ಅಲ್ಪಕಾಲದ ಕಿರುತೆರೆ ಹಾಗೂ ಬೆಳ್ಳಿತೆರೆಗಳ ಅನುಭವ ಈ ಕಾದಂಬರಿ : ಆಶಾ ರಘು 


" ಈ ಕಾದಂಬರಿಯನ್ನು ನನ್ನ ವೈಯಕ್ತಿಕ ಅನುಭವದಿಂದ ಕಟ್ಟಿದ್ದಲ್ಲ! ಆದರೆ ನನ್ನ ಅಲ್ಪಕಾಲದ ಕಿರುತೆರೆ ಹಾಗೂ ಬೆಳ್ಳಿತೆರೆಗಳ ಅನುಭವಗಳು ಈ ಕೃತಿಯನ್ನು ತಾಂತ್ರಿಕವಾಗಿ ನಿಭಾಯಿಸುವಲ್ಲಿ ಸಹಾಯಕ್ಕೆ ಬಂದಿವೆ " ಎನ್ನುತ್ತಾರೆ ಕಾದಂಬರಿಗಾರ್ತಿ ಆಶಾ ರಘು. ಅವರ ‘ಚಿತ್ತರಂಗ’ ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ..

ಎಪ್ಪತ್ತು- ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಹೊಂದಿರುವ ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಹಾಗೂ ಸನ್ನಿವೇಶಗಳೂ ಕೇವಲ ಕಾಲ್ಪನಿಕವಾಗಿದ್ದು, ಯಾರದೇ ನಿಜ ಬದುಕು ಅಥವಾ ಘಟನೆಗಳಿಗೆ ಸಂಬಂಧಪಟ್ಟುದಲ್ಲ. ಚಿತ್ರ ನಿರ್ದೇಶಕನೊಬ್ಬನ ಹಾಗೂ ಅವನೊಂದಿಗೆ ನಿಕಟ ಸ್ನೇಹವಲಯಕ್ಕೆ ಬರುವ ಕಲಾವಿದೆಯರ ಬದುಕಿನ ತೆರೆಮರೆಯ ಅಂತರಂಗವೇ ‘ಚಿತ್ತರಂಗ’. ಕೇವಲ ತಾಂತ್ರಿಕ ಅಥವಾ ಮನೋಧರ್ಮದ ದೃಷ್ಟಿಯಿಂದ ಇದು ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಉಳ್ಳದ್ದಾಗಿದೆಯೆಂದು ಉಲ್ಲೇಖಿಸುತ್ತಿದ್ದೇನೆಯೋ ಹೊರತು, ಉಳಿದಂತೆ ಇದು ಯಾವ ಕಾಲಘಟ್ಟದಲ್ಲಿ ಬೇಕಾದರೂ ಕಲ್ಪಿಸಿಕೊಳ್ಳಬಹುದಾದ ಕಥೆಯೇ ಆಗಿದೆ.

ನಾನು ರಂಗಭೂಮಿಯ ಹಿನ್ನೆಲೆಯಿಂದ ಬಂದವಳು. ‘ಅಭಿನಯ ತರಂಗ’ದಲ್ಲಿ ರಂಗಭೂಮಿಯ ಡಿಪ್ಲೊಮೊ ಮಾಡಿ, ಕೆಲವು ನಾಟಕಗಳಲ್ಲಿ ಅಭಿನಯಿಸಿದೆ. ಕೆಲಕಾಲ ‘ನವರಸ ಕಲಾಶಾಲೆ’ ಎಂಬ ಕಲಾಶಾಲೆಯನ್ನು ಸ್ಥಾಪಿಸಿ ರಂಗಭೂಮಿ ಹಾಗೂ ಸಿನಿಮಾ ವಿಭಾಗದ ವಿದ್ಯಾರ್ಥಿಗಳಿಗೆ ಹಲವು ನಾಟಕಗಳನ್ನು ರಚಿಸಿ, ಸ್ವತಃ ನಿರ್ದೇಶನವನ್ನೂ ಮಾಡಿದೆ. ಟಿ.ಎನ್.ಸೀತಾರಾಮ್, ನಾಗತಿಹಳ್ಳಿ ಚಂದ್ರಶೇಖರ್, ಎಂ.ಎನ್.ಜಯಂತ್ ಮೊದಲಾದವರೊಂದಿಗೆ ಕಿರುತೆರೆಯ ಧಾರಾವಾಹಿಗಳಿಗೆ ಕಥಾವಿಸ್ತರಣೆ ಹಾಗೂ ಸಂಭಾಷಣೆ ವಿಭಾಗದಲ್ಲಿ ಕೆಲಸ ಮಾಡಿದೆ. ಸಿನಿಮಾವೊಂದಕ್ಕೆ ಸಹಾಯಕ ನಿರ್ದೇಶಕಿಯಾಗಿ ಕೂಡಾ ಕಾರ್ಯ ನಿರ್ವಹಿಸಿದೆ. ಆನಂತರ ಉಪನ್ಯಾಸಕಿಯಾಗಿ ಕೆಲಕಾಲ ದುಡಿದು, ನಂತರ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡು, ಪೂರ್ಣ ಪ್ರಮಾಣದಲ್ಲಿ ಅದರಲ್ಲಿಯೇ ನಿರತಳಾಗಿ ನಿಂತುಬಿಟ್ಟೆ.

