ಅರಿವಿನ ಹೊಸಬೆಳಕು ಮೂಡಿಸುವ ಬರವಣಿಗೆಗಾಗಿ ವರ್ತಮಾನದ ಸಮುದಾಯ ಹಸಿದಿದೆ


ಹಿರಿಯ ರಂಗಕರ್ಮಿ, ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರ ಯಡ್ರಾಮಿ ಸೀಮೆ ಕಥನಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಬಿ.ವಿ. ವೀರಭದ್ರಪ್ಪ ದತ್ತಿನಿಧಿ ಬಹುಮಾನ ಲಭಿಸಿದೆ. ಈ ಹಿನ್ನೆಲೆಯಲ್ಲಿ ಬುಕ್ ಬ್ರಹ್ಮ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಬುಕ್ ಬ್ರಹ್ಮ: ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಈ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ.?

ಮಲ್ಲಿಕಾರ್ಜುನ ಕಡಕೋಳ : ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅವತ್ತು ಮಧ್ಯಾಹ್ನ ಫೋನ್ ಬಂತು. ‘ಯಡ್ರಾಮಿ ಸೀಮೆ ಕಥನ’ಗಳು ನನ್ನ ಪುಸ್ತಕಕ್ಕೆ ಅಕಾಡೆಮಿ ಪುರಸ್ಕಾರ ಘೋಷಣೆಯ ವಿಷಯ ತಿಳಿದು ಬಂತು. ಅಕಾಡೆಮಿಗೆ "ಧನ್ಯವಾದಗಳು" ಅಂತ ಮಾತ್ರ ಪ್ರತಿಕ್ರಿಯೆಯಾಗಿ ಹೇಳಿದೆ. ಆ ಕ್ಷಣ ಮನೆಯಲ್ಲಿ ನನಗಿಂತಲೂ ನನ್ನ ಹೆಂಡತಿ, ಮಗಳು ಡಾ. ಮಂಜುಶ್ರೀ ಭಾಳ ಸಂಭ್ರಮ ಪಟ್ಟರು. ನನ್ನಲ್ಲಿ ಅವರಷ್ಟು ಸಡಗರ ಪಡುವ, ಸಂಭ್ರಮಿಸುವ ಉಲ್ಲಾಸ ಉಕ್ಕಲಿಲ್ಲ. ಪ್ರಾಯಶಃ ಹಾಗೆ ಸಂಭ್ರಮಿಸುವ ವಯಸ್ಸು ದಾಟಿದೆನೆಂಬ ಒಂದು ತರದ ಸ್ಥಿತಪ್ರಜ್ಞೆಯ ಸಮಜಾಯಿಷಿ ಮಾಡಿಕೊಂಡೆ. ಆದರೊಂದು ಸಹಜ ಸಂತಸ ಆದುದು ಖರೇ. ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ಅವರಂತಹ ಹಿರಿಯರನೇಕರು ನನಗೆ ಫೋನ್ ಮಾಡಿ ಅಭಿನಂದಿಸಿದಾಗ ಪುರಸ್ಕಾರದ ಮಹತ್ವ ಅರಳಿಕೊಂಡಿತು. ಈಗ ಬುಕ್ ಬ್ರಹ್ಮ ಸಂದರ್ಶನ ಮಾಡುತ್ತಿರುವುದು ಅರಳುವಿಕೆ ದ್ವಿಗುಣಗೊಂಡಿದೆ. ತನ್ಮೂಲಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಅದರ ಅನನ್ಯತೆಯ ಅರಿವು ನನ್ನೊಳಗೆ ವಿಸ್ತೃತಗೊಳ್ಳುತ್ತಲಿದೆ.

ಬುಕ್ ಬ್ರಹ್ಮ: ಸಾಹಿತ್ಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಕಾರಣ, ಹಿನ್ನೆಲೆ...?

