ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ

Date: 18-11-2023

Location: ಬೆಂಗಳೂರು


''ಕನ್ನಡದ ಪ್ರತಿಯೊಬ್ಬ ಲೇಖಕ ಒಮ್ಮೆ ಕನ್ನಡ ಸಂಘ ಕಾಂತಾವರ ನೋಡಬೇಕೆಂಬ ಅಭಿಲಾಷೆ ಮೂಡುವ ಹಾಗೆ ನಾಡನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಅದಕ್ಕೆ ಕಾರಣ ಅಲ್ಲಿ ನಿರಂತರ ನಡೆಯುತ್ತಿರುವ ಸಾಹಿತ್ಯ, ಸಾಂಸ್ಕೃತಿಕ ಚೆಟುವಟಿಕೆಗಳು. ಅನೇಕ ಪ್ರಶಸ್ತಿಗಳನ್ನು ಸ್ಥಾಪಿಸಿ ಪಾರದರ್ಶಕವಾಗಿ ಕೊಡುತ್ತಾ ಬಂದಿದೆ,” ಎನ್ನುತ್ತಾರೆ ರಾಜಶೇಖರ ಹಳೆಮನೆ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ‘ಕಾಂತಾವರ ಕನ್ನಡ ಸಂಘ’ದ ಕುರಿತು ವಿವರಿಸಿದ್ದಾರೆ.

ಕನ್ನಡ ನಾಡಿನ ಚರಿತ್ರೆಯಲ್ಲಿ `ಕನ್ನಡ ಕಾಯಕ’ವನ್ನು ವ್ರತದಂತೆ ಮಾಡುತ್ತಿರುವ ಕನ್ನಡ ಸಂಘ ಕಾಂತಾವರ ಉಡುಪಿ ಜಿಲ್ಲೆಯ ಕಾರ್ಕಾಳ ತಾಲೂಕಿನ ಕಾಡಿನ ಮದ್ಯೆ ಇರುವ ಹಳ್ಳಿ. ನಾಡಿಗೆ ಅಪರಿಚಿತವಾದ ಪುಟ್ಟ ಹಳ್ಳಿಯನ್ನು ಇಡೀ ನಾಡೇ ಹೊರಳಿ ನೋಡುವಂತೆ ಮಾಡಿದ್ದು ಕಾಂತಾವರ ಕನ್ನಡ ಸಂಘ. ಈ ಸಂಘದ ರುವಾರಿ ಡಾ. ನಾರಾಯಣ ಮೊಗಸಾಲೆ. ಅವರು ಮೊಗಸಾಲೆ ಎಂದೇ ನಾಡಿನಲ್ಲಿ ಚಿರಪರಿಚಿತರು. ಸಾವಿರಾರು ಪುಟಗಳನ್ನು ಬರೆದು ನಾಡಿನ ಹಲವಾರು ಪ್ರತಿಷ್ಠಿತ ಪ್ರಸಸ್ತಿಗಳನ್ನು ಪಡೆದವರು. ಸಾವಿರಾರು ಲೇಖಕರನ್ನು ಬೆಳೆಸಿದವರು. ಕಾಂತಾವರವನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡ ಚೆಟುವಟಿಕೆಗಳನ್ನು ಯೋಗಿಯಂತೆ ನಿರಂತರ ಮಾಡುತ್ತಾ ಬಂದವರು. ಮೊಗಸಾಲೆಯಿಲ್ಲದೆ ಕಾಂತಾವರ ಕನ್ನಡ ಸಂಘವಿಲ್ಲ. ಮೊಗಸಾಲೆಯವರ ನೇತೃತ್ವದಲ್ಲಿ 25.05.1976 ರಂದು ಸ್ಥಾಪನೆಗೊಂಡ ಕನ್ನಡ ಸಂಘ ಎಲ್ಲಾ ಕನ್ನಡ ಸಂಘಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ. ಕನ್ನಡದ ಪ್ರತಿಯೊಬ್ಬ ಲೇಖಕ ಒಮ್ಮೆ ಕನ್ನಡ ಸಂಘ ಕಾಂತಾವರ ನೋಡಬೇಕೆಂಬ ಅಭಿಲಾಷೆ ಮೂಡುವ ಹಾಗೆ ನಾಡನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಅದಕ್ಕೆ ಕಾರಣ ಅಲ್ಲಿ ನಿರಂತರ ನಡೆಯುತ್ತಿರುವ ಸಾಹಿತ್ಯ, ಸಾಂಸ್ಕೃತಿಕ ಚೆಟುವಟಿಕೆಗಳು. ಅನೇಕ ಪ್ರಶಸ್ತಿಗಳನ್ನು ಸ್ಥಾಪಿಸಿ ಪಾರದರ್ಶಕವಾಗಿ ಕೊಡುತ್ತಾ ಬಂದಿರುವುದು. ಹಲವು ನಾಡಿನ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಿರಂತರ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು. ನಾಡಿನೆಲ್ಲಾ ಹಿರಿಯ ಕಿರಿಯ ಲೇಖಕರನ್ನು ಕಾಂತಾವರಕ್ಕೆ ಆಹ್ವಾನಿಸಿ ಆದರ ಆತಿಥ್ಯ ನೀಡಿ ಗೌರವಿಸಿ ವಿಚಾರಗಳನ್ನು ಹಂಚಿಕೊಳ್ಳುವುದು. ಅವರೊಂದಿಗೆ ಸಂವಾದವನ್ನು ಏರ್ಪಿಡಿಸಿ ಹೊಸ ಚಿಂತನೆಯನ್ನು ಹುಟ್ಟುಹಾಕುವುದು. ಕಾಂತಾವರಕ್ಕೆ ಬಂದ ಎಲ್ಲಾ ಬರಹಗಾರರ ವಿಚಾರಗಳನ್ನು ಪ್ರಕಟಿಸುವುದು. ಪ್ರಕಟಣೆಯ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಡಿಸಿಕೊಂಡು ಬರುತ್ತಿರುವುದು. ಜೊತೆಗೆ ನಾಟಕ, ಯಕ್ಷಗಾನ, ನೃತ್ಯ, ಸಮೂಹಗಾನ, ಏಕವ್ಯಕ್ತಿ ನಾಟಕ ಮುಂತಾದ ಲಲಿತ ಕಲೆಗಳು ಕಾಂತಾವರದಲ್ಲಿ ರಿಂಗಣಿಸುವಂತೆ ಮಾಡುತ್ತಿರುವುದು. ಕನ್ನಡ ಸಂಘವನ್ನು ಸದಾ ಜೀವಂತವಾಗಿಟ್ಟಿದ್ದಾರೆ. ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳು ನಾಡಿನ ಗಮನ ಸೆಳೆಯುತ್ತಿವೆ. ಅದಕ್ಕೆ ಕಾರಣ ಸಾರ್ವಜನಿಕ ಹಣವನ್ನು ನಿಯತ್ತಿನಿಂದ ಬಳಸುತ್ತಿರುವದು. ಒಂದು ಪೈಸೆಯೂ ಆಚೆ ಈಚೆ ಆಗದಂತೆ ಸಾರ್ವಜನಿಕರಿಗೆ ಪ್ರತಿ ಕಾರ್ಯಕ್ರಮಗಳು ಮುಗಿದ ನಂತರ ಸಾರ್ವಜನಿಕರ ಮಂದೆ ಮಂಡಿಸುವುದು. ಹೀಗಾಗಿ ಕಾಂತವರದ ಜನರು ಹಾಗೆಯೇ ನಾಡಿನ ಜನರು, ಬರಹಗಾರರು ಕಾಂತಾವರ ಕನ್ನಡ ಸಂಘವನ್ನು ಬೆರಗುಗಣ್ಣಿನಿಂದ ನೋಡುತ್ತಿರುವುದು. ಯಾವುದೇ ಸಂಘ ಜೀವಂತವಾಗಿ ಉಳಿಯುವದು ಅದರ ಪ್ರಮಾಣಿಕ ಬದ್ದತೆಯಿಂದ. ಅಂತಹ ಬದ್ದತೆಯನ್ನು ನಿರಂತರವಾಗಿ ಕಾಂತಾವರ ಕನ್ನಡ ಸಂಘ ಕಾಪಾಡಿಕೊಂಡು ನಂದಿದೆ. ಅದರ ಸಂಸ್ಥಾಪಕರಾದ ಮೊಗಸಾಲೆಯವರು ಈ ಸಾಮಜಿಕ ಪಾರದರ್ಶಕತೆಯನ್ನು ತಮ್ಮ ಬರಹ, ಸಂಘಟನೆ, ಕನ್ನಡ ಸಂಘದ ಮೂಲಕ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ನಾ. ಮೊಗಸಾಲೆಯವರು ಮೂಲತಃ ಕಾಂತಾವರದವರೇನು ಅಲ್ಲ. ಅವರು ಆಯುರ್ವೇದ ವಿಷಯದಲ್ಲಿ ಪದವಿ ಪಡೆದದ್ದು. ಈ ಪುಟ್ಟಗ್ರಾಮಕ್ಕೆ ಉದ್ಯೋಗಾರ್ಥಿಯಾಗಿ ಬಂದದ್ದು. ಇವರು ಸೋದರಮಾವನ ಮನೆಯಲ್ಲಿ ಇದ್ದು ಓದಿದ್ದು. ಉಚಿತ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಉಡುಪಿ ಆಯುರ್ವೇದ ಕಾಲೇಜಿನಲ್ಲಿ ಅಧ್ಯಯನ ಕೈಗೊಂಡದ್ದು. ಪದವಿ ಮುಗಿದ ಕೂಡಲೇ ಕಾಂತಾವರದಲ್ಲಿ ವೈದ್ಯಾಧಿಕಾರಿಯಾಗಿ ಕಾಂತಾವರದಲ್ಲಿ ಸೇರಿದರು. ಆಗ ಅವರಿಗೆ 21 ವರ್ಷ. ಕಾಸರಗೋಡಿನ ಮೊಗಸಾಲೆಯವರಾದ ಅವರು ಇಲ್ಲಿ ಕನ್ನಡ ಸಂಘವನ್ನು ಸ್ಥಾಪಿಸಿ ಅದನ್ನು ಬೆಳೆಸುತ್ತಾ ತಾವು ಬೆಳೆಯುತ್ತಾ ಕಾಂತಾವರದವರೆ ಆದರು. ಆ ಪುಟ್ಟಹಳ್ಳಿಯನ್ನು ಬಿಟ್ಟು ಬೇರೆ ಎಲ್ಲಿ ಹೋಗಲೇ ಇಲ್ಲ. ಅನೇಕ ಒಳ್ಳೆಯ ಅವಕಾಶಗಳು ಬಂದರೂ ಎಲ್ಲವನ್ನು ನಿರಾಕರಿಸಿ ಕನ್ನಡ ಸಂಘದ ಕಾರಣಕ್ಕೆ ಈ ನೆಲವನ್ನೇ ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡರು. ಇದು ಕಾಂತಾವರದ ಅದೃಷ್ಟವೂ, ನಾಡಿನ ಅದೃಷ್ಟವೂ ಆಗಿದೆ.

ಮೊಗಸಾಲೆಯವರು ಕಾಂತಾವರದಲ್ಲಿ ಕೆಲಸಕ್ಕೆ ಸೇರಿದ್ದು 1965 ನವೆಂಬರ್ 1 ರಂದು. ರಾಜ್ಯ ಉದಯವಾದ ದಿನ ಕೆಲಸಕ್ಕೆ ಸೇರಿದರು. ಇದರ ಜೊತೆಗೆ ಕಾಂತಾವರದ ಉದಯವೂ ಆಯಿತು. ಇಲ್ಲಿ ಮೊಗಸಾಲೆ ಬರದಿದ್ದರೆ ಕಾಂತಾವರ ಕನ್ನಡ ನಕ್ಷೆಯಲ್ಲಿ ಒಂದು ಹೆಸರು ಆಗಿ ಮಾತ್ರ ಇರುತಿತ್ತು. ನಾಡಿನ ಮನಸ್ಸಿನಲ್ಲಿ ಇರುತ್ತಿರಲಿಲ್ಲ. `ಪ್ರತಿ ಗ್ರಾಮಗಳು ಈ ರೀತಿಯ ಕನ್ನಡ ಸಂಘವನ್ನು ಕಟ್ಟಿಕೊಂಡು ಕನ್ನಡ ಕಾಯಕ ಮಾಡಿದರೆ ಕನ್ನಡಕ್ಕೆ ಮತ್ತಷ್ಟೂ ಕಸುವು ಬರುತ್ತದೆ. ಸಾಂಸ್ಕೃತಿಕವಾಗಿ ಗ್ರಾಮದ ಮನಸ್ಸಗಳನ್ನು ಕಟ್ಟಬಹುದು. ಹೊಸ ತಲೆಮಾರಿಗೆ ಸಾಹಿತ್ಯ ಅಭಿರುಚಿಯನ್ನು ಬೆಳೆಸಬಹುದು. ಪುಸ್ತಕಗಳ ಕಡೆ ಸೆಳೆಯುವಂತೆ ಮಾಡಬಹುದು. ಅನೇಕ ಬರಹಗಾರರನ್ನು ಬೆಳೆಸಬಹುದು. ಕನ್ನಡ ಶಾಲೆಗಳನ್ನು ಬಲಗೊಳಿಸಬುದು. ಗ್ರಾಮದ ಜಾನಪದ ಕಲೆಗಳನ್ನು ಉಳಿಸಿಕೊಳ್ಳಬಹುದು. ಗ್ರಾಮದೊಟ್ಟಿಗಿನ ಸಂಬಂಧಗಳನ್ನು ಗಟ್ಟಿಗೊಳಿಸಬಹುದು. ಜಾತಿ, ಧರ್ಮ ಮೀರಿದ ಮನುಷ್ಯತ್ವವನ್ನು ಜನರ ಮನಸ್ಸಿನಲ್ಲಿ ಬಿತ್ತಬಹುದು. ಹೊಸ ಹೊಸ ಚಿಂತನೆಗಳನ್ನು ಕೇಳುವುದರ ಮೂಲಕ ಹೊಸ ಬದುಕುಗಳನ್ನು, ನೈತಿಕತೆಯನ್ನು ಕಟ್ಟಿಕೊಳ್ಳಬಹುದು. ಇಂತಹ ಪ್ರಯತ್ನವನ್ನು ನಾನು ಕಳೆದು 50 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇನೆ. ಈ ಪ್ರಯತ್ನಕ್ಕೆ ಗ್ರಾಮದ ಜನ ಕೈಜೋಡಿಸಿದ್ದಾರೆ. ಗ್ರಾಮದ ಜನ ನಂಬುವುದು ನಾವು ಪ್ರಮಾಣಿಕರಾಗಿದ್ದಾಗ ಮಾತ್ರ. ಅಲ್ಲಿ ಯಾವುದೇ ರಾಜಕೀಯವನ್ನು ತರದೆ ಕೆಲಸ ಮಾಡಬೇಕು.’ ಎನ್ನುತ್ತಾರೆ ಸಂಘದ ಅಧ್ಯಕ್ಷರಾದ ನಾ. ಮೊಗಸಾಲೆಯವರು.

ಮೂಡುಬಿದರೆ ಕಾರ್ಕಾಳ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳುವಾಯಿ ಎಂಬ ಪುಟ್ಟ ಪೇಟೆಯಲ್ಲಿ ಇಳಿದು ದೂರದ ಪಡುಬಿದ್ರೆಗೆ ಬೆಳ್ಮಣ್ಣು ಮೂಲಕ ಹಾದು ಹೋಗುವ ರಸ್ತೆಯಲ್ಲಿ ಮೂರು ಕಿ.ಮೀ. ಬಲಕ್ಕೆ ಹೋದರೆ ಕಾಂತಾವರ ಸಿಗುತ್ತದೆ. ಕಾಂತೇಶ್ವರ ಎಂಬ ದೇವಸ್ಥಾನ ಇದೆ. ಈ ದೇವಸ್ಥಾನದ ರಥ ಬೀದಿಯಲ್ಲಿಯೇ ನಾಡಿನಾದ್ಯಂತ ಹೆಸರು ಮಾಡಿದ ಕಾಂತಾವರ ಕನ್ನಡ ಸಂಘವಿದೆ. ಮೊದಲು ಬೇಲಾಡಿ ಶಾಲೆಯಲ್ಲಿ ಕನ್ನಡ ಸಂಘ ಹುಟ್ಟಿಕೊಂಡಿತು. ಅಲ್ಲಿಯೇ ಕನ್ನಡ ಚೆಟುವಟಿಕೆಗಳು ನಡೆಯುತ್ತಿದ್ದವು. ಈ ಸಂಘದ ಮೂಲಕ ಸುತ್ತ ಮುತ್ತಲಿನ ಶಾಲೆಗಳಿಗೆ ಅನೇಕ ಕನ್ನಡ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿಯನ್ನು ಮೂಡಿಸುತ್ತಿದ್ದರು. ವಿದಾರ್ಥಿಗಳಲ್ಲಿ ಕಥೆ, ಕವನ, ಸ್ಪರ್ಧೆಗಳನ್ನು ಏರ್ಪಡಿಸಿ ಬರವಣಿಗೆಗೆ ಪ್ರೋತ್ಸಾಹಿಸುತ್ತಿದ್ದರು. ಮಕ್ಕಳಿಗಾಗಿಯೆ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತಿದ್ದರು. ಈ ಚಟುವಟಿಕೆಗಳು ಮುಂದೆ ವಿಸ್ತಾರವನ್ನು ಪಡೆದುಕೊಂಡು ಇಡೀ ನಾಡು ಈ ಕಡೆ ನೋಡುವಂತೆ ಆಯಿತು.

