ಆಧುನಿಕತೆಯ ನಗರ ಸಂಸ್ಕೃತಿಯ ಪ್ರತೀಕ ‘ಮಳೆಯಲ್ಲಿ ಬಂದ ಅಪ್ಸರೆ’ 


ಆಧುನಿಕತೆಯನ್ನು ಬದುಕಿನಲ್ಲಿ ರೂಢಿಸಿಕೊಂಡ ಧನಿಕ ಮನೆಗಳ ಒಳ ಹೂರಣವನ್ನು ಇದು  ಚೊಕ್ಕವಾಗಿಯೇ ವಿವರಿಸುತ್ತದೆ. ಹೈಪೈ ಲೋಕದ ಕೆಲ  ಜನರು ಒಂದಿಷ್ಟು ಸಮಯ ಅಥವಾ ಒಂದು ರಾತ್ರಿಯ ಮಟ್ಟಿಗೆ ಪತಿ ಪತ್ನಿಯರನ್ನು ಬದಲಿಸಿಕೊಂಡು ಸುಖಿಸುವ ಪ್ರಸಂಗಗಳ ಕುರಿತು ಈ ಕೃತಿ ಬೆಳಕು ಚಲ್ಲುತ್ತದೆ.  ಲೇಖಕಿ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ‘ಮಳೆಯಲ್ಲಿ ಬಂದ ಅಪ್ಸರೆ’ ಕಾದಂಬರಿಯಲ್ಲಿ, ಕಾದಂಬರಿಗಾರ ಡಾ. ಲಕ್ಷ್ಮಣ ಕೌಂಟೆ ಅವರು ಬರೆದ ಮುನ್ನುಡಿ ನಿಮ್ಮ ಓದಿಗಾಗಿ..

ಮುನ್ನುಡಿ ತರಹದ ಎರಡು ಮಾತುಗಳು..

ಹೌದು..!! ಜಗತ್ತು ಬದಲಾಗಿದೆ, ಅದೂ ಮೌಲ್ಯಗಳ ಮೂಲಕ. ಪ್ರಾಚೀನ ಕಾಲದಿಂದಲೂ,  ಇಂದಿನಿಂದ ಸರಿಸುಮಾರು ಐವತ್ತು ವರ್ಷಗಳ ಹಿಂದೆ ದಾಂಪತ್ಯ ಎನ್ನುವುದು ಒಂದು ನಿಯತಿಯಲ್ಲಿ ಬಂಧಿಯಾಗಿತ್ತು. ಅದೆಷ್ಟೇ ಬಡತನ-ಸಿರಿತನವಿದ್ದರೂ ಗಂಡ ಹೆಂಡತಿಯರ ಮೌಲ್ಯಗಳು ಹೆಚ್ಚೂ ಕಡಿಮೆ ಸ್ಥಿರವಾಗಿದ್ದವು. ಅಂದು ಪತಿ ಪರಮೇಶ್ವರ ಆಗಿದ್ದ, ಪತ್ನಿ ಪಾರ್ವತಿಯಾಗಿದ್ದಳು. ಅವನು ನಾರಾಯಣ ಆಗಿದ್ದ, ಅವಳು ನಾರಾಯಣಿ ಆಗಿದ್ದಳು. ಪತಿವೃತೆಯರ ಕಥೆಗಳನ್ನು ಭಕ್ತಿಯಿಂದ ಪಾರಾಯಣ ಮಾಡುತ್ತಿದ್ದರು. ಪುರಾಣ ಪುಣ್ಯ ಕಥೆಗಳಲ್ಲೂ ಆದರ್ಶ ದಾಂಪತ್ಯದ ಕುರಿತು ಮಾತುಗಳಿದ್ದವು. ಅಂದು  ಪತಿವ್ರತೆಯರ ಸಂಖ್ಯೆ ಹೆಚ್ಚಿತ್ತು, ಪತ್ನಿವ್ರತಸ್ಥರು ತುಸು ಕಡಿಮೆ ಪ್ರಮಾಣದಲ್ಲಿಯಾದರೂ ಕಾಣುತ್ತಿದ್ದರು. ಅಲ್ಲಲ್ಲಿ ಕೆಲವು ಜನ  ಲೈಲಾ-ಮಜನು, ರಾಧಾ-ಕೃಷ್ಣರ ತರಹ ಪ್ರೇಮಿಗಳು ಇದ್ದರು ಅಂತ ಅಂದುಕೊಳ್ಳ ಬಹುದು. ಆದರೆ ಎಂದು ವಿಜ್ಞಾನ ವೈವಿಧ್ಯಮಯ ಸಂಶೋಧನೆಗಳ ಮೂಲಕ ಪ್ರಪಂಚದಾದ್ಯಂತ ವೇಗವಾಗಿ ಧಾಪುಗಾಲಿಡಲು ಆರಂಭಿಸಿತೋ; ಅಂದು ವಿಶೇಷವಾಗಿ ಯುವ ಜನರ ನಡುವೆ ವೇಗವಾಗಿ ಬದಲಾವಣೆಗಳು ಕಾಣಲಾರಂಭಿಸಿದವು.

