ಅನುಮಾನ, ಅಡುಗೆ, ಸಂಸಾರ, ತಣ್ಣೀರು ಸ್ನಾನ, ಮೌನ.....ಅವಳಂತರಂಗವನ್ನು ಬಹಿರಂಗಮಾಡಿ ಅಕಾಲಿಕ ಮರಣದಲ್ಲಿ, ಅಮ್ಮನ ಪ್ರೀತಿ ನೆನದು, ಅವಳ ಸಿಟ್ಟು ನೆನಪಿಲ್ಲ ಎಂಬುವ ಕವಿಯ ಭಾವಕ್ಕೆ ಶರಣು.

*"ಸತ್ತವರ ಬೆನ್ನಿಗಿಪ್ಪತ್ತು
ಜನ; ಕೊಂದವರ
ಗನ್ನಿಗೆಪ್ಪತ್ತು ಬಹುಪರಾಕ್!"*

ಇಲ್ಲಿ ಸತ್ತವರ ನೆರವಿಗಿಂತಲೂ ಅಸತ್ಯದ ಪರವಾಗಿ ನಿಂತು ಅನ್ಯಾಯಕ್ಕೆ ಜೈ ಎನ್ನುವವರದೇ ಹೆಚ್ಚಿನ ದರ್ಬಾರು. ಕೊಲ್ಲುವುದು ಕೂಡ 'ವಾದ' ಗೆಲ್ಲುವ ಸರಳ ಉಪಾಯ.

ಕವಿತೆ - 04 "ಒಂದು ಕೇಡುಗಾಲಿನ ಪದ್ಯ"

ಸಾವಿನ ಬಗೆಗೆ ಜೋಗಿ ಸರ್ ಅವರಿಗೆ ಅದೆಂತಹ ವ್ಯಾಮೋಹವು. ಬಹು ಆಳವಾಗಿ ಧ್ಯಾನಿಸುವಂತೆ, ಸಾವಿನ ಸುತ್ತಲೂ ಹೆಣೆದಿರುವ ಸಾಲುಗಳಲ್ಲಿ ಹೃದಯವನ್ನು ತಲ್ಲಣಿಸುವಂತೆ ಮಾಡಿ, ಚಿಂತೆಗೆ ದೂಡುತ್ತದೆ. ಸತ್ತವರನ್ನು ಕಾಯುವವರು 20 ಜನರಾದರೆ, ಅಂದರೆ..! ಸತ್ಯದ ಪರವಾಗಿಲ್ಲ ನಿಂತವರಿಗೂ ಸುಳ್ಳಿನ ಜೊತೆಯಲ್ಲಿ ಕೈಜೋಡಿಸಿದವರಿಗೂ ವಾದ, ವಿವಾದಗಳು ಜರುಗಿದಾಗ ಸತ್ಯದ ಹುಟ್ಟಡಗಿಸಲು ಅಸತ್ಯಕ್ಕೆ ಜಯಭೇರಿ ಬಾರಿಸಲು ರಣತಂತ್ರ ಹೂಡುವವರದ್ದೇ ಇಂದಿನ ಕಾರುಬಾರು. ಮತ್ತು ನಿತ್ಯವೂ ಅದರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂಬ ಮರ್ಮವನ್ನೊಳಗೊಂಡ ನೈಜತೆಯನ್ನು ಬಿಂಬಿಸಿದ್ದಾರೆ ಈ ಕವಿತೆಯಲ್ಲಿ.

*"ನಿನ್ನ ಉತ್ಕಟ ಬಯಕೆಗಳನ್ನು
ನಿಯಂತ್ರಿಸುವುದು
ತಪ್ಪು ಎಂದು ಗೊತ್ತಾದ

ದಿನ ನೀನು ಮುದುಕಿಯಾಗುವೆ"*

ಕವಿತೆ- 27 ಹರೆಯಕ್ಕೆ ಹಿತವಚನ ಎಂಬ ಶೀರ್ಷೆಕೆಯಡಿಯಲ್ಲಿ, ಮೂಡಿಬಂದ ಸಾಲುಗಳಿವು, ಇಲ್ಲಿ ಹಿತನುಡಿಗಳನ್ನು ಹರೆಯದವರಿಗೆ ಹೇಳುವಂತಿದೆ ಕವಿಯು. ಹದಿಹರೆಯದವರಲ್ಲಿ ಪ್ರತಿ ಆಕರ್ಷಣೆಯು ಗಾಢವಾದ ಪ್ರೇಮವೆಂದೇ ಭಾಸವಾಗುತ್ತದೆ. ಆದರೆ ಮನಸ್ಸು ಮಾಗಿದ ನಂತರವೇ ಅವರಲ್ಲಿ ಪ್ರೇಮದ ಅರಿವು ಅರ್ಥವಾಗುವುದು, ಇಲ್ಲಿ ಹರೆಯ ಪ್ರಾಯದಲ್ಲಿ ಮೂಡುವ ಉತ್ಕಟತನದ ಬಯಕೆಗಳನ್ನು ಅಡಗಿಸಿಕೊಳ್ಳುವುದು ಕಷ್ಟವೇ ಹೌದು, ಆದರೆ ಅದು ಅವರ ತಪ್ಪು ಗ್ರಹಿಕೆ, ಬಯಕೆಗಳನ್ನು ನಿಯಂತ್ರಿಸಿ ಕೊಳ್ಳುವುದು. ಆದರೆ ಒಂದು ಕಾಲಕ್ಕೆ ಬಂದ ಮೇಲೆ ಅದು ತಪ್ಪಲ್ಲ..! ವಯೋ ಸಹಜ ಗುಣಗಳು ಎಂದು ಅರಿವಾಗುತ್ತದೆ. ಆದರೆ ಅಲ್ಲಿಗೆ ಆ ಪ್ರಾಯ ಮೀರಿ ಹೋಗಿರುತ್ತದೆ ಎಂಬಂತೇ ಹರೆಯದ ಭಾವನೆಗಳನ್ನು ಒಳಗೊಂಡಂತಹ ಹರೆಯದವರ ಕಿವಿ ಹಿಂಡುವ ಸಾಲುಗಳನ್ನು ಹಿತವಚನವಾಗಿ ಬರೆದಿದ್ದಾರೆ.

