ಅರುಣ್‌ನ ವ್ಯಂಗ್ಯಚಿತ್ರಗಳು ಕಣ್ಣು ಹನಿಗೂಡಿಸಿವೆ: ರಾಜಶ್ರೀ ಕಲ್ಲೂರಕರ್


ಇಲ್ಲಿ ನಿಜವಾಗಿಯೂ ಈರಣ್ಣ ಬೆಂಗಾಲಿಯ ಬೆಂಬಲ, ಸಹಾಯ ಎಷ್ಟಿತ್ತು ಎಂದರೆ, ಅವನು ಬೈದರೂ ಏನೂ ಭಾವಿಸದೆ ಸದಾ ಅರುಣ್‌ಗೆ ನಗುನಗುತ್ತಾ ಸಹಾಯ ಮಾಡುತ್ತಿದ್ದ. ಇವನ ಸಹನೆ ಮೆಚ್ಚಲೇಬೇಕು. ಇದಕ್ಕಾಗಿ ಅರುಣ್‌ನನ್ನು ಬೈದಿದ್ದೇನೆ, ಇಬ್ಬರೂ ಅದನ್ನು ಕೇಳಿಸಿಕೊಂಡು ನಗುತ್ತಿದ್ದದ್ದನ್ನು ನಾನು ನೋಡಿದ್ದೇನೆ ಎನ್ನುತ್ತಾರೆ ರಾಜಶ್ರೀ ಕಲ್ಲೂರಕರ್. ಅವರು ಈರಣ್ಣ ಬೆಂಗಾಲಿ ಅವರ ‘ಸಾಧನಾಗಿರಿ ಅರುಣ್ ನಂದಗಿರಿ’ ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ...

ಸಾಧನಾಗಿರಿ ಅರುಣ್ ನಂದಗಿರಿ ನಾವು ಕಳೆದುಕೊಂಡ ನನ್ನ ತಮ್ಮನ ಬಗ್ಗೆ ಈರಣ್ಣ ಬೆಂಗಾಲಿ ಬರೆದ ಈ ಹೊತ್ತಿಗೆಯ ಬಗ್ಗೆ ನನಗೆ ಮುನ್ನುಡಿ ಬರೆಯಲು ಹೇಳಿದಾಗ ಒಂದು ಹೊತ್ತಿನವರೆಗೂ ಏನೂ ಹೇಳಲು ತೋಚಲಿಲ್ಲ. ನಾಡಿನ ಅನೇಕ ಗಣ್ಯರ ವ್ಯಂಗ್ಯಚಿತ್ರಕಾರರ ಮಮತೆ, ಪ್ರೋತ್ಸಾಹ ಗಳಿಸಿದ್ದ ಅರುಣ್ ನಂದಗಿರಿ ಎನ್ನುವುದೂ ನನ್ನ ಸಹೋದರರಿಗೆ ತುಂಬಾ ಹೆಮ್ಮೆಯ ವಿಷಯ. ಬಹಳ ಸ್ವಾಭಿಮಾನಿ ಹಠ ಛಲದ ಇವನು ನಮ್ಮ ನಂದಗಿರಿ ಕುಟುಂಬದ ಕೂಸು.

ಅವನು ಹುಟ್ಟಿದಾಗ ನನ್ನ ತಂದೆ ಅದನ್ನು ಹೇಗೆ ಅರಗಿಸಿಕೊಂಡರೋ ಗೊತ್ತಿಲ್ಲ. ಅಂತೂ ಮೆತ್ತನೆಯ ಹಾಸುಗೆಯ (ಗಾದಿ) ಮೇಲೆ ಮಲಗಿಸಿ, ಹಾಸುಗೆ ಸಮೇತ ಆರುಣನನ್ನು ಎತ್ತಿಕೊಳ್ಳುತ್ತಿದ್ದೆವು. ಅಂದು ಹಾಗೆ ಅಂಗವೈಕಲ್ಯ ಹೊಂದಿದ ಮಗು ಇಷ್ಟೆಲ್ಲಾ ಸಾಧನೆ ಮಾಡಬಹುದೆಂದು ಯೋಚಿಸಿರಲಿಲ್ಲ.