ನಾಟಕಗಳು, ತದ ನಂತರ ಸಿನೇಮಾ; ಆ ನಂತರ  ದೂರದರ್ಶನ, ವಿವಿಧ ಬಾಷೆಯ ಟಿವಿ ಚಾನಲ್ ಗಳು, ಹಲವಾರು ವರ್ಣರಂಜಿತ ಧಾರಾವಾಹಿಗಳು; ತದ ನಂತರ ಬಹುಜನರ ಕೈಗೆ ಸೇರಿದ ಮೊಬೈಲ್ ಗಳು; ಅದರಲ್ಲೂ 2 ಜಿ, 3ಜಿ,4 ಮತ್ತು 5 ಜಿ ಮೊಬೈಲ್ ಗಳು ಯುವ ಜನರ ಕೈಗೇ ಅಷ್ಟೇ ಅಲ್ಲ; ಹಿರಿಯರ ಕೈಗೆ ಆದ ಪ್ರಯುಕ್ತ ಮಾನಸಿಕ ಸ್ಥರಗಳು, ಯೋಚಿಸುವ ಕ್ರಮಗಳು ಬದಲುಗೊಂಡು  ಪ್ರಾಚೀನರು ನಡೆ ನುಡಿಯಲ್ಲಿ ರೂಢಿಸಿಕೊಂಡು ಬಂದ ಹಲವು  ಸಿದ್ಧಾಂತಗಳು ಕ್ಷಿಪ್ರಗತಿಯಲ್ಲಿ ಬದಲಾಗಲಾರಂಭಿಸಿದವು. ಪತಿ ಪತ್ನಿಯರಲ್ಲಿ ಹಲವರು ಚಂಚಲಿತ ಮನಃಸ್ಥಿತಿಯ ರತಿ-ಮನ್ಮಥರಾದರು, ಪರ ಪುರುಷ, ಪರ ಸ್ತ್ರೀಯರ ಪ್ರೇಮಿ-ಪ್ರೇಯಸಿಯರಾದರು. ಅಷ್ಟೇ ಏಕೆ ಲೈಂಗಿಕ ಪಾವಿತ್ರ್ಯತೆಯೂ ಹೊರಟು ಹೋಗಿ ಅದು 'ಮನಸ್ಸನ್ನು ರಂಜಿಸುವ ಇನ್ನೊಂದು ಆಯಾಮ' ವಾಗಿ ತೋರಲಾರಂಭಿಸಿತು. 'ಪ್ರೀತಿಗಿಂತ ಹಣ ಮುಖ್ಯ, ಮಾನಕ್ಕಿಂತ ಪ್ರಾಣ ಮುಖ್ಯ' ಎನ್ನುವ ಭಾವ ಬಲಿಯಲಾರಂಭಿಸಿತು. ಬಡವರ್ಗದ ಹುಡುಗ ಹುಡುಗಿಯರು ಧನಿಕರ  ಮಕ್ಕಳೆಡೆಗೆ ಆಕರ್ಷಿತರಾಗ ತೊಡಗಿದರು. ಧನ ಸಂಪಾದನೆಯ ಮಾರ್ಗದಲ್ಲಿ ಧರ್ಮ, ಕರ್ಮಗಳು ನಗಣ್ಯಗೊಂಡು ನಿಧಾನವಾಗಿ  ಮಾಯವಾಗಲಾರಂಭಿಸಿದವು. ಐಷಾರಾಮಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಮತ್ತದರ  ನಿರ್ವಹಣೆಗಾಗಿ ವಾಮ ಮಾರ್ಗದಲ್ಲಿ ಕ್ರಮಿಸುವುದು ಅನಿವಾರ್ಯವಾಯಿತು. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಸತ್ಯಮೂರ್ತಿಯವರ ಸಾಮಾಜಿಕ ಕಾದಂಬರಿ "ಮಳೆಯಲ್ಲಿ ಬಂದ ಅಪ್ಸರೆ" ಯ ಕುರಿತು ಪರಿಚಯಾತ್ಮಕವಾದ ನಾಲ್ಕು ಮಾತುಗಳನ್ನು ಬರೆಯ ಬಹುದು.

