ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

Date: 08-05-2024

Location: ಬೆಂಗಳೂರು


"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್ಟು ಹಾಕಿದರು. ಸರ್ವರು ಈ ದಾರಿಯನ್ನು ಅನುಸರಿಸುವ ಸ್ವಾತಂತ್ಯ್ರವನ್ನು ನೀಡಿದರು. ಇದರಿಂದಾಗಿ ಎಲ್ಲಾ ಜಾತಿ ಸಮುದಾಯಗಳು ಭಕ್ತಿ ಮಾರ್ಗವನ್ನು ಅನುಸರಿಸಿ ತಮ್ಮ ಅಭಿವ್ಯಕ್ತಿಯನ್ನು ಮಾಡಿದರು," ಎನ್ನುತ್ತಾರೆ ಹಳೆಮನೆ ರಾಜಶೇಖರ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ‘ಅಂಬಿಗರ ಚೌಡಯ್ಯನ ವಚನ'ಗಳ ಕುರಿತು ಬರೆದಿದ್ದಾರೆ.

ವಚನಕಾರರು ಹಲವು ವೃತ್ತಿಗಳ ಕಾಯಕ ಜೀವಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಅರಿವಿನ ಅನುಸಂಧಾನವನ್ನು ಮಾಡಿದ್ದು ನಾಡಿನ ಚರಿತ್ರೆಯಲ್ಲಿ ಹೊಸ ಚಿಂತನೆಗೆ ನಾಂದಿಯಾಯಿತು. ಪರಂಪರಾನುಗತವಾಗಿ ಬಂದಿದ್ದ ಸಾಮಾಜಿಕ ತಿಳುವಳಿಕೆಗೆ ವಿಭಿನ್ನವಾದ ತಿಳುವಳಿಕೆಯನ್ನು ತಮ್ಮ ನಡೆ ನುಡಿಯ ಮೂಲಕ ಕಟ್ಟಿಕೊಟ್ಟರು. ಬಹಿಸ್ಕೃತವಾದ ಸಮಾಜವನ್ನು ಕೇಂದ್ರವಾಗಿಟ್ಟುಕೊಂಡು ಆಲೋಚಿಸುವ ವಿಧಾನವನ್ನು ಹುಟ್ಟು ಹಾಕಿದರು. ಅದಕ್ಕೆ ಅನುಭವವೇ ಮುಖ್ಯ ದೀವಿಗೆಯಾಯಿತು. ಅನುಭವವನ್ನು ತುಂಬಿಕೊಂಡ ಪ್ರತಿಯೊಬ್ಬರು ಅಭಿವ್ಯಕ್ತಿಯ ಸಾಧ್ಯತೆಯನ್ನು ಕಂಡುಕೊಳ್ಳಬಹುದೆಂಬ ಆತ್ಮವಿಶ್ವಾಸವನ್ನು ತುಂಬಿದರು. ಜಾತಿ, ಧರ್ಮ ಕಾರಣಕ್ಕೆ ಅಕ್ಷರ ಜ್ಞಾನಕ್ಕೆ ತೆರೆದುಕೊಳ್ಳದ ಸಮುದಾಯವನ್ನು ವಚನಕಾರರು ಅಕ್ಷರಜ್ಞಾನದ ಬಾಗಿಲನ್ನು ತೆರೆದರು. ಅಲ್ಲಿ ನೂರಾರು ವೃತ್ತಿಪರರು ಕಾಯಕ ಅನುಭವದೊಂದಿಗೆ ತಮ್ಮ ಚಿಂತನೆಯನ್ನು ಅಭಿವ್ಯಕ್ತಿಸಿದರು. ಇದರಿಂದ ಸಾಹಿತ್ಯವು ವೈವಿಧ್ಯತೆಯನ್ನು ಪಡೆಯಿತು. ಸಾಹಿತ್ಯದ ಏಕಮುಖ ಮಾದರಿಯು ವಿಭಿನ್ನ ಆಯಾಮವನ್ನು ಪಡೆಯಿತು. ವೃತ್ತಿ ಪರಿಭಾಷೆಗಳು ದೈವಿಕ ಅಂಶವನ್ನು ಪಡೆದುಕೊಂಡವು. ಸಮಷ್ಟಿ ನೆಲೆಯಲ್ಲಿ ವೃತ್ತಿ ಘನತೆಯು ಬೆಳೆಯಿತು. ಕಾಯಕದಲ್ಲಿದ್ದ ಕಂದಕವನ್ನು ಬೆಸೆಯಿತು. ಮೇಲು ಕೀಳಿನ ಜಾತಿಯನ್ನು ನಿರಾಕರಿಸಿ ಸಮಾನ ಭಾವನೆಯ ಭಕ್ತಿಮಾರ್ಗವನ್ನು ಅನುಸರಿಸುವ ವಿಧಾನವನ್ನು ಸಮುದಾಯಗಳಲ್ಲಿ ಬಿತ್ತಲಾಯಿತು. ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್ಟು ಹಾಕಿದರು. ಸರ್ವರು ಈ ದಾರಿಯನ್ನು ಅನುಸರಿಸುವ ಸ್ವಾತಂತ್ಯ್ರವನ್ನು ನೀಡಿದರು. ಇದರಿಂದಾಗಿ ಎಲ್ಲಾ ಜಾತಿ ಸಮುದಾಯಗಳು ಭಕ್ತಿ ಮಾರ್ಗವನ್ನು ಅನುಸರಿಸಿ ತಮ್ಮ ಅಭಿವ್ಯಕ್ತಿಯನ್ನು ಮಾಡಿದರು. ಇದರಿಂದಾಗಿ ವೈವಿದ್ಯತೆಯ ಸಾಮಾಜಿಕ ಬಂಧವು ಬಿಗಿಗೊಂಡಿತು. ನಿಜವಾದ ಜಾತ್ಯಾತೀತ ಮೌಲ್ಯಗಳ ಅನುಷ್ಠನವೂ ನಡೆಯಿತು. ಪ್ರಭುತ್ವ ಪ್ರಣೀತ ಅಂಕುಶಗಳು ಈ ವೈವಿದ್ಯತೆಯ ಬದುಕಿನ ಮೇಲೆ ಹಿಡಿತ ಸಾಧಿಸುವ ಹುನ್ನಾರವನ್ನು ಮಾಡುತ್ತಲೇ ಇರುತ್ತದೆ. ಅದನ್ನು ಅರಿಯಾಗಿ ಅರ್ಥ ಮಾಡಿಕೊಂಡು ತಮ್ಮತನವನ್ನು ಸಮುದಾಯಗಳು ಉಳಿಸಿಕೊಳ್ಳುವ ದಾರಿಯನ್ನು ವಚನಕಾರರು ಕಂಡುಕೊಂಡರು. ಆದ್ದರಿಂದ ಪ್ರಭುತ್ವ ಒಪ್ಪುವ ಬದುಕಿಗೆ ವಿಮುಖರಾಗಿ ಸಕಲ ಜೀವ ಸಂಕುಲಗಳನ್ನು ಒಳಗೊಳ್ಳುವ ಬದುಕಿನ ವಿನ್ಯಾಸವನ್ನು ರೂಪಿಸಿಕೊಂಡರು.