ಅರುಣ್‌ಗೆ ಇನ್ನೊಂದು ಹೆಸರಿತ್ತು. ಸದಾನಂದ ಎಂದು. ಆ ಹೆಸರನ್ನೇ ಕಾವ್ಯನಾಮ ಇಟ್ಟುಕೊಂಡು ಪ್ರಾರಂಭದಲ್ಲಿ ಕವನಗಳನ್ನು ರಚಿಸುತ್ತಿದ್ದ. ಇದು ಬಹಳ ಜನರಿಗೆ ಗೊತ್ತಿಲ್ಲದ ವಿಷಯ. ಬಹುಶಃ ಅವರ ಆತ್ಮೀಯರಿಗೂ ಗೊತ್ತಿರಲಿಲ್ಲ. ನಮ್ಮ ಅರುಣ್‌ನ ಸ್ವಭಾವವೇ ಹಾಗಿತ್ತು. ಯಾಕೆಂದರೆ ಯಾರಿಗೂ ಹೇಳಬಾರದು ಅಂತ ಆರುಣ್ ಹೇಳಿದ್ದರೆ ನಾವು ಯಾರೂ ಹೇಳುತ್ತಿರಲಿಲ್ಲ. ಅವನ ಮನಸ್ಸಿಗೆ ಸಂತೋಷ ಯಾವುದರಲ್ಲಿ ದೊರಕುವುದೋ ಅದನ್ನೇ ನಾವೆಲ್ಲರೂ ಮಾಡುತ್ತಿದ್ದೇವು, ನಮ್ಮ ನಮ್ಮಲ್ಲಿಯೂ ಇದರ ಬಗ್ಗೆ ಚರ್ಚಿಸುತ್ತಿರಲಿಲ್ಲ. ಆಮೇಲೆ ಆತ್ಮೀಯರೊಬ್ಬರ ಅಭಿಪ್ರಾಯದಂತೆ ಆರುಣ್ ನಂದಗಿರಿ ಎಂದೇ ಕವನಗಳನ್ನು ರಚಿಸಿದ.

ಇಲ್ಲಿ ನಿಜವಾಗಿಯೂ ಈರಣ್ಣ ಬೆಂಗಾಲಿಯ ಬೆಂಬಲ, ಸಹಾಯ ಎಷ್ಟಿತ್ತು ಎಂದರೆ, ಅವನು ಬೈದರೂ ಏನೂ ಭಾವಿಸದೆ ಸದಾ ಅರುಣ್‌ಗೆ ನಗುನಗುತ್ತಾ ಸಹಾಯ ಮಾಡುತ್ತಿದ್ದ. ಇವನ ಸಹನೆ ಮೆಚ್ಚಲೇಬೇಕು. ಇದಕ್ಕಾಗಿ ಅರುಣ್‌ನನ್ನು ಬೈದಿದ್ದೇನೆ, ಇಬ್ಬರೂ ಅದನ್ನು ಕೇಳಿಸಿಕೊಂಡು ನಗುತ್ತಿದ್ದದ್ದನ್ನು ನಾನು ನೋಡಿದ್ದೇನೆ. ಇಂಥ ಹಠಮಾರಿ ಅರುಣ್‌ಗೆ ಸಹನೆಯ ಗೆಳೆಯ ಈರಣ್ಣ ಬೆಂಗಾಲಿ, ಇಬ್ಬರೂ ಮೆಲುದನಿಯಲ್ಲಿ ಏನು ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರೋ ಗೊತ್ತಿಲ್ಲ. ಅಲ್ಲಿ ನಾವು ತಲೆ ಹಾಕುವಂತಿಲ್ಲ. ಇದು ಅಧ್ಯಾಹಾರ.

ಸಾಧನಾಗಿರಿ ಅರುಣ್ ನಂದಗಿರಿ ಕೃತಿಯಲ್ಲಿ ಈರಣ್ಣ ಬೆಂಗಾಲಿ ಎಷ್ಟು ಜೋಪಾನವಾಗಿ ಕಾಪಾಡಿಕೊಂಡು ಬಂದ ಅರುಣ್‌ನ ವ್ಯಂಗ್ಯಚಿತ್ರಗಳು ಕಣ್ಣು ಹನಿಗೂಡಿಸಿವೆ. ಬಹುಶಃ ನಮ್ಮಿಂದ ಈ ಕೆಲಸವಾಗುತ್ತಿರಲಿಲ್ಲವೇನೋ. ಈ ಕೆಲಸ ಬೆಂಗಾಲಿಯೇ ಮಾಡಬೇಕೆಂಬುದು ಅವನ ಆಸೆಯೋ ಏನೋ, ಅರುಣ್‌ಗೆ ಖಂಡಿತ ಇದರಿಂದ ಖುಷಿ ಆಗುವುದಂತೂ ಸತ್ಯ.

ಅರುಣ್‌ಗೆ ಏನಾದರೂ ಬೈದಿದ್ದರೆ, ತಿದ್ದಿದ್ದರೆ ಅದು ನಾನು ಮತ್ತು ನನ್ನ ತಮ್ಮ ವೆಂಕಟೇಶ್. ವೆಂಕಟೇಶನಿಗೆ ಸರ್ಕಾರಿ ನ್ಯಾಯಾಧೀಶರ ಹುದ್ದೆ ದೊರೆತಾಗ ಅರುಣ್‌ನನ್ನು ಕಾಳಜಿಪೂರ್ವಕವಾಗಿ ನೋಡಿಕೊಂಡವರು ನನ್ನ ತಮ್ಮಂದಿರಾದ ಮೋಹನ್ ಮತ್ತು ಜಗನ್ನಾಥ ನಂದಗಿರಿಯವರು. ಅರುಣ್‌ನ ಉಪನಯನದ ಪುಣ್ಯವನ್ನು ಮಾಡಿಸಿಕೊಂಡವರು ವೆಂಕಟೇಶ್ ಹಾಗೂ ಶ್ರೀಮತಿ ಸುಧಾ ವೆಂಕಟೇಶ ಅವರು. ಅರುಣ್‌ಗೆ ಮತ್ತೋರ್ವ ತಾಯಿ ದೊರೆತಳು.

ಈ ಕೃತಿ ಹಲವಾರು ಆಸಕ್ತರ ಕೈ ಸೇರಿ ಅರುಣ್ ಹೇಗಿದ್ದ ಅನ್ನುವುದಕ್ಕಿಂತ, ಹೇಗೆ ಸ್ವಾಭಿಮಾನದಿಂದ ಬದುಕಿದ್ದ, ಆ ಬದುಕು ಇತರರಿಗೆ ಎಂತಹ ಅನುಕರಣೀಯ ಎಂಬುದು ಗುರುತಿಸಲ್ಪಟ್ಟರೆ ಈರಣ್ಣ ಬೆಂಗಾಲಿಯ ಶ್ರಮ ಸಾರ್ಥಕ. ಕೃತಿಯ ಮುನ್ನುಡಿಯಾಗಿ ನನ್ನ ಮನದ ಭಾವಕೆ ಅಕ್ಷರ ರೂಪ ಕೊಟ್ಟಿರುವೆ, ವಂದನೆಗಳು.

- ರಾಜಶ್ರೀ ಕಲ್ಲೂರಕರ್

MORE FEATURES

ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ ಎನ್...

12-08-2022 ಬೆಂಗಳೂರು

ಸುಬ್ಣಣ್ಣನವರ ಮೊದಲ ಧ್ವನಿ ಸುರಳಿ `ನಿತ್ಯೋತ್ಸವ' 1978ರಲ್ಲಿ ಹೊರ ಬಂದಿತು.ಬಾನುಲಿಯಲ್ಲಿ ಈ ವೇಳೆಗಾಗಲೇ ಮಲೆನಾಡಿನ ...

ಶಿವಮೊಗ್ಗ ಸುಬ್ಬಣ್ಣ "ರಜತಕಮಲ" ಪುರ...

12-08-2022 ಬೆಂಗಳೂರು

ವೃತ್ತಿಯಲ್ಲಿ ವಕೀಲರು, ನೋಟರಿಯೂ ಆಗಿ, ನಾಡಿನ ಖ್ಯಾತ ಗಾಯಕರಾಗಿ ಮನೆ ಮಾತಾಗಿದ್ದ ಶಿವಮೊಗ್ಗ ಸುಬ್ಬಣ್ಣ ರಾಷ್ಟ್ರೀಯ ಪ್ರಶ...

ಘನವಾದ್ದನ್ನು ಉಳಿಸಿಕೊಂಡು ಓದದೇ ಹೋ...

12-08-2022 ಬೆಂಗಳೂರು

"Life is too short to read Ulysses" ಎಂಬ ತಮಾಷೆ ಮಾತೇ ಇದೆ ಈ ಕೃತಿ ಬಗ್ಗೆ. ಆದರೆ ಬಹುಶಃ ನಾವೇ ನಮ್ಮ ...