ಅಪಾತ್ರರಾದ ಜನರ ಬದುಕಿನ ಚಿತ್ರಣ - ಅವಳ ಡೈರಿ


‘ವಿಕೃತ ಸಮಾಜದಲ್ಲಿ ಹಣವೇ ಎಲ್ಲವನ್ನು ಆಳುತ್ತದೆ! ಬಲಾಡ್ಯರೇ ಇನ್ನೂ ಮುಗ್ಧರ ದನಿಯನ್ನ ಗಹಗಹಿಸಿ ಕೊಲ್ಲುತ್ತಾರೆ!'..ಕತೆಗಾರ, ಕಾದಂಬರಿಕಾರ ರಾಮಚಂದ್ರ ಸಾಗರ್ ಅವರ ‘ಅವಳ ಡೈರಿ’ ಕಾದಂಬರಿಯಲ್ಲಿ ಸಾಹಿತಿ ಡಾ. ನಾ. ಡಿಸೋಜ ಬರೆದ ಮುನ್ನುಡಿ ಹಾಗೂ ಲೇಖಕರ ಮಾತು ನಿಮ್ಮ ಓದಿಗಾಗಿ..

ಈವರೆಗೆ ಕವಿಯಾಗಿ, ಕತೆಗಾರರಾಗಿ ಕಾಣಿಸಿಕೊಂಡಿದ್ದ ರಾಮಚಂದ್ರ ಸಾಗರ್ ಇದೀಗ ಕಾದಂಬರಿಕಾರರಾಗಿ ಕಾಣಿಸಿಕೊಂಡಿದ್ದಾರೆ. ಅವರ ಬೃಹತ್ ಗಾತ್ರದ "ಅವಳ ಡೈರಿ" ನಮ್ಮ ಮುಂದಿದೆ. "ಸುರಭಿ ಅಲಿಯಾಸ್ ಆಶಾ" ಇದರ ಕಥಾ ನಾಯಕಿ. ಅಂತೆಯೇ ನರೇಶ್ ಖಳನಾಯಕ ಜೊತೆಯಲ್ಲಿ ಮುಂಬಯಿಯ ಭೂಗತ ಲೋಕದ ಡಾನ್. ಸಂಗೀತ, ನೃತ್ಯ ಕ್ರೀಡೆಯಲ್ಲಿ ಹೆಸರು ಮಾಡಿದ ಆಶಾ ಮುಂದೆ ಯಾವ ಎತ್ತರಕ್ಕೆ ಏರಿದಳು? ಅನ್ನುವುದೇ ಈ ಕಾದಂಬರಿಯ ಒಳ ಕತೆ, ಈ ಡಾನ್ ಕಾದಂಬರಿಯ ಕೊನೆಯಲ್ಲಿ ಅವನ ಪ್ರೇಯಸಿಯಿಂದಲೇ ಕೊಲೆಯಾಗುತ್ತಾನೆ. ಇದು ಈ ಕಾದಂಬರಿಯ ಕತೆಯ ಕತೆ ಕೂಡ.

ಓರ್ವ ಮುಂಬಯಿಯ ಡಾನ್ ಈ ಕಾದಂಬರಿಯ ನಾಯಕನಾಗಿರುವುದರಿಂದ ಕಾದಂಬರಿಯ ಉದ್ದಕ್ಕೂ ಕೊಲೆ, ವಿಷ ಪಾಲನೆ, ಏಸ್ತೂಲಿನಿಂದ ಗುಂಡು ಹಾರುವುದು, ಕೋರ್ಟಿನಲ್ಲಿ ಕೇಸು ನಡೆಯುವುದು, ಪೋಲಿಸ್ ಸ್ಟೇಷನ್ನಿನ ಭೇಟಿ, ಅತ್ಯಾಚಾರ, ಬೆತ್ತಲೆ ನೃತ್ಯಗಳು ಇತ್ಯಾದಿ ಪುಟ ಪುಟದಲ್ಲೂ ನಡೆಯುತ್ತದೆ. ಹೆಂಡದ ಗಡಂಗುಗಳಲ್ಲಿ ಬರೀ ಮೈಯಲ್ಲಿ ಕುಣಿಯುವ ಹೆಣ್ಣುಗಳು ಉದ್ದಕ್ಕೂ ಬರುತ್ತಾರೆ. ಹಾಗೆಯೇ ಹೆಣ್ಣಿನ ಬದುಕಿನ ನಗ್ನ ಬದುಕು ಇಲ್ಲಿ ಕಾಣಿಸಿಕೊಂಡು ಇಂದಿನ ಸಮಾಜ ಹೆಣ್ಣನ್ನ ಹೇಗೆ ನೋಡಿ ಕೊಳ್ಳುತ್ತದೆ ಎಂಬುದನ್ನ ಇಲ್ಲಿ ಕಾಣಬಹುದಾಗಿದೆ." ಇದೆಲ್ಲಕ್ಕೂ ಸಹಾಯಕವಾಗಿ ಕಂಪ್ಯೂಟರ್, ಫೇಸ್ ಬುಕ್, ಇಮೈಲ್, ಇತ್ಯಾದಿ ಆಧುನಿಕ ಯಂತ್ರಗಳು ತಮ್ಮ ಪಾತ್ರವಹಿಸುತ್ತವೆ. ಕಾದಂಬರಿಯ ಯಾವುದೇ ಪುಟ ತೆರೆದರೂ ಇಲ್ಲಿ ವಿಕಾರಗೊಂಡ ಆಧುನಿಕತೆಯ ಅಶ್ಲೀಲತೆಯನ್ನು ನಾವು ನೋಡುತ್ತೇವೆ. 

ಈ ಕಾದಂಬರಿಯ ಕುರಿತು ತಮ್ಮ ಮನದಾಳದ ಮಾತುಗಳನ್ನ ಬರೆಯುವ ಲೇಖಕರು "ವಿಕೃತ ಸಮಾಜದಲ್ಲಿ ಹಣವೇ ಎಲ್ಲವನ್ನು ಆಳುತ್ತದೆ! ಬಲಾಡ್ಯರೇ ಇನ್ನೂ ಮುಗ್ಧರ ದನಿಯನ್ನ ಗಹಗಹಿಸಿ ಕೊಲ್ಲುತ್ತಾರೆ!' ಎಂಬ ಮಾತನ್ನ ಹೇಳುವ ಲೇಖಕರು ಕಥಾ ನಾಯಕಿ ಆಶಾಳ ಬದುಕು ಜನರ ಧಿಕ್ಕಾರಕ್ಕೆ ಒಳಗಾಗಿ ಆಶಾ ಜನರ ಮೇಲೆ ಸೇಡು ತೀರಿಸಿಕೊಂಡಳೆಂಬುದನ್ನ ಹೇಳುತ್ತಾರೆ. ಆಶಾಳ ಈ ಬದುಕನ್ನ ಚಿತ್ರಿಸಲು ಬಹಳ ದೊಡ್ಡ ಕ್ಯಾನವಾಸನ್ನು ತೆಗೆದುಕೊಳ್ಳುತ್ತಾರೆ ಲೇಖಕರು.

ಆಶಾ ಹಾಗೂ ನರೇಶರ ಬದುಕಿನ ಒಳತೋಟಿಯ ಚಿತ್ರಣದಲ್ಲಿಯೇ ಪ್ರಧಾನವಾಗಿ ನಿರತರಾದ ಲೇಖಕರು ಉಳಿದ ಪಾತ್ರಗಳ ಚಿತ್ರಣದಲ್ಲಿ ತುಸು ಸೋಲುತ್ತಾರೆ. ಆದರೆ ಈ ಸೋಲು ಹೆಚ್ಚಾಗಿ ಎದ್ದು ಕಾಣಿಸುವುದಿಲ್ಲ. ಸಾಲು ಕೊಲೆ, ಸಾಲು ವಿಷಪಾಸಗಳ ನಡುವೆ ಇದು ಕಾಣೆಯಾಗಿ ಬಿಡುತ್ತದೆ. ಕೊನೆಯವರಗೂ ನಮ್ಮ ಮನಸ್ಸಿನಲ್ಲಿ ಉಳಿಯುವುದು ಡ್ಯಾನ್ಸ್ ಕ್ಲಬ್‌ಗಳಲ್ಲಿ ನೃತ್ಯ ಮಾಡುವ ನರ್ತಕಿಯರ ಬದುಕಿನ ದುರಂತ ಮಾತ್ರ ಈ ವಿವರಗಳನ್ನ ಓದುರಿಗೆ ನೀಡುವಲ್ಲಿ ಕೂಡ ಲೇಖಕರು ತಮ್ಮ ಸಾಮರ್ಥ್ಯವನ್ನ ತೋರಿಸುತ್ತಾರೆ. 