ಈ ವಚನಕಾರರ ಬದುಕು ಮತ್ತು ಸಾಹಿತ್ಯ ರಚನೆ ಹೊಸ ಬಗೆಯ ಸಂಸ್ಕೃತಿಯನ್ನು ರಚಿಸುತ್ತದೆ. ಪ್ರಭುತ್ವಕ್ಕೆ ವಿರುದ್ಧವಾದ ದೈವಿಕ ಪ್ರಕೃತಿ ತತ್ವದ ಸಂಸ್ಕೃತಿ ನಿರ್ವಚನ ಇವರದು. ಈಗಾಗಲೆ ರೂಪಗೊಂಡಿದ್ದ ಸಂಸ್ಕಾರಯುತ ಮೌಲ್ಯದ ಸಂಸ್ಕೃತಿ ಚಿಂತನೆಗೆ ಪರ್ಯಾಯವಾದ ಬಹುತ್ವವನ್ನು ಒಳಗೊಂಡ ಸಂಸ್ಕೃತಿ ಚಿಂತನೆಯನ್ನು ಮಾಡಿದರು. ದುಡಿಮೆಯನ್ನೊಳಗೊಂಡ ಬದುಕಿನ ವಿನ್ಯಾಸವನ್ನು ಭಕ್ತಿಯ ನೆಲೆಯಲ್ಲಿ ತಾತ್ವಿಕಗೊಳಿಸುವ ಪ್ರಯತ್ನ ಅವರದಾಗಿತ್ತು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಕಂದಾಚಾರವನ್ನು ಪ್ರಶ್ನಿಸುವದರ ಮೂಲಕ ಧರ್ಮದ ನಿಜ ತಿರುಳನ್ನು ದರ್ಶನ ಮಾಡಿದರು. ಮೇಲ್ಚನೆಯ ಶಿಷ್ಟ ಮಾದರಿಯ ಜೀವನಕ್ಕೆ ಕೆಳಸ್ತರದ ಸಮಷ್ಟಿಯ ಚೈತನ್ಯವನ್ನು ಮುಖಾಮುಖಿಯಾಗಿಸಿದರು. ಈ ಅರಿವಿನ ದಿವ್ಯತೆಯಲ್ಲಿ ಅಂಬಿಗರ ಚೌಡಯ್ಯ ವ್ಯಘ್ರವಾಗಿಯೆ ಧಾರ್ಮಿಕ ವ್ಯವಸ್ಥೆಯನ್ನು ನೋಡಿದನು. ನೇರವಾಗಿ ಈತನ ವಚನಗಳು ಸಂಸ್ಕೃತಿ ಚಿಂತನೆಯನ್ನು ಮಾಡುವದಿಲ್ಲ. ಆದರೆ, ಒಪ್ಪಿತವಾದ ಸಂಸ್ಕೃತಿಯ ವಿನ್ಯಾಸಕ್ಕೆ ಭಿನ್ನವಾದ ಇನ್ನೊಂದು ಬದುಕಿನ್ನು ಕ್ರಮವನ್ನು ಶೋಧಿಸುತ್ತವೆ. ಅದು ಭಕ್ತಿ ಮತ್ತು ಧಾರ್ಮಿಕ ಶ್ರದ್ದೆಯ ನೆಲೆಯಲ್ಲಿಯೇ ಸೃಜನಶೀಲಗೊಳ್ಳುತ್ತದೆ. ಸಾಹಿತ್ಯವನ್ನು ಕೇಂದ್ರವಾಗಿಟ್ಟುಕೊಂಡು ಸಂಸ್ಕೃತಿ ಚಿಂತನೆ ಕಟ್ಟುವವರಿಗೆ ಅಂಬಿಗ ಚೌಡಯ್ಯನ ವಚನಗಳ ಓದು ಹೊಸ ಸಾಧ್ಯತೆಯ ದಾರಿಯನ್ನು ತೋರಿಸುತ್ತವೆ.

ಬಸವಣ್ಣ ಸಾಮಾಜಿಕವಾಗಿ ಕೀಳೆನ್ನುವ ಬೆವರಿನ ವೃತ್ತಿಗಳಿಗೆ ಘನತೆಯನ್ನು ತಂದುಕೊಟ್ಟನು. ಬದುಕಿನಲ್ಲಿ ಯಾವ ವೃತ್ತಿಯು ಕೀಳಲ್ಲ ಎಂಬ ಆತ್ಮವಿಶ್ವಾಸವನ್ನು ಸಮುದಾಯಗಳಲ್ಲಿ ಮೂಡಿಸಿದನು. ಇದರಿಂದ ಅನೇಕ ವಚನಕಾರರು ತಮ್ಮ ವೃತ್ತಿಯ ಪರಿಭಾಷೆಯನ್ನೇ ಎಲ್ಲರನ್ನು ಒಳಗೊಳ್ಳುವ ಭಕ್ತಿಯ ಪರಿಭಾಷೆಯನ್ನಾಗಿ ರೂಪಿಸಿಕೊಂಡರು. ಇವರು ಲೋಕವನ್ನು ನೋಡುವ ದೃಷ್ಟಿಕೋನವು ವಿಭಿನ್ನವಾಯಿತು. ಅಭಿವ್ಯಕ್ತಿಯಲ್ಲಿ ಧರ್ಮ-ಸಮಾಜ-ಸಮಾನತೆಯನ್ನು ಬೆಸೆಯುವ ಆಂದೋಲನವನ್ನು ಮಾಡಿದರು. ಅದಕ್ಕೆ ಅಂಬಿಗರ ಚೌಡಯ್ಯನ ವಚನಗಳು ಹೊಸ ಕಾಣ್ಕೆಯಾಗಿ ಕಂಡುಬರುತ್ತವೆ.

ಸಾಹಿತ್ಯವನ್ನು ಸಂಸ್ಕೃತಿಯ ಅಂಗವಾಗಿ ನೋಡುವ ಚಿಂತನೆ ಇಂದು ಬಲವಾಗಿ ಬೆಳೆಯುತ್ತಿದೆ. ಸಾಹಿತ್ಯವನ್ನು ಕೇವಲ ಕಲ್ಪನೆ ಎಂದು ಗಂಭೀರ ಅಧ್ಯಯನಗಳಿಗೆ ಆಕರವಾಗಿ ಬಳಸುತ್ತಿರಲಿಲ್ಲ. ಅಧಿಕೃತತೆಯ ಮಾನದಂಡವನ್ನು ಮುಖ್ಯವಾಗಿಸುತ್ತಿದ್ದರು. ಮಾನವಿಕ ಮತ್ತು ವಿಜ್ಞಾನ ಪ್ರಮಾಣಗಳು ಅಂಕಿ ಅಂಶಗಳನ್ನು ನಂಬುತ್ತಿದ್ದರಿಂದ ಮಾನವೀಯ ಭಾವನೆಗಳಗೆ ಸ್ಪಂದಿಸುತ್ತಿದ್ದಿಲ್ಲ. ಇದರಿಂದ ಜ್ಞಾನದಲ್ಲಿ ಮಾನವೀಯ ಸಂವೇದನೆ ಕಾಣೆಯಾಗುತಿತ್ತು. ಸಾಹಿತ್ಯವು ವಾಸ್ತವ ಬದುಕನ್ನು ಮಾನವೀಯ ನೆಲೆಯಲ್ಲಿ ಕಟ್ಟಿ ಕೊಡುವದರಿಂದ ನಿಜತ್ವವನ್ನು ದರ್ಶನ ಮಾಡಿಸುತ್ತದೆ. ಮೇಲ್ನೋಟಕ್ಕೆ ಅದು ಕಲ್ಪನೆ ಎಂದು ಕಂಡುಬಂದರೂ ಬಹಳ ಸೂಕ್ಷ್ಮವಾಗಿ ಮಾನವನ ಸ್ವಭಾವಗಳನ್ನು ಶೋಧಿಸುತ್ತದೆ. ಆದ್ದರಿಂದ ಮಾನವನ ಪ್ರಮಾಣ ಚರಿತ್ರೆಯನ್ನು ಸಾಹಿತ್ಯ ನರ‍್ಮಿಸುತ್ತದೆ. ಈ ಹಿನ್ನಲೆಯಲ್ಲಿ ಅಂಬಿಗರ ಚೌಡಯ್ಯನ ವಚನಗಳನ್ನು ನೋಡಬೇಕಿದೆ.

ಬಸವಣ್ಣ ಮನುಷ್ಯನ ಘನತೆ ಮತ್ತು ಸ್ವಾತಂತ್ಯ್ರಕ್ಕೆ ಮಾನ್ಯತೆ ನೀಡಿದರು. ಪ್ರತಿಯೊಬ್ಬರು ತಮ್ಮ ಆಲೋಚನೆಯನ್ನು ನಿರ್ಭಿಡೆಯಿಂದ ಅಭಿವ್ಯಕ್ತಿ ಮಾಡುವ ವಾತಾವರಣವನ್ನು ಸೃಷ್ಟಿಸಿದರು. ಅವರು ಇನ್ನೊಬ್ಬರಿಗೆ ಕೇಡಿಲ್ಲದಂತೆ ಅಭಿವ್ಯಕ್ತಿ ಮಾಡುವ ಸ್ವಾತಂತ್ರವನ್ನು ಪ್ರತಿಯೊಬ್ಬರ ಹಕ್ಕೆಂಬುದನ್ನು ಪ್ರತಿಪಾದಿಸಿದರು. ಯಾವುದೆ ತಿಳಿವು ಇನ್ನೊಬ್ಬರ ಬೌದ್ಧಿಕ ವಿಕಾಸಕ್ಕೆ ಕಾರಣವಾಗಬೇಕು. ನಾಶ ಮಾಡಲು, ಅಧೀನದಲ್ಲಿಟ್ಟುಕೊಳ್ಳಲು, ಭಯ ಹುಟ್ಟಿಸಲು ಅಲ್ಲ. ಏಕೆಂದರೆ ಜ್ಞಾನವನ್ನು ಸೃಷ್ಟಿಸಿದ್ದೇವೆನ್ನುವ ಮಹಿಮರು ಅನೇಕ ವೃತ್ತಿಪರ ಸಮುದಾಯಗಳನ್ನು ಅಸಡ್ಡೆಯಿಂದ ನೋಡಿದ ಸಾಕ್ಷಿಗಳು ಚರಿತ್ರೆಯಲ್ಲಿವೆ. ಅದಕ್ಕೆ ಬಸವಣ್ಣನವರು ಕೇಡು ಬಗೆಯದೆ ಅಭಿವ್ಯಕ್ತಿಸಬೇಕೆಂದು ಹೇಳಿದರು. ಈ ನಿಲುವು ಅಂಬಿಗರ ಚೌಡಯ್ಯನಂತಹ ವಚನಕಾರರ ಮೇಲೆ ದೊಡ್ಡ ಪರಿಣಾಮ ಬೀರಿತು.

ಯಾವುದೇ ಭಾಷಿಕ ಅಭಿವ್ಯಕ್ತಿ ನಡೆಯನ್ನು ತಿದ್ದಿ ನಡೆಸಬೇಕು. ಆ ಮೊದಲು ಅಭಿವ್ಯಕ್ತಿಸುವವರು ತಮ್ಮ ನಡೆಯನ್ನು ಶುದ್ದಿಕರಿಸಿಕೊಳ್ಳಬೇಕು. ಇಲ್ಲದಿದ್ದರೆ ನುಡಿ ಹುಸಿಯಾಗುತ್ತದೆ. ನಿಜತ್ವ ಕಳೆದುಹೋಗುತ್ತದೆ. ನುಡಿ ನಡೆ ಶುದ್ದವಿಲ್ಲದವರನ್ನು ಸಮಾಜ ಒಪ್ಪುವದಿಲ್ಲ. ನುಡಿ ಒಂದಿದ್ದು ನಡೆ ಇನ್ನೊಂದಾದಡೆ ಅದು ದ್ರೋಹ. ಈ ಎಚ್ಚರದಲ್ಲಿ ಆಲೋಚನೆಯನ್ನು ಬಿತ್ತಬೇಕು. ಇದು ಬಸವಣ್ಣನವರ ನಂಬಿಕೆಯಾಗಿತ್ತು.

ತಮ್ಮ ಜೊತೆಗಾರರಿಗೆ ಈ ದಾರಿ ತುಳಿಯಲು ಪ್ರೇರೇಪಿಸಿದರು. ಇವರ ಮಾರ್ಗದರ್ಶನದಿಂದ ಅಂಬಿಗರ ಚೌಡಯ್ಯನಂತಹ ವೃತ್ತಿ ವಚನಕಾರರು ಸ್ವತಂತ್ರ ಅಭಿವ್ಯಕ್ತಿಯನ್ನು ನಿರ್ವಚಿಸಲು ಸಾಧ್ಯವಾಯಿತು. ಇದರಿಂದಾಗಿ ಸಾಮಾಜಿಕವಾಗಿ ಕೀಳಾಗಿದ್ದ ವೃತ್ತಿಗಳೆಲ್ಲ ತಮ್ಮ ಘನತೆಗಳನ್ನು ಉಳಿಸಿಕೊಳ್ಳಲು ಸಾದ್ಯವಾಯಿತು. ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಸ್ಥಾಪಿಸುವಂತಾಯಿತು. ಸಾಮಾಜಿಕ ಚರಿತ್ರೆಯಲ್ಲಿ ಸ್ಥಾನವೇ ಇಲ್ಲದ ವೃತ್ತಿಪರ ಸಮುದಾಯಗಳು ಲೋಕವನ್ನು ಕುರಿತು ಯೋಚಿಸುವಂತಾಯಿತು. ಇದೊಂದು ಸರ್ವಕಾಲಕ್ಕೂ ಮಾದರಿಯಾದ `ಜೀವ ಸಂಕುಲ’ ಪರ ಚಿಂತನೆಯಾಗಿದೆ.

ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಂಡು ಬರುವ ಸಂಸ್ಕೃತಿಯ ಅಂಶಗಳು ಸಮಾನತೆಯ ಧಾರ್ಮಿಕ ಅರಿವನ್ನು ಪ್ರತಿಪಾದಿಸುತ್ತವೆ. ಇವರ ಬಹುತೇಕ ವಚನಗಳು ವೇಷಧಾರಿ ಡಾಂಭಿಕ ಭಕ್ತಿಯನ್ನು ಖಂಡಿಸುತ್ತವೆ. ಕುರುಹು ಹಿಡಿದು ಜನರನ್ನು ಅಂಕೆಯಲ್ಲಿಟ್ಟುಕೊಳ್ಳುವ ಮಠಾಧಿಪತಿಗಳ, ಪೀಠಾಧಿಪತಿಗಳ ಸಂಸ್ಕೃತಿಯನ್ನು ನಿರಾಕರಿಸಿ ಸಮಾನತೆಯ ನೈತಿಕ ಸಂಸ್ಕೃತಿಯನ್ನು ಪ್ರತಿಪಾದಿಸುತ್ತವೆ.

ಬೇರಿನ ಸಂಸ್ಕೃತಿ
ಬೀಜ ಮೊಳೆವುದಲ್ಲದೆ ಮೊಳೆ ಮೊಳೆತುದುಂಟೆ
ಕ್ರೀಗೆ ಅರಿವಿಲ್ಲದೆ ಅರಿವಿಗೆ ಅರಿವುಂಟೆ
ಮೊಳೆ ಮೊಳೆತು ಪುನರಪಿ ಬೀಜವಾದಂತೆ
ಅರಿವು ಕ್ರೀಯಲ್ಲಿ ನಿಂದು ಉಭಯವು ತಾನಾದ ತೆರನಂತೆ
ಆ ಎರಡರಲ್ಲಿ ಕೂಡಿದ ಉಳುಮೆಯನರಿಯಬೇಕೆಂದನಂಬಿಗ ಚೌಡಯ್ಯ 1

`ಉಳುಮೆಯನ್ನರಿಯಬೇಕು’ ಎಂದು ಚೌಡಯ್ಯ ಹೇಳುತ್ತಾರೆ. ಅಂದರೆ ಉಳುಮೆ ಮಾಡುವ ಜನರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ನಿಜವಾದ ಕ್ರಿಯೆಯಲ್ಲಿ ತೊಡಗುವವರು ಅರಿವನ್ನು ಸೃಷ್ಟಿಸುತ್ತಾರೆ. ಕ್ರಿಯೆಯಿಂದ ಅರಿವು. ಅರಿವಿನಿಂದ ಅರಿವು ಬೆಳೆಯಲು ಸದ್ಭಾವನೆಯ ಕ್ರಿಯೆ ಬೇಕು. ಕ್ರಿಯೆ ಮತ್ತು ಅರಿವು ಉಭಯವಾಗಿ ಸಮಾಜದಲ್ಲಿ ಮೈ ಪಡೆಯಬೇಕು. ಆಗ ಸಾತ್ವಿಕ ಅರಿವವು ಸೃಷ್ಟಿಯಾಗುತ್ತದೆ. ಆ ಅರಿವು ಸಮಾಜದಲ್ಲಿ ಇಲ್ಲದಿರುವದರಿಂದ ಅರಿವು ಪ್ರಭುತ್ವವಾಗಿ, ಅಧಿಕಾರವಾಗಿ ಜನರ ಮೇಲೆ ಸವಾರಿ ಮಾಡುತ್ತದೆ. ಈ ಸಂಸ್ಕೃತಿ ನಿರಸನಗೊಳ್ಳಲು ಕ್ರಿಯೆಯ ಸಂಸ್ಕೃತಿಯನ್ನು ಬಲಪಡಿಸುವ ಅಗತ್ಯವಿದೆ.

ಉಪದೇಶಾತ್ಮಕ ಕ್ರಿಯಾಹೀನ ಅರಿವಿಗಿಂತ ಕಾಯಕ ಮುಖೇನ ಅರಿವು ಮನುಷ್ಯನಲ್ಲಿ ಬೆಳೆಯಬೇಕು.

ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು,
ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು,
ನಾಡೆಲ್ಲರೂ ನೋಡಿ ಎಂದು ಪೂಜಿಸುತ್ತ,
ಪೂಜಿಸಿದ ಪುಣ್ಯ ಹೂವಿಗೋ? ನೀರಿಗೋ?
ನಾಡೆಲ್ಲಕ್ಕೋ? ಪೂಜಿಸಿದಾತಗೋ?
ಇದು ನಾನರಿಯೆ, ನೀ ಹೆಳೆಂದನಂಬಿಗ ಚೌಡಯ್ಯ 2

ನಾವು ಪೂಜೆಯನ್ನು ಆಡಂಬರದಿಂದ ದೇವರಿಗೆ ಮಾಡುತ್ತೇವೆ. ಕಪ್ಪ ಕಾಣಿಕೆಯನ್ನು ಸಲ್ಲಿಸುತ್ತೇವೆ. ದೇವರಿಗೆ ಅಭಿಷೇಕ ಮಾಡಿ ಹೂಗಳ ಅಲಂಕಾರ ಮಾಡಿ ಅಡ್ಡ ಬೀಳುತ್ತೇವೆ. ಇದನ್ನೇ ಪೂಜೆ ಎಂದು ಭಾವಿಸಿದ್ದೇವೆ. ಇದೊಂದು ಸಂಸ್ಕೃತಿಯಾಗಿ ಬೆಳೆದುಕೊಂಡು ಬಂದಿದೆ. ಆದರೆ ಇದರ ಲಾಭ ಯಾರಿಗಾಗುತ್ತದೆ ಎಂದು ಅಂಬಿಗರ ಚೌಡಯ್ಯ ಪ್ರಶ್ನಿಸುತ್ತಾನೆ. ಈ ಪೂಜಾ ವಿಧಾನದ ಸಂಸ್ಕೃತಿಯನ್ನು ಒಪ್ಪುವದಿಲ್ಲ. ಕೆರೆ ಕಟ್ಟಿದವರಿಗೆ, ಹೂಗಳನ್ನು ಬೆಳಸಿದವರಿಗೆ ನಿಜವಾದ ಪುಣ್ಯ ದೊರೆಯುತ್ತದೋ ಇಲ್ಲ ಕೇವಲ ಪೂಜಿಸಿದಾತಗೆ ದೊರೆಯುತ್ತದೋ ಎಂಬ ತಾತ್ವಿಕ ಪ್ರಶ್ನೆಯನ್ನು ಮುಂದಿಡುತ್ತಾನೆ. ಅಂದರೆ ಪೂಜೆಯು ಭೌತಿಕ ಸ್ಥಿಯಲ್ಲಿರುವದಕ್ಕಿಂತ ಬಯಲಿನ ಸ್ವರೂಪದಲ್ಲಿರಬೇಕೆಂಬುದು ಇವರ ನಿಲುವು. ಅದು ತೋರಿಕೆಗಿಂತ ಅಂತರಂಗ ಶುದ್ದಿಯನ್ನು ಒಳಗೊಂಡಿರಬೇಕು. ಬೇರು ಹೇಗೆ ಕಣ್ಣಿಗೆ ಕಾಣದೆ ಮರಕ್ಕೆ ಜೀವ ನೀಡಿ ಸಂತತಿಯನ್ನು ಬೆಳಸುತ್ತದೆಯೋ ಅದೇ ರೀತಿ ಪೂಜೆಯ ವಿಧಾನವೂ ಇರಬೇಕು. ಅದು ನಮ್ಮ ಸಂಸ್ಕೃತಿಯಾಗಿ ಬೆಳೆಯಬೇಕು.

ಬಹುತ್ವದ ಸಂಸ್ಕೃತಿ
ಭಾರತ ಬಹುತ್ವವನ್ನು ಒಳಗೊಂಡ ಜೀವನ ಕ್ರಮವನ್ನು ಒಳಗೊಂಡಿದೆ. ಬದುಕಿನ ಹಲವು ಹಂತಗಳಲ್ಲಿ ವೈವಿದ್ಯವಾದ ಬಹುತ್ವವನ್ನು ಕಾಣುತ್ತೇವೆ. ಧರ್ಮ, ನಂಬಿಕೆ, ಆಚರಣೆ, ನೀತಿ ನಿಯಮಗಳು, ಉತ್ಸವಗಳು, ದೇವರುಗಳು, ಸಂಪ್ರದಾಯಗಳು, ರೂಢಿಗಳು, ಆಹಾರ, ಉಡುಗೆ ಮುಂತಾದ ಬದುಕಿನ ಸಂದರ್ಭಗಳಲ್ಲಿ ವಿವಿಧತೆಯನ್ನು ಕಾಣುತ್ತೇವೆ. ಇವು ಭಿನ್ನವಾಗಿದ್ದರೂ ಒಂದರೊಳಗೊಂದು ಬೆರೆತು ಸಾಮರಸ್ಯದ ಜೀವನವನ್ನು ನಡೆಸಿಕೊಂಡು ಬಂದಿವೆ. ಈ ಬಹುತ್ವ ಶಕ್ತಿಯನ್ನು ನಾಶ ಮಾಡುವ ಏಕೀಕೃತಗೊಳಿಸುವ ವಿದ್ಯಮಾನಗಳು ನಿರಂತರ ನಡೆಯುತ್ತಿರುತ್ತವೆ. ಇದನ್ನೇ ಸಂಸ್ಕೃತಿಯ ಹೆಸರಿನಲ್ಲಿ ಹೇರಲಾಗುತ್ತಿರುತ್ತದೆ. ಆದ್ದರಿಂದ ಅಂಬಿಗರ ಚೌಡಯ್ಯ ಈ ಏಕತೆಯನ್ನು ಒಡೆದು ಬಹುತ್ವವನ್ನು ತನ್ನ ವಚನಗಳಲ್ಲಿ ಪ್ರತಿಪಾದಿಸುತ್ತಾರೆ.

ಕುರಿಕೋಳಿ ಕಿರುಮೀನ ತಿಂಬವರ
ಊರೊಳಗೆ ಇರು ಎಂಬರು,
ಅಮೃತಾನ್ನವ ಕರೆವ ಗೋವ ತಿಂಬವರ
ಊರಿಂದ ಹೊರಗಿರು ಎಂಬರು.
ಆ ತನು ಹರಿಗೋಲಾಗಿತ್ತು,ಬೊಕ್ಕಣ, ಸಿದಿಕೆ, ಬಾರುಕೋಲು, ಪಾದರಕ್ಷೆ
ದೇವರ ಮುಂದೆ ಬಾರಿಸುವದಕ್ಕೆ ಮದ್ದಳೆಯಾಯಿತ್ತು,
ಈ ಬುದ್ಧಲಿಕೆಯೊಳಗಣ ತುಪ್ಪವ ಶುದ್ಧ ಮಾಡಿ
ತಿಂಬ ಗುಜ್ಜ ಹೊಲೆಯರ ಕಂಡಡೆ
ಉದ್ದನ ಚಮ್ಮಾಳಿಗೆ ತೆಕ್ಕೊಂಡು
ಬಾಯ ಕೊ(ಯ್ಯು)ವೆನು ಎಂದಾತ ನಮ್ಮ ಅಂಬಿಗರ ಚೌಡಯ್ಯ 3

ಆಹಾರವನ್ನು ಕೇಂದ್ರವಾಗಿಟ್ಟುಕೊಂಡು ಮನುಷ್ಯರ ನಡುವೆ ಭೇದ ಕಲ್ಪಿಸುವದನ್ನು ಅಂಬಿಗರ ಚೌಡಯ್ಯ ಒಪ್ಪುವದಿಲ್ಲ. ಅವರವರ ಬದುಕಿನ ವೈವಿದ್ಯತೆಯನ್ನು ತಿಳಿದುಕೊಂಡು ಗೌರವಿಸುವುದು ಮುಖ್ಯ. ನಮ್ಮ ರೀತಿಯಲ್ಲಿ ಅವರು ಬದುಕುವದಿಲ್ಲವೆಂದು ದ್ವೇಷ ಕಾರುವ ಮನೋಭಾವವನ್ನು ನಿರಾಕರಿಸುತ್ತಾರೆ. ಅಂತವರನ್ನು ದೈವವೂ ಒಪ್ಪುವದಿಲ್ಲ ಎಂದು ಹೇಳುತ್ತಾರೆ. ಭಾರತದ ಬಹುತ್ವವನ್ನು ಮಾತ್ರ ಎಲ್ಲಾ ದೈವಗಳು ಒಪ್ಪುತ್ತವೆ. ದೇವರ ಧರ್ಮದ ಹೆಸರಿನಲ್ಲಿ ಈ ಬಹುತ್ವವನ್ನು ನಾಶ ಮಾಡುವ ಹುನ್ನಾರವನ್ನು ಪ್ರಶ್ನಿಸಿ ಅವರನ್ನು ಸರಿ ಮಾಡಬೇಕೆನ್ನುತ್ತಾನೆ.