ಮಲ್ಲಿಕಾರ್ಜುನ ಕಡಕೋಳ: ನಾನು ಮೂಲತಃ ಇವತ್ತಿನ ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುವ ಹೈದ್ರಾಬಾದ್ ಕರ್ನಾಟಕದವನು. ಈಗಲೂ ನನಗೆ " ಹೈದ್ರಾಬಾದ್ ಕರ್ನಾಟಕ " ಅಂತ ಹೇಳುವಲ್ಲಿ ನಿಜದನೆಲೆಯ ಅನುಸಂಧಾನವಿದೆ. ನಮ್ಮನ್ನು ಮೊಗಲಾಯಿ ಮಂದಿ ಅಂತ ಕರೀತಾರೆ. ನಮ್ಮೂರಿಗೆ ದೀಡು ಹರದಾರಿ ದೂರದಲ್ಲಿ ಮುಂಬಯಿ ಕರ್ನಾಟಕದ ಇಂಗ್ರೇಜಿ ನೆಲ. ತತ್ವಪದಗಳ ಹರಿಕಾರ ಮಡಿವಾಳಪ್ಪನವರ ಕರ್ಮಭೂಮಿ ಕಡಕೋಳ ನನ್ನ ಹುಟ್ಟೂರು. ಕಡಕೋಳದಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ತತ್ವಪದಗಳ ಗಂಧಗಾಳಿ ಇರ್ತದೆ. ಹಾಡುಗಬ್ಬದ ನೇಟಿವಿಟಿ ಇರ್ತದೆ. ಬಾಲ್ಯದಲ್ಲಿ ನನಗೂ ಬಕ್ಕಳ ಪದಗಳು ಬರ್ತಿದ್ದವು. ನನ್ನ ಅಪ್ಪ ಸಾಧು ಶಿವಣ್ಣ ನೂರಾರು ತತ್ವಪದಗಳನ್ನು ಹಾಡುತ್ತಿದ್ದರು. ಬರೀ ಮಡಿವಾಳಪ್ಪನವರ ಪದಗಳಲ್ಲದೇ ರಾಂಪುರದ ಬಕ್ಕಪ್ಪ, ಶಿಶುನಾಳ ಶರೀಫ, ಮಡಿವಾಳಪ್ಪನವರ ಶಿಷ್ಯರ ತತ್ವಪದಗಳನ್ನು ಹಾಡುತ್ತಿದ್ದರು. ನಮ್ಮನೆಯಲ್ಲಿ ಯಾವತ್ತೂ ಸಾಧುರ ಮ್ಯಾಳವೇ ಇರ್ತಿತ್ತು. ಪದ ಹಾಡಿದ ಮೇಲೆ ಅದರ ಮೇಲೆ ಟೀಕು ಹೇಳುತ್ತಿದ್ದರು. ಅದೊಂದು ಸಹೃದಯ ಸಂವಾದವೇ ಆಗಿರ್ತಿತ್ತು. ನನ್ನ ಅವ್ವ ನಿಂಗಮ್ಮ ಜನಪದದ ಹಲವು ಪ್ರಕಾರಗಳಲ್ಲಿ ಹಾಡುತ್ತಿದ್ದಳು. ತತ್ವಪದಗಳನ್ನು ಹಾಡುತ್ತಿದ್ದ ಅವ್ವ ಉರ್ದುವಿನ ಚಕ್ಕೀಪದಗಳನ್ನು ಹಾಡುತ್ತಿದ್ದಳು. ಕತೆಗಳನ್ನು ಹೇಳುತ್ತಿದ್ದಳು. ನನಗೆ ಸಹಜವಾಗಿ ಆ ಒಂದು ವಾತಾವರಣ ಸಾಹಿತ್ಯದತ್ತ ಕರೆದುಕೊಂಡು ಹೋಯಿತು.

ಬುಕ್ ಬ್ರಹ್ಮ: ಸಾಹಿತ್ಯಕ ಪಯಣದಲ್ಲಿ ನೀವು ಹೆಮ್ಮೆ ಪಡುವ ವಿಚಾರ ಯಾವುದು...?