ಕಮಲಿ ಅನ್ನುವವಳು ಓರ್ವ ನರ್ತಕಿ, ಕಥಾ ನಾಯಕಿಯ ಸಂಗಾತಿ, ಕೊನೆಯವರೆಗೂ ಅವಳ ಜೊತೆ ಇದ್ದವಳು ಇವಳು. ಇವಳು ಡ್ಯಾನ್ಸ್ ಬಾರ್‌ನಲ್ಲಿದ್ದ ಅನೇಕ ಜನರು ಕೊಲೆಯಾಗಿ ಸತ್ತ ಒಂದು ಕತೆಯನ್ನ ಹೇಳುತ್ತಾಳೆ, ಈ ಭೀಕರ ಕತೆಯೇ ಬಹುಶಹಾ ಬಾರ್ ಡ್ಯಾನ್ಸರುಗಳ ಕತೆಯೂ ಆಗಿರುತ್ತದೆ. ಈ ಕಾದಂಬರಿಯ ಉದ್ದೇಶ ಕೂಡ ಇದೇನೆ. ಯಾವ ಯಾವುದೋ ಪ್ರಚೋದನೆಗೆ ಒಳಗಾಗಿ ನಮ್ಮ ಹೆಣ್ಣು ಮಕ್ಕಳು ತಮ್ಮ ಬದುಕನ್ನ ಮಾರಿಕೊಂಡು ಎಲ್ಲೆಲ್ಲಿಯೊ ಹೋಗಿ ಆಶ್ರಯ ಪಡೆದು ತಮ್ಮ ಬದುಕನ್ನ ಕಳೆದುಕೊಳ್ಳುವ ಕತೆಯನ್ನ ಲೇಖಕರು ಇಲ್ಲಿ ನಿರ್ಭಯರಾಗಿ ತೆರೆದು ಇಡುತ್ತಾರೆ. ಕೆಲ ಸಂದರ್ಭಗಳಲ್ಲಿ ಕತೆ ಓದಲು ಮುಜುಗರವಾಗುತ್ತದಾದರೂ ಲೇಖಕರು ಸತ್ಯವನ್ನೇ ಹೇಳುವುದರಿಂದ ಸತ್ಯ ಯಾವತ್ತೂ ಕಹಿಯೇ ಆಗಿರುತ್ತದೆ ಎಂಬುದನ್ನ ನಾವು ಒಪ್ಪಿಕೊಳ್ಳಲೇ ಬೇಕೇನೋ ಅಲ್ಲವೆ?

"ಒಂದು ವರ್ಗದ ಅಪಾತ್ರರಾದ ಜನರ ಬದುಕನ್ನ ಅಷ್ಟೇ ದಿಟ್ಟತನದಿಂದ ಚಿತ್ರಿಸುವ ಲೇಖಕರ ಧೈರ್ಯವನ್ನ ನಾನು ಮೆಚ್ಚುತ್ತೇನೆ." ಈ ಹಿಂದೆ ಅಂದರೆ ಈಗ ನಲವತ್ತು ಐವತ್ತು ವರ್ಷಗಳ ಹಿಂದೆ ಈ ಬಗೆಯ ಕೆಲಸವನ್ನ ಓರ್ವ ಲೇಖಕ ಹೀಗೇ ಮಾಡಿದ್ದಿದ್ದರೆ ಅದೆಷ್ಟು ಟೀಕೆಗಳು ಕೇಳಿ ಬರುತ್ತಿದ್ದವೋ? ಆದರೆ ಇಂದು ಸಾಹಿತ್ಯ ಪ್ರಪಂಚ ತುಸು ಮೆತ್ತಗಾಗಿದೆ ಅಥವ ಮೃದುವಾಗಿದೆ ಎಂದು ನನಗೆ ಅನಿಸುತ್ತದೆ. ತನ್ನ ಸುತ್ತಲಿನ ನಿಜ ಬದುಕನ್ನ, ಈ ಬದುಕಿನ ವಾಸ್ತವವನ್ನ ಅರ್ಥ ಮಾಡಿಕೊಳ್ಳುವಲ್ಲಿ ಸಮಾಜ ತುಸು ದಿಟ್ಟತನ ತೋರಿಸುತ್ತಿದೆ. ಈ ಕಾರಣದಿಂದಲೇ ಎಷ್ಟೋ ಜನ ಅಪಾತ್ರರು ಇಂದು ಕತೆ ಕಾದಂಬರಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹಾ ಒಂದು ಅವಕಾಶವನ್ನ 'ಶ್ರೀ ರಾಮಚಂದ್ರ ಸಾಗರ್" ಬಳಸಿ ಕೊಂಡಿದ್ದಾರೆ. ಇದರ ಬಗ್ಗೆ ನಮ್ಮ ಓದುಗರ ಅಭಿಪ್ರಾಯ ಏನಿರಬಹುದು ಎಂಬ ಕೂತೂಹಲ ನನ್ನಲ್ಲಿದೆ. ಲೇಖಕ ರಾಮಚಂದ್ರ ಸಾಗರ್ ಅವರಿಗೆ ಎಲ್ಲ ಶುಭವನ್ನ ಹಾರೈಸುತ್ತೇನೆ.