ಈ ಕಾದಂಬರಿಯ ಕಥೆಯ ಕುರಿತು ವಿವರವಾಗಿ ಹೇಳುವುದು ತರವಲ್ಲ. ಇದನ್ನು ಓದಿಯೇ ಆಸ್ವಾದಿಸಬೇಕು. ಇದೊಂದು ರೋಚಕ, ಬಹಳ ವೇಗವಾಗಿ ಓದಿಸಿಕೊಂಡು ಹೋಗುವ ಸುಲಲಿತ ಶೈಲಿಯಲ್ಲಿ ರಚಿತವಾದ ಗಾತ್ರದಲ್ಲಿ ಚಿಕ್ಕದಾದ ಕಾದಂಬರಿ.  

ಈ ಕೃತಿ ಆಧುನಿಕ ಕಾಲದ ನಗರ ಸಂಸ್ಕೃತಿಯ ಪ್ರತೀಕವಾಗಿದೆ. ಅದರಲ್ಲೂ ಆಧುನಿಕತೆಯನ್ನು ಬದುಕಿನಲ್ಲಿ ರೂಢಿಸಿಕೊಂಡ ಧನಿಕ ಮನೆಗಳ ಒಳ ಹೂರಣವನ್ನು ಇದು  ಚೊಕ್ಕವಾಗಿಯೇ ವಿವರಿಸುತ್ತದೆ. ಹೈಪೈ ಲೋಕದ ಕೆಲ  ಜನರು ಒಂದಿಷ್ಟು ಸಮಯ ಅಥವಾ ಒಂದು ರಾತ್ರಿಯ ಮಟ್ಟಿಗೆ ಪತಿ ಪತ್ನಿಯರನ್ನು ಬದಲಿಸಿಕೊಂಡು ಸುಖಿಸುವ (ಲೇಖಕಿಯ ಮಾತುಗಳಲ್ಲಿ ಅದು ಎಕ್ಸಚೇಂಜ್ ಮೇಳ) ಪ್ರಸಂಗಗಳ ಕುರಿತು ಈ ಕೃತಿ ಬೆಳಕು ಚಲ್ಲುತ್ತದೆ.  ಈ ಕಾದಂಬರಿಯಲ್ಲಿ ವಿರುದ್ಧ ಮುಖಿಯಾದ ಎರಡು ತುಡಿತಗಳಿವೆ..  ಇಂದಿನ ಕಾಲದಲ್ಲಿ ಯುವಕ ಯುವತಿಯರಲ್ಲಿ ಆಕರ್ಷಣೆ ಸಹಜವಾದದ್ದು ಮತ್ತು ಪ್ರೀತಿ ಪ್ರೇಮದ ಹೆಸರಲ್ಲಿ ಅವರು ಬಹು ಬೇಗ ಸಲುಗೆಯೊಂದಿಗೆ ಸೇರುತ್ತಾರೆ. ನಿತ್ಯ ಭೇಟಿ ಮಾಡುವುದು, ಒಂದೆಡೆ ಸೇರಿ ಹರಟೆ ಹೊಡೆಯುವುದು, ಡೇಟಿಂಗ್ ಮಾಡುವುದು ನಡೆಯುತ್ತಿರುತ್ತದೆ.  ಇಚ್ಛಿತ ಜೋಡಿಗಳಲ್ಲಿ ಹಲವು ಮಧ್ಯವೇ ಪ್ರೇಮ ಭಂಗಕ್ಕೊಳಗಾಗಿ ದೂರ ದೂರವಾದರೆ, ಕೆಲವು ಜೋಡಿಗಳು ವಿವಾಹವಾಗಿ ಕೂಡುತ್ತವೆ. ಮದುವೆಯಾದ ತದ ನಂತರದ ದಿನಗಳಲ್ಲಿ ಭ್ರಮ ನಿರಶನಗೊಂಡು ವಿವಾಹ ವಿಚ್ಛೇದನದ ಸ್ಥಿತಿಗೂ ಬರುವುದುಂಟು. 

ಈ ಕಾದಂಬರಿಯಲ್ಲಿ ಸಿದ್ಧಾಂತ  ಮತ್ತು ಶಾಲಿನಿ ಹೀಗೆಯೇ ಪ್ರೇಮಿಗಳಾಗಿ ವಿವಾಹವಾದವರು. ಸಿದ್ಧಾಂತ ಆರ್ಥಿಕವಾಗಿ ಶ್ರೀಮಂತನೇನಲ್ಲ. ಆದರೆ ಅವನ ಪ್ರೇಮಿ ಶಾಲಿನಿ ಧನಿಕ ಮನೆತನದವಳು. ಅವಳು ತನ್ನ ತಾಯಿಯ ಸಲಹೆಯನ್ನು ಮೀರಿ ಸಿದ್ಧಾಂತನನ್ನು ವರಿಸುತ್ತಾಳೆ. ಆದರೆ ನಿಧಾನವಾಗಿ ಆಕೆಗೆ ಸಿದ್ಧಾಂತನ ಆರ್ಥಿಕ ದುಃಸ್ಥಿತಿಯು ಉಸಿರುಗಟ್ಟಿಸಲು ಆರಂಭಿಸುತ್ತದೆ. ಆಕೆ ತಾಯಿ ಮನೆಗೆ ತೆರಳಿ 'ಹಣ ಸಂಪಾದನೆ ಮಾಡಿ ಕರೆ, ಬರುವೆ' ಎನ್ನುತ್ತಾಳೆ. ಸಿದ್ಧಾಂತ ಆಕೆಯನ್ನು ಮನಸಾರೆ ಪ್ರೀತಿಸಿದವನು. ಅವಳ ಸ್ಮರಣೆಯಲ್ಲಿಯೇ ಅವನು ದಿನಗಳೆಯುತ್ತಾನೆ.