45- ಇಂದು ಪತ್ರಿಕೆಗೆ ರಜೆ
*"ದೇವರು ದೊಡ್ಡವನು
ಇಂದು ಪತ್ರಿಕೆಗೆ ರಜೆ"*

ಕನ್ನಡ ಪ್ರಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೋಗಿ ರವರು ಪತ್ರಿಕೆಗೆ ರಜೆ ಘೋಷಣೆ ಮಾಡಿ ಅದನ್ನು ದೇವರ ತಲೆಗೆ ಕಟ್ಟಿ ದೇವರು ದೊಡ್ಡವನು ಅನ್ನುತ್ತಾರಲ್ಲ ಎಂದೆನಿಸುತ್ತದೆ. ಆದರೆ ಈ ಕವಿತೆಯ ಒಳಹೊಕ್ಕು ನೋಡಿದರೆ, ಇಂದು ಪತ್ರಿಕೆಗೆ ರಜೆ ಇದ್ದದ್ದೇ ಒಳ್ಳೆಯದಾಯಿತು ದೇವರೇ ಎಂದು ಓದುಗರು ಹೇಳುವಂತಾಗುತ್ತದೆ. ನಿತ್ಯದ ಜಂಜಾಟ, ಅದೇ ಹಾಳು ರಾಜಕೀಯ, ರಸ್ತೆಯ ಅಪಘಾತ, ಸಾವು ನೋವು, ವಾದ ವಿವಾದಗಳ ತರ್ಕ, ಹೀಗೆ ಸಮಾಜದಲ್ಲಿ ನಡೆಯುವ ಸಾಮಾನ್ಯ ವಿಚಾರಗಳೇ ವಿಶೇಷ ಸುದ್ದಿಗಳಾಗಿ ಅದೇ ಮಾತುಗಳು ಚರ್ಚೆಗಳಾಗುತ್ತವೆ. ಹೊಸದಾಗಿ ಏನಾಗಿದೆ..? ಬದಲಾಗುವಂತಹದ್ದು..? ಇದುವರೆಗೂ ಬದಲಾಗಿರುವುದು..? ಎಲ್ಲವೂ ಅದೇ ಕಥೆ , ಇಲ್ಲದ ಅನುಕಂಪ_ ತೋರದ ಪ್ರೀತಿ,' ನಾಟಕದಂತಹ ಕಾಳಜಿ, ಮನುಷ್ಯನ ಗುಣಲಕ್ಷಣಗಳನ್ನು ಎತ್ತಿ ಹಿಡಿದು ವರದಿ ಮಾಡುವುದು ದೊಡ್ಡ ವಿಷಯವಲ್ಲ. ಹೀಗೆ ಪತ್ರಿಕೆಗಳ ಅವಾಂತರಗಳನ್ನು ಕಂಡು, ಇಲ್ಲಿ ಎಲ್ಲಾ ಸಹಜ ನಡವಳಿಕೆ ಎಂಬಂತಹ ಸಾಲುಗಳೊಂದಿಗೆ ಕವಿಯು ದೇವರನ್ನು ದೊಡ್ಡವರನ್ನಾಗಿಸಿ ಪತ್ರಿಕೆಗೆ ರಜೆ ಘೋಷಿಸಿರುವದು ವಿಶಿಷ್ಟತೆಯನ್ನು ಪಡೆದಿದೆ.

ಪ್ರಸ್ತುತ ಕವನ ಸಂಕಲನದಲ್ಲಿ ೩೨ ಕವಿತೆಗಳಿದ್ದು, ಪ್ರೇಮ, ಕನಸು, ನೋವು ನಲಿವು, ನೆನಿಕೆ, ತಪನೆ, ಕಳಕಳಿ, ಜೀವನ ಮೌಲ್ಯ, ಹೀಗೆ ಎಲ್ಲವೂ ಒಳಗೊಂಡಂತಹ ಪದ್ಯಗಳಿವೆ... ಗದ್ಯಾಕಾರದಲ್ಲಿ ಒಳಮೂಡಿದ ಸಾಲುಗಳಲ್ಲಿ ಕವಿತೆಗಳ ತುಡಿತವಿದೆ. ಭಾವೋತ್ಕರ್ಷಣೆಯಲ್ಲಿ ಒಡಮೂಡಿದ ಸಾಲುಗಳಲ್ಲಿ ಗೆಳಯರಿಗೆ ಸಮರ್ಪಿಸಿದ ಕವಿತೆಗಳಲ್ಲಿ ಗೆಳೆತನದ ಶುದ್ಧ ಅಹಂವಿನ ಗಮನಾರ್ಹ ಸೆಳತವಿದೆ.

ಇಲ್ಲಿ ಸಾಲೆಂದರೆ ಜೋಗಿ ಸರ್ ರವರ ದಪ್ಪನೆಯ ಮೀಸೆಯ ಮರೆಯಲ್ಲಿ ಅಡಗಿರುವ ಸುಪ್ತ ಸಾಗರದ ಕನವರಿಕೆಯ ಭಾವದಲೆಗಳ ಚಿತ್ರಣಗಳು ರಾರಾಜಿಸಿವೆ. ಸರಳವಾಗಿ ಗದ್ಯವನ್ನು ಬರೆಯುವಷ್ಟೇ ಸಲೀಸಾಗಿ ಕವಿತೆಯ ಸಾಲುಗಳ ಕಾವ್ಯಾತ್ಮಕವಾಗಿ ಬರೆದಿಡುವ ನೆಚ್ಚಿನ ಕವಿ ಜೋಗಿ ಅವರಿಗೆ ಪ್ರೀತಿ.

- ದೀಪಿಕಾ ಬಾಬು, ಮಾರಘಟ್ಟ

MORE FEATURES

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...