ನಾನು ಈ ಕಾದಂಬರಿಯನ್ನು ನನ್ನ ವೈಯಕ್ತಿಕ ಅನುಭವದಿಂದ ಕಟ್ಟಿದ್ದಲ್ಲ! ಆದರೆ ನನ್ನ ಅಲ್ಪಕಾಲದ ಕಿರುತೆರೆ ಹಾಗೂ ಬೆಳ್ಳಿತೆರೆಗಳ ಅನುಭವಗಳು ಈ ಕೃತಿಯನ್ನು ತಾಂತ್ರಿಕವಾಗಿ ನಿಭಾಯಿಸುವಲ್ಲಿ ಸಹಾಯಕ್ಕೆ ಬಂದಿವೆ. ನಾನು ನನ್ನ ಬಿಡುವಿನ ವೇಳೆಗಳಲ್ಲಿ ಯಾವಾಗಲಾದರೊಮ್ಮೆ ಓಟಿಟಿಗಳಲ್ಲಿ ಸಿನಿಮಾಗಳನ್ನು ನೋಡುತ್ತೇನೆ. ಅದಕ್ಕಿಂತಲೂ ಹೆಚ್ಚಾಗಿ ಯೂಟ್ಯೂಬಿನಲ್ಲಿ ಹಳೆಯ ಕನ್ನಡ ಚಿತ್ರಗಳನ್ನು ನೋಡುತ್ತೇನೆ. ಹಳೆಯ ಸಿನಿಮಾಗಳತ್ತಲೇ ಆಕರ್ಷಿತಳಾದ ನನಗೆ, ಅವುಗಳನ್ನು ನೋಡುತ್ತಾ ನೋಡುತ್ತಾ ಚಿತ್ರದೊಳಗೆ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾ ಈ ‘ಚಿತ್ತರಂಗ’ದಂತಹ ಕಥೆಯನ್ನು ಆ ಕಾಲಘಟ್ಟದಲ್ಲಿ ಮತ್ತು ಆಗಿನ ಸೀಮಿತ ಚೌಕಟ್ಟಿನೊಳಗೆ ಹೆಣೆಯಲು ಸಾಧ್ಯವಾಯಿತು.

ಮುನ್ನುಡಿಯಲ್ಲಿ ಎಚ್.ಎಸ್.ಸತ್ಯನಾರಾಯಣ ಅವರು ಈ ಕಾದಂಬರಿಯು ಆ ಕಾಲದ ಕನ್ನಡದ ಸುಪ್ರಸಿದ್ಧ ನಿರ್ದೇಶಕರೊಬ್ಬರ ಕುರಿತಾದದ್ದು ಇರಬಹುದೇ ಅನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ. ಆ ಕಾಲಘಟ್ಟದ ಎಲ್ಲ ಜನಪ್ರಿಯ ನಿರ್ದೇಶಕರೂ, ತಾರೆಯರೂ, ಅವರುಗಳ ಜೀವನದ ಕಥೆಗಳೂ ನನ್ನನ್ನು ಪ್ರಭಾವಿಸಿರುವುದು ನಿಜ. ಆದರೆ, ನಾನು ಕಾದಂಬರಿಯನ್ನು ಅದು ಎಳೆದುಕೊಂಡ ಹೋದ ಹಳ್ಳ ದಿಣ್ಣೆ ದಾರಿಯಲ್ಲೆಲ್ಲಾ ಸಾಗಿ, ಸಂದಿಗೊಂದಿಗಳಲ್ಲೆಲ್ಲಾ ತಿರುಗಿ, ಹಿಗ್ಗಿಸಿ ಕುಗ್ಗಿಸಿ ಕೆಲವೊಮ್ಮೆ ಗೌಣವಾಗಿಯೂ, ಕೆಲವೊಮ್ಮೆ ಅತಿರೇಕವಾಗಿಯೂ ಸಂದರ್ಭಗಳನ್ನು ಚಿತ್ರಿಸಿ ನನ್ನದೇ ಆದ ರೀತಿಯಲ್ಲಿ ಪಾತ್ರಪೋಷಣೆ ಮಾಡಿದ್ದೇನೆ. ಕಥೆಯನ್ನು ನನ್ನಿಷ್ಟಕ್ಕೂ, ಕಾದಂಬರಿಯು ತಾನೇ ಬೇಡಿದಂತೆಯೂ ಹುಲುಸಾಗಿ ಬೆಳೆಸಿದ್ದೇನೆ! ಈ ಕಾದಂಬರಿಯಲ್ಲಿ ಬರುವ ಪಾತ್ರಗಳ ಕಥೆಯನ್ನು ನಿಜ ವ್ಯಕ್ತಿಗಳ ಕಥೆಯೆಂದು ಭಾವಿಸಿದರೆ ಬಹಳ ಅನಾಹುತವೂ, ಅಪಚಾರವೂ ಆಗುವುದು. ಆದ್ದರಿಂದ ಓದುಗರು ಇದನ್ನು ಕೇವಲ ಒಂದು ಸೃಜನಶೀಲ ಕಲ್ಪಿತ ಕಾದಂಬರಿಯಾಗಿಯಷ್ಟೇ ಭಾವಿಸಬೇಕಾಗಿ ವಿನಂತಿ.

ಇದಾಗಲೇ ಕೆಲವು ಕಡೆ ಈ ಕುರಿತು ಹಂಚಿಕೊಂಡಿದ್ದೇನೆಯಾದರೂ, ಈ ಕಾದಂಬರಿಯ ಸಂದರ್ಭ ಮತ್ತೆ ಅದನ್ನು ಹೇಳಲೇಬೇಕು. ನಾನು ‘ಆವರ್ತ’ ಕಾದಂಬರಿ ಅನ್ನು ಬರೆದು ಮುಗಿಸಿದ ಮೇಲೆ ಸುಮಾರು ಆರು ವರ್ಷಗಳ ಕಾಲ ಬೇರೆ ಏನನ್ನೂ ಬರೆಯಲು ಸಾಧ್ಯವಾಗಲಿಲ್ಲ. ‘ಆವರ್ತ’ದಂತಹ ಕಾದಂಬರಿ ರಚಿಸಿದೆನೆಂಬ ಗರ್ವ ಬಂದಿತೋ, ಅಥವಾ ಅದು ನನ್ನಲ್ಲಿದ್ದ ಸಾರವನ್ನೆಲ್ಲಾ ಹೀರಿಕೊಂಡುಬಿಟ್ಟಿತೋ ತಿಳಿಯದು! ಬರೀ ಕಟ್ಟೋದು, ಕೆಡವೋದು ಮಾಡುತ್ತಾ ಕೂತೆ. ಸಾಮಾನ್ಯ ವಾಕ್ಯ ರಚನೆಗೂ ತಿಣುಕುವಂತಹ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಅದರಿಂದ ಹೊರ ಬರುವ ಪ್ರಯತ್ನದಲ್ಲಿ ‘ಗತ’ ಕಾದಂಬರಿಯನ್ನು ಬರೆದೆ. ಅದು ತಾಂತ್ರಿಕವಾಗಿ ಗೆದ್ದಿತೇ ಹೊರತು ನನಗೆ ವೈಯಕ್ತಿಕವಾಗಿ ತೃಪ್ತಿ ನೀಡಲಿಲ್ಲ. ಅದರ ನಂತರ ‘ಮಾಯೆ’ ಕಾದಂಬರಿಯನ್ನು ರಚಿಸಿದೆ. ಅಲ್ಲಿ ಸ್ವಲ್ಪಮಟ್ಟಿಗೆ ನನ್ನ ನಿರೂಪಣಾ ಸಾಮರ್ಥ್ಯ ಕುದುರಿತು. ಇದೀಗ ‘ಚಿತ್ತರಂಗ’ ರಚಿಸುವ ಹೊತ್ತಿಗೆ ಮತ್ತೆ ‘ಆವರ್ತ’ ರಚಿಸಿದಾಗಿನ ಶಕ್ತಿ, ಸಾಮರ್ಥ್ಯಗಳು ಕೂಡಿಕೊಂಡುವು. ಇನ್ನು ಮುಂದಿನ ಬರವಣಿಗೆಯೂ ಇದೇ ಹಾದಿಯಲ್ಲಿ ಸಾಗೀತೆಂಬ ನಂಬಿಕೆಯಲ್ಲಿ ಹಿಂದೆ ಕಟ್ಟಿ, ಕೆಡವಿದ ವಸ್ತುಗಳ ಟಿಪ್ಪಣಿಗಳನ್ನೂ ತಿರುವಿಹಾಕುತ್ತಿದ್ದೇನೆ. ಈ ಕಾದಂಬರಿಯನ್ನು ಬರೆದಿಟ್ಟು, ಮುದ್ರಣಕ್ಕೆ ಹೋಗಲು ಕೆಲವಾರು ಕಾರಣಗಳಿಂದ ತಡವಾಯಿತಾದರೂ, ನಾನು ವಿರಮಿಸಲಿಲ್ಲ. ಹೊಸ ಕಾದಂಬರಿಯೊಂದನ್ನು ಆರಂಭಿಸಿಯೇ ಬಿಟ್ಟೆ. ಬಹಳ ಹಿಂದೆಯೇ ಅದರ ಪರಿಕಲ್ಪನೆ ಮನಸ್ಸಿನಲ್ಲಿದ್ದರಿಂದ ಆರಂಭಿಸುವುದು ಕಷ್ಟವೇನೂ ಆಗಲಿಲ್ಲ. ಇನ್ನೇನು ಕೆಲವೇ ದಿನಗಳ ಅಂತರದಲ್ಲಿ ಆ ಕಾದಂಬರಿಯೂ ನಿಮ್ಮ ಮಡಿಲು ಸೇರೀತು.