ಡಾ. ಎಸ್. ವಿ. ಪರಮೇಶ್ವರ ಭಟ್ಟರು ಮೊದಲು ಕನ್ನಡ ಸಂಘವನ್ನು ಉದ್ಘಾಟಿಸಿದರು. ಅವರು ಬೆಳಗಿದ ದೀಪ ನಂದದಂತೆ ಇಂದಿಗೂ ಉರಿಯುತ್ತಿದೆ. ಕಾಂತಾವರಕ್ಕೆ ಕನ್ನಡ ನಾಡಿನ ಹಲವು ಕಡೆಯಿಂದ ಸಂಶೋಧಕರು, ವಿಮರ್ಶಕರು, ಕವಿಗಳು, ಕಾದಂಬರಿಕಾರರು, ಕಥೆಗಾರರು ಬಂದು ಹೋಗಿದ್ದಾರೆ. ಕಾಂತಾವರದ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಪ್ರತಿಷ್ಠೆಯ ವಿಷಯವೂ ಆಯಿತು. ಕಾಂತಾವರ ಕನ್ನಡ ಸಂಘದಲ್ಲಿ ಯಾರು ಕಾರ್ಯಕ್ರಮ ನೀಡುತ್ತಾರೋ ಅವರು ಉತ್ತಮ ಬರಹಗಾರರು ಎಂದು ಗುರುತಿಸುವಂತಾಯಿತು.

ಇಲ್ಲಿ ನೂರಾರು ಚಟುವಟಿಕೆಗಳು ನಡೆಯುತ್ತಿದ್ದರೂ ಸ್ವಂತ ಕಟ್ಟಡವಿರಲಿಲ್ಲ. ಬೆಳ್ಳಿಹಬ್ಬದ ಸಂದರ್ಭದಲ್ಲಿ ಒಂದು ಕಟ್ಟಡ ನಿರ್ಮಿಸಲು ಯೋಚಿಸುತ್ತಾರೆ. ಆಗ ಅವರ ನೆರವಿಗೆ ಬಂದವರು ಉದಾರಿಗಳೂ, ಮಾನವತಾವಾದಿಗಳೂ, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರಾದ ಕೆ. ಬಿ. ಜಿನರಾಜ ಹೆಗ್ಡೆಯವರು. ಜಿನರಾಜ ಹೆಗ್ಡೆ ಅವರಿಗೆ ನೂರು ವರ್ಷ ತುಂಬಿತು. ಅವರನ್ನು ಸ್ಮರಿಸುವುದು ಕನ್ನಡಿಗರ ಕರ್ತವ್ಯ ಎಂದು ಭಾವಿಸಿದ ನಾ. ಮೊಗಸಾಲೆಯವರು ಅವರ ಸ್ಮಾರಕವನ್ನು ಕಾಂತಾವರದಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಮೂಡುಬಿದಿರೆಯ ಶಾಸಕರಾದ ಅಭಯ್ ಚಂದ್ರ ಜೈನ್ ಅವರನ್ನು ಕರೆದುಕೊಂಡು ಆಗಿನ ಮುಖ್ಯಮಂತ್ರಿಗಳಾದ ಎಸ್. ಎಂ. ಕೃಷ್ಣ ಅವರ ಬಳಿಗೆ ಹೋಗಿ ಜಿನರಾಜ್ ಅವರ ಕೊಡಗೆಗಳನ್ನು ವಿವರಿಸುತ್ತಾರೆ. ಅವರು ಕನ್ನಡ ಸಂಘ ಕಟ್ಟಡ ಕಟ್ಟಲು 12 ಲಕ್ಷ ಅನುದಾನ ನೀಡುತ್ತಾರೆ. ಅದು ಅವರ ಕನ್ನಡಭಿಮಾನವನ್ನು ಸೂಚಿಸುತ್ತದೆ. ಆ ಸಂದರ್ಭವನ್ನು ನಾ. ಮೊಗಸಾಲೆಯವರು ಸಂತಸದಿಂದ ನೆನಪಿಸಿಕೊಳ‍್ಳುತ್ತಾರೆ. 