----------

ಲೇಖಕ -ರಾಮಚಂದ್ರ ಸಾಗರ್ ಅವರು ಅವಳ ಡೈರಿ ಕೃತಿಯಲ್ಲಿ ಬರೆದ  ‘ನನ್ನ ನುಡಿಗಳು’..

“ಅವಳ ಡೈರಿ" ಈ ಕಥೆಯನ್ನು ಬರೆಯಲು ನನಗೆ ಪ್ರೇರಣೆ ನೀಡಿದ್ದು ಸಮಾಜದಲ್ಲಿ ನಡೆದ ಹಲವು ನಿಜ ಘಟನೆಗಳೇ ಸಾಕ್ಷಿಯಾಗಿವೆ. ಈ ಕಥೆಯ ಪ್ರತಿ ಭಾಗದಲ್ಲಿ ಮೂಡಿರುವ ಚಿತ್ರಣಗಳು, ರೋಧನೆಗಳು ಒಬ್ಬರ ಬಾಳಲ್ಲಾದರೂ ಘಟಿಸಿರುತ್ತವೆ. ವಿಕೃತ ಸಮಾಜದಲ್ಲಿ ಹಣವೇ ಎಲ್ಲವನ್ನು ಆಳುತ್ತದೆ. ಬಲಾಡ್ಯರೇ ಇನ್ನೂ ಮುಗ್ಧರ ದನಿಯನ್ನು ಗಹಗಹಿಸಿ ಕೊಲ್ಲುತ್ತಾರೆ!

ನ್ಯಾಯಕ್ಕಾಗಿ ಪರಿತಪಿಸಿ ದಮನಿತ ಎಷ್ಟೇ ಒದ್ದಾಡಿದರೂ ಕೊನೆಗೊಂದು ದಿನ ಆತನಿಗೆ ನ್ಯಾಯ ಸಿಗುವ ಸಾಧ್ಯತೆ ನೂರಕ್ಕೆ ಐದು ಭಾಗ ಮಾತ್ರವೇ ಎನ್ನಬಹುದು. ಸತ್ಯದ ನಡಿಗೆಯಲ್ಲಿ ನಡೆಯುವವನಿಗೆ ನೋವು ಸಹಜ. ವೈರಿಗಳು ದುಷ್ಟರಾಗಿ ಮಿತಿ ಮೀರಿ ಕಾಣುತ್ತಾರೆ. ದುಷ್ಪರೆಲ್ಲಾ ಒಂದಾಗಿ ನೊಂದವನನ್ನೇ ಗುರಿಯಾಗಿ ಆತನ ಉಸಿರನ್ನೇ ಕೊಲ್ಲಲು ಹೋಗುತ್ತಾರೆ. ಸಫಲವೂ ಆಗುತ್ತಾರೆ. ಬೆದರಿಕೆಗೆ ಹೆದರಿ ಮುಗ್ಧರು ಸೋಲುತ್ತಾರೆ. ಬದುಕಿದ್ದೂ ಸತ್ತಂತೆ ಇರುತ್ತಾರೆ. ಆತನಿಂದ ಒಂದು ದಿವಸ ಉಪಯೋಗ ಪಡೆದವರೂ ಆತನತ್ತ ಕಿಂಚಿತ್ತೂ ಇಣುಕಿ ನೋಡುವುದಿಲ್ಲ. ಇದೆಲ್ಲವೂ ಸತ್ಯವಲ್ಲವೇ? ಕನಿಕರವೇ ಇಂದು ಜಗದಲ್ಲಿ ಸತ್ತು ಹೋಗುತ್ತಿದೆ ತಾನೆ?