ನಾನು ಬಹಳ ಹಿಂದೆ ಕಿರುತೆರೆ, ಬೆಳ್ಳಿತೆರೆಗಳಿಗಾಗಿ ಕೆಲಸ ಮಾಡಿದ್ದರೂ, ಈ ಕಾದಂಬರಿಗಾಗಿ ತಾಂತ್ರಿಕವಾಗಿ ಹಲವು ಅಂಶಗಳನ್ನು ಮತ್ತೆ ನೆನಪಿಗೆ ತಂದುಕೊಳ್ಳಬೇಕಾಯಿತು. ಇದಕ್ಕೆ ನನಗೆ ನೆರವಾದವರು ನನ್ನ ಅಭಿನಯ ತರಂಗದ ಸ್ನೇಹಿತರೂ, ಕಿರುತೆರೆ, ಬೆಳ್ಳಿತೆರೆಗಳಲ್ಲಿ ಗುರುತಿಸಿಕೊಂಡಿರುವ ನಟರೂ ಆದ ‘ದಂಡುಪಾಳ್ಯ’ ಖ್ಯಾತಿಯ ಜಯದೇವ್ ಮೋಹನ್ ಹಾಗೂ ‘ಕವಲುದಾರಿ’ ಖ್ಯಾತಿಯ ಸಂಪತ್ ಅವರುಗಳು. ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ರಂಗಭೂಮಿಯ ಪಾಠಗಳನ್ನು ಕಲಿಸಿದ ಅಭಿನಯತರಂಗ ನಾಟಕ ಶಾಲೆಗೂ, ಅದರ ಪ್ರಾಂಶುಪಾಲರಾದ ಗೌರಿದತ್ತು ಅವರಿಗೂ ವಂದನೆಗಳು.

