ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

Date: 23-04-2024

Location: ಬೆಂಗಳೂರು


"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡಬಾರದು. ನಮ್ಮ ಅಧ್ಯಯನದ ವಿಧಾನ ಮತ್ತು ವ್ಯಾಪ್ತಿ ಎರಡೂ ಅಂದಾಜು ಖಚಿತ ಆದಾಗಲೆ ಶೀರ್ಷಿಕೆ ಅಂತಿಮ ಆಗುವುದು. ಹಾಗಾಗಿ ಇವೆಲ್ಲವೂ ಪರಸ್ಪರ ಹೆಣೆದುಕೊಂಡ ಕೆಲಸಗಳು," ಎನ್ನುತ್ತಾರೆ ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ‘ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ’ ಕುರಿತು ಬರೆದಿದ್ದಾರೆ.

ನಾವು ಯಾವುದೇ ಸಂಶೋಧನಾ ಅಧ್ಯಯನ ಕೈಗೊಳ್ಳುವ ಮೊದಲು ಸಂಶೋಧನೆಯ ವಲಯವನ್ನು ಗುರ್ತಿಸಿಕೊಂಡು ಆನಂತರ ನಮ್ಮ ಶೀರ್ಷಿಕೆ ನಿರ್ಧರಿಸಿಕೊಳ್ಳುತ್ತೇವೆ. ಹಾಗೆ ಶೀರ್ಷಿಕೆ ನಿರ್ಧರಿಸಿಕೊಳ್ಳುವಾಗ ಏನನ್ನು, ಎಷ್ಟನ್ನು, ಹೇಗೆ ಅಧ್ಯಯನ ಮಾಡಬೇಕು ಎಂಬ ಮೂರೂ ಪ್ರಶ್ನೆಗಳನ್ನು ಏಕಕಾಲಕ್ಕೆ ಚಿಂತಿಸಬೇಕಾಗುತ್ತದೆ. ಇವೆಲ್ಲವೂ ಪರಸ್ಪರ ಪೂರಕವಾದುವು. ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡಬಾರದು. ನಮ್ಮ ಅಧ್ಯಯನದ ವಿಧಾನ ಮತ್ತು ವ್ಯಾಪ್ತಿ ಎರಡೂ ಅಂದಾಜು ಖಚಿತ ಆದಾಗಲೆ ಶೀರ್ಷಿಕೆ ಅಂತಿಮ ಆಗುವುದು. ಹಾಗಾಗಿ ಇವೆಲ್ಲವೂ ಪರಸ್ಪರ ಹೆಣೆದುಕೊಂಡ ಕೆಲಸಗಳು.

ಹಾಗೆಯೆ ಅಧ್ಯಯನ ಆಕರಗಳ ಅಂದಾಜು ಇರಿಸಿಕೊಂಡೆ ನಮ್ಮ ಶೀರ್ಷಿಕೆಯನ್ನು ನಾವು ಅಂತಿಮ ಮಾಡಿಕೊಳ್ಳಬೇಕಾಗುತ್ತದೆ. ಒಮ್ಮೆ ನಮ್ಮ ಶೀರ್ಷಿಕೆ ನೊಂದಣಿ ಮಾಡಿಸಿಕೊಂಡರೆ ಮತ್ತೆ ಮತ್ತೆ ಅದನ್ನು ಬದಲಿಸಲು ಅಥವಾ ಮಾರ್ಪಾಡು ಮಾಡಲು ಸಾಧ್ಯವಿಲ್ಲ. ಹಾಗಾಗಿ ಶೀರ್ಷಿಕೆ ಆಖೈರು ಮಾಡಿಕೊಳ್ಳುವಾಗ ನಾವು ಖಚಿತತೆಯನ್ನು ಎಚ್ಚರದಿಂದ ಕಾಯ್ದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ನಮ್ಮ ಆಕರಗಳನ್ನು ನಾವು ಖಚಿತವಾಗಿ ಗುರ್ತಿಸಿಕೊಳ್ಳಲು ಆಗುವುದಿಲ್ಲ. ಅಂದರೆ ಆಕರಗಳ ಸಂಗ್ರಹಕ್ಕು ಮೊದಲು ಅಧ್ಯಯನದ ವಿಷಯ, ಅಧ್ಯಯನದ ವ್ಯಾಪ್ತಿ, ವಿಧಾನಗಳ ಖಚಿತತೆ ನಮಗೆ ಇರಬೇಕಾಗುತ್ತದೆ.

ಈಗ ಉದಾಹರಣೆಗೆ ಆಧುನಿಕ ಕನ್ನಡ ಆತ್ಮಕಥೆಗಳಲ್ಲಿ ಸಾಮಾಜಿಕ ಚಿಂತನೆ ಎಂಬ ವಿಷಯವನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ ಎಂದುಕೊಳ್ಳೋಣ. ಆಗ ಆಕರ ಸಂಗ್ರಹದ ವ್ಯಾಪ್ತಿ ಅಗಾಧವಾಗುತ್ತದೆ. ಇಂತಹ ವಿಷಯದ ಬಗ್ಗೆ ಯೋಚಿಸುವಾಗ ವಿಷಯದ ವ್ಯಾಪ್ತಿಯನ್ನು ನಾವು ಒಂದು ಚೌಕಟ್ಟಿಗೆ ಹಾಕಿಕೊಳ್ಳಬೇಕಾಗುತ್ತದೆ. ಅಂದರೆ ಆಧುನಿಕ ಕನ್ನಡ ಆತ್ಮಕಥೆಗಳು ಎಂದಾಗ ನಮ್ಮಲ್ಲಿ ದಲಿತ ಆತ್ಮಕಥೆಗಳಿವೆ, ಮಹಿಳಾ ಆತ್ಮಕಥೆಗಳಿವೆ, ವಿಜ್ಞಾನಿಗಳ – ರಾಜಕಾರಣಿಗಳ – ರೈತರ ಹೀಗೆ ನಾನಾ ರೀತಿಯ ಜನರ ಆತ್ಮಕಥನಗಳಿವೆ. ಇವುಗಳಲ್ಲಿ ನಮ್ಮ ಅಧ್ಯಯನದ ವ್ಯಾಪ್ತಿ ಎಷ್ಟು ಎಂದು ನಿರ್ಧಾರ ಆಗದೆ ನಮ್ಮ ಆಕರಗಳ ವ್ಯಾಪ್ತಿಯನ್ನು ಕಂಡುಕೊಳ್ಳಲು ಆಗುವುದಿಲ್ಲ. ಹಾಗಾಗಿ ಶೀರ್ಷಿಕೆ, ವಿಧಾನ, ವ್ಯಾಪ್ತಿಗಳ ಬಗ್ಗೆ ಖಚಿತತೆ ಇಲ್ಲದೆ ಯಾವ, ಎಷ್ಟು ಆಕರಗಳನ್ನು ಸಂಗ್ರಹಿಸಬೇಕು ಎಂಬುದು ಖಚಿತ ಆಗುವುದಿಲ್ಲ.

ಇನ್ನೊಂದು ಉದಾಹರಣೆ ನೋಡೋಣ; ಎಂ.ಎಸ್.ಕೆ. ಪ್ರಭು ಮತ್ತು ಚಂಪಾ ಅವರ ಅಸಂಗತ ನಾಟಕಗಳ ತೌಲನಿಕ ಅಧ್ಯಯನ ಎಂಬ ಶೀರ್ಷಿಕೆ ನಮ್ಮದು ಎನ್ನುವುದಾದರೆ: ಇಲ್ಲಿ ಅಸಂಗತ ನಾಟಕ ಎನ್ನುವ ಪರಿಭಾಷೆಯನ್ನು ಸ್ಪಷ್ಟಪಡಿಸುವ ತಾತ್ವಿಕ ಆಕರಗಳನ್ನೂ, ತೌಲನಿಕ ಅಧ್ಯಯನ ಎಂದರೇನು ಎಂಬ ಸ್ಪಷ್ಟತೆ ನೀಡುವ ತಾತ್ವಿಕ ಆಕರಗಳನ್ನೂ ಜೊತೆಗೆ ಎಂ.ಎಸ್.ಕೆ. ಪ್ರಭು ಅವರ ಮತ್ತು ಚಂಪಾ ಅವರ ಅಸಂಗತ ನಾಟಕಗಳನ್ನೂ ನಾವು ಅಧ್ಯಯನದ ಆಕರಗಳೆಂದು ಪರಿಗಣಿಸಿ ಅವನ್ನು ಸಂಗ್ರಹಣೆ ಮಾಡಬೇಕಾಗುತ್ತದೆ. ಕೆಲವೊಂದು ವಿಷಯಗಳಲ್ಲಿ ಒಂದೊಂದು ಅಧ್ಯಾಯಕ್ಕು ಪ್ರತ್ಯೇಕ ಆಕರಗಳನ್ನು ನಾವು ಸಂಗ್ರಹಿಸಬೇಕಾಗಬಹುದು. ಅಂದರೆ ನಮ್ಮ ಅಧ್ಯಯನದ ಶೀರ್ಷಿಕೆ, ಸ್ವರೂಪ, ವಿಧಾನ ಎಲ್ಲವೂ ನಮ್ಮ ಆಕರಗಳ ಸಂಗ್ರಹ ಮತ್ತು ವಿಂಗಡಣೆಗಳನ್ನು ನಿರ್ದೇಶಿಸುತ್ತ ಇರುತ್ತವೆ ಎಂದಾಯಿತು.

ಹೀಗಾಗಿ ನಮ್ಮ ಅಧ್ಯಯನದ ವಿಧಾನವೆ ನಮ್ಮ ಆಕರಗಳನ್ನೂ ನಿರ್ದೇಶಿಸಬಹುದು. ಕೆಲವೊಮ್ಮೆ ಆಕರಗಳೆ ಅಧ್ಯಯನ ವಿಧಾನವನ್ನೂ ನಿರ್ದೇಶಿಸಬಹುದು. ಯಾವ ಬಗೆಯ ಆಕರಗಳನ್ನು/ ತಾತ್ವಿಕತೆಗಳನ್ನು ನಂಬಬೇಕು ಎಂಬ ಎಚ್ಚರ ಕೂಡ ನಮಗೆ ಸದಾ ಇರಬೇಕಾಗುತ್ತದೆ.

ಯಾವುದೆ ಕಟ್ಟಡವನ್ನು ಕಟ್ಟುವುದಕ್ಕೆ ಮೊದಲಿಗೆ ಅಡಿಪಾಯ ಹೇಗೆ ಮುಖ್ಯವೊ ಹಾಗೆ ಯಾವುದೆ ಅಧ್ಯಯನವನ್ನು ಕೈಗೊಳ್ಳುವ ಮೊದಲು ನಾವು ತತ್ಸಂಬಂಧಿ ಪ್ರಾಥಮಿಕ ಓದು ನಡೆಸುವುದೂ ಮುಖ್ಯ. ಅಂದರೆ ನಾವು ಸಂಶೋಧನೆಗೆ ತೊಡಗುವ ಮೊದಲು ಕನ್ನಡ ಸಂಶೋಧನಾ ಅಧ್ಯಯನಗಳ ಚರಿತ್ರೆ, ತತ್ವ, ಮೀಮಾಂಸೆ, ಸಮೀಕ್ಷೆ,ಸ್ವರೂಪವನ್ನು ಕುರಿತ ಗ್ರಂಥಗಳನ್ನಾದರು ನಾವು ಓದಿಕೊಳ್ಳುವುದು ಅತ್ಯಗತ್ಯ. ಇಂತಹ ಅಡಿಪಾಯದ ಓದು ಇಲ್ಲದೆ ಸಂಶೋಧನೆಯ ಕಟ್ಟಡವನ್ನು ಕಟ್ಟಲಾಗದು.

ಹೇಗೆ ಸಂಶೋಧನೆ ನಡೆಸಬೇಕು ಎಂಬ ತತ್ವ, ಮೀಮಾಂಸೆ, ಪರಿಭಾಷೆಗಳ ಕಗ್ಗಾಡಿನಲ್ಲಿ ನಾವು ಕಳೆದು ಹೋಗುವ ಅನುಭವ ಆದಲ್ಲಿ ಆಗ ನಾವು ಸಂಶೋಧನೆಯ ಆಚಾರದ ತಾತ್ವೀಕರಣಕ್ಕು ತೊಡಗಬಹುದು. ಅಂದರೆ ಈಗಾಗಲೆ ನಮ್ಮಲ್ಲಿ ಪದವಿಗಾಗಿ ನಡೆದಿರುವ ಒಂದೈದು ಸಂಶೋಧನಾ ಅಧ್ಯಯನ ಕೃತಿಗಳನ್ನು ಮತ್ತು ಒಂದೈದು ಪದವಿಯೇತರ ಸಂಶೋಧನಾ ಕೃತಿಗಳನ್ನು ಓದಿ ನಮ್ಮ ಕನ್ನಡ ಸಂಶೋಧನೆಯ ಸ್ವರೂಪ ಮತ್ತು ವಿಧಾನಗಳ ಆಚಾರವನ್ನು ಆದರು ಪರಿಚಯಿಸಿಕೊಳ್ಳುವುದು ಸೂಕ್ತ. ಹೀಗಾದಾಗ ನಮ್ಮ ಸಂಶೋಧನೆಯ ಸ್ವರೂಪ ಮತ್ತು ಪರಂಪರೆಯ ತುಣುಕಿನ ಪರಿಚಯ ನಮಗೆ ಆಗುತ್ತದೆ. ಯಾರೂ ಹೇಳಿಲ್ಲದ್ದನ್ನು ನಾನೆ ಮೊದಲಿಗೆ ಹೇಳುತ್ತಿದ್ದೇನೆ ಎಂಬ ಭ್ರಮೆಯೂ ಬಿಟ್ಟುಹೋಗುತ್ತದೆ.

ನಮ್ಮ ಆಕರಗಳ ಸಂಗ್ರಹದಲ್ಲಿ ಇಂತಹ ಅಡಿಪಾಯ ರೂಪಿ ಓದಿನ ಗ್ರಂಥಗಳ ಸಂಗ್ರಹವೂ ಮುಖ್ಯ. ಆದರೆ ಇವನ್ನು ನಮ್ಮ ಅಧ್ಯಯನದಲ್ಲಿ ಉಲ್ಲೇಖಕ್ಕೆ ಬಳಸಲು ಆಗದೆಯು ಇರಬಹುದು.

ಅಲ್ಲದೆ ನಮ್ಮಲ್ಲಿ ಸಂಶೋಧನಾ ಅಧ್ಯಯನ ಶೀರ್ಷಿಕೆಗಳನ್ನು ಹೇಗೆಲ್ಲ ರೂಪಿಸಿಕೊಂಡಿದ್ದಾರೆ ಎಂದು ಗಮನಿಸುವುದೂ ಕೂಡ ಒಂದು ಮುಖ್ಯವಾದ ಕೆಲಸ. ಅಂದರೆ ವಿವಿಧ ತತ್ವ ಗ್ರಂಥಗಳನ್ನು ಅವಲೋಕಿಸಿ, ವಿವಿಧ ವಿಶ್ವವಿದ್ಯಾಲಯಗಳ ಜಾಲತಾಣಗಳನ್ನು ಜಾಲಿಸಿ, ಅಥವಾ ಸಿದ್ಧ ಶೀರ್ಷಿಕೆ ಸೂಚಿಗಳಿದ್ದಲ್ಲಿ ಅವುಗಳನ್ನು ಅವಲೋಕಿಸಿ ಶೀರ್ಷಿಕೆಗಳ ಸೂಚಿಯೊಂದನ್ನು ಅಭ್ಯಾಸ ಮಾಡುವುದು ಸೂಕ್ತ. ಇದರಿಂದ ಹೇಗೆ ಶೀರ್ಷಿಕೆಗಳನ್ನು ಇಟ್ಟುಕೊಳ್ಳಬಾರದು ಮತ್ತು ಇಟ್ಟುಕೊಳ್ಳಬಹುದು ಎಂಬ ಎರಡೂ ಸಂಗತಿಗಳು ತಿಳಿಯುತ್ತವೆ. ಅಂದರೆ ನಮ್ಮ ಅಧ್ಯಯನಕ್ಕೆ ಮೊದಲು ಇಂತಹ ಸಂಶೋಧನಾ ಶೀರ್ಷಿಕೆ ಸೂಚಿಗಳನ್ನು ನಮ್ಮ ಅಧ್ಯಯನದ ಅಡಿಪಾಯ ರೂಪಿ ಆಕರಗಳಾಗಿ ಸಂಗ್ರಹಿಸಬೇಕಾಗುತ್ತದೆ. ಇಂತಹ ಸೂಚಿಗಳು ಈಗಾಗಲೆ ಕಲಬುರ್ಗಿ ಅವರ ಪುಸ್ತಕದಲ್ಲಿ, ಆರ್ವಿಯೆಸ್‌ ಸುಂದರಂ ಅವರ ಪುಸ್ತಕದಲ್ಲಿ, ನುಡಿಯಾಟ ಪುಸ್ತಕದಲ್ಲಿ ಲಭ್ಯ ಇವೆ. ಅವನ್ನು ತರಿಸಿಕೊಂಡು ಅವಲೋಕಿಸಬಹುದು.

ಆಕರಗಳ ಬಗೆಗಳು
ಆಕರಗಳನ್ನು ಸಾಮಾನ್ಯವಾಗಿ ಮೂರು ಬಗೆಗಳಾಗಿ ವರ್ಗೀಕರಣ ಮಾಡಿಕೊಳ್ಳಬಹುದು.
1. ಸಂಶೋಧನಾ ಅಧ್ಯಯನ ಆಕರಗಳು
2. ಪೂರ್ವಾಧ್ಯಯನ ಸಮೀಕ್ಷಾ ಆಕರಗಳು
3. ಪರಾಮರ್ಶನ ಆಕರಗಳು

ನಮ್ಮ ಆಕರಗಳ ಸಂಗ್ರಹದಲ್ಲಿ ಮೊದಲಿಗೆ ನಮ್ಮ ಸಂಶೋಧನಾ ಅಧ್ಯಯನದ ಆಕರಗಳು ಬರುತ್ತವೆ. ಆನಂತರ ಪೂರ್ವಾಧ್ಯಯನ ಸಮೀಕ್ಷೆಗೆ ಬೇಕಾದ ಆಕರಗಳು ಬರುತ್ತವೆ. ಹಾಗಾಗಿ ಸಂಶೋಧನೆಯ ಆಕರಗಳೆ ಬೇರೆ ಪೂರ್ವಾಧ್ಯಯನ ಸಮೀಕ್ಷೆಯ ಆಕರಗಳೆ ಬೇರೆ. ಪೂರ್ವಾಧ್ಯಯನ ಸಮೀಕ್ಷಾ ಆಕರಗಳ ಆಚೆಗೂ ನಾವು ನಮ್ಮ ಸಂಶೋಧನೆಯ ವಿಷಯ ವ್ಯಾಪ್ತಿಗೆ ಸಂಬಂಧಿಸಿದಂತೆ ಹತ್ತು ಹಲವು ಪರಾಮರ್ಶನಗಳನ್ನು ಪರಾಮರ್ಶಿಸಬೇಕಾಗುತ್ತದೆ. ಅವನ್ನು ನಾವು ಪರಾಮರ್ಶನ ಆಕರಗಳು ಎಂದು ಕರೆಯಬಹುದು. ಈ ಪರಾಮರ್ಶನ ಆಕರಗಳಲ್ಲಿ ಕೆಲವು ಪೂರ್ವಾಧ್ಯಯನ ಆಕರಗಳೂ ಕೆಲವೊಮ್ಮೆ ಸೇರಿಕೊಳ್ಳಬಹುದು.

ಉದಾಹರಣೆಗೆ ʻಕನ್ನಡದಲ್ಲಿ ಮಂಗಳಮುಖಿಯರ ಸಾಹಿತ್ಯ: ಒಂದು ಅಧ್ಯಯನʼ ಎಂಬುದು ನಮ್ಮ ಅಧ್ಯಯನ ವಿಷಯ ಎಂದಿಟ್ಟುಕೊಂಡರೆ; ಇದುವರೆಗೆ ಮಂಗಳಮುಖಿಯರು ಕನ್ನಡದಲ್ಲಿ ರಚಿಸಿರುವ ಎಲ್ಲ ಬಗೆಯ ಸಾಹಿತ್ಯಕೃತಿಗಳು ನಮ್ಮ ಸಂಶೋಧನೆಯ ಆಕರ ಆಗುತ್ತವೆ. ಅವರು ರಚಿಸಿದ ಸಾಹಿತ್ಯ ಕುರಿತು ಬಂದಿರುವ ಎಲ್ಲ ಬಗೆಯ ವಿಮರ್ಶೆ, ಸಮೀಕ್ಷೆ, ವ್ಯಾಖ್ಯಾನ ಮೊದಲಾದುವು ಪೂರ್ವಾಧ್ಯಯನ ಸಮೀಕ್ಷೆಯ ಆಕರಗಳಾಗುತ್ತವೆ. ಇನ್ನು ಸಂಶೋಧನಾ ತಾತ್ವಿಕತೆಯ ಕುರಿತ, ಮಂಗಳಮುಖಿಯರು ಎಂದರೆ ಯಾರು ಎಂಬುದನ್ನು ಕುರಿತ, ಮಂಗಳಮುಖಿಯರ ಬವಣೆಗಳ ಕುರಿತ ಹೀಗೆ ಹತ್ತಾರು ಬಗೆಯ ಗ್ರಂಥಗಳ ಪರಾಮರ್ಶನವೂ ನಮ್ಮ ಸಂಶೋಧನೆಗೆ ಅಗತ್ಯ ಆಗಬಹುದು. ಆಗ ಅವನ್ನೆಲ್ಲ ನಾವು ಪರಾಮರ್ಶನ ಆಕರಗಳು ಎಂದು ಕರೆಯುತ್ತೇವೆ.

ನಮ್ಮಲ್ಲಿ ಪರಾಮರ್ಶನ ಆಕರಗಳನ್ನು ಪರಾಮರ್ಶನ ಆಕರಗಳು ಎನ್ನದೆ ಪೂರಕ ಆಕರಗಳು ಎಂತಲೂ ಕರೆದುಕೊಳ್ಳುವ ವಾಡಿಕೆ ಇದೆ.

ಇನ್ನು ಪರಾಮರ್ಶನ ಆಕರಗಳಲ್ಲಿ ಎರಡು ಬಗೆ 1. ಪ್ರಾಥಮಿಕ ಆಕರಗಳು 2. ಆನುಷಂಗಿಕ ಆಕರಗಳು. ಅಂದರೆ ಮಂಗಳಮುಖಿಯರ ಸಾಹಿತ್ಯದ ಬಗೆಗೆ ನಾವು ಸಂಶೋಧನೆ ನಡೆಸುವಾಗ ಅವರ ಬಗೆಗೆ ಬಂದಿರುವ ಕೃತಿಯೊಂದನ್ನು ನಾವು ಪ್ರಾಥಮಿಕ ಪರಾಮರ್ಶನ ಆಕರ ಆಗಿ ಬಳಸುವಾಗ; ಆ ಕೃತಿಯೊಳಗೆ ಉಲ್ಲೇಖ ಆಗಿರುವ ಇನ್ನೊಂದು ಕೃತಿಯ ಉದ್ಧರಣವನ್ನು ನಾವು ನಮ್ಮ ಸಂಶೋಧನೆಗೆ ಬಳಸಿದರೆ ಆಗ ಅದು ಆನುಷಂಗಿಕ ಆಕರ ಆಗುತ್ತದೆ. ಈ ಕೂದಲು ಸೀಳುವ ಕೆಲಸ ಸಂಶೋಧನೆಯ ಸಂದರ್ಭದಲ್ಲಿ ರೇಜಿಗೆ ಎನ್ನಿಸಿದರೆ ಪರಾಮರ್ಶನಗಳನ್ನು ವರ್ಗೀಕರಿಸುವ ಗೋಜಿಗೇ ಹೋಗದೆ ಸಂಶೋಧನೆ ನಡೆಸಬಹುದು.

ಆಕರಗಳ ವಿಂಗಡಣೆ ವಿಧಾನ
ಆಕರಗಳ ವಿಂಗಡಣೆ ಕೂಡ ಆಯಾ ವಿಷಯಗಳಿಂದಲೆ ನಿರ್ದೇಶಿತ ಆಗುತ್ತಿರುತ್ತದೆ. ಹಾಗಾಗಿ ಈ ವಿಚಾರದಲ್ಲಿ ಇದು ಹೀಗೇ ಎಂಬ ಸಾರ್ವತ್ರಿಕ ಕಡ್ಡಾಯ ಸೂತ್ರವಿಲ್ಲ. ಆದರೂ ಕೆಲವೊಮ್ಮೆ ಆಕರಗಳನ್ನು ವಿಂಗಡಣೆ ಮಾಡಿಕೊಳ್ಳುವಾಗ ಈ ಕೆಳಕಂಡ ಮೂರು ವಿಧಾನಗಳನ್ನು ಅನುಸರಿಸಬಹುದು.

ಒಂದನೆ ವಿಧಾನ
1. ಸಂಶೋಧನಾ ಪದವಿ ಪ್ರಬಂಧಗಳು
2. ಪದವಿಯೇತರ ಸಂಶೋಧನೆಗಳು
3. ಇತರೆ ಗ್ರಂಥಗಳು.

ಎರಡನೆ ವಿಧಾನ
1. ಗ್ರಂಥಗಳು
2. ಲೇಖನಗಳು
3. ಇತರೆ (ಶ್ರವ್ಯ ಪಠ್ಯಗಳು, ದೃಶ್ಯಪಠ್ಯಗಳು, ಮಲ್ಟಿಮೀಡಿಯಾ ಪಠ್ಯಗಳು, ಶಾಸನಗಳು, ಬ್ಲಾಗ್‌ - ಜಾಲತಾಣ ಬರಹಗಳು…)

ಮೂರನೆ ವಿಧಾನ
1. ಬಾಹ್ಯ/ಆಂತರಿಕ
2. ಮೌಖಿಕ/ ಲಿಖಿತ
3. ಚಾರಿತ್ರಿಕ/ಪೌರಾಣಿಕ
4. ಜಡ/ ಚಲನಶೀಲ (ಉದಾ: ರಂಗಭೂಮಿ)

ಇಲ್ಲಿನ ಮೂರನೆ ವಿಧಾನ ಬೈನರಿ ಅಪ್ರೋಚನ್ನು ನೆಮ್ಮಿದ ವಿಧಾನ. ಇದು ಸ್ವಲ್ಪ ಸಮಸ್ಯಾತ್ಮಕ ವಿಧಾನ. ಆದಾಗ್ಯೂ ಯಾವಾಗಲೂ ಆಕರಗಳ ವಿಂಗಡಣೆ ವಿಷಯನಿಷ್ಠ ಆದುದೆ ಎಂಬುದು ಮತ್ತೆ ಮತ್ತೆ ನಮ್ಮ ಅನುಭವಕ್ಕೆ ಬರುತ್ತದೆ. ಆದರೆ ಸಂಶೋಧನೆಯಲ್ಲಿ ಆಕರಗಳ ಅಕಾರಾದಿಗಳನ್ನು ಅಥವಾ ಸೂಚಿಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ. ಈ ಅಕಾರಾದಿಗಳನ್ನು ಮಾಡಿಕೊಳ್ಳುವಾಗ ಲೇಖಕ ಆಕಾರಾದಿ, ಬರಹ ಆಕಾರಾದಿ ಹೀಗೆ ಎರಡರಲ್ಲಿ ಒಂದನ್ನು ಬಳಸುವದು ಸೂಕ್ತ. ಬರಹ ಅಕಾರಾದಿ ಮಾಡುವಾಗ ಲೇಖನ ಅಕಾರಾದಿ ಮತ್ತು ಕೃತಿ ಅಕಾರಾದಿಗಳನ್ನು ಪ್ರತ್ಯೇಕ ಮಾಡಿಕೊಳ್ಳುವುದು ಸೂಕ್ತ. ಅಧ್ಯಯನಕ್ಕೆ ಅಗತ್ಯ ಇದ್ದಲ್ಲಿ ಕಾಲ ಅಕಾರಾದಿಯನ್ನೂ ಮಾಡಿಕೊಳ್ಳಬಹುದು.

ಸಂಶೋಧನಾ ಪೂರ್ವಾಧ್ಯಯನ ಸಮೀಕ್ಷೆ ಎಂಬ ಪರಿಭಾಷೆ ನಮ್ಮ ಸಂಶೋಧನೆಯ ಆಕರಗಳು ಮತ್ತು ಪೂರ್ವಾಧ್ಯಯನ ಸಮೀಕ್ಷೆಯ ಆಕರಗಳು ಎರಡೂ ಕೇವಲ ಮುದ್ರಿತ ಪಠ್ಯಗಳೆ ಆಗಿರಬೇಕು ಎಂದೇನಿಲ್ಲ. ಈಗ ಸಮಾಜದಲ್ಲಿ ಶ್ರವ್ಯ ಪಠ್ಯ, ದೃಶ್ಯ ಪಠ್ಯ, ಮಲ್ಟಿಮೀಡಿಯಾ ಪಠ್ಯ, ಚಲನಶೀಲ ಮೌಖಿಕ ಪಠ್ಯ, ರಂಗಪಠ್ಯ ಹೀಗೆ ಹಲವು ಬಗೆಯ ಪಠ್ಯಗಳೂ ಅನುಸಂಧಾನಗಳೂ ಇವೆ. ಹಾಗಾಗಿ ನಮ್ಮ ಸಮೀಕ್ಷೆಯಲ್ಲಿ ಈ ಎಲ್ಲವನ್ನೂ ಒಳಗೊಳ್ಳುವುದು ಸೂಕ್ತ. ಹೀಗಿರುವಾಗ ನಮ್ಮ ಪೂರ್ವಾಧ್ಯಯನ ಸಮೀಕ್ಷೆ ಎಂಬುದೇ ಒಂದು ಪರಿಮಿತಿಯುಳ್ಳ ಪರಿಭಾಷೆಯೂ, ಅವಧಿ ಮೀರಿದ ಪರಿಭಾಷೆಯೂ ಆಗಿಹೋಗಿದೆ. ಹಾಗಾಗಿ ಒಳಗೊಳ್ಳುವಿಕೆಯ ನೆಲೆಯಲ್ಲಿ ಅದನ್ನು ಪೂರ್ವಾನುಸಂಧಾನಗಳ ಸಮೀಕ್ಷೆ ಎಂದು ಬದಲಿಸಿಕೊಳ್ಳುವುದೆ ಒಳ್ಳೆಯದು.

ಇನ್ನು ಈ ಪೂರ್ವಾನುಸಂಧಾನಗಳ ನಮ್ಮ ಸಮೀಕ್ಷೆಯ ವಿಧಾನ ಕೂಡ ಜಡವಾಗಿದೆ. ನಾವು ಸಾಮಾನ್ಯವಾಗಿ ನಮ್ಮ ಅಧ್ಯಯನದ ಆರಂಭದಲ್ಲೆ ಪೂರ್ವಾನುಸಂಧಾನಗಳ ಸಮೀಕ್ಷೆ ಮಾಡುತ್ತೇವೆ. ಹಾಗೆ ಮಾಡುವ ಮೂಲಕ ನಮ್ಮ ಮುಂದಣ ಅಧ್ಯಯನಕ್ಕೆ ನಮಗೆ ಗೊತ್ತಿಲ್ಲದೆ ಪೂರ್ವಾಗ್ರಹಗಳನ್ನು ಹತ್ತಿಸಿಕೊಳ್ಳುತ್ತೇವೆ. ಪೂರ್ವಾಗ್ರಹ ರಾಹಿತ್ಯ ಎಂಬುದು ಒಂದು ಆದರ್ಶ ಮತ್ತು ಭ್ರಮೆ ಹೌದಾದರು; ಪೂರ್ವಾಗ್ರಹ ರಹಿತವಾಗಿ ಇರುವುದಕ್ಕೆ ಆದಷ್ಟು ಪ್ರಯತ್ನಿಸಬೇಕಾದುದು ಒಳಿತು. ಈ ದಿಸೆಯಲ್ಲಿ ಪೂರ್ವಾನುಸಂಧಾನಗಳ ಸಮೀಕ್ಷೆಯನ್ನು ನಮ್ಮ ಅಧ್ಯಯನದ ಕೊನೆಯಲ್ಲಿ ಮಾಡುವುದೆ ಒಳಿತು. ಆಗ ನಮ್ಮ ಇತಿಮಿತಿಗಳ ಅರಿವೂ ನಮಗೆ ಆಗಬಹುದು.

ಇನ್ನು ಪೂರ್ವಾನುಸಂಧಾನಗಳ ಸಮೀಕ್ಷೆಯನ್ನು ಕೆಲವರು ಯಾಂತ್ರಿಕವೆಂಬಂತೆ ಅವರು ಹಾಗೆ ಹೇಳಿದ್ದಾರೆ; ಇವರು ಹೀಗೆ ಹೇಳುತ್ತಾರೆ ಎಂದು ಹೇಳಿ ಕೈತೊಳೆದುಕೊಳ್ಳುವುದುಂಟು. ಇಂತಹ ಸಮೀಕ್ಷೆಗಳಿಂದ ನಮಗೆ ಯಾವ ಪ್ರಯೋಜನಗಳೂ ಇಲ್ಲ. ನಮ್ಮ ಸಮೀಕ್ಷೆ ಕೋರ್ಟ್‌ ತೀರ್ಪಿನ ರೀತಿ ಇರದಿದ್ದರೂ ನಮ್ಮದೆ ನಿಲುವುಗಳ ಮೂಲಕ ಪೂರ್ವಾನುಸಂಧಾನಗಳನ್ನು ವಿಮರ್ಶಿಸುವ ಮತ್ತು ಒರೆಗೆ ಹಚ್ಚುವ ಕೆಲಸ ಮಾಡದೆ ಇದ್ದರೆ ನಮ್ಮ ಅಧ್ಯಯನ ಒಂದು ಹೆಜ್ಜೆ ಮುಂದೆ ಹೋಗಲು ಸಾಧ್ಯವೆ ಇಲ್ಲ.

ಸಮೀಕ್ಷೆಯ ಉದ್ದೇಶಗಳು
1. ಸಂಶೋಧನಾರ್ಥಿಗೆ ತಾನು ಕೈಗೊಳ್ಳಲಿರುವ ಅಥವಾ ಕೈಗೊಂಡಿರುವ ಸಂಶೋಧನೆಯ ಕ್ಷೇತ್ರದಲ್ಲಿ ಈಗಾಗಲೆ ಏನೇನು ಕೆಲಸ ಆಗಿದೆ ಮತ್ತು ಆಗಲಿಕ್ಕಿದೆ ಎಂಬ ಅಂದಾಜು ಒದಗಲಿ, 2. ತನ್ನ ಸಂಶೋಧನೆಯ ಅಗಾಧತೆ ಮತ್ತು ಸಾಧ್ಯತೆಗಳ ಅರಿವು ಒದಗಲಿ, 3. ಈಗಾಗಲೆ ಕಂಡಿರುವ (ವ್ಯಾಖ್ಯಾನಿಸಿರುವ) ಸಂಗತಿಗಳ ಅಪ್ರಸ್ತುತತೆ, ಇತಿಮಿತಿಗಳು ತಿಳಿಯಲಿ, 4. ತನ್ನ ಸಂಶೋಧನೆಯ ವಿಧಾನ, ವೈಧಾನಿಕತೆ, ತಾತ್ವೀಕರಣ, ತಾತ್ವಿಕತೆಗಳ ಅರಿವು ಮೂಡಲಿ, 5. ಸಂಶೋಧನೆಯ ಕ್ಷೇತ್ರದ ಭಾಷೆ, ಪರಿಭಾಷೆಗಳ ಅರಿವು ಮೂಡಲಿ ಎಂಬಿತ್ಯಾದಿ ಉದ್ದೇಶಗಳು ಕೆಲವು.

ಆದರೆ; ಕೆಲವೊಮ್ಮೆ ಸಂಶೋಧನಾರ್ಥಿಗಳು ಸಮಯಾಭಾವದ ಮತ್ತು ಅವಸರದ ಕಾರಣಕ್ಕೆ, ಕೆಲವೊಮ್ಮೆ ಸಮೀಕ್ಷೆ ಮಾಡಬೇಕಲ್ಲ ಎಂಬ ಶಾಸ್ತ್ರಾಚಾರದ ಕಾರಣಕ್ಕೆ ಪೂರ್ವಾನುಸಂಧಾನಗಳಲ್ಲಿನ ಒಂದೊ ಎರಡೊ ಆಶಯ ಸಂಬಂಧಿ ಸಾಲುಗಳನ್ನಷ್ಟೆ ಎತ್ತಿಕೊಂಡು ಇವರು ಹೀಗೆ ಹೇಳಿದ್ದಾರೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ. ಇದರಿಂದ ಈ ಸಮೀಕ್ಷೆಯ ಉದ್ದೇಶಗಳೆ ಮಣ್ಣುಗೂಡುತ್ತವೆ. ಈ ಬಗ್ಗೆ ಸಂಶೋಧಕನಿಗೆ ಎಚ್ಚರವಿರಬೇಕು.

ಸಮೀಕ್ಷೆಯ ವಿಧಾನಗಳು
ಇನ್ನು ಸಮೀಕ್ಷೆಯ ವಿಧಾನಗಳಲ್ಲಿ ಸಾಮಾನ್ಯವಾಗಿ ಇಡಿ ವಿಧಾನ ಮತ್ತು ಬಿಡಿ ವಿಧಾನ ಎಂದು ಎರಡು ಬಗೆಯ ವಿಧಾನಗಳನ್ನು ಅನುಸರಿಸುತ್ತಾರೆ. ಇಡಿ ನೆಲೆಯಲ್ಲಿ ೧. ಒಂದು ಕೃತಿಯನ್ನು ಅಥವಾ ಪಠ್ಯವನ್ನು ಇಡಿಯಾಗಿ ನೋಡುವುದು ಮತ್ತು ೨. ಇಡಿಯಾಗಿ ಎಲ್ಲ ಅನುಸಂಧಾನಗಳನ್ನು ಒಟ್ಟಿಗೆ ಸಮಗ್ರವಾಗಿ ಸಮೀಕ್ಷಿಸುವುದು ಹೀಗೆ ಎರಡು ಬಗೆ. ಇಲ್ಲಿ ಸಮಗ್ರ ದೃಷ್ಟಿಕೋನ ಇರುತ್ತದೆ. ಇನ್ನು ಬಿಡಿ ನೆಲೆಯಲ್ಲಿ ಒಂದೊಂದೆ ಲೇಖನಗಳನ್ನು ಅಥವಾ ಒಂದು ಕೃತಿಯ ಒಂದೊಂದೆ ಅಧ್ಯಾಯಗಳನ್ನು ಬಿಡಿಬಿಡಿಯಾಗಿ ಸಮೀಕ್ಷಿಸುವುದು ಇರುತ್ತದೆ.

ಇವಲ್ಲದೆ ನಿಗಮನ ವಿಧಾನ, ಅನುಗಮನ ವಿಧಾನ ಎಂದೂ ಇನ್ನೆರಡು ಬಗೆಗಳನ್ನು ಅನುಸರಿಸುವುದುಂಟು. ಸಿದ್ಧಾಂತ, ತಾತ್ವಿಕತೆಗಳನ್ನು ಕುರಿತು ಮೊದಲೆ ಹೇಳಿ ಅದಕ್ಕೆ ತಕ್ಕಾದ ಪುರಾವೆಗಳನ್ನು ಆನಂತರ ನೀಡುವುದು ನಿಗಮನ ವಿಧಾನ. ಉದಾಹರಣೆಗಳ ಮೂಲಕ ಸಿದ್ಧಾಂತಗಳಿಗೆ ಅಥವಾ ಫಲಿತಗಳಿಗೆ ಚಲಿಸುವುದು ಅನುಗಮನ ವಿಧಾನ. ಆದಾಗ್ಯೂ ಸಂಶೋಧನೆಯಲ್ಲಿ ಸಮೀಕ್ಷೆಯ ವಿಧಾನವನ್ನು ನಮ್ಮ ನಮ್ಮ ವಿಷಯಗಳೇ ನಿರ್ದೇಶಿಸುತ್ತವೆ. ವಿಧಾನಗಳು ಸದಾ ವಿಷಯನಿಷ್ಠ.

ಸಮೀಕ್ಷೆಯಲ್ಲಿ ಸಂಶೋಧನಾರ್ಥಿಗಳು ಸುಲಭದ ದಾರಿ ಹಿಡಿಯದೆ ಸಮೀಕ್ಷಿಸುವ ಕೃತಿ ಅಥವಾ ಪಠ್ಯ ಸಮೂಹದ ಆಶಯಗಳನ್ನು, ತಾತ್ವಿಕತೆಗಳನ್ನು, ಫಲಿತಗಳನ್ನು ಹಿಡಿಯಬೇಕು. ಅವುಗಳ ಬಗೆಗೆ ತಮ್ಮದೇ ಓದು ಅಥವಾ ನಿಲುವುಗಳನ್ನು ಪ್ರಕಟಿಸಬೇಕು. ಹಾಗೆ ಮಾಡಿದಾಗ ಅಲ್ಲಿ ಸ್ವಂತಿಕೆಯ ಅಂಶ ಸ್ವಲ್ಪವಾದರು ಇರುತ್ತದೆ. ಇಲ್ಲದಿದ್ದರೆ ʻತೀಸೀಸಂಟೆ ತೀಸಿ ತೀಸಿ ರಾಸೇದಿʼ ಎಂಬ ತೆಲುಗು ಮಾತಿನಂತೆ ನಾವು ಇನ್ನೊಬ್ಬರ ಅನುಕರಣಮತಿಗಳೆ ಆಗುತ್ತೇವೆ.

ದಾರಿಯಲ್ಲಿ ಹೇಗೆ ನಡೆಯಬೇಕು ಎಂಬ ಥಿಯರಿ ಯಾವಾಗಲು ಆಯಾಸದ ಹಾದಿ. ದಾರಿಯನ್ನು ನಡೆದೇ ತಿಳಿಯುವುದು ಯಾವಾಗಲು ಉತ್ತಮ ಮಾರ್ಗ. ನಡೆಯಲು ತೊಡಗಬೇಕಷ್ಟೆ; ಸಂಶೋಧನೆಯಲ್ಲಿ ತೊಡಗಿ ತಪ್ಪೆಜ್ಜೆ, ತೆಪ್ಪೆಜ್ಜೆ ಇಟ್ಟರೂ ನಡಿಗೆಯೆ ನಮಗೆ ಅನುಭವ ನೀಡಿ ನಡೆಯಲು ಕಲಿಸುತ್ತದೆ. ಹಾಗಾಗಿ ಸಂಶೋಧನೆಯಲ್ಲಿ ತೊಡಗಿಯೆ ಸಂಶೋಧನೆಯ ಆಯಾಮಗಳನ್ನು ತಿಳಿಯುವುದು ಉತ್ತಮ ದಾರಿ.

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...