ಮಲ್ಲಿಕಾರ್ಜುನ ಕಡಕೋಳ: ನಮ್ಮದು ಅಕ್ಷರಶಃ ಅನಕ್ಷರಸ್ಥ ಕುಟುಂಬ. ನಮ್ಮ ಕುಟುಂಬದ ಮೊಟ್ಟ ಮೊದಲ ಅಕ್ಷರಸ್ಥ ಮತ್ತು ಮೆಟ್ರಿಕ್ ಪರೀಕ್ಷೆ ತೇರ್ಗಡೆ ಹೊಂದಿದ ಮೊದಲಿಗ ನಾನು. ಎಪ್ಪತ್ತರ ದಶಕದ ದಿನಮಾನಗಳು. ಅಂದಿನ ದುಷ್ಕಾಳದ ದುರಿತಕಾಲ ಘಟನೆಗಳನ್ನು ನನ್ನವ್ವ ಯಾವೊಬ್ಬ ಕಥೆಗಾರನಿಗಿಂತ ಕಡಿಮೆ ಇಲ್ಲದಂತೆ ಕತೆಮಾಡಿ ಹೇಳುತ್ತಿದ್ದಳು. ಅವ್ವ ಹೇಳುತ್ತಿದ್ದ ಘಟನೆಗಳನ್ನೇ ಆಧರಿಸಿ ನಾನು ಅದೇ ದಶಕದ ಕೊನೆಯಲ್ಲಿ ತುಷಾರ, ಕನ್ನಡಪ್ರಭ, ಪ್ರಪಂಚ ಪತ್ರಿಕೆಗಳಿಗೆ ಕತೆಗಳನ್ನು ಬರೆಯುತ್ತಿದ್ದೆ. ಎಂಬತ್ತರ ದಶಕದಲ್ಲಿ ತುಷಾರ ಮಾಸಿಕದಲ್ಲಿ ಪ್ರಕಟಗೊಂಡ ಮುಟ್ಟು ಎಂಬ ಕತೆ ಕುರಿತು ಐದು ತಿಂಗಳ ಕಾಲ ಗಂಭೀರ ಚರ್ಚೆ ಜರುಗಿದವು. ಪ್ರೊ. ಶಾಂತಿನಾಥ ದೇಸಾಯಿಯವರು ಕತೆಯನ್ನು ವಿಮರ್ಶಿಸಿ ಮೆಚ್ಚುಗೆಯ ಮಾತುಗಳನ್ನು ತುಷಾರದಲ್ಲಿ ಬರೆದಿದ್ದರು. ಸರ್ಕಾರಿ ನೌಕರಿ ಸೇರಿದೆ. ಅದಾದ ಮೇಲೆ ಅನೇಕ ಪತ್ರಿಕೆಗಳಿಗೆ ಕತೆ, ಕವನ, ಲೇಖನ ಬರೆದೆ. ನಾಲ್ಕು ವರ್ಷಗಳ ಕಾಲ ಜನತಾವಾಣಿ ದೈನಿಕಕ್ಕೆ ಕಡಕೋಳ ಕಾಲಂ ಹೆಸರಿನ ಅಂಕಣ ಬರೆದೆ. ನಮ್ಮ ಹೈದ್ರಾಬಾದ್ ಕರ್ನಾಟಕದ ಹತ್ತು ಹಲವು ಸಾಂಸ್ಕೃತಿಕ ಸಂಗತಿಗಳನ್ನು, ಕೃಷ್ಣೆ, ಭೀಮೆಯರ ನೆಲದ ಸಂವೇದನೆಗಳನ್ನು ಅಂಕಣದಲ್ಲಿ ಹಂಚಿಕೊಂಡ ಹೆಮ್ಮೆ ಮತ್ತು ಅವಕಾಶ ನನ್ನದು. ತತ್ವಪದಗಳಷ್ಟೇ ನನಗೆ ಪ್ರಿಯವಾದುದು ರಂಗಭೂಮಿ. ರಂಗಭೂಮಿ ಕುರಿತು ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದೇನೆ.

ಬುಕ್ ಬ್ರಹ್ಮ: ಯಾವ ಲೇಖಕರ ಸಾಹಿತ್ಯ ನಿಮಗೆ ಹೆಚ್ಚು ಪ್ರೇರಣೆ ಮತ್ತು ಕಾಡುತ್ತವೆ...?

ಮಲ್ಲಿಕಾರ್ಜುನ ಕಡಕೋಳ: ಮಿರ್ಜಿ ಅಣ್ಣಾರಾಯರ ನಿಸರ್ಗ ಕಾದಂಬರಿ, ಕಾರಂತರ ಹುಚ್ಚುಮನಸಿನ ಹತ್ತು ಮುಖಗಳು. ನಮ್ಮೂರ ಮಡಿವಾಳಪ್ಪನವರ ಸಮಗ್ರ ಸಾಹಿತ್ಯ ಜೀವಕ್ಕಂಟಿ ಬಂದ ರಕ್ತಸಂಬಂಧವೇ ಆಗಿದೆ.

ಬುಕ್ ಬ್ರಹ್ಮ: ಇದನ್ನು ನಾನು ಬರೆಯಬೇಕಿತ್ತು, ಅಂಥ ಅನಿಸುವ ಕೃತಿ ಯಾವುದು...?

ಮಲ್ಲಿಕಾರ್ಜುನ ಕಡಕೋಳ: ಬಾಲ್ಯದಲ್ಲಿಯೇ ಓದಿದ ಅದೇ 'ನಿಸರ್ಗ' ಕಾದಂಬರಿ.

ಬುಕ್ ಬ್ರಹ್ಮ: ನಿಮ್ಮ ಸಾಹಿತ್ಯಕ ಬದುಕಿನ ಮೂಲ ಧ್ಯೇಯವೇನು...?

