ತೊಗಲು ಗೊಂಬೆಯ ತೊದಲು ಮಾತುಗಳು ‘ಕಾಡು ಮಲ್ಲೆ’


ಗುಹಾಂತರದ ಪ್ರಾರಂಭೋತ್ಸವದ ಹಿಂದಿನ ದಿನಗಳು, ಪ್ರವೇಶದಲ್ಲಿರುವ ಒಂದು ಶಾಸನದಂತಹ ಫಲಕಕ್ಕೆ ಒಂದು ಬರಹ ಬೇಕಿತ್ತು, ಕೇಳಿದ ಕೆಲವು ಗೆಳೆಯರಿಂದ ಉತ್ತರ ಬರಲಿಲ್ಲ, ಬರೆಯುವ ಅನಿವಾರ್ಯವಿತ್ತು ಪ್ರಯತ್ನದಲ್ಲಿ ಮಧ್ಯರಾತ್ರಿ ಆಯಿತು. ನಾನೇ ಬರೆದೆ, ನಂತರ ನನ್ನವಳಿಗೆ ಎಬ್ಬಿಸಿ ಓದಿದೆ. ಅವಳು ಕೇಳಿ ಚೆನ್ನಾಗಿದೆ ಎಂದು ಹೇಳಿ ಮಲಗಿದಳು. ನನಗೂ ಅನ್ನಿಸಿತು. ಎಲ್ಲೋ ಒಮ್ಮೆ ಚೆನ್ನಾಗಿರಬಹುದು, ಹಾಗೆಂದು ಕವಿಯಾಗಲು ಸಾಧ್ಯವೇ ಎಂದು ಸುಮ್ಮನಾದೆ ಎನ್ನುತ್ತಾರೆ ಲೇಖಕ ಸಾ.ನಾ ರಮೇಶ್. ಅವರು ‘ಕಾಡು ಮಲ್ಲೆ’ ಕೃತಿಗೆ ಬರೆದಿರುವ ಮನದ ಮಾತು ನಿಮ್ಮ ಓದಿಗಾಗಿ....

ತಂದೆಯಾಗಿ, ಗುರುವಾಗಿ, ದೇವರಾಗಿ ನನ್ನ ಸದಾ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಿರುವ ತಾತನಾತ್ಮದ ಅವ್ಯಕ್ತ ಶಕ್ತಿಗೆ ಮೊದಲೊಂದಿಸುವೆ. ಅವರಾಡಿಸುವ ತೊಗಲು ಗೊಂಬೆಯ ತೊದಲು ಮಾತುಗಳಿವು.

ಮುದ್ದಿಗೆ ತಾಯಿ, ಶಿಸ್ತಿಗೆ ಅಕ್ಕ, ಪ್ರೀತಿಯ ತಮ್ಮಂದಿರು, ತಂಗಿ - ಹೀಗೆ ಬಾಲ್ಯದಿಂದಲೇ ತುಂಬಾ ಭಾವನಾತ್ಮಕ ಫಲವತ್ತತೆಯೇ ಈ ಗಿಡದ ಹೂಗಂಪಿಗೆ ಕಾರಣವು, ಮಡದಿ ಮಗಳ ಪ್ರೀತಿ ಸಿಂಚನ, ಆತ್ಮೀಯರ ಹಿತನುಡಿಗಳು, ಗುರು-ಹಿರಿಯರು ತೋರಿದ ದಾರಿ ಬದುಕನ್ನು ಈ ಎತ್ತರಕೆ ಹಬ್ಬಿಸಿದೆ.

ಬೆಳೆದ ಪರಿಸರದ ಸಾರದ ಸವಿ, ಸಸಿಗೆ ರುಚಿ ಎನಿಸುವಷ್ಟು ಗೊತ್ತು. ಆದರೆ, ಅದರ ಹಣ್ಣ ರುಚಿಯು ಸಸಿಗೂ ತಿಳಿದಿರುವುದಿಲ್ಲ, ಅದೇ ನಿಗೂಢ. ಎಲ್ಲರೂ ಹಣ್ಣನ್ನು ಸವಿದ ದಿನ, ಸಸಿಗೆ ಸಾರದ ಸವಿಗಿಂತ ಅದರಂಶದ ವಿಶೇಷತೆಯ ಬಗ್ಗೆ ತಿಳಿಯುತ್ತದೆ.

ಹೂಂ.. ಆ ಪರಿಸರವೇ ಹಾಗಿತ್ತು. ನನ್ನ ಚಿಕ್ಕಪ್ಪನ ಜೊತೆ ಕುರಿಗಾಯಿಯ ಸ್ವಚ್ಚಂದ ಬದುಕು, ಕಷ್ಟವೆಲ್ಲ ಅವರದು. ಆಡುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದು. ನನದೋ ಅವುಗಳಿಗೆ ಮರವೇರಿ ಸೊಪ್ಪು ಕಡಿಯುವುದು, ಆಡು-ಹಾಡು ಅಷ್ಟೆ... ಪರಿಸರದ ಮಗುವಾದಂತೆ, ಇಲ್ಲಿ ಮೊಗ್ಲಿ ಅಂತ ಕಾರ್ಟೂನ್ ನೀವು ನೋಡಿರಬಹುದು.. ಹಾಗೆ.. ಜೊತೆಗೆ ಆ ಕಣಗೆಲಸ, ಸುಗ್ಗಿ ಸಂಭ್ರಮ ಇದು ರಜಾದಿನದಲ್ಲಿ ತಾತನ ಮನೆಯಲ್ಲಿನ ಅನುಭವ.

ಇನ್ನು ಶಾಲಾ ದಿನಗಳೋ, ಆಲೂರು, ಕಲ್ಲುಗುಡ್ಡೆ, ದಟ್ಟಡವಿಯ ಮಧ್ಯ, ಯಾವ ಸಿನಿ ಮಾಧ್ಯಮಗಳ ಸೋಂಕಿರದೆ, ಸದ್ದಿರದ ಪಸಿರೆಡೆಯ ಮಲೆನಾಡ ಬನಗಳಲಿ ಎನುವ ಕುವೆಂಪು ಅವರ ಬಾಲ್ಯದ ಸಾಮ್ಯ ನನ್ನದು. ಶಿಕ್ಷಕರ ಮಗನಾದ್ದರಿಂದ ಎಲ್ಲರೂ ಪರಿಚಯ, ಅಕ್ಕರೆಯ ಮಗು ನಾನು, ಇಂದಿಗೂ ನನ್ನನು ಆ ಪರಿಸರ ಕರೆಯುವುದು.

ಇನ್ನು ನಮ್ಮ ಕವಿಗಳಾದ ಕುವೆಂಪು, ಬೇಂದ್ರೆ, ಡಿವಿಜಿಯವರೇ ನಮ್ಮ ಹೀರೋಗಳು, ಅವರ ಕವನಗಳ ವಾಚಿಸುವ ನಮ್ಮ ಗುರುಗಳೊ, ವಾಚನ-ಶ್ರವಣದಲಿ ತಲ್ಲೀನವಾಗಿಸಿ ಬಿಡುತ್ತಿದ್ದರು.

ಹೀಗಿರುವಾಗ ಎಲ್ಲರಲೂ ಕವಿತ್ವ ಮನೆ ಮಾಡಿರುತ್ತದೆ ಆದರೆ ಕೃಷಿ ಮಾಡದ ಹೊಲದಂತೆ, ಹೌದು ನಾನೂ ಸಹ ಆರನೇ ತರಗತಿಯಲ್ಲಿ ಪ್ರಯತ್ನಿಸಿ, ಕೈ ಬಿಟ್ಟಿದ್ದೆ. ಏಕೆಂದರೆ ಅದನ್ನು ನಾನು ಶಾಲಾ ಪದ್ಯಗಳಿಗೆ ಹೋಲಿಸಿಕೊಳ್ಳುತಿದ್ದೆ, ಹಾಗಾಗಿ ಮತ್ತೆಂದೂ ನಾ ಈ ಕವನವನ್ನು ಸೃಷ್ಟಿಸುವ ಪ್ರಯತ್ನ ಮಾಡಿರಲಿಲ್ಲ.

ಗುಹಾಂತರದ ಪ್ರಾರಂಭೋತ್ಸವದ ಹಿಂದಿನ ದಿನಗಳು, ಪ್ರವೇಶದಲ್ಲಿರುವ ಒಂದು ಶಾಸನದಂತಹ ಫಲಕಕ್ಕೆ ಒಂದು ಬರಹ ಬೇಕಿತ್ತು. ಕೇಳಿದ ಕೆಲವು ಗೆಳೆಯರಿಂದ ಉತ್ತರ ಬರಲಿಲ್ಲ, ಬರೆಯುವ ಅನಿವಾರ್ಯವಿತ್ತು ಪ್ರಯತ್ನದಲ್ಲಿ ಮಧ್ಯರಾತ್ರಿ ಆಯಿತು. ನಾನೇ ಬರೆದೆ, ನಂತರ ನನ್ನವಳಿಗೆ ಎಬ್ಬಿಸಿ ಓದಿದೆ, ಅವಳು ಕೇಳಿ ಚೆನ್ನಾಗಿದೆ ಎಂದು ಹೇಳಿ ಮಲಗಿದಳು, ನನಗೂ ಅನ್ನಿಸಿತು. ಎಲ್ಲೋ ಒಮ್ಮೆ ಚೆನ್ನಾಗಿರಬಹುದು, ಹಾಗೆಂದು ಕವಿಯಾಗಲು ಸಾಧ್ಯವೇ ಎಂದು ಸುಮ್ಮನಾದೆ....

ಆದರೆ, ಮಾನಸ ಸರೋವರದ ಭೇಟಿಯ ದಿನದ ರಾತ್ರಿ, ಅಂದು ಗುರುಪೂರ್ಣಿಮೆ ಸ್ವಚ್ಛ ಆಗಸದಿ ಪೂರ್ಣ ಚಂದ್ರ, ಸರೋವರದಲ್ಲಿ ಅದರ ಬಿಂಬ, ಕೈಲಾಸ ಪರ್ವತದ ಮೇಲೆ ಮಂಜಿನಾ ಬಿಳಿಹೊದಿಕೆ, ಆ ದೃಶ್ಯ ವೈಭವಕೆ ನಾ ಸೋತು ಹೋದೆ, ಭಾವಗಳು ಪದವಾದವು. ಬೆಳಗಿನ ವೇಳೆಗೆ ಕವನ ಸೃಷ್ಟಿಯಾಯಿತು, ಮಾರನೆ ದಿನ ಬಸ್ಸಿನಲ್ಲಿ ಅದನ್ನು ಓದಿದೆ, ಎಲ್ಲರ ಮೆಚ್ಚುಗೆಯ ಮಹಾಪೂರವೇ ಆಯಿತು.

ನಂತರದ ದಿನಗಳಲಿ ಆಗಾಗ ಬರೆಯುತ್ತಾ ನನ್ನೆಲ್ಲಾ ತರದ ಭಾವನೆಗಳಿಗೆ ಸಾಂತ್ವನ, ಪ್ರೋತ್ಸಾಹ, ಎಲ್ಲಾ ಈ ಕವನಗಳಲ್ಲಿ ಕಾಣುತ್ತಾ ಬಂದೆ, ನಂತರದ ಪಯಣ ಇಲ್ಲಿಯವರೆಗೂ ಕೈಹಿಡಿದು ಕರೆತಂದಿದೆ.

ರವಿ ತಿರುಮಲೈಯವರನ್ನು ನಾನು ನೆನೆಯಲೇಬೇಕು, ಅವರೇ ನನ್ನ ಸಾಹಿತ್ಯ ಕೃಷಿಗೆ ಮೊದಲ ಗುರು. ಅಲ್ಲದೆ ಈಶ್ವರ ದೈತೋಟ ಅವರ ವಿಮರ್ಶಾತ್ಮಕ ಸಲಹೆ ಮತ್ತು ಕನ್ನಡ ಪೂಜಾರಿ ಕಣ್ಣನ್‌ರವರ ಕಾವ್ಯದ ಹರಟೆಯೆ ಪಾಠದಂತೆ, ಐಎಎಸ್ ಅಧಿಕಾರಿ ದಯಾನಂದ್ ಸರ್‌ರವರ ಮಾರ್ಗದರ್ಶನ ಮಾತ್ರದಿಂದಲೇ ಈ ಪುಸ್ತಕ ರೂಪುಗೊಂಡಿದೆ. ಅದಕ್ಕೆ ವಂದನೆಯ ಅಳತೆಗೋಲು ನನ್ನಲ್ಲಿಲ್ಲ, ನಾ ಅವರಿಗೆ ಸದಾ ಋಣಿ.

ಸುಧಾ ಲೋಕೇಶ್, ಲತಾಮುರಳಿ, ಮತ್ತು ನನ್ನ ಹೆಂಡತಿ, ಇವರೆಲ್ಲಾ ನನ್ನನ್ನು ತಿದ್ದಿ, ವಿಮರ್ಶಿಸಿ, ಸಾಹಿತ್ಯ ಪ್ರೀತಿಯ ಪೋಷಕರಾಗಿದ್ದಾರೆ. ನನ್ನ ಭಾವ ಪರಮೇಶ್ವರಪ್ಪ ಅವರ ಅನುಪಸ್ಥಿತಿಯ ದುಖಃವಿದೆ, ಅವರ ಪ್ರೋತ್ಸಾಹದ ಮಾತು ನನ್ನ ಕಿವಿಯಲಿಂದೂ ಗುಲ್ಲುಡುತ್ತಿದೆ, ಉತ್ತೇಜಿಸುವ ದಂಡೇ ನನ್ನ ಸುತ್ತ ಇರುವಾಗ.... ಸಹಜ ಈ ಸಾಹಸ.

ಆದರೆ, ಈ ಸಾಗರದಾಳವ ಕಂಡು ಭಯವೂ ಇದೆ, ನಾನು ಅದರಲ್ಲಿನ ಒಂದು ಕಣವೆನಿಸುವ ಭಾವವು ಏಕಕಾಲಕ್ಕೆ ಸಂತಸವನ್ನೂ ಸಂಕೋಚವನ್ನೂ ತರುತ್ತಿದೆ. ನಮ್ಮ ಮಹಾನ್ ಕವಿಗಳ ಬರಹಗಳು ಬೆವರು ತರಿಸುತ್ತವೆ, ಎಂದಾದರೂ ಆ ಮಟ್ಟ ಸಾಧ್ಯವೇ ಎಂದು ಕೆಣಕುತ್ತವೆ. ಆದರೆ, ಅವರೇ ಬಂದು ಬೆನ್ನು ತಟ್ಟಿ ಬರೆಯಲು ಪ್ರೇರೇಪಿಸಿದಂತೆ ಭಾಸವಾಗುತ್ತದೆ, ಹಾಗಾಗಿ ಭಾವ, ಪದಗಳು ಪದ್ಯವಾಗುತ್ತಿವೆ..

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...