ಅಕ್ಷರಗಳ ಬ್ರಹ್ಮಾಂಡವ ಕಾಣಿಸಿದ ಅರಿವಿನ ಗುರು ‘ಗೀತಾ ವಸಂತ’


“ಕಲ್ಪತರು ನಾಡಿನ ಹೆಮ್ಮೆಯ ಸಾಹಿತಿ” ಎಂಬ ಗೌರವ ಪಡೆದ ಡಾ. ಗೀತಾ ವಸಂತ ಮೂಲತಃ ಶಿರಸಿಯವರು. ಎಕ್ಕಂಬಿಯ ಕಾಡ ನಡುವಿನ ಕಾಲು ದಾರಿಯಲ್ಲಿ ಸಾಗಿದರೆ ಸಿಗುವ “ಕಾಟೀಮನೆ”ಯೆಂಬ ಪುಟ್ಟ ಜಗತ್ತಿನಿಂದ ಹೊರಹೊಮ್ಮಿದ ದಿವ್ಯ ಬೆಳಕು ಎನ್ನುತ್ತಾರೆ ತುಮಕೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಸಂಶೋಧನಾ ವಿದ್ಯಾರ್ಥಿನಿ ಪ್ರಿಯಾಂಕಾ ಚಕ್ರಧರ. ಅವರು ಲೇಖಕಿ ಗೀತಾ ವಸಂತ ಅವರ ಜನ್ಮದಿನದ ಪ್ರಯುಕ್ತ ಬರೆದ ಆಪ್ತ ಲೇಖನ ನಿಮ್ಮ ಓದಿಗಾಗಿ.

ಮಲೆನಾಡಿನ ದಟ್ಟ ಮೌನ, ಕಾಡುಕಂಗಳ ದಿವ್ಯ ನೋಟ, ಆತ್ಮವಿಶ್ವಾಸ, ದೃಢತೆ, ಸಹನೆ, ಸಹಜತೆ, ಸರಳತೆಯ ಚೇತನ, ಅಕ್ಷರದ ಚಿಲುಮೆ, ಅರಿವಿನ ಆಕಾಶ, ಜ್ಞಾನದ ಮಹಾಪ್ರಭೆ, ಆಪ್ತ ಹೃದಯ, ಅಪ್ಪಟ ಅಕ್ಕರೆಯ ನಿರಾಡಂಬರ ವ್ಯಕ್ತಿತ್ವ. ಇದೆಲ್ಲದರ ಸಂಗಮವೇ ಗೀತಾ ವಸಂತ.

ಹೌದು ಡಾ. ಗೀತಾ ವಸಂತ ಕನ್ನಡ ಸಾಹಿತ್ಯ ಲೋಕದ ಅನನ್ಯ ತಾರೆ. ಕಾವ್ಯ, ಸಣ್ಣಕಥೆ, ಅಂಕಣ, ವಿಮರ್ಶೆ, ವಿಶ್ಲೇಷಣೆ, ಮಹಿಳಾ ಅಧ್ಯಯನ, ಸಂಸ್ಕೃತಿ ಚಿಂತನೆ ಹೀಗೆ ವಿಭಿನ್ನ ಸ್ತರಗಳಲ್ಲಿ ತಮ್ಮನ್ನ ಗುರುತಿಸಿಕೊಂಡವರು. ತಣ್ಣಗೆ ಧ್ಯಾನಿಸುತ್ತ, ಆಂತರ್ಯದಿ ಹರಿಯುವ ಒಳಝರಿಯನ್ನ ಸದ್ದಿಲ್ಲದೆ ಅಕ್ಷರದ ಅರಿವಲ್ಲಿ ಅಭಿವ್ಯಕ್ತಿಸಿದ ಪ್ರತಿಭಾಶಾಲಿ. ತಮ್ಮ ವಿಶಿಷ್ಟ ಬರವಣಿಗೆಯಿಂದಲೇ ಎಲ್ಲರ ಆಳಕ್ಕಿಳಿವ ಇವರ ಓದಿನ ಹರಹು ಮಾತ್ರ ಬಹಳ ವಿಸ್ತಾರವಾದದ್ದು. ಪಂಪನಿಂದ-ಬರಗೂರರವರೆಗೆ ಎಲ್ಲರ ಅರಿವನ್ನ ಎದೆಗೆಳಿಸಿಕೊಂಡ ಇವರಲ್ಲಿ ಆಳವಾದ ಅಧ್ಯಯನ, ಚಿಂತನೆ, ಸಂವಹನಶೀಲತೆ, ಕಾವ್ಯಾತ್ಮಕ ನಿರೂಪಣೆಯ ಬೆಡಗು ಎಲ್ಲವೂ ಅಂತರ್ಗತವಾಗಿ ಬೆರೆತುಕೊಂಡಿದೆ.