25 ಲಕ್ಷ ಕಟ್ಡಡಕ್ಕೆ ಬೇಕಾಗುತ್ತದೆ. ಸರಕಾರದಿಂದ 12 ಲಕ್ಷ ಸಿಕ್ಕಿದೆ. ಉಳಿದ ಹಣವನ್ನು ಕನ್ನಡಿಗರು ನೀಡಬೇಕೆಂದು ಕೇಳಿಕೊಂಡರು. ಉದಾರಿಗಳಾದ ಕನ್ನಡಿಗರು 13 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡದರು. ಅದಕ್ಕೆ ಕಾರಣ ಅಲ್ಲಿ ನಡೆಯುತ್ತಿದ್ದ ಕನ್ನಡ ಚಟುವಟಿಕೆಗಳನ್ನು ಗಮನಿಸಿದ ಕನ್ನಡಿಗರು ಯಾವ ಅನುಮಾನವಿಲ್ಲದೆ ಉದಾರವಾಗಿ ದೇಣಿಗೆ ನೀಡಿದರು. ಅದನ್ನು ಸಾರ್ಥಕವಾಗಿ ನಾ. ಮೊಗಸಾಲೆಯವರು ಬಳಿಸಿದರು. ಪ್ರತಿ ಲೆಕ್ಕವನ್ನು ಸಾರ್ವಜನಿಕರ ಮುಂದೆ ಮಂಡಿಸಿದರು. ಅಷ್ಟೊಂದು ಪಾರದರ್ಶಕವಾಗಿ ಕನ್ನಡ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ಕಟ್ಟಡವನ್ನು ಕೂಡ ಜಿರಾಜ ಹೆಗ್ಡೆ ಅವರ ಬೀಡು ಬಾರಾಡಿಬಿಡಿನಂತೆ ನಿರ್ಮಿಸಿದ್ದಾರೆ. ಕನ್ನಡ ಭವನದಲ್ಲಿ 150 ಜನ ಕುಳಿತುಕೊಳ್ಳುವ ಪಂಪ ಮಹಾಕವಿ ಸಭಾಭವನ, ಅತಿಥಿಗಳ ವಿಶ್ರಾಂತಿ ಕೊಠಡಿ, ವಿಶಾಲವಾದ ಎರಡು ಚಾವಡಿ, ನಾಲ್ಕು ಸೂತ್ರದ ಮನೆಯೊಳಗಿರುವಂಥ ತೊಟ್ಟಿ, ಸಾರ್ವಜನಿಕ ಗ್ರಂಥಾಲಯ, ಕನ್ನಡ ಸಂಘದ ಕಛೇರಿ, ಪ್ರವೇಶ ಮಾಡಿದರೆ ಎದುರುಗೊಳ್ಳುವ ಹೆಗ್ಡೆಯವರ ಸುಂದರ ಪ್ರತಿಮೆ ಎಲ್ಲವೂ ಇದೆ. ಇಂತಹ ಕಟ್ಟಡದ ಭಾಗ್ಯ ಯಾವ ಜಿಲ್ಲೆಯಲ್ಲಿ ಇಲ್ಲ ಅನಿಸುತ್ತದೆ. ಈ ಬಗ್ಗೆ ನಾ. ಮೊಗಸಾಲೆಯವರನ್ನು ಕೇಳಿದರೆ `ಮಾಡುವ ಕೆಲಸಗಳು ಪ್ರಮಾಣಿಕವಾಗಿ ಇರಬೇಕು. ನಮ್ಮ ಕೆಲಸಗಳು ಗುಣಮಟ್ಟ, ಜಾತ್ಯಾತೀತ, ಅಪ್ಪಟ ಸಾಹಿತ್ಯಿಕ ಮನಸ್ಸಿನಿಂದ ಕೂಡಿರಬೇಕು. ಇದನ್ನು ಕನ್ನಡಿಗರು ಗಮನಿಸುತ್ತಾರೆ. ನಾನು ಈ ನೆಲೆಯಲ್ಲಿ ಕನ್ನಡದ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಕನ್ನಡ ಜನ ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಗೆ ಯಾವತ್ತೂ ಉದಾರವಾಗಿ ದಾನ ಮಾಡುತ್ತಾರೆ. ಅದನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳುವ ಜನ ಬೇಕು ಅಷ್ಟೆ’ ಅನ್ನುತ್ತಾರೆ.