ಒಟ್ಟಾರೆ ಮನದಲ್ಲಿ ಯಾವುದು ನ್ಯಾಯ, ಸತ್ಯ, ಮಿಥ್ಯ ಎನ್ನುವುದು ಅರಿತಿದ್ದರೂ ಕೆಲವರು ಸಾಕ್ಷಿಯಾಗಿ ನುಡಿಯುಲು ಬರುವುದಿಲ್ಲ. ಬಲಾಡ್ಯರ ದಾಸ್ಯಕ್ಕೆ ಬೆಂಡಾಗಿ ಹೊಗಳು ಭಟ್ಟರಾಗಿ ಜೀವಂತವಿದ್ದರೂ ಸತ್ತಂತೆ ಬದುಕುತ್ತಾರೆ. ಅಂತಹ ಜನರ ಅನಿಷ್ಟ ಬದುಕಿಗೆ ಧಿಕ್ಕಾರ, ಅಂತಹ ರೀತಿಯಲ್ಲಿ ಬಾಳುವುದೂ ಒಂದು ರೀತಿಯಲ್ಲಿ ಅನೈತಿಕ ವ್ಯವಹಾರವೆ! ನಿಜವಾಗಿಯೂ ನೈತಿಕತೆಯ ಕೊಂದ ಕೊಲೆಗಾರರು ಇವರೇ!

ಬದುಕು ಇದೇ ರೀತಿಯಲ್ಲಿ ಸಾಗುವಾಗ ಯಾರನ್ನಾದರೂ ನಂಬಿ ನ್ಯಾಯಕ್ಕಾಗಿ ಅಂಗಲಾಚಿದರೂ ಮೊದಲು ಸಹಕಾರ ಸಿಗುತ್ತದೆ. ನಂತರ ಸಹಕಾರ ನೀಡುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಸಹಕಾರ ನೀಡುವವರು ಬಲಾಡ್ಯರ ಕೆಂಗಣ್ಣಿಗೆ ಆಹುತಿಯಾಗುತ್ತಾರೆ. ಇಲ್ಲವೇ ಯಾವುದೋ ಹಣದಾಹಕ್ಕೆ ಮಾರಾಟವಾಗುತ್ತಾರೆ.

ನೀತಿಪಾಠವನ್ನು ದಿನವಿಡೀ ಬೇಕಾದರೂ ದಣಿವಿಲ್ಲದೆ ನಾಯಕರೆನಿಸಿಕೊಂಡ ಹಲವು ಜನ ನಕಲಿ ವೀರರು ನುಡಿಯುತ್ತಾರೆ. ಆದರೆ ಹಣದಾಸೆಗೆ ತಮ್ಮ ಕೋಶಕ್ಕೆ ಇನ್ನೂ ಸಂಪತ್ತು ವೃದ್ಧಿಗೊಳಿಸುವುದಕ್ಕೆ ಮಾತ್ರ ಅವರುಗಳು ಮಾಡುವುದೇನು? ಅಕ್ಷರಶಃ ಅನೈತಿಕವೇ? ನಿತ್ಯವೂ ಎಷ್ಟು ಜನ ದೊಡ್ಡ ವ್ಯಕ್ತಿಗಳು ಎನ್ನಿಸಿಕೊಂಡವರು(ಅವರ ಭಾವನೆಯಲ್ಲಿ ತಮ್ಮ ಗರ್ಜನೆಯ ಭಾಷಣದಲ್ಲಿ ಹೇಳುವುದಿಲ್ಲ! ನಾನು ಬದುಕಿರುವುದೇ ನೊಂದವರ ನೋವಿಗೆ ಉತ್ತರವಾಗಲು, ಅಂತವರ ರಕ್ಷಣೆಯೇ ನನ್ನ ಜೀವ, ನನ್ನ ಉಸಿರು ಎನ್ನುತ್ತಾರೆ. ಆದರೆ ಕೊನೆಗೆ ಹಲವು ಜನರು ಸಮಾಜಸೇವೆ ಎನ್ನುವ ನಕಲಿ ಮುಖವಾಡ ಹೊದ್ದು ಅದನ್ನೇ ಬಂಡವಾಳ ಮಾಡಿಕೊಂಡು ರೋಲ್‌ಕಾಲ್‌ ಮಾಡುತ್ತಾ ಬದುಕುತ್ತಾರೆ. ಅಂತಹವರ ಅಸಹ್ಯದ ಬದುಕಿಗೆ ನನ್ನ ಕೋಟಿ ಕೋಟಿ ಧಿಕ್ಕಾರಗಳು.