“ಕಲ್ಪತರು ನಾಡಿನ ಹೆಮ್ಮೆಯ ಸಾಹಿತಿ” ಎಂಬ ಗೌರವ ಪಡೆದ ಡಾ. ಗೀತಾ ವಸಂತ ಮೂಲತಃ ಶಿರಸಿಯವರು. ಎಕ್ಕಂಬಿಯ ಕಾಡ ನಡುವಿನ ಕಾಲು ದಾರಿಯಲ್ಲಿ ಸಾಗಿದರೆ ಸಿಗುವ “ಕಾಟೀಮನೆ”ಯೆಂಬ ಪುಟ್ಟ ಜಗತ್ತಿನಿಂದ ಹೊರಹೊಮ್ಮಿದ ದಿವ್ಯ ಬೆಳಕು. ಪ್ರಕೃತಿಯ ಮಡಿಲಲ್ಲಿ ತಾದಾತ್ಮ್ಯ ಹೊಂದುತ್ತ, ನಿಸರ್ಗದ ಲೀಲಾಮಯ ಲೋಕದಲ್ಲಿ ಪ್ರತಿ ದಿನವೂ ಹೊಸ ಅಚ್ಚರಿಯನ್ನ ಸವಿಯುತ್ತ, ಹೊಸ ಪಾಠಗಳನ್ನು ಕಲಿಯುತ್ತ ಬೆಳೆದವರು. ‘ಇರುವು ಅರಿವಾಗುವ ಘಳಿಗೆಗೆ ತೆರೆದುಕೊಳ್ಳುವುದೇ ವಿಕಾಸ’ ಎನ್ನುವ ಡಾ. ಗೀತಾ ವಸಂತ ಅವರು ಅರಳಲು ಆರಂಭಿಸಿದ್ದು ಕನ್ನಡ ಶಾಲೆ ಎಂಬ ಪ್ರಪಂಚದೊಳಗೆ. ಮಣ್ಣ ಪಾಟಿಯ ಮೇಲೆ ನುಣ್ಣಗೆತಿದ್ದಿದ ಅಕ್ಷರಗಳು ಅರಿವಿನ ಕಣ್ಣುಗಳನ್ನ ಮೂಡಿಸಿದ್ದವು. ಮುಂದೆ ಇದೆ ಅಕ್ಷರಗಳು ಇವರಿಗೆ ಸಾಹಿತಿ ಎಂಬ ಅಸ್ಮಿತೆಯನ್ನ ಕಲ್ಪಿಸಿದ್ದು ಸುಳ್ಳಲ್ಲ.

ಶಿರಸಿಯ ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ ಗೀತಾ ವಸಂತ ಅವರು ಉನ್ನತ ಶಿಕ್ಷಣಕ್ಕಾಗಿ ಆರಿಸಿಕೊಂಡದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವನ್ನ. ಡಾ. ಎಂ ಎಂ ಕಲ್ಬುರ್ಗಿಯವರಂತಹ ಮೇರು ವ್ಯಕ್ತಿತ್ವವನ್ನು ಗುರುವಾಗಿ ಪಡೆದುದಲ್ಲದೆ ಅವರ ಪ್ರಿಯ ಶಿಷ್ಯೆಯಾಗಿ ರೂಪುಗೊಂಡರು. ಸ್ವತಃ ಕಲ್ಬುರ್ಗಿಯವರೇ ಇವರಲ್ಲಿನ ಕವಯತ್ರಿಯನ್ನ ಗುರುತಿಸಿ ಮೊದಲ ಬಾರಿಗೆ 1999 ರಲ್ಲಿ ‘ಹೊಸಿಲಾಚೆ ಹೊಸ ಹೆಜ್ಜೆ‘ ಇರಿಸಿದರು. ಅಂದು ಆರಂಭವಾದ ಪಯಣ ನೂರಾರು ಅನೂಹ್ಯ ಸಾಧ್ಯತೆಗಳಿಗೆ ದಾರಿ ತೋರುತ್ತ ನಡೆದಿದೆ.

ನಂತರ 2004ರಲ್ಲಿ ಪ್ರಕಟಗೊಂಡ ಇವರ ಬೆಳಕಿನ ಬೀಜ ಕೃತಿಯಲ್ಲಿ ಅನುಭಾವದ ನಡೆಯನ್ನ ಗಮನಿಸಿದ ಎಂ. ಎಂ. ಕಲ್ಬುರ್ಗಿಯವರು, ಇವರೊಳಗೆ ಬೇಂದ್ರೆ ಕಾವ್ಯದ ಗುಂಗನ್ನ ಹಚ್ಚಿದರು. ಅದೇ ವರ್ಷ ಸ್ವಾತಂತ್ರ್ಯೋತ್ತರ ಕನ್ನಡ ಮಹಿಳಾ ಕಥನದಲ್ಲಿ ಸ್ತ್ರೀವಾದಿ ಚಿಂತನೆಗಳು ಎಂಬ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದ ಗೀತಾ ವಸಂತ ಅವರು ಬೇಂದ್ರೆ ಎಂಬ ಕಂಪಿನ ಕರೆಯ ಬೆನ್ನು ಹತ್ತುತ್ತಲೇ ಹೆಣ್ಣು ಲೋಕದ ಸಂಕಟ, ತಪ್ತತೆಗಳಿಗೆ ಕಿವಿಯಾಗುತ್ತ ಮಹಿಳಾ ಅಧ್ಯಯನವನ್ನು ತಮ್ಮ ಭವಿಷ್ಯದ ಆದ್ಯತೆಯನ್ನಾಗಿಸಿಕೊಂಡರು.

ಹೆಣ್ಣು ಅರಿವು ಎಂಬ ಸಮಷ್ಠಿಯ ಶೋಧದಲ್ಲಿ, ಹೆಣ್ಣು ಎಂಬುದನ್ನು ಹೆಣ್ಣು ದೇಹ ಮತ್ತು ಪ್ರಜ್ಞೆ ಈ ಎರಡು ನೆಲೆಗಳಲ್ಲಿ ಅರ್ಥೈಸುವ ಡಾ. ಗೀತಾ ವಸಂತ ಅವರು ಗಂಡಾಳಿಕೆಯನ್ನು ಪ್ರಶ್ನಿಸುತ್ತ ಪಿತೃ ಪ್ರಧಾನ ವ್ಯವಸ್ಥೆ, ಪಾವಿತ್ರ್ಯ ಮತ್ತು ಪಾತಿವ್ರತ್ಯಗಳೆಂಬ ಜ್ವಲಂತ ಸಂಗತಿಗಳನ್ನ ದಿಟ್ಟ ಸ್ವರದಲ್ಲಿ ಪ್ರತಿರೋಧಿಸುತ್ತಲೇ ಬಂದವರು. ಅವರ ಕತೆಗಳಲ್ಲಿನ ಶಾಹಿದ, ಸುನೀತಾ, ಹನುಮಕ್ಕ, ತುಂಗ್‍ಚಿಕ್ಕಿ ಇಂಥ ಹತ್ತಾರು ಪಾತ್ರಗಳು ನಿರಾಳವಾಗಿ ನಮ್ಮ ಆಳಕ್ಕಿಳಿದು ನಮ್ಮೊಳಗನ್ನ ಅಲುಗಾಡಿಸುತ್ತವೆ. ಹೆಣ್ಣಿನ ದೇಹದಾಚೆಗಿನ ಅರಿವನ್ನು ವಿಶ್ಲೇಷಿಸುತ್ತಾ ಸುಪ್ತಮನಗಳನ್ನ ಸರಾಗವಾಗಿ ತಲುಪುವ ಇವರು ಹೆಣ್ಣು ಲೋಕದ ಅಚ್ಚರಿ. ಇವರ “ಭವಚಕ್ರಪ್ರವರ್ತಿನಿ”, “ದರ್ಶನ”, “ನೀವೇನೂ ತಲೆಕೆಡಿಸಿಕೊಳ್ಳಬೇಡಿ”, “ಮಾಯೆ”, “ಉಗುಳಬೇಕು ನುಂಗಬೇಕು”, “ಮಹಾನಗರದಲ್ಲಿ ಮಹಾಮಾಯೆ”, “ಅಗ್ನಿ ಮತ್ತು ಮಹಿಳೆ”, “ಜೀವದ ಗುರುತು”, “ಹಮ್ ನಹಿ ಜೀತ್ ಸಕೇ” ಮೊದಲಾದ ಹಲವಾರು ಕವನಗಳು, “ಹೊಸದಿಗಂತ ಹೊಸದಾರಿ”, “ಚೌಕಟ್ಟಿನಾಚೆಯವರು”, “ಅಕ್ಷರದಾಹ”, “ಅವಳ ಅರಿವು” ಇಂಥ ಹತ್ತು ಹಲವು ವಿದ್ವತ್ತ್ ಪೂರ್ಣ ಕೃತಿಗಳು ಸ್ತ್ರೀ ಜಗತ್ತಿನ ಮಹಾಕಾವ್ಯ ಎಂದರೆ ಅತಿಶಯೋಕ್ತಿಯಲ್ಲ.

ಇನ್ನು ಬೇಂದ್ರೆ ಎಂಬ ಅನಂತವನ್ನ ಕಂಡು, ಅರ್ಥೈಸಿಕೊಂಡವರಲ್ಲಿ ಡಾ. ಗೀತಾ ವಸಂತ ಪ್ರಮುಖರು. ಬೇಂದ್ರೆ ಕಾವ್ಯಗಳಲ್ಲಿನ ಇನ್ನೊಂದು ಮುಖ “ಅವಧೂತ ಪ್ರಜ್ಞೆಯ” ಮೂಲಕ ಬೇಂದ್ರೆಯವರನ್ನ ಅರಿಯಲು ಹಚ್ಚಿದ ಗೀತಾ ವಸಂತ ಅವರು ಬೇಂದ್ರೆ ಕಾವ್ಯದಲ್ಲಿ “ಅವಧೂತ ಪ್ರಜ್ಞೆ” ಮತ್ತು “ಬೀಜದೊಳಗಣ ವೃಕ್ಷ”- ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪ ಎಂಬೆರಡು ಮಹತ್ತರ ಕೃತಿಗಳನ್ನ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವರ ‘ಅಂಬಿಕಾತನಯ’ ಕವಿತೆಯು ಬೇಂದ್ರೆ ಕುರಿತ ಇವರ ಅಗಾಧವಾದ ಜ್ಞಾನಕ್ಕೆ ಸಾಕ್ಷಿಯಂತಿದೆ. ಈ ಕವಿತೆಯ ಕೆಲ ಸಾಲುಗಳು ಇಂತಿವೆ;

ಆಕಾಶಕ್ಕೆ ಕೈ ಚಾಚಿ
ರಸದ ಪಾತ್ರೆತುಂಬಿದರಸ ಸಿದ್ಧ
ಎದೆಕೋಗಿಲೆಯ ಉಲಿಗೆ
ಶೃತಿಗೊಂಡ ಪದಗಳ ಮಿಡಿದು ಆಡಿಸುವ ಗಾರುಡಿಗ
ಪಟ್ಟಪಾಡುಗಳ ಹಾಡ
ನೆಲದೆದೆಯಲ್ಲಿ ಬರೆದು
ನಾದಝರಿಯಲ್ಲಿ ತೋಯಿಸಿದ
ಹುಟ್ಟು ಹಾಡುಗಾರ.