ಭಕ್ತಿ ಸಂಸ್ಕೃತಿ
ಕಾಯಕ-ಶ್ರದ್ದೆ-ನಿಷ್ಠೆ-ಪರೋಪಕಾರ-ಪರಿಶುದ್ಧತೆ-ನರ‍್ಮೋಹ-ಸರಳತೆ-ದಾಸೋಹ-ಅನುಭಾವ-ಸಮಷ್ಟಿ ಒಡನಾಟವನ್ನು ಒಳಗೊಂಡದ್ದು ಭಕ್ತಿ. ಯಾರು ಈ ಗುಣಗಳನ್ನು ಅಳವಡಿಸಿಕೊಂಡಿರುವರೋ ಅವರು ನಿಜವಾದ ಭಕ್ತರು. ಭೌತಿಕವಾಗಿ ಆರಾಧಿಸುವ ಮೂಢತನದ ಡಾಂಬಿಕ, ತೋರಿಕೆಯ ಭಕ್ತಿಯಲ್ಲಿ ಅವರಿಗೆ ನಂಬಿಕೆಯಿಲ್ಲ. ಅಂತರಂಗವನ್ನು ಶುದ್ಧವಾಗಿಟ್ಟುಕೊಂಡು ಸಾಮಾಜಿಕ ಸುಧಾರಣೆಗಾಗಿ ನಿಸ್ವಾರ್ಥವಾಗಿ ಶ್ರಮಿಸುವವನು ಭಕ್ತನಾಗುತ್ತಾನೆ. ಕಾಯಕದೊಳಗೆ ಶ್ರದ್ದೆಯಿಂದ ನಿರತನಾದರೆ ಅದೇ ಭಕ್ತಿಯಾಗುತ್ತದೆ. ಭಕ್ತಿ ಅಂತರಂಗದ ಸಂವಾದ. ಇಂತಹ ಭಕ್ತರ ಪಡೆಯನ್ನು ಕಟ್ಟುವ ಚಿಂತನೆಯನ್ನು ಬಸವಣ್ಣ ಮಾಡಿದನು. ಈತನ ಜೊತೆಗಿದ್ದವರು ಭಕ್ತಿಯ ಸ್ವರೂಪವನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡರು.

ಭಕ್ತಿಯ ಕ್ರಿಯೆಯನ್ನು ಭೌತಿಕ ನೆಲೆಯಲ್ಲಿ ನೋಡದೆ ಜೀವನ ಶ್ರದ್ಧೆಯಲ್ಲಿ ನೋಡಿದರು. ಆಡಂಬರದಲ್ಲಿ ಭಕ್ತಿ ಇಲ್ಲ. ತನ್ನ ಶೋಧದಲ್ಲಿ ಭಕ್ತಿ ಇದೆ ಎಂದು ಬಲವಾಗಿ ನಂಬಿದರು. ಲೌಕಿಕ ಮೋಹವನ್ನು ಮೀರಿ ಲೌಕಿಕಕ್ಕೆ ಅರ್ಪಿಸಿಕೊಳ್ಳುವುದು ಭಕ್ತಿಯ ವಿಧಾವೆಂಬುದನ್ನು ಪ್ರತಿಪಾದಿಸಿದರು. ದೇವರ ಹೆಸರಲ್ಲಿ ನಡೆಯುವ ಗೊಡ್ಡು ಆಚರಣೆಗಳನ್ನು ನಿರಾಕರಿಸಿ ಆತ್ಮಪ್ರತ್ಯಯದಲ್ಲಿ ತಮ್ಮನ್ನು ಕಂಡುಕೊಳ್ಳುವುದು ಭಕ್ತಿಯಲ್ಲಿ ಮುಖ್ಯವೆಂದು ಸಾರಿದರು.

ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಕೊರಳಿಗೆ ಕವಡೆಯ ಕಟ್ಟಿ ನಾಯಾಗಿ ಬೊಗಳುವರು!
ಅದಾವ ವಿಚಾರವಯ್ಯಾ?
ಭವಿತಕ್ಕೆ ಹೇಸಿ ಭಕ್ತನಾದ ಬಳಿಕ
ಬೇವಿನುಡುಗೆಯನ್ನುಟ್ಟು ಹಡಲಿಗೆಯ ಹೊತ್ತು `ಉಧೋ ಉಧೋ’ ಎಂಬರು!
ಅದಾವ ವಿಚಾರವಯ್ಯಾ?
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಹಗ್ಗಹುರಿ-ಬೆನ್ನಸಿಡಿ-ಬಾಯಿಬೀಗದಲ್ಲಿ ಹೋಗುವರು!
ಅದಾವ ವಿಚಾರವಯ್ಯ?
ಇಂಥ ಭವಿ ಮಾರ್ಗದಲ್ಲಿ ಚರಿಸುವ
ಶಿವದ್ರೋಹಿಗಳಿಗೆ ಲಿಂಗಧಾರಣ ಮಾಡುವನೊಬ್ಬ ಗುರುದ್ರೋಹಿ
ಅವರಿಗೆ ಚರಣೋದಕವ, ತಾ ಧರಿಸುವ ವಿಭೂತಿ ರುದ್ರಾಕ್ಷಿಯ
ಕೊಡುವನೊಬ್ಬ ಲಿಂಗದ್ರೋಹಿ
ಅವನು ಭಕ್ತನೆಂದು
ಅವನ ಮನೆಯ ಹೊಕ್ಕು, ಮಂತ್ರವ ಹೇಳಿ,
ಅನ್ನವ ತಿಂದವವನೊಬ್ಬ ಜಂಗಮ ದ್ರೋಹಿ!
ಇಂತೀ ನಾಲ್ವರಿಗೆ ಸರ‍್ಯಚೆಂದ್ರರುಳ್ಳನ್ನಕ್ಕ
ಎಕ್ಕಲಕೊಂಡದಲ್ಲಿಕ್ಕದೆ ಮಾಣ್ಬನೆ ಅಂಬಿಗೆ ಚೌಡಯ್ಯನು? 4

ಶರಣರು ಸ್ಥಾಪಿಸಿದ ಧರ್ಮವನ್ನು ಅಂಬಿಗರ ಚೌಡಯ್ಯ ವಿಮರ್ಶೆ ಮಾಡುತ್ತಾನೆ. ಈ ಭವಕ್ಕೆ ಹೆದರಿ ಭಕ್ತನಾದರೆ ಆತ ನಿಜವಾದ ಭಕ್ತನಾಗುವದಿಲ್ಲ. ಭವದೊಳಗಿದ್ದು ಭವವನ್ನು ಸುಧಾರಿಸುವುದು ಭಕ್ತಿ. ಈ ತಿಳುವಳಿಕೆ ಇಲ್ಲದವರು ಭಕ್ತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಅಂತವರ ಮೋಸಕ್ಕೆ ಜನಗಳು ಒಳಗಾಗುತ್ತಾರೆ. ಮೋಸಕ್ಕೆ ಬಲಿಯಾಗುವವರಿಗೆ ಅರಿವು ತುಂಬುವುದು ಭಕ್ತಿ. ಭವವನ್ನು ಗೆಲ್ಲದವನು ಭಕ್ತನಾಗಲಾರ. ಮಂತ್ರ ತಂತ್ರಗಳ ಮೂಲಕ ಭಕ್ತನನ್ನಾಗಿಸುವ ಸಂಸ್ಕೃತಿಯನ್ನು ಸಂಪೂರ್ಣ ನಿರಾಕರಿಸಿ, ತನ್ನನ್ನು ಅರಿಯುವ ಪರ್ಯಾಯ ಭಕ್ತಿಯ ಸಂಸ್ಕೃತಿಯನ್ನು ಇವರು ಸ್ಥಾಪಿಸಿದರು.

ಅರಿವಿನ ಸಂಸ್ಕೃತಿ
ಅರಿಯದ ಗುರು ಅರಿಯದ ಶಿಷ್ಯಂಗೆ
ಅನುಗ್ರಹವ ಮಾಡದಡೇನಪ್ಪುದೆಲವೊ
ಅಂಧಕನ ಕೈಯನಂಧಕ ಹಿಡಿದಡೆ ಮುಂದನಾರು ಕಾಬರು ಹೇಳಲೆ ಮರುಳೆ
ತೊರೆಯಲದ್ದವನೀಸಲರಿಯದವ
ತೆಗೆವ ತೆರನಂತೆಂದನಂಬಿಗ ಚೌಡಯ್ಯ 5

ಅರಿವು ಒಂದು ಸಂಸ್ಕೃತಿಯಾಗಿ ಶರಣರಲ್ಲಿ ಬೆಳೆಯಿತು. ತನ್ನನ್ನು ಸರಿಯಾಗಿ ಅರ್ಥಮಾಡಿಕೊಂಡು ಇನ್ನೊಬ್ಬರನ್ನು ಅರ್ಥೈಯಿಸುವುದು ಅರಿವು. ಲೋಕದ ಎಲ್ಲಾ ಮೋಹಗಳನ್ನು ಮೀರಿ ಲೋಕದೊಳಗೆ ಒಂದಾಗುವ ಕ್ರಿಯೆ ಅರಿವು. ಇದನ್ನು ಸಾಧಿಸುವುದು ಸುಲಭದ ಮಾರ್ಗವಲ್ಲ. ಇಡೀ ವ್ಯವಸ್ಥೆಯ ಕಿಲುಬನ್ನು ತೊಳೆದು ಅಂತರಂಗದಲ್ಲಿ ಶುದ್ದನಾಗುವುದು. ಲೋಕವನ್ನು ಬೆಳಗುವುದು ಅರಿವುಳ್ಳವರ ಜವಬ್ದಾರಿ. ಲೋಕದ ಎಲ್ಲಾ ಹಂಗುಗಳನ್ನು ತೊರೆದು ಸ್ವತಂತ್ರ ಚಿಂತನೆಯನ್ನು ಬಿತ್ತುವುದು ಮುಖ್ಯವಾದುದು.