ಒಮ್ಮೆ ಒಂದು ರಾತ್ರಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸುತ್ತದೆ. ಸಿದ್ಧಾಂತ  ತನ್ನ ಪತ್ನಿಯ ಸ್ಮೃತಿಯಲ್ಲಿಯೇ ಕುಡಿಯುತ್ತ ಕುಳಿತಾಗ ಬಾಗಿಲು ಬಡಿತದ ಶಬ್ದ ಕೇಳಿ ಬರಲಾರಂಭಿಸುತ್ತದೆ. ಸಿದ್ಧಾಂತ ಬಾಗಿಲು ತೆರೆದಾಗ ಒಳ ಬಂದವಳು ಓರ್ವ ತರುಣಿ. ಅವಳ ಕೈಯಲ್ಲಿ ಒಂದು ಸೂಟಕೇಸ್ ಇದೆ. ಆಕೆ  ಮಳೆಯಲ್ಲಿ ತೋಯಿಸಿಕೊಂಡಿದ್ದಾಳೆ. ಅವಳು 'ಇದೊಂದು ರಾತ್ರಿ ತಂಗಲು ಅವಕಾಶ ಕೊಡು ಎನ್ನುತ್ತಾಳೆ. ಅವರಿಬ್ಬರ ನಡುವೆ ಸಂವಾದ ನಡೆದು ಸಿದ್ಧಾಂತ ಮತ್ತು ಶಾಲಿನಿಯರ ಕುರಿತ ಕಥೆ ಅನಾವರಣಗೊಳ್ಳುತ್ತದೆ. ಹಾಗೆ ಒಳ ಬಂದವಳು ಶೀಲಾ ಎನ್ನುವ ತರುಣಿ. ಅವಳಾದರೋ ಧನಿಕತೆಯ ಸ್ವೇಚ್ಛೆ ಮತ್ತು ಮುಕ್ತ ಲೈಂಗಿಕತೆಯಿಂದ ಬೇಸರಗೊಂಡು ವಿವಾಹ ವಿಧಿಗೆ ಒಳಗಾಗಲು ಬಯಸಿದವಳು. ಇದು ಈ ಕಾದಂಬರಿಯಲ್ಲಿ ತೋರುವ ಇನ್ನೊಂದು ಮುಖ. ಶೀಲಾಳ ಕೈಯಲ್ಲಿರುವ ಸೂಟಕೇಸ್ ನಲ್ಲಿರುವುದು ಐವತ್ತು ಲಕ್ಷ ಹಣ. ಆಕೆ ತನ್ನನ್ನು  ಬ್ಲ್ಯಾಕ್ ಮೇಲ್ ಮಾಡಲು ಬಂದ ಓರ್ವ ಯುವಕನನ್ನು ಕೊಲೆ ಮಾಡಿ ಬಂದಿದ್ದಾಳೆ. ಪೋಲೀಸರು ಆಕೆಯನ್ನು ಹುಡುಕುತ್ತಿದ್ದಾರೆ. ಆದರೆ ಸಿದ್ಧಾಂತ ಆಕೆಯ ಕೋರಿಕೆಯ ಮೇರೆಗೆ ಅವಳನ್ನು ಪೋಲೀಸರಿಂದ ಉಳಿಸಿಕೊಳ್ಳುತ್ತಾನೆ. ಆದರೆ ಮರಳಿ ಬಂದ ಪೋಲೀಸ್ ಓರ್ವರಿಂದ ಹಾಗೆ ಓಡಿ ಬಂದು ಮರೆಯಾದವಳು ಓರ್ವ ಕೊಲೆಗಾರ್ತಿ, ಅವಳಲ್ಲಿ ರಿವಾಲ್ವರ್ ಇದೆ ಎಂಬುದು ತಿಳಿದು ಬರುತ್ತದೆ. ಪೋಲೀಸ್ ಪೇದೆ ಹೊರಟು ಹೋದ ಮೇಲೆ ಸಿದ್ಧಾಂತ ಶೀಲಾಳಿಗೆ ಕೊಲೆಯ ಕುರಿತು ಕೇಳುತ್ತಾನೆ. ಅವಳು ಕೊಲೆಯ ಕಾರಣಗಳನ್ನು ಹೇಳಿ ಸೂಟಕೇಸ್ ನಲ್ಲಿರುವ ಹಣವನ್ನು ತೆರೆದು ತೋರಿಸಿ 'ಇದೊಂದು ರಾತ್ರಿ ಮಾತ್ರ ಇರುವೆ, ಬೆಳಗಾಗುವುದರೊಳಗೆ ಇಲ್ಲಿಂದ ತೆರಳುವೆ' ಎನ್ನುತ್ತಾಳೆ. ಅವನು ಆಕೆಗೆ ತಂಗಲು ಅವಕಾಶ ಮಾಡಿಕೊಟ್ಟು 'ಹಣ ಗಳಿಸಿ ನನ್ನನ್ನು ಕರೆಯಲು ಬಾ' ಎನ್ನುವ ಹೆಂಡತಿಯ ಮಾತನ್ನು ಸ್ಮರಿಸಿಕೊಂಡು ಇವಳ ಐವತ್ತು ಲಕ್ಷ ತನ್ನ ಕೈಗಾದರೆ ಎಂಬ ಯೋಚನೆ ಅವನ ತಲೆ ಕೊರೆಯಲಾರಂಭಿಸುತ್ತದೆ.