ನಾನು ವೃತ್ತಿರಂಗಭೂಮಿಯ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕೆಂದು ಹವಣಿಸಿದಾಗ, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ ಕಪ್ಪಣ್ಣ ಅವರು ನನಗೆ ಆರ್.ಪರಮಶಿವನ್ ಅವರ ಪರಿಚಯ ಮಾಡಿಸಿದರು. ಅವರಿಂದ ಆ ಕಾಲದ ವೃತ್ತಿರಂಗಭೂಮಿಯ ಸಾಕಷ್ಟು ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಂಡೆ. ಅವರಿಬ್ಬರಿಗೂ ಇದಕ್ಕಾಗಿ ವಂದಿಸುತ್ತೇನೆ. ಈ ಕಾದಂಬರಿಗೆ ಸೂಕ್ತ ಸಲಹೆಗಳನ್ನು ನೀಡಿದ ನನ್ನ ಪತಿ ಕೆ.ಸಿ.ರಘು ಅವರಿಗೂ ಹಾಗೂ ಭಾವ ಹಂದಲಗೆರೆ ಗಿರೀಶ್ ಅವರಿಗೂ ನನ್ನ ಕೃತಜ್ಞತೆಗಳು ಸಲ್ಲಲೇಬೇಕು. ಸಹಕಾರವನ್ನು ನೀಡಿದ ತಾಯಿ ಸುಲೋಚನಾ, ಮಗಳು ಉಪಾಸನಾ, ಆಂಟಿ ಲಕ್ಷ್ಮಮ್ಮ, ತಂಗಿಯರಾದ ಪದ್ಮಾ ಹಾಗೂ ದೀಪ ಅವರುಗಳಿಗೂ, ತಂಗಿಯರ ಮಕ್ಕಳಾದ ಶುಭಾಷಿಣಿ, ಜೀವನ್ಮುಖಿ ಹಾಗೂ ಶೂನ್ಯರಿಗೂ, ದೂರದಲ್ಲಿದ್ದುಕೊಂಡೇ ಹಾರೈಸಿದ ಇನ್ನೊಬ್ಬ ಭಾವನವರಾದ ವೆಂಕಟೇಶ್ ಅವರಿಗೂ ನನ್ನ ಪ್ರೀತಿಯ ವಂದನೆ. ಮನೆಯವರಂತೆಯೇ ಎಂದೂ ಸಹಕಾರವನ್ನು ನೀಡುವ ಸಹೋದರ ಮಿತ್ರರಾದ ಚಂದ್ರಶೇಖರ ಕುಲಗಾಣ ಹಾಗೂ ಅನಂತ್ ಕುಣಿಗಲ್ ಅವರಿಗೂ ನಲ್ಮೆಯ ನೆನಕೆಗಳು.

- ಆಶಾ ರಘು

ಆಶಾ ರಘು ಅವರ ಲೇಖಕ ಪರಿಚಯಕ್ಕಾಗಿ

MORE FEATURES

ಮಹಾಭಾರತ ಕೃತಿಯನ್ನು ಓದಲು ಪ್ರೇರೇಪಿಸಿದ ಕಾದಂಬರಿ : ಕಾರ್ತಿಕೇಯ

27-03-2023 ಬೆಂಗಳೂರು

"ಈ ಕಾದಂಬರಿಯನ್ನು ಮುಗಿಸಿ ಎಷ್ಟೋ ದಿವಸಗಳು ಸರಿದುಹೋಗಿದೆ, ಆದರೆ ಮನಸ್ಸಿನಲ್ಲಿರುವ ಯಯಾತಿ, ಶರ್ಮಿಷ್ಠೆಯರನ್ನು ಬೀ...

ಜನರ ಯೋಚನಾ ಶಕ್ತಿ ಬದಲಿಸುವ ಕೇಂದ್ರ ನಾಟಕ : ಮೊಹಮ್ಮದ್ ಅಜರುದ್ದೀನ್

27-03-2023 ಬೆಂಗಳೂರು

" ರಂಗಭೂಮಿಯಲ್ಲಿ ಬರುವ ಒಂದೊಂದು ಪಾತ್ರಗಳೂ ಜನರ ಜೀವನಕ್ಕೆ ಅನುಗುಣವಾಗಿರುತ್ತವೆ. ಜನರ ಯೋಚನಾ ಶಕ್ತಿಯನ್ನು ಬದಲಿಸ...

ಹಸ್ತಿನಾವತಿ ಓದಿದ ನಂತರ ಅನೇಕ ಬಯಕೆಗಳು ನನ್ನನು ಕಾಡುತ್ತಿದೆ: ರಂಜನಿ ರಾಘವನ್

26-03-2023 ಬೆಂಗಳೂರು

"ಯಾವುದೇ ಸಮಸ್ಯೆಗೆ ಸೋಶಿಯಲ್ ಮಿಡಿಯಾ ನಮಗೆ ತಕ್ಷಣ ಪ್ರತಿಕ್ರಿಯೆ ಮಾಡಲು ಜಾಗಮಾಡಿಕೊಡುತ್ತದೆ, ಆದರೆ ಅದೇ ಸತ್ಯವಲ್...