ಸಂಘಕ್ಕೆ ಮುವತ್ತು ತುಂಬಿದಾಗ `ನಾಡಿಗೆ ನಮಸ್ಕಾರ’ ಎಂಬ ಮಾಲಿಕೆಯನ್ನು ಕೈಗೆತ್ತಿಕೊಂಡಿತು. ನಾಡಿಗೇ ನಾಡೇ ಬೆರಗಾಗುವಂತೆ ಸಾಧನೆ ಮಾಡಿದ ಸಾಧಕರನ್ನು ಪರಿಚಯಿಸಲು ಕನಿಷ್ಠ ಐವತ್ತೆರಡು ಪುಟಗಳ ಒಂದು ಪುಟ್ಟ ಪುಸ್ತಕ ಪ್ರಕಟಿಸಲು ಸಂಘ ಮುಂದಾಯಿತು. ಸುಮಾರು 200 ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈಗಲೂ ಪ್ರಕಟಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಮಾಲಿಕೆ ನಿರಂತರ ಮುಂದುವರೆಯುತ್ತಿದೆ. ಪುಸ್ತಕ ಬರೆದವರನ್ನು ಸಾಧಕರನ್ನು ಸಂಘಕ್ಕೆ ಕರೆಸಿ ಸನ್ಮಾನಿಸಿ, ಗೌರವಿಸುವ ಪದ್ದತಿಯನ್ನು ಸಂಘ ಹೊಂದಿದೆ. ಇದರಿಂದ ಸಾಧಕರ ಹಾಗೂ ಲೇಖಕರ ದಾಖಲೆಯಾಗುತ್ತದೆ. ಇದೊಂದು ಮಹತ್ಕಾರ್ಯ. ಹೊಸ ಚರಿತ್ರೆಗೆ ನಾಂದಿಯಾಗುತ್ತದೆ. ಇದರಿಂದ ಮುಂದಿನ ತಲೆಮಾರು ತಮ್ಮ ನಡುವೆ ಇರುವ ಸಾಧಕರನ್ನು ಅರಿತುಕೊಂಡಂತೆ ಆಗುತ್ತದೆ. ಪ್ರಕಟವಾದ ಪುಸ್ತಕಗಳು ಕೂಡ ವಿನ್ಯಾಸ ಮತ್ತು ಗುಣಮಟ್ಟದಲ್ಲಿ ಅಂದವಾಗಿವೆ. `ನುಡಿ ನಮನ’ ಎಂಬ ತಿಂಗಳ ಕಾರ್ಯಕ್ರಮ ಅಲ್ಲಿ ನಡೆಯುತ್ತದೆ. ತಿಂಗಳ ಭಾನುವಾರ ಒಬ್ಬ ಅತಿಥಿ ಅಲ್ಲಿ ಬರುತ್ತಾರೆ. ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಆ ಅತಿಥಿಗಳಿಗೆ ಸನ್ಮಾನ ಮಾಡಿ ಉತ್ತಮವಾದ ಕಾಣಿಕೆಯನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ನೆರೆದ ಎಲ್ಲರಿಗೂ ತಿಂಡಿಯ ವ್ಯವಸ್ಥೆ ಆಗುತ್ತದೆ. ತಿಂಡಿಯ ವ್ಯವಸ್ಥೆಯನ್ನು ಮೂಡುಬಿದರೆಯ ಪಡಿವಾಳ ಹೋಟಲಿನ ಮಾಲಿಕರು ನಡೆಸಿಕೊಡುತ್ತಾರೆ. ಇದೊಂದು ಕನ್ನಡ ಸೇವೆ ಎಂದೇ ಪಡಿವಾಳ ಹೋಟಲಿನವರು ತಿಳಿದಿದ್ದಾರೆ. ಈ ಕುರಿತು ಅವರನ್ನು ಕೇಳಿದರೆ ` ನಾ. ಮೊಗಸಾಲೆಯವರು ಕನ್ನಡ ಸಂಘದ ಮೂಲಕ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಕನ್ನಡದ ದೊಡ್ಡ ದೊಡ್ಡ ಲೇಖಕರು ಬಂದು ಒಳ್ಳೆಯ ವಿಚಾರಗಳನ್ನು ಹೇಳುತ್ತಾರೆ. ನಮಗೂ ಕೇಳುವ ಅವಕಾಶ ದೊರೆಯುತ್ತದೆ. ದೊಡ್ಡ ದೊಡ್ಡ ಬರಹಗಾರರನ್ನು ನೋಡಿದಂತಾಗುತ್ತದೆ. ಕನ್ನಡಕ್ಕೆ ನಮ್ಮದೊಂದು ಅಳಿಲು ಸೇವೆ’ ಎನ್ನುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಸಹಾಯ ಮಾಡುತ್ತಾರೆ. ಇವರ ನೆರವಿನೊಂದಿಗೆ ವರ್ಷದಲ್ಲಿ ಸಾಂಸ್ಕೃತಿಕ ಉತ್ಸವ ಅದ್ದೂರಿಯಾಗಿ ಇಲ್ಲಿ ನಡೆಯುತ್ತದೆ. ಇಡೀ ಊರು ಜನ ಸೇರಿಕೊಂಡು ಈ ಉತ್ಸವವನ್ನು ಒಂದು ಹಬ್ಬದಂತೆ ಆಚರಿಸುತ್ತಾರೆ.

ಸ್ವರ್ಣ ಕಮಲ ಪ್ರಸಸ್ತಿ ಪುರಸ್ಕೃತರಾದ ಸದಾನಂದ ಸುವರ್ಣ ಅವರು ರಾಷ್ಟ್ರಪ್ರಶಸ್ತಿ ಪಡೆಯಲು ಅರ್ಹರಿದ್ದು ಅಂಥ ಪ್ರಾಶಸ್ತಿಯಿಂದ ವಂಚಿತರಾದ ರಂಗಕರ್ಮಿಗಳಿಗೆ `ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ’ದ ಹೆಸರಿನಲ್ಲಿ ವಾರ್ಷಿಕ ಹತ್ತು ಸಾವಿರ ರೂಪಾಯಿಗಳ ಗೌರವ ಸಂಭಾವನೆ ಕೊಡುವ ಹೊಣೆಯನ್ನು ಕಾಂತಾವರ ಸಂಘದ ಹೆಗಲಿಗೆ ಹಾಕಿದ್ದಾರೆ. ಅವರು ಬಹಳ ನಿಷ್ಠೆಯಿಂದ ಹಲವಾರು ರಂಗಕರ್ಮಿಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಜೊತೆಗೆ ನಾ. ಮೊಗಸಾಲೆಯವರೆ `ಕಾಂತಾವರ ಪುರಸ್ಕಾರ’ ಎಂಬ ಪ್ರಸಸ್ತಿಯನ್ನು ಸ್ಥಾಪಿಸಿದರು. ಸಾಹಿತ್ಯ ಮತ್ತು ಕಲೆಯಲ್ಲಿ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ನೀಡುತ್ತಾರೆ. ಮುದ್ದಣ್ಣ ಕಾವ್ಯ ಪುರಸ್ಕಾರ ಕಾವ್ಯದ ಹಸ್ತಪ್ತಿಗಳಿಗೆ ನೀಡುತ್ತಾರೆ. ಈ ಪುರಸ್ಕಾರ ಪಡೆದ ಕವಿಗಳು ನಾಡಿನಲ್ಲಿ ಹೆಸರಾಂತ ಕವಿಗಳಾಗಿ ಹೊಮ್ಮಿದ್ದಾರೆ. ಗಮಕ ಪ್ರಸಸ್ತಿ, ವಿಮರ್ಶಾ ಪ್ರಶಸ್ತಿ ನೀಡುತ್ತಾರೆ. ಈ ಪ್ರಶಸ್ತಿಗಳ ಮೂಲಕ ಅನೇಕ ಯುವ ಬರಹಗಾರರನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಆದ್ದರಿಂದ ಪಾಟೀಲ ಪುಟ್ಟಪ್ಪನವರು `ಕನ್ನಡ ಸಂಘ ಹೇಗಿರಬೇಕು ಎಂಬುದಕ್ಕೆ ಕಾಂತಾವರ ಕನ್ನಡ ಸಂಘವನ್ನು ನೋಡಿ ಕಲಿಯಬೇಕು’ ಎಂದಿದ್ದಾರೆ. ನಾಡೋಜ ಚನ್ನವೀರ ಕಣವಿಯವರು `ಇದು ಕಾಂತಾವರವಲ್ಲ ಅಯಸ್ಕಾಂತಾವರ’ ಎಂದು ಕರೆದಿದ್ದಾರೆ. ನಾಡಿನ ಎಲ್ಲಾ ಬರಹಗಾರರು ಕನ್ನಡ ಸಂಘಕ್ಕೆ ಬಂದು ಹೋಗಿದ್ದಾರೆ. ಒದೊಂದು ನಾಡಿನಲ್ಲಿ ಮಾದರಿಯಾದ ಕನ್ನಡ ಸಂಘವಾಗಿದೆ.

ಈ ಅಂಕಣದ ಹಿಂದಿನ ಬರಹಗಳು:
`ಹೆಣ್ತನದ’ ಕತೆಗಳು

ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು

 

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...