ಕಾದಂಬರಿಯೊಂದು ಮನೋರಂಗಭೂಮಿ. ಕೃತಿಯನ್ನು ಓದುವಾಗ ಓದುಗರ ಮನೋಭೂಮಿಯಲ್ಲಿ ಅದರಲ್ಲಿನ ಪಾತ್ರಗಳು ಕಣ್ಣಿಗೆ ಕಟ್ಟಿದಂತೆ ಸಜೀವವಾಗಿ ಭಾವಪೂರ್ಣವಾಗಿ ಚಿತ್ರಾವಳಿ ರೂಪದಲ್ಲಿ ತೋರ ಬೇಕಾಗುತ್ತದೆ. ಓದುಗರಲ್ಲಿ ಆ ಪಾತ್ರಗಳ ನಿಯತಿಗೆ ತಕ್ಕಂತೆ ಭಾವಗಳು ಸ್ಫುರಿಸ ಬೇಕಾಗುತ್ತದೆ. ವಿಜಯಲಕ್ಷ್ಮಿ ಸತ್ಯಮೂರ್ತಿಯವರ ಈ ಕಾದಂಬರಿಯಲ್ಲಿ ಅಂಥ ರಸಾನುಭವ ವ್ಯಕ್ತವಾಗುತ್ತದೆ. ಓದುಗ ಅದರಲ್ಲಿ ತನ್ಮಯತೆಯನ್ನು ಹೊಂದಿ ಅದನ್ನು ಇಡಿಯಾಗಿ ಓದುವವರೆಗೆ ವಿರಮಿಸಲಾರ. ವಿಜಯಲಕ್ಷ್ಮಿಯವರ ಬರಹದಲ್ಲಿ ಲಾಲಿತ್ಯ ಆಕರ್ಷಣೆ ಎರಡೂ ಇವೆ. ಪದಗಳನ್ನು ದುಂದು ವ್ಯಯ ಮಾಡದೇ ಹೇಳಬೇಕಿರುವುದನ್ನು ಮನ ಮುಟ್ಟುವ ಹಾಗೆ ಬರೆಯುವ ಕಲೆ ಅವರಿಗೆ ಸಿದ್ಧಿಸಿದೆ. ಅವರ ಈ ಕಾದಂಬರಿ ಅವರು ರಚಿಸಿದ ಇತರ ಕಾದಂಬರಿಗಳನ್ನು ಓದುವಂತೆ ಪ್ರಚೋದಿಸುತ್ತದೆ. ನನಗಂತೂ ಈ ಕೃತಿ ಓದಿ ಖುಷಿಯಾಯಿತು. ಕ್ಲಿಷ್ಟವಾದ, ಮಹಿಳೆಯರು ಬರೆಯಲು ಹಿಂಜರಿಯುವ ಕೆಲ ವಿಷಯಗಳನ್ನು ನಿರ್ಭಯವಾಗಿ ಸಶಕ್ತವಾಗಿ ಈ ಕಾದಂಬರಿಯಲ್ಲಿ ಬಳಸಿಕೊಂಡಿದ್ದು ನಿಜವಾಗಿಯೂ ಶ್ಲಾಘನೀಯವೇ. ಸಾಹಿತ್ಯ ವಲಯದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಲೇಖಕಿಯರು ಇವರ ತರಹದ ಬಿಚ್ಚು ಮನದ ಧೈರ್ಯವನ್ನು ಅನುಸರಿಸುವ ಮೂಲಕ ಸಮಾಜದ ಮುಖವಾಡಗಳನ್ನು ಕಳಚಿ ಸತ್ಯದ ಅನಾವರಣ ಮಾಡಬೇಕು.  

ವಿಜಯಲಕ್ಷ್ಮಿ ಸತ್ಯಮೂರ್ತಿಯವರು ನನಗೆ ಫೇಸ್ ಬುಕ್ ಮೂಲಕ ಪರಿಚಯವಾದವರು. ನನ್ನಿಂದ ಫೋನ್ ನಂಬರ್ ಕೇಳಿ ಪಡೆದು ಮಾತನಾಡಿ 'ಮುನ್ನುಡಿ ಬರೆದು ಕೊಡಿ' ಎಂದರು. 'ನೀವು ಬೆಂಗಳೂರಿನವರು, ಅಲ್ಲಿಯೇ ಅಗಣಿತ ಬರಹಗಾರರಿದ್ದಾರೆ, ಮತ್ತೆ ನನ್ನಿಂದ ಏಕೆ ಬರೆಸುತ್ತಿರುವಿರಿ?' ಎಂದು ನಾನು ಕೇಳಿದೆ. ಅವರು 'ನೀವೇ ಬರೆಯ ಬೇಕು' ಎಂದರು. ಅವರ ಪ್ರೀತಿಯ ಒತ್ತಾಸೆಯಂತೆ ಅವರ ಈ ಕಾದಂಬರಿಯ ಕುರಿತು ನಾಲ್ಕು ಸಾಲುಗಳನ್ನು ಬರೆದಿರುವೆ. ಅವರು ಇನ್ನೂ ಹೆಚ್ಚು ಹೆಚ್ಚು ಬರೆದು ಸಾರಸ್ವತ ಲೋಕದಲ್ಲಿ ಖ್ಯಾತರಾಗಲಿ ಎಂದು ಆಶಿಸುವೆ.

ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

‘ಮಳೆಯಲ್ಲಿ ಬಂದ ಅಪ್ಸರೆ’ ಕಾದಂಬರಿಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

ಲಕ್ಷ್ಮಣ ಕೌಂಟೆ ಅವರ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ..

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...