ಆದಿಶಕ್ತಿ ವಿಡಿದಾಡುವರೆಲ್ಲರೂ ಜಂಗಮವಲ್ಲ,
ಅನಾದಿಶಕ್ತಿ ವಿಡಿದಾಡುವರೆಲ್ಲರೂ ಜ್ಞಾನಿಗಳಲ್ಲ,
ಆದಿ ಅನಾದಿ ಎಂಬ ಎರಡ ಭೇದವ ದಾಂಟಿ,
ಇಚ್ಚಾಶಕ್ತಿಯ ಇಚ್ಚೆಯ ಮರೆದು,
ಕ್ರಿಯಾಶಕ್ತಿಯ ಭಾವವ ಬಿಟ್ಟು,
ಜ್ಞಾನ ಶಕ್ತಿಯ ಠಾವವನೊಲ್ಲದೆ,
ತಾನು ತಾನದವಂಗೆ ಏನೂ ಇದಿರಿಲ್ಲಾ,
ಎಂದನಂಬಿಗ ಚೌಡಯ್ಯ 6

ತಾನು ತಾನಾಗುವುದೆ ಅರಿವು. ಆ ತಿಳುವಳಿಕೆ ಬಂದರೆ ಅಲ್ಲಿ ಅರಿವಿನ ಸಂಸ್ಕೃತಿ ಬೆಳೆಯುತ್ತದೆ. ಸ್ವಾತಂತ್ಯ್ರ, ಸಮಾನತೆ ಹುಟ್ಟುತ್ತದೆ. ಇಲ್ಲದಿದ್ದರೆ ಇನ್ನೊಬ್ಬರ ಅಧೀನದಲ್ಲಿ ಬೇಯಬೇಕಾಗುತ್ತದೆ. ಆದಿ ಅನಾದಿಯನ್ನು ಮೀರಿ ಬಯಲ ತತ್ವವನ್ನು ಅನುಸರಿಸುವುದು ನಿಜವಾದ ಅರಿವು ಸಾಮರಸ್ಯದ ಸಂಸ್ಕೃತಿ

ಒಂದನರಿದು ಒಂದ ಮರೆದಿಹನೆಂಬ ಸಂದೇಹದವನಲ್ಲ
ಸರ್ವರ ಕೂಡಿಕೊಂಡು ಅರಿದಿಹೆನೆಂಬ ಬಂಧಮೋಕ್ಷದವನಲ್ಲ
ಆಗಿಗೆ ಮುಯ್ಯಾಂತೂ, ಚೇಗಿಗೆ ಮನಗುಂದುವನಲ್ಲ
ಸುಖದು:ಖವೆಂಬ ಉಭಯವ ಸರಿಗಾಬನಲ್ಲ
ನಿಂದನಿಜವೇ ತಾನಾಗಿದ್ದವಂಗೆ ಬೇರೆ ಬಂಧವೊಂದೂಯಿಲ್ಲ
ಎಂಬನಂಬಿಚೌಡಯ್ಯ 7

ನಿಂದ ನಿಜವೇ ತಾನಾಗಿದ್ದವಂಗೆ ಬೇರೆ ಬಂಧನವೊಂದೂಯಿಲ್ಲ ಎಂದು ಚೌಡಯ್ಯ ಹೇಳುತ್ತಾರೆ. ಯಾವ ಸಂದೇಹವಿಲ್ಲದೆ ತನ್ನನ್ನು ಅರಿಯುವದು ಸಾಮರಸ್ಯದ ತತ್ವ. ಇನ್ನೊಬ್ಬರನ್ನು ತನ್ನವರು ಎಂದು ಭಾವಿಸುವುದು ತನ್ನನ್ನು ಸರಿಯಾಗಿ ಅರಿತುಕೊಂಡಾಗಲೆ. ಆತನು ಎದೆಗುಂದದೆ ತತ್ವಕ್ಕೆ ಬದ್ದನಾಗಿರುತ್ತಾನೆ. ಆತ ಸುಖ ದುಃಖದ ಬಗ್ಗೆಯೂ ಯೋಚಿಸುವದಿಲ್ಲ. ನಿಶಾಂತ ಸ್ಥಿತಿಯಲ್ಲಿರುತ್ತಾನೆ. ಇಂತವರು ಲೋಕವನ್ನು ಉದಾರವಾಗಿ ಪ್ರೀತಿಸುತ್ತಾರೆ.

ದಯೆಯ ಸಂಸ್ಕೃತಿ
ಕಥೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮವಲ್ಲ
ಶೀಲ ಕಟ್ಟಿದವ ಶಿಭಕ್ತನಲ್ಲ
ನೀರು ತೀರ್ಥವಲ್ಲ
ಕೂಳು ಪ್ರಸಾದವಲ್ಲ
ಹೌದೆಂಬುವನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ
ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ 8

ಮನುಷ್ಯರನ್ನು ಪ್ರೀತಿ ವಿಶ್ವಾಸದಿಂದ ಕಾಣುವುದೆ ಧರ್ಮ. ಅದಕ್ಕಿಂತಲೂ ಮಿಗಿಲಾದ ಧರ್ಮವಿಲ್ಲ ಎಂದು ಶರಣರು ನಂಬಿದವರು. ಹೊರಗಿನ ಕುರುಹುಗಳಿಂದ ಧರ್ಮವನ್ನು ನರ‍್ಮಿಸಲು ಆಗುವದಿಲ್ಲ. ಲೋಕವನ್ನು ದಯೆಯಿಂದ ಕಾಣಬೇಕು. ಅದಕ್ಕೆ ಲೌಕಿಕದ ಹಂಗನ್ನು ತೊರೆಯಬೇಕು. ಬದುಕಿನ ಎಲ್ಲಾ ಮೋಹಪಾಶಗಳನ್ನು ಬಿಟ್ಟು ವಿರಕ್ತಿಯಾಗಿ ಸಾಮಾಜಿಕ ಬದುಕಿನಲ್ಲಿ ಒಂದಾಗುವುದು ದಯೆ. ದಯೆಯಿಲ್ಲದ ಧರ್ಮಕ್ಕೆ ಅರ್ಥವೆ ಇಲ್ಲ ಎಂಬುದು ಚೌಡಯ್ಯನ ನಿಲುವು. ಧರ್ಮಗಳು ಅನೇಕ ಕರ್ಮಠ ನಿಯಮಗಳ ಮೂಲಕ ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಗೊಡ್ಡು ಆಚರಣೆಯಲ್ಲಿ ಮುಳಿಗಿಸುವದನ್ನು ಇವರು ಒಪ್ಪುವದಿಲ್ಲ. ಗುರು, ಜಂಗಮ, ಪ್ರಸಾದ ತತ್ವವು ದಯೆಯಿಂದ ಕೂಡಿರಬೇಕು. ಕಂದಾಚಾರದ ಧರ್ಮಕ್ಕೆ ವಿರುದ್ದವಾಗಿ ದಯೆಯ ಧರ್ಮವನ್ನು ಸಂಸ್ಕೃತಿಯಾಗಿ ಬೆಳೆಸಿದರು.

ಜಾತ್ಯಾತೀತ ಸಂಸ್ಕೃತಿ
ಎಲೋ ಮಾನವ ಕೇಳಲೋ
ಶೀಲದಲ್ಲಿ ಸಂಪನ್ನರಾದವರು ನಿವು ಕೇಳಿರೋಃ
ಹಣ್ಣು ಸಣ್ಣ ಜಾತಿಯ ಎಂಜಲು,
ಹಾಲು ಕರುವಿನ ಎಂಜಲು,
ಮೊಸರು ಗೊಲ್ಲತಿಯ ಎಂಜಲು,
ಅಕ್ಕಿ, ಗೋದಿ, ಬೇಳೆ, ಬೆಲ್ಲಗಳು ನೊಣದ ಎಂಜಲು,
ನೀರು ಕಪ್ಪೆ, ಮೀನುಗಳ ಎಂಜಲು, ಉಪ್ಪು ಉಪ್ಪಾರನ ಎಂಜಲು,
ಸಕಲ ಪದಾರ್ಥವು ಅನಂತ ಹುಳುಗಳ ಎಂಜಲು,
ಇಂತ ಎಂಜಲು ಎಂದು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ,
ಮಾಡುವ ದುರಾಚಾರವ ಆರು ಬಣ್ಣಿಸಬಹುದು?
ಅರಿವು ಇಲ್ಲದವರು ಅರಮನೆಗೆ ಮಾಡಿದರು,
ಭಕ್ತಿ ಇಲ್ಲದವರು ಗುರುಲಿಂಗ ಜಂಗಮಕ್ಕೆ ಮಾಡಿದರು.
ಇಂತಪ್ಪ ಸರ್ವರ ಎಂಲು ತಿಂದು
ಶಿವಲಿಂಗವ ಧರಿಸಿಕೊಂಡು, ಶಿವಭಕ್ತರೆಂದು ಹೇಳಿಸಿ,
ಕಾಲಿಗೆ ಬಂದಂತೆ ಕುಣಿದು,
ಬಾಯಿಗೆ ಬಂದಂತೆ ಅಂದು
ಮನಬಂದಂತೆ ಸ್ತ್ರೀಸಂಗದಲ್ಲಿ ಆಚರಿಸುವ
ಬ್ರಷ್ಟ ಹೊಲೆಮಾದಿಗರಿಗೆ ಶೀಲವು ಎಲ್ಲಿಯದು?
ಆಚರಣೆ ಎಲ್ಲಿಹದು? ಕುಲವೆಲ್ಲಿಹದು?
ಇಂತಪ್ಪ ಮೂಳ ಹೊಲೆಯರ ಮೂಗ ಕೊಯ್ದು
ಪಡಿಹಾರಿ ಉತ್ತಣ್ಣಗಳ ಪಾದುಕದಿ ಹೊಡಿ ಎಂದಾತ
ನಮ್ಮ ಅಂಬಿ ಚೌಡಯ್ಯ. 9

ಹುಟ್ಟುತ್ತಲೆ ಜಾತಿಯನ್ನು ನಿರ್ಣಯಿಸುವದನ್ನು ವಚನಕಾರರು ಒಪ್ಪುವದಿಲ್ಲ. ಕುಲದ ಹೆಸರಿನಲ್ಲಿ ಮನುಷ್ಯರ ನಡುವೆ ಒಡಕು ತರುವುದನ್ನು ವಿರೋಧಿಸುತ್ತಾರೆ. ಆ ನೆಲೆಯಲ್ಲಿ ಆಚರಣೆಗಳನ್ನು ಕಟ್ಟುವುದರ ಬಗ್ಗೆ ಅವರಿಗೆ ತೀವ್ರವಾದ ಆಕ್ರೋಶವಿದೆ. ಈ ಲೋಕದಲ್ಲಿ ಯಾವುದು ಪವಿತ್ರವಿಲ್ಲ. ಪ್ರಕೃತಿಯೆ ಒಂದಕ್ಕೊಂದು ಅವಲಂಬಿಸಿ ಬದುಕುವ ಜೀವಸರಪಳಿಯನ್ನು ಸೃಷ್ಟಿಸಿದೆ. ಅದರಲ್ಲಿ ಇದು ಶುದ್ಧ ಎಂದು ಜನರನ್ನು ನಂಬಿಸುವುದು ಮೂರ್ಖತನ. ಹೀಗಾಗಿ ಕುಲವೆಂಬುದು ಇಲ್ಲವೇ ಇಲ್ಲ. ಪಂಚಭೂತಗಳೇ ಪರಸ್ಪರ ಎಂಜಲಿನಿಂದ ಕೂಡಿರುವಾಗ ಎಲ್ಲಿ ಮನುಷ್ಯರ ನಡುವೆ ಭೌತಿಕ ಪರಿಶುಧ್ಧತೆ ಬರುತ್ತದೆ. ಆದ್ದರಿಂದ ಎಲ್ಲಾರನ್ನು ಸಮಾನ ಭಾವನೆಯಿಂದ ಜಾತ್ಯಾತೀತವಾಗಿ ಕಾಣುವುದು ನಿಜವಾದ ಸಂಸ್ಕೃತಿ.

ಸಮಾನತೆಯ ಸಂಸ್ಕೃತಿ
ಕಲ್ಲ ದೇವರ ಪೂಜೆಯ ಮಾಡಿ,
ಕಲಿಯುಗದ ಕತ್ತೆಗಳಾಗಿ ಹುಟ್ಟದರು.
ಮಣ್ಣದೇವರ ಪೂಜಿಸಿ ಮಾನಹೀನರಾದರು.
ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು.
ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು.
ಜಗದ್ಭರಿತನಾದ ಪರಶಿವನೊಳಗೆ
ಕಿಂಕರನಾದ ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ 10

ಸಮಾಜದಲ್ಲಿ ಸಮಾನತೆಯನ್ನು ತರುವುದು ಇವರ ನಿಲುವಾಗಿತ್ತು. ಅದಕ್ಕೆ ಶಿವನನ್ನು ತಮ್ಮ ಪ್ರತೀಕವನ್ನಾಗಿಸಿದರು. ಬೇರೆ ಬೇರೆಯ ದೈವಗಳಿಗೆ ನಡೆದುಕೊಳ್ಳುವದಕ್ಕಿಂತ ಶಿವನನ್ನು ಆರಾಧಿಸುವುದು ಭಕ್ತನಿಗೆ ಮುಖ್ಯವಾಗಬೇಕು. ಶಿವನನ್ನು ಪ್ರತಿಯೊಬ್ಬರು ಆರಾಧಿಸುವುದರ ಮೂಲಕ ಒಟ್ಟಾಗಬೇಕು. ಆಗ ಸಮಾನತೆಯ ಸಮಾಜ ನಿರ್ಮಾಣವಾಗುತ್ತೆಂದು ಅವರು ನಂಬಿದ್ದರು.

ಪ್ರಜಾತಾಂತ್ರಿಕ ಸಂಸ್ಕೃತಿ
ಕಾಯದಿಂದ ಕಂಡೆಯನೆಂದಡೆ ಬ್ರಹ್ಮನ ಹಂಗು,
ಜೀವದಿಂದ ಕಂಡೆಹೆನೆಂದಡೆ ವಿಷ್ಣುವಿನ ಹಂಗು,
ಅರಿವಿನಿಂದ ಕಂಡೆಹೆನೆಂದಡೆ ರುದ್ರನ ಹಂಗು,
ಕಾಬ ಕಾಬಲ್ಲಿ ಕಂಡೆಹೆನೆಂದಡೆ ನಾಡೆಲ್ಲರ ಹಂಗು,
ಇವನೆಲ್ಲವನಲ್ಲಾ ನಿಲಿಕಿ ನೋಡಿ ಕಂಡ
ಅಂಬಿಗ ಚೌಡಯ್ಯ 11

ವ್ಯವಸ್ಥೆಯಲ್ಲಿ ಪ್ರಜೆ ಸರ್ವ ಸ್ವತಂತ್ರನಾಗಿರುವುದು ಪ್ರಜಾತಾಂತ್ರಿಕ ಸಂಸ್ಕೃತಿ. ಇನ್ನೊಬ್ಬರಿಗೆ ಕೇಡಿಲ್ಲದಂತೆ ಬದುಕುವುದು ಸ್ವತಂತ್ರವಾಗುತ್ತದೆ. ಮನಸ್ಸಿಗೆ ಬಂದಂತೆ ಬದುಕುವುದು ನಡೆದುಕೊಳ್ಳುವುದು ಸ್ವತಂತ್ರವಾಗುದಿಲ್ಲ. ಸಮಾಜದ ಉದ್ದಾರಕ್ಕೆ ತನ್ನನ್ನು ಸಂಪೂರ್ಣ ತೊಡಗಿಸಿಕೊಳ್ಳುವವನು ಪ್ರಜಾತಾಂತ್ರಿಕ ಸಂಸ್ಕೃತಿಯನ್ನು ಅನುಸರಿಸುತ್ತಾನೆ. ಪ್ರಭುತ್ವದ ಹಂಗಿಗೆ ಒಳಗಾಗದೆ ಸ್ವತಂತ್ರವಾಗಿ ಚಿಂತಿಸುವುದು, ಕಾಯದ ಮೋಹವನ್ನು ಕಳೆದುಕೊಳ್ಳುವುದು ಮೌಲ್ಯ. ಆ ಮೌಲ್ಯದಲ್ಲಿ ಬದುಕಿದಾಗ ಪ್ರಜಾತಾಂತ್ರಿಕ ಸಂಸ್ಕೃತಿ ಗಟ್ಟಿಯಾಗುತ್ತದೆ.

ಅಂಬಿಗ ಸಂಸ್ಕೃತಿ
ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು,
ನಂಬಿದರೆ ಒಂದೆ ಹುಟ್ಟಲಿ
ಕಡೆಯ ಹಾಯಿಸುವನಂಬಿಗರ ಚೌಡಯ್ಯ. 12

ನಂಬಿಕೆಗೆ ಹೆಸರಾದುದು ಅಂಬಿಗರ ಸಂಸ್ಕೃತಿ. ಅವರನ್ನು ಕುಂದು ನುಡಿಯದಿರು, ಕಡೆಗಣಿಸದಿರು, ಹೀಯಾಳಿಸದಿರು, ಅವರನ್ನು ನಂಬಿದರೆ ನಿಮ್ಮನ್ನು ಗುರಿ ಮುಟ್ಟಿಸುತ್ತಾನೆ ಎಂದು ಚೌಡಯ್ಯ ಹೇಳುತ್ತಾನೆ. ಸುರಕ್ಷಿತವಾಗಿ ದಂಡೆಗೆ ತಲುಪಿಸುವ ಜವಬ್ದಾರಿ ಅಂಬಿಗನದಾಗಿರುತ್ತದೆ. ಜೀವವನ್ನು ಕೊಟ್ಟು ದೋಣಿಯನ್ನು ನೀರಿನಲ್ಲಿ ಹಾಯಿಸಿ ದಡವನ್ನು ತಲುಪಿಸುತ್ತಾನೆ. ಇಲ್ಲಿ ಕಾಯಕ ನಿಷ್ಠೆ, ಬಲವಾದ ನಂಬಿಕೆಯನ್ನು ಕಾಣಬಹುದು.

ಅಂಬಿಗನು ಜಗದೊಳಗೆ ಇಂಬಿಲೋಲಾಡುವನುಃ
ತುಂಬಿದ ಸಾಗರದೊಳಗೆ ನೋಡಯ್ಯಾ.
ನಿಂದ ದೋಣಿಯನೇರಿದಂದಿನ ಹುಟ್ಟು
ಕಂಡವರಂದವನರಿದಾತ ತೊಳಸುತ್ತಿದ್ದನು.
ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು
ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗ ಚೌಡಯ್ಯ 13

ದೋಣಿಯಲ್ಲಿ ಹಲವು ಮನೋಭಾವದವರು ಬರುತ್ತಾರೆ ಅವರೆಲ್ಲರನ್ನು ಶಿವನ ಸಾನಿದ್ಯದಲ್ಲಿ ತೇಲಿಸುವ ಹುಟ್ಟನ್ನು ಹಾಕುತ್ತೇನೆ. ಅವರಲ್ಲಿದ್ದ ಕಿಲುಬನ್ನೆಲ್ಲ ಕಿತ್ತಿ ಶಿವನ ಶುದ್ಧತೆಯನ್ನುಂಟುಮಾಡುತ್ತೇನೆ ಎನ್ನುತ್ತಾನೆ. ಯಾವದೆ ವೃತ್ತಿಕಾಯಕ ನಿಷ್ಠೆಯಿಂದ ಕೂಡಿದ್ದರೆ ಎಂಥವರನ್ನು ಬದಲು ಮಾಡುತ್ತದೆ. ಅಂಬಿಗ ಕಾಯಕ ಬಹಳ ಶ್ರದ್ದೆಯನ್ನು ಬಯಸುತ್ತದೆ. ಇಲ್ಲದಿದ್ದರೆ ಜೀವಕ್ಕೆ ಹಾನಿಯಾಗುತ್ತದೆ.

ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ,
ತಾಗುವ ಮೊನೆಗಾಧಾರವಾಗಿ ದೂರ ಏಯಿದುವುದಕೆ ಸಾಗಿಸುವ ಗುಣ ತಾನಾಗಿ
ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ,
ಅರಿವು ಕುರುಹು ಎರಡು ಬೆಕೆಂದನಂಬಿಗ ಚೌಡಯ್ಯ 14

ಅರಿವು ಕುರುಹು ಭೇದವರಿಯದೆ ಬದುಕಿನಲ್ಲಿ ಇರಬೇಕು. ಅವು ನಿಶ್ಚಿತ ಗುರಿಯನ್ನು ತಲುಪಬೇಕು. ಅವು ಭಿನ್ನವಾದರೆ ಮನಷ್ಯನ ನಿಜವಾದ ಪ್ರೀತಿ ಕಳೆದುಹೋಗುತ್ತದೆ. ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ ಬದುಕು ಚಲಿಸಬೇಕು. ತಾನೆ ಅದು ಗುರಿಯೆಡೆಗೆ ಒಯ್ಯುತ್ತದೆ. ಕ್ರಿಯೆ ಹಾಗೂ ಅರಿವು ಭೇದವಿಲ್ಲದೆ ಬದುಕುವುದು ಅಂಬಿಗ ಸಂಸ್ಕೃತಿ.

ಅಂಬಿಗರ ಚೌಡಯ್ಯ ತಮ್ಮ ವಚನಗಳಲ್ಲಿ ಈಗಾಗಲೆ ಇರುವ ಸಂಸ್ಕೃತಿಗೆ ಪರ್ಯಾಯವಾಗಿ ಸರ್ವರನ್ನು ಒಳಗೊಳ್ಳುವ ಸಂಸ್ಕೃತಿಯೊಂದನ್ನು ನಿರ್ವಚಿಸುತ್ತಿದ್ದಾರೆ. ಧಾರ್ಮಿಕ ಕಂದಾಚಾರದಲ್ಲಿ ಮುಳುಗುತ್ತಿರುವ ಮನುಜಮತಕೆ ಈ ಚಿಂತನೆಗಳು ಪ್ರಸ್ತುತವಾಗಿವೆ. ಈ ಅಂಶಗಳ ಮೇಲೆ ಸಂಸ್ಕೃತಿಯನ್ನು ಕಟ್ಟಿಕೊಳ್ಳುವ ಅಗತ್ಯವಿದೆ.

ಅಡಿ ಟಿಪ್ಪಣಿಗಳು
1. ಸಂಕೀರ್ಣ ವಚನ ಸಂಪುಟ ಸಂ. ಡಾ. ಎಂ. ಎಂ. ಕಲಬುರ್ಗಿ, ವಚನ 188 ಪು. 64, ಪ್ರ. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-2001
2. ಅದೇ, ವಚನ 43 ಪು.21
3. ಅದೇ, ವಚನ 105 ಪು.39
4. ಅದೇ, ವಚನ 205 ಪು.70-71
5. ಅದೇ, ವಚನ 25 ಪು.18
6. ಅದೇ, ವಚನ 40 ಪು.20
7. ಅದೇ, ವಚನ 70 ಪು.29
8. ಅದೇ, ವಚನ 78 ಪು.31
9. ಅದೇ, ವಚನ 66 ಪು.27-28
10.ಅದೇ, ವಚನ 88 ಪು.34
11.ಅದೇ, ವಚನ 98 ಪು.36
12.ಅದೇ, ವಚನ 07 ಪು.08
13.ಅದೇ, ವಚನ 08 ಪು.08-09
14.ಅದೇ, ವಚನ 09 ಪು.09

ಈ ಅಂಕಣದ ಹಿಂದಿನ ಬರಹಗಳು:
ಧರ್ಮಾಧಿಕಾರದ ಆಶಯಗಳು

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ
ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ
ಧನಿಯರ ಸತ್ಯನಾರಾಯಣ ಕತೆಃ ಕಾಲಮಾನದ ಶೋಷಣೆಯ ಸ್ವರೂಪ
ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳಲ್ಲಿ ಬದುಕಿನ ಚಿಂತನೆ
ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ
ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ
`ಹೆಣ್ತನದ’ ಕತೆಗಳು
ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು

MORE NEWS

ನಳ ಚರಿತ್ರೆ : ಪ್ರೇಮದ ಅವಿಷ್ಕಾರ 

23-05-2024 ಬೆಂಗಳೂರು

"ಭವದ ಕೇಡುಗಳನ್ನು ಭಗ್ನಗೊಳಿಸುವುದು ದೈವಿಕವಾದ ಪ್ರೇಮ. ಕಾಮದ ಕೊಂಡಗಳನ್ನು ಹಾಯ್ದು ಬಂದಾಗಲೇ ಪ್ರೇಮಕ್ಕೊಂದು ಭಕ್ತ...

ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...

23-05-2024 ಬೆಂಗಳೂರು

"ಕರಿಜಾಲಿಯ ಮುಳ್ಳುಕಂಟಿ ಕೀಟಗಳು ಸಹಿತ ಸೇರಿಕೊಂಡು ಝೀ.. ಝೀ.. ಅಂತ ತಾರಕದ ಸ್ವರದಲ್ಲಿ ಝೀಗುಡುತ್ತಿತ್ತು. ಅಲ್ಲೇ ...

ಪ್ರಸಾರಿತ ಪದೋತ್ತಸನ ಮತ್ತು ಅರ್ಧ ಚಂದ್ರಾಸನ

19-05-2024 ಬೆಂಗಳೂರು

"ಪ್ರಸಾರಿತ ಪದೋತ್ತಸನ ಆಸನ ಸದಾ ತಲೆನೋವಿನಿಂದ ಬಳಲುವವರಿಗೂ ಹಾಗೂ ಶೀರ್ಷಾಸನ ಮಾಡಲಾಗದವರು ಈ ಆಸನದ ಅಭ್ಯಾಸದಿಂದ ಶೀ...