ಮಲ್ಲಿಕಾರ್ಜುನ ಕಡಕೋಳ: ಕತೆ, ಕಾದಂಬರಿ, ನಾಟಕ, ಸಿನೆಮಾ, ಭಾಷಣ, ಇದ್ಯಾವುದು ಕಲಿಸದಿರುವುದನ್ನು ಬದುಕು ಕಲಿಸುತ್ತದೆ. ಅಂತೆಯೇ ಬರಹಗಾರನಿಗಿಂತ ಬರಹ ದೊಡ್ಡದು. ಬರಹಕ್ಕಿಂತ ಬದುಕು ದೊಡ್ಡದು. ಅದೆಲ್ಲಕ್ಕಿಂತ ಅಪ್ಪಟ ಮನುಷ್ಯನಾಗಿ ಬದುಕುವ ಅಂತಹ ಮನುಷ್ಯನು ಮತ್ತವನ ಬದುಕಿನ ಹುಡುಕಾಟ ನನ್ನ ಸಾಹಿತ್ಯದ ಒಳಹೇತು.

ಬುಕ್ ಬ್ರಹ್ಮ: ಸಾಹಿತ್ಯದ ಪರಿಣಾಮದಿಂದ ನಿಮ್ಮ ಬದುಕಿನಲ್ಲಾದ ಮಹತ್ವದ ಬದಲಾವಣೆಗಳೇನು...?

ಮಲ್ಲಿಕಾರ್ಜುನ ಕಡಕೋಳ: ಹೇಳಿಕೊಳ್ಳುವಂತಹ ಯಾವ ಬದಲಾವಣೆಗಳು ನನಗೆ ಕಂಡುಬಂದಿಲ್ಲ. ಅಷ್ಟಕ್ಕೂ ಹಾಗೆಲ್ಲ ಮಹತ್ತರ ಬದಲಾವಣೆ ಆಗುತ್ತವೆಂಬ ಭ್ರಮೆಗಳು ನನಗಿಲ್ಲ. ಸಣ್ಣದೊಂದು ಪರಿಣಾಮವೆಂದು ಭಾವಿಸಬಹುದಾದ ಸಂಗತಿ ಎಂದರೆ, ನನ್ನ ಮಗಳು ಮಂಜುಶ್ರೀ ಮಾತ್ರ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತೆಯಾಗಿ ಪ್ರಜಾವಾಣಿ ಯಲ್ಲಿ ಹಿರಿಯ ಉಪ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾಳೆ.

ಬುಕ್ ಬ್ರಹ್ಮ: ನಿಮ್ಮ ಬದುಕಿನಲ್ಲಿ ಬರವಣಿಗೆಯ ಪಾತ್ರ...?

ಮಲ್ಲಿಕಾರ್ಜುನ ಕಡಕೋಳ: ನನ್ನಪ್ಪ, ಅವ್ವ ಅನಕ್ಷರಸ್ಥರಾಗಿದ್ದರು. ಈ ದೇಶದಲ್ಲಿ ಅವರಂತಹ ಕೋಟಿಗಟ್ಟಲೇ ಜನರಿದ್ದಾರೆ. ಅವರೆಲ್ಲರೂ ನಾಗರಿಕ ಪ್ರಜ್ಞೆಯ ಅಕ್ಷರಸ್ಥರಿಗಿಂತ ಉತ್ಕೃಷ್ಟ ಬಾಳು ಬದುಕಿದ್ದಾರೆ. ಏನಾದರೂ ಕೆಟ್ಟದ್ದು ಆಗಿದ್ದರೆ ಅದು ಬಹುಪಾಲು ಅಕ್ಷರಸ್ಥರಿಂದಾಗಿದೆ. ಹೀಗಾಗಿ ಅಕ್ಷರ ಸಂಸ್ಕೃತಿಯ ಬರವಣಿಗೆಯಿಂದ ಒಳ್ಳೆಯದು ಘಟಿಸುವುದು ಅಪರೂಪವೇ. ಹಾಗೆಂದು ಅಕ್ಷರ ಬರಹ ವಿರೋಧಿ ನಾನಲ್ಲ. ಸಂವಹನ ಮಾಧ್ಯಮವಾಗಿ ಅದರ ಅತ್ಯಗತ್ಯವಿದೆ. ಬರವಣಿಗೆ ಅಕ್ಷರಸಂಸ್ಕೃತಿಯ ಸ್ಥಿತ್ಯಂತರವಷ್ಟೆ. ಹೇಳಲೇ ಬೇಕಾದ ಒಂದು ಮಾತು ಏನೆಂದರೆ : ಅರಿವಿನ ಹೊಸಬೆಳಕು ಮೂಡಿಸುವ ಬರವಣಿಗೆಗಾಗಿ ವರ್ತಮಾನದ ಸಮುದಾಯ ಹಸಿದಿದೆ.

ವಿವಿಧ ಕಾರ್ಯಕ್ರಮಗಳಲ್ಲಿ ರಂಗಕರ್ಮಿ, ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರು:

 

 

 

ಮಲ್ಲಿಕಾರ್ಜುನ ಕಡಕೋಳ ಅವರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

MORE FEATURES

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...

ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!

26-04-2024 ಬೆಂಗಳೂರು

‘ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವ...