'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’


ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು ಸಮಕಾಲೀನ ಸಂದರ್ಭದಲ್ಲಿ ಚಿಂತಿಸುವ ಆಯಾಮವನ್ನು ಕಲ್ಪಿಸಿಕೊಟ್ಟಿದೆ' ಎನ್ನುತ್ತಾರೆ ಲೇಖಕ, ಪ್ರಕಾಶಕ ಜೀನಹಳ್ಳಿ ಸಿದ್ಧಲಿಂಗಪ್ಪ. ಅವರು ವಿ.ಮಾ. ಜಗದೀಶ್ ಅವರ ರೂಹಿಲ್ಲದ ಚೆಲುವ ಕಾದಂಬರಿಗೆ ಬರೆದ ಪ್ರಕಾಶಕರ ಮಾತು ಇಲ್ಲಿದೆ. 

'ಅಕ್ಕಮಹಾದೇವಿ' ಕುರಿತ ಐತಿಹಾಸಿಕ ಕಾದಂಬರಿಯಿದು. ಅಕ್ಕನ ಜೀವನದ ಪ್ರಮುಖ ಘಟ್ಟಗಳನ್ನಾಧರಿಸಿದ ನಾಲ್ಕು ಅಧ್ಯಾಯಗಳಲ್ಲಿ ಕಾದಂಬರಿಯ ಕಥಾ ಸಂವಿಧಾನದಲ್ಲಿ ಅಕ್ಕನ ಆಧ್ಯಾತ್ಮಿಕ ವ್ಯಕ್ತಿತ್ವದ ವಿಕಾಸವನ್ನು ಹೆಣೆಯಲಾಗಿದೆ. 900 ವರ್ಷಗಳ ಹಿಂದೆ ಸಾಮಾಜಿಕ, ಧಾರ್ಮಿಕ, ಐತಿಹಾಸಿಕ, ಆಧ್ಯಾತ್ಮಿಕ ಇತ್ಯಾದಿ ಕ್ಷೇತ್ರಗಳಲ್ಲಿ ನಡೆದ, ಬಸವಾದಿ ಶರಣರ ಮಧ್ಯೆ ಪ್ರಖರ ನಕ್ಷತ್ರದಂತೆ ಕಂಗೊಳಿಸಿ, ಸ್ತ್ರೀಧರ್ಮದ ಮೌಲ್ಯವನ್ನು ಎತ್ತಿಹಿಡಿದ, ಕ್ರಾಂತಿಕಾರಕ ಬದುಕನ್ನು ನೀಡಿ ಇಂದಿಗೂ 'ಅಕ್ಕ' ಆದರ್ಶಪ್ರಾಯಳಾಗಿದ್ದಾಳೆ. ವಯಸ್ಸಿನಲ್ಲಿ ಕಿರಿಯಳಾಗಿದ್ದರೂ ಮಹತ್ತನ್ನು ಸಾಧಿಸಿ ತೋರಿಸಿದ ಅಕ್ಕನನ್ನು ಕುರಿತು ಕೃತಿಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇಂದಿಗೂ ಪ್ರಕಟವಾಗುತ್ತಲೇ ಇವೆ. ಇಂತಹ ಕೃತಿಗಳಲ್ಲೊಂದು 'ರೂಹಿಲ್ಲದ ಚೆಲುವ' ಕಾದಂಬರಿ.

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು ಸಮಕಾಲೀನ ಸಂದರ್ಭದಲ್ಲಿ ಚಿಂತಿಸುವ ಆಯಾಮವನ್ನು ಕಲ್ಪಿಸಿಕೊಟ್ಟಿದೆ. 

ಆತ್ಮೀಯರಾದ ವಿ.ಮಾ. ಜಗದೀಶ್ ಅವರು ಈಗಾಗಲೆ ಕಾವ್ಯ, ಕಾದಂಬರಿ, ಮಹಾಕಾವ್ಯ, ಮಕ್ಕಳ ಕಾವ್ಯ, ನಾಟಕ ಕ್ಷೇತ್ರಗಳಲ್ಲಿ ಮಾಡಿರುವ ಕೆಲಸ ಅನನ್ಯವಾದುದು. ಸತ್ಯವಾನಸಾವಿತ್ರಿ ಅವರನ್ನು ಕುರಿತು ಇವರು ರಚಿಸಿದ ಹೊಸ ಬಗೆಯ 'ಅಮೃತಪಥ' ಮಹಾಕಾವ್ಯ ಪ್ರಕಟವಾಗಿ ಸಾಹಿತ್ಯಾಸಕ್ತರ, ಕಾವ್ಯಾಸಕ್ತರ, ಸಂಗೀತಾಸಕ್ತರ ಗಮನಸೆಳೆದಿದೆ. ಹೃದಯಗೆದ್ದಿದೆ. ವಿವಿಧ ಆಕಾಶವಾಣಿ ಕೇಂದ್ರಗಳಲ್ಲಿ, ಜ್ಞಾನವಾಣಿಯಲ್ಲಿ ಕಾರನಿರ್ವಹಿಸಿ ನಾಡಿನ ಹಿರಿ-ಕಿರಿಯ ಕವಿಗಳ ಸಂಪರ್ಕದ ಒಡನಾಟ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವಂತೆ ಮಾಡಿದೆ.

ಇದೀಗ 'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನ, ವಾಸ್ತವಪ್ರಜ್ಞೆ, ವೈಚಾರಿಕ ನಿಲುವಿನ ಹಿನ್ನೆಲೆಯಲ್ಲಿ ರಚಿಸಿರುವ ಕಾದಂಬರಿ 'ರೂಹಿಲ್ಲದ ಚೆಲುವ'. ನಮ್ಮ ಶ್ರುತಿ ಪ್ರಕಾಶನದಿಂದ ಪ್ರಕಟಿಸುತ್ತಿರುವುದು ಸಂತಸದ ಸಂಗತಿ. ಬಸವಣ್ಣ, ಅಲ್ಲಮ, ಅಕ್ಕಮಹಾದೇವಿಯವರನ್ನು ಕುರಿತು ಈವರೆಗೆ ಬಂದಿರುವ ಕೃತಿಗಳು ಅಸಂಖ್ಯವಾಗಿದ್ದರೂ ಅಲ್ಲೊಂದು ಇಲ್ಲೊಂದು ಕೃತಿಗಳು ಗಮನಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಂತಹ ಸಾಲಿನಲ್ಲಿ ಈ ಕೃತಿ ಸೇರುತ್ತದೆ,

ಅಕ್ಕನ ಬದುಕು, ಹೋರಾಟ, ಅವಳ ವಚನಗಳ ಮಹತ್ವ ನಮ್ಮೆಲ್ಲರಲ್ಲೂ ಪುನಃ ಪುನಃ ಚಿಂತನೆಗೆ ಹಚ್ಚಬಲ್ಲವಾಗಿವೆ. ಇಂತಹದೊಂದು ಕಾದಂಬರಿಯನ್ನು ಪ್ರಕಟಿಸಲು ನೀಡಿದ ಆತ್ಮೀಯರಾದ ಜಗದೀಶ್ ಅವರನ್ನು ಹೃತ್ಪೂರ್ವಕ ಅಭಿನಂದಿಸುತ್ತೇನೆ. ಇವರ 'ಕುದುರೆಕೊಂಬು ಮತ್ತು ಇತರ ಮಕ್ಕಳ ಪದ್ಯಗಳು' 'ನುಡಿಪಾಕ', 'ಗ್ರಸ್ತ', 'ಒಂದು ಅಳಲು ಒಂದು ಸ್ವಗತ', 'ಅಮೃತಪಥ' ಕೃತಿಗಳನ್ನು ಪ್ರಕಟಿಸಿರುವುದು ನಮ್ಮ ಪ್ರಕಾಶನಕ್ಕೊಂದು ಹೆಮ್ಮೆಯಗರಿ. ಈ ಕಾದಂಬರಿ ಕುರಿತು ಪ್ರೊ. ಶಾಂತಾ ಇಮ್ರಾಪೂರ, ಪ್ರೊ.ಡಿ.ಟಿ. ಬಸವರಾಜು ಅವರು ಅಧ್ಯಯನ, ಸಂಶೋಧನಾತ್ಮಕ ಲೇಖನಗಳನ್ನು ಬರೆದುಕೊಟ್ಟು ಇದರ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಅವರಿಬ್ಬರಿಗೂ, ಸಾಹಿತ್ಯಾಭಿಮಾನಿ ಅಂತೇ, ಓದುಗರಿಗೂ ನಮ್ಮ ನಮನಗಳು ಸಲ್ಲುತ್ತವೆ.

-ಜೀನಹಳ್ಳಿ ಸಿದ್ಧಲಿಂಗಪ್ಪ, ಪ್ರಕಾಶಕರು

 

MORE FEATURES

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...

‘ಪಾತಕ ಲೋಕ’ ತರುಣರಿಗೆ ಅತ್ಯಂತ ಆಕರ್ಷಣೀಯ ವಸ್ತು

16-05-2024 ಬೆಂಗಳೂರು

"ನಾ ಕಂಡ ಈ ಭೂಗತ ಜಗತ್ತಿನಲ್ಲಿ ಬೆಂಗಳೂರು ನಗರ ಹಾಗೂ ಮುಂಬೈ ನಗರದ ರೌಡಿಗಳ ಸಂಪರ್ಕ ಹಾಗೂ ಮಂಗಳೂರು ನಗರದ ರೌಡಿಗಳ ...

ಪ್ರೀತಿ ಅರಳಿದರೆ ಬದುಕು ತೆರೆದಂತೆ

15-05-2024 ಬೆಂಗಳೂರು

"ಬದುಕು ಭಾವತೆರೆಯ ಮೇಲಿನ ತಾವರೆ, ಪ್ರತಿಯೊಂದು ಭಾವದಲೆಗೂ ಬದುಕು ಕಂಪಿಸುತ್ತದೆ. ಬದುಕಿನಲಿ ಕಾಡಿದ ಪ್ರೇಮ, ವಿರಹ,...