ಆತ್ಮ ಸಾಕ್ಷಿಯೇ? ಇನ್ನೂ ನಕಲಿ ಮುಖಗಳಿಗೆ ಇದು ಮುಗ್ಧರನ್ನು ಮಂಗ ಮಾಡುವ ಇನ್ನೊಂದು ಮುಖವಷ್ಟೇ. ಈ ನಕಲಿಗಳಿಗೆ ಆತ್ಮಸಾಕ್ಷಿಯಿದೆಯೇ? ತಥ್. ಆ ಬೇವರ್ಸಿ ಬದುಕಿಗೆ ಅದೂ ನೆಪಮಾತ್ರ, ಹಾಗಾಗಿ ಇಂತಹ ನಕಲಿ ನಾಯಕರಿಂದ ಜನರು ಎಚ್ಚೆತ್ತುಕೊಳ್ಳಬೇಕು. ಧೈರ್ಯವಾಗಿ ಸತ್ಯವನ್ನು ಒಂದೆಡೆ ಕೂತು ವಿಮರ್ಶಿಸಬೇಕು. ಯಾವುದು ಸತ್ಯ, ಮಿಥ್ಯ ಎಂದರಿತು ಎಂತಹವರಿಗೆ ಸಹಾಯಮಾಡಬೇಕು ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ನಂತರ ಧೈರ್ಯವಾಗಿ ನೊಂದವನ ಪರವಾಗಿ ನಿಲ್ಲಬೇಕು. ಅದುಬಿಟ್ಟು ಯಾವುದೋ ಬಲಾಡ್ಯನ ಮಾತಿಗೆ ಬಲಿಯಾಗಿ, ಜಾತಿ, ಧರ್ಮಕ್ಕೆ ಮರುಳಾಗಿ ನಿಮ್ಮ ಆತ್ಮ ಸಾಕ್ಷಿಯನ್ನು ಕೊಲೆಮಾಡಿಕೊಳ್ಳಬೇಡಿ. ನಿಮ್ಮ ಆತ್ಮಕ್ಕೆ ಶಾಂತಿಯನ್ನು ನೀಡಿ..! ಆತ್ಮ ಎನ್ನುವುದು ದೇವರು ಎನ್ನುವ ನಂಬಿಕೆಯಿದೆ. ಆ ದೇವರಿಗೆ ದ್ರೋಹ ಬಗೆಯದಿರಿ.“ನಿಮ್ಮ ಆತ್ಮವು ಸತ್ಯವಾಗಲಿ, ಮಿಥ್ಯದಿಂದ ದೂರವಾಗಿರಲಿ".

ಈ ಕಥೆಯಲ್ಲಿ "ಸುರಭಿ ಅಲಿಯಾಸ್ ಆಶಾ" ಎನ್ನುವ ಕಥಾ ನಾಯಕಿಯ ಬದುಕಿನಲ್ಲಿ ನಡೆದ ಘಟನೆಗೆ ಸಮಾಜವು ಆಕೆಯನ್ನು ಸಂತೈಸಿ ಸತ್ಕಾರ್ಯಕ್ಕೆ ಧೈರ್ಯ ತುಂಬಿದ್ದರೆ ಆಕೆ ವಿಕೃತ ಮಾರ್ಗವನ್ನು ಆಯ್ದುಕೊಳ್ಳುತ್ತಿರಲಿಲ್ಲ. ಜನರು ಸಾಂತ್ವಾನವನ್ನು ನುಡಿದು ಆಕೆಯನ್ನು ಇನ್ನೊಂದು ಸುಂದರ ಬದುಕಿಗೆ ಕೈಬೀಸಿ ಕರೆದಿದ್ದರೆ ಆಕೆ ನೂರಾರು ಜನರ ಜೀವಕ್ಕೆ ಮಾರಕವಾಗುತ್ತಿರಲಿಲ್ಲ. ಆಕೆಯ ಮನ ದ್ವೇಷದ ಅಲೆಯಾಗುತ್ತಿರಲಿಲ್ಲ.

ಆಕೆ ಮೋಸಕ್ಕೆ ಒಳಗಾದಾಗ ಆಕೆಯನ್ನು ಕೆಣಕಿ ಅಸಹ್ಯವಾಗಿ ಕಂಡವರೇ ಆಕೆಯ ವಿಕೃತಿಯ ಓಟಕ್ಕೆ ಕಾರಣರು, ಅವಳ ಕನಸಿನ ಬದುಕು ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಮೇಲೆ ನ್ಯಾಯ ತನಗೆ ಮರೀಚಿಕೆ ಎನಿಸಿದಾಗ ವಿಧಿಯಿಲ್ಲದೆ ತನ್ನ ಸೇಡಿಗೆ ಆಕೆ ಈ ಜಗದಲ್ಲಿ ಮಾಡಿದ್ದೇನು? ಇತಿಹಾಸದಲ್ಲಿ ಉಲ್ಲೇಖಿತ ವಿಷ ಕನೈಯರನ್ನು ಆದರ್ಶವಾಗಿಸಿಕೊಂಡು ಅದೇ ಕಾಮವನ್ನೇ ಅಸ್ತ್ರವಾಗಿ ಬಳಸಿಕೊಂಡು ದುಷ್ಟ ಕಾಮುಕರಿಗೆ ವಿಷವುಣಿಸುತ್ತಾ ಸಂಹಾರ ನಡೆಸಿ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ. ಆ ಮಾರ್ಗದಲ್ಲಿ ಯಶವೂಗಳಿಸುತ್ತಾಳೆ. ಅವಳ ಸೇಡಿನ ಜ್ವಾಲೆಯಿಂದ ಈ ಕಥೆಯಲ್ಲಿ ಆಗಿದ್ದೇನು? ದುಷ್ಟರ ಜೊತೆಗೆ ಮುಗ್ಧರು, ಮತ್ತವರ ಕುಟುಂಬವೂ ಪಡಬಾರದ ನೋವು ಉಣ್ಣುತ್ತದೆ..!

ಸತ್ಯಕ್ಕೆಂದು ಆಕೆ ಮೊದಲು ಸತ್ಯದ ಪಥದಲ್ಲಿ ಹೋರಾಡಿದರೂ ಸಾಕ್ಷಿಗಳು ಸರಿಯಾಗಿ ನುಡಿಯದೇ ತಪ್ಪಿಸಿಕೊಂಡು ಬಲಾಡ್ಯರಿಗೆ ಬೆಂಡಾದಾಗ ಆಕೆಗೆ ಇರುವ ಮಾರ್ಗವೇನು? ಸಹಜವಾಗಿ ಖಿನ್ನತೆಗೆ ಒಳಗಾಗುವ ನೊಂದ ದನಿಯು ಇನ್ನು ತಾನು ಬದುಕಿದ್ದೂ ಸತ್ತಂತೆ ಇನ್ನು ನನಗೆ ಏನು ಬೇಕಾದರೂ ಆಗಲಿ, ಜೀವವೇ ಹೋಗಲಿ, ಆದರೆ ಜಗದಿಂದ ಹೊರನಡೆಯುವ ಮೊದಲು ಕೆಲವು ಅನಾಹುತಕಾರಿ ವ್ಯಕ್ತಿಗಳಿಗೆ ಬುದ್ದಿ ಕಲಿಸಿಯೇ ಈ ಲೋಕವನ್ನು ತ್ಯಜಿಸುವೆ ಎಂದು ಹಠತೊಟ್ಟು ಪಣವಿಡಿದು ಹೋರಾಡಿದಾಗ ಖಂಡಿತವಾಗಿಯೂ ಹಿಂಸೆಯು ಅಟ್ಟಹಾಸವನ್ನು ಮೆರೆಯುತ್ತದೆ, ಇದೇ ಈ ಕಥೆಯ ಪ್ರತಿ ಹಂತದಲ್ಲೂ ನಡೆಯುತ್ತದೆ.

ನೊಂದವರನ್ನು ಮೋಸಕ್ಕೆ ಒಳಗಾದವರನ್ನು ಅಸಹ್ಯವಾಗಿ ವ್ಯಂಗ್ಯದಿಂದ ಕಾಣುವುದು ಇದ್ದೇ ಇದೆ. ಛೇ, ಗೊತ್ತಿದ್ದೂ ತಪ್ಪು ಮಾಡಿದಳು, ಇಲ್ಲವೇ ಮಾಡಿದ. ಪ್ರೀತಿ, ಪ್ರೇಮ ಎಲ್ಲವೂ ಮೋಸ ಅದರಲ್ಲಿ ಬಂಧಿಯಾಗಿ ಮೋಸಹೋದ ಎನ್ನುವುದು, ದುಶ್ಚಟಕ್ಕೆ ಬಲಿಯಾದ, ಹೆಂಡ ಕುಡಿದ, ಸಿಗರೇಟ್ ಸೇದಿದ, ಡ್ರಗ್ಸ್ ದಾಸ್ಯನಾದ, ಕಾಲೇಜುಬಿಟ್ಟ, ಅಕ್ಕ ಪಕ್ಕದ ಮನೆಯವರಿಗೂ ತಲೆನೋವಾದಂತವನು ಇಲ್ಲವೇ ಆದವಳು. ಈಗ ಈತನಿಗೆ ಇಲ್ಲವೇ ಈಕೆಗೆ ಅನಾಹುತವಾಗಿ ಸರಿಯಾಗಿ ಬುದ್ಧಿ ಬಂದಿದೆ. ಯಾವನೋ ಇಲ್ಲವೆ ಯಾರೋ ಈಕೆ ಅಥವಾ ಈತನನ್ನು ಚೆನ್ನಾಗಿ ದುರುಪಯೋಗಿಸಿ ಕೈಕೊಟ್ಟರು. ಮಾಡಿದ ಪಾಪದ ಕೆಲಸಕ್ಕೆ ಸರಿಯಾಯ್ತು. ಇಂತಹ ಮಾತುಗಳೇ ಹಲವರನ್ನು ದಾರಿ ತಪ್ಪಿಸಿ ಇನ್ನಷ್ಟು ಉಗ್ರವಾಗಿ ಸಮಾಜದಲ್ಲಿ ನಡೆದುಕೊಳ್ಳುವುದಕ್ಕೆ ಕಾರಣವಾಗಿದೆ.

ಒಟ್ಟಾರೆ ಆತ್ಮಸಾಕ್ಷಿಯನ್ನು ಬಲಗೊಳಿಸಿಕೊಂಡು ಸತ್ಯವನ್ನು ನುಡಿಯುತ್ತಾ ಹೋದರೆ ತನ್ಮೂಲಕ ಕಂಡಿದ್ದನ್ನು ಸರಿಯಾಗಿ ನುಡಿದರೆ ಸುರಭಿಯಂತೆ ಯಾರು, ವಿಕೃತ ಲೋಕಕ್ಕೆ ಇಳಿದು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲವೆನ್ನುವುದು ದಿಟವೆ!.

ಎಲ್ಲಕ್ಕಿಂತ ಮಿಗಿಲು ಮತ್ತು ಸಂತಸದ ವಿಚಾರವೆಂದರೆ ಈ ಕೃತಿಗೆ ನಾಡಿನ ಹೆಮ್ಮೆಯ ಸಾಹಿತಿಗಳಾದ ಶ್ರೀಯುತ ಡಾ. ನಾ.ಡಿಸೋಜ ಅವರು ಮುನ್ನುಡಿಯನ್ನು ಬರೆದು ಹಾರೈಸಿದ್ದು, ಶ್ರೀಯುತರಿಗೆ ಈ ಕ್ಷಣದಲ್ಲಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುವೆ. ಕಿರಿಯರನ್ನು ಬೆಳೆಸಬೇಕೆನ್ನುವ ಅವರ ಹಂಬಲಕ್ಕೆ ನಾನೂ ಉದಾಹರಣೆ.


ರಾಮಚಂದ್ರ ಸಾಗರ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

‘ಅವಳ ಡೈರಿ’ ಕಾದಂಬರಿಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

ಸಾಹಿತಿ ನಾ.ಡಿಸೋಜ ಅವರ ಇನ್ನಷ್ಟು ಮಾಹಿತಿ ಇಲ್ಲಿದೆ..




 

MORE FEATURES

ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!

26-04-2024 ಬೆಂಗಳೂರು

‘ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವ...

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...