ಅನುಭಾವದ ಉನ್ಮನಿಯನ್ನ ತುಂಬಿಕೊಂಡ ಬೇಂದ್ರೆ ಕಾವ್ಯದ ಒಳಸುಳಿಯ ಸೆಳೆತಕ್ಕೆ ಸಿಲುಕಿದ ಇವರು ಈ ಗಾರುಡಿಗನ ಕಾವ್ಯದ ಕುರಿತು ಬಿಡಲಾರದಂತೆ ಗುಂಯ್ಗುಡುವ ದುಂಬಿ ಇದು, ಗುಂಗು ಇದು, ಜೀವದಜೊತೆ ಮಾತಾಡುವ ನಾದ ಇದು, ಎಲ್ಲ ಸಮಕಾಲೀನ ಎಚ್ಚರದ ಜೊತೆಗೂ ಎಚ್ಚರ ತಪ್ಪದಂತೆ ಜಾಗೃತವಾಗಿಡುವ ಕಂಪಿನ ಕರೆಯಿದು, ಇದು ಅರ್ಥಕೊಗ್ಗದ ಮಂತ್ರದಂತೆ ನನ್ನೊಳಗೆ ಅನುರಣಿಸುತ್ತಲೇ ಇರುತ್ತದೆ ಎನ್ನುತ್ತಾರೆ.

ಕುವೆಂಪು ಬೇಂದ್ರೆ ಮೊದಲ್ಗೊಂಡು ಶರಣ ಸಾಹಿತ್ಯದ ಬಗೆಗಿನ ಇವರ ಒಳಗಣ್ಣ ಚೂಪುನೋಟ ಮತ್ತು ಅಧ್ಯಯನದ ಶಿಸ್ತು ಎಲ್ಲರಲ್ಲೂ ಬೆರಗು ಮೂಡಿಸುವಂಥದ್ದು. ಕೃಷ್ಣರಂದ್ರದಗುರುತ್ವ ಸೆಳೆತಕ್ಕೆ ಸಿಲುಕಿ ಅದರೊಳಗೆ ಬಿದ್ದರೆ ಮತ್ತೊಂದು ಬ್ರಹ್ಮಾಂಡದಲ್ಲಿ ಮೇಲೇಳುವ ರೀತಿ ಇವರಅರಿವಿನ ಸೆಳೆತಕ್ಕೆ ಸಿಲುಕಿದರೆ ಜ್ಞಾನದ ಬ್ರಹ್ಮಾಂಡವನ್ನ ತಲುಪುವುದಂತು ಖಚಿತ.

ಸಾಧನೆಯ ಇಷ್ಟೆಲ್ಲಾ ಸ್ವರಗಳ ನಡುವೆ ಅನಂತದೆಡೆಗೆ ದೃಷ್ಟಿ ನೆಡುತ್ತಾ, ಸಾಹಿತ್ಯ ಲೋಕದಲ್ಲಿ ನಿಶ್ಚಲ ತಾರಕೆಯಾಗಿ ಮಿನುಗುತಿರುವ ಡಾ. ಗೀತಾ ವಸಂತ ಅವರು ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕಿ. ತುಮಕೂರು ವಿಶ್ವವಿದ್ಯಾಲಯದ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದಲ್ಲಿ ಬೋಧನೆಯ ಮೂಲಕ ಅರಿವನ್ನ ಬಿತ್ತುತ್ತಿರುವ ವಿದ್ಯಾರ್ಥಿಗಳ ಪ್ರೀತಿಯ ಅಧ್ಯಾಪಕಿ. ಜಾತಿಧರ್ಮ ಲಿಂಗಗಳನ್ನ ಮೀರಿ ವಿದ್ಯಾರ್ಥಿಗಳನ್ನು ಸಲಹುತ್ತಿರುವ ಅಪ್ಪಟ ಮಾತೃಹೃದಯಿ ಗುರು. ಭಯ ಶಂಕೆಗಳ ಕತ್ತಲಲ್ಲಿ ತಳಮಳಿಸುವ ಎಷ್ಟೋ ಮನಸುಗಳಿಗೆ ದಾರಿದೀಪ. ವಿದ್ಯಾರ್ಥಿಗಳಲ್ಲಿಯ ಪ್ರತಿಭೆಯನ್ನ ಸೂಕ್ಷ್ಮವಾಗಿ ಗುರುತಿಸಿ ಗೆಲುವು ತುಂಬುವ ಸ್ಪೂರ್ತಿಯ ಚಿಲುಮೆ. ಶಿಷ್ಯರ ಸಾಧನೆಯಲ್ಲೇ ತಮ್ಮ ಖುಷಿಯನ್ನು ಕಾಣುವ ಅಕ್ಕರೆಯ ತೊರೆ. ಗೆದ್ದಾಗ ಬೆನ್ನುತಟ್ಟುವ ಸೋತಾಗ ಶಕ್ತಿ ತುಂಬಿ ಮೇಲೆತ್ತುವ ಆಪ್ತ ಚೇತನ. ಇಂಥ ಗುರುವಿನ ಸಹಸ್ರಾರು ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬಳು ಎಂಬ ಹೆಮ್ಮೆ ನನಗಿದೆ. ಇವರ ಬರಹಗಳು ಪ್ರತಿ ಬಾರಿ ನನ್ನನ್ನುಆವರಿಸುವಾಗ ಹಸಿ ಎದೆಯಲ್ಲಿ ಗಟ್ಟಿಕಾಳುಗಳು ಮೊಳೆ ತೇಳುತ್ತವೆ.

ಅಗಣಿತ ತಾರಾಗಣಗಳ ನಡುವೆ
ನಿನ್ನನೆ ನೆಚ್ಚಿಹೇ ನಾನು
ನನ್ನೀ ಜೀವನ ಸಮುದ್ರಯಾನಕೆ
ಚಿರಧ್ರುವ ತಾರಯು ನೀನು

ಕುವೆಂಪು ಅವರ ಈ ಸಾಲುಗಳನ್ನ ನನ್ನ ಪ್ರೀತಿಯ ಗುರುಗಳಿಗೆ ಮೀಸಲಾಗಿರಿಸಿದ್ದೇನೆ. ಅವರ ಕೈಗಳಲ್ಲಿ ಅಕ್ಷರದ ಬ್ರಹ್ಮಾಂಡವ ಕಂಡಿದ್ದೇನೆ, ಆ ಭರವಸೆಯ ಕೈಗಳ ಬಿಡಲೊಲ್ಲೆ. ಪ್ರೀತಿಯ ಬಡಿಸಿ ಜ್ಞಾನವ ಉಣಿಸುವ ನನ್ನ ಅರಿವಿನ ಗುರುವಿಗೆಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು. ನಾನು ಎಂದಿಗೂ ಹೇಳುವಂತೆ ಭಕ್ತಿಯಿಂದಲೇ ನಿಯಮ ಮೀರಿ ನಿಮ್ಮ ಪ್ರೀತಿಸುವೆ.....

- ಪ್ರಿಯಾಂಕಾ ಚಕ್ರಧರ

MORE FEATURES

ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ: ಚಿಂತಾಮಣಿ ಕೊಡ್ಲೆಕೆರೆ

03-05-2024 ಬೆಂಗಳೂರು

“ಭಾವಗಳ ಬಂಧದಲಿ” ಕವಿತೆ ನಿಜಕ್ಕೂ ತುಂಬ ಬಿಗಿಯಾಗಿದೆ. ತನ್ನ ಭಾವಮಯತೆಯನ್ನು ಶಕ್ತಿಯಾಗಿಸಿಕೊಂಡ ಹೆಣ್ಣಿನ ...

ದ್ವಾಪರ ಯುಗಕ್ಕೆ ಮುಗಿಯಲಿಲ್ಲ ಮಹಾಭಾರತ, ಇಂದಿಗೂ ಪ್ರಸ್ತುತ ಶಕುನಿಯ ಸಂಚು

03-05-2024 ಬೆಂಗಳೂರು

'400 ಪುಟಗಳ ದೊಡ್ಡ ಕಾದಂಬರಿಯನ್ನು ಓದಿಸುವ ಶೈಲಿಯಲ್ಲಿ ಬರೆಯುವಲ್ಲಿ ಜೋಗಿ ಸಂಪೂರ್ಣ ಯಶಸ್ವಿ ಅಗಿದ್ದಾರೆ. ಮಹಾಭಾರತ...

ತೇಜಸ್ವಿಯವರು ತಮ್ಮ ತಂದೆಯ ನೆನಪುಗಳಲ್ಲಿ ನೇಯ್ದ ಅದ್ಭುತ ಕೃತಿ 'ಅಣ್ಣನ ನೆನಪು'

03-05-2024 ಬೆಂಗಳೂರು

"ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ತೇಜಸ್ವಿಯವರು ಬರೆಯದ ವಿಷಯವಿಲ್ಲ ಎನ್ನಬಹುದು. ಕಥೆ, ಸಾಹಿತ್ಯ ವಿಜ್